ಅಂಕಣ

ಸಾಮಾಜಿಕ ಜಾಲತಾಣದಿಂದ ಸಮಾಜಸೇವೆಯತ್ತ..‌.

‘ಅಲ್ಲೊಬ್ಬ ಯುವಕ ತನ್ನ ಜಂಗಮವಾಣಿಯ ಸ್ಪರ್ಶಪರದೆಯನ್ನು ಅದುಮುತ್ತಾ ಏನನ್ನೋ ಬರೆಯುತ್ತಿದ್ದ, ಮರುಕ್ಷಣದಲ್ಲಿಯೇ ಮತ್ತೆಲ್ಲೋ ದೂರ ದೂರದ ಊರುಗಳಲ್ಲಿ ಕುಳಿತ ಒಂದಷ್ಟು ಯುವಕರ ಜಂಗಮವಾಣಿಯಲ್ಲಿ ಸಂದೇಶದ ಘಂಟೆ ಸದ್ದು‌ ಮಾಡತೊಡಗಿತು. ಅವರೆಲ್ಲಾ ತಾವು ಕುಳಿತಿದ್ದಲ್ಲಿಯೇ ತಮ್ಮ ತಮ್ಮ ಜಂಗಮವಾಣಿಯನ್ನು ಕೈಗೆತ್ತಿಕೊಂಡು ಅದರ ಮೇಲೆ ಬೆರಳಾಡಿಸುತ್ತಾ ಗಂಭೀರವಾಗಿ ಕುಳಿತುಬಿಟ್ಟರು. ಪರಸ್ಪರ ಮಾತಿಲ್ಲ, ಕತೆಯಿಲ್ಲ‌. ಅತ್ತಿಂದಿತ್ತ ಸಂದೇಶಗಳ ವಿನಿಮಯವಾಗಿ ಸಂದೇಶದ ಘಂಟೆಗಳ ಸದ್ದು ಮಾತ್ರವೇ ಕೇಳಿಸುತ್ತಿತ್ತು. ಕೊನೆಗೊಮ್ಮೆ ಎಲ್ಲವೂ ಸ್ತಬ್ಧವಾಯಿತು. ಎಲ್ಲರೂ ನಿರಾಳವಾಗಿ ನಿಟ್ಟುಸಿರುಬಿಟ್ಟರು. ಏನನ್ನೋ ಸಾಧಿಸಿದ ಧನ್ಯತಾಭಾವ ಆ ಯುವಕರ ಮುಖದಲ್ಲಿ ಕಂಗೊಳಿಸುತ್ತಿತ್ತು. ಆದರೆ ಪಕ್ಕದಲ್ಲಿ ಕುಳಿತವರಿಗೆ ಅವರೊಳಗೆ ಏನು ನಡೆಯುತ್ತಿದೆಯೆನ್ನುವ ಪರಿವೆಯೇ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಒಂದು ದಿನ ಆ ದೂರ ದೂರದ ಊರಿನ ಜನರೆಲ್ಲ ಒಂದು ಮನೆಯ ಮುಂದೆ ದಿಢೀರನೆ ಪ್ರತ್ಯಕ್ಷರಾಗಿಬಿಟ್ಟರು. ನೋಡು ನೋಡುತ್ತಿದ್ದಂತೆಯೇ ಅವರೆಲ್ಲರೂ ಆ ಮನೆಯೊಳಗೆ ನುಗ್ಗಿಯೇ ಬಿಟ್ಟರು. ತಾವು ಸಹಿ‌ ಮಾಡಿದ್ದ ಚೆಕ್ ಹಾಳೆಯೊಂದರ ಮೇಲೆ ದೊಡ್ಡ ಮೊತ್ತದ ಸಂಖ್ಯೆಯೊಂದನ್ನು ನಮೂದಿಸಿ ಆ ಮನೆಯ ಸದಸ್ಯನೊಬ್ಬನ ಕೈಗಿತ್ತು ಹೊರಟೇ ಬಿಟ್ಟರು. ಹೌದು, ಆ ಮನೆಯ ಆಧಾರಸ್ತಂಭವಾಗಿದ್ದ ಯುವಕನೊಬ್ಬ ಅನಿರೀಕ್ಷಿತ ಅಪಘಾತದಿಂದಾಗಿ ಹಾಸಿಗೆ ಹಿಡಿದು ನರಳುತ್ತಾ ಚಿಕಿತ್ಸೆಗೆ ಹಣವಿಲ್ಲದೆ ಜೀವನ್ಮರಣ ಸ್ಥಿತಿಯಲ್ಲಿಯೇ ಒದ್ದಾಡುತ್ತಾ ಬದುಕಿನ ಕೊನೆಯ ಕ್ಷಣಗಳನ್ನು ಎದುರು ನೋಡುತ್ತಿದ್ದ. ಈ ಯುವಕರ ತಂಡ ತಮ್ಮ ಜಂಗಮವಾಣಿಯನ್ನು ಅದುಮುತ್ತಾ ಅದುಮುತ್ತಾ ಅತ್ತಿಂದಿತ್ತ ಸಂದೇಶವನ್ನು ರವಾನಿಸುತ್ತಾ ಚರ್ಚಿಸುತ್ತಿದ್ದದ್ದು ಇದೇ ಯುವಕನ ಚಿಕಿತ್ಸೆಗೆ ಹಣ ಹೊಂದಿಸುವ ಕುರಿತಾಗಿಯೇ.! ಸಹಿ ಮಾಡಿದ ಚೆಕ್ ಮೇಲೆ ದೊಡ್ಡ ಮೊತ್ತದ ಹಣವನ್ನು ನಮೂದಿಸಿ ಆ ಯುವಕನ ಕೈಗಿತ್ತದ್ದು ಆತನ ಚಿಕಿತ್ಸೆಯ ವೆಚ್ಚಕ್ಕಾಗಿಯೇ..! ಬದುಕಿನಲ್ಲಿ ಭರವಸೆಯ‌ನ್ನೇ ಕಳೆದುಕೊಂಡಿದ್ದ ಆ ಮನೆಯಲ್ಲೀಗ ಹೊಸ ಆಶಾಕಿರಣ ಮೂಡಿತ್ತು. ಚಿಕಿತ್ಸೆಗೆ ಬೇಕಾದ ಪೂರ್ತಿ ಹಣ ಹೊಂದಾಣಿಕೆಯಾದ ಕಾರಣ ಆ ಯುವಕನನ್ನು ಮರುದಿನವೇ ಆಸ್ಪತ್ರೆಗೆ ಹೊತ್ತೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮರಣದ ಮನೆಯ ಬಾಗಿಲು ತಟ್ಟಿ ಬಂದಿದ್ದ ಆ ಯುವಕ ಇಂದು ಮರುಜೀವ ಪಡೆದುಕೊಂಡು ಆನಂದದ ಅಲೆಗಳಲ್ಲಿ ತೇಲಾಡುತ್ತಾ ಕಣ್ತುಂಬಿಕೊಳ್ಳುತ್ತಿದ್ದಾನೆ‌. ಆದರೆ ಆ ಯುವಕರ ಗುಂಪು ಅಷ್ಟೊಂದು ಹಣವನ್ನು ಅತೀ ಶೀಘ್ರದಲ್ಲಿ ಸಂಗ್ರಹಿಸಿದ್ದು ಹೇಗೆ? ಅವರಿಗೆ ರೋಗಿಯ ನರಳಾಟದ ಮಾಹಿತಿ‌ ಕೊಟ್ಟವರಾರು? ಅಷ್ಟಕ್ಕೂ ಆ ಯುವಕರಾದರೂ ಯಾರು? ಅನ್ನುವುದು ಯಾರಿಗೂ ಗೊತ್ತಿರಲಿಲ್ಲ.!’

