Featured ಅಂಕಣ

‘ಮೇಕ್-ಇನ್-ಇಂಡಿಯ’ ಬಂದಾಯ್ತು ಆದರೆ, ‘ಮೇಡ್-ಇನ್-ಇಂಡಿಯಾ’ಗಳ ಕತೆ ಏನಾಯ್ತು..?

Bharathi Shipyard

HMT (Watch Division)

UB Groups

BPL

Sahara Housing Corporation

And many more…

ಒಂದು ಕಾಲದಲ್ಲಿ ದೇಶದ ಟಾಪ್ ರೇಟೆಡ್ ಕಂಪನಿಗಳ ಪಟ್ಟಿಯಲ್ಲಿ  ಈ ಎಲ್ಲಾ ಹೆಸರುಗಳಿದ್ದಿದ್ದನ್ನು ಗಮನಿಸಿರಬಹುದು. ಕೆಲವು ಹೆಸರುಗಳು ಪಟ್ಟಿಯಲ್ಲಿ ಕೆಲದಿನಗಳು ಮಾತ್ರ ಕಂಡರೆ, ಕೆಲವು ದಶಕಗಳವರೆಗೂ ರಾರಾಜಿಸಿದ್ದವು.  ಅಂದು ದೇಶದ ಪ್ರತಿಯೊಬ್ಬ ಪ್ರಜೆಯೂ ಹೆಮ್ಮೆಯಿಂದ ಹೇಳುತ್ತಿದ್ದ ಹಾಗೂ ಇರುವುದರಲ್ಲೇ ಇಲ್ಲದಿರುವುದನ್ನು ಸಾಧಿಸಿ ತೋರಿಸಿದ ಕಂಪನಿಗಳಿವು. ಇವುಗಳಲ್ಲಿ ಕೆಲವು ದೇಶದ ‘ಸಮಯವನ್ನು ಕಾಯುವ’ ಕಂಪನಿಗಳೆಂದು ಪ್ರಸಿದ್ದಿ ಹೊಂದಿದರೆ ಮತ್ತು ಕೆಲವು ಸ್ವದೇಶೀ ತಂತ್ರಜ್ಞಾನದಿಂದ ಏನೆಲ್ಲಾ ಸಾಧಿಸಬಹುದು ಎಂದು ತೋರಿಸಿಕೊಟ್ಟವು. ಅಂದು ಟಿವಿ, ವಾಚು, ವಿಮಾನ ಪ್ರಯಾಣ ಇತ್ಯಾದಿ ಅಂದಾಗಲೆಲ್ಲ ಮೇಲಿನ ಹೆಸರುಗಳೇ ಹೆಚ್ಚಾಗಿ ಜನರ ಗಮನ ಸೆಳೆಯುತ್ತಿದ್ದವು. ಅದೃಷ್ಟ ಲಕ್ಷ್ಮಿ ಒಲಿದರೆ, ನಮಗೆ ಕೊಳ್ಳಲು ಸಾದ್ಯವಾದರೆ, ಅಥವಾ ಕೊನೆ ಪಕ್ಷ ಸಾಲ ಮಾಡಿಯಾದರೂ ಇಂತ ಒಂದು ಪ್ರಾಡಕ್ಟ್ ಅನ್ನೇ  ಖರೀದಿಸಬೇಕು ಎಂದು ಜನಸಾಮಾನ್ಯ ಅಂದುಕೊಳ್ಳುತ್ತಿದ್ದ. ಇಷ್ಟೆಲ್ಲಾ ಬೇಡಿಕೆ, ಹೆಮ್ಮೆ, ಮೇಲಾಗಿ ದೇಶಕ್ಕೆ ಆದಾಯವನ್ನು ತಂದು ಕೊಟ್ಟದ್ದು ಯಾವುದೇ ವಿದೇಶಿ ಬಹುರಾಷ್ಟೀಯ ಕಂಪನಿಗಳಲ್ಲ. ನಮ್ಮ ನೆಲದಲ್ಲೇ  ಬೆಳೆದು ಇತಿಹಾಸ ಸೃಷ್ಟಿಸಿ ಇಂದು ಅವನತಿಯ ಹಾದಿ  ಹಿಡಿದು ಅಥವಾ ಹಿಡಿಯುತ್ತಿರುವ  ಸ್ವದೇಶೀ ಕಂಪನಿಗಳು!

