ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿರುವ ವಿಶ್ವಕ್ಕೆ ಕಂಠಕಪ್ರಾಯವಾದಂತಿರುವ ಒಂದು ವಿಷಯ ಪರಮಾಣು ವಿಜ್ಞಾನ. ಇಂದು ವಿಶ್ವದ ಅತಿ ಶಕ್ತಿಶಾಲಿ ದೇಶಗಳ್ಯಾವುದೆಂದು ಪಟ್ಟಿ ಮಾಡ ಹೊರಟರೆ ಅದು ಹೆಚ್ಚು ಧನ ಸಂಪತ್ತಿರುವ ದೇಶಗಳಾಗಿರುವುದಿಲ್ಲ, ಬದಲಾಗಿ ಹೆಚ್ಚು ಪರಮಾಣು (Nuclear) ಬಾಂಬ್’ಗಳನ್ನು ಹೊಂದಿರುವ ದೇಶಗಳಾಗಿರುತ್ತವೆ! ಆ ದೇಶ ಅದೆಷ್ಟೇ ಸಣ್ಣದೆನಿಸಿದರೂ, ವಿಶ್ವದ ಆರ್ಥಿಕತೆಯಲ್ಲಿ ಆಟಕ್ಕುಂಟು ಲೆಕ್ಕಕಿಲ್ಲವೆಂದೆನಿಸಿದರೂ, ಒಮ್ಮೆ ಅದರ ಬಳಿ ಪರಮಾಣು ಬಾಂಬ್’ಗಳು ಇವೆಯೆಂದು ಸಾಬೀತಾದರೆ ಇತರ ಎಲ್ಲ ದೇಶಗಳು ತೆಪ್ಪಗಾಗಬೇಕಾಗುತ್ತದೆ. ಪರಮಾಣು ಬಾಂಬ್’ಗಳೆ ಹಾಗೆ. ಕೇವಲ ೬೪ ಕೆಜಿಯಷ್ಟು ಯುರೇನಿಯಂ ಅಂದು ಜಪಾನ್ನ ಲಕ್ಷಾಂತರ ಜನರ ಜೀವವನ್ನು ಕ್ಷಣಮಾತ್ರದಲ್ಲಿ ಸುಟ್ಟು ಹಾಕಿತೆಂದರೆ ಇವುಗಳ ಹಿಂದಿರುವ ಸಾಮರ್ಥ್ಯವನ್ನು ನೀವು ಊಹಿಸಬಹುದು. ಬೆಳವಣಿಗೆಯ ಶೀತಲ ಸಮರದಲ್ಲಿ ಪರಮಾಣು ಶಕ್ತತೆ ಇಂದು ದೇಶಗಳಿಗೆ ಅನಿವಾರ್ಯವಾಗಿದೆ. ಆದರೆ ಪಾರದರ್ಶಕತೆ ಇಲ್ಲದ ಈ ಶಕ್ತತೆ ದೇಶ-ದೇಶಗಳ ನಡುವೆ ದ್ವೇಷದ ಕಿಡಿಯನ್ನು ಹೊತ್ತಿಸುತ್ತಿದೆ. ವಿಶ್ವದ ಹತ್ತಾರು ದೇಶಗಳ ಸಂಬಂಧ ಈ ಒಂದು ವಿಷಯದ ಕುರಿತು ಹದಗೆಡುತ್ತಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಈ ಒಂದು ವಿಷಯದ ಕುರಿತು ಇಂದು ಹಲವು ದೇಶಗಳ ಮೇಲೆ ಆರ್ಥಿಕ ನಿರ್ಬಂಧವನ್ನು ಏರುತ್ತಿವೆ. ವಿಶ್ವವೇ ಪರಮಾಣು ಯುದ್ಧವೆಂಬೊಂದು ಭಯಾನಕ ಗಳಿಗೆಯ ಭಯದಿಂದ ಮುನ್ನೆಡೆಯುತ್ತಿದೆ.