ಮತ್ತೊಂದು ಘಟನೆ, ಯಾರೋ ಒಂದಿಬ್ಬರು ಯುವಕರು ಆಸ್ಪತ್ರೆಯೊಂದಕ್ಕೆ ತೆರಳಿ ಯಾರೋ ಗುರುತು ಪರಿಚಯವಿರದ ರೋಗಿಯೊಬ್ಬರಿಗೆ ರಕ್ತದಾನ ಮಾಡಿ ಮತ್ತೆ ತಮ್ಮ ಕರ್ತವ್ಯಕ್ಕೆ ತೆರಳಿಬಿಟ್ಟರು. ಅಲ್ಲಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ವ್ಯಕ್ತಿಗೆ ಸದ್ದು ಸುದ್ದಿಲ್ಲದೆ ರಕ್ತ ಪೂರೈಕೆಯಾಗಿಬಿಟ್ಟಿತು. ರೋಗಿಯ ಮನೆಯವರಿಗೆ ಆಶ್ಚರ್ಯ..! ಯಾಕೆಂದರೆ ರಕ್ತ ಪೂರೈಕೆ ಮಾಡಿದ ಯುವಕರು ಯಾರೆಂದು ಪರಿಚಯವೇ ಇಲ್ಲ.! ಎಲ್ಲಿಂದ ಬಂದರು? ಹೇಗೆ ಬಂದರು? ಯಾರು ಮಾಹಿತಿ ಕೊಟ್ಟರು? ಅನ್ನುವ ವಿಚಾರವೇ ಗೊತ್ತಿಲ್ಲ. ಆಸ್ಪತ್ರೆಯ ರಕ್ತನಿಧಿ ವಿಭಾಗದಲ್ಲಿ ವಿಚಾರಿಸಿದಾಗ ‘ಒಂದಿಬ್ಬರು ಯುವಕರು ಬಂದು ನಿಮಗಾಗಿ ಕೊಡುವುದಕ್ಕೆ ರಕ್ತದಾನ ಮಾಡಿ ಹೋಗಿದ್ದಾರೆ’ ಅನ್ನುವ ಮಾಹಿತಿಯಷ್ಟೇ ಲಭ್ಯವಾಗಿತ್ತೇ ಹೊರತು ಅವರಾರು ಅನ್ನುವುದು ಗೊತ್ತೇ ಇರಲಿಲ್ಲ.! ಆದರೆ ಆ ರಕ್ತದಾನಿ ತಂಡದ ಯುವಕರು ಮಾತ್ರ ಅಗೋಚರವಾಗಿಯೇ ತೆರೆಮರೆಯಲ್ಲಿ ನಿಂತು ಅಪರಿಚಿತ ರೋಗಿಗಳಿಗೂ ರಕ್ತದಾನ ಮಾಡುತ್ತಾ ನಿಜವಾದ ಅರ್ಥದಲ್ಲಿ ‘ರಕ್ತಸಂಬಂಧಿ’ಗಳಾದ ಖುಷಿಯಲ್ಲಿ ಮೈಮರೆಯುತ್ತಿದ್ದಾರೆ.’

‘ಆಕೆ ತುಂಬಾ ಪ್ರತಿಭಾವಂತೆ ಹುಡುಗಿ. ಶೇಕಡಾ 80 ಅಂಕಗಳೊಂದಿಗೆ ಹತ್ತನೆಯ ತರಗತಿಯಲ್ಲಿ ತೇರ್ಗಡೆ ಹೊಂದಿದ್ದಳು. ಆದರೇನು ಮಾಡೋಣ? ಮುಂದಿನ ಉನ್ನತ ವ್ಯಾಸಂಗಕ್ಕೆ ಆಕೆಯ ಮನೆಯಲ್ಲಿ ತೀವ್ರವಾದ ಆರ್ಥಿಕ ಅಡಚಣೆ. ಇನ್ನೇನು ಶಾಲೆಗೆ ಬೆನ್ನು ಹಾಕಿ ಅರ್ಧದಲ್ಲಿಯೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿಡುವುದರ ಹೊರತಾಗಿ ಆಕೆಗೆ ಅನ್ಯಥಾ ವಿಧಿಯಿರಲಿಲ್ಲ. ಯಾರದೋ ತೋಟದ ಕೂಲಿಯಾಳಾಗಿಯೋ, ಯಾವುದೋ ಕಾರ್ಖಾನೆಯ ಸಹಾಯಕಳಾಗಿಯೋ ಕೆಲಸಕ್ಕೆ ಸೇರುವುದೆಂದು ತೀರ್ಮಾನಿಸಿ ಆಕೆ ತನ್ನ ಕನಸುಗಳನ್ನು ಅದುಮಿಟ್ಟುಕೊಂಡು ಹತಾಶಳಾಗಿಬಿಟ್ಟಿದ್ದಳು‌. ಆದರೆ ಅದೊಂದು ದಿನ ಇದ್ದಕ್ಕಿದ್ದ ಹಾಗೆಯೇ ಯಾರೋ ಒಂದಷ್ಟು ಜನ ಬಂದು ಈಕೆಗೆ ಕಾಲೇಜಿನಲ್ಲಿ ಪ್ರವೇಶ ದೊರಕಿಸಿಕೊಡಲು ತಾವು ಸಹಕರಿಸುವುದಾಗಿ ಆಶ್ವಾಸನೆಯಿತ್ತು ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿ ಈ ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ವಿವರಿಸಿ, ಶುಲ್ಕ ಮತ್ತು ಡೊನೇಷನ್ ನಲ್ಲಿ  ಒಂದಷ್ಟು ವಿನಾಯಿತಿ ನೀಡಿ ಕಾಲೇಜಿನಲ್ಲಿ ಪ್ರವೇಶ ದೊರಕಿಸಿಕೊಡಬೇಕೆಂದು ದುಂಬಾಲು ಬಿದ್ದರು. ಆದರೆ ಹಣದ ಮುಖವನ್ನೇ ಎದುರು ನೋಡುತ್ತಿದ್ದ ಆ ವಿದ್ಯಾಸಂಸ್ಥೆಯವರ ಹೃದಯ ಈಕೆಯ ಬವಣೆಗೆ ಕರಗಲಿಲ್ಲ. ಅಲ್ಲಿಗೆ ಆಕೆಯ ಕನಸುಗಳು ಮತ್ತೆ ಕಮರಿ ಹೋದಂತಾಗಿತ್ತು. ಆದರೆ ಆ ಯುವಕರ ತಂಡ ಮಾತ್ರ ಸುಮ್ಮನೆ ಕುಳಿತಿರಲಿಲ್ಲ. ಹಣವನ್ನೇ ಎದುರು ನೋಡುತ್ತಾ ‘ಬಡವಳೆನ್ನುವ ಕಾರಣ’ಕ್ಕಾಗಿ ಆ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ ಆ ಶಿಕ್ಷಣ ಸಂಸ್ಥೆಯವರ ಮುಂದೆಯೇ ‘ಆಕೆಯ ಪೂರ್ತಿ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಪ್ರಮಾಣ ಮಾಡಿ’ ಅದನ್ನೊಂದು ಸವಾಲಾಗಿ ಸ್ವೀಕರಿಸಿದರು. ಅದರ ಪರಿಣಾಮವಾಗಿ ಒಂದಷ್ಟು ದಿನಗಳ ಬಳಿಕ ಆ ಯುವಕರ ತಂಡ ಮತ್ತೆ ಆಕೆಯ ಮನೆಯ ಮುಂದೆ ಪ್ರತ್ಯಕ್ಷವಾಯಿತು. ಇದೀಗ ಆಕೆಗೆ ತನ್ನ ಕಣ್ಣುಗಳನ್ನು ತನಗೇ ನಂಬಲಾಗಲಿಲ್ಲ, ಕಣ್ಣಂಚು ಒದ್ದೆಯಾಗಿಬಿಟ್ಟಿತು. ಯಾಕೆಂದರೆ ಈ ಸಲ ಆ ಯುವಕರು ಬರಿಗೈಯಲ್ಲಿ ಬಂದಿರಲಿಲ್ಲ. ಈಕೆಯ ವಿದ್ಯಾಭ್ಯಾಸಕ್ಕೆ ಬೇಕಾದ ಪೂರ್ತಿ ಹಣವನ್ನು ಹೊಂದಿಸಿ ತಂದಿದ್ದರು. ಈಕೆಯ ಕಮರಿ ಹೋದ ಕನಸು ಮತ್ತೆ ಚಿಗುರುವ ಕಾಲ ಸನ್ನಿಹಿತವಾಯಿತು. ಧೂಳು ತುಂಬಿ ಮೂಲೆ ಸೇರಿದ್ದ ಈಕೆಯ ಶಾಲೆಯ ಚೀಲವನ್ನು ಹೆಗಲಿಗೇರಿಸುವ ಪುಣ್ಯಕಾರ್ಯಕ್ಕೆ ಆ ಯುವಕರೆಲ್ಲಾ ಸದ್ದಿಲ್ಲದೆ ಸಿದ್ಧತೆ ನಡೆಸಿದ್ದರು. ಸಕಲ ವ್ಯವಸ್ಥೆಯೊಂದಿಗೆ ಆಕೆಯನ್ನು ಉತ್ತಮ ದರ್ಜೆಯ ಕಾಲೇಜೊಂದಕ್ಕೆ ಸೇರಿಸಿಯೂಬಿಟ್ಟರು.! ಆದರೆ ಆ ವಿದ್ಯಾರ್ಥಿನಿಗೆ ಆ ಯುವಕರ ಪರಿಚಯವೇ ಇರಲಿಲ್ಲ. ಅವರೇಕೆ ತನಗೆ ಸಹಾಯ ಮಾಡಿದರು? ಅಷ್ಟು ತ್ವರಿತವಾಗಿ ಅಷ್ಟೊಂದು ಹಣ ಹೊಂದಿಸಿ ಎಲ್ಲಿಂದ ತಂದರು? ಅನ್ನುವುದೆಲ್ಲಾ ಅವಳ ಪಾಲಿಗೆ ಇಂದಿಗೂ ನಿಗೂಢ.!’

‘ಆಕೆ ಪ್ರಾಯಪ್ರಬುದ್ಧಳಾದ ಯುವತಿ. ವಿವಾಹದ ವಯಸ್ಸು ಮೀರಿತ್ತು. ಮದುವೆ ಖರ್ಚಿಗೆ ಬೇಕಾದಷ್ಟು ಹಣ ಹೊಂದಿಕೆಯಾಗದ ಕಾರಣ ಯಾವ ಸಂಬಂಧಗಳೂ ಕೂಡಿ ಬಂದಿರಲಿಲ್ಲ. ಕೊನೆಗೊಂದು ಸಂಬಂಧ ಹೇಗೋ ಕೂಡಿ ಬಂದು ವಿವಾಹ ನಿಶ್ಚಿತಾರ್ಥ ಕಳೆದು ಮದುವೆಯ ದಿನವೂ ನಿಗದಿಯಾಗಿಬಿಟ್ಟಿತು. ದಿನಗಳು ಉರುಳುತ್ತಲೇ ಮದುವೆ ದಿನಾಂಕ ಹತ್ತಿರ ಬರತೊಡಗಿತ್ತು‌. ಮದುವೆ ಸಂಭ್ರಮದಲ್ಲಿ ಕುಣಿದಾಡಬೇಕಿದ್ದ ವಧುವಿನ ತಂದೆ ತಾಯಿ ಆತಂಕದಲ್ಲಿ ತೊಳಲಾಡುತ್ತಿದ್ದರು. ಯಾಕೆಂದರೆ ಇನ್ನೂ ಕೂಡ ಮದುವೆ ಖರ್ಚಿಗೆ ಹಣ ಹೊಂದಿಕೆಯಾಗಿರಲಿಲ್ಲ. ಮೈಮುಚ್ಚುವಷ್ಟಲ್ಲದಿದ್ದರೂ ಮರ್ಯಾದೆ ಉಳಿಸುವಷ್ಟು ಬಂಗಾರ ಹಾಕಲೇಬೇಕಿತ್ತು. ಅವರಿವರ ಕೈಕಾಲು ಹಿಡಿದು ಅಡ್ಡಬಿದ್ದಾಗ ಅಲ್ಪ ಸ್ವಲ್ಪ ಹಣ ಹೊಂದಿಕೆಯಾಯಿತಾದರೂ ಅದು ಮದುವೆ ಖರ್ಚಿಗೆ ಏನೇನೂ ಸಾಲದಾಯಿತು. ಕೊನೆಗೆ ಅನ್ಯ ದಾರಿಕಾಣದೆ ಕಂಗಾಲಾದ ವಧುವಿನ ತಾಯಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡುಬಿಟ್ಟರು. ಇವರ ಈ ದಯನೀಯ ಪರಿಸ್ಥಿತಿಯ ವಿಷಯ ಒಬ್ಬರಿಂದೊಬ್ಬರಿಗೆ ರವಾನಿಸಲ್ಪಟ್ಟು ಒಂದಷ್ಟು ಯುವಕರ ಕಿವಿಗೂ ಈ ವಿಚಾರ ತಲುಪಿತು. ಮತ್ತೆ ಯಥಾಪ್ರಕಾರ ಜಂಗಮವಾಣಿಯ ಮೇಲೆ ಬೆರಳಾಡಿಸುವಿಕೆ, ಸಂದೇಶದ ಘಂಟೆ ಮೊಳಗುವಿಕೆ ಪ್ರಾರಂಭವಾಯಿತು. ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ ಅನ್ನುವಾಗಲೇ ಇದ್ದಕ್ಕಿದ್ದ ಹಾಗೆ ಆ ಯುವಕರ ದಂಡು ಮದುವೆ ಮನೆಗೆ ಓಡೋಡಿ ಬಂದು ಖರ್ಚಿಗೆ ಬೇಕಾದಷ್ಟು ಹಣ ಕೊಟ್ಟು ಹೊರಟೇ ಬಿಟ್ಟಿತು. ಶುಭದಿನದ ಸುಮುಹೂರ್ತದಲ್ಲಿ ವಧುವಿನ ಕೊರಳಲ್ಲಿ ಮಾಂಗಲ್ಯಸರ ಗಂಟು ಬಿತ್ತು. ತನ್ನ ಮಗಳ ಕತ್ತಿನಲ್ಲಿ ನೇತಾಡುತ್ತಿರುವ ಮಂಗಳಸೂತ್ರವನ್ನು ಕಂಡಂತಹ ಆ ತಾಯಿ ಆನಂದದಿಂದ ಕಣ್ತುಂಬಿಕೊಂಡರು. ಒಂದು ಕಡೆಯಲ್ಲಿ ಆಕೆಗೆ ತಾನು ಆತ್ಮಹತ್ಯೆಯಿಂದ ಪಾರಾದ ಸಂತಸವಾದರೆ ಇನ್ನೊಂದೆಡೆಯಲ್ಲಿ ತನ್ನ ಮಗಳು ಮುತ್ತೈದೆಯಾದ ಸಂಭ್ರಮ.! ಸಂಬಂಧವಿಲ್ಲದ ಯಾರದೋ ಮದುವೆಗೆ ಇನ್ನಾರೋ ಗುರುತು ಪರಿಚಯವಿರದ ಯುವಕರು ಅತ್ಯಂತ ಕ್ಷಿಪ್ರಗತಿಯಲ್ಲಿ ಹಣ ಹೊಂದಿಸಿ ಕೊಡುವಲ್ಲಿ ಸಫಲರಾದದ್ದು ಹೇಗೆ? ಅವರು ಅನುಸರಿಸಿದ ಮಾರ್ಗ ಯಾವುದು? ಅನ್ನುವುದು ಅಲ್ಲಿದ್ದವರಾರಿಗೂ ಗೊತ್ತೇ ಇರಲಿಲ್ಲ.!’

