ಅಂಕಣ

ಯಾರು ಮಹಾತ್ಮ?- ೬


ಯಾರು ಮಹಾತ್ಮ? -೫

    ಶಿಷ್ಯನೊಬ್ಬ ಗಾಂಧಿಯವರ ಅಹಿಂಸೆಯ ಆಚರಣೆಯ ಬಗ್ಗೆ ಕೇಳಿದಾಗ ಅರವಿಂದರು ಗಾಂಧಿಯವರ ಅಹಿಂಸೆಯ ಟೊಳ್ಳುತನವನ್ನು ಬಯಲಿಗೆಳೆಯುತ್ತಾರೆ. “ಮನುಷ್ಯನು ಸತ್ಯಾಗ್ರಹ ಅಥವಾ ಅಹಿಂಸೆಯನ್ನು ಕೈಗೊಂಡಾಗ ಅವನ ಸ್ವಭಾವಕ್ಕೆ ಏನಾಗುತ್ತದೆಯೆಂಬುದನ್ನು ಗಾಂಧಿ ತಿಳಿದಿಲ್ಲವೆಂದು ನನಗನಿಸುತ್ತದೆ. ಗಾಂಧಿ ಅದರಿಂದ ಮನುಷ್ಯರು ಶುದ್ಧಗೊಳ್ಳುತ್ತಾರೆಂದು ಭಾವಿಸುತ್ತಾರೆ. ಆದರೆ ಮನುಷ್ಯರು ಯಾತನೆಗೊಳಗಾದಾಗ ಅಥವಾ ಯಾತನೆಯನ್ನು ಸ್ವ ಇಚ್ಛೆಯಿಂದ ಅನುಭವಿಸಿದಾಗ ಅವರ ಪ್ರಾಣಕೋಶ ಬಲಗೊಳ್ಳುತ್ತದೆ. ಈ ಚಳವಳಿಗಳು ಪ್ರಾಣಕೋಶವನ್ನಷ್ಟೇ ಬಾಧಿಸುತ್ತವೆ. ಯಾವಾಗ ದಬ್ಬಾಳಿಕೆ ನಡೆಸುವ ಶಕ್ತಿಯನ್ನು ವಿರೋಧಿಸಲು ಸಾಧ್ಯವಿಲ್ಲವೋ ಆಗ ಅದನ್ನು ಸಹಿಸಿ ಬವಣೆಯನ್ನು ಅನುಭವಿಸುತ್ತೇನೆ ಎನ್ನುತ್ತೀಯಾ. ಆದರೆ ಈ ಸಹನೆ ಪ್ರಾಣಿಕವಾಗಿದ್ದು ಹೀಗೆ ಯಾತನೆಯುಂಡ ಮನುಷ್ಯ ತನಗೆ ಅಧಿಕಾರ ದೊರೆತಾಗ ಅತ್ಯಂತ ಹೀನ ಶೋಷಕನಾಗುತ್ತಾನೆ. ನಾವು ಹಿಂಸಾಪ್ರವೃತ್ತಿಯನ್ನಷ್ಟೇ ಪರಿವರ್ತಿಸಲು ಸಾಧ್ಯ. ಆದರೆ ಸತ್ಯಾಗ್ರಹದ ಆಚರಣೆಯಿಂದ ಅದನ್ನು ಪರಿವರ್ತಿಸಲಾಗದು. ಈ ರೀತಿಯ ಒಮ್ಮುಖವಾದ ತತ್ವಗಳಿಂದ ಬೂಟಾಟಿಕೆ, ಅಪ್ರಾಮಾಣಿಕತೆಗಳೇ ಮೇಲುಗೈ ಸಾಧಿಸಿ ಶುದ್ಧೀಕರಣ ಸಾಧ್ಯವಾಗದು. ನಾನು ಹೇಳಿದಂತೆ ಹಿಂಸಾಪ್ರವೃತ್ತಿಯ ಪರಿವರ್ತನೆಯಿಂದ ಶುದ್ಧೀಕರಣ ಸಾಧ್ಯ. ಪ್ರಾಚೀನ ಭಾರತದಲ್ಲಿದ್ದ ವ್ಯವಸ್ಥೆಯನ್ನೇ ನೋಡು.ಹೋರಾಟದ ಮನೋಭಾವದವನು ಕ್ಷತ್ರಿಯನಾಗುತ್ತಿದ್ದ. ಮತ್ತು ಆ ಕ್ಷಾತ್ರ ಪ್ರವೃತ್ತಿಯು ಸಾಧಾರಣ ಪ್ರಾಣಿಕ ಪ್ರಭಾವದಿಂದ ಮೇಲೇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಅದರ ಗುರಿ ಆಧ್ಯಾತ್ಮೀಕರಣವಾಗಿತ್ತು. ಈ ವ್ಯವಸ್ಥೆ ಇಂದಿನ ಸಾತ್ವಿಕ ಪ್ರತಿರೋಧ ಸಾಧಿಸಲಾಗದ್ದನ್ನು, ಸಾಧಿಸಲಾರದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಯಾವ ದಬ್ಬಾಳಿಕೆಯನ್ನೂ ಸಹಿಸದೆ ಹೋರಾಡುವವನೇ ಕ್ಷತ್ರಿಯ. ಆತ ಯಾರನ್ನೂ ಶೋಷಿಸಲಾರ.” (ಇಂಡಿಯಾಸ್ ರೀಬರ್ತ್, ಶ್ರೀ ಅರಬಿಂದೋ) ಅಹಿಂಸೆಯ ಬಗೆಗಿನ ಅರವಿಂದರ ಈ ವಿಶ್ಲೇಷಣೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗಲೇ ಅದರ ಗಟ್ಟಿತನದ ಅರಿವಾದೀತು. ಗಾಂಧಿ ಪ್ರತಿಪಾದಿಸಿದ ಅಹಿಂಸೆಯನ್ನು ಪಾಲಿಸಿದವ ಅಧಿಕಾರ ಸಿಕ್ಕಾಗ ಹೀನಶೊಷಕನಾಗುತ್ತಾನೆ ಎಂದ ಅರವಿಂದರ ಮಾತಿಗೆ ಪ್ರತ್ಯಕ್ಷ ನಿದರ್ಶನ ಗಾಂಧಿ. ಅವರು ಕಾಂಗ್ರೆಸ್ಸಿನ ಸರ್ವಾಧಿಕಾರಿಯಾಗಿದ್ದಾಗ ಹೇಗೆ ಸುಭಾಷರು ಎರಡನೇ ಬಾರಿ ಅಧ್ಯಕ್ಷರಾಗುವುದನ್ನು ತಡೆದರು ಎನ್ನುವುದನ್ನು ನೆನಪಿಸಿಕೊಳ್ಳಿ. ಅದೇ ರೀತಿ “ಕಾಂಗ್ರೆಸ್ಸಿನಲ್ಲಿ ಅವರ ಮಾತೇ ಅಂತಿಮವಾಗಿತ್ತು” ಎನ್ನುವುದನ್ನು ಸೂಕ್ಷ್ಮವಾಗಿ, ಆಳವಾಗಿ ನೋಡಿದರೆ ಸಾಕು ಅರವಿಂದರ ಮಾತಿನ ಹೊಳಹು ಅಲ್ಲೇ ಗೋಚರಿಸುತ್ತದೆ.

           ಸತ್ಯಾಗ್ರಹಿಯು ತಾನು ಇತರರ ಮೇಲೆ ತರುