ಕ್ಯಾನ್ಸರ್ ಚಿಕಿತ್ಸೆಯ ಸೈಡ್ ಎಫೆಕ್ಟ್’ಗಳ ಬಗ್ಗೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂತದ್ದೇ! ಕೀಮೋನ ಅಡ್ಡ ಪರಿಣಾಮಗಳನ್ನ ನೋಡಿ ಅಥವಾ ಕೇಳಿ ಎಲ್ಲರೂ ತಿಳಿದುಕೊಂಡಿರುತ್ತಾರೆ. ಆದರೆ ಈ ಸೈಡ್ ಎಫೆಕ್ಟ್’ಗಳ ಬಗ್ಗೆ ನಮಗಿರುವ ಜ್ಞಾನ ತುಂಬಾ ಕಡಿಮೆ ಅಂತಲೇ ಹೇಳಬಹುದು. ಕ್ಯಾನ್ಸರ್ ಎನ್ನುವುದು ತುಂಬ ವಿಸ್ತಾರವಾದದ್ದು ಹಾಗೆಯೇ ಅದರ ಅಡ್ಡಪರಿಣಾಮಗಳು ಕೂಡ!
ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಕೀಮೊನಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಆದರೆ ಅದೆಲ್ಲ ಶಾರ್ಟ್ ಟರ್ಮ್ ಸೈಡ್ ಎಫೆಕ್ಟ್ ಅಷ್ಟೇ. ಕೀಮೋ ಇರುವ ತನಕ ಅಂದರೆ ಕೀಮೋವನ್ನು ತೆಗೆದುಕೊಳ್ಳುತ್ತಿರುವ ತನಕ ಈ ಸೈಡ್ ಎಫೆಕ್ಟ್’ಗಳು ಕಾಣಿಸಿಕೊಳ್ಳುತ್ತವೆ. ನಂತರ ಇವೇನೂ ಇರುವುದಿಲ್ಲ. ಆದರೆ ಕೀಮೋನ ಲಾಂಗ್ ಟರ್ಮ್ ಸೈಡ್ ಎಫೆಕ್ಟ್’ಗಳ ಬಗ್ಗೆ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಈ ಲಾಂಗ್ ಟರ್ಮ್ ಸೈಡ್ ಎಫೆಕ್ಟ್ ಎಲ್ಲರಲ್ಲೂ ಕಾಣಿಸಿಕೊಳ್ಳಲೇಬೇಕು ಅಂತೇನಿಲ್ಲ, ಆ ಪ್ರಶ್ನೆ ಬೇರೆ! ಆದರೆ ಕೀಮೋ ಪರಿಣಾಮವಾಗಿ ಹಲವಾರು ಲಾಂಗ್ ಟರ್ಮ್ ತೊಂದರೆಗಳು ಕಾಣಿಸಿಕೊಂಡ ನಿದರ್ಶನಗಳು ಸಾಕಷ್ಟಿವೆ. ಅದರಲ್ಲಿ ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿ ಕೇಳಿ ಬರುತ್ತಿರುವುದು ಕೀಮೋ ಫಾಗ್ ಅಥವಾ ಕೀಮೋ ಬ್ರೈನ್!
ಸಿಂಪಲ್ಲಾಗಿ ಹೇಳುವುದಾದರೆ, ಕೀಮೋ ಫಾಗ್ ಅಂದರೆ ’ಮೆದುಳಿಗೆ ಒಂದು ರೀತಿ ಮೋಡ ಕವಿದ ವಾತಾವರಣ’ ಅಂತ ಹೇಳಬಹುದು. ಅಂದರೆ ನಮ್ಮ ಕಾಗ್ನಿಟಿವ್ ಫಂಕ್ಷನ್ಸ್ ಅಥವಾ ಅರಿವಿನ ಕ್ರಿಯೆಗಳಿವೆಯಲ್ಲ ಅದರ ಕ್ಷಮತೆ ಸ್ವಲ್ಪ ಕಡಿಮೆಯಾಗುತ್ತದೆ. ಬೇಗ ಮರೆಯುವುದು, ಎಷ್ಟು ನೆನಪು ಮಾಡಿಕೊಂಡರೂ ನೆನಪಾಗದೇ ಇರುವುದು, ಏಕಾಗ್ರತೆ ಇಲ್ಲದಿರುವುದು, ಒಟ್ಟೊಟ್ಟಿಗೆ ಎರಡು ಮೂರು ಕೆಲಸ ಮಾಡುವುದಕ್ಕೆ ಆಗದೇ ಇರುವುದು, ಒಂದು ಸಮಯದಲ್ಲಿ ಒಂದೇ ಕೆಲಸ ಎನ್ನುವಂತೆ, ಆ ಒಂದು ಕೆಲಸ ಮುಗಿಸಲು ಕೂಡ ಸಾಕಷ್ಟು ಹೊತ್ತು ತೆಗೆದುಕೊಳ್ಳುವುದು, ಸಾಮಾನ್ಯ ಪದಗಳನ್ನು ನೆನಪಿಡುವುದಕ್ಕೆ ಕಷ್ಟ ಪಡುವಂತಾಗುವುದು ಇವೆಲ್ಲ ಕೀಮೋ ಫಾಗ್’ನಲ್ಲಿ ಕಂಡು ಬರುವಂತಹ ಲಕ್ಷಣಗಳು.
ಒಂದು ವರದಿಯ ಪ್ರಕಾರ ಇಂದು ಮಿಲಿಯನ್’ಗಳಷ್ಟು ಕ್ಯಾನ್ಸರ್ ಸರ್ವೈವರ್ ಕೀಮೋ ಬ್ರೈನ್’ನಿಂದ ಬಳಲುತ್ತಿದ್ದಾರಂತೆ. ಈ ವರದಿ ನೋಡಿಯೇ ಸುಮಾರು ಜನ ಕ್ಯಾನ್ಸರ್ ಸರ್ವೈವರ್’ಗಳಿಗೆ ಈ ಮಿಲಿಯನ್ ಜನರಲ್ಲಿ ನಾವೂ ಒಬ್ಬರಾ ಅನ್ನೋ ಅನುಮಾನ ಹುಟ್ಟಿರುತ್ತದೆ..!! ಕೀಮೋ ಬ್ರೈನ್ ಬಗ್ಗೆ ನಾನು ಮೊದಲು ಕೇಳಿದಾಗ ನನಗೂ ಕೀಮೋ ಬ್ರೈನ್ ಇದೆಯೋ ಏನೋ ಅಂತ ನನ್ನ ಕೆಲಸಗಳ ಬಗ್ಗೆ ಬಹಳ ಗಮನಹರಿಸಿದ್ದೆ, ಆಮೇಲೆ ಹಾಗೇನೂ ಇಲ್ಲ ಎಂದು ಗೊತ್ತಾಗಿತ್ತು. ಕೆಲವೊಮ್ಮೆ ಹಾಗೆ, ರೋಗ ಲಕ್ಷಣಗಳ ಬಗ್ಗೆ ಜಾಸ್ತಿ ತಿಳಿದುಕೊಳ್ಳುತ್ತಾ ಹೋದಂತೆಲ್ಲಾ ನಮಗೂ ಈ ಲಕ್ಷಣ ಇದೆಯೇನೋ ಅಂತ ಅನಿಸೋಕೆ ಶುರುವಾಗಿ ಬಿಟ್ಟಿರುತ್ತದೆ. ಸೈಕೋಪ್ಯಾಥಾಲಜಿ ಓದುವಾಗಲಂತೂ ಇರೋ ಬರೋ ರೋಗದ ಲಕ್ಷಣಗಳಷ್ಟು ನನಗೇ ಇದೆಯೇನೋ ಅಂತ ಅನಿಸಿದ್ದಿದೆ. ಎಷ್ಟೋ ಬಾರಿ ರೋಗಗಳ ಬಗ್ಗೆ ಜಾಸ್ತಿ ತಿಳಿದುಕೊಳ್ಳಬಾರದಪ್ಪ ಅಂತ ಅಂದುಕೊಂಡಿದ್ದು ಇದೆ.!