ಎರಡನೇ ವಿಶ್ವಯುದ್ಧದ ಮಧ್ಯದಲ್ಲಿ (೧೯೪೨) ಜರ್ಮನಿಯ ಪರಮಾಣು ತಂತ್ರಜ್ಞಾನದ ಬಗ್ಗೆ ಅನುಮಾನವಿದ್ದ ಅಮೇರಿಕ, ಬ್ರಿಟನ್ ಹಾಗು ಕೆನಡಾ ದೇಶಗಳ ಸಹಾಯದೊಂದಿಗೆ ‘ಮ್ಯಾನ್ ಹಟನ್ ‘ ಎಂಬ ಯೋಜನೆಯನ್ನು ರೂಪಿಸಿತು. ಈ ಯೋಜನೆಯ ಮೂಲ ಉದ್ದೇಶ ವಿಶ್ವದ ಮೊದಲ ಪರಮಾಣು ಶಸ್ತ್ರವನ್ನು ತಯಾರಿಸುವುದು ಹಾಗು ವಿಶ್ವಕ್ಕೆ ಅಮೇರಿಕದ ಸಾಮರ್ಥ್ಯವನ್ನು ತೋರ್ಪಡಿಸುವುದು. ಪರಿಣಾಮ ಜಗತ್ತಿನ ಮೊದಲ ನಾಲ್ಕು ವಿನಾಶಕಾರಿ ಪರಮಾಣು ಬಾಂಬ್’ಗಳು! ಅವುಗಳೇ ಗ್ಯಾಡ್ಜೆಟ್, ಲಿಟ್ಲ್ ಬಾಯ್, ಫ್ಯಾಟ್ ಮ್ಯಾನ್, ಹಾಗು ನಾಲ್ಕನೆಯ ಹೆಸರಿಡದ ಒಂದು ಬಾಂಬ್. ಇವುಗಳಲ್ಲಿ ‘ಗ್ಯಾಡ್ಜೆಟ್’ ಎಂಬ ಮೊದಲ ಬಾಂಬನ್ನು ಜುಲೈ ೧೬, ೧೯೪೫ ರಲ್ಲಿ ದಕ್ಷಿಣ ಮೆಕ್ಸಿಕೋದ ಬಳಿ ಪರೀಕ್ಷಾಪೂರ್ವಕವಾಗಿ ಸಿಡಿಸಲಾಗುತ್ತದೆ. ಇದೆ ಜಗತ್ತಿನ ಅತಿ ಮೊದಲ ಅಣುಬಾಂಬ್ ಸ್ಫೋಟ. ಇದಾದ ಕೇವಲ ಇಪ್ಪತ್ತು ದಿನದಲ್ಲೇ ಅಮೇರಿಕ ತನ್ನ ‘ಲಿಟ್ಲ್ ಬಾಯ್’ ಬಾಂಬನ್ನು ಜಪಾನಿನ ಹಿರೋಷಿಮಾ ನಗರದ ಮೇಲೆ ಹಾಗು ಮೂರು ದಿನಗಳ ನಂತರ ‘ಫ್ಯಾಟ್ ಮ್ಯಾನ್’ನನ್ನು ನಾಗಸಾಕಿಯ ಮೇಲೆ ಹಾಕುತ್ತದೆ. ಇದು ಭೂಮಿಯ ಮೇಲೆ ಒಂದೇ ಶಸ್ತ್ರದಿಂದ ಅತಿ ಹೆಚ್ಚು ಜೀವಗಳನ್ನು ಕೊಂದ ಗಳಿಗೆಯಾಗುತ್ತದೆ ಅಲ್ಲದೆ ವಿಶ್ವವೇ ಅಮೆರಿಕಾದ ಈ ನಡೆಯಿಂದ ನಡುಗಿ ಹೋಗುತ್ತದೆ. ಪರಮಾಣು ಶಸ್ತ್ರಗಳ ಜನಕವಾದ ‘ಮ್ಯಾನ್ ಹಟನ್ ‘ ಯೋಜನೆ ಆಗಸ್ಟ್ ೧೫, ೧೯೪೭ ರಂದು ಕೊನೆಗಾಣುತ್ತದೆಯಾದರೂ ಅಷ್ಟರಲ್ಲಿ ವಿಜ್ಞಾನದ ವಿನಾಷದ ಜ್ಞಾನ ತನ್ನ ಪರಿಮಿತಿಯನ್ನು ವಿಸ್ತರಿಸಿರುತ್ತದೆ. ತದನಂತರ ಹಲವಾರು ದೇಶಗಳು ಪರಮಾಣು ಬಾಂಬ್’ಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತವೆ.
