ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೬
ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ ||
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ || ೩೬ ||
ಹಿಂದಿನ ಪದ್ಯದಲ್ಲಿ ಹೇಗೆ ಪರಬ್ರಹ್ಮನು ನರಮಾನವನನ್ನು ಸದಾ ಕತ್ತಲಿನಲ್ಲಿಟ್ಟೆ ಸತಾಯಿಸುತ್ತಾನೆಂದು ಹೇಳಿದ ಕವಿಯ ಗಮನ, ಈಗ ಆ ಮಾನವನ ಮತ್ತಿತರ ಪಾಡುಗಳತ್ತ ಹರಿದಿದೆ ಈ ಸಾಲುಗಳಲ್ಲಿ.
ಏನಾದರೂ ಸರಿ ಮನುಜನಿಗೆ ನಿಗೂಢ ಸೃಷ್ಟಿಯ ಗುಟ್ಟರಿಯಲು ಬಿಡೆನೆನ್ನುವ ಪರಬ್ರಹ್ಮನಿಗೆ ಆದರೂ ಎಲ್ಲೊ ಏನೊ ಸಂಶಯವಿದ್ದೇ ಇರಬೇಕು – ಈ ಚಿಕಿತ್ಸಕ, ಶೋಧಕ ಬುದ್ಧಿಯ, ಚತುರತೆ, ಸಾಮರ್ಥ್ಯವುಳ್ಳ ಮನುಜ ತನ್ನ ಅನ್ವೇಷಣೆಯನ್ನು ಬಿಡಲಾರ ಎಂದು. ಸದ್ಯಕ್ಕೆ ಸುಮ್ಮನಾಗಿ ಕೂತರು, ಹಾಗೆ ನಿರಂತರವಾಗಿರುವನೆಂದು ಹೇಳಲಾಗದು. ಮತ್ತೆ ಮನದ ಅಜ್ಞಾನದ ಕಿಚ್ಚು ಬಡಿದೆಬ್ಬಿಸಿ ಆ ಪರಿಶೋಧನೆಯತ್ತ ಪದೇಪದೆ ಓಡಿಸಬಹುದು – ಅಂತಿಮ ಉತ್ತರ ಸಿಗುವವರೆಗೆ.
ಅಂದರೆ ನರಮನುಜನು ಬಿಡುವಾಗಿರುವ ತನಕ ಅವನ ಅನ್ವೇಷಕ ಪ್ರವೃತ್ತಿ, ಅವನನ್ನು ಸುಮ್ಮನೆ ಕೂಡಲು ಬಿಡುವುದಿಲ್ಲ. ಅದಕ್ಕೆ ತಡೆ ಹಾಕುವ ಒಂದೆ ದಾರಿಯೆಂದರೆ ಅವನು ಆ ಅನ್ವೇಷಣೆಯ ದಾರಿ ಹಿಡಿಯಲು ಬಿಡದಂತೆ ಮತ್ತಾವುದಾದರೊಂದು ರೀತಿಯಲ್ಲಿ ಅವನ ಗಮನವನ್ನು ಬೇರೆಡೆಗೆ ಸೆಳೆದು ಸದಾ ಅದರಲ್ಲೆ ಹೋರಾಟ ನಿರತನಾಗಿರುವಂತೆ ಮಾಡಿಬಿಡುವುದು..! ಅವನು ಸುಲಭದಲ್ಲಿ ತಪ್ಪಿಸಿಕೊಳ್ಳಲು ಆಗದಂತೆ ಸರಿಯಾದ ಬಲೆಯಲ್ಲೆ ಕೆಡವಬೇಕಲ್ಲ? ಅದಕ್ಕೆ ಸರ್ವಸೂಕ್ತ ಶ್ರೇಷ್ಠ ಮಾರ್ಗವೆಂದರೆ – ಅವನ ದೌರ್ಬಲ್ಯಗಳ ಮೂಲಕ ಅವನನ್ನು ನಿಯಂತ್ರಿಸುವುದು…!
ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ ||
ಮೋಹ, ಪಾಶಾದಿ ವಿವಿಧ ಭ್ರಾಂತಿಗಳು ತಾನೆ ಮಾನವನ ದೌರ್ಬಲ್ಯದ ಮೂಲಸರಕು? ಅವುಗಳ ಬಲೆಯಲ್ಲಿ ಅವನನ್ನು ಸಿಕ್ಕಿಸಿಬಿಟ್ಟರೆ ಅದರೊಡನೆ ಹೋರಾಡುತ್ತ ನಿಂತ ಮನುಜನಿಗೆ ಅದರಿಂದ ಹೊರಗೆ ಬಂದು ಸತ್ಯಾನ್ವೇಷಣೆಯ ಮಾರ್ಗ ಹಿಡಿಯುವ ವೇಳೆ, ವ್ಯವಧಾನವಾದರೂ ಎಲ್ಲಿರುತ್ತದೆ ? ಅದರಿಂದವನು ಸುಲಭದಲ್ಲಿ ತಪ್ಪಿಸಿಕೊಂಡುಬಿಡದ ಹಾಗೆ ನೋಡಿಕೊಳ್ಳುವ ಕಾರಣಕ್ಕೆ , ಬೇಡದ ಕುಮಾರ್ಗಗಳಲ್ಲು ಅವನನ್ನು ನಡೆಸಿಬಿಡುತ್ತಾನಂತೆ ಪರಬ್ರಹ್ಮ. ಒಂದೆಡೆ ಅಲ್ಲಿ ಹೋರಾಟ ನಡೆಯುತ್ತಿರುವ ಹೊತ್ತಲ್ಲೆ ಅದನ್ನು ಮನುಜನ ಸತ್ವಪರೀಕ್ಷೆಯೆನ್ನುವ ಹೊದಿಕೆ ಹೊದಿಸಿ ಅದರಲ್ಲೆ ಮುಳುಗಿಹೋಗುವಂತೆ ಪ್ರಚೋದಿಸುತ್ತಾನಂತೆ.
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ ||
ಇಷ್ಟೆಲ್ಲಾ ಮಾಡಿದನೆಂದು ಪರಬ್ರಹ್ಮನಿಗೆ ದೂರು ಬರಬಾರದಲ್ಲ? ಅದಕ್ಕೆ ಇದನ್ನೆಲ್ಲಾ ಜೀವನವೊಡ್ಡುವ ಪಂಥ, ಪರೀಕ್ಷೆಯೆಂದುಬಿಟ್ಟರೆ ? ಆ ದೂರು ಬರುವ ಚಿಂತೆಯೆ ಇರದಲ್ಲ ! ಇದೆಲ್ಲವನ್ನು ಮೀರಿಯೂ ಯಾರಾದರೂ ಅಪ್ಪಿತಪ್ಪಿ ಆ ಪರೀಕ್ಷೆಯನ್ನು ಗೆದ್ದು, ತಾನುಟ್ಟ ಅಡೆತಡೆಗಳನ್ನೆಲ್ಲ ದಾಟಿ ಬಂದುಬಿಡಬಾರದಲ್ಲ ? ಅದಕ್ಕೆ ಅವರನ್ನಲ್ಲೆ ಹಣ್ಣುಗಾಯಿ, ನೀರುಗಾಯಾಗಿಸಿ ಸೋತು ಸುಣ್ಣವಾಗಿ ಹೋಗುವಂತೆ ಮಾಡಿ, ಕೊನೆಗೆ ಆ ಫಲಿತದ ಜವಾಬ್ದಾರಿ, ಹೊಣೆಯನ್ನು ಅವನ ತಲೆಗೆ ಕಟ್ಟುತ್ತದೆ – ವಿಧಿ, ಹಣೆಬರಹದ ಹೆಸರಿನಲ್ಲಿ. ಹೀಗೆ ಬಿಡಿಸಲಾಗದ ಒಗಟಲ್ಲಿ ಸಿಕ್ಕಿಸಿ, ಗೆಲ್ಲಲಾಗದ ಪಂಥದಲ್ಲಿ ಬಳಲಾಡಿಸಿ ಕೊನೆಗೆ ತಾನಿಟ್ಟ ಪರೀಕ್ಷೆಯಲ್ಲಿ ಹುಲುಮಾನವ ಗೆಲ್ಲಲಿಲ್ಲವೆಂದು ಕಠೋರವಾದ ತೀರ್ಪಿತ್ತುಬಿಡುವುದು ಸರಿಯೆ ? ಇಷ್ಟೆಲ್ಲ ಹುನ್ನಾರವನ್ನು, ತಾನೇ ತನ್ನ ಸ್ವಂತ ಸೃಷ್ಟಿಯ ಮೇಲೆ ಮಾಡುವುದು ಸರಿಯೆ ? ಎಂದು ನಿಷ್ಠೂರವಾಗಿ ಕೇಳುತ್ತಿದ್ದಾನಿಲ್ಲಿ ಮಂಕುತಿಮ್ಮ.
#ಕಗ್ಗಕೊಂದು_ಹಗ್ಗ
#ಕಗ್ಗ_ಟಿಪ್ಪಣಿ