Featured ಅಂಕಣ ಎವರ್'ಗ್ರೀನ್

ಭಾವಗಳೂ ಚೆಲುವನ್ನು ಬೀರುತ್ತಿದ್ದವು ಈಕೆಯ ಮೊಗದ ಮೇಲೆ…

ಹುಣ್ಣಿಮೆಯ ಚಂದ್ರನ ಹೊಳಪಿನ ಕಿರಣ, ಅದು ಆಕೆಯ ನಯನ. ಅದು ಮಲ್ಲಿಗೆಯೇ ನಾಚುವಂತಹ  ಅಂದ.  ಆಕೆ ನಕ್ಕರೆ ಮುತ್ತು ಸುರಿದಂತೆ . ಮುನಿದರೆ ಮುನಿಸೂ ನಾಚುವಂತೆ. ಅತ್ತರೆ ನೋಡುಗನೂ ಜೊತೆಗೆ ಅತ್ತಂತೆ. ನಲಿದರಂತೂ ನವಿಲೇ ಕುಣಿದಂತೆ. ಆಕೆ ಪರದೆಯ ಮೇಲಿನ ಪ್ರಜ್ವಲಿಸುವ  ಕಮಲ. ಹೆಸರು ಮಧುಬಾಲ.

ಮಧುಬಾಲ. ನಲವತ್ತು ಹಾಗು ಐವತ್ತನೇ  ದಶಕದ ಅದೆಷ್ಟೋ ಯುವಕರ ಡ್ರೀಮ್ ಗರ್ಲ್.  ಹಿಂದಿ ಚಿತ್ರರಂಗದ ತಾರೆಗಳಲ್ಲಿ ಆಗ್ರಗಣ್ಯಳು. ಈಕೆಯ ಅಂದಕ್ಕೆ ಹಾಗು ನಟನೆಗೆ ಮನ ಸೋಲದವರಿಲ್ಲ. ಮೈಮರೆಯದವರಿಲ್ಲ. ವೀನಸ್ ಕ್ವೀನ್ (ವೀನಸ್ : ಪ್ರೀತಿ ಹಾಗು ಸೌಂದರ್ಯದ ರೋಮನ್ ದೇವತೆಯಾದ ಶುಕ್ರ ಗ್ರಹ) ಎಂದೇ ಅಭಿಮಾನಿಗಳಲ್ಲಿ ಚಿರಪರಿಚಿತಳು. ಹೆಚ್ಚೆಂದರೆ ಎರಡು ದಶಕಗಳಷ್ಟೇ ತೆರೆಯ ಮೇಲೆ ಕಂಡರೂ ಇಂದಿಗೂ ಜನಮನಗಳಲ್ಲಿ ಮಧುಬಾಲಳ ಹೆಸರು ಚಾಲ್ತಿಯಲ್ಲಿದೆ ಎಂದರೆ ಅದು ಆಕೆಯ ಪ್ರಸಿದ್ದಿ ಛಾಪು ಎನ್ನಬಹುದು. ದಶಕಗಳ ನಂತರವೂ ಅಭಿಮಾನಿಗಳ ಮನೆ ಮಾತಾಗಿರುವ ಈಕೆಯ ಒಳ-ಹೊರಗಿನ ಜೀವನದ ಬಗ್ಗೆ ಒಂದು ಸಣ್ಣ ಇಣುಕು ನೋಟ.

