ಅಂಕಣ

ಮಿಡಿಯಬಲ್ಲದೇ ಮತ್ತೆ, ಒಡೆದ ಹೃದಯ?

ಅಂಬರದಲ್ಲಿ ಮಿನುಗುವ ತಾರೆಗಳನ್ನು ಕಂಡು ಒಡಲಾಳದಲ್ಲಿ ಕುಳಿತು ಬಿಕ್ಕಳಿಸುತ್ತಿರುವ ದನಿಯಿಲ್ಲದ, ಅಮೂರ್ತವಾದ, ಸಮಸ್ತ ಭಾವವೂ ಕೊಲ್ಲಲ್ಪಟ್ಟು ನಿರ್ಭಾವುಕವಾದ ನೋವನ್ನು ಮರೆವ ಜೀವಗಳು, ಆ ಬಾನ ತಾರೆಗಳಂತೆಯೇ ಅಸಂಖ್ಯಾತ. ನೋವಿನಿಂದ ಕಂಗೆಟ್ಟ ಮನಸ್ಸಿಗೆ ಕೊಂಚ ತಂಪನ್ನು ಲೇಪಿಸುವುದೂ ತಾರೆಗಳೇ. ಅನಂತದಲ್ಲಿ ಅವಿರತವಾಗಿ ಮಿನುಗುವ ಆ ಪುಟ್ಟ ನಕ್ಷತ್ರಗಳಿಗೂ ಘಾಸಿಗೊಂಡ ನಿರ್ಮಲ ಚಿತ್ತಕ್ಕೂ ಅದ್ಯಾವ ಪರಿ ಹೋಲಿಕೆ! ಮೇಲೆ ತಂಪಾದ ಜೊನ್ನ ಸೂಸುವುದಕ್ಕೆ ಆಂತರ್ಯದಲ್ಲಿ ಸ್ಫೋಟಕವಾಗಿ ತನ್ನ ಒಡಲನ್ನು ದಹಿಸುತ್ತಿರುವ ಅಗ್ನಿಯೇ ಮೂಲಧಾತು. ಕತ್ತಲ ತನುವಿನ ಸುತ್ತ ಬಳಸಿರುವ ಮತ್ತದೇ ಕತ್ತಲಂಬುಧಿಯೊಳಗೆ ಕೈ ಸಾಗುವವರೆಗೂ ಚಾಚಿದರೂ ತನ್ನ ಮೂಕಗಾನವನ್ನಾಲಿಸುವ ಸಖಿ ಮಾತ್ರ ಅನುಕ್ಷಣ ನಿಟ್ಟುಸಿರಲ್ಲಿಯೇ ಕರಗಿ ಹರಿದು ಮಾಯವಾಗೋ ಕನಸೇ. ಅಂದು, ಇಂದು, ಎಂದಿಗೂ ಸಖ್ಯವೆಂಬುದು ಮಾತ್ರ ಅವಳಿಗೆ ದುಸ್ಥರ. ಹರಿದು ಹೋದ ಹೃದಯಗಳಿಗೆ ಎಲ್ಲೋ ಕೊಂಚ ತಂಪು ನೀಡುತ್ತಿರುವ ಸಂತೃಪ್ತಿ ಮಾತ್ರವೇ ಅವಳ ಒಡಲಾಳದ ಬೆಂಕಿಯನ್ನು ಇನ್ನೂ ಜೀವಂತವಾಗಿಟ್ಟಿರುವುದು. ದೂರ ತೀರದ ನದಿಯ ತಟಸ್ಥ ಪದರದಲ್ಲೆಲ್ಲೋ ತನ್ನ ಮಿನುಗನ್ನು ಕಂಡು, ತನ್ನ ಮೈ ಮನವಿಡೀ ಆವರಿಸಿಕೊಂಡ ಜ್ವಾಲೆಯನ್ನು ಅನುಭವಿಸಿ, ಬಳಲಿದ ಸ್ಮಿತವೊಂದ ಸೂಸಿ ತನ್ನ ವೈರುಧ್ಯಪೂರ್ಣ ಬದುಕನ್ನು ನೆನೆದು ಮೂಕವಾಗಿ ಧೇನಿಸುತ್ತಾಳೆ.  