ಒಂದು ಸಮೀಕ್ಷೆಯ ಪ್ರಕಾರ ಇಂದು ವಿಶ್ವದ ವಿವಿಧ ದೇಶಗಳಲ್ಲಿ ಸುಮಾರು ೨೩೦೦೦ ಸಾವಿರಕ್ಕೂ ಮಿಗಿಲಾದ ಪರಮಾಣು ಶಸ್ತ್ರಗಳಿವೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಈ ದೇಶಗಳ ನಡುವಿನ ದ್ವೇಷದ ಜ್ವಾಲೆ ವಿವೇಕವನ್ನು ಮೀರಿ ಬೆಳೆದರೆ ವಿಶ್ವವೇ ಬೂದಿಯ ಉಂಡೆಯಾಗುವಿದರಲ್ಲಿ ಸಂಶಯವೇ ಇಲ್ಲ ಎನ್ನಬಹುದು!
ಹಾಗಾದರೆ ಪರಮಾಣು ವಿಜ್ಞಾನ ಎಂಬುದು ನಿಜವಾಗಿಯೂ ಭಯಪಡಬೇಕಾದ ವಿಷಯವೇ? ಇದರ ಉತ್ತರ ಅದನ್ನು ಬಳಸಿಕೊಳ್ಳುವ ಬಗೆಯಲ್ಲಿರುತ್ತದೆ ಎನ್ನಬಹುದು. ಒಂದು ಸಮೀಕ್ಷೆಯ ಪ್ರಕಾರ ಕಲ್ಲಿದ್ದಲಿನ ಕಾರ್ಖಾನೆಗಳ ಮೂಲಕ ಹೊರ ಹೋಗುವ ವಿಕಿರಣಶೀಲ (Radioactive) ವಸ್ತುಗಳು ಪರಮಾಣು ಅಣುಕೇ೦ದ್ರಗಳಿಗಿಂತ ಹೆಚ್ಚಾಗಿರುತ್ತದೆ ಎಂದರೆ ನೀವು ನಂಬಲೇಬೇಕು! ಕಲ್ಲಿದ್ದಲಿನಲ್ಲಿ ಯುರೇನಿಯಂ ಹಾಗು ತೊರಿಯಂಗಳ ಅಂಶಗಳಿರುವುದೇ ಇದಕ್ಕೆ ಕಾರಣ. ಅಲ್ಲದೆ ಕಲ್ಲಿದ್ದಲಿನ ಗಣಿಗಳಲ್ಲಿನ ಸಾವು-ನೋವುಗಳು ಹಾಗು ಕೆಲಸಗಾರರ ದೈಹಿಕ ಸಮಸ್ಯೆ ಪರಮಾಣು ಅಣುಕೇ೦ದ್ರಗಳಿಗಿಂತ ಜಾಸ್ತಿಯೇ ಎಂಬುದು ಪ್ರಸ್ತುತ ವಸ್ತುಸ್ಥಿತಿ. ಅಲ್ಲದೆ ಅದೆಷ್ಟೋ ಬಗೆಯ ಕ್ಯಾನ್ಸರ್ಗಳ ಚಿಕಿತ್ಸೆ ಹಾಗು ಆಧುನಿಕ ಬಹುಪಯೋಗಿ ವಸ್ತುಗಳ ನಿರ್ಮಾಣದಲ್ಲೂ ಪರಮಾಣು ವಿಜ್ಞಾನ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಮಿಗಿಲಾಗಿ ಪರಮಾಣು ಸ್ಥಾವರಗಳು ಜಾಗತಿಕ ತಾಪಮಾನ ಏರಿಕೆಗೆ ಪೂರಕವಾದ ಯಾವುದೇ ಅಂಶಗಳನ್ನು ಪರಿಸರಕ್ಕೆ ಬಿಡುವುದಿಲ್ಲ. ಇನ್ನು ಇತರೆ ಬಗೆಯ ಶಕ್ತಿಯ ಮೂಲಗಳಿಗೆ ಹೋಲಿಸಿದರೆ ಪರಮಾಣು ತಂತ್ರಜ್ಞಾನದಿಂದ ಗಳಿಸುವ ಶಕ್ತಿಯ ಪ್ರಮಾಣ ಅದೆಷ್ಟೋ ನೂರು ಲಕ್ಷ ಪಟ್ಟು ಹೆಚ್ಚಿರುತ್ತದೆ. ಉದಾಹರಣೆಗೆ ೧ ಕಿಲೋ ಕಲ್ಲಿದ್ದಲನ್ನು ಉರಿಸುವುದರಿಂದ ಉತ್ಪಾದಿಸಬಹುದಾದ ಶಾಖ ಶಕ್ತಿಯು 8 kWH ನಷ್ಟಿದ್ದರೆ, ಅಷ್ಟೇ ಪೆಟ್ರೊಲಿಯಂ ಬೈ-ಪ್ರಾಡಕ್ಟ್ ಗಳಿಂದ ಗಳಿಸುವ ಶಾಖ ಶಕ್ತಿ 12 kWH. ಆದರೆ, ಅದೇ ಒಂದು ಕಿಲೋ ಯುರೇನಿಯಂನನ್ನು ಉರಿಸುವುದರಿಂದ ಗಳಿಸಬಹುದಾದ ಶಾಖ ಶಕ್ತಿ ೨೪,೦೦೦,೦೦೦ kWH ಎಂಬುದು ಅಕ್ಷರ ಸಹ ಸತ್ಯ!
ಇನ್ನು ಪರಮಾಣು ಇಂಧನದ ಬಳಕೆಯಿಂದ ದುಷ್ಪರಿಣಾಮಗಳಿವೆ ಎಂಬ ವಾದವನ್ನೂ ಸಹ ಅಲ್ಲಗೆಳೆಯಲಾಗುವುದಿಲ್ಲ. ಮೊದಲನೆಯದಾಗಿ, ಪರಮಾಣು ಘಟಕಗಳ ಆಕಸ್ಮಿಕ ದುರಂತಗಳಿಂದಾಗುವ ಅವಘಡಗಳು ರಾಶಿ ರಾಶಿ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು.ಉದಾಹರಣೆಗೆ ೧೯೮೬ ರಲ್ಲಿ ಕ್ಷಣಮಾತ್ರದಲ್ಲಾದ ಅವಘಡದಿಂದ ವಿಕಿರಣಗಳು ಪರಿಸರವನ್ನು ಸೇರಿ, ಸಾವು ನೋವುಗಳೊಟ್ಟಿಗೆ ದಿನಕಳೆಯುವುದರೊಳಗೆ ನಗರವನ್ನೇ ನರಕವನ್ನಾಗಿಸಿದಂತ ಚರ್ನೋಬಿಲ್ ದುರಂತ ಇದಕ್ಕೆ ಒಂದು ಜ್ವಲಂತ ಉದಾಹರಣೆ. ಆದ ಕಾರಣ ಅಣುಕೇಂದ್ರಗಳ ಸುರಕ್ಷೆಯ ಮಟ್ಟ ಉಳಿದೆಲ್ಲ ಘಟಕಗಳಿಗೆ ಹೋಲಿಸಿದರೆ ಅತಿ ಸುಭದ್ರವಾಗಿರಬೇಕು. ಅಣುಬಾಂಬ್’ಗಳನ್ನು