ಅಂದು 1991. ಚಂದ್ರಶೇಖರ್ ಸರ್ಕಾರ ಬಿದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸನ  ಮುಂದಿದ್ದದ್ದು ಅವನತಿಯ ಹಾದಿ ಹಿಡಿದ್ದಿದ್ದ ದೇಶದ ಅರ್ಥವ್ಯವಸ್ಥೆ. ಆಗ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿ ದೇಶದ ಆರ್ಥಿಕ ಅವನತಿಯನ್ನು ತಪ್ಪಿಸಿದ ಕೀರ್ತಿ P.V ನರಸಿಂಹರಾವ್ ಸರ್ಕಾರಕ್ಕೆ ಸೇರುತ್ತದೆ. Economic Policy Reform, ಎಫ್.ಡಿ.ಐ ಹಾಗು ಮತ್ತಿತರ ಸುದಾರಣೆಗಳೊಂದಿಗೆ ತಯಾರಾದ ಯೋಜನೆ ದೇಶದ ಅರ್ಥವ್ಯವಸ್ಥೆ ಹೊರದೇಶದ ಕಂಪನಿಗಳಿಗೊಸ್ಕರ ಆತುರದಿಂದ ಕಣ್ಣರಳಿಸಿ ನೋಡುವಂತೆ ಮಾಡಿತ್ತು. ಆಗ ನಿಜವಾದ ಪೀಕಲಾಟ ಶುರುವಾದದ್ದು ನಮ್ಮ ದೇಶಿಯ ಕಂಪನಿಗಳಿಗೆ. ಅಲ್ಲಿಯವರೆಗೂ ದೇಶದ ಟಾಪ್ ರೇಟೆಡ್ ಕಂಪನಿಗಳಲ್ಲಿ ಒಂದಾಗಿದ್ದ ಕಂಪನಿಗಳು, ವಿದೇಶಿ ರಂಗು ರಂಗಿನ ವಸ್ತುಗಳ ಮುಂದೆ ಮಂಕಾದದ್ದು ಮಾತ್ರ ಸುಳ್ಳಲ್ಲ. ದೇಶದ ಆರ್ಥಿಕ ಸುದಾರಣೆಯ ಜವಾಬ್ದಾರಿ ಹೊತ್ತ ಸರ್ಕಾರ ಆಗ ದೇಶಿಯ ಕಂಪನಿಗಳಿಗೆ ಆಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುವಾಗ ಸ್ವಲ್ಪ ಎಡವಟ್ಟು ಮಾಡಿತು. ದೇಶಿಯ ಅದೆಷ್ಟೋ ಉದ್ಯಮಗಳನ್ನು ಮತ್ತು ಅವುಗಳ ಪ್ರಾಡಕ್ಟ್ಗಳನ್ನು ಭಾರತೀಯರೇ ಕೇಳದಂತಾದರು. ತಮ್ಮ ದೇಶದಲ್ಲಿ ಒಬ್ಬ ನೌಕರನಿಗೆ ಕೊಡುವ ಸಂಬಳದಲ್ಲಿ ಇಲ್ಲಿ 10 ನೌಕರರನ್ನು ಕೊಳ್ಳುವ ಅವಕಾಶ ಯಾರು ತಾನೆ ಬಿಟ್ಟಾರು? ಫಲಿತಾಂಶವಾಗಿ ರಾಶಿ ರಾಶಿ ವಿದೇಶಿ ಕಂಪನಿಗಳು ಇಲ್ಲಿಯ ನೆಲದಲ್ಲಿ ಗೋಚರಿಸತೊಡಗಿದವು. ದೇಶದ ಅರ್ಥವ್ಯವಸ್ಥೆ ಆಗ ಅದೆಷ್ಟು ಬಲಿಯಿತೋ ಅದರ ನೂರು ಪಟ್ಟು ವಿದೇಶಿ ಕಂಪನಿಗಳು ತಮ್ಮ ಲಾಭವನ್ನು ಗಳಿಸಿಕೊಂಡವು ಎಂಬುದು ಸುಳ್ಳಲ್ಲ. ಹಾಗೆಯೆ, ನಮ್ಮ ಎಲ್ಲಾ ದೇಶಿಯ ಕಂಪನಿಗಳು ಈ ನೀತಿಯಿಂದ ಉನ್ನತಿ ಒಂದಿದವು ಅನ್ನುವ ಮಾತೂ ನಿಜವಲ್ಲ.

UB Groups. ಹೆಸರು ಕೇಳುತ್ತಲೇ ಅದೇನೋ ಒಂಥರಾ ಥ್ರಿಲ್!  UB Groups ಒಂದು ಸಂಘಟಿತ ವ್ಯಾಪಾರಿ ಸಂಸ್ಥೆ (Conglomerate). ವಿಧ-ವಿಧವಾದ ಮಧ್ಯವನ್ನು ಪ್ರಪಂಚಕ್ಕೆ  ಪರಿಚಹಿಸಿದ ಖ್ಯಾತಿ, ಭಾರತವನ್ನು ‘ಫೋರ್ಸ್ ಇಂಡಿಯಾ’ ಎಂಬ ಹೆಸರಲ್ಲಿ F1 ಟ್ರ್ಯಾಕ್’ಗೆ ಇಳಿಸಿ ಭಾರತೀಯರು ಇಲ್ಲೂ ಹಿಂದಿಲ್ಲ ಎಂದು ತೋರಿ, ಭಾರತದ ಏವಿಯೇಷನ್ ಇಂಡಸ್ಟ್ರಿ ಅಂದರೆ ‘ಅಯ್ಯೋ ಅದೇ ಏರ್ ಇಂಡಿಯಾ, ಜೆಟ್ ಏರ್ವೇಸ್’ ಎಂದು ಮೂಗು ಮುರಿಯುತ್ತಿದ್ದ ಕಾಲದಲ್ಲಿ ‘Fly The Good Times’ ಎಂಬ ಸ್ಲೋಗನ್ನೊಂದಿಗೆ  ಐಷಾರಾಮಿ ಕಿಂಗ್ ಫಿಷರ್ ಏರ್ಲೈನ್ಸ್ ಅನ್ನು ಸ್ಥಾಪಿಸಿ ವಿದೇಶಿಯರ ಉಬ್ಬನ್ನು ಮೇಲೇರಿಸಿದ ಕೀರ್ತಿ ಈ UB Groupsನದು. ಒಂದು ಕಾಲಕ್ಕೆ ವಿಶ್ವದಲ್ಲೇ ಟಾಪ್ ಸ್ಪಿರಿಟ್ಸ್ ಕಂಪನಿ ಅನ್ನಿಸಿಕೊಂಡಿದ್ದ  UB Groupsನ ಮುಖ್ಯ ಶಾಖೆ ಇರುವುದು ಬೆಂಗಳೊರಿನಲ್ಲಿ. ಬಹುರಾಷ್ಟ್ರಿಯ ಕಂಪನಿಯಾಗಿ ವಿಶ್ವದಾದ್ಯಂತ ಸುಮಾರು 60 ಇತರೆ ಕಂಪನಿಗಳನ್ನು ತೆಕ್ಕೆಗೆ ಹಾಕಿಕೊಂಡು 1983 ರಿಂದ  1998ರ ವರೆಗೆ ಅಂದರೆ  ಕೇವಲ 15 ವರ್ಷದಲ್ಲೇ ವಾರ್ಷಿಕ ವಹಿವಾಟನ್ನು 64% ಜಾಸ್ತಿ ಮಾಡಿ ತೋರಿಸಿತು. ಈ ಪರಿ ಬೆಳೆದು ಅಚ್ಚರಿ ಮೂಡಿಸಿದ UB Groups ಇಂದು ಪರಕೀಯರ ಪಾಲಾಗಿದೆ!

ಹಾಗೆಯೇ..

ಒಂದು ಕಾಲಕ್ಕೆ ದೇಶದ No.1 ಹಡಗು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದ್ದ ಭಾರತೀ ಶಿಪ್ಯಾರ್ಡ್ ದೇಶಿಯ ಹಡಗು ನಿರ್ಮಾಣ ವಲಯಕ್ಕೆ ಒಂದು ಹೊಸ ದಿಕ್ಕನ್ನೇ ತೋರಿಸಿತ್ತು. 1973ರಲ್ಲಿ ಯುವ ಇಂಜಿನಿಯರ್ಗಳಾಗಿದ್ದ ಪ್ರಕಾಶ್ ಸಿ ಕಪೂರ್ ಹಾಗು ವಿಜಯ್ ಕುಮಾರ್ ಅವರುಗಳು ಶುರು ಮಾಡಿದ ಈ ಸಂಸ್ಥೆ ಹಡಗು, ಟಗ್ ಬೋಟ್ಸ್, ಕಾರ್ಗೋ ಶಿಪ್ಸ್ , ಕಂಟೇನರ್ ಶಿಪ್ಸ್, ಫಿಶಿಂಗ್ ಬೋಟ್ಸ್ಗಳ ತಯಾರಿಸುವ ಪ್ರಾಜೆಕ್ಟ್ ಗಳನ್ನು ನಮ್ಮ ದೇಶದ ನೆಲದಲ್ಲೇ ಬೆಳೆಸುತ್ತಾ ಬಂದಿತು. ಅಲ್ಲದೆ ತನ್ನ ವ್ಯವಹಾರವನ್ನು ವಿಸ್ತರಿಸುತ್ತಾ ಹಲವಾರು ಸಣ್ಣ ಪುಟ್ಟ ಕಂಪನಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮುನ್ನಿಗ್ಗಿತು. ಮರೀನ್ ಇಂಜಿನಿಯರಿಂಗ್ ಮುಗಿಸಿ ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆತುರಲ್ಲಿರುವ ನಮ್ಮ ಇಂಜಿನಿಯರ್ಗಳಿಗೆ ಆಗೆಲ್ಲ ಮೊದಲು ಕಾಣುತ್ತಿದ್ದದ್ದು ಭಾರತೀ ಶಿಪ್ಯಾರ್ಡ್. ನಮ್ಮವರಲ್ಲೇ, ನಮ್ಮದೇ ತಂತ್ರಜ್ಞಾನದಿಂದ ಹಡಗುಗಳನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಟ್ಟ ಈ ಕಂಪನಿ  ಇಂದು ಅಕ್ಷರ ಸಹ ತನ್ನ ಉಳಿವಿಗೆ ಪರದಾಡುತ್ತಿದೆ!

