Featured ಅಂಕಣ

ಭೂಪಾಲ್ ದುರಂತಕ್ಕೆ 32 ವರ್ಷಗಳು…!

ಆ ರಾತ್ರಿ ಇಡೀ ನಗರವೇ ನೆಮ್ಮದಿಯಿಂದ ನಿದ್ದೆಗೆ ಜಾರಿತ್ತು. ಹೀಗೊಂದು ಅವಗಡ ಸಂಭವಿಸಬಹುದೆಂಬ ಸಣ್ಣ ಸುಳಿವೂ ಇರಲಿಲ್ಲ ಆ ನಗರದ ಮುಗ್ಧ ಜನತೆಗೆ. ಕೇವಲ ಒಂದು ಅನಿಲ ಎಷ್ಟೋ ಜನರ ಜೀವವನ್ನು ಬಲಿತೆಗೆದುಕೊಂಡಿತ್ತು. ನಮ್ಮ ದೇಶದಲ್ಲಿ ಸಂಭವಿಸಿರುವ ದೊಡ್ಡ ದೊಡ್ಡ ದುರಂತಗಳ ಸಾಲಿಗೆ ಭೂಪಾಲ್ ತನ್ನ ಹೆಸರನ್ನು ಅಂದು ರಾತ್ರಿ  ಲಗತ್ತಿಸುವಂತೆ ಮಾಡಿತ್ತು ದುರ್ವಿಧಿ. ಭೂಪಾಲ್ ಅನಿಲ ದುರಂತ, ಇಂದಿಗೂ ಭೂಪಾಲ್ ಜನರ ಹಾಗೂ ಇಡೀ ದೇಶದ ಜನರ ಎದೆ ಝಲ್ ಎನಿಸುವಂತಹ ಭೀಕರವಾದ ದುರಂತ. ಭೂಪಾಲ್ ದುರಂತ ಸಂಭವಿಸಿ ಮೂರು ದಶಕಗಳೇ ಕಳೆದಿವೆ, ಆದರೂ ಭೂಪಾಲ್’ನ ಜನರಿಗೆ ಇನ್ನೂ ಅದರ ಕೆಟ್ಟ ನೆನಪು ಮರೆಯಲಾಗದಂತೆ ಮನಸ್ಸಿನ ಪುಟದಲ್ಲಿ ಕುಳಿತು ತನ್ನ ಅಟ್ಟಹಾಸದ ದಿನಗಳನ್ನು ಪದೇ ಪದೇ ನೆನಪಿಸುತ್ತಿದೆ. ಆ ರಾಕ್ಷಸನ ಹೆಸರು ಮೀಥೈಲ್ ಐಸೋಸಯನೇಟ್(Methyl Isocyanate – MIC). ಆ ರಾಕ್ಷಸನ ಹಸಿವಿಗೆ ಅದೆಷ್ಟೋ ಮುಗ್ಧ ಜನರು ಆಹಾರವಾಗಿಬಿಟ್ಟರು. ಭೂಪಾಲ್ ಅನಿಲ ದುರಂತಕ್ಕೆ ಇದೀಗ 32 ವರ್ಷ.