ಕಂಡು ಹಿಡಿದ ಮಾನವನಿಗೇ ಅಣು ಘಟಕಗಳನ್ನು ಸಂರಕ್ಷಿಸಬಲ್ಲ ಯುಕ್ತಿ ಅಸಾದ್ಯವೆನ್ನಲ್ಲ ಬಿಡಿ. ಎರಡನೆಯದಾಗಿ, ಇವುಗಳಿಂದ ಹೊರ ಬರುವ ವಿಕಿರಣ ತ್ಯಾಜ್ಯಗಳ (Radioactive Waste) ವಿಲೇವಾರಿ. ವಿಕಿರಣ ತ್ಯಾಜ್ಯಗಳು ವರುಷಗಳು ಕಳೆದರೂ ಸಕ್ರಿಯವಾಗಿರುವುದರಿಂದ ಅವುಗಳ ವಿಲೇವಾರಿ ಅಷ್ಟೊಂದು ಸುಲಭದ ಮಾತಲ್ಲ. ಅವುಗಳನ್ನು ಭೂಮಿಯಾಳದಲ್ಲಿ ಅಗೆದು ಮುಚ್ಚಬೇಕು ಹಾಗು ಯಾರ ಸಂಪರ್ಕಕ್ಕೂ ಬರದಂತೆ ಕಾಪಾಡಬೇಕು. ಹಾಗಾಗಿ ಇದರ ನಿರ್ವಹಣೆಗೆ ಹಾಗು ವಿಲೇವಾರಿಗೆ ತಗುಲುವ ವೆಚ್ಚ ಹಾಗು ಸಮಯ ತುಸು ಹೆಚ್ಚೇ ಎನ್ನಬಹುದು. ಮೂರನೆಯದಾಗಿ ಯುರೇನಿಯಂ (ಪರಮಾಣು ಲೋಹ) ನವೀಕರಿಸಲಾಗದ ಸಂಪನ್ಮೂಲಗಳಲೊಂದು. ಅಲ್ಲದೆ ಪ್ರಸ್ತುತ ಲಭ್ಯತೆಯಲ್ಲಿ ಇದರ ಪ್ರಮಾಣ ತೀರಾ ಕಡಿಮೆ. ಹೀಗೆ ನಾಳಿನ ದಿನಗಳಲ್ಲಿ ನಶಿಸಿ ಹೋಗುವ ಒಂದು ಶಕ್ತಿಯ ಮೂಲವಸ್ತುವಿನ ಮೇಲೆ ಸಾವಿರಾರು ಕೋಟಿ ಖರ್ಚು ಮಾಡಿ ಸ್ಥಾಪನೆಯಾಗುವ ಘಟಕಗಳು ಅಭಿವೃದ್ಧಿ ಹೊಂದುತಿರುವ ದೇಶಗಳಿಗೆ ಅಷ್ಟೇನೂ ಲಾಭದಾಯಕವಲ್ಲ.ಕೊನೆಯದಾಗಿ, ಮರ್ಕಟ ಮನಸ್ಸಿನ ಮಾನವ ಅದೆಷ್ಟೇ ನೀತಿಯ ಪಾಠಗಳನ್ನು ಹೇಳಿಸಿಕೊಂಡರೂ ತಾನು ತಾನೆಂಬ ಮೋಹದಲ್ಲಿ ಮಾನವೀಯತೆಯನ್ನು ಮರೆತ ಮೃಗವಾಗುತ್ತಿದ್ದಾನೆ. ಆದ ಕಾರಣ ಬೇರೆಲ್ಲ ದುಷ್ಪರಿಣಾಮಗಳಿಗಿಂತ ಮಿಗಿಲಾಗಿ ಮಾನವನ ದುಶ್ಚಟಗಳಿಂದ ಆಗುವ ಸಾವು-ನೋವು ಹಾಗು ಪರಿಸರ ಹಾನಿ ಅತಿ ಹೇರಳವಾದುದು.
