Featured ಅಂಕಣ

ಶಾಂತಿ ಕ್ರಾಂತಿಯ ಮಾಂತ್ರಿಕನಿಗೆ ಹುಟ್ಟು ಹಬ್ಬದ ಶುಭಾಶಯಗಳು.

“ಭಾರತ್ ಕೋಯಿ ಭೂಮಿ ಕಾ ಟುಕಡಾ ನಹೀ ಹೈ, ಏಕ್ ಜೀತಾ ಜಾಗ್ತಾ ರಾಷ್ಟ್ರ ಪುರುಷ್ ಹೈ. ಯೇ ವಂದನ್ ಕೀ ಧರ್ತಿ ಹೈ ಅಭಿನಂದನ್ ಕೀ ಧರ್ತಿ ಹೈ, ಯೇ ಅರ್ಪಣ್ ಕೀ ಭೂಮಿ ಹೈ ಯೇ ತರ್ಪಣ್ ಕೀ ಭೂಮೀ ಹೈ, ಇಸ್ಕಿ ನದಿ ನದಿ ಹಮಾರೆ ಲಿಯೆ ಗಂಗಾ ಹೈ, ಇಸ್ಕಾ ಕಂಕಣ್ ಕಂಕಣ್ ಹಮಾರೆ ಲಿಯೇ ಶಂಕರ್ ಹೈ. ಹಮ್ ಜೀಯೇಂಗೇ ತೋ ಇಸ್ ಭಾರತ್ ಕೇ ಲಿಯೆ ಔರ್ ಮರೆಂಗೆ ತೋ ಇಸ್ ಭಾರತ್ ಕೆ ಲಿಯೆ, ಔರ್ ಮರ್ನೆಕೆ ಬಾದ್ ಭೀ ಬೆಹತಿ ಹೂಯಿ ಹಮಾರಿ ಅಸ್ಥಿಯೊ ಕೊ ಕೋಯಿ ಕಾನ್ ಲಗಾಕರ್ ಸುನೇಗಾ ತೋ ಏಕೀ ಆವಾಜ್ ಆಯೇಗಿ “ಭಾರತ್ ಮಾತಾ ಕೀ ಜೈ”. ಭಾರತ ಎಂದರೆ ಏನು ಎಂಬ ಅದೆಷ್ಟೋ ಪ್ರಶ್ನೆಗೆ ಪಕ್ವವಾದ ಉತ್ತರ ಈ ಸಾಲುಗಳಲ್ಲಿವೆ.ನಮ್ಮೊಳಗಿನ ರಾಷ್ಟ್ರಪ್ರೇಮವ ಬಡಿದೆಬ್ಬಿಸುವ ಈ ಸಾಲುಗಳನ್ನು ಬರೆದ ಆ ರಾಜಕೀಯ ಭೀಷ್ಮನಿಗೆ ಇಂದು 92ನೇ ಜನ್ಮದಿನ. ರಾಜಕೀಯದ ಪಡಸಾಲೆಯಲ್ಲಿ ಭಿನ್ನವಾಗಿ ನಿಲ್ಲುವ ಈ ವ್ಯಕ್ತಿ ಭಾರತಾಂಬೆಯ ಹೆಮ್ಮೆಯ ಪುತ್ರನಾಗಿ ತನ್ನ ಸಂಪೂರ್ಣ ಜೀವನವನ್ನು ರಾಷ್ಟ್ರಸೇವೆಗೆ ಮುಡಿಪಿಟ್ಟು “ಅಜಾತ ಶತ್ರು” ಎಂದು ಬಿರುದು ಪಡೆದರು. ಇಷ್ಟು ಹೇಳಿದ ಮೇಲೆ ಅವರ್ಯಾರು ಎಂಬ ಪ್ರಶ್ನೆಗೆ ಉತ್ತರ ಅದಾಗಲೇ ನಿಮಗೆ ದೊರಕಿರುತ್ತದೆ. ಅವರೇ ನಮ್ಮ ದೇಶ ಕಂಡ ಹೆಮ್ಮೆಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಹಾಗೆ ಸುಮ್ಮನೆ ಒಮ್ಮೆ ಯೂಟ್ಯೂಬ್ ನಲ್ಲಿರುವ ಅವರ ಕವಿತೆಗಳನ್ನೆಲ್ಲ ನೋಡಿ, ನಿಮ್ಮನ್ನು ಅಟಲ್ ವಿಪರೀತವಾಗಿ ಅವರಿಸಿಕೊಳ್ಳದಿದ್ದರೆ ಹೇಳಿ.

