Featured ಅಂಕಣ

ದೇಶದ ಹಿತ ಅಡಗಿದೆಯೆಂದಾದರೆ ಇನ್ನಷ್ಟು ಕರಟಲೂ ಸಿದ್ಧ!

‘ಮನೆ ಮಠ ಸಂಸಾರವೆಂದು ನೀನ್ಯಾವತ್ತೂ ಯೋಚನೆ ಮಾಡುವ ಹಾಗಿಲ್ಲ. ರಾತ್ರೋರಾತ್ರಿ ನಿನ್ನ ರಜೆಯನ್ನು ಸರಕಾರ ಕಸಿದುಕೊಂಡು ವೃತ್ತಿಗೆ ಕರೆದರೂ ಅದನ್ನೂ ನೀನು ಪ್ರಶ್ನಿಸುವಂತಿಲ್ಲ. ನಿನಗೇನಿದ್ದರೂ ನಿನ್ನ ಬ್ಯಾಂಕೇ ಹೆಂಡತಿ, ಗ್ರಾಹಕರೇ ಮಕ್ಕಳು… ಸಮಯ ಸಂದರ್ಭ ಅಂತ ನೋಡದೆ, ರಜೆ ಮಜಾ ಅಂತ ಯೋಚಿಸದೆ ರಾತ್ರಿ  ಹಗಲು  ಸೇವೆ ಸಲ್ಲಿಸುವುದು ನಿನ್ನ ವೃತ್ತಿ ಧರ್ಮ’ ಹೀಗಂತ ಒಂದು ವ್ಯಂಗಮಿಶ್ರಿತ ಜೋಕು ಇದೀಗ ಬ್ಯಾಂಕ್ ವಲಯದಲ್ಲಿ ಹರಿದಾಡುತ್ತಿದೆ… ಆದರೆ ಇದನ್ನು ಬರೇ ಜೋಕ್ ಎನ್ನುವುದಕ್ಕಿಂಲೂ ಮಡಗಟ್ಟಿರುವ ನೋವು ಎನ್ನುವುದೇ ಹೆಚ್ಚು ಸಮಂಜಸವಾದೀತೇನೋ!

ಹೌದು, ಇಂದು ಮತ್ತೆ ಜನ ಬ್ಯಾಂಕ್‍ಗಳ ಮುಂದೆ ಸಾಲುಗಟ್ಟಿದ್ದಾರೆ. 1000, 500ರ ನೋಟುಗಳನ್ನು ಹಿಡಿದುಕೊಂಡು ತನಗೆ ತನಗೆ ಎಂದೆನ್ನುತ್ತಾ ಬ್ಯಾಂಕ್ ಸಿಬಂದಿಗಳ ಮೇಲೆ ಮುಗಿ ಬೀಳುತ್ತಲೂ ಇದ್ದಾರೆ.  ಅನಗತ್ಯವಾಗಿ ಸಹನೆ ಕಳೆದುಕೊಳ್ಳುತ್ತಾ ಮೊದಲೇ ಹಿಂಡಿ ಹಿಪ್ಪೆಯಾಗಿರುವ ಬ್ಯಾಂಕ್ ಸಿಬಂದಿಗಳನ್ನು ಮತ್ತಷ್ಟು ಜಾಲಾಡಿಸುತ್ತಿದ್ದಾರೆ! ಕೆಲಸ ಮಾಡುವುದೇ ಅಥವಾ ಜನರ ನೂಕು ನುಗ್ಗಲನ್ನು ಸರಿಪಡಿಸಿಕೊಂಡು ಅವರುಗಳನ್ನು ಸಂಭಾಳಿಸುವುದೇ ಒಂದೂ ಅರ್ಥವಾಗದೆ ಕಂಗೆಟ್ಟಿ ಹೋಗಿದ್ದಾರೆ ಬ್ಯಾಂಕ್ ನೌಕರರು! ಒಟ್ಟಿನಲ್ಲಿ ಮೊನ್ನೆ ನವಂಬರ್ 8ರ ರಾತ್ರಿ ಕೇಂದ್ರ ಸರಕಾರ ಕರೆನ್ಸಿ ವಿಷಯದಲ್ಲಿ ತೆಗೆದುಕೊಂಡ ದಿಟ್ಟ ತೀರ್ಮಾನದ ಬಳಿಕ ಬ್ಯಾಂಕ್ ಸಿಬ್ಬಂದಿಗಳ ಮುಖ ಬಹುತೇಕ ಕಳೆಗುಂದಿದಂತಾಗಿದೆ. ಅಧಿಕ ಒತ್ತಡ, ಅಧಿಕ ಕೆಲಸದ ಮಧ್ಯೆ ಸಿಲುಕಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಅದೆಷ್ಟೋ ಕಡೆಗಳಲ್ಲಿ ಸಿಬಂದಿಗಳು ತಲೆ ತಿರುಗಿ ಬಿದ್ದುದು ವರದಿಯಾಗಿದ್ದರೆ, ಇನ್ನೆಲ್ಲೊ ಒಂದು ಕಡೆ ಮ್ಯಾನೇಜರ್ ಬ್ಯಾಂಕ್‍ನೊಳಗೇನೇ ಹೃದಯಘಾತಕ್ಕೊಳಗಾಗಿ ಮೃತಪಟ್ಟದ್ದೂ ನಡೆದಿದೆ! ಇದಕ್ಕೆಲ್ಲಾ ಕಾರಣ ಅವರ ಮೇಲಿರುವ ಮಿತಿ ಮೀರಿದ ಕೆಲಸದ ಒತ್ತಡ ಹಾಗೂ ಸಿಗದ ವಿಶ್ರಾಂತಿ. ಇಲ್ಲಿ ತಪ್ಪು ಯಾರದ್ದು ಸರಿ ಯಾರದ್ದು ಎಂಬುದು ಎರಡನೇ ವಿಚಾರ. ಆದರೆ ಇಲ್ಲಿ ಸಂಪೂರ್ಣವಾಗಿ ಬೆಂದು ಹೋಗಿರುವುದು ಮಾತ್ರ ಬ್ಯಾಂಕ್ ಸಿಬಂದಿಗಳೇ ಎಂಬುದರಲ್ಲಿ ಮಾತ್ರ ಎರಡು ಮಾತಿಲ್ಲ. ಇವತ್ತಿನ ‘ಡಿಮೋನಿಟೈಷೇಶನ್‍ನ’ ವಿಚಾರ ಎಲ್ಲಾ ಕಡೆಯೂ ಬಿಸಿ ಬಿಸಿಯಾಗಿ ಚರ್ಚಿಸಲ್ಪಡುತ್ತಿದೆ. ದೇಶಾದ್ಯಂತ ಪೂರಕ ಮಾರಕತೆಗಳ ಬಗೆಗೆ ವ್ಯಾಪಕ ವಿಶ್ಲೇಷಣೆಗಳು ನಡೆಯುತ್ತಿದೆ. ಕೆಲವು ಮಾಧ್ಯಮಗಳಂತೂ ಬಡವರು ಬ್ಯಾಂಕ್ ಮುಂದೆ ಲೈನಿನಲ್ಲಿ ನಿಂತಿರುವುದನ್ನೇ ದೊಡ್ಡ ಮಟ್ಟದ ಪ್ರಮಾದವೆಂಬಂತೆ ಬಿಂಬಿಸಿ ಸರಕಾದ ನಡೆಯನ್ನು ಟೀಕಿಸುತ್ತಿದ್ದರೆ ಇನ್ನು ಕೆಲವರು ಧನಿಕನ ಕಾಳಧನವು ಸಂಪೂರ್ಣ ಸುಟ್ಟು ಹೋಗುತ್ತಿದೆ ಎಂಬ ಸಂತಸದಲ್ಲಿ ತೇಲಾಡುತ್ತಿದ್ದಾರೆ. ಆದರೆ ಅವರ್ಯಾರೂ ಕೂಡ ಈ ಪ್ರಕ್ರಿಯೆಯಲ್ಲಿ ‘ಸೇವೆ’ ಎನ್ನುವ ಹೊರಲಾರದ ಮಣಭಾರವನ್ನು ಹೊತ್ತುಕೊಂಡು ರಾತ್ರಿ ಹಗಲು ಎಂದೆನ್ನುತ್ತಾ ಬ್ಯಾಂಕ್ ಸಿಬಂದಿಗಳು ತಮ್ಮ ಜೀವವನ್ನು ಸವೆಸುತ್ತಿದ್ದಾರೆ ಎಂಬುದನ್ನು  ಮಾತ್ರ ಚರ್ಚಿಸಿಯೇ ಇಲ್ಲ! ಬ್ಯಾಂಕ್ ಸಿಬಂದಿಗಳೇನೂ ಅತಿಮಾನುಷರಲ್ಲ,  ಅವರಿಗೂ ಕೂಡ ಒಂದು ಖಾಸಗಿ ಬದುಕಿದೆ ಆ ಬದುಕಲ್ಲಿ ತಂದೆ ತಾಯಿ ಹೆಂಡತಿ ಮಕ್ಕಳೆಂಬ ಸಂಸಾರವಿದೆ ಎಂಬುದರ ಬಗ್ಗೆ ಒಂಚೂರು ಚಿಂತಿಸಿಲ್ಲ! ನೇರವಾಗಿ ಹೇಳುವುದಾದರೆ, ಇರುವ ಕೆಲಸದ ದಿನಗಳಲ್ಲಿ ಬಿಡುವೇ ಇಲ್ಲದೆ ಸುಮಾರು 10ರಿಂದ 12ಗಂಟೆಗಳವರೆಗೂ ದುಡಿಯುತ್ತಾ, ಇದ್ದ ರಜೆಯನ್ನೂ ಕಳೆದುಕೊಂಡು ಜನಸಾಮಾನ್ಯನಿಗೆ ತೊಂದರೆಯಾಗಬಾರದೆಂದು ನಿರಂತರವಾಗಿ ಕೆಲಸಕ್ಕೆ ಹಾಜರಾಗಿ ಹೈರಾಣಾಗಿರುವ ಆ ನೋವು ಬ್ಯಾಂಕ್ ವಲಯವನ್ನು ಬಿಟ್ಟರೆ ಮತ್ತ್ಯಾರಿಗೂ ಅರ್ಥವೇ ಆಗಿಲ್ಲ! ಹಣ ಬದಲಾವಣೆಯ ವಿಚಾರದಲ್ಲಿ ಜನಸಾಮಾನ್ಯನಿಗೂ ತೊಂದರೆಯಾಗಿರುವುದು ನಿಜ. ಆತ ದುಡ್ಡಿಗಾಗಿ ಪರದಾಟ ನಡೆಸುತ್ತಿರುವುದೂ ಕೂಡ ಸುಳ್ಳಲ್ಲ. ಆದರೆ ಜನರ ಕಷ್ಟಗಳು ಒಂದರ್ಧ ಗಂಟೆಯ ಸರತಿ ಸಾಲಿನಲ್ಲಿ ಕೊನೆಯಾಗಬಲ್ಲುದು ಎಂಬುದು ಕೂಡ ಅಷ್ಟೇ ಸತ್ಯ! ಇಂದಿನ ಪರಿಸ್ಥಿತಿಯಲ್ಲಿ ಐಷರಾಮಿ ಬದುಕಿಗೆ ಒಂದಷ್ಟು ಲಗಾಮು ಬಿದ್ದಿದೆಯೇ ಹೊರತು ದಿನವಹಿ ಕೆಲಸ ಕಾರ್ಯಗಳಿಗೇನು