ಪರಮಾಣು ಬಾಂಬ್’ಗಳ ಆವಿಷ್ಕಾರ ಇಂದು ಪ್ರತಿಯೊಂದು ದೇಶಕ್ಕೂ ಪ್ರತಿಷ್ಠೆಯ ಜೊತಗೆ ದೇಶದ ರಕ್ಷಣೆಯ ಪ್ರೆಶ್ನೆ. ತಿನ್ನಲು ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಮುಡಿದು ಕುಣಿಯುವಂತಿರುವ ದೇಶಗಳ ಕೈಯಲ್ಲಿ ಪರಮಾಣು ಬಾಂಬ್’ಗಳ ರಿಮೋಟ್ ಕಂಟ್ರೋಲ್’ಗಳು ಇರುವುದೇ ಇದಕ್ಕೆಲ್ಲ ಕಾರಣ. ಜೇಬು ತೂತಿದ್ದರೂ, ನೀತಿ ಹದಗೆಟ್ಟಿದ್ದರೂ ಅಂತಹ ದೇಶದಳ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ ಅದೆಷ್ಟೇ ದುಷ್ಪರಿಣಾಮಗಳಿದ್ದರೂ ಪರಮಾಣು ಶಕ್ತವಾಗಬೇಕಾದ ಅನಿವಾರ್ಯತೆ ಇಂದು ಹಲವು ದೇಶಗಳಿಗಿದೆ. ಅಧಿಕೃತವಾಗಿ ಇಂದು ಎಂಟರಿಂದ ಹತ್ತು ದೇಶಗಳು ಪರಮಾಣು ಶಕ್ತ ದೇಶಗಳೆಂದು ಗುರುತಿಸಿಕೊಂಡಿವೆ. ಇನ್ನೂ ಗೌಪ್ಯತೆಯನ್ನೇ ಕಾಪಾಡಿಕೊಂಡು ಮುಂದೊಂದು ದಿನ ‘ಢಮ್…’ ಎಂದು ಬೆಂಕಿಯ ಆಟವಾಡಲು ಕಾದು ಕುಳಿತಿರುವ ದೇಶಗಳ ಸಂಖ್ಯೆ ಎಷ್ಟಿದೆಯೋ ಬಲ್ಲವರು ಯಾರು?
ಕೇವಲ ಇನ್ನೊಂದು ದೇಶವನ್ನು ಹೆದರಿಸುವ, ತನ್ನ ಭಲಾಢ್ಯತೆಯನ್ನು ತೋರಿಕೊಳ್ಳುವ ಪೆದ್ದುತನದಿಂದ ಇಂದು ‘ಪರಮಾಣು ಶಕ್ತಿ’ಯೆಂಬ ವಿಷಯ ‘ಪರಮಾಣು ಬಾಂಬ್’ಗಳಾಗಿ ಮಾರ್ಪಟ್ಟಿದೆ. ಕಲ್ಲಿದ್ದಲ್ಲು,ಪೆಟ್ರೋಲಿಯಂ ಉತ್ಪನ್ನಗಳು, ಪವನಶಕ್ತಿ, ಜಲಶಕ್ತಿ ಹಾಗು ಇನ್ನೂ ಹಲವು ಶಕ್ತಿಯ ಮೂಲಗಳಿಗೆ ಹೋಲಿಸಿದರೆ ಪರಮಾಣು ಶಕ್ತಿಯ ಉತ್ಪದನಾ ಸಾಮರ್ಥ್ಯ ಅತಿ ಹೆಚ್ಚಾದುದು. ನಿರ್ವಹಣೆಯ ಲೋಪದೋಷಗಳಿಂದ ಆಗುವ ಅನಾಹುತಗಳನ್ನು ಬಿಟ್ಟರೆ ಬೇರ್ಯಾವ ಬಗೆಯಲ್ಲೂ ಸಂಭವಿಸಬಹುದಾದ ಸಾವು ನೋವುಗಳ ಪ್ರಮಾಣ ಇತರೆ ಶಕ್ತಿಯ ಮೂಲಗಳಿಗೆ ಹೋಲಿಸಿದರೆ ಇದರಲ್ಲಿ ಕಡಿಮೆಯೇ. ಮಿಗಿಲಾಗಿ ಜಾಗತಿಕ ತಾಪಮಾನ ಹೇರಿಕೆಗೂ ಇದರ ಕೊಡುಗೆ ಶೂನ್ಯವೇ. ಇಂತಹ ಒಂದು ಶಕ್ತಿಯ ಮೂಲ ಇಂದು ಕೇವಲ ಭಯೋತ್ಪದನಾ ವಿಷಯವಾಗಿ ಮಾರ್ಪಟ್ಟಿರುವದು ಖೇದನೀಯ ಸಂಗತಿ. ವಿಜ್ಞಾನದ ಈ ಅದ್ಬುತ ಆವಿಷ್ಕಾರಕ್ಕೆ ತಲೆದೂಗಬೇಕಾದ ನಾವುಗಳು ‘ಒಂದು ಪಕ್ಷ ಪರಮಾಣು ಶಕ್ತಿಯ ಆವಿಷ್ಕಾರ ಸಾಧ್ಯವಾಗದೆ ಹೋಗಿದ್ದರೆ ಇಂದು ದೇಶ ದೇಶಗಳ ನಡುವಿನ ಕಿತ್ತಾಟ ಕಡಿಮೆಯಾಗುತ್ತಿತ್ತು ‘ ಎಂದುಕೊಳ್ಳುವುದು ನಮ್ಮ ದೌರ್ಭಗ್ಯವೇ ಸರಿ. ತನ್ನ ಬಳಿ ಪರಮಾಣು ತಂತ್ರಜ್ಞಾನವಿದೆ ಎಂದು ಸಾಬೀತಾದರೆ ಇಂದು ಆ ದೇಶ ಒಮ್ಮೆಲೇ ಕಳನಾಯಕನ ಹಣೆ ಪಟ್ಟಿಯನ್ನು ಕಟ್ಟಿಕೊಳ್ಳುತ್ತದೆ. ಅಲ್ಲದೆ ಅದೆಷ್ಟೋ ದೇಶಗಳಿಂದ ಆರ್ಥಿಕ ನಿರ್ಬಂಧನಗಳನ್ನೂ ಹೇರಿಸಿಕೊಳ್ಳುತ್ತದೆ. ಯಾರೋ ಒಂದಿಬ್ಬರು ಮಾಡಿದ ಮೂರ್ಖತನಕ್ಕೆ ಇಂದು ಹಲವು ದೇಶಗಳು ಈ ಒಂದು ವಿಷಯದ ಕುರಿತಾಗಿ ವೈಜ್ಞಾನಿಕವಾಗಿ ಚರ್ಚಿಸಲಾಗುತ್ತಿಲ್ಲ.ಬೆಳೆಯಲಾಗುತ್ತಿಲ್ಲ.ಹೀಗೆ ವಿಶ್ವದ ಮುಂದಿನ ದಿನಗಳ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲ ವಿಷಯವೊಂದು ಇಂದು ನೆನಗುದಿಗೆ ಬೀಳುತ್ತಿದೆ.
ಇಂದಿಗೆ ಸುಮಾರು ೨೨೭ ವರ್ಷಗಳ ಹಿಂದೆ ಯುರೇನಿಯಂನ್ನು ಕಂಡು ಹಿಡಿದ ಶ್ರೇಯ ಮಾರ್ಟಿನ್ ಹೆನ್ರಿಚ್ ಕ್ಲಪ್ರೋತ್’ನದಾದರೆ, ೧೩೦ ವರ್ಷಗಳ ಹಿಂದೆ ವಿಕಿರಣಶೀಲತೆ(Radioactivity)ಯನ್ನು ಕಂಡು ಹಿಡಿದ ಶ್ರೇಯ ಮೇರಿ ಕ್ಯೂರಿ ಹಾಗು ಪಿಯರ್ ಕ್ಯೂರಿಯರದ್ದು. ವಿಶ್ವವೇ ನಿಬ್ಬರಗಾಗಿಸಿದ ಸಂಶೋಧನೆಯ ಸಂಶೋಧಕರ ಈ ಕಾರ್ಯಕ್ಕೆ ಪ್ರಸ್ತುತ ಸ್ಥಿತಿಯನ್ನು ನೋಡಿದಾದ ನಗುವುದೋ ಅಳುವುದೋ ತಿಳಿಯದಾಗುತ್ತದೆ..!
Reference : Internet