ಮೂಕಗಾನವನ್ನು ತನ್ನ ಬೆಂಕಿಯೊಳಗೆ ಅವಿತಿಟ್ಟುಕೊಂಡು ಕೊಂಚ ಕೊಂಚವೇ ನಲುಗುತ್ತಾಳೆ. ಏಕತಾನತೆಯಲ್ಲಿ ಕಳೆದು ಹೋಗುತ್ತಾಳೆ. ಅಲ್ಲೆಲ್ಲೋ ಅನಂತ ದೂರದಲ್ಲಿ ಕತ್ತಲ ಬಟ್ಟೆಯನ್ನು ಸೀಳಿಕೊಂಡು ಬೆಳಕು ಹೊರ ಚೆಲ್ಲಿ, ತಾನು ಮಾತ್ರ ಆಂತರ್ಯದ ಕಪ್ಪಿನಲ್ಲಿ ಕರಗಿ, ಮತ್ತೊಬ್ಬ ತಾರೆ ನಿಟ್ಟುಸಿರಿಕ್ಕುತ್ತಾಳೆ. ಅದೇ ವೈರುಧ್ಯ, ಅದೇ ಏಕತಾನತೆ. ಒಂದು ಅನಂತದೊಳಗೆ ಅದೃಶ್ಯವಾಗಿ, ಮತ್ತೊಂದು ಅನಂತದ ಅಂಚಿನಲ್ಲಿ ಅಸ್ತಿತ್ವ ಕಂಡುಕೊಳ್ಳುವ ಕೋಟಿ ಕೋಟಿ ತಾರೆಗಳು. ಒಂದೇ ಬಯಲಲ್ಲಿ ಒಂಟಿ ಕಾಲ ತಪಸ್ವಿನಿಯರಾದರೂ, ತನ್ನಂತೆಯೇ ಇರುವ ಮತ್ತೊಂದು ವೈರುಧ್ಯದ ತೃಣ ಅಸ್ತಿತ್ವವನ್ನೂ ಅರಿಯಲಾರದ ಅತೀತ ಅಸಹಾಯಕ ತೈಜಸಿಯರು!

ಇಲ್ಲೊಬ್ಬಳು ಕುಳಿತು ಬಿಕ್ಕುತ್ತಾಳೆ, ಅದಾಗಲೇ ಪಾವಿತ್ರ್ಯರಸಗಂಗೆಯಾದ ಹೃದಯಭಿತ್ತಿಯನ್ನು ಮತ್ತೆ ಮತ್ತೆ ತೊಳೆಯುತ್ತಾಳೆ- ಅವಳ ಕಣ್ಣೀರ ಜಲದಲ್ಲಿ. ಅವನುಳಿಸಿದ ಹಸಿ ಗುರುತುಗಳು ಮಾತ್ರ ಕೊಂಚವೂ ಮಾಸದೇ ಗಟ್ಟಿಯಾಗಿ ಕುಳಿತಿವೆ, ಕುಳಿತು ರಾರಾಜಿಸುತ್ತಿವೆ; ಅವಳ ಅವಳನ್ನೇ ಇಡಿ ಇಡಿಯಾಗಿ ಆಳುತ್ತಿವೆ. ಅಂದೆಂದೋ ನೂರು ಮಂದಿಯ ನಡುವಲ್ಲಿಯೂ ತನ್ನನ್ನೇ ಕಂಡು ಹಿಂಬಾಲಿಸಿದ ಅವನ ನೋಟ, ಇಂದೂ ಅವಳ ಕಣ್ಣಲ್ಲಿ ಪ್ರತಿಫಲಿಸುತ್ತದೆ. ತರಂಗರಹಿತ ನೀರಿನ ನಿಶ್ಚಲ ಪರದೆಯಂತೆ ಯಾವ ಆತಂಕಗಳ ಹರಿವಿರದೇ, ಅಮೂರ್ತ, ಅನಿಶ್ಚಿತ ಸಮಯದ ಹಿನ್ನೆಲೆಯಲ್ಲಿ ಅಂದು ತೇಲಿ ಬಂದ ಅವನ ನಿಟ್ಟುಸಿರೇ ಸಾಕಿತ್ತು, ತನ್ನೊಳಗೆ ಬೆರೆತು ಬೂದಿಯಾಗಿದ್ದ ಅವಳನ್ನು ಪುನರ್ಜ್ವಲಿಸಲು, ಕತ್ತಲೆಯ ಅರಿವಿಲ್ಲದೇ ಕತ್ತಲಲ್ಲಿ ಕತ್ತಲೇ ಆಗಿ ಹೋಗಿದ್ದ ಮನಕ್ಕೆ ಪುಟ್ಟ ಕಿರಣವೊಂದನ್ನು ಪರಿಚಯಿಸಲು. ಇನ್ನೂ ಕಣ್ಣ ಬೆಳಕಲ್ಲಿಯೇ ಬೆಂಕಿಯುಗುಳುತ್ತದೆ, ಗುಡ್ಡೆಯಾದ ಬಂಡೆ ಕಲ್ಲುಗಳ ನಡುವಿನ ತೃಣ ತಾಣದಲ್ಲಿ ಹಾದಿ ಕಂಡುಕೊಂಡು ಹರಿಯುವ ತೊರೆಯಂತೆ; ಅಂದು ನೂರು ಪರಿಧಿಗಳನ್ನೂ ದಾಟಿಕೊಂಡು ತನ್ನನ್ನು ತಟ್ಟಿದ ಅವನ ನೋಟದ ಜ್ವಾಲೆ. ಎತ್ತ ಹೊರಳಿದರೂ ಮರಳಿ ಮರಳಿ ತನ್ನತ್ತಲೇ ತಿರುಗುತ್ತಿದ್ದ ಅವನ ನೋಟ, ಎಂದಿನಂತೆಯೇ ತನ್ನಲ್ಲಿ ಅಸಹನೆ ಹುಟ್ಟಿಸುವುದೆಂದೇ ಭಾವಿಸಿದ್ದಳು. ಆದರೆ ಅವಳ ಕಣ್ಣುಗಳಿಂದ ಅವನ ನೋಟ ವಿಚಲಿತವಾದ ಕ್ಷಣ ಕ್ಷಣವೂ ಮನಸ್ಸಲ್ಲಿ ಮೂಡಿದ ಕಂಪನಗಳು ಮಾತ್ರ ಬೇರೇನೋ ಸೂಚಿಸುತ್ತಿದ್ದವು. ಏಕೆಂದರೆ ಅಂದು ಅವನ ಕಣ್ಣಲ್ಲಿ ಕಂಡದ್ದು ಆಸೆಗಳ ಅರಮನೆಯರಸುತ್ತಾ ಹಾದಿ- ಬೀದಿಯಲೆಯುತ್ತಿರುವ ಅಪೇತ ಯಾತ್ರಿಕನಲ್ಲ; ಬದಲಾಗಿ ಸಿಂಹಾಸನದ ಮೇಲೆ ಆಸೀನನಾಗಿಯೂ ತನ್ನೊಳಗೆ ಕಾಣೆಯಾದ ತನ್ನನ್ನೇ ಹುಡುಕುತ್ತಿರುವವ! ಆ ಚಂದ್ರನೇ ಎರಡು ಕಣ್ಣಾಗಿ ಕುಳಿತಿಹನೇನೋ ಎಂಬಂತೆ ಬೆಳದಿಂಗಳ ಹೊಳೆಯನ್ನೇ ಹರಿಸುತ್ತಿದ್ದ ಆ ಕಣ್ಣುಗಳ ಪರದೆಯಾಚೆಗೆ, ಇನ್ನ್ಯಾವುದೋ ಕತ್ತಲೊಡನೆ ಕಾದಾಡುತ್ತಿರುವ ಅವನೊಳಗಿನ ಕತ್ತಲು ಮಾತ್ರ ನಿಚ್ಚಳವಾಗಿ ಗೋಚರವಾಯಿತು. ಅ ಕತ್ತಲು- ಬೆಳಕಿನ ರಣರಂಗದಲ್ಲಿ ಅವಳು ಏಕೈಕ ಪ್ರೇಕ್ಷಕಿಯಾದಳು. ಸ್ಪಷ್ಟವಾಗಿ ಗೋಚರಿಸುತ್ತಿರುವುದರೊಳಗಿನ ಆ ಅಗೋಚರತೆಯೇ ಅವಳನ್ನು ಸೆಳೆದು, ಸೆಳೆದು ಬಂಧಿಸಿದ್ದು. ಕಣ್ಣುಗಳ ನಡುವೆ ಅಂದು ನಡೆದ ನೋಟಗಳ ಸಂಘರ್ಷ, ನೂರು ಜನ್ಮಗಳಿಂದ ಕಾದು ಕುಳಿತ ಏಕತಾನತೆಯನ್ನು ನಿವಾರಿಸಿದಂಥ ಭಾವ! ತಾನು ನೂರು ಜನ್ಮಗಳಿಂದ ನೂರು ಬದುಕು ಕಾದು ಕುಳಿತ ತನ್ನ ಅರ್ಧಾತ್ಮ ತನ್ನಿದಿರು ಸಾಕ್ಷಾತ್ಕಾರಗೊಂಡಂತಹ ಕೃತಕೃತ್ಯತೆ, ಮೈ- ಮನವನ್ನು ಪುಳಕಿತಗೊಳಿಸಿತ್ತು.  ಅವನು ಕೆರೆ ಕಟ್ಟುತ್ತಾ ಹೋದ, ಅವಳು ನಿಧಾನವಾಗಿ ತನು- ಮನದ ಚೈತನ್ಯವನ್ನೆಲ್ಲಾ ಅವನಿತ್ತ ಸೀಮೆಯೊಳಗೆ ಹರಿಸತೊಡಗಿದಳು. ಅರಿವಿಲ್ಲದೇ ಆಕಾಂಕ್ಷೆಗಳ ಮಾಯೆಯಲ್ಲಿ ಸಿಲುಕಿ ಅವಳು ಕಳೆದು ಹೋಗಿರಲಿಲ್ಲ. ಬದಲಾಗಿ ಕಳೆದು ಹೋಗಿದ್ದ ಅವನನ್ನು ಅವನಿಗೆ ಮರಳಿ ದೊರಕಿಸಿಕೊಡಲು ತನ್ನನ್ನು ತನ್ನಿಂದ ತಾನೇ ಬೇರ್ಪಡಿಸಿಕೊಂಡಳು. ಸರ್ವ ಸ್ವಾರ್ಥದ ಕಿಡಿಗಳೂ ಅವನೆಡೆಗೆ ತಾ ಹರಿಸತೊಡಗಿದ್ದ ನಿರ್ಝರಿಣಿಯ ಒಡಲಲ್ಲಿ ಸಿಲುಕಿ ಸುಗಂಧಪೂರಿತ ಸುಮಗಳಾದವು, ಅವನ ಆರಾಧನೆಗೆ ಮುಡಿಪಾದವು.

ಇಂದು ಅವನು ತನ್ನ ಕೈಗೆ ಸಿಗದಷ್ಟು, ಕಣ್ಣಿಗೂ ಕಾಣದಷ್ಟು ದೂರ  ಹೊರಟು ಹೋದರೂ ಸಮಸ್ತ ಸೃಷ್ಟಿಯಲ್ಲಿ ಅವಳ ನೋಟಕ್ಕೆ ನೋಟವಾಗುವುದು ಅವನು ಮಾತ್ರವೇ. ಅಖಿಲ ಜಗವನ್ನು ಮರೆತು ಹಿಂದೆ ಬಿಟ್ಟು ತನ್ನೊಳಗೆ ಇಣುಕಲೆತ್ನಿಸಿದನಲ್ಲಾ! ಕೃತಜ್ಞತಾ ಭಾವವೊಂದು ಆವರಿಸಿಕೊಳ್ಳುತ್ತದೆ. ಪ್ರಜ್ಞಾಲೋಕದ ಪ್ರತಿ ದನಿಯೂ ತೊರೆದು ಹೋದನೆಂದು ಕೂಗಿ ಕೂಗಿ ಜರಿದರೂ ಹೃದಯ ನಿರ್ಲಕ್ಷ್ಯದಿಂದ ನಿಡುಸುಯ್ಯುತ್ತದೆ. ಕಣ್ದೆರೆದಿರುವಾಗಲೂ ಮರುಭೂಮಿಯಲ್ಲಿ ಒಂಟಿಯಾಗಿ ನಿಂತ ಅವನ ಬೆರಳುಗಳು ಕೈ ಚಾಚಿ ತನ್ನ ಆಹ್ವಾನಿಸುತ್ತಿರುವಂತೆ; ಅವನ ಕಣ್ಣಂಚಿನಿಂದ ಉದುರಿದ ಪುಟ್ಟ ಹನಿಯೊಂದು ಬಿಸಿ ಉಸುಕಿನ ಮೇಲೆ ಹೊರಳಿ ಬಿಸುಸುಯ್ದು ಆವಿಯಾಗಿ ಹೋದಂತೆ; ರಣ ಬಿರುಗಾಳಿಯೊಂದು ಬೀಸಿ, ಮರಳಿನ ಕೊನೆಯ ಪದರವೂ ಮಾಯವಾದಾಗ, ತಾನೊಬ್ಬಳೇ ಅಲ್ಲಿ ಕುಳಿತು ಅವನ ಪಾದದಡಿಯಿಂದ ಬಿದ್ದಿರಬಹುದಾದ ಮರಳ ಕಣಗಳನ್ನು ಎಣಿಸುತ್ತಾ ಕುಳಿತಂತೆ; ಕಣ್ಮುಚ್ಚಿದಾಗ ಮೆಟ್ಟಿಲ ಮೇಲೆ ನೂರು ಜನರ ಗುಂಪಲ್ಲಿ ಕುಳಿತ ಅವನು ತನ್ನನ್ನೇ ಬಯಸಿ ಶೂನ್ಯವಾದಂತೆ! ಕನಸುಗಳೋ ಕಲ್ಪನೆಗಳೋ. ತಿಳಿವ ಅಗತ್ಯವೇನಿಲ್ಲ. ಚಡಪಡಿಕೆಯಂತೂ ಖಚಿತವಷ್ಟೇ. ಅಷ್ಟಕ್ಕೂ ಬಯಸುತ್ತಿರುವುದು ಅವನೋ ತಾನೋ? ಇದು ನಿಜಕ್ಕೂ ಅನುರಾಗವಾ, ಆರಾಧನೆಯಾ ಅಥವಾ ಮಾಯಾತೀತವಾದ ಭಾವತೀವ್ರತೆಯಾ ಇಲ್ಲಾ ಭಾವಶೂನ್ಯತೆಯಾ? ಉತ್ತರವಿಲ್ಲದ ಪ್ರಶ್ನೆಗಳು. ಉತ್ತರ ನೀಡಬೇಕಾದವ ಅವಳ ಬಳಿ ತನ್ನದೆಂದು ಉಳಿಸಿದ್ದು ಎಂದೂ ಉತ್ತರ ಪಡೆಯಲಾರದ ಪ್ರಶ್ನೆಗಳಷ್ಟೇ. ಯಾವ ತಪ್ಪಿಗಾಗಿ ಈ ಶಿಕ್ಷೆ? ದನಿಯಾಗಲಾರದ ಉಸಿರು ಬೆಂಬತ್ತಿ ಕೊರಳ ಹಿಸುಕುವಾಗ, ಕಪಾಲಕ್ಕೂ ಬೇಡವಾದ ಕಣ್ಣೀರು ಉಕ್ಕಿ ಉಕ್ಕಿ ವಿದಾಯವನ್ನೂ ಹೇಳದೇ ಮಾಯವಾದಾಗ, ನಡೆದ ಪ್ರತಿ ದಾರಿಯೂ ಅವನ ಹೆಜ್ಜೆ ಗುರುತುಗಳನ್ನೇ ನಿಚ್ಚಳವಾಗಿ ಬಿಂಬಿಸಿದಾಗ, ಅಲ್ಲಿಲ್ಲದ ಅವನು ಮಾತ್ರ ಅಲ್ಲಿ ನಿಂತು ಅವಳ ದಿಟ್ಟಿಸುತ್ತಾನೆ. ಆವೃತ ಅಗ್ನಿಯೊಡಲಲೂ ಅವಳು ನಕ್ಕು ಆಗ ತಂಪಾಗುತ್ತಾಳೆ.