ಅಡ್ಡಿಯಾಗಿಲ್ಲ. ಹೇಗೆಂದರೆ, ದಿನದ  ವಹಿವಾಟಿಗೆ ಬೇಕಾಗಬಹುದಾದ ಹಣವನ್ನು ವಾರದ ಮಿತಿಯಲ್ಲಿ ಜನರಿಗೆ ನೀಡುವ ಕೆಲಸ-ಕಾರ್ಯಗಳನ್ನು ಬ್ಯಾಂಕುಗಳು ಅದಾಗಲೇ ಅಚ್ಚುಕಟ್ಟಾಗಿ ಮಾಡುತ್ತಿವೆ. ಅಷ್ಟಕ್ಕೂ ಲೈನಿನಲ್ಲಿ ನಿಂತು ತಮ್ಮ ಕೆಲಸ ಕಾರ್ಯಗಳನ್ನು ಪೂರೈಸುವುದು ಭಾರತದಲ್ಲೇನೂ ಹೊಸತಲ್ಲವಲ್ಲ!?  ತಿರುಪತಿ, ಧರ್ಮಸ್ಥಳ, ಗುರುವಾಯೂರುಗಳಂತ ಪವಿತ್ರ ಸ್ಥಳಗಳಲ್ಲಿ ಜನಸಾಮಾನ್ಯ ದಿನಗಟ್ಟಳೆ ಲೈನ್ ನಿಂತರೇನೇ ದೇವರ ದರುಶನ ಭಾಗ್ಯ ದಕ್ಕುವುದು! ಮತದಾನದ ಸಂದರ್ಭದಲ್ಲಂತೂ ಲೈನ್ ವ್ಯವಸ್ಥೆ ಇದ್ದದ್ದೇ. ಇನ್ನು ಉತ್ತಮ ಸಿನಿಮಾ ಬಂದರಂತೂ ಸಿನಿಮಾ ಥಿಯೇಟರ್ ಮುಂದೆ ಅದ್ಯಾವುದಕ್ಕೂ ಹೆದರದೆ ಜನ ಕಾಯುತ್ತಿರುತ್ತಾರೆ! ಆದರೆ ಅಲ್ಲೆಲ್ಲಾ ತೊಂದರೆ ಎಂದೆನ್ನಿಸದ ಬದುಕು ಇದೀಗ ಬ್ಯಾಂಕ್ ಮುಂದೆ ಒಂದರ್ಧ ಗಂಟೆ ಕಳೆದಾಗ ತೊಂದರೆಯಾಯಿತೆಂದು ವೈಭವೀಕರಿಸುವುದು ಮಾಧ್ಯಮಗಳ ಅತಿರೇಕತನವಷ್ಟೇ!

ಬ್ಯಾಂಕ್ ನೌಕರರ ಜೀವನ ಇಂದು ಬಳಲಿ ಬೆಂಡಾಗಿದೆ. ಹಾಗೆ ನೋಡಿದರೆ ಹೊರಗಿನ ಪ್ರಪಂಚದಲ್ಲಿ ಇವತ್ತಿಗೂ ಬ್ಯಾಂಕ್ ನೌಕರಿ ಎಂದರೆ ಆರಾಮದಾಯಕ ಜೀವನವೆಂಬ ತಪ್ಪು ಕಲ್ಪನೆಯಿದೆ. ಆದರೆ ನಿಜಕ್ಕೂ ಬ್ಯಾಂಕ್ ನೌಕರಿ ಅಂದುಕೊಂಡ ಹಾಗೆ ಇಲ್ಲ. ಇಂದಿನ ಬ್ಯಾಂಕಿಂಗ್ ಸಮಸ್ಯೆಗಳ ಆಗರವೆಂದರೂ ಸರಿಯೇ. ಅಧಿಕ ಕೆಲಸದ ಒತ್ತಡದ ಜೊತೆಗೆ ಇರುವ ಕಡಿಮೆ ಸಂಖ್ಯೆಯ ನೌಕರರನ್ನು ಹಿಡಿದುಕೊಂಡು ದಿನದ ಕೆಲಸಗಳನ್ನು ಪೂರೈಸುವುದೇ ಇಂದು ಬ್ಯಾಂಕ್‍ಗಳಿಗೆ ದೊಡ್ಡ ಸವಾಲು. ಅದರಲ್ಲೂ ಕೇಂದ್ರದಲ್ಲಿ ಹೊಸ ಸರಕಾರ ಬಂದ ಬಳಿಕವಂತೂ ಈ ಜನಾಧನ್ ಖಾತೆ, ಪ್ರಧಾನಮಂತ್ರಿ ಜೀವನ್ ರಕ್ಷ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಅಟಲ್ ಪೆನ್ಷನ್, ಮುದ್ರಾ ಲೋನ್, ಆಧಾರ್ ಲಿಂಕಿಂಗ್, ಗ್ಯಾಸ್ ಸಬ್ಸಿಡಿ, ಬಯೋಮಾಟ್ರಿಕ್ಸ್ ತಂತ್ರಜ್ಞಾನದ ಬಳಕೆ, ರೂಪೇ ಕಾರ್ಡ್, ರೂಪೇ ಇನ್ಸುರೆನ್ಸ್, ಹಾಲಿನ ಸಬ್ಸಿಡಿ ಎಂದೆಲ್ಲಾ ಹತ್ತು ಹಲವಾರು ನವನವೀನ ಯೋಜನೆಗಳನ್ನೆಲ್ಲಾ ಬ್ಯಾಂಕ್‍ಗೆ ಸೇರಿಸಿಕೊಂಡು ಬ್ಯಾಂಕ್ ನೌಕರಿಯನ್ನು ಇನ್ನಷ್ಟು ಜಟಿಲಗೊಳಿಸಲಾಗಿದೆ. ಸರಕಾರದಿಂದಲೇ ನಡೆಯುವ ಮೂರ್ನಾಲ್ಕು ಇನ್ಸುರೆನ್ಸ್ ಕಂಪೆನಿಗಳು ಇಲ್ಲಿ ಇವೆಯಾದರೂ ಹೊಸ ಇನ್ಸುರೆನ್ಸ್’ಗಳನ್ನೆಲ್ಲಾ ಬ್ಯಾಂಕ್ ಜೊತೆ ಸೇರಿಸಿದ್ದಾದರೂ ಏಕೆ ಎಂಬುದು ಅದ್ಯಾರಿಗೂ ಅರ್ಥವಾಗಿಲ್ಲ ಬಿಡಿ! ಇರಲಿ, ಜನಸಾಮಾನ್ಯನಿಗೆ ನೆರವಾಗುವ ಇಂತಹ ವಿಚಾರಗಳು ಅಂದರೆ ವಿಶಾಲಗೊಳ್ಳುತ್ರಿರುವ ಬ್ಯಾಂಕ್‍ನ ಕಾರ್ಯವ್ಯಾಪ್ತಿಗಳನ್ನು ತಪ್ಪೆಂದು ಹೇಳುತ್ತಿಲ್ಲ. ಆದರೆ ಇವಲ್ಲೆವುಗಳನ್ನು ಇಂಪ್ಲಿಮೆಂಟ್ ಮಾಡುವ ಮುನ್ನ ಬ್ಯಾಂಕ್‍ನ ಶಾಖೆಗಳಲ್ಲಿ ಸಾಕಷ್ಟು ಉದ್ಯೋಗಿಗಳು ಇದ್ದಾರೆಯೇ, ಸರಿಯಾದ ತಂತ್ರಜ್ಞಾನ ಮಾರ್ಗದರ್ಶನಗಳಿವೆಯೇ ಎಂಬುದನ್ನಾದರೂ ಸರಕಾರ ಯೋಚಿಸಬೇಕಿತ್ತು.  