ಇತ್ತೀಚೆಗೆ ’ದ ಫ್ಲ್ಯಾಶ್’ ಅನ್ನೋ ಇಂಗ್ಲಿಷ್ ಸೀರೀಸ್ ನೋಡುತ್ತಿದ್ದೆ. ಅದರಲ್ಲಿ ಹೀರೋ ಅದೇನೋ ಪಾರ್ಟಿಕಲ್ ಆಕ್ಸಿಲರೇಷನ್ ಎಕ್ಸ್’ಪ್ಲೋಡ್ ಆಗಿದ್ದರ ಪರಿಣಾಮವಾಗಿ ಅತ್ಯಂತ ವೇಗದ ಮನುಷ್ಯನಾಗಿ ಬಿಡುತ್ತಾನೆ. ಅದನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತಿದ್ದೆ, ಕೀಮೋ ಪರಿಣಾಮದಿಂದ ಈ ಕೀಮೋ ಫಾಗ್ ಆಗಿ ಕ್ಷಮತೆ ಕಡಿಮೆಯಾಗುವ ಬದಲು, ಬೌದ್ಧಿಕ ಕ್ಷಮತೆ ಸಿಕ್ಕಾಪಟ್ಟೆ ಜಾಸ್ತಿಯಾಗೊ ಹಾಗೆ ಇರಬೇಕಿತ್ತಪ್ಪ ಅಂತ. ಆದರೆ ಅದೆಲ್ಲಾ ಆಗೋದು ಸಿನೆಮಾ ಅಥವ್ ಸೀರಿಯಲ್’ಗಳಲ್ಲಿ ಮಾತ್ರ ಬಿಡಿ! ಹಾಗಂತ ಈ ಕೀಮೋ ಫಾಗ್’ಗೆ ಪರಿಹಾರವೇ ಇಲ್ಲ ಅಂತೇನಿಲ್ಲ. ಖಂಡಿತಾ ಪರಿಹಾರವಿದೆ. ಕೀಮೋ ಫಾಗ್’ಗೆ ಅಂತಲೇ ಒಂದು ಟ್ರೈನಿಂಗ್ ಇದೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲೇ ಕೀಮೋ ಫಾಗ್ ಕಂಡು ಬಂದಲ್ಲಿ ಆಗಲೇ ಆರಂಭಿಸುತ್ತಾರೆ, ಚಿಕಿತ್ಸೆಯ ನಂತರ ಕಂಡು ಬಂದರೆ ನಂತರದ ದಿನಗಳಲ್ಲೂ ಈ ಟ್ರೈನಿಂಗ್’ನ್ನು ನೀಡಲಾಗುತ್ತದೆ.
ಈ ಕೀಮೋ ಹಾಗೂ ಅದರ ಸೈಡ್ ಎಫೆಕ್ಟ್’ಗಳು ಬೇರೆ ರೀತಿಯಲ್ಲಿಯೂ ನಮ್ಮನ್ನ ಕಾಡುವುದಿದೆ. ೫ನೇ ಕೀಮೋಗಾಗಿ ಆಸ್ಪತ್ರೆಗೆ ಅಡ್ಮಿಟ್ ಆದ ಸಂದರ್ಭ. ಕೀಮೋ ಸಂಜೆಯಿಂದ ಕೊಡುವವರಿದ್ದರು. ಆದರೆ ನನಗೆ ಮಧ್ಯಾಹ್ನ ಊಟವಾಗುತ್ತಿದ್ದಂತೆಯೇ ವಾಂತಿಯಾಗಿತ್ತು. “ಶ್ರುತಿ.. ನಿನಗಿನ್ನೂ ಕೀಮೋ ಆರಂಭಿಸಿಲ್ಲ. ನೆನಪಿದೆ ತಾನೆ?!” ಎಂದಿದ್ದರು ಅಪ್ಪ. ನಾನು ಸುಮ್ಮನೆ ನಕ್ಕಿದ್ದೆ. ಸೈಡ್ ಎಫೆಕ್ಟ್’ಗಳು ನಮ್ಮ ಮನಸನ್ನು ಎಷ್ಟರ ಮಟ್ಟಿಗೆ ಆವರಿಸಿಬಿಡುತ್ತದೆಂದರೆ, ಕೊನೆ ಕೊನೆಗೆ ಆ ವಾತಾವರಣಕ್ಕೆ ಹೋದರೆ ಸಾಕು ಅವು ಶುರುವಾಗಿ ಬಿಟ್ಟಿರುತ್ತದೆ ಕೀಮೋ ಕೊಡುವ ಮೊದಲೇ! ನಮ್ಮೂರಿನವರೇ ಆದ ಸರ್ವೈವರ್ ಒಬ್ಬರು ಹೇಳುತ್ತಿದ್ದರು, “ನನಗಂತೂ ಆಸ್ಪತ್ರೆಗೆ ಇನ್ನೇನು ಹೊರಟೆ ಅನ್ನುವಾಗಲೇ ವಾಂತಿ ಶುರುವಾಗಿಬಿಡುತ್ತಿತ್ತು.” ಅಂತ.