ಉಸಿರಿಲ್ಲದಿದ್ದರೂ ಸರಿ, ಆದರ್ಶ ತೊರೆದು ಕ್ಷಣ ಜೀವಿಸಲಾರೆ ಎಂದ ಅದೇ ಅವಳು ಅವನ ಮತ್ತ ಮನದಲ್ಲಿ ಅವಿತು ಪ್ರೇಮತೀರ್ಥ ಪ್ರೋಕ್ಷಿಸಿಕೊಳ್ಳುತ್ತಾಳೆ. ವೃತ್ತ ವೃತ್ತವಾಗಿ ಅವನುಗುಳಿದ ಧೂಮದಿಂದ ಧೂಪ ಹಚ್ಚುತ್ತಾಳೆ.  ಮೋಹದಲ್ಲೂ ಪೂಜೆ ಕಂಡು ತನ್ನಾತ್ಮ ದೀಪದ ಆರತಿ ಬೆಳಗುತ್ತಾಳೆ. ಕೆಸರಲ್ಲಿ ಕುಳಿತ ಕಮಲವನ್ನೇ ದುಂಬಿ ಬಯಸಿ ಬಯಸಿ ತವಕಿಸುವಂತೆ. ಅವನ ಅಪರಿಪೂರ್ಣತೆಯಲ್ಲಿ ಅಪೇತಗೊಂಡು ತಾನು ಪರಿಪೂರ್ಣೆಯಾಗುತ್ತಾಳೆ. ತನುವ ಬಳಿಯೂ ಸುಳಿಯದೇ, ಮನದಾಕಾಂಕ್ಷೆಗಳ ಕಲಕದೇ ಅವನು ನೇರವಾಗಿ ಅವಳ ಆತ್ಮವನ್ನೇ ಆವರಿಸಿಕೊಳ್ಳುತ್ತಾನೆ. ಹ್ಞಾ… ಆದರೆ ಪದಗಳು ಮಾತ್ರ ಬರಿ ಶೂನ್ಯ. ಮಧುರ ಮಾತುಗಳಿಗೆ ಅವರ ಕ್ಷಣಗಳು ಎಂದೂ ಸಾಕ್ಷಿಯಾಗಲಿಲ್ಲ. ಆಡಿದ ನಾಲ್ಕು ಮಾತುಗಳೋ, ಮನದಾಳದಿಂದ ತಡೆಯೊಡೆದು ಪ್ರವಹಿಸುತ್ತಿದ್ದ ಒಲವ ದಟ್ಟ ಹೊನಲನ್ನು ಮರೆಮಾಚಲಷ್ಟೇ. ಪ್ರೇಮ ಬಹು ನಿಗೂಢ. ಎದೆಯನ್ನು ಬೆಚ್ಚಗಾಗಿಸಿ, ಇದಿರಿರುವ ಕಾಲವನ್ನು ಕೊರೆದು ಹೆಪ್ಪುಗಟ್ಟಿಸುವ, ವೈರುಧ್ಯಗಳ ಸಾಕ್ಷಾತ್ಕಾರ.  ಪ್ರೇಮ  ಕಣ್ಣಿದಿರಿದ್ದಿದ್ದು ಎಷ್ಟು ಸತ್ಯವೋ ಅದನ್ನು ತಮ್ಮನ್ನಾವರಿಸಿಕೊಳ್ಳಲು ಬಿಡದೇ ಚಡಪಡಿಸುತ್ತಿರುವ ರಣಯತ್ನವೂ ಅಷ್ಟೇ ನಿಚ್ಚಳ. ಅನುರಾಗದಲ್ಲರಳುವ ಸಂತೃಪ್ತಿಗಿಂತ ಅದರ ಮಾಯೆಗೆ ತಾನು ಬಲಿಯಾಗಿಲ್ಲವೆಂಬ ಅಹಮ್ಮಿನ ತೋರ್ಪಡಿಕೆಯ ಬಲ್ಮೆ ಅತೀತವಾಗುವುದರದೆಂಥ ವಿಪರ್ಯಾಸ. ಆದರೆ ಅದು ವಿಶ್ಲೇಷಣೆಗೆ ನಿಲುಕದ್ದು; ಕಠೋರ ನಿರಾಕರಣೆ- ಅನಂತ ಹಂಬಲಗಳ ಘೋರ ಸಂಘರ್ಷಣೆಯಲ್ಲೇ ಮೂರ್ತಿವೆತ್ತ  ಭಾವವ್ಯೂಹ; ಕಡೆಗೆ ಪ್ರತಿಷ್ಠೆಯಲ್ಲೂ ಕ್ಷೀಣಿಸದೇ ಅವಿರತವಾಗಿ ಹಾತೊರೆವ ದೀನಾನುರಾಗ. ಕಣ್ಣ ಕೊನೆ ಹನಿ ಜಾರಿದ ಬಳಿಕ ನಿಡುಸುಯ್ದು ಮೌನವಾಗಿ  ದಿಟ್ಟಿಸುತ್ತಾಳೆ, ಅಂಬರವನ್ನು- ತಾರ‍ಂಬುಧಿಯನ್ನು. ಸೋತ ನಗೆ ನಕ್ಕು ಖಾಲಿಯಾಗುತ್ತಾಳೆ. ಆ ತಾರೆಯದ್ದೋ ಕೋಟಿ ವರುಷಗಳ ಶೂನ್ಯತನ. ಈ ನೀರೆಯದ್ದೋ ಕೊನೆಯಾಗದ ಹೃದಯಾಕ್ರಂದನ!