ಇದೇ ಸಾಲಿನಲ್ಲಿ ಬರುವುದು ಮತ್ತೊಂದು ದೇಶಿಯ ಕಂಪನಿ, ಹಿಂದುಸ್ತಾನ್ ಮಷೀನರಿ ಟೂಲ್ಸ್. HMT. ಒಂದು ಕಾಲಕ್ಕೆ ದೇಶವೇ ಮೆಚ್ಚುವಂತ  ವಾಚ್’ಗಳನ್ನ ದೇಶದ ಮಾರುಕಟ್ಟೆಗೆ ಬಿಟ್ಟು, ಅನಲಾಗ್ ವಾಚ್ ನಿರ್ಮಾಣದಲ್ಲಿ ತನಗೆ ಸಾಟಿಯಾರು ಎಂದು ವಿಶ್ವಕ್ಕೆ ಸವಾಲೆಸೆದ ಕಂಪನಿ! Quartz ವಾಚ್ಗಳು (ಸ್ಫಟಿಕದ ಕಂಪನದಿಂದ ನಡೆಯುವ ವಾಚುಗಳು) ಮಾರುಕಟ್ಟೆಯಲ್ಲಿ ತಮ್ಮ ಅದಿಪತ್ಯವನ್ನು ಮೆರೆದಾಗಲೂ ತನ್ನ ಉಳಿವನ್ನು ಕಂಡ ಈ ಕಂಪನಿ ‘The Timekeeper of the Nation’ ಎಂದೇ ಪ್ರಸಿದ್ದಿ. ಕೊಹಿನೂರ್, ರವಿ, ತೇಜಸ್, ಜಯಂತ್, ಚಿರಾಗ್ ಅನ್ನುವ ದೇಶೀ ಹೆಸರುಗಳ ವಾಚ್ಗಳು ಕೇವಲ ಇನ್ನು ಇತಿಹಾಸದ ಪುಟಗಳಲ್ಲಿ ಕಾಣಲು ಮಾತ್ರ ಸಾದ್ಯ.

ಇದೆ ರೀತಿ 1941 ರಲ್ಲಿ ಶುರುವಾದ ಹಿಂದುಸ್ತಾನ್ ಶಿಪ್ಯಾರ್ಡ್, 1991 ರಲ್ಲಿ ಶುರುವಾದ ಅರ್ಚನ ಏರ್ವೇಸ್, 1946 ರಲ್ಲಿ ಶುರುವಾಗಿದ್ದ ಕಳಿಂಗ ಏರ್ವೇಸ್, ಸ್ವರಾಜ್ ಮಜ್ದಾ, ಸ್ಟ್ಯಾಂಡರ್ಡ್ ಮೋಟರ್ಸ್ ಹೀಗೆ ನೂರಾರು ‘ಇಂಡಿಯನ್ ಮೇಡ್’ ಕಂಪನಿಗಳು ಅಂದು ದೇಶದ ಆರ್ಥಿಕತೆಯ ಬೆನ್ನೆಲುಬುಗಳಾಗಿ, ಇಂದು ಹೇಳ ಹೆಸರಿಲ್ಲದಂತಾಗಿವೆ! ಒಂದು ಸರ್ವೇ ಪ್ರಕಾರ ಕೇವಲ 1992 ರಿಂದ 1998ರ ವರೆಗೆ ಸುಮಾರು ನೂರರಿಂದ ನೂರೈವತ್ತು ಪ್ರತಿಷ್ಟಿತ ಕಂಪನಿಗಳು ಮುಚ್ಚಿ ಹೋದವು.( FDI ನೀತಿಯಿಂದ ವಿದೇಶಿ ಕಂಪನಿಗಳು ದೇಶದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದ ಸಮಯವಿದು ಎಂಬುದು ಗಮನಿಸಬೇಕಾದ ವಿಚಾರ) ಇನ್ನೊಂದು ಸರ್ವೇ ಪ್ರಕಾರ, 2012 ರಲ್ಲಿ ಒಟ್ಟು 379 ತಾಂತ್ರಿಕ ಕಂಪನಿಗಳು ಶುರುವಾದವು, ಅಂದರೆ ದಿನಕೊಂದರೆಂತೆ ಹೊಸ ಕಂಪೆನಿಗಳು! ಆದರೆ ವರ್ಷ ಕಳೆಯುವುದರೊಳಗೆ ಇವುಗಳಲ್ಲಿ ಸುಮಾರು 90 ಕಂಪನಿಗಳು ನೆಲ ಕಚ್ಚಿದವು. ಉಳಿದ ಕಂಪನಿಗಳೂ ಸಹ ಇನ್ನೊಂದು ವರ್ಷ ಅನ್ನುವಾಗಲೇ ತಿಣುಕಾಡತೊಡಗಿದವು.ವಿಪರ್ಯಾಸವೆಂದರೆ ಇವುಗಳಲ್ಲಿ ಹೆಚ್ಚಿನವು ಬೆಂಗಳೂರಿನ ಕಂಪನಿಗಳು.