ಆದರೆ ಅದ್ಯಾವುದನ್ನೂ ಮಾಡದೆ ಮೊದಲೇ ಹೈರಾಣಾಗಿರುವ ಬ್ಯಾಂಕ್ ಶಾಖೆಗಳಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಿಸಿಕೊಂಡು ಬೆನ್ನು ತಟ್ಟಿಸಿಕೊಂಡರೆ ಅದು ವ್ಯವಸ್ಥೆಗೆ ಮಾಡುವ ಅಪಮಾನವಾಗುತ್ತದೆಯಷ್ಟೇ. ಇವತ್ತಿನ ಡಿಮೋನಿಟೈಶೇಷನ್ ವಿಚಾರವನ್ನೇ ತೆಗೆದುಕೊಂಡರೂ, ದೈನಂದಿನ ಬ್ಯಾಂಕಿಂಗ್ ಕೆಲಸಗಳನ್ನೆಲ್ಲಾ ಬದಿಗಿಟ್ಟು ಇಂದು ಬ್ಯಾಂಕ್ ನೌಕರನು ಕೇವಲ ಹಣ ಬದಲಾವಣೆ ಹಾಗೂ ಕ್ಯಾಶ್ ಟ್ರಾನ್ಸಾಕ್ಷನ್‍ನ ಕೆಲಸಗಳನ್ನಷ್ಟೇ ಮಾಡುವ ಅನಿವಾರ್ಯತೆಗೆ ಸಿಲುಕುವಂತಾಗಿದೆ. ಆದರೆ ಬ್ಯಾಂಕ್ ಎಂದರೆ ಇವಿಷ್ಟೇ ಅಲ್ಲದೆ ಬೆಟ್ಟದಷ್ಟು ಬೇರೆ ಕೆಲಸಗಳೂ ಇವೆ. ಆದರೆ ಅವುಗಳ ಗತಿ ಏನು, ಅವುಗಳನ್ನೆಲ್ಲಾ ಸಿಬಂದಿಗಳು ಅದ್ಯಾವ ಸಂದರ್ಭದಲ್ಲಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸರಕಾರವಾಗಲೀ ಇಲ್ಲವೇ ಮ್ಯಾನೆಜ್‍ಮೆಂಟ್‍ಗಳಾಗಲೀ ಯೋಚಿಸುವ ಗೋಜಿಗೇ ಹೋಗಿಲ್ಲ! ಬದಲಾಗಿ ಹತ್ತರ ಮೇಲೆ ಮತ್ತೊಂದು ಎಂಬಂತೆ ಮತ್ತೊಂದಷ್ಟು ಹೊಸ ಹೊಸ ಇ-ಮೇಲ್‍ಗಳನ್ನು, ಸುತ್ತೋಲೆಗಳನ್ನು ಕಳುಹಿಸುತ್ತಾ ನೌಕರರ ನಿದ್ದೆಗೆಡಿಸುತ್ತಿವೆ ಅಷ್ಟೇ! ಹೌದು ಬ್ಯಾಂಕಿನ ದಿನವಹಿ ಕೆಲಸಕಾರ್ಯಗಳು ಇಂದು ತೀವ್ರವಾದ ಸಮಯದ ಅಭಾವಕ್ಕೆ ಒಳಗಾಗಿರುವುದರಿಂದಲೇ ಇಂದು ಬ್ಯಾಂಕ್ ನೌಕರನು ವಿಧಿಯಿಲ್ಲದೆ ತನ್ನ ಕುಟುಂಬ ಸಂಸಾರವನ್ನು ಮರೆತು ತಡರಾತ್ರಿಯವರೆಗೂ ಬ್ಯಾಂಕ್ ಒಳಗೆ ಕ(ಕೊ)ಳೆಯುವಂತೆ ಮಾಡಿದೆ!