ಅಂದು ಕೊರೆದು ಕಲ್ಲಾದ ಬೆರಳುಗಳನ್ನು ಮಡಚಿ ಬಿಟ್ಟ ನಿಟ್ಟುಸಿರ ಕೇಳಿಯೇ ತನ್ನ ಕೈ ಹಿಡಿದು ಬೆಚ್ಚನೆ ಭಾವ ಬಿತ್ತಿದನೇ? ಅದು ಕೈ ಹಿಡಿದು ಆಸರೆಯಾಗುವ ಅಭಿಲಾಷೆಯೋ ಅಥವಾ ಆಗಾಗಲೇ ಬಿರಿದವಳ ಸಾಸಿರ ಚೂರು ಮಾಡುವ ಸೂಕ್ಷ್ಮಾಂತರ್ಗತ ಸಂಚೋ? ಹಿಮದಲ್ಲಿ ಹೆಪ್ಪುಗಟ್ಟಿ ಶಿಲೆಯಾಗಿ ಕುಳಿತವಳನ್ನು ಅವನ ಅದೇ ಬೆಚ್ಚನೆ ಸ್ಪರ್ಶ ಕರಗಿ ನೀರಾಗಿಸಿದ್ದರ ಕೊಂಚ ಕಲ್ಪನೆಯಾದರೂ ಅವನಿಗುಂಟೋ? ತನಗೆ ತಾನೇ ಸಾವಿರ ಬಾರಿ ಕೇಳಿಕೊಂಡ ಅದೇ ಪ್ರಶ್ನೆ, ಮನದ ಯಾವುದೋ ಮೂಲೆಯಿಂದ ಆಗಾಗ ಇಣುಕಿ ನಿರಾಕಾರಿ ಕಾಲದಲ್ಲಿ ರಣಅಲೆಗಳನ್ನು ಮೂಡಿಸುತ್ತದೆ. ಭೋರ್ಗರೆವ ಅಲೆಗಳ ಆಳದಲ್ಲಿ ಕುಳಿತ ಅವಳೋ, ರಭಸ ತಿಕ್ಕಾಟದಲ್ಲಿ ತೊಡಗಿದ ಜಲಾಗ್ನಿಯಲ್ಲಿ ಬೆಂದು ಕುದ್ದು ಹೋಗುತ್ತಾಳೆ. ಬತ್ತಿ ಹೋದ ಹಾಗೂ ಮತ್ತೆ ಮತ್ತೆ ಚಿಮ್ಮುವ ಪ್ರೀತಿ, ಅವಳ ಚೂರಾದ ಹೃದಯವನ್ನು ಕರಗಿಸುತ್ತಿದೆಯೋ, ಕೂಡಿಸುತ್ತಿದೆಯೋ! ಮೂಲೆಯಲ್ಲಿ ಕೂತು ಮೂಕವಾಗಿ ಧೇನಿಸುತ್ತಾಳೆ. ಒಲವಿಗಾಗಿಯೇ ಅವಳು ಜನ್ಮವೆತ್ತಿರುವಾಗ, ಪಾವಿತ್ರ್ಯವೇ ಅವಳಾಗಿ ಮೂರ್ತಿವೆತ್ತಿರುವಾಗ ಮನವನ್ನೊಡ್ಡಿ ಕರಗಿ ಹೋಗುವುದಷ್ಟೇ ಅವಳಿದಿರಿಟ್ಟ ಏಕೈಕ ಆಯ್ಕೆ. ನೋವಿಲ್ಲದೇ ಒಲವೆಲ್ಲಿದೆ? ಅಳಿಸಲೆತ್ನಿಸಿದಷ್ಟೂ ಇನ್ನೂ ನಿಚ್ಚಳವಾಗಿ ಗೋಚರಿಸುವ ಅವನ ನೋಟದ ನೆನಪು ಅವಳನ್ನು ಕೊಲ್ಲುವುದೋ ಅಥವಾ ಮರಳಿ ಬದುಕಿನತ್ತ ನಡೆಸುವುದೋ? ಬಗೆಹರಿಯದ ಮಂಥನ. ವಿದಾಯವನ್ನೂ ಹೇಳದೇ ಹೊರಟು ಹೋದನಲ್ಲ! ಒಮ್ಮೊಮ್ಮೆ ದ್ವೇಷಿಸುತ್ತಾಳೆ, ಸೆಣೆಸಾಡುತ್ತಾಳೆ, ತನ್ನನ್ನೇ ಕೊಂದುಕೊಳ್ಳುತ್ತಾಳೆ. ಅಂತದಲ್ಲಿ ಎಲ್ಲವೂ ಅಳಿದು ಪ್ರೀತಿ ಮಾತ್ರವೇ ಉಳಿಯುತ್ತದೆ. ಅದರೊಡನೆ ಮತ್ತೆ ಸೋಲುತ್ತಾಳೆ. ಗೆದ್ದ ನಗುವನ್ನು ನಗುತ್ತಾಳೆ. ಭರವಸೆ ಸತ್ತ ನಿರೀಕ್ಷೆಯೊಂದಿಗೆ ಆರಂಭವಾದ ದಿನದಂತದ ಉಸಿರು ಪ್ರೀತಿಯಲ್ಲಿಯೇ ಕೊನೆಗಾಣುತ್ತದೆ. ಸತ್ತ ಭಾವಗಳ ಕಳೇಬರದಲ್ಲಡಗಿ ಕುಳಿತ ಮತ್ತದೇ ಜಗತ್ತು ಬೆತ್ತಲಾಗುತ್ತದೆ.

ಒಂದೇ ಬಯಲಲ್ಲಿ ಒಂಟಿ ಕಾಲ ತವಸಿಗಳಾದರೂ, ಪಕ್ಕದಲ್ಲಿಯ ಶೂನ್ಯವ ಕಾಣದ ತಾರೆಗಳು. ಕೋಟಿ ಅಸ್ತಿತ್ವದ ನಡುವಲ್ಲಿ ಕೋಟಿ ಶೂನ್ಯತೆ. ಆತ್ಮವನ್ನು ಆವರಿಸಿಕೊಳ್ಳಲು ಅವನೇನೂ ಅವಳ ಅಪ್ಪಣೆ ಕೇಳಲಿಲ್ಲ. ತೊರೆದು ಹೋಗಲು ಏತಕ್ಕೆ? ಸಾವಿರ ಬಾರಿ ಹೇಳಿಕೊಂಡ ಅದೇ ಮಾತು; ನಿಟ್ಟುಸಿರಿಕ್ಕುತ್ತಾಳೆ. ಎಂದಿನಂತೇ, ದೂರ ತೀರದ ತಾರೆಯ ಬೆಳಕತ್ತ ನೋಟ ನೆಟ್ಟು, ಹೆಪ್ಪುಗಟ್ಟಿದ ಎದೆಯ ಮೇಲೆ ಹಸ್ತವಿಟ್ಟು ತನ್ನೊಳಗನ್ನು ಕೇಳಿಕೊಳ್ಳುತ್ತಾಳೆ, ” ಮಿಡಿಯಬಲ್ಲದೇ ಮತ್ತೆ, ಒಡೆದ ಹೃದಯ?”…

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!