ಭೂಪಾಲ್ ಮಧ್ಯಪ್ರದೇಶ ರಾಜ್ಯದ ರಾಜಧಾನಿ ಹಾಗೂ ಭೂಪಾಲ್ ಜಿಲ್ಲೆಯ ಆಡಲಿತ ಕೇಂದ್ರ. ಮಧ್ಯಪ್ರದೇಶದ ಹಲವಾರು ದೊಡ್ಡ ನಗರಗಳಲ್ಲಿ ಭೂಪಾಲ್ ಸಹಾ ಒಂದು. ಭೂಪಾಲ್ ಕೆರೆಗಳ ನಾಡೆಂದೇ ಪ್ರಸಿದ್ಧವಾಗಿದೆ. ಭೂಪಾಲ್ ನಮ್ಮ ದೇಶದ ದೊಡ್ಡ ನಗರಗಳ ಸಾಲಿನಲ್ಲಿ 17ನೇ ಸ್ಥಾನವನ್ನು ಪಡೆದುಕೊಂಡಿದೆ. 1984ನೇ ಇಸವಿ ಡಿಸಂಬರ್’ನಲ್ಲಿ ನಡೆದ ದುರಂತದಿಂದ ಈ ನಗರ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುವಂತೆ ಮಾಡಿದೆ.  ವಿಷಾನಿಲದ ದುಷ್ಪರಿಣಾಮಕ್ಕೆ ತುತ್ತಾದವರ ಸಂಖ್ಯೆ 5,00,000ಕ್ಕೂ ಹೆಚ್ಚು. ಮಧ್ಯಪ್ರದೇಶ ಸರ್ಕಾರ ಮೃತರ ಸಂಖ್ಯೆ 3787 ಎಂದು ದೃಢಪಡಿಸಿದೆ. ಇದಲ್ಲದೇ ಇತರ ಮೂಲಗಳ ಪ್ರಕಾರ ಅನಿಲದ ದುಷ್ಪರಿಣಾಮದಿಂದ ಎರಡು ವಾರದಲ್ಲಿ 8000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಭೂಪಾಲ್ ಅನಿಲ ದುರಂತಕ್ಕೆ ಮೂಲ ಕಾರಣಗಳೇನು ಎಂಬುದು ದೊಡ್ಡ ಚರ್ಚೆಗೊಳಗಾದ ವಿಷಯ.  ನಿರ್ವಹಣೆಯಲ್ಲಿನ ಬೇಜವಾಬ್ದಾರಿಯೇ ದುರಂತಕ್ಕೆ ಮೂಲ ಕಾರಣ ಎಂದು ಭಾರತ ಸರ್ಕಾರ ಹಾಗೂ ಸ್ಥಳೀಯ ಕೆಲವು ಸಂಘಟನೆಗಳ ವಾದ.

ಆ ಕಂಪೆನಿಯ ಹೆಸರು ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್(UCIL – Union Carbide India Limited). UCIL ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುತ್ತದೆ.  ಸೆವಿನ್(Sevin) ಎಂಬ ಕೀಟನಾಶಕವನ್ನು ಉತ್ಪಾದಿಸುವ ಸಲುವಾಗಿ 1969ರಲ್ಲಿ UCIL ಕಾರ್ಖಾನೆಯನ್ನು ಸ್ಥಾಪಿಸಲಾಗಿತ್ತು. ಈ ಸೆವಿನ್ ಕೀಟನಾಶಕವನ್ನು ತಯಾರಿಸಲು ಮೀಥೈಲ್ ಐಸೋಸಯನೇಟ್(Methyl Isocyanate – MIC) ರಾಸಾಯನಿಕ ವಸ್ತುವಿನ ಅವಶ್ಯಕತೆ ಇತ್ತು. ಇದರ ಸಲುವಾಗಿ 1979ರಲ್ಲಿ MIC ಉತ್ಪಾದನಾ ಸ್ಥಾವರವನ್ನು ಭೂಪಾಲ್’ನಲ್ಲಿ ಸ್ಥಾಪಿಸಲಾಗಿತ್ತು. ಮೀಥೈಲಮೈನ್(Methylamine) ಹಾಗೂ ಫೋಸ್ಗೀನ್(Phosgene) ಜೊತೆಗೆ ರಾಸಾಯನಿಕ ಕ್ರಿಯೆಯಿಂದ MIC ಉತ್ಪತ್ತಿಯಾಗುತ್ತಿತ್ತು. ಹೀಗೆ ಬಂದ MIC, ನಂತರ 1-ನ್ಯಾಪ್ತಾಲ್(1-naphthol) ರಾಸಾಯನಿಕದೊಂದಿಗೆ ಪ್ರತಿಕ್ರಿಯಿಸಿದ ನಂತರ ಕಾರ್ಬರೈಲ್(Carbaryl) ಎಂಬ ಕ್ರಿಮಿನಾಶಕ ಉತ್ಪತ್ತಿಯಾಗುತ್ತಿತ್ತು. ಈ ಕ್ರಿಮಿನಾಶಕವನ್ನು ಸೆವಿನ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟಮಾಡಲಾಗುತ್ತದೆ. ಮೀಥೈಲ್ ಐಸೋಸಯನೇಟ್ ವಿಷಕಾರಿ ಅನಿಲ. ಗಾಳಿಯಲ್ಲಿ ಸುಲಭವಾಗಿ ಅವಿಯಾಗಿಬಿಡುವ ಶಕ್ತಿಯನ್ನು ಈ ಅನಿಲ ಹೊಂದಿದೆ.