ಕಪ್ಪು ಹಣವನ್ನು ಹಾಗೂ ಕಳ್ಳನೋಟುಗಳನ್ನು ಮೂಲೋಚ್ಚಾಟನೆ ಮಾಡಲು ಸರಕಾರವು ಅಧಿಕ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಂಡದ್ದು ಒಂದು ಉತ್ತಮ ನಿರ್ಧಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ಬ್ಯಾಂಕ್ ನೌಕರರಲ್ಲೂ ಸಹಮತವಿದೆ. ದೊಡ್ಡ ಕೆಲಸಕ್ಕೆ ಕೈ ಹಾಕುವಾಗ ಒಂದಷ್ಟು ತೊಂದರೆಗಳು ವಿಘ್ನಗಳು ಎದುರಾಗುವುದು ಸಹಜ. ರಾಷ್ಟ್ರ ಬದಲಾಗಬಲ್ಲುದು, ಪ್ರಜೆಗಳೆಲ್ಲರಿಗೂ ಮುಂದಿನ ದಿನಗಳು ನೆಮ್ಮದಿಯ ದಿನಗಳಾಗಬಲ್ಲುದು ಎನ್ನುವುದಾದರೆ  ದೇಶಕ್ಕಾಗಿ ಇನ್ನಷ್ಟೂ ಕರಟಲು ಸಿದ್ಧ ಎನ್ನುವ ಬ್ಯಾಂಕ್ ನೌಕರರೂ ಇದ್ದಾರೆ. ಆದರೆ ಇಲ್ಲಿ ಒತ್ತಾಸೆಯಾಗಿ ನಿಲ್ಲಬೇಕಾದವರು ಯಾರು? ಮುಖ್ಯವಾಗಿ ಸರಕಾರ. ಸದ್ಯದ ಮಟ್ಟಿಗೆ ಹೇಳುವುದಾದರೆ ಇಂದಿನ ಈ ಗೊಂದಲದ ವಾತಾವರಣದಲ್ಲಿ ಸರಕಾರವು ಹಣ ಬದಲಾವಣೆಯ ಕೆಲಸಗಳಿಗೆ ಕೇವಲ ಬ್ಯಾಂಕ್‍ಗಳನ್ನಷ್ಟೇ ಆಶ್ರಯಿಸದೆ ಮತ್ತೊಂದಷ್ಟು ಇಲಾಖೆಗಳನ್ನು ಸೇರಿಸಿಕೊಳ್ಳಬಹುದಿತ್ತು.  ಸಣ್ಣ ಸಣ್ಣ ಅಂಚೆ ಇಲಾಖೆಗಳಲ್ಲೂ ಜನರಿಗೆ ಸಾಕಷ್ಟು ದುಡ್ಡು ಸಿಗುವ ಹಾಗೆ ಮಾಡಿಕೊಳ್ಳಬೇಕಿತ್ತು. ಕನಿಷ್ಟ ಪಕ್ಷ  ಜನರ ಗೊಬ್ಬೆ, ಗಲಾಟೆಗಳನ್ನು ತಹಬಂದಿಗೆ ತರಲು, ಪ್ರತೀ ಬ್ಯಾಂಕ್‍ಗಳಿಗೆ ಓರ್ವ ಪೋಲೀಸ್ ಸಿಬಂದಿಯ ಸೇವೆಯನ್ನಾದರೂ ನೀಡಬೇಕಿತ್ತು. ಎಲ್ಲಕಿಂತಲೂ ಹೆಚ್ಚಾಗಿ ಜನರ ಬೇಡಿಕೆಯನ್ನು ಸರಿದೂಗಿಸುವಷ್ಟು ಕರನ್ಸಿಗಳನ್ನಾದರೂ ಮುದ್ರಿಸಿ ಆದಷ್ಟು ಬೇಗ ಬ್ಯಾಂಕ್‍ಗಳಿಗೆ ನೀಡಬೇಕಿತ್ತು. ಹಾಗಾಗಿರುತ್ತಿತ್ತರರೆ ಇಲ್ಲದ ಪರಿಪಾಡಲು ತಪ್ಪುತ್ತಿತ್ತು. ಬ್ಯಾಂಕ್ ನೌಕರರೂ ಉಸಿರಾಡುತ್ತಿದ್ದರು!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!