ಪ್ರೇಮಿಗಳ ದಿನವೆಂದು ಆಚರಿಸಲಾಗುವ ಫೆರ್ಬ್ರವರಿ ೧೪ ರಂದು(೧೯೩೩) ದೆಹಲಿಯಲ್ಲಿ ಜನಿಸಿದ ಮಧುಬಾಲಳ ಮೂಲ ಹೆಸರು ಮುಮ್ತಾಜ್ ಜಿಹಾನ್ ದೇಹ್ಲವ್. ಇತರ ಅನೇಕ ನಟ-ನಟಿಯರಂತೆ ಈಕೆಗೂ ಚಿತ್ರರಂಗ ತನ್ನದೇ ಆದ ಮುದ್ದಾದ ಹೆಸರನ್ನು ನಾಮಕರಣ ಮಾಡಿತು. ಅತಿ ಕಷ್ಟದ ದಿನಗಳನ್ನೇ ಕಂಡು ಬೆಳೆದ ಮಧುಬಾಲ ಪೋಷಕರ ಹನ್ನೊಂದು ಮಕ್ಕಳಲ್ಲಿ ಒಬ್ಬಳು. ಕೆಲಸವನ್ನು ಅರಸುತ್ತಾ ತಂದೆ ಅತಾವುಲ್ಲಾ ಖಾನ್ ಮುಂಬೈಗೆ ಬಂದು ನೆಲೆಸುತ್ತಾರೆ. ಕಷ್ಟದಿಂದ ಬೇಸತ್ತಿದ್ದ ಕುಟುಂಬಕ್ಕೆ ಆಧಾರವವಾಗಿ ಮಧುಬಾಲ ತನ್ನ ಒಂಬತ್ತನೇ ವಯಸ್ಸಿಗೆ ಕೆಲಸಕ್ಕಾಗಿ ಬಾಂಬೆ ಫಿಲಂ ಸ್ಟುಡಿಯೋವನ್ನು ಸೇರಬೇಕಾಗುತ್ತದೆ. ೧೯೪೨ರಲ್ಲಿ ತೆರೆ ಕಂಡ ‘ಬಸಂತ್’ ಚಿತ್ರ ಬೇಬಿ ಮಧುಬಾಲಳ ಮೊದಲ ಚಿತ್ರ. ಅಲ್ಲಿಂದ ಮುಂದೆ ಒಂದರ ಮೇಲೊಂದು ಚಿತ್ರಗಳು ಸಿಗತೊಡಗುತ್ತವೆ. ಮಧುಬಾಲಾಳ ಹೆಸರು ಸಿನಿಮಾ ವಲಯದಲ್ಲಿ ಸದ್ದು ಮಾಡತೊಡಗುತ್ತದೆ. ನೋಡ ನೋಡುತ್ತಿದ್ದಂತೆ ಒಂದು ದಿನ ಚಿತ್ರದ ನಾಯಕ ನಟಿಯ ಪ್ರಸ್ತಾಪವೂ ಬಂದೆ ಬಿಡುತ್ತದೆ. ಆಕೆಗೆ ಆಗ ಕೇವಲ ಹದಿನಾಲ್ಕು ವರ್ಷ. ಚಿತ್ರ ‘ನೀಲ್ ಕಮಲ್’ ಹಾಗು ಅದರ ನಾಯಕ ನಟ ‘ದಿ ಶೋ ಮ್ಯಾನ್’ ರಾಜ್ ಕಪೂರ್!

ಅಲ್ಲಿಂದ ಮುಂದೆ ಮಧುಬಾಲಳ ಹೆಸರು ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಹೋಗುತ್ತದೆ. ಮಹಲ್, ದುಲಾರಿ, ಹೌರಾ ಬ್ರಿಡ್ಜ್, ಕಾಲ ಪಾನಿ, ದೊ ಉಸ್ತಾದ್, ಅಮರ್, ಮಿಸ್ಟರ್ & ಮಿಸೆಸ್ 55, ಚಲ್ತಿ ಕ ನಾಮ್ ಗಾಡಿ, ಬರ್ಸಾತ್ ಕಿ ರಾತ್ ಹಾಗು ಮುಘಲ್-ಎ-ಅಜಮ್ ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಜನರ ಮನಸೂರೆಗೊಳಿಸುತ್ತಾಳೆ. ಐವತ್ತನೇ ಶತಮಾನದಲ್ಲಿ ಮಧುಬಾಲಳ ಪ್ರಸಿದ್ದಿ ಇತರ ನಾಯಕ ನಟಿಯರಿಗೆ ಹೋಲಿಸಿದರೆ ಅತಿ ಉತ್ತುಂಗದಲ್ಲಿರುತ್ತದೆ.  ಕೆಲ ವರ್ಷಗಳಿಂದೆಯಷ್ಟೇ ಪುಟ್ಟ ಹುಡುಗಿಯೊಬ್ಬಳು ಬಾಂಬೆ ಫಿಲಂ ಸ್ಟುಡಿಯೋದ ಹೊರಗೆ ನಿಂತು ನಟನಟಿಯರನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದವಳು ಇಂದು ಅದೇ ನಟ ನಟಿಯರ ಸಾಲಿನಲ್ಲಿ ನಿಂತಿರುತ್ತಾಳೆ. ಅಭಿಮಾನಿಗಳ ದೊಡ್ಡ ಸಾಲು ಈಕೆಯ ಒಂದು ನೋಟಕ್ಕೆ ಅದೇ ಜಾಗದಲ್ಲಿ ಸಾಲುಗಟ್ಟಿ ನಿಲ್ಲತೊಡಗಿರುತ್ತದೆ! ಮಧುಬಾಲಾಳ ಪ್ರಸಿದ್ದಿ ಕೇವಲ ದೇಶವಲ್ಲದೆ ವಿದೇಶಗಳಲ್ಲೂ ಕೇಳಿಬರುತ್ತದೆ. ಅಮೇರಿಕಾದ ಬಹು ಪ್ರಸಿದ್ಧಿಯ ಫಿಲ್ಮಿ ಮ್ಯಾಗಜಿನ್ನ ೧೯೫೨ ರ ಆಗಸ್ಟ್ ಸಂಚಿಕೆಯಲ್ಲಿ ಮಧುಬಾಲಳನ್ನು ಉಲ್ಲೇಖಿಸುತ್ತಾ ‘ಪ್ರಪಂಚದ ಅತಿ ದೊಡ್ಡ ತಾರೆ’ ಎಂಬ ಶೀರ್ಷಿಕೆಯೊಂದಿಗೆ ಒಂದು ಪುಟ ಪೂರ್ತಿ ಬರೆಯಲಾಗಿರುತ್ತದೆ!

ಅವಳ ಪ್ರಸಿದ್ದಿ ಅದೆಷ್ಟಿತ್ತೆಂದು ಇಲ್ಲೇ ಅಂದಾಜಿಸಬಹುದು. ಇದಾದ ನಂತರ ಆಕೆಗೆ ಹಾಲಿವುಡ್ ಆಫರ್ಗಳೂ ಅರಸಿ ಬರತೊಡಗುತ್ತವೆ. ಆದರೆ ತಂದೆ ಅತಾವುಲ್ಲಾ ಖಾನ್ರ ನಿರಾಕರಣೆಯ ಮೇರೆಗೆ ಅದು ಮುಂದುವರೆಯುವುದಿಲ್ಲ. ಸಿನಿ ಜಗತ್ತಿಗೆ ಬಂದ ಮೇಲೆ ಬೇಡವೆಂದರೂ ತಮ್ಮ ಹೆಸರುಗಳನ್ನು ಇತರ ನಟ-ನಟಿಯರೊಂದಿಗೆ ಕಟ್ಟಿ ಸುದ್ದಿಯನ್ನು ಮಾಡಲಾಗುತ್ತದೆ. ಇವಗಳಲ್ಲಿ ಕೆಲವು ನಿಜವಾದರೆ ಕೆಲವು ಅಕ್ಷರ ಸಹ ಸುಳ್ಳಾಗಿರುತ್ತವೆ. ಮಧುಬಾಲಾಳ ಹೆಸರೂ ಹೀಗೆ ಹಲವು ನಟ ನಿರ್ದೇಶಕರೊಟ್ಟಿಗೆ ಕಂಡು ಬಂದು ಅಂದಿನ ಸಿನಿವಲಯದಲ್ಲಿ ಚರ್ಚೆಯ ವಿಷಯವಾಗಿದಂತೂ ಸುಳ್ಳಲ್ಲ. ಆದರೆ ಅದು ಸಾಬಿತ್ತಾಗಿದ್ದು ಕೆಲವೇ ವ್ಯಕ್ತಿಗಳ ನಡುವೆ ಮಾತ್ರ. ಅವರಲ್ಲಿ ಪ್ರಮುಖರು ದಿ ಟ್ರಾಜಿಡಿ ಕಿಂಗ್ ದಿಲೀಪ್ ಕುಮಾರ್. ೧೯೪೪ ರಲ್ಲಿ ‘ಜ್ವಾರ್ ಬಟ್ಟಾ’ ಚಿತ್ರದ ಮೂಲಕ ಪರಿಚಯಗೊಂಡ ಈ ಜೋಡಿ ಮುಂದೆ ನಾಲ್ಕೈದು ಚಿತ್ರಗಳಲ್ಲಿ ಒಟ್ಟಾಗಿ ನಟಿಸುತ್ತಾರೆ. ಅಷ್ಟರಲ್ಲಾಗಲೇ ಒಬ್ಬರನೊಬ್ಬರು ಮೆಚ್ಚಿಯೂ ಇರುತ್ತಾರೆ. ಆದರೆ ಇಲ್ಲೂ ಸಹ ಮಧುಬಾಲಳ ತಂದೆಯೇ ಅಡ್ಡಿಯಾಗುತ್ತಾರೆ. ದಿಲೀಪ್ ಕುಮರೊಟ್ಟಿಗನ ಸಂಬಂಧಕ್ಕೆ ಅವರು ಮೊದಲಿಂದಲೇ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಕೆಲ ಸಣ್ಣ ಪುಟ್ಟ ವೈಮನಸ್ಸಿಂದ ಬೇರಾದ ಈ ಜೋಡಿ ಮತ್ತೆಂದೂ ಒಟ್ಟುಗೂಡುವುದಿಲ್ಲ. ಇದಾದ ನಂತರ ಪ್ರಸಿದ್ಧ  ಹಾಡುಗಾರ ಕಿಶೋರ್ ಕುಮಾರ್ ಈಕೆಯನ್ನು ವರಿಸಲು ಇಚ್ಛಿಸುತ್ತಾರೆ. ಆದರೆ ಮಧುಬಾಲಳ ಮನ ಇನ್ನೂ ದಿಲೀಪ್ ಕುಮಾರ್ರನ್ನೇ ಬಯಸುತ್ತಿರುತ್ತದೆ. ಕೊನೆಗೆ ಮಧುಬಾಲ ಕಿಶೋರ್ ವಿವಿಧ ಬಗೆಯ ಪ್ರಸ್ತಾವನೆಗೆ ಮಣಿಯಲೇ ಬೇಕಾಗುತ್ತದೆ. ಅಲ್ಲದೆ ಇದಕ್ಕಾಗಿ ಕಿಶೋರ್ ತಾವು ಇಸ್ಲಾಂಗೆ ಮತಾಂತರಗೊಂಡು ಹೆಸರನ್ನು ಅಬ್ದುಲ್ ಕರೀಂ ಎಂದೂ ಬದಲಿಸಿಕೊಂಡಿದ್ದೂ ಇದೆ! ಒಟ್ಟಿನಲ್ಲಿ ೧೯೬೦ ರಲ್ಲಿ ಮಧುಬಾಲ ಕಿಶೋರ್ರನ್ನು ವರಿಸುತ್ತಾಳೆ.