ಭೂಪಾಲ್’ನಲ್ಲಿ ಸ್ಥಾಪಿಸಲಾಗಿದ್ದ MIC ಸ್ಥಾವರದಲ್ಲಿ ಈ ಅನಿಲವನ್ನು ಭೂಮಿಯ ಒಳಗಡೆ ದ್ರವ ರೂಪದಲ್ಲಿ ಸಂಗ್ರಹಿಸಿಡಲಾಗಿತ್ತು.  ಅಳತೆಗೂ ಮೀರಿ ಅಧಿಕವಾಗಿ ಸಂಗ್ರಹಿಸಿಟ್ಟಿದ್ದೇ ಈ ದುರಂತಕ್ಕೆ ಕಾರಣವಾಯಿತೆಂಬ ಮಾಹಿತಿ ಘಟನೆಯ ತರುವಾಯ ಬೆಳಕಿಗೆ ಬಂದ ವಿಷಯ. ಯೂನಿಯನ್ ಕಾರ್ಬೈಡ್ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವಾರನ್ ಆ್ಯಂಡರ್’ಸನ್. ಈ ಅನಿಲ ದುರಂತ ನಡೆದ ಸಂದರ್ಭದಲ್ಲಿ ಈತ ಭಾರತದಲ್ಲಿರಲಿಲ್ಲ.

UCIL ಒಟ್ಟು ಮೂರು ಟ್ಯಾಂಕ್’ಗಳನ್ನು(E610 E611 E619)ಮೈಕ್ ದ್ರಾವಣವನ್ನು ಸಂಗ್ರಹಿಸಿಡಲೆಂದೇ ನಿರ್ಮಿಸಿತ್ತು. ಈ ಟ್ಯಾಂಕ್’ಗಳಲ್ಲಿ 15000 ಗ್ಯಾಲನ್’ನಷ್ಟು ಮೈಕ್ ದ್ರಾವಣವನ್ನು ಸಂಗ್ರಹಿಸಿಡಬಹುದಾಗಿತ್ತು. ಸುರಕ್ಷತಾ ಕ್ರಮಗಳಿಗನುಗುಣವಾಗಿ ಎಲ್ಲಾ ಟ್ಯಾಂಕ್’ಗಳಲ್ಲಿಯೂ ಕೇವಲ 50% ಮಾತ್ರ ಮೈಕ್ ದ್ರಾವಣವನ್ನು ಸಂಗ್ರಹಿಸಿಡಲು ಅನುಮತಿ ಇತ್ತು. ಆದರೆ ಸಾಮರ್ಥ್ಯಕ್ಕಿಂತ ಅಧಿಕವಾಗಿ ಮೈಕ್ ದ್ರಾವಣವನ್ನು ಸಂಗ್ರಹಿಸಿಡಲಾಗಿತ್ತು. ಪ್ರತೀ ಟ್ಯಾಂಕ್’ನಲ್ಲಿಯೂ ಜಡ ಸಾರಜನಕದ(Inert Nitrogen) ಒತ್ತಡವನ್ನು ಬಳಸಿಕೊಂಡು ಮೈಕ್ ದ್ರಾವಣವನ್ನು ಸಂಗ್ರಹಿಸಿಡಲಾಗಿತ್ತು. ಈ ಜಡ ಸಾರಜನಕದ ಒತ್ತಡವನ್ನು ಉಪಯೋಗಿಸಿಕೊಂಡು ಅವಶ್ಯಕತೆ ಇದ್ದಾಗ ಮೈಕ್ ದ್ರಾವಣವನ್ನು ಟ್ಯಾಂಕ್’ಗಳಿಂದ ಹೊರಗೆ ಪಂಪ್ ಮಾಡಲಾಗುತ್ತಿತ್ತು. ಆದರೆ ಘಟನೆ ಸಂಭವಿಸುವುದಕ್ಕಿಂತ ಎರಡು ತಿಂಗಳ ಹಿಂದೆ, ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಟ್ಯಾಂಕ್ E610 ಜಡ ಸಾರಜನಕದ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು. ಆ ಸಮಯದಲ್ಲಿ ಟ್ಯಾಂಕ್ E610ನಲ್ಲಿ 40ಟನ್’ನಷ್ಟು ಮೈಕ್ ದ್ರಾವಣವಿತ್ತು. ಟ್ಯಾಂಕ್ ಹಾಗೂ ಅದಕ್ಕೆ ಸಂಬಂಧಿಸಿದ ಪೈಪ್’ಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಲು UCIL ದುರಸ್ತಿ ಕಾರ್ಯವನ್ನು ಕೈಗೊಂಡಿತ್ತು. ಆದರೆ ಸೆವಿನ್ ಕೀಟನಾಶಕದ ಉತ್ಪಾದನೆಯನ್ನು ನಿಲ್ಲಿಸಿರಲಿಲ್ಲ. ಉಳಿದ ಎರಡು ಟ್ಯಾಂಕ್’ಗಳಲ್ಲಿದ್ದ ಮೈಕ್ ದ್ರಾವಣವನ್ನು ಬಳಸಿಕೊಂಡು UCIL ತನ್ನ ಕೆಲಸವನ್ನು ಮುಂದುವರೆಸಿತ್ತು. ಡಿಸೆಂಬರ್ ಒಂದನೇ ತಾರೀಖು E610 ಟ್ಯಾಂಕ್’ನಲ್ಲಿ ಪುನಃ ಒತ್ತಡವನ್ನು ತರಿಸಿ ಮೈಕ್ ದ್ರಾವಣವನ್ನು ಪೈಪ್’ಗಳ ಮೂಲಕ ಪಂಪ್’ಮಾಡುವ ಪ್ರಯತ್ನ ನಡೆಸಲಾಗಿತ್ತು. ಆದರೆ ಪ್ರಯತ್ನ ಸಫಲವಾಗಲಿಲ್ಲ.

1984ನೇ ಇಸವಿ. ಡಿಸಂಬರ್ 2 ನೇ ತಾರೀಖು ಮುಗಿದು 3ನೇ ತಾರೀಖು ಪ್ರಾರಂಭವಾಗಿತ್ತಷ್ಟೆ. ಅಂದರೆ ಮಧ್ಯರಾತ್ರಿಯ ಸಮಯ. ಸಮಯ 12 ಘಂಟೆ 05 ನಿಮಿಷ‌. MIC ಸ್ಥಾವರದಲ್ಲಿ ಸೋರಿಕೆ ಕಂಡುಬರುತ್ತದೆ. ಈ ವಿಷಯ ಕಂಟ್ರೋಲ್ ರೂಮ್’ನಲ್ಲಿದ್ದ ಸಿಬ್ಬಂದಿ ವರ್ಗದವರಿಗೆ ತಿಳಿಯುತ್ತದೆ. ಸಣ್ಣ ಪ್ರಮಾಣದ ಸೋರಿಕೆ ಇರಬಹುದು ಎಂದು ತಿಳಿದು ಒತ್ತಡ ಮಾಪನವನ್ನು ಪರೀಕ್ಷಿಸುತ್ತಾರೆ. ಅಷ್ಟೇನು ಏರು ಪೇರನ್ನು ಕಾಣದ ಸಿಬ್ಬಂದಿಗಳು ಸುಮ್ಮನಾಗುತ್ತಾರೆ. ಕೆಲವು ಸಿಬ್ಬಂದಿಯನ್ನು ಸೋರಿಕೆಯ ಮೂಲವನ್ನು ಹುಡುಕಲು ಕಳುಹಿಸಿ, ಉಳಿದ ಸಿಬ್ಬಂದಿಗಳು ಒಂದು ಟೀ ಬ್ರೇಕ್’ನ ನಂತರ ಪರೀಕ್ಷಿಸಿದರಾಯಿತು ಎಂದುಕೊಂಡು ಟೀ ಕುಡಿಯಲು ತೆರಳುತ್ತಾರೆ. MIC ಸ್ಥಾವರಕ್ಕೆ ಹೊಂದಿಕೊಂಡಿದ್ದ ಹಲವಾರು ಪೈಪ್’ಗಳ ದುರಸ್ತಿ ಕಾರ್ಯ ನಡೆಯುತ್ತಿದ್ದ ಸಂದರ್ಭ ಅದು. ದುರಸ್ತಿಯಲ್ಲಿದ್ದ ಪೈಪ್’ನ ಮೂಲಕ ಅಧಿಕ ಪ್ರಮಾಣದ ನೀರು 40 ಟನ್ MIC ದ್ರಾವಣವ ಸಂಗ್ರಹಿಸಿಟ್ಟಿದ್ದ E610 ಟ್ಯಾಂಕ್’ನೊಳಗೆ ಪ್ರವೇಶಿಸಿದೆ‌. ಮೊದಲೇ ಅಧಿಕ ಒತ್ತಡವನ್ನು ತಡೆಯಲಾಗದ ಪರಿಸ್ಥಿತಿಯಲ್ಲಿದ್ದ E610 ಟ್ಯಾಂಕ್’ನೊಳಗೆ ಅಧಿಕ ಪ್ರಮಾಣದ ನೀರು ಒಳಹೊಕ್ಕಿದ್ದು ದೊಡ್ಡ ದುರಂತಕ್ಕೆ ಮೂಲ ಕಾರಣ. MIC ದ್ರಾವಣದ ಜೊತೆ ನೀರು ಸೇರಿದ ಕಾರಣ ಹಾಗೂ ಪೈಪ್’ಗಳಲ್ಲಿದ್ದ ಕಬ್ಬಿಣದ ಅಂಶದಿಂದಾಗಿ ಸ್ಥಾವರದೊಳಗೆ ಬಹಿರುಷ್ಣಕ(Exothermic Reaction) ಕ್ರಿಯೆ ಪ್ರಾರಂಭವಾಗಿಬಿಡುತ್ತದೆ. ಸಮಯ 12 ಘಂಟೆ 30 ನಿಮಿಷ. ಕಂಟ್ರೋಲ್ ರೂಮ್’ನ ಸಿಬ್ಬಂದಿಗಳಿಗೆ ವಿಚಿತ್ರವಾದ ಶಬ್ಧ ಹಾಗೂ ಅನಿಲದ ವಾಸನೆಯ ಅನುಭವವಾಗುತ್ತದೆ. ಅದಾಗಲೇ ಪರಿಸ್ಥಿತಿ ಹೆಚ್ಚುಕಡಿಮೆ ಸಂಪೂರ್ಣವಾಗಿ ಕೈಮೀರಿಹೋಗಿತ್ತು. E610 ಸ್ಥಾವರದೊಳಗೆ ಅಧಿಕವಾದ ತಾಪಮಾನ ಹಾಗೂ ಒತ್ತಡ ಉಂಟಾಗಿತ್ತು. ಟ್ಯಾಂಕ್’ನ ಸಿಮೆಂಟ್ ಪದರದಲ್ಲಿ ಬಿರುಕುಗಳು ಬರಲಾರಂಭಿಸಿದವು. ಅಧಿಕ ಒತ್ತಡದಿಂದಾಗಿ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಸುವ ಸಲುವಾಗಿ ಟ್ಯಾಂಕ್’ಗೆ ಹೊಂದಿಕೊಂಡಿದ್ದ ಕವಾಟವೊಂದು ಸ್ವಯಂಚಾಲಿತವಾಗಿ ತೆರೆದುಕೊಂಡಿತು. ಟ್ಯಾಂಕ್’ನಲ್ಲಿದ್ದ MIC ದ್ರಾವಣ ವಿಷಾನಿಲವಾಗಿ ಕವಾಟದ ಮೂಲಕ ಗಾಳಿಗೆ ಸೇರಿಕೊಳ್ಳಲು ಆರಂಭಿಸಿತು. ದುರಂತವೆಂದರೆ ವಾತಾವರಣದೊಂದಿಗೆ ವಿಷಾನಿಲವನ್ನು ಸೇರಿಕೊಳ್ಳದಂತೆ ತಡೆಗಟ್ಟಬಲ್ಲ ಮೂರೂ ಸುರಕ್ಷತಾ ಸಾಧನಗಳು‌‌ ಅಂದು ಕೆಟ್ಟುಹೋಗಿದ್ದವು.

ನೋಡನೋಡುತ್ತಿಂದತೆಯೇ 8 ಕಿಲೋಮೀಟರ್’ಗಳಷ್ಟು ವ್ಯಾಪ್ತಿಯನ್ನು ಆವರಿಸಿದ ವಿಷಾನಿಲ ಭೂಪಾಲ್ ಜನರ ಜೀವಕ್ಕಾಗಿ ಹಪಹಪಿಸುತ್ತಿತ್ತು. ನಿದ್ದೆಗೆ ಜಾರಿದ್ದ ಜನಕ್ಕೆ ವಿಚಿತ್ರವಾದ ಅನುಭವ ಉಂಟಾಗಿ ಏನಾಗುತ್ತಿದೆ ಎಂಬುದೇ ತಿಳಿಯದಂತಾಗಿತ್ತು. ಮಕ್ಕಳ ಕಣ್ಣುಗಳಲ್ಲಿ ವಿಚಿತ್ರವಾದ ನೋವು ಹಾಗೂ ಉಸಿರಾಟದಲ್ಲಿ ತೊಂದರೆಗಳು‌‌ಕಂಡುಬರಲಾರಂಭಿಸಿತು. ಕೆಮ್ಮು, ಕಣ್ಣುರಿ, ಉಸಿರಾಟದ ತೊಂದರೆ ಹೀಗೆ ಹಲವಾರು ವಿಚಿತ್ರ ಅನುಭವಗಳು. ಏನಾಗುತ್ತಿದೆ ಎಂದು ತಿಳಿಯಲಾಗದೆ ಭೂಪಾಲ್’ನ ಜನರು ಆಸ್ಪತ್ರೆಯತ್ತ ಧಾವಿಸಲಾರಂಭಿಸಿದರು. ವೈದ್ಯರಿಗೂ ಏನಾಗುತ್ತಿದೆ ಎಂಬುದನ್ನು ತಿಳಿಯುವುದೇ ಕಷ್ಟಸಾಧ್ಯವಾಯಿತು. ಮೊದಲಿಗೆ ಬಹುಶಃ ಅಮೋನಿಯಾ ಇರಬಹುದೆಂದು ತಿಳಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು. ಕೆಲ ಸಮಯದ ನಂತರ ತಿಳಿದುಬರುತ್ತದೆ ಅದು ಬಹಳಾ ವಿಷಕಾರಿ ಅನಿಲ ಮೀಥೈಲ್ ಐಸೋಸಯನೇಟ್ ಎಂದು. ಈ ಅನಿಲದ ಬಗ್ಗೆ ಮಾಹಿತಿಯಿರದ ವೈದ್ಯರ ಬಳಿ ಅ್ಯಂಟಿಡೋಟ್’ ಸಹಾ ಇದ್ದಿರಲಿಲ್ಲ. ಕೆಲವೇ ಘಂಟೆಗಳಲ್ಲಿ ಆಸ್ಪತ್ರೆಯ ಮುಂದೆ ಹೆಣಗಳ ಸಾಲು. ಎಷ್ಟೋ ಜನ ಉಸಿರಾಟದ ತೊಂದರೆಯಿಂದ ಪ್ರಾಣ ಬಿಟ್ಟರು. ಬರೀ ಮನುಷ್ಯರಲ್ಲ, ಅದೆಷ್ಟೋ ಪ್ರಾಣಿಗಳು ಈ ವಿಷಕಾರಿ ಅನಿಲಕ್ಕೆ ಪ್ರಾಣ ಬಿಟ್ಟವು. ಪ್ರವಾಹ, ಚಂಡಮಾರುತ ಹಾಗೂ ಇನ್ನಿತರ ತುರ್ತು ಪರಿಸ್ಥಿತಿಯನ್ನು