ಅಟಲ್ ಒಬ್ಬ ರಾಜಕೀಯ ವ್ಯಕ್ತಿಯಾಗಿ ಮಾತ್ರ ಗುರುತಿಸಿಕೊಳ್ಳಲಿಲ್ಲ. ಅವರೊಳಗಿದ್ದ ಕವಿತ್ವ, ದೇಶಕ್ಕೇನಾದರೂ ಮಾಡಬೇಕೆಂಬ ನಿಷ್ಕಲ್ಮಶ ಹಂಬಲ ಅವರನ್ನು ಮೇರು ವ್ಯಕ್ತಿತ್ವವನ್ನಾಗಿ ಮಾಡಿತು. ನನ್ನಪ್ಪ ಅಟಲ್ ಜೀ ಅವರನ್ನು ನಿತ್ಯ ಪೂಜಿಸುತ್ತಾನೆ. ಅದಕ್ಕಾಗಿಯೇ ಅವರ ದೊಡ್ಡ ಫೋಟೋ ಒಂದನ್ನು ಅದಾಗಲೇ ಪ್ರತಿಷ್ಟಾಪಿಸಿದ್ದಾರೆ. ಅಪ್ಪ ಅಟಲ್ ಬಗ್ಗೆ ಮಾತಾಡುವಾಗ ಭಾವುಕವಾಗಿಬಿಡುತ್ತಾನೆ. ಅಟಲ್ ನಮ್ಮನೆಯ ಸದಸ್ಯರಲ್ಲೊಬ್ಬರಾಗಿದ್ದರು ಎಂಬ ಅಪ್ಪನ ಒಂದು ಮಾತು ಅಟಲ್ ಸಾಮಾನ್ಯರನ್ನು ಆವರಿಸಿದ್ದ ಪರಿಯ ಅಗಾಧತೆಯನ್ನು ತಿಳಿಸುತ್ತದೆ.

ಡಿಸೆಂಬರ್ 25,1924 ರಂದು ಜನಿಸಿದ ಅಟಲ್ ಅವರ ಸಂಪೂರ್ಣ ಜೀವನದ ಬಗ್ಗೆ ನಾನು ತುಂಬಾ ಹೇಳಲು ಹೋಗುವುದಿಲ್ಲ ಆದರೆ ಆ ಮನುಷ್ಯ ಭಾರತಕ್ಕಾಗಿ ಮಾಡಿದ ಅಮೂಲ್ಯ ಕೆಲಸಗಳನ್ನು ಮತ್ತೊಮ್ಮೆ ನೆನಪಿಸುವ ಕೆಲಸವನ್ನು ಮಾಡುತ್ತೇನೆ. 1996ರಲ್ಲಿ ಹದಿಮೂರು ದಿನ, 1998-99 ರಲ್ಲಿ ಹದಿಮೂರು ತಿಂಗಳು ಮತ್ತು 1999-2004ರಲ್ಲಿ ಐದು ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅಟಲ್ ರ ಕೆಲವೊಂದು ಯೋಜನೆಗಳು ಇಂದಿಗೂ ಮಾದರಿಯಾಗಿ ನಿಲ್ಲುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ಜೈಲನ್ನು ಅನುಭವಿದ್ದರು ಅಟಲ್. 1939ರ ಆಸುಪಾಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದ ವಾಜಪೇಯಿ 1947ರಲ್ಲಿ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಲು ಶುರು ಮಾಡಿದರು. 1950ರಲ್ಲಿ ಪಂಡಿತ್ ದೀನದಯಾಳ್ ಉಪಾದ್ಯಾಯರ ಜೊತೆಗೂಡಿ ರಾಷ್ಟ್ರಧರ್ಮ, ಪಾಂಚಜನ್ಯ ಪತ್ರಿಕೆಗೆ ಕೆಲಸ ಮಾಡಿದರು. 1951ರಲ್ಲಿ ಸ್ಥಾಪನೆಗೊಂಡ  ಭಾರತೀಯ ಜನ ಸಂಘದ ಬೆಳವಣಿಗೆಯಲ್ಲಿಪ್ರಮುಖ ಪಾತ್ರ ವಹಿಸಿದವರಲ್ಲಿ  ದೀನದಯಾಳ್ ಉಪಾದ್ಯಾಯರು, ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಅಟಲ್ ಪ್ರಮುಖರು. ಮುಂದೆ ಇದೇ ಜನ ಸಂಘ ಭಾರತೀಯ ಜನತಾ ಪಾರ್ಟಿ ಆಗುತ್ತದೆ, ಭಾರತದಲ್ಲಿ ತನಗೆ ಪರ್ಯಾಯವೇ ಇಲ್ಲ ಎಂದುಕೊಂಡಿದ್ದ ಕಾಂಗ್ರೆಸ್ ಅನ್ನು ಹಂತ ಹಂತವಾಗಿ ಮಣ್ಣು ಮುಕ್ಕಿಸುತ್ತಾ ಮೌಲ್ಯಯುತವಾದ ರಾಜಕಾರಣ ಮಾಡಿ ಈ ದೇಶದ ಹತ್ತನೇ ಪ್ರಧಾನಿಯಾಗಿ ಅಟಲ್ ಪ್ರಮಾಣವಚನ ಸ್ವೀಕರಿಸಿ ಭಾರತದ ಬದಲಾವಣೆಗೆ ಮುನ್ನುಡಿ ಬರೆಯುತ್ತಾರೆ. ರಾಷ್ಟ್ರೀಯವಾದಿಯೊಬ್ಬ ಪ್ರಧಾನಿಯಾಗಿ ಸಾಮಾನ್ಯರ ಏಳ್ಗೆಗೆ ಶ್ರಮಿಸಾತೊಡಗಿದ ಆ ಕಾಲ ನಿಜಕ್ಕೂ ಅದ್ಭುತವಾಗಿತ್ತು.

ಬನ್ನಿ ರಾಜಕೀಯದ ಭೀಷ್ಮ ಪಿತಾಮಹ ಆರು ವರ್ಷದಲ್ಲಿ ಮಾಡಿದ ಸದಾ ಹಸಿರಾಗಿರುವಂತಹ ಯೋಜನೆಗಳನ್ನು ಒಮ್ಮೆ ನೆನಪಿಸಿಕೊಳ್ಳೋಣ.

ವಿಶ್ವವೇ ಬೆಕ್ಕಸ ಬೆರಗಾಗುವಂತಹ ಸಾಧನೆ ಅದು “ಯಶಸ್ವೀ ಅಣ್ವಸ್ತ್ರ ಪರೀಕ್ಷೆ” :
ಭಾರತದ ವಿಜ್ಞಾನಿಗಳು ಅಣು ಪರೀಕ್ಷೆಗೆ ತುದಿಗಾಲಿನಲ್ಲಿರುವ ಸಮಯ ಅದು, ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅವರೆಲ್ಲ ಕೈ ಚೆಲ್ಲಿ ಕೂತಿದ್ದರು. ಆಗ ಅವರಿಗೆ ಅಣುಪರೀಕ್ಷೆಗೆ ಅಸ್ತು ಅಂದವರು ನಮ್ಮ ಅಟಲ್. ಅದು ಅಟಲ್ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ. ಅಧಿಕಾರಕ್ಕೆ ಅಂಟಿಕೊಳ್ಳದೆ ದಿಟ್ಟ ನಿರ್ಧಾರವನ್ನು ಅಟಲ್ ಮಾರ್ಚ್ 28, 1998ರಂದು ತೆಗೆದುಕೊಂಡರು. ಅಬ್ದುಲ್ ಕಲಾಂರನ್ನು ಕರೆದು ಅತೀ ಕಡಿಮೆ ಅವಧಿಯಲ್ಲಿ ಈ ಕೆಲಸ ಮಾಡಲು ಸೂಚನೆ ನೀಡಿದರು. ಪ್ರಧಾನಿಯ ಒಪ್ಪಿಗೆಗೆ ಮಾತ್ರ ಕಾದಿದ್ದ ಕಲಾಂ ಮತ್ತು ತಂಡ ಹಗಲಿರುಳು ಶ್ರಮಿಸಿ, ಅಮೆರಿಕದಂತಹ ಬಲಿಷ್ಟ ರಾಷ್ಟ್ರಕ್ಕೂ ಸಣ್ಣ ಅನುಮಾನ ಬರದಂತೆ ಕೇವಲ ಎರಡೂವರೆ ತಿಂಗಳಲ್ಲಿ ಭಾರತವನ್ನು ಯಶಸ್ವೀ ಅಣ್ವಸ್ತ್ರ ರಾಷ್ಟ್ರವನ್ನಾಗಿ ಮಾಡಿದರು. ಮೇ 11,1998ರಂದು ಇಡೀ ವಿಶ್ವ ದಿಗ್ಭ್ರಮೆಗೊಳ್ಳುವ ಸುದ್ಧಿ ಟೀವಿಯಲ್ಲಿ ಬಿತ್ತರಗೊಳ್ಳುತ್ತಿದ್ದರೆ ವೈರಿ ರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿತ್ತು. ಒಟ್ಟಿನಲ್ಲಿ ಭಾರತ ಪರಮಾಣು ರಾಷ್ಟ್ರವಾಗಿ ಹೊರಹೊಮ್ಮಿತ್ತು.ಅಧಿಕಾರಕ್ಕೆ ಅಂಟಿಕೂರುವ ಜಾಯಮಾನ ವಾಜಪೇಯಿದ್ದಲ್ಲವಾಗಿತ್ತು.

ಸಾಮರಸ್ಯದ ಮಂತ್ರ ಮತ್ತು ಉತ್ಕೃಷ್ಟ ವಿದೇಶೀ ನೀತಿಯನ್ನು ಅಳವಡಿಸಿದ ಅಟಲ್ :
ರಾಷ್ಟ್ರಗಳ ನಡುವೆ ಸಂಬಂಧ ವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಪ್ರಧಾನಿಗಳಲ್ಲಿ ಅಟಲ್ ಕೂಡ ಪ್ರಮುಖರು. ಅಟಲ್ ಅವರ ವಿದೇಶಾಂಗ ನೀತಿಯನ್ನು ಸ್ವತಃ ಇಂದಿರಾಗಾಂಧಿ ಪ್ರಶಂಸಿದ್ದರು. ಇದಲ್ಲದೆ ನರಸಿಂಹರಾವ್ ಅಟಲ್ ಅವರ ಸಲಹೆಯನ್ನು