ಛೆ..! ಒಂದು ಕಂಪನಿ, ನೂರಾರು ಹೊಸ ಯೋಚನೆಗಳು, ಯೋಜನೆಗಳು. ಅವುಗಳನ್ನು ಹುಟ್ಟು ಹಾಕುವ ನೂರಾರು ಸೃಜನಶೀಲ ನಾಯಕರು.. ಹಗಲು ರಾತ್ರಿ ಎನ್ನದೆ ಯೋಚಿಸಿ, ಅವಲೋಕಿಸಿ ಶುರು ಮಾಡುವ ಒಂದು ಕಂಪನಿ, ಯಾವುದೊ ಒಂದು ಅಲ್ಪ ಕಾನುನಿಗೋ, ಯಾರದೋ ಕಪಿಮುಷ್ಠಿಗೋ, ಕೊಂಚ ಅತಿಯಾಸೆಗೋ ಅಥವಾ ಗೆಲ್ಲುತ್ತೇವೆ ಎನ್ನುವ ಭರವಸೆ ಇದ್ದರೂ ಸಹಾಯ/ಇನ್ವೆಸ್ಟ್ ಮಾಡುವ ಕೈಗಳು ಸಿಗದೇ ಇರುವ ಕಾರಣಕ್ಕೋ ಏನೋ, ದಿನಗಳು ತಿಂಗಳುಗಳಾಗುವ ಮೊದಲೇ ಮುಚ್ಚಲ್ಪಡುತ್ತಿವೆ. ನೂರಾರು ಕಂಪನಿಗಳನ್ನು ಶುರುಮಾಡಬಲ್ಲ ಕೆಪ್ಯಾಸಿಟಿ ಇರುವ ಭಾರತೀಯರು, ಅದೇ ಕಂಪೆನಿಗಳನ್ನು ಮುನ್ನೆಡುಸುವಲ್ಲಿ ಎಡವುತಿರುವುದೇಕೆ?

ಇಷ್ಟೆಲ್ಲಾ ಮುಚ್ಚಲ್ಪಡುತಿರುವ ಅಥವಾ ಮುಚ್ಚಿರುವ ಕಂಪನಿಗಳು ಮತ್ತೊಮೆ ಜೀವ ಪಡೆದರೆ ಅಥವಾ ಅವಕ್ಕೆ ಜೀವವನ್ನು ತುಂಬಿದರೆ ದೇಶದ ಅಭಿವೃದ್ಧಿಯ ಹಾದಿ ಇನ್ನೂ ಸುಗಮವಾಗಬಹುದೇ?

