ಅಂಕಣ

UPI – ನಗದು ರಹಿತ ವ್ಯವಹಾರಕ್ಕೊಂದು ಹೊಸ ಆಯಾಮ

ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲಿಯೂ ಕೇಳಿ ಬರುತ್ತಿರುವ ಸಮಾಚಾರವೆಂದರೆ ನಗದು ರಹಿತ ವ್ಯವಹಾರ. ಡಿಜಿಟಲ್ ಇಂಡಿಯಾ ನರೇಂದ್ರ ಮೋದಿಯವರ ಕನಸಿನ ಕೂಸು. ಆದಷ್ಟು ನಗದು ರಹಿತ ವ್ಯವಹಾರವನ್ನು ಭಾರತೀಯರು ಎಲ್ಲಾ ವ್ಯವಹಾರಗಳಲ್ಲಿಯೂ ಅಳವಡಿಸಿಕೊಳ್ಳಿ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ಭಾರತದಲ್ಲಿ ಕೆಲವೊಂದು ವರ್ಗದವರ ಬಳಿ ಮಾತ್ರ ಸ್ಮಾರ್ಟ್’ಫೋನ್ ಇದೆ. ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಬಗ್ಗೆ ಸ್ಮಾರ್ಟ್’ಫೋನ್ ಹೊಂದಿರುವವರಿಗೆ ಪರಿಚಯ ಇದೆ. ಸ್ಮಾರ್ಟ್’ಫೋನ್ ಹೊರತುಪಡಿಸಿ ಸಾಮಾನ್ಯ ಮೊಬೈಲ್ ಫೋನ್’ಗಳನ್ನ ಹೊಂದಿರುವ ಜನರಿಗೆ ನಗದು ರಹಿತ ವ್ಯವಹಾರವನ್ನು ಮಾಡಲು ಸರಕಾರ ಹಲವಾರು ಮಾರ್ಗಗಳನ್ನು ಪರಿಚಯ ಮಾಡಲು ಬಹಳ ದೊಡ್ಡ ಪ್ರಯತ್ನವನ್ನೇ ಮಾಡುತ್ತಿದೆ. ಭಾರತೀಯರು ಬದಲಾವಣೆಗೆ ಅಷ್ಟು ಸುಲಭದಲ್ಲಿ ಒಗ್ಗಿಕೊಳ್ಳುವ ಜಾಯಮಾನದವರೇ ಅಲ್ಲ. ಒಂದು ಕಡೆ ಸರಿಯಾದ ಮಾಹಿತಿ ಇಲ್ಲದೆ ಹೊಸ ಬದಲಾವಣೆಗಳ ಬಗ್ಗೆ ಭಯ ಜನರಲ್ಲಿ. ಹಾಗಾಗಿ ಯಾವುದೇ ಹೊಸ ಯೋಜನೆಗಳನ್ನು ಹಾಗೂ ಬದಲಾವಣೆಗಳನ್ನು ತರಬೇಕಾದರೆ ಸರಕಾರ ಬಹಳಷ್ಟು ತಲೆಕೆಡಿಸಿಕೊಂಡು ಜನತೆಯನ್ನು ಹೊಸ ಬದಲಾವಣೆಯೊಳಗೆ ಕರೆದುಕೊಂಡು ಹೋಗಿ ಅವರಿಗಿರುವ ಹಿಂಜರಿತ ಹಾಗೂ ಭಯವನ್ನು ಹೋಗಲಾಡಿಸಬೇಕಿದೆ.

ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಡಿಜಿಟಲ್ ಇಂಡಿಯಾ ಸುರಕ್ಷಿತವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗೆ ಮಾತನಾಡುವ ಜನಗಳಿಗೆ ನನ್ನದೊಂದು ಪ್ರಶ್ನೆ, ಯಾವುದು 100% ಸುರಕ್ಷಿತವಾಗಿದೆ ಅಂತ ಅವರೇ ಉತ್ತರಿಸಲಿ. ಆನ್ಲೈನ್ ವ್ಯವಹಾರಗಳು ಸುರಕ್ಷಿತವಲ್ಲ ಎಂದು ಬಡಬಡಿಸುತ್ತೀರಲ್ಲ ಹಾಗಾದರೆ ನಗದು ವ್ಯವಹಾರಗಳು ನಿಮ್ಮ ಪ್ರಕಾರ ಸಂಪೂರ್ಣ ಸುರಕ್ಷಿತವೆ. ನಿಮ್ಮ ನಗದನ್ನು ಯಾವ ಕಳ್ಳ ಖದೀಮರು ಹೊಡೆದುಕೊಂಡು ಹೋಗೋದೇ ಇಲ್ಲ ಎಂಬಂತೆ ಮಾತನಾಡುವ ನಿಮಗೆ ಬಹುಷಃ ಆನ್ಲೈನ್ ವ್ಯವಹಾರಗಳ ಬಗ್ಗೆ ಸರಿಯಾಗಿ ತಿಳಿದಿಲ್ಲ ಅಥವಾ ಸುಖಾಸುಮ್ಮನೆ ಅವರಿವರ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡಿದ್ದಾರೆ ಎಂಬ ವಿಷಯವನ್ನೇ ಇಟ್ಟುಕೊಂಡು ಆನ್ಲೈನ್ ವ್ಯವಹಾರಗಳು ಸುರಕ್ಷಿತವಲ್ಲ ಎಂದು ಮಾತಾಡುವುದರಲ್ಲಿ ಅರ್ಥವೇ ಇಲ್ಲ. ಎಲ್ಲ ವ್ಯವಸ್ಥೆಯಲ್ಲೂ ಕಳ್ಳತನ ಹಾಗೂ ಅಸುರಕ್ಷತೆ ಸರ್ವೇ ಸಾಮಾನ್ಯ. ಹಾಗಂತ ನಾವು ಏನನ್ನೂ ಮಾಡಲಾರೆ ಎಂದು ಕುಳಿತುಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಸುರಕ್ಷತೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಕಂಡುಕೊಳ್ಳಬೇಕಿದೆ. ದೇಶ ಕಟ್ಟುವ ಹೊಣೆ ಬರೀ ಪ್ರಧಾನಮಂತ್ರಿಯವರ ಹೊಣೆಯಲ್ಲ, ನಮ್ಮೆಲ್ಲರ ಹೊಣೆ.

ನಗದು ರಹಿತ ವ್ಯವಹಾರಗಳನ್ನು ಸುಲಭವಾಗಿಸಲು RBI ಹೊಸ ರೀತಿಯನ್ನು ಅಳವಡಿಸಿಕೊಂಡಿದೆ. ಅದುವೇ UPI (Unified Payment Interface). ಆನ್’‌ಲೈನ್‌ ವ್ಯವಹಾರಗಳನ್ನು ಸುಲಭಗೊಳಿಸಲು ಆರ್’ಬಿ’ಐ NPCI(National Payment Corporations of India) ನ UPI ವಿಧಾನವನ್ನು ಅಳವಡಿಸಿಕೊಂಡಿದೆ. ಇದು ಇಂಟರ್ನೆಟ್ ಬ್ಯಾಂಕಿನ ಹೊಸ ವಿಧಾನ. ಇನ್ನೂ ಈ ಹೊಸ ವಿಧಾನದ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ಇಲ್ಲ. UPI ಹೇಗೆ ಕೆಲಸ ಮಾಡುತ್ತದೆ ಮತ್ತು ಇದನ್ನು ಹೇಗೆ ಬಳಸಿಕೊಂಡು ನಗದು ರಹಿತ ವ್ಯವಹಾರವನ್ನು ಸುಲಭವಾಗಿ ಮಾಡಬಹುದು ಎಂಬ ಮಾಹಿತ ಜನರನ್ನು ಇನ್ನೂ ಸಂಪೂರ್ಣವಾಗಿ ತಲುಪಿಲ್ಲ.

ನೀವೂ ಈ UPI ಬಗ್ಗೆ ಕೇಳಿರಬಹುದು ಆದರೆ ಇನ್ನೂ ಬಳಸಲು ಪ್ರಾರಂಭಿಸದೇ ಇರಬಹುದು. ಹಾಗಾದರೆ ಈ UPI ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಜೊತೆಗೆ ಪ್ರತಿಯೊಬ್ಬರಿಗೂ ಈ ಮಾಹಿತಿ ತಲುಪುವಂತೆ ಮಾಡೋಣ. ತನ್ಮೂಲಕ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ನಮ್ಮದೊಂದು ಅಳಿಲುಸೇವೆಯನ್ನು ಮಾಡೋಣ.

UPI ಇತರ ಇಂಟರ್ನೆಟ್ ಬ್ಯಾಂಕಿಗ್ ಸೇವೆಗಳಿಗಿಂತ ವಿಭಿನ್ನವೇ?