ಸದಾ ಸ್ವೀಕರಿಸುತ್ತಿದ್ದರು. ಪಾಕಿಸ್ತಾನ ತನ್ನ ಪುಂಡಾಟವನ್ನು ಮುಂದುವರೆಸಿದ್ದರೂ 1999ರಲ್ಲಿ ಪಾಕಿಸ್ತಾನಕ್ಕೆ ಬಸ್ ಯಾತ್ರೆಯನ್ನು ಆರಂಭಿಸಿ ಸ್ನೇಹದ ಹಸ್ತವನ್ನು ಅಟಲ್ ಚಾಚಿದ್ದರು. ಆದರೆ ಪಾಪಿ ರಾಷ್ಟ್ರ ಅಟಲ್’ಗೆ ದ್ರೋಹ ಬಗೆಯಿತು. ಇಸ್ರೇಲ್ ಜೊತೆಗಿನ ಒಪ್ಪಂದ, ಚೈನಾದೊಂದಿಗಿನ ಸಂಬಂಧ ವೃದ್ಧಿ ಇವು ಅಟಲ್ ಅವರ ವಿದೇಶಾಂಗ ನೀತಿಯ ಯಶಸ್ಸಿಗೆ ಕೈಗನ್ನಡಿ. ರಷ್ಯಾ ಜೊತೆಗಿನ ರಾಜತಾಂತ್ರಿಕ ಸಂಬಂಧ ಸುಧಾರಿಸಿದ್ದು ಅಟಲ್ ವಿದೇಶಾಂಗ ನೀತಿಯಿಂದ. ಇದೊಂದೇ ಅಲ್ಲದೆ ಅಟಲ್ ಅವರ “ಲುಕ್ ಈಸ್ಟ್ ಪಾಲಿಸಿ” ಭಾರತವನ್ನು ಬಲಿಷ್ಠಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.  ವಿದೇಶಾಂಗ ನೀತಿಯಲ್ಲಿದ್ದ ತಮ್ಮ ಅಗಾಧ ಪಾಂಡಿತ್ಯವನ್ನು ತಮ್ಮ ಅವಧಿಯಲ್ಲಿ ಓರೆಗೆ ಹಚ್ಚಿ ವಿಶ್ವವು ಭಾರತವನ್ನು ನೋಡುವ ಪರಿಯನ್ನು ಬದಲಾಯಿಸಿದ್ದು ಅಟಲ್.

ಸರ್ವ ಶಿಕ್ಷಣ ಅಭಿಯಾನವೆಂಬ ಅಟಲ್ ಕನಸಿನ ಯೋಜನೆ :
ಕಾಂಗ್ರೆಸ್ ಶಿಕ್ಷಣ ಹಕ್ಕು ಕಾಯ್ದೆಯನ್ನು ತಾನು ತಂದಿರುವುದು ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಮೊದಲು ಅಟಲ್ ಶುರು ಮಾಡಿದ ಈ ಯೋಜನೆಯನ್ನು ನೋಡುವುದು ಒಳಿತು ಎನ್ನಿಸುತ್ತಿದೆ. ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಖಡ್ಡಾಯ ಶಿಕ್ಷಣವನ್ನು ನೀಡಬೇಕೆಂಬ ಯೋಜನೆಯನ್ನು ಅಟಲ್ ಮತ್ತು ಮುರಳಿ ಮನೋಹರ್ ಜೋಶಿ ತಂದು ಅದೆಷ್ಟೋ ಬಡ ಕುಟುಂಬದಲ್ಲಿ ಜ್ಞಾನದ ಬೆಳಕು ಹರಿಯುವಂತೆ ಮಾಡಿದರು. ಮೂಲಭೂತ ಸೌಕರ್ಯಗಳಿಲ್ಲದೆ, ತಲೆಯಮೇಲೊಂದು ಸೂರು ಕೂಡ ಇಲ್ಲದೆ ಇದ್ದ ಅದೆಷ್ಟೋ ಶಾಲೆಗಳು ಸುಂದರವಾಗಿ ರೂಪುಗೊಳ್ಳುವಂತೆ ಮಾಡಿದ್ದು ಅಟಲ್. “ಸ್ಕೂಲ್ ಚಲೇ ಹಂ” ಎಂಬ ಆ ಹಾಡು ಅಟಲ್ ರ ಕನಸಿನ ಯೋಜನೆಯನ್ನು ಎಳೆಯುವ ತೇರಾಗಿತ್ತು.