‘ಈಗ ಇನ್ನೊಂದು ‌ಯುವಕರ ಗುಂಪು ಮತ್ತದೇ ಮೊದಲಿನ ತಂಡದ ಹಾಗೆಯೇ ಯಥಾಪ್ರಕಾರ ಜಂಗಮವಾಣಿಯ ಪರದೆಯ ಮೇಲೆ ‌ಬೆರಳಾಡಿಸುತ್ತಾ ಕುಳಿತುಬಿಟ್ಟಿತು. ಇದ್ದಕ್ಕಿದ್ದ ‌ಹಾಗೇ ಒಂದು ದಿನ ಆ ಯುವಕರ ದಂಡು ಒಂದು ಗುಡಿಸಲಿನ ಮುಂದೆ ಹಾಜರಾಯಿತು. ಅಕ್ಕಪಕ್ಕದವರೆಲ್ಲಾ ಬೆರಗುಗಣ್ಣಿನಿಂದ ನೋಡುತ್ತಿದ್ದಂತೆಯೇ ಆ ಯುವಕರ ತಂಡ ಹರಕು ಮುರುಕು ಗುಡಿಸಲನ್ನು ನೆಲಸಮ ಮಾಡಿಬಿಟ್ಟಿತು. ಬಿರುಸಿನ‌ ಓಡಾಟ, ಕೆಲಸಗಳೆಲ್ಲಾ ಪ್ರಾರಂಭವಾಯಿತು‌. ಕೆಲವೇ ತಿಂಗಳಲ್ಲಿ ಆ ಗುಡಿಸಲಿದ್ದ ಜಾಗದಲ್ಲಿ ಸುಸಜ್ಜಿತವಾದ ಪುಟ್ಟ ಮನೆಯೊಂದು ತಲೆಯೆತ್ತಿ ನಿಂತಿತ್ತು‌. ಹೋಮ ಹವನಗಳೊಂದಿಗೆ ಗೃಹಪ್ರವೇಶದ ಕಾರ್ಯವೂ ಶೀಘ್ರವಾಗಿ ಮುಗಿದು ಹೋಯಿತು. ಆ ಮನೆಯ ವೃದ್ಧ ದಂಪತಿಗಳ ಕಣ್ಣು ತಂತಾನೆ ತುಂಬಿಕೊಂಡಿತು. ಮಾತು ಹೊರಡದೆ ಮೂಕವಾದ ಆ ಹಿರಿಯ ಜೀವಗಳು ಈ ಯುವಕರಿಗೆ ಹೃದಯತುಂಬಿ ಹರಸುವುದರ ಹೊರತಾಗಿ ಬೇರೇನೂ ಮಾಡಲು ಸಾಧ್ಯವಾಗಲಿಲ್ಲ‌. ಅವರಾರೋ ಇವರಾರೋ? ಒಬ್ಬರಿಗೊಬ್ಬರ ಸಂಬಂಧವೇ ಇಲ್ಲ, ಪರಸ್ಪರ ಗುರುತು ಪರಿಚಯ ಕೂಡಾ ಇಲ್ಲ. ಎಲ್ಲರೂ ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತಿದ್ದಂತೆಯೇ ಆ ಯುವಕರ ದಂಡು ದೂರ ದೂರ ಸರಿದು ಹೊರಟು ಹೋಗಿ ಮತ್ತೆ ಮಾಯವಾಗಿಬಿಟ್ಟಿತು. ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕಾಯುತ್ತಾ ಕೂರುವುದಕ್ಕೆ ಅವರಿಗೆ ಸಮಯವಿಲ್ಲ, ತಮ್ಮ ಉದ್ದೇಶಿತ ಯೋಜನೆ ಮುಗಿದ ಕೂಡಲೇ ಆ ಯುವಕರು ಅಲ್ಲಿಂದ ಹೊರಟುಬಿಡುತ್ತಾರೆ. ಯಾಕೆಂದರೆ ಇನ್ನಾರದೋ ಗುಡಿಸಲನ್ನು ಕೆಡವಿ ನೆಲಸಮ ಮಾಡಿ ಅವರಿಗೊಂದು ಭದ್ರವಾದ ಸೂರು ಕಟ್ಟಿಸಿಕೊಡಬೇಕು, ಅರ್ಧದಲ್ಲಿ ನಿಂತುಹೋದ ಮದುವೆ ನಿರಾತಂಕವಾಗಿ ನಡೆಯಲು ಹಣದ ಸಹಾಯ ಮಾಡಬೇಕು, ವಿದ್ಯಾಭ್ಯಾಸಕ್ಕೆ ಆರ್ಥಿಕ ಅಡಚಣೆಯಿರುವ ವಿದ್ಯಾರ್ಥಿಗಳನ್ನು ಹುಡುಕಿ ಮತ್ತೆ ಶಾಲೆಗೆ ಕಳಿಸಬೇಕು, ಚಿಕಿತ್ಸೆಗೆ ಹಣವಿಲ್ಲದೆ ನರಳುವ ರೋಗಿಗಳನ್ನು ಹುಡುಕಿ ಹಣ ಹೊಂದಿಸಿ ಆಸ್ಪತ್ರೆಗೆ ಸೇರಿಸಬೇಕು, ರಕ್ತದ ಬೇಡಿಕೆ ಬಂದಾಗ ತ್ವರಿತವಾಗಿ ರಕ್ತ ಪೂರೈಕೆ ಮಾಡಬೇಕು.!! ಇಷ್ಟೆಲ್ಲಾ ಕೆಲಸಗಳಿರುವಾಗ ಒಂದೇ ಕಡೆ ಹೆಚ್ಚು ಹೊತ್ತು ಕುಳಿತು ಕಾಲಹರಣ ಮಾಡಲು ಸಮಯವಾದರೂ ಎಲ್ಲಿದೆ.?!’

‘ಇನ್ನೊಂದು ಯುವಕರ ತಂಡದ ಕಾರ್ಯವೈಖರಿ ಇವೆಲ್ಲಕ್ಕಿಂತಲೂ ಸ್ವಲ್ಪ ಭಿನ್ನ. ಈ ಯುವಕರ ಜಂಗಮವಾಣಿಯಿಂದಲೂ ಒಂದಷ್ಟು ಸಂದೇಶಗಳು ಅತ್ತಿಂದಿತ್ತ ಓಡಾಡುತ್ತವೆ. ಒಂದು ನಿರ್ದಿಷ್ಟ ದಿನ ಈ ಯುವಕರೆಲ್ಲಾ ತಾವು ಮೊದಲೇ ಗುರುತಿಸಿದ ಶ್ರೀಮಂತ ಮತ್ತು ಮಧ್ಯಮ ವರ್ಗದ ಮನೆಗಳ ಮುಂದೆ ಹಾಜರಾಗುತ್ತಾರೆ. ಆ ಪ್ರತೀ ಮನೆಯವರು ಕೂಡ ಒಂದೊಂದು ಮೂಟೆಯನ್ನು ಇವರ ಕೈಗಿಡುತ್ತಾರೆ. ಎಲ್ಲಾ ಮನೆಗಳಿಂದಲೂ ಸಂಗ್ರಹಿಸಿದ ಆ ಮೂಟೆಗಳನ್ನು ಒಂದು ಕಡೆ ರಾಶಿ ಹಾಕಿ ಬಿಚ್ಚಲಾಗುತ್ತದೆ. ಅಲ್ಲಿ ತಮಗೆ ಬೇಕಾದ ರೀತಿಯಲ್ಲಿ ಅದನ್ನು ಬೇರ್ಪಡಿಸಿ ಚಿಕ್ಕ ಚಿಕ್ಕ ಚೀಲಗಳಲ್ಲಿ ಪ್ರತ್ಯೇಕವಾಗಿ ತುಂಬಿ ಅದನ್ನು ವಾಹನದಲ್ಲಿ ಜೋಡಿಸಲಾಗುತ್ತದೆ. ಅಲ್ಲಿಂದ ಮತ್ತೆ ಇವರ ಪಯಣ ಮುಂದಕ್ಕೆ ಸಾಗುತ್ತದೆ. ಈ ಸಲದ ಇವರ ಪಯಣ ಸಿರಿವಂತ ಅಥವಾ ಮಧ್ಯಮ ವರ್ಗದ ಜನರ ಮನೆಗಳ ಕಡೆಗಲ್ಲ. ಬದಲಾಗಿ ಬಡ ಜನರು ವಾಸಿಸುವ ಕಾಲನಿಗಳ ಕಡೆಗೆ.! ರಸ್ತೆ ಬದಿಯ ಹರಕು ಜೋಪಡಿ ಅಥವಾ ಡೇರೆಯ ಕಡೆಗೆ‌.! ಆ ಬಡ ಗುಡಿಸಲಿನಲ್ಲಿ ವಾಸಿಸುವ ಮಕ್ಕಳನ್ನು ಕರೆದು ಅವರ ದೇಹದ ಅಳತೆಯನ್ನು ಅಂದಾಜು ಮಾಡಿ ಆ ಚಿಕ್ಕ ಚಿಕ್ಕ ಚೀಲಗಳನ್ನು ಅವರ ಕೈಗಿತ್ತು ಒಂದಷ್ಟು ಸಾಂತ್ವನದ ಮಾತುಗಳನ್ನಾಡಿ ಈ ಯುವಕರ ತಂಡ ಮತ್ತೆ ಸಂತೃಪ್ತಿಯಿಂದ ಮನೆಯ ಕಡೆಗೆ ಮರಳುತ್ತದೆ. ಬಹುಶಃ ಈ ರೀತಿ ಸುತ್ತುಬಳಸಿ ಹೇಳಿದರೆ ನಿಮಗೂ ಕುತೂಹಲ ಹೆಚ್ಚಾಗಬಹುದು. ಹೌದು, ಮನೆ ಮನೆಗೆ ಅಲೆದಾಡುತ್ತಾ ಈ ಯುವಕರ ತಂಡ ಮಾಡುತ್ತಿರುವ ಕೆಲಸವಾದರೂ ಏನು ಗೊತ್ತೇ.? ಸಿರಿವಂತ ಮಕ್ಕಳು ಬಳಸಿ ಬಿಸಾಡುವಂತಹ (ಧರಿಸಲು ಯೋಗ್ಯವಾದ) ಬಟ್ಟೆಗಳನ್ನು ಸಂಗ್ರಹಿಸಿ ಬಡಮಕ್ಕಳಿಗೆ ಹಂಚುವುದೇ ಈ ಯುವಕರ ವಿಶಿಷ್ಟವಾದ ಸೇವಾ ಚಟುವಟಿಕೆ.! ಅದೆಷ್ಟೋ ಮನೆಗಳಲ್ಲಿ ಸಿರಿವಂತ ಮಕ್ಕಳು ಧರಿಸಲು ಯೋಗ್ಯವಾದ ಬಟ್ಟೆಗಳನ್ನು ಕಸದ ತೊಟ್ಟಿಗೆ ಅಥವಾ ತ್ಯಾಜ್ಯ ವಸ್ತುಗಳ ಸಾಲಿಗೆ ಸೇರಿಸಿ ವೃಥಾ ಹಾಳು ಮಾಡುತ್ತಿದ್ದಾರೆ. ಅಂತಹ ಮನೆಗಳನ್ನು ಗುರುತಿಸಿ ಸಂಪರ್ಕಿಸುವ ಈ ಯುವಕರು ಅವರು ಬಳಸಿ ಬಿಸಾಡುವಂತಹ ಬಟ್ಟೆಗಳನ್ನು ಬಿಸಿನೀರಿನಲ್ಲಿ ಒಗೆದು ಶುಭ್ರವಾಗಿಸಿ ಇಸ್ತ್ರಿ ಮಾಡಿ ಮೂಟೆ ಕಟ್ಟಿಡಲು ಹೇಳುತ್ತಾರೆ. ಆ ಬಳಿಕ ಒಂದು ನಿರ್ದಿಷ್ಟ ದಿನ ಆ ಎಲ್ಲಾ ಮನೆಗಳಿಂದಲೂ ಬಟ್ಟೆಗಳನ್ನು ಸಂಗ್ರಹಿಸಿ ಬಡ‌ಮಕ್ಕಳಿಗೆ ವಿತರಿಸುತ್ತಾರೆ.!’

ಅಂದ ಹಾಗೆ, ಈ ಮೇಲೆ ನಾನು ಉಲ್ಲೇಖಿಸಿರುವ ಎಲ್ಲಾ ಘಟನೆಗಳು ಹೊಸದಾಗಿ ತೆರೆಯ ಮೇಲೆ ಬರಲಿರುವ ಯಾವುದೋ ಸಿನೆಮಾದ ದೃಶ್ಯವಲ್ಲ.! ಓದುಗರನ್ನು ರಂಜಿಸಲು ಹೆಣೆದಿರುವಂತಹ ಕಪೋಲ ಕಲ್ಪಿತ ಕಟ್ಟು ಕಥೆಯೂ ಅಲ್ಲ. ಬದಲಾಗಿ ವಾಟ್ಸಾಪ್ ಅನ್ನುವ ಸಾಮಾಜಿಕ ಜಾಲತಾಣದ  ಮೂಲಕ ಸಮಾಜ ಸೇವೆ ಮಾಡುತ್ತಾ ನೊಂದವರ ಬಾಳಿಗೆ ಆಶಾಕಿರಣವಾಗಿ ರಿಯಲ್ ಹೀರೋಗಳಾಗಲು ಹೊರಟಿರುವ ಯುವಕರ ಕಥೆಯಿದು.! ಇವರ ಈ ಎಲ್ಲಾ ಚಟುವಟಿಕೆಗಳ ಕುರಿತ ಚರ್ಚೆ ನಡೆಯುತ್ತಿರುವುದು ಹಾಗೂ ಅದಕ್ಕೆ ಸಂಬಂಧಿಸಿದ ರೂಪುರೇಷೆಗಳು ತಯಾರಾಗುತ್ತಿರುವುದು ಯಾವುದೋ ಹವಾನಿಯಂತ್ರಿತ ಬಹುಮಹಡಿಯ ಕಟ್ಟಡದೊಳಗಲ್ಲ.! ಬದಲಾಗಿ ತಮ್ಮ ಕೈಯೊಳಗಿರುವ ಪುಟ್ಟ ಪುಟ್ಟ ಜಂಗಮವಾಣಿಯೇ ಇವರ ಸೇವಾ ಚಟುವಟಿಕೆಗಳ ಚರ್ಚೆಯ ತಾಣ. ಈ ಎಲ್ಲಾ ಸೇವಾ ಚಟುವಟಿಕೆಗಳು ಹುಟ್ಟಿಕೊಂಡದ್ದು ಕೂಡಾ ಇದೇ ಜಂಗಮವಾಣಿಯ ವಾಟ್ಸಾಪ್ ಗುಂಪಿನ ಮೂಲಕ.! ಇಂದಿನ ವೇಗದ ಯುಗದಲ್ಲಿ ಜನರೆಲ್ಲಾ ಒಂದೆಡೆ ಸೇರಿ ಕುಳಿತು ಹರಟುವುದು ಬಹಳ ಅಪರೂಪದ ಸಂಗತಿ. ಇದಕ್ಕೆ ಪೂರಕವೆಂಬಂತೆ ಇಂದು ನಮ್ಮ ಕೈಯೊಳಗಿರುವ ಜಂಗಮವಾಣಿಯ ಫೇಸ್ಬುಕ್ , ವಾಟ್ಸಾಪ್ ಗಳೆಂಬ ಹೊಸ ಹೊಸ ಸಾಮಾಜಿಕ ಜಾಲತಾಣದ ಮಾಯಾಲೋಕದಲ್ಲಿ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ವಿದ್ಯಮಾನಗಳೆಲ್ಲಾ ಕ್ಷಣಾರ್ಧದಲ್ಲಿ ಕಣ್ಮುಂದೆ ಬರುತ್ತಿವೆ. ಹಾಗಾಗಿ ವ್ಯಕ್ತಿಗಳಿಗೆ ಅಂಟಿಕೊಳ್ಳುವುದಕ್ಕಿಂತಲೂ ತಂತ್ರಜ್ಞಾನಕ್ಕೆ ಅಂಟಿಕೊಂಡವರೇ ಅಧಿಕ. ಇದರಿಂದಾಗಿ ಒಂದೆಡೆ ಮಾನವೀಯ ಸಂಬಂಧಗಳು ಕಳಚಿಕೊಳ್ಳುತ್ತಿವೆ, ಯುವಕರೆಲ್ಲಾ ಹಾದಿ ತಪ್ಪುತ್ತಿದ್ದಾರೆ, ಸಮಾಜದಲ್ಲಿನ ವಿದ್ರೋಹಕ ಶಕ್ತಿಗಳಿಗೆ ಸಾಮಾಜಿಕ ಜಾಲತಾಣಗಳೂ ನೆರವಾಗುತ್ತಿವೆಯೆನ್ನುವ ಹಲವು ಆರೋಪಗಳು ಕೂಡಾ ಕೇಳಿ ಬರುತ್ತಿವೆ. ಇವೆಲ್ಲವೂ ಸತ್ಯವಾದರೂ ಕೂಡಾ ಈ ಎಲ್ಲಾ ಆರೋಪಗಳಿಗೆ ಅಪವಾದವೆಂಬಂತೆ ಒಂದಷ್ಟು ಯುವಕರು ಅದೇ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜಮುಖಿಯಾಗಿ ದುಡಿಯುತ್ತಿದ್ದಾರೆ ಅನ್ನುವುದು ಕೂಡಾ ಹಗಲಿನಷ್ಟೇ ಸ್ಪಷ್ಟ.! ಸಾಮಾಜಿಕ ಜಾಲತಾಣ ಅಥವಾ ಇನ್ನಿತರ ತಂತ್ರಜ್ಞಾನದ ಮೂಲಕ ಯುವಕರು ಹಾದಿ ತಪ್ಪಿದಾಗ ಬಹುಬೇಗ ಸುದ್ದಿಯಾಗುತ್ತವೆ ನಿಜ. ಆದರೆ ಅದೇ ಸಾಮಾಜಿಕ ಜಾಲತಾಣದ ಮೂಲಕ ಯುವಕರು ಸರಿದಾರಿಯಲ್ಲಿ ನಡೆಯುತ್ತಾ ಸಮಾಜಕ್ಕೆ ನೆರವಾಗುತ್ತಿದ್ದಾರೆನ್ನುವ ವಿಚಾರಗಳು ಸುದ್ದಿಯಾಗುವುದು ಬಹಳ ವಿರಳ. ಇಂದು ವಾಟ್ಸಾಪ್ ಅನ್ನುವ ಸಾಮಾಜಿಕ ಜಾಲತಾಣದ ಮೂಲಕ ಬಹಳಷ್ಟು ಸೇವಾ ಸಂಘಟನೆಗಳು ಹುಟ್ಟಿಕೊಂಡಿವೆ. ತಮ್ಮದೇ ರೀತಿಯಲ್ಲಿ ಸಮಾಜಮುಖಿಯಾಗಿ ಚಿಂತಿಸುವ ಸಮಾನ ಮನಸ್ಕ ಯುವಕರೆಲ್ಲಾ ಜೊತೆ ಸೇರಿ ತಮಗೆ ತೋಚಿದ ಹೊಸ ಹೊಸ ಚಿಂತನೆಗಳನ್ನು ವಾಟ್ಸಾಪ್ ಮೂಲಕ ಕಾರ್ಯರೂಪಕ್ಕೆ ತಂದು ಅದನ್ನು ಸಾಧಿಸಿ ತೋರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಇಂದು ಸಾಮಾಜಿಕ ಜಾಲತಾಣಗಳ ಮುಖಾಂತರ ಸಮಾಜದ ಕುಂದು ಕೊರತೆಗಳು ಬಹುಬೇಗ ಜನರನ್ನು ತಲುಪುತ್ತಿವೆ. ಆದರೆ ಅದೇ ಸಾಮಾಜಿಕ ಜಾಲತಾಣದ ಮೂಲಕ ಒಂದಷ್ಟು ಯುವಕರು ಅದಕ್ಕೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಾರದು‌. ಈ ಮೇಲೆ ತಿಳಿಸಿದ ಯುವಕರ ಎಲ್ಲಾ ತಂಡಗಳು ಕೂಡ ತಮ್ಮ ಗಮನಕ್ಕೆ ಬಂದಂತಹ ಯಾವುದಾದರೂ ಸಮಸ್ಯೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಅದರಲ್ಲಿ ಅತ್ಯಂತ ತುರ್ತು ಅಗತ್ಯವಿರುವ ಸಮಸ್ಯೆಯನ್ನು ಮೊದಲಿಗೆ ಪರಿಹರಿಸುವ ನಿಟ್ಟಿನಲ್ಲಿ ತಮ್ಮ ವಾಟ್ಸಾಪ್ ಗುಂಪುಗಳಲ್ಲಿ ಚರ್ಚಿಸಿ, ಯೋಜನೆ ರೂಪಿಸಿ ಹಣ ಸಂಗ್ರಹಿಸಲು ತೊಡಗುತ್ತವೆ. ಸಾರ್ವಜನಿಕರಿಂದ ಸಂಗ್ರಹಿಸಿದ ಈ ಹಣ ದುರುಪಯೋಗ ಆಗಲಾರದೇ ಅನ್ನುವ ಸಂಶಯ ಕೂಡಾ ಎಲ್ಲರನ್ನೂ ಕಾಡದೇ ಇರಲಾರದು. ಆದರೆ ಇದರ ಕುರಿತಾಗಿಯೂ ಈ ಯುವಕರು ಬಹಳಷ್ಟು ಜಾಗರೂಕತೆ ವಹಿಸುತ್ತಾರೆ. ಯಾವನೇ ವ್ಯಕ್ತಿ ಈ ಯುವಕರ ತಂಡಕ್ಕೆ ಹಣ ನೀಡುವುದಾದಲ್ಲಿ ಆ ಹಣವನ್ನು ನೇರವಾಗಿ ತಮ್ಮ ಸಂಘಟನೆಯ ಸದಸ್ಯರ ಜಂಟಿ ಬ್ಯಾಂಕ್ ಖಾತೆಗೇ ಜಮೆ ಮಾಡುವಂತೆ ಈ ಯುವಕರು ವಿನಂತಿಸುತ್ತಾರೆ. ಅಲ್ಲಿಂದ ನೇರವಾಗಿ ಫಲಾನುಭವಿಗೆ ಚೆಕ್ ಮೂಲಕ ಹಣವನ್ನು ಹಸ್ತಾಂತರ ಮಾಡಲಾಗುತ್ತದೆ. ಸಂಗ್ರಹವಾದ ಮೊತ್ತ ಹಾಗೂ ಫಲಾನುಭವಿಗಳಿಗೆ ನೀಡಿದ ಹಣದ ವಿವರ, ಉಳಿಕೆ ಹಣದ ವಿವರ ಎಲ್ಲವನ್ನೂ ಎಲ್ಲಾ ಸದಸ್ಯರಿಗೂ ತಲುಪಿಸುವ ಪಾರದರ್ಶಕ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದರ ಜೊತೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಕೂಡಾ ಎಚ್ಚರ ವಹಿಸಲಾಗುತ್ತದೆ. ನೆರವು ನೀಡುವವರು ಇದ್ದಾರೆ ಎಂದಾದಲ್ಲಿ ಅದನ್ನು ಪಡೆಯಲು ಕುಂಟು ನೆಪ ಹೇಳಿ ಬರುವವರೂ ಇಲ್ಲದಿಲ್ಲ. ಹಾಗಾಗಿ ಯಾವುದೇ ರೀತಿಯ ನೆರವಿನ ಬೇಡಿಕೆ ಬಂದಾಗ ಏಕಾಏಕಿಯಾಗಿ ನೆರವು ನೀಡುವ ಮುಟ್ಟಾಳತನವನ್ನು ಈ ಯುವಕರು ಮಾಡುವುದಿಲ್ಲ. ಬದಲಾಗಿ ಒಬ್ಬ ರೋಗಿಯ ಚಿಕಿತ್ಸೆಗಾಗಿ ಹಣದ ಬೇಡಿಕೆ ಬಂದಲ್ಲಿ ಆತನ ಚಿಕಿತ್ಸೆಯ ವೆಚ್ಚಕ್ಕೆ ಎಷ್ಟು ಹಣ ಬೇಕಾಗಿದೆ? ಆತನ ಚಿಕಿತ್ಸೆಗೆ ಸರಕಾರದಿಂದ ಸಿಗಬಹುದಾದ ಸವಲತ್ತುಗಳಿವೆಯೇ? ಮನೆಯಲ್ಲಿ ದುಡಿಯುವ ಸದಸ್ಯರು ಎಷ್ಟು ಮಂದಿ ಇದ್ದಾರೆ? ಆತನ ಇತರ ಸಂಪಾದನೆಯ ಮೂಲಕ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲವೇ? ಮನೆಯಲ್ಲಿ ಮದ್ಯವ್ಯಸನಿಗಳಿದ್ದು ಹಣವನ್ನು ವ್ಯರ್ಥವಾಗಿ ಹಾಳು ಮಾಡುತ್ತಿದ್ದಾರೆಯೇ? ಮುಂತಾದ ವಿವರಗಳನ್ನು ಸಂಗ್ರಹಿಸಿದ ಬಳಿಕ ಆತ ನಿಜವಾಗಿಯೂ ಅಶಕ್ತನೆಂದು ಖಾತ್ರಿಯಾದಲ್ಲಿ ಮಾತ್ರವೇ ಹಣದ ನೆರವನ್ನು ನೀಡಲಾಗುತ್ತದೆ. ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಹಣದ ಬೇಡಿಕೆ ಬಂದಾಗಲೂ ಅಷ್ಟೇ, ಆ ವಿದ್ಯಾರ್ಥಿಗೆ ಸ್ಕಾಲರ್ ಶಿಪ್ ಅಥವಾ ಇನ್ನಿತರ ಮೂಲದಿಂದ ಹಣ ಹೊಂದಿಸಲು ಸಾಧ್ಯವಿಲ್ಲವೇ? ಆತನ ಅಂಕಪಟ್ಟಿ ಅಥವಾ ಇತರ ಅರ್ಹತೆಗಳ ಮೂಲಕ ವಿಶೇಷ ಮೀಸಲಾತಿಯಿದ್ದು ಕಡಿಮೆ ವೆಚ್ಚದಲ್ಲಿ ವಿದ್ಯಾರ್ಜನೆ ನಡೆಸಲು ಸಾಧ್ಯವಿಲ್ಲವೇ? ಅನ್ನುವುದನ್ನೆಲ್ಲಾ ಪರಿಶೀಲಿಸಿದ ಬಳಿಕವೇ ನೆರವು ನೀಡಲಾಗುತ್ತದೆ. ಹಾಗಾಗಿ ಈ ಎಲ್ಲಾ ವಾಟ್ಸಾಪ್ ಗುಂಪುಗಳಲ್ಲಿ ನಡೆಯುವ ಸೇವಾ ಚಟುವಟಿಕೆಗಳ ಹಣ ದುರುಪಯೋಗ ಆಗಲಾರದು ಅನ್ನುವುದನ್ನು‌ ನಾವು ನಂಬಲೇಬೇಕು.

ಈ ಮೇಲಿನ ಚಟುವಟಿಕೆಗಳೆಲ್ಲಾ ಸಾಮಾಜಿಕ ಜಾಲತಾಣದ ಸಮಾಜಸೇವೆಯ ಮುಖವಾದರೆ ಇನ್ನೊಂದು ಬಹುಮುಖ್ಯ ವಿಚಾರವನ್ನಿಲ್ಲಿ ಪ್ರಸ್ತಾಪಿಸಲೇಬೇಕು. ಅದೇನೆಂದರೆ ಸಾಮಾಜಿಕ ಜಾಲತಾಣದ ಮೂಲಕ ನಡೆಯುತ್ತಿರುವಂತಹ ಸಾಹಿತ್ಯ ಸೇವೆ. ಒಂದು ಕಾಲದಲ್ಲಿ ಸಾಹಿತ್ಯ ಲೋಕದ ಹೊಸ ಮುಖಗಳು ಬರೆದಂತಹ ಕವಿತೆ, ಕಥೆ, ಲೇಖನ, ಪ್ರಬಂಧ ಮುಂತಾದ ಸೃಜನಶೀಲ ಸಾಹಿತ್ಯ ರಚನೆಗಳೆಲ್ಲವೂ ಸರಿಯಾದ ವೇದಿಕೆಯಿಲ್ಲದೆಯೋ, ಅದನ್ನು ಪತ್ರಿಕೆಗಳಿಗೆ ಕಳಿಸುವುದಕ್ಕೆ ಸಂಕೋಚವಾಗಿಯೋ, ಪುಸ್ತಕ ರೂಪದಲ್ಲಿ ಹೊರತರುವುದಕ್ಕೆ ಬಂಡವಾಳದ ಕೊರತೆಯಿಂದಾಗಿಯೋ ಓದುಗರಿಗೆ ತಲುಪದೆ ಎಲೆಮರೆಯ ಕಾಯಿಯ ಹಾಗೆ ಪುಸ್ತಕದೊಳಗೆ ಬಂದಿಯಾಗಿ ಕುಳಿತು ಕೊಳೆತು ಹೋಗುತ್ತಿದ್ದವು. ಆದರೆ ಇಂದು ಫೇಸ್ ಬುಕ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣದೊಳಗೆ ಕಾಲಿಟ್ಟಂತಹ ವ್ಯಕ್ತಿಗಳೆಲ್ಲಾ ತಾವು ಬರೆಯುತ್ತಾ ಬರೆಯುತ್ತಾ ಹಂತ ಹಂತವಾಗಿ ತಮ್ಮಲ್ಲಿನ ಬರಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯುವ ಬರಹಗಾರರೆಲ್ಲಾ ತಮ್ಮ ಬರಹಗಳನ್ನು ಯಾವುದೇ ಮುಲಾಜಿಲ್ಲದೆ ಸಾವಿರಾರು ಓದುಗರಿಗೆ ತಲುಪಿಸುವುದಕ್ಕೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಯುವ ಬರಹಗಾರರನ್ನೆಲ್ಲ ಒಂದುಗೂಡಿಸುವ ಉದ್ದೇಶದಿಂದಲೇ ಪುತ್ತೂರಿನ ಸುದಾನ ಶಾಲೆಯ ಶಿಕ್ಷಕಿಯೊಬ್ಬರು ತನ್ನ ಜಂಗಮವಾಣಿಯಲ್ಲಿ “ಸಾಹಿತ್ಯ ಲಹರಿ” ಅನ್ನುವ ವಾಟ್ಸಾಪ್ ಗುಂಪೊಂದನ್ನು ಪ್ರಾರಂಭಿಸಿಬಿಟ್ಟರು‌. ಹೀಗೆ ಸುಮ್ಮನೆ ತಮ್ಮ ಪರಿಚಿತ ಯುವ ಕವಿಗಳನ್ನೆಲ್ಲಾ ಒಂದು ಗುಂಪಿನಲ್ಲಿ ಸೇರಿಸಿ ಅವರ ರಚನೆಗಳನ್ನು ತಮ್ಮತಮ್ಮಲ್ಲೇ ಹಂಚಿ ಖುಷಿ ಪಡುವುದಷ್ಟೇ ಅವರ ಪ್ರಾರಂಭದ ಉದ್ದೇಶವಾಗಿತ್ತು. ಆದರೆ ಇದೀಗ ಸಾಮಾನ್ಯ ಕವಿಗಳಿಂದ ಹಿಡಿದು ಪ್ರಶಸ್ತಿ ಪುರಸ್ಕೃತರ ತನಕ ಸಾಹಿತಿಗಳು ಮಾತ್ರವಲ್ಲದೆ ಚಿತ್ರಕಲಾವಿದರು, ಸಂಗೀತಗಾರರು, ನಾಟಕ ಮತ್ತು ರಂಗಭೂಮಿ ಕಲಾವಿದರು, ಜ್ಯೋತಿಷಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು, ಸ್ವ-ಉದ್ಯೋಗಿಗಳು, ಇಂಜಿನಿಯರುಗಳು, ವೈದ್ಯರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಎಲ್ಲ ಬರಹಗಾರರು ಅದರಲ್ಲಿ ಸದಸ್ಯರಾಗಿದ್ದಾರೆ. ಕವನಗಳು, ಹನಿಗವಿತೆಗಳು, ಛಂದೋಬದ್ಧವಾದ ಷಟ್ಪದಿಗಳು, ಛಂದಸ್ಸಿನ ಚೌಕಟ್ಟಿಲ್ಲದ ರಚನೆಗಳು, ಭಾವಗೀತೆಗಳು, ದೇಶಭಕ್ತಿ, ಸಂಸ್ಕೃತಿ, ಪ್ರೇಮನಿವೇದನೆ, ವಿರಹವೇದನೆ, ಸಾಮಾಜಿಕ ವಿದ್ಯಮಾನಗಳು, ವಿಡಂಬನೆಗಳು…. ಹೀಗೆ ಅವರವರ ಭಾವಕ್ಕೆ ತಕ್ಕಂತೆ ಪ್ರತಿನಿತ್ಯ ಮುಂಜಾನೆಯಿಂದ ಮೊದಲ್ಗೊಂಡು ತಡರಾತ್ರಿಯ ತನಕ ಪುಂಖಾನುಪುಂಖವಾಗಿ ಕವಿಕೋಗಿಲೆಗಳೆಲ್ಲಾ ಆ ಸಾಹಿತ್ಯ ಲಹರಿಯೊಳಗೆ ಬಂದು ಕುಹೂ ಕೂಹೂ ಕೂಗುತ್ತಿವೆ‌, ಚಿಲಿಪಿಲಿಗುಟ್ಟುತ್ತಿವೆ. ಕೆಲವರು ಹೈಕುಗಳು ಮತ್ತು ಲಿಮರಿಕ್ ನಂತಹ ವಿಶಿಷ್ಟ ಕಾವ್ಯಪ್ರಯೋಗಗಳನ್ನೂ ಹರಿಯಬಿಡುತ್ತಿದ್ದಾರೆ. ಕೆಲವರು ಹೊಸ ಹೊಸ ಕವಿತೆಗಳಿಗೆ ರಾಗ ಸಂಯೋಜಿಸಿ ಲಹರಿಯೊಳಗೆ ಹರಿಯಬಿಟ್ಟು ರಂಜಿಸಿದರೆ ಕೆಲವರು ವಿಮರ್ಶೆ ಮಾಡಿ ಪ್ರೋತ್ಸಾಹಿಸುತ್ತಿದ್ದಾರೆ. ಹೀಗೆ ಈ ಸಾಹಿತ್ಯ ಕಲರವದಲ್ಲಿ ವರ್ಷ ಸರಿದದ್ದೇ ತಿಳಿಯಲಿಲ್ಲ. ಆಗಲೇ ಒಂದಿಬ್ಬರಿಗೆ ಹೊಸತೊಂದು ಯೋಚನೆ ಮೊಳಕೆಯೊಡೆಯಿತು. ಈ ಸಾಹಿತ್ಯ ತೋಟದಲ್ಲಿ ಅರಳಿದ ಕಾವ್ಯ ಪುಷ್ಪಗಳನ್ನು ಹೀಗೆಯೇ ವ್ಯರ್ಥ ಮಾಡಲು ಬಿಡಬಾರದು. ಇದನ್ನೆಲ್ಲ ಹೆಕ್ಕಿ ಸುಂದರವಾಗಿ ಪೋಣಿಸಿ ಕನ್ನಡಾಂಬೆಯ ಮುಡಿಗೇರಿಸಬೇಕೆಂಬ ಸಂಕಲ್ಪ ತೊಟ್ಟರು‌. ಅದರ ಪರಿಣಾಮವಾಗಿ ಇತ್ತೀಚೆಗೆ ಸಾಹಿತ್ಯ ಲಹರಿ ವಾಟ್ಸಾಪ್ ಬಳಗದ ವಾರ್ಷಿಕೋತ್ಸವದ ದಿನ “ಕಬ್ಬದೊಕ್ಕಲು” ಎಂಬ ಕವನ ಸಂಕಲನವೊಂದು ಸಾಹಿತ್ಯಲೋಕಕ್ಕೆ ಅರ್ಪಣೆಯಾಗಿಬಿಟ್ಟಿತು. ಇದರಲ್ಲಿ ಸಾಹಿತ್ಯ ಲಹರಿ ಗುಂಪಿನಿಂದ ಆಯ್ದ 46 ಕವಿಗಳ ತಲಾ ಮೂರು ಮೂರು ಕವನಗಳಿವೆ. ಹೀಗೆ ಪ್ರಾರಂಭದಲ್ಲಿ ಯಾವುದೇ  ಮಹತ್ವಾಕಾಂಕ್ಷೆಯನ್ನು ಹೊಂದಿರದೆ ಆರಂಭಗೊಂಡ ವಾಟ್ಸಾಪ್ ಗುಂಪೊಂದು ಹೊತ್ತಗೆಯೊಂದನ್ನು ಲೋಕಾರ್ಪಣೆ ಮಾಡುವ ಹಂತದ ತನಕ ಬೆಳೆದು ನಿಂತಿತು. ಆ ಮೂಲಕ ಸಾಮಾಜಿಕ ಜಾಲತಾಣಗಳಿಂದ ಸಾಹಿತ್ಯ ಲೋಕಕ್ಕೆ ಈ ರೀತಿಯಾಗಿಯೂ ಸೇವೆ ಸಲ್ಲಿಸಬಹುದೆಂಬ ಹೊಸ ಪರಿಕಲ್ಪನೆಯನ್ನು ತೆರೆದಿಡುವುದರ ಜೊತೆಗೆ ಯುವ ಬರಹಗಾರರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕಾರ್ಯಕ್ಕೆ ಸಾಮಾಜಿಕ ಜಾಲತಾಣವೂ ನಾಂದಿ ಹಾಡುವಂತಾಯಿತು.

ಹೀಗೆ ಸಾಮಾಜಿಕ ಜಾಲತಾಣದಿಂದ ಕೇವಲ ಮನರಂಜನೆ ಮಾತ್ರವಲ್ಲದೆ ಸದ್ದಿಲ್ಲದ ಸಮಾಜಸೇವೆಯ ಪುಣ್ಯಕೈಂಕರ್ಯಗಳು ನಡೆಯುತ್ತಿರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲದೇ ಇರಬಹುದು. ಸಾಮಾಜಿಕ ಜಾಲತಾಣದಲ್ಲಿ ಕೆಡುಕನ್ನೇ ಹುಡುಕುವ ಬದಲಾಗಿ ಒಂದಷ್ಟು ಒಳಿತಿನ ಕೆಲಸಗಳನ್ನು ಕೂಡಾ ಇದರ ಮೂಲಕ ಮಾಡಲು ಸಾಧ್ಯವಿದೆ ಅನ್ನುವುದನ್ನು ಪರಿಚಯಿಸುವುದಷ್ಟೇ ಈ ಬರಹದ ಉದ್ದೇಶ. ಯಾವುದೇ ಒಂದು ವಸ್ತು ಅಥವಾ ವಿಚಾರವನ್ನು ನಾವು ಧನಾತ್ಮಕ ಕೆಲಸಗಳಿಗೆ ಬಳಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಾಗ ಅದರಿಂದ ವೈಯುಕ್ತಿಕವಾಗಿಯೂ ಸಮಾಜಮುಖಿಯಾಗಿಯೂ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

-ಉದಯಭಾಸ್ಕರ್ ಸುಳ್ಯ

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!