ನೀವು ಸ್ಮಾರ್ಟ್’ಫೋನ್ ಬಳಸುತ್ತಿದ್ದರೆ ನಿಮಗೆ ಈಗಾಗಲೇ ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಗ್ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತದೆ. ಹಾಗಾದರೆ ಈ UPI ನ ವಿಶೇಷತೆಯೇನು ಹಾಗೂ ಹೇಗೆ ಇದು ವಿಭಿನ್ನವಾಗಿದೆ ಎಂದರೆ,

1. ನೀವು UPI ಬಳಸುತ್ತಿದ್ದರೆ, ಹಣ ವರ್ಗಾವಣೆ ಮಾಡಲು IFSC Code, ಬ್ಯಾಂಕ್ ಅಕೌಂಟ್ ನಂಬರ್ ಅವಶ್ಯಕತೆ ಇಲ್ಲ. ಕೇವಲ ಒಂದು ವಿಳಾಸವನ್ನು(Virtual Address) ಬಳಸಿಕೊಂಡು ನೀವು ಹಣ ವರ್ಗಾವಣೆ ಮಾಡಬಹುದು.

2. ಯಾವುದೇ ಬ್ಯಾಂಕಿನ UPI ತಂತ್ರಾಂಶವನ್ನು ಬಳಸಿಕೊಂಡು ನೀವು ಹೊಂದಿರುವ ಯಾವುದೇ ಇತರ ಬ್ಯಾಂಕ್ ಅಕೌಂಟ್ ನಂಬರ್ ಮೂಲಕ ವ್ಯವಹಾರ ನಡೆಸಬಹುದು.

3. UPI ಮೂಲಕ ಬರೀ ಹಣ ಕಳುಹಿಸುವುದಷ್ಟೇ ಅಲ್ಲಾ ಇನ್ನೊಬ್ಬರಿಂದ ಹಣವನ್ನು ಪಡೆಯಲು ವಿನಂತಿಯನ್ನು ಮಾಡಬಹುದು.

4. ಇನ್ನು UPI 24*7 ಸೌಲಭ್ಯವನ್ನು ಒದಗಿಸುತ್ತದೆ. ಬಹಳ ತ್ವರಿತ ಗತಿಯಲ್ಲಿ ನೀವು ವ್ಯವಹಾರಗಳನ್ನು ಸುಲಭವಾಗಿ ನಡೆಸಬಹುದು.

5.ಈಗಾಗಲೇ ಈ UPI ತಂತ್ರಾಂಶವನ್ನು(Application) ಹಲವಾರು ಬ್ಯಾಂಕ್’ಗಳು ಮಾರುಕಟ್ಟೆಗೆ ಬಿಟ್ಟಿವೆ. ನಿಮಗೆ ಇಷ್ಟವಾಗುವ ಬ್ಯಾಂಕ್’ನ ತಂತ್ರಾಂಶವನ್ನು ಗೂಗಲ್ ಪ್ಲೇ ಸ್ಟೋರ್’ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನೆನಪಿರಲಿ ನೀವು ಖಾತೆ ಹೊಂದಿರುವ ಬ್ಯಾಂಕಿನ ತಂತ್ರಾಂಶವನ್ನೇ ಬಳಸಬೇಕೆಂಬ ನಿರ್ಬಂಧವೇನಿಲ್ಲ.

6. UPI ಗೆ ನೊಂದಾವಣೆ ಮಾಡಿಕೊಳ್ಳುವುದೂ ಸುಲಭ. ಒಮ್ಮೆ ನೀವು ತಂತ್ರಾಂಶವನ್ನು ಡೌನ್‌’ಲೋಡ್ ಮಾಡಿಕೊಂಡ ನಂತರ ಒಂದೆರಡು ಸೂಚನೆಗಳನ್ನು ಅನುಸರಿಸಿ ನಿಮ್ಮ ಅಕೌಂಟ್ ನಂಬರ್ , ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ಕೆಲವು ಮಾಹಿತಿಯನ್ನು ನೀಡಬೇಕಾಗುತ್ತದೆ.  ಹಾಗೂ ಒಂದು ವರ್ಚುವಲ್ ವಿಳಾಸವನ್ನು(Virtual Address) ನೀವೇ ಆರಿಸಿಕೊಳ್ಳಬಹುದು. ಈ ವರ್ಚುವಲ್ ವಿಳಾಸ ನಿಮ್ಮ ಬ್ಯಾಂಕ್  ಅಕೌಂಟ್, ಹಾಗೂ ಇನ್ನಿತರೆ ಅವಶ್ಯಕವಾದ ಮಾಹಿತಿಯನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ನೀವು ಕೇವಲ ಈ ವಿಳಾಸವನ್ನು ಸರಿಯಾಗಿ ನೆನಪಿಟ್ಟುಕೊಂಡರೆ ಅಷ್ಟೇ ಸಾಕು. ಈ ವಿಳಾಸದಿಂದಲೇ(ಇಮೇಲ್ ರೀತಿಯಲ್ಲಿರುತ್ತದೆ) ಎಲ್ಲ ವ್ಯವಹಾರಗಳನ್ನು ನಡೆಸಬಹುದು.

ನಮ್ನ ದೇಶದಲ್ಲಿ ಇನ್ನೂ ಹಲವಾರು ವರ್ಗದವರ ಬಳಿ ಸ್ಮಾರ್ಟ್’ಫೋನ್ ಬಳಕೆ ಇಲ್ಲ. ಹಾಗಾದರೆ ಸ್ಮಾರ್ಟ್ ಫೀಚರ್ ಇಲ್ಲದ ಸಾಮಾನ್ಯ ಮೊಬೈಲ್’ಗಳನ್ನು ಹೊಂದಿರುವವರು ಹೇಗೆ ನಗದು ರಹಿತ  ವ್ಯವಹಾರ ಮಾಡುವುದು ಎಂಬ ಅಲೋಚನೆ ನಿಮಗೆ ಈಗಾಗಲೇ ಬಂದಿರಬಹುದು. ಸಾಮಾನ್ಯ ಮೊಬೈಲ್ ಫೋನ್’ಗಳನ್ನು ಹೊಂದಿರುವವರಿಗಾಗಿಯೇ ಇನ್ನೊಂದು ಸೇವೆ ಈಗಾಗಲೆ NPCI ವತಿಯಿಂದ ಲಭ್ಯವಿದೆ. ಅದುವೇ USSD ಸಂಖ್ಯೆ *99#.

ಏನಿದು *99# ?

ಸಾಮಾನ್ಯ ಫೀಚರ್ ಫೋನ್’ಗಳನ್ನು ಹೊಂದಿರುವವರು ಈ USSD(Unstructured Supplementary Service Data) ಸಂಖ್ಯೆಯನ್ನು ಬಳಸಿಕೊಂಡು ಕೆಳಕಂಡ ಮಾಹಿತಿಗಳನ್ನು ಹಾಗೂ ಸೇವೆಗಳನ್ನು ಪಡೆದುಕೊಳ್ಳಬಹುದು. ಇದಕ್ಕೆ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕಾಗಿರುವುದು ಕಡ್ಡಾಯ.

ನಿಮ್ಮ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ *99# ಡಯಲ್ ಮಾಡಿ. ನಂತರ ನಿಮ್ಮ ಬ್ಮಾಂಕ್ ಹೆಸರಿನ ಮೊದಲ ಮೂರು ಅಕ್ಷರಗಳನ್ನು ಟೈಪ್ ಮಾಡಿದರೆ ಸಾಕು ನಿಮಗೆ ಕೆಳಕಂಡ ಸೇವೆಗಳು ಲಭ್ಯ.

1.    Account Balance

2.    Mini Statement

3.    Send money using MMID

4.    Send money using IFSC

5.    Show MMID

6.    Show MPIN

ನೀವು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಬಳಸುತ್ತಿಲ್ಲವೆಂದರೆ ತೊಂದರೆ ಇಲ್ಲ. ನಿಮ್ಮ ಖಾತೆಗೆ ಸಂಭಂದಿಸಿದ MMID ಹಾಗೂ MPIN ಬಗ್ಗೆ ನಿಮ್ಮ ಬ್ಯಾಂಕ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ನೆನಪಿಡಿ ಇವೆಲ್ಲಾ ಸೇವೆಗಳನ್ನು ಬಳಸಲು ನೀವು ಅವಶ್ಯವಾಗಿ ಮಾಡಬೇಕಾದ ಕೆಲಸವೆಂದರೆ ಇಂದೇ ನಿಮ್ಮ ಖಾತೆಗೆ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಜೊತೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಿ.

ನಗದು ರಹಿತ ವ್ಯವಹಾರವನ್ನು ಹೇಗೆ ಮಾಡಬಹುದೆಂದು ಆದಷ್ಟು ನಾವೂ ತಿಳಿದುಕೊಂಡು ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರಿಗು ಹೇಳಿಕೊಡೋಣ. ಈಗಾಗಲೇ ಯುವಾ ಬ್ರಿಗೇಡ್ ನಗದು ರಹಿತ ವ್ಯವಹಾರವನ್ನು ಯಾವ ರೀತಿಯಲ್ಲಿ ನಡೆಸಬಹುದೆಂದು ಜನರಲ್ಲಿ ಕಾಳಜಿ ಮೂಡಿಸುತ್ತಿದೆ ಹಾಗೂ ಪ್ರತಿಯೊಬ್ಬರಿಗು ತಿಳಿಸಿಕೊಡುತ್ತಿದೆ. ಬನ್ನಿ ಆದಷ್ಟು ನಗದು ರಹಿತ ವ್ಯವಹಾರಗಳನ್ನು ಮಾಡುವುದರ ಮೂಲಕ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!