ಬೀಳುತ್ತಿರುವ ದೇಶಿಯ ಕಂಪೆನಿಗಳನ್ನು ಉಳಿಸಲು ಎಷ್ಟು ಕಷ್ಟಕರವಾದ ಮಾರ್ಗಗಳಿವೆಯೋ, ಅಷ್ಟೇ ಸುಲಬವಾದ ಮಾರ್ಗಗಳು ಅವುಗಳನ್ನು ಮುಚ್ಚಲು ಇವೆ. ‘Closure of Sick PSUs’ ಎಂಬ ಹಣೆಬರಹದೊಂದಿಗೆ ಒಂದು ನೋಟೀಸ್ ಹೊರಡಿಸಿ ದಶಕಗಳಿಂದ ಬೆಳೆದು ಬಂದ ಕಂಪೆನಿಗಳನ್ನು ನಿಮಿಷಗಳಲ್ಲಿ ಮುಚ್ಚಬಲ್ಲ ಕಾನೂನು ಇರುವಾಗ ಬೀಳುತ್ತಿರುವ ಕಂಪನಿಗಳ ರಕ್ಷಣೆ ಕಷ್ಟವೇ ಎನ್ನಬಹುದು. ಒಮ್ಮೆ ಯೋಚಿಸಿ ನೋಡಿ, ಒಂದು ಕುಂಟುತ್ತಿರುವ ಕಂಪನಿಯನ್ನು ಮುಚ್ಚುವುದರಿಂದ ದೇಶಕ್ಕೆ ಆಗುವ ಅರ್ಥಿಕ ನಷ್ಟಕ್ಕೆ ಕಡಿವಾಣ ಹಾಕಿದಂತಾಗುವುದೇನೋ ನಿಜ. ಆದರೆ, ಪುನ್ಹ ಅಂತಹದೊಂದು ಕಂಪನಿಯನ್ನು, ಅಂತಹ ನಾಯಕರನ್ನು ಅಲ್ಪ ಸಮಯದಲ್ಲಿ ಮತ್ತೆ ಹುಟ್ಟು ಹಾಕಲು ಸಾದ್ಯವಿದೆಯೇ?  ಭಾರತೀ ಶಿಪ್ಯಾರ್ಡ್ನನ್ನು ಮುಚ್ಚಿಸಿ ನಾಳೆ ಕ್ಷಣಮಾತ್ರದಲ್ಲಿ ಅಂತಹ ಮತ್ತೊಂದು ಕಂಪನಿಯನ್ನು ಕಟ್ಟಲು ಸಾದ್ಯವೇ? ಯಾರ ಸಹಾಯವಿಲ್ಲದೆ ಶಿಪ್ ಬಿಲ್ಡಿಂಗ್ ಯಾರ್ಡ್ಗಳನ್ನು ನಿರ್ಮಿಸಿ, ಕೊನೆ ಪಕ್ಷ ಸಣ್ಣ ಪುಟ್ಟ ಹಡಗುಗಳಿಗಾದರೂ  ಬೇರೆ ದೇಶವನ್ನೇ ನೆಚ್ಚಿ ಕೂರುವ ವಿಪರ್ಯಾಸವನ್ನು ತಪ್ಪಿಸಿದ್ದ ಪ್ರಕಾಶ್ ಹಾಗು ವಿಜಯ್ ಅವರಂತ ನಾಯಕರನ್ನು ಮತ್ತೆ ಸೃಷ್ಟಿಸಬಹುದೇ? ವಾಚ್ ಎಂದರೆ HMT, ಟೆಲಿವಿಷನ್ ಅಂದರೆ BPL ಎನ್ನುವಂತಹ ಜನಮನ್ನಣೆ ಗಳಿಸಿದ್ದ ಮೊತ್ತೊಂದು ಕಂಪನಿಯನ್ನು ನಾವು ಸೃಷ್ಟಿಸಬಲ್ಲೆವ? ಅಳಿಸಿ ಹಾಕುವ ಮೈಂಡ್ ಸೆಟ್  ಅನ್ನು ಬಿಟ್ಟರೆ ಉಳಿಸಿಕೊಳ್ಳುವ ಯೋಚನೆ ನಮ್ಮಲ್ಲಿ ಬರಲಿಲ್ಲ. ಈ ‘ಡಿಲೀಟ್’ ಎನ್ನುವ ಹೊಸ ಜಮಾನದಲ್ಲಿ, ಕಣ್ಣು ಮಿಟುಕಿಸುವಲ್ಲಿ ಕೈಗೆ ಬಂದು ಸೇರುವ ವಸ್ತುಗಳಿರುವಾಗ, ಹಾಳಾದದನ್ನು ಅಥವಾ ಸ್ವಲ್ಪ ಬಿರುಕು ಬಿಟ್ಟಿದ್ದರೂ ಸಹ ಆ ವಸ್ತು ತಮಗೆ ಬೇಡವೆಂದು ಬಿಸಾಡಿ ಹೊಸದರ ಅನ್ವೇಷಣೆಯಲ್ಲಿ ತೊಡಗುತ್ತೇವೆ. ಆದರೆ ಅಂದೆಲ್ಲ ಇದ್ದದ್ದು ಬಡತನ, ಜೊತೆಗೆ ಅನಿವಾರ್ಯತೆ. ಮುರಿದ ಹಾಗು ಬಿರಿದ ಕಂಪನಿಗಳಿಗೆ, ಬಿರುಕು ಮುಚ್ಚಿ, ಉಳಿಯಲು ಬೆಂಬಲ ಕೊಟ್ಟ ಕಾರಣಕ್ಕೆ ಅಂದು ಕೆಲವು ಕಂಪನಿಗಳು ದಶಕಗಳ ವರೆಗೂ ದೇಶದ ಬೆನ್ನೆಲುಬುಗಳಾದವು.