ತನ್ನ ಅಂದ ಹಾಗು ನಟನೆಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದ ಈಕೆಗೆ ತನ್ನ ಹೃದಯವೇ ಕೊನೆಗೊಂದು ದಿನ ಕಂಠಕಪ್ರಾಯವಾಗುತ್ತದೆ ಎಂದು ಭಾವಿಸಿರಲಿಲ್ಲ. ೧೯೫೪ರ ಹೊತ್ತಿಗಾಗಲೇ ಈಕೆಯ ಹೃದ್ಯದಲ್ಲಿ ರಂಧ್ರವೊಂದು ಪತ್ತೆಯಾಗಿರುತ್ತದೆ. ಹಾಗು ಆಗಿನ ಕಾಲಕ್ಕೆ ಅದು ವಾಸಿಮಾಡಲಾಗದ ಖಾಯಿಲೆ! ಹೆಚ್ಚು ಕ್ರಿಯಾಶೀಲವಾದಷ್ಟೂ ರಕ್ತವು ಮೂಗು ಹಾಗು ಬಾಯಿಯ ಮೂಲಕ ಹೊರ ಹೋಗುತ್ತಿರುತ್ತದೆ. ದೇಹದಲ್ಲಿ ನೋವು ಅಷ್ಟಿದ್ದರೂ ಈಕೆ ಆ ನೋವಿನಲ್ಲೇ ಹಲವು ಚಿತ್ರಗಳನ್ನು ಮಾಡುತ್ತಾಳೆ. ‘ಮೊಗಲ್-ಎ-ಅಜಮ್’ ಚಿತ್ರದ ಕೊನೆಯ ದೃಶ್ಯಗಳಲ್ಲಿ ಅಕ್ಷರ ಸಹ ಬಳಲಿದ್ದ ದೇಹದಲ್ಲೇ ಈಕೆ ಕ್ಯಾಮೆರಾದ ಮುಂದೆ ಬಂದು ನಿಲ್ಲುತ್ತಾಳೆ. ತನ್ನ ಎಲ್ಲವನ್ನೂ ನಟನೆಗೆ ಒಪ್ಪಿಸುತ್ತಾಳೆ. ಆ ಚಿತ್ರದ ‘ಅನಾರ್ಕಲಿ’ ಪಾತ್ರಕ್ಕೆ ಈಕೆಯ ವಿನಃ ಮತ್ಯಾರು ಒಗ್ಗರು ಎಂಬ ಮಟ್ಟಿಗೆ ನಟಿಸುತ್ತಾಳೆ. ಇಂದಿಗೂ ಆ ಪಾತ್ರ ಚಿತ್ರಪ್ರಿಯರ ಕಣ್ಣಿಗೆ ಕಟ್ಟಿದಂತಿದೆ. ಮನೆಮಾತಾಗಿದೆ. ೧೯೬೧ ರ ಹೊತ್ತಿಗಾಗಲೇ ಕಾಯಿಲೆ ಉಲ್ಬಣಿಸಿ ಹಾಸಿಗೆಯನ್ನು ಹಿಡಿದ ಮಧುಬಾಲ ಸುಮಾರು ಒಂಬತ್ತು ವರ್ಷಗಳ ಕಾಲ ಮೇಲೇಳುವುದೇ ಇಲ್ಲ! ಚರ್ಮವು ಎಲುಬಿಗೆ ಅಂಟಿದಂತ ದೇಹಸ್ಥಿತಿ ಈ ಸುಂದರಿಗೆ ಬರುತ್ತದೆಂದು ಯಾರು ಸಹ ಊಹಿಸಿರಲಿಲ್ಲ. ‘ನಾನು ಸಾಯಲು ಇಚ್ಛಿಸುವುದಿಲ್ಲ.. ಬದುಕಬೇಕು.. ನಾನು ಬದುಕಬೇಕು’ ಎನ್ನುತ್ತಲೇ ಫೆಬ್ರವರಿ ೨೩, ೧೯೬೯ ರಂದು ಇಹಲೋಕ ತ್ಯೆಜಿಸುತ್ತಾಳೆ. ಆಗ ಆಕೆಗಿನ್ನೂ ಮೂವತ್ತಾರು ವರ್ಷಗಳು!