ಟೆಲಿಕಾಂ ಕ್ಷೇತ್ರದ ಕ್ರಾಂತಿಯ ಹಿಂದಿದೆ ಅಟಲ್ ದೂರದರ್ಶಿತ್ವ:
ಕಾಂಗ್ರೆಸ್ ನಮ್ಮನ್ನು ನಂಬಿಸಿದ್ದು ರಾಜೀವ್ ಗಾಂಧಿ ಟೆಲಿಕಾಂ ಕ್ಷೇತ್ರದ ಕ್ರಾಂತಿಯ ಪಿತಾಮಹ ಎಂದು. ಆದರೆ ಸ್ನೇಹಿತರೆ, ರಾಜೀವ್ ಗಾಂಧಿ ಅಧಿಕಾರದಿಂದ ಇಳಿದ ಸಂದರ್ಭ ಮತ್ತು  ಕಾಂಗ್ರೆಸ್ ನ ಅಧಿಕಾರ ಮುಗಿದ ಸಂದರ್ಭ ಎರಡರ ನಡುವೆ ಟೆಲಿಕಾಂ ಡೆನ್ಸಿಟೀ ಎಷ್ಟು ಬೆಳೆದಿತ್ತು ಗೊತ್ತಾ? ಕೆವಲ 0.6% ನಿಂದ 2.8%. ಅಂದರೆ 1989 ಮತ್ತು 1999ರ ನಡುವಿನ ಅವಧಿಯಲ್ಲಿ ಕಾಂಗ್ರೆಸ್ ಮಾಡಿದ ಸಾಧನೆ ಎಷ್ಟು ಎಂದು ನೀವು ಯೋಚಿಸಿ. ಹತ್ತು ವರ್ಷದಲ್ಲಿ ಟೆಲಿ ಡೆನ್ಸಿಟಿ ಯನ್ನು 2.2% ಜಾಸ್ತಿ ಮಾಡಿದ್ದೆ ಅವರು ಸಾಧನೆ ಎಂದರು. ಆದರೆ ವಾಜಪೇಯಿ ಅವರ ಹೊಸ ಟೆಲಿಕಾಂ ನೀತಿಯ ಪರಿಣಾಮ ಈ ಟೆಲಿ ಡೆನ್ಸಿಟೀ ಯು 3%(1999) ನಿಂದ 70%(2012)ರಷ್ಟು ಜಾಸ್ತಿಯಾಯಿತು. ಇದಕ್ಕೆ ಮುಖ್ಯ ಕಾರಣ ವಾಜಪೇಯಿಯವರ ಟೆಲಿಕಾಂ ನೀತಿ ಎಂದು ಕೊಲಂಬಿಯಾ ವಿಶ್ವವಿಧ್ಯಾನಿಲಯದ ಪ್ರೊಫೆಸರ್ ಅರವಿಂದ್ ಪನಗಾರಿಯ ಹೇಳುತ್ತಾರೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ಸುವರ್ಣ ಚತುಷ್ಪತ ಯೋಜನೆ ಎಂಬ ಅಧ್ಭುತ ಪರಿಕಲ್ಪನೆ:
ಐವತ್ತು ವರ್ಷದಲ್ಲಿ ಕಾಂಗ್ರೆಸ್ ಮಾಡಿದ್ದು ಹಳ್ಳಿಯ ಜನರನ್ನು ಮತ್ತೆ ಮತ್ತೆ ಜೀವನಾವಶ್ಯಕತೆಗಳಿಂದ ದೂರ ಇರುವಂತೆ ಮಾಡಿದ್ದು ಎಂದರೆ ಯಾವುದೇ ಅತಿಶಯೋಕ್ತಿಯಿಲ್ಲ. ಅಟಲ್ ಹಳ್ಳಿಗಳನ್ನು ಈ ಯೋಜನೆಯ ಮೂಲಕ ಜೋಡಿಸುವ ಕೆಲಸ ಮಾಡಿದರು. ಹಳ್ಳಿ ಹಳ್ಳಿಗಳಲ್ಲಿ ಡಾಂಬರ್ ರಸ್ತೆಯಾಯಿತು. ಅತೀ ಹಿಂದುಳಿದ ಹಳ್ಳಿಗಳಲ್ಲೂ ರಸ್ತೆಗಳನ್ನು ಮಾಡಲಾಯಿತು. ರಸ್ತೆ ನೀಡಿದ ಪ್ರಧಾನಿಯನ್ನು ಇಂದಿಗೂ ಅದೆಷ್ಟೋ ಜನ ಸದಾ ನೆನಪಿಸಿಕೊಳ್ಳುತ್ತಾರೆ. ಇನ್ನು ಭಾರತದ ಬಹುಮುಖ್ಯ ಕೈಗಾರಿಕಾ, ಸಾಂಸ್ಕೃತಿಕ ಹಾಗೂ ಕೃಷಿ ಪ್ರದೇಶವನ್ನು ಸೇರಿಸುವ ದೊಡ್ಡ ಹೈವೇ ಜಾಲವನ್ನು ನಿರ್ಮಿಸುವ ಸಲುವಾಗಿ ಅಟಲ್ ಮತ್ತು ರಾಜನಾಥ ಸಿಂಗ್ ಆರಂಭಿಸಿದ ಸುವರ್ಣ ಚತುಷ್ಪತ ರಸ್ತೆಗಳು ಅಟಲ್‘ರ ಅಗಾಧ ದೂರದರ್ಶಿತ್ವಕ್ಕೆ ಪಕ್ಕಾ ಉದಾಹರಣೆ.ಭಾರತದ ನಾಲ್ಕು ಮೆಟ್ರೋ ನಗರಗಳನ್ನು ಸೇರಿಸುವ ಈ ಯೋಜನೆಯನ್ನು ಯಶಸ್ವೀ ಅನುಷ್ಠಾನಗೊಳಿಸಿದ ಕೀರ್ತಿ ಅಟಲ್ ಅವರದ್ದು.

ಆಪರೇಶನ್ ವಿಜಯ್ ಅನ್ನು ಯಾರಾದರೂ ಮರೆಯುವುದುಂಟೆ. ಸ್ನೇಹಕ್ಕೆ ಸ್ನೇಹವನ್ನು ಬಯಸಿದ್ದ ಅಟಲ್ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ಮೇಲೆ 1999ರಲ್ಲಿ ಯುದ್ಧ ಸಾರಿ ಪಾಪಿರಾಷ್ಟ್ರದ ಮಗ್ಗಲು ಮುರಿದಿದ್ದು ನಮ್ಮ ಅಟಲ್ ನಾಯಕತ್ವದಲ್ಲಿ. ಇವಿಷ್ಟೇ ಅಲ್ಲದೆ ಪ್ರಿವೆನ್ಶನ್ ಆಫ್ ಟೆರರಿಸಮ್ ಆಕ್ಟಿವಿಟೀಸ್ ಆಕ್ಟ್(POTA) ಅನ್ನು ಜಾರಿಗೊಳಿಸಿದ್ದು ಕೂಡ ಅಟಲ್ ಸರಕಾರದ ಬಹುಮುಖ್ಯ ಸಾಧನೆ. ಅಟಲ್ ಅವರ ಕಾಲದಲ್ಲಿಯೇ ಇಸ್ರೋ ಕೂಡ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ನೆರವೇರಿಸಿದ್ದು. ಅಟಲ್ ಸಾಧನೆಯ ಪಟ್ಟಿ ಹೀಗೆ ಬೆಳೆಯುತ್ತಲೇ ಸಾಗುತ್ತದೆ ಆದರೆ ಅಟಲ್ ಎಂದರೆ ಥಟ್ಟನೆ ಕಣ್ಮುಂದೆ ಬರುವ ಒಂದಿಷ್ಟನ್ನು ನೆನಪಿಸುವ ಪ್ರಯತ್ನ ಮಾಡಿದ್ದೇನೆ ಅಷ್ಟೇ. ಈ ಯೋಜನೆಗಳನ್ನೆಲ್ಲ ನೋಡಿದರೆ ಒಂದಂತೂ ಸತ್ಯ ಎನ್ನಿಸುತ್ತದೆ ಅದು “ವಿಶ್ವಗುರು” ಭಾರತದ ನಿರ್ಮಾಣಕ್ಕೆ ಅಟಲ್ ಅಂದೇ ಮುನ್ನುಡಿಯನ್ನು ಬರೆದಿದ್ದರು ಎಂಬುದು. ಒಟ್ಟಿನಲ್ಲಿ ಅಟಲ್ ಎಂದರೆ ರಾಷ್ಟ್ರ ರಾಜಕಾರಣದ ಭೀಷ್ಮ ಪಿತಾಮಹ.ಅಟಲ್ ಎಂಬ ಜನನಾಯಕ ನಮಗೆ ಎಲ್ಲಕ್ಕಿಂತ ಮುಖ್ಯವಾಗಿ “ನರೇಂದ್ರ ಮೋದಿ” ಎಂಬ ಅವರ ಪ್ರೀತಿಯ ಶಿಷ್ಯನನ್ನು ನೀಡಿದ್ದಾರೆ. ಅಂದು ಅಟಲ್ ನರೇಂದ್ರನ ನಾಯಕತ್ವವ ಗುರುತಿಸಿ ಗುಜರಾತ್ ಮುಖ್ಯಮಂತ್ರಿಯಾಗು ಎಂದು ಕಳುಹಿಸದೆ ಹೋಗಿದ್ದರೆ ಇಂದು “ಪ್ರಧಾನ ಸೇವಕ” ಸಿಗುತ್ತಲೇ ಇರಲಿಲ್ಲ.

ಅಟಲ್ ಜೀ, ಅನಾರೋಗ್ಯದ ಕಾರಣ ನಿಮಗಿಂದು ಜನರ ಆಶಯ ಗುರುತಿಸಲಾಗದೆ ಇರಬಹುದು ಆದರೆ ನಿಮ್ಮ ಸೇವೆ ಇಲ್ಲಿ ಸದಾ ಪ್ರಸ್ತುತ. ಒಬ್ಬ ಅಟಲ್‘ಗೆ ಇಲ್ಯಾರೂ ಸಮವಿಲ್ಲ. ರಾಜಕೀಯವೆಂದರೆ ನಮಗೆಲ್ಲ ಇಂದಿರಾ ಗಾಂಧಿಯೋ,ನೆಹರುವೋ ನೆನಪಾಗೋದೇ ಇಲ್ಲ ಆಗೆಲ್ಲ ನಮ್ಮನ್ನಾವರಿಸುವುದು ನೀವು ಮಾತ್ರ.. “ಗೀತ್ ನಯಾ ಗಾತಾ ಹೂ” ಎಂಬ ನಿಮ್ಮ ಕವನದ ಸಾಲುಗಳ ಜಾಡು ಹಿಡಿದು ನಾವು ಹೊರಡುವುದು ರಾಷ್ಟ್ರನಿರ್ಮಾಣಕ್ಕೆ ಮತ್ತು ನಿಮ್ಮ ಕನಸನ್ನು ಸಾಕಾರಗೊಳಿಸುವುದಕ್ಕೆ. ರಾಜಕೀಯದ ಮೇರು ಪರ್ವತ ಸಾಗಿದ ಆ ಹಾದಿಯನ್ನು ಅನುಸರಿಸಿ ಸಾಗುವುದೇ ನಮ್ಮೆಲ್ಲರ ಪುಣ್ಯ ಎಂದುಕೊಂಡಿದ್ದೇವೆ.

ಅಟಲ್ ತಾತ ನಿಮಗೆ ಜನ್ಮದಿನದ ಶುಭಾಶಯಗಳು.

ಚಿತ್ರಕೃಪೆ: ವಸಂತ್ ಬಂಟಕಲ್

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!