Happened Is Happened. ಈಗ ಹೋದ ಸಮಯದ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಆದರೆ ಇವುಗಳೆಲ್ಲದರಿಂದ  ನಮ್ಮ ದೇಶಿಯ ಕೈಗಾರಿಗ ವಲಯ ಹಲವಾರು ಪಾಠಗಳನ್ನೂ ತಿಳಿಸಿದೆ. ಸಂಸ್ಥೆಯ ಶೇರ್ ವ್ಯಾಲ್ಯೂವನ್ನು ಹೆಚ್ಚಿಸಲು ಕಂಪನಿಯ ಆದಾಯವನ್ನು ಇರುವುದಕ್ಕಿಂತ ಹೆಚ್ಚು ತೋರಿ ದೇಶದ ಕಳಂಕಿತ ಕಂಪನಿಗಳ ಸಾಲಿನಲ್ಲಿ ನಿಂತ ಸತ್ಯಂ, ಇಂದು ವಂಚಿಸುವ ಕಂಪನಿಗಳಿಗೆ ಒಂದು ನೀತಿಪಾಠದಂತೆ ಗೋಚರಿಸುತ್ತದೆ. 2G ಸ್ಪೆಕ್ಟ್ರಮ್ ಹಗರಣ ಇನ್ನು ಮುಂದೆ ರಾಜಕಾರಣಿಗಳಲ್ಲದೆ ಕಂಪನಿಗಳೂ ತಪ್ಪೆಸಗುವ ಮುನ್ನ ಎದೆಯಲ್ಲಿ ಡವ-ಡವ ಹುಟ್ಟು ಹಾಕುತ್ತದೆ! ಹಾಗಾಗಿ ಇಂದು ತನ್ನ ಕಂಪನಿ ಮುಚ್ಚಲ್ಪಟ್ಟಿದೆ ಎಂದರೆ  ಅದರಲ್ಲಿ ತನ್ನ ನೇರ ಹೊಣೆ ಎಷ್ಟಿದೆ ಎಂಬ ಪ್ರಶ್ನೆಯನ್ನು ಅದರ ನಾಯಕರು/ಮಾಲೀಕರು ಹಾಕಿಕೊಳ್ಳಬೇಕು. ಆದರೆ ಈ ರೀತಿ ಪ್ರತಿಷ್ಟಿತ ಕಂಪನಿಗಳು ನಮ್ಮ ದೇಶದಲ್ಲಿ ಕಾರಣಾಂತರಗಳಿಂದ  ಮುಚ್ಚುತ್ತಿರುವುದರಿಂದ ಆಗುತ್ತಿರುವ ಪರಿಣಾಮ ದೇಶದ ಬೆಳವಣಿಗೆಗೆ ಬಹಳ ವ್ಯತಿರಿಕ್ತವಾದುದು. ಹೂಡಿಕೆದಾರರು ಇಂದು ಪಬ್ಲಿಕ್ ಸೆಕ್ಟರ್ ಕಂಪನಿಗಳಲ್ಲಿ ಹಣ ಹೂಡಲು ಇಂದು ಮುಂದು ನೋಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಿಯ ಕಂಪನಿಗಳ  ಬಗೆಗಿನ ಗ್ರಹಿಕೆ (Perception) ಹಾಳಾಗುತ್ತಿದೆ. ಅಂದು ಕೇವಲ ಸತ್ಯಂ ಕಂಪನಿ ಮುಚ್ಚಲ್ಪಟ್ಟಾಗ ಅದರ ಸಾವಿರಾರು ನೌಕರರು ಬೀದಿಗೆ ಬಂದಿದ್ದರು. ಇಂದು ಅದೇ ರೀತಿ ಅದೆಷ್ಟು ಸತ್ಯಂಗಳು ಮುಚ್ಚುತ್ತಿವೆ?! ಇನ್ನೆಷ್ಟು ಜನ ಬೀದಿಗೆ ಬೀಳಬಹುದು? ಅಲ್ಲದೆ ನಮ್ಮ ಸರ್ಕಾರಗಳೇನೋ ಮುಚ್ಚುತಿರುವ ಕಂಪನಿಗಳನ್ನು ಪುನರುಜ್ಜೀವಗೊಳಿಸಲು ಆದಷ್ಟು ಕಾರ್ಯಕ್ರಮಗಳನ್ನು ತಂದಿದೆಯಾದರೂ ಅವೆಲ್ಲ ಕಾರ್ಯಗತಗೊಂಡಿರೋ ಸುದ್ದಿಗಳು ತೀರಾ ವಿರಳ. ಮೇಲಾಗಿ ಕಂಪನಿಗಳ ಲಾಭದ ಅರ್ಧಕಿಂತ ಜಾಸ್ತಿ ವಿವಿಧ ಬಗೆಯ ತೆರಿಗೆಗಳೇ ಇರುವಾಗ ಸೋಲುತ್ತಿರುವ ಕಂಪನಿಗಳು ಮೇಲೆ ಏಳುವುದು ಹೇಗೆ?

ಮೊನ್ನೆ ಮೊನ್ನೆಯಷ್ಟೇ ಬ್ಯಾನ್ ಆದ ನೆಸ್ಲೆ ಅವರ ಮ್ಯಾಗಿ, ದೇಶದ ತರ್ಕರಹಿತ ಕೆಲವು ಕಾನೂನುಗಳಿಗೆ ಒಂದು ಉದಾಹರಣೆ ಅಷ್ಟೇ. ಸೀಸದ /Lead (ಸಾಮಾನ್ಯವಾಗಿ ಎಲ್ಲ ಆಹಾರ ಪದಾರ್ಥಗಳಲ್ಲಿ ಕಂಡು ಬರುವ ಒಂದು ಬಗೆಯ ಲೋಹ) ಪ್ರಮಾಣ ಜಾಸ್ತಿಯಿದೆ ಎಂದು ಉತ್ಪಾದನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ರಾಶಿ ರಾಶಿ ಪ್ಯಾಕ್ ಗಳನ್ನು ಸುಟ್ಟು ಹಾಕಿಸಿದ ಕಾನೂನು ಇದೆ ಪ್ರಮಾಣ UK, ಸಿಂಗಾಪುರ್ ಹಾಗು ಕೆನಡಾದಂತ ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳಲ್ಲಿ ‘This Limit Is Completely Alright’ ಎನ್ನುವ ಸುದ್ದಿಯನ್ನು ಕೇಳಿ ತೆಪ್ಪಗಾಯಿತು. ನಮ್ಮಲ್ಲಿ ಬೇಕಾದ ಕಡೆ ಇರಬೇಕಾದ ಕಾನೂನುಗಳು ಬೇಡವೆಂದೆಡೆ ತುಸು ಜಾಸ್ತಿಯೇ ಇವೆ ಎಂದನಿಸುತ್ತದೆ. ಇಂತಹದರಲ್ಲಿ ಯಾರು ತಾನೇ ಹಣ ಹೂಡಲು ನಾ ಮುಂದು, ತಾ ಮುಂದು ಎಂದು ಬರುವರು ಹೇಳಿ.

ಅಂದು ಅವನತಿಯ ಹಾದಿಯಲ್ಲಿದ್ದ ಕಂಪನಿಗಳು ಎದ್ದು ನಿಲ್ಲಲು ಬೇಕಾದದ್ದು ಕೆಲವು ಕೋಟಿಗಳು ಮಾತ್ರ. ಸರ್ಕಾರವನ್ನು ಬಿಡಿ, ಲಕ್ಷ-ಲಕ್ಷ ಕೋಟಿ ಖರ್ಚು ಮಾಡಿ ಪಕ್ಷದ ಗೆಲುವಿಗೆ ಹವಣಿಸುವ ನಮ್ಮ ರಾಜಕೀಯ ಬಣಗಳಾದರೂ ದೇಶದ ಹಿತದೃಷ್ಟಿಯಿಂದ ಇಂತಹ  ಕಂಪನಿಗಳಿಗೆ ಸಾಲದ ರೂಪದಲ್ಲಾದರೂ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಾಗಿತ್ತು.ಇಂದು ನಾವುಗಳು ಮೇಕ್ ಇನ್ ಇಂಡಿಯಾ ಎನ್ನುತ ಹೆಮ್ಮೆಯಿಂದ ಮಾತಾಡುತ್ತೇವೆ. ‘ಮೇಕ್ ಇನ್ ಇಂಡಿಯ ಬಂದಾಯ್ತು ಆದರೆ, ಮೇಡ್ ಇಂಡಿಯಾಗಳ ಕತೆ ಏನಾಯ್ತು..?’ ಎಂಬುದನ್ನು ಸಹ ನಾವು ಕೇಳಿಕೊಳ್ಳಬೇಕು. ಇಂದು ಹೊಸತನ್ನು ಸೃಷ್ಟಿಸಿ, ಅದನ್ನು ಪರಿಕ್ಷಿಸುವುದರ ಬದಲು/ಜೊತೆಗೆ ಈಗಾಗಲೇ ಬೀಳುತ್ತಿರುವ ಕಂಪನಿಗಳ ಪುನರುಜ್ಜಿವದ ಕಡೆಗೂ ಹೆಚ್ಚಾಗಿ ಚಿಂತಿಸಬೇಕು. ಇಲ್ಲವಾದರೆ ನಮ್ಮ ಈ ‘ಡಿಲೀಟ್ ಜಮಾನ’ದಲ್ಲಿ ಮತ್ತೊಮ್ಮೆ ಡಿಲೀಟ್ ಬಟನ್ ಕಡೆ ಮುಖ ಮಾಡಬೇಕಾದೀತು, ಎಚ್ಚರಿಕೆ!

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!