ಮಧುಬಾಲ ತನ್ನ ಅಂದದಷ್ಟೇ ನಟನೆಯಲ್ಲೂ ಮಿಗಿಲು. ಆದರೆ ಅವಳ ಅಂಧದ ವರ್ಣನೆಯ ಮುಂದೆ ನಟನೆಗೆ ಸಿಗಬೇಕಾಗಿದ್ದ ಮಾನ್ಯತೆ ಕೊಂಚ ಕಡಿಮೆಯಾಯಿತು ಎನ್ನಬಹುದು. ಚಿತ್ರದ ಸೆಟ್ ಒಂದರಲ್ಲಿ ಮೊದಲ ಬಾರಿಗೆ ಈಕೆಯನ್ನು ಪ್ರತ್ಯಕ್ಷವಾಗಿ ಕಂಡ ಶಮ್ಮಿ ಕಪೂರ್ ಇವಳ ಅಂದಕ್ಕೆ ಬೆರಗಾಗಿ ಮೂರ್ಛೆ ಹೋಗಿರುವುದು ಇದೆ! ‘ಇಂತಹ ಅಂದಕ್ಕೆ ಅದೆಷ್ಟು ಜನರ ದೃಷ್ಟಿ ತಾಗಿತ್ತೋ’ ಎಂದು ಕೆಲವರೆಂದರೆ ‘ಎಲ್ಲ ಅವನ ಇಚ್ಛೆ’ ಎಂದು ಕೆಲವರು ಈಕೆಯ ಅಭಿಮಾನಿಗಳು ಈಕೆಯ ಅಗಲಿಕೆಯಿಂದ ನೊಂದಿರುವುದು ಉಂಟು.ಇಷ್ಟೊಂದು ಸುಂದರ ಚೆಲುವನ್ನು ಪಡೆದ ಮಧುಬಾಲ ಕೊಂಚ ಕಾಲವನ್ನೂ ತನ್ನ  ಜೊತೆಗೆ ಪಡೆದುಬರಬೇಕಿತ್ತು. ಚಿತ್ರಪ್ರಿಯರಿಗೆ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ನೀಡಬೇಕಿತ್ತು. ಆ ಮಿಂಚಿನ ಹೊಳಪಿನ ಕಣ್ಣುಗಳು, ಮನಮೋಹಕಗೊಳಿಸುವ ನಗು ಹಾಗು ಮನಸೂರೆಗೊಳಿಸುವ ಆ ನಟನೆ ಇಂದು ಕೇವಲ ನೆನಪಾಗಿ ಉಳಿದಿವೆ. ಅಂದಕ್ಕೆ ಅನ್ವರ್ಥನಾಮವೆಂದು ಹೇಳಬಹುದಾದ ಮಧುಬಾಲಳ ಬಗ್ಗೆ ಚರ್ಚಿಸುವ ಪೀಳಿಗೆಯೂ ಇಂದು ಉಳಿದಿಲ್ಲ. ಮರೆಯಾಗುತ್ತಿರುವ ಪೀಳಿಗೆಯಲ್ಲಿ ಮರೆಯಾಗದೆ, ಮುಂಬರುವ ಪೀಳಿಗೆಯ ಮನಗಳಲ್ಲೂ ಈಕೆ ಮನೆ ಮಾಡಲಿ ಎಂಬುದೇ ಆಶಯ.

 

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!