ಇತ್ತೀಚೆಗೆ ಅವಿನೋಮ್ ಲೆರ್ನರ್ ಎಂಬವರು ಈ ತರಹದ್ದೇ ಸಮಸ್ಯೆಯ ಕುರಿತು ಚರ್ಚಿಸಿದ್ದರು. ಹಲವು ಕ್ಯಾನ್ಸರ್ ಪೇಷಂಟ್’ಗಳು ’ನನಗೆ ಕೀಮೋ ಮಾತ್ರೆಯನ್ನು ನುಂಗಲಾಗುತ್ತಿಲ್ಲ” ಎಂಬ ಸಮಸ್ಯೆಯೊಂದಿಗೆ ಇವರ ಬಳಿ ಬಂದಿದ್ದಿದೆ. (ಹಾಂ.. ಕೀಮೋ ಅನ್ನು ದ್ರವರೂಪದ ಮೂಲಕ ನರಗಳಿಗೆ ಕೊಡುವುದಲ್ಲದೇ ಬಾಯಿಯ ಮೂಲಕ ತೆಗೆದುಕೊಳ್ಳುವಂಥದ್ದು ಕೂಡ ಇದೆ). ಹಾಗಂತ ಅವರಿಗೆ ಅನ್ನನಾಳದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಉಳಿದ ಆಹಾರ ಪದಾರ್ಥಗಳನ್ನ ಆರಾಮಾಗಿಯೇ ನುಂಗಬಲ್ಲರು. ಆದರೆ ಕೀಮೋ ಮಾತ್ರೆಯನ್ನು ಮಾತ್ರ ನುಂಗಲಾಗುವುದಿಲ್ಲ. ಸೈಡ್ ಎಫೆಕ್ಟ್’ಗಳು ಎಷ್ಟರ ಮಟ್ಟಿಗೆ ಕಾಡಬಲ್ಲದು ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಮನಸ್ಸು ಹಾಗೂ ದೇಹದ ಸಂಬಂಧ ಹೇಗಿರುತ್ತದೆ ಅನ್ನುವುದಕ್ಕೆ ಕೂಡ ಉತ್ತಮ ನಿದರ್ಶನ. ಇಂತಹ ಸಂದರ್ಭಗಳಲ್ಲಿ ರೋಗಿಗಳಿಗೆ ಸಾಮಾನ್ಯವಾಗಿ ದೃಶ್ಶೀಕರಣ ಮಾಡಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಕೆಲವೊಮ್ಮೆ ಹಿಪ್ನೋಥೆರಪಿ ಕೂಡ ಮಾಡಲಾಗುತ್ತದೆ.
ಒಟ್ಟಾರೆ ಈ ಸೈಡ್ ಎಫೆಕ್ಟ್’ಗಳು ಎಲ್ಲಾ ರೀತಿಯಲ್ಲೂ ಕ್ಯಾನ್ಸರ್ ರೋಗಿಯನ್ನ ಕಾಡುತ್ತಿರುತ್ತದೆ. ಕೆಲವೊಮ್ಮೆ ಅದು ಚಿಕಿತ್ಸೆಯೊಂದಿಗೆ ಮುಗಿದು ಹೋದರೆ, ಕೆಲವೊಂದು ಚಿಕಿತ್ಸೆಯ ನಂತರವೂ ಕಾಡುತ್ತಲಿರುತ್ತದೆ. ಆದರೆ ಎಲ್ಲದಕ್ಕೂ ಪರಿಹಾರವಿದೆ ಎಂಬುದೇ ಸಮಾಧಾನ.