ಎದುರಿಸಿ ತಿಳಿದಿದ್ದ ಭಾರತ ಸರ್ಕಾರಕ್ಕೆ ಇಂತದ್ದೊಂದು ಕೈಗಾರಿಕಾ ತುರ್ತು ಪರಿಸ್ಥಿತಿಯನ್ನು ಎದುರಿಸಿ ಅನುಭವ ಇರಲಿಲ್ಲ. ಭಾರತ ಎಂದೂ ಕಂಡಿರದ ದೊಡ್ಡ ಕೈಗಾರಿಕಾ ದುರಂತವೊಂದು ಅಂದು ಭೂಪಾಲ್’ನಲ್ಲಿ ಸಂಭವಿಸಿಯೇಬಿಟ್ಟಿತು.

ಈ ದುರಂತದ ವಿಷಯ ತಿಳಿದ ಯೂನಿಯನ್ ಕಾರ್ಬೈಡ್’ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವಾರೆನ್ ಅ್ಯಂಡರ್’ಸನ್ ಅಮೆರಿಕಾದಿಂದ ಭಾರತಕ್ಕೆ ಆಗಮಿಸಿದ. ಆತನನ್ನು ಬಂಧಿಸುವ ನಾಟಕ ಮಾಡಿದ ಅಂದಿನ ಭಾರತ ಸರ್ಕಾರ ಬಂಧಿಸಿ ಜೈಲಿನೊಳಗೆ ಹಾಕುವ ಬದಲು ವಿಮಾನ ನಿಲ್ದಾಣದಿಂದ ಸೀದಾ UCILನ ಸುಂದರ ಅತಿಥಿ ಗೃಹಕ್ಕೆ ಕರೆದೊಯ್ದಿತ್ತು. ಕೆಲವು ದಿನಗಳ ನಂತರ ಬೇಲ್ ಕೊಡಿಸುವ ಮೂಲಕ ಭಾರತದಿಂದ ಅಮೇರಿಕಾಗೆ ತೆರಳಸು ಸಹಾಯವನ್ನೂ ಮಾಡಿತ್ತು. ಆತನ‌ಮೇಲೆ ಒಂದಷ್ಟು ದಂಡ ವಿಧಿಸಿತೇ ಹೊರತು ಯಾವ ಕಠಿಣ ಕ್ರಮವನ್ನೂ ಕೈಗೊಳ್ಳಲಿಲ್ಲ. ಅದ್ಯಾರೋ ಗೊತ್ತಿಲ್ಲದ ವ್ಯಕ್ತಿಯ ಬೊಕ್ಕಸ ತುಂಬಿಸಲು ಸ್ಥಾಪಿಸಿದ ಕಾರ್ಖಾನೆಗೆ ಮುಗ್ಧ ಜೀವಗಳು ಬಲಿಯಾದವು. ಭೂಪಾಲ್’ನ ಜನರು ಘಟನೆ ನಡೆದು ಮೂರು ದಶಕಗಳು ಕಳೆದರೂ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಲೇ ಇದ್ದಾರೆ. ಭಾರತ ಕಂಡ ಅತ್ಯಂತ ದೊಡ್ಡ ಕೈಗಾರಿಕಾ ದುರಂತಕ್ಕೆ ಈಗ 32 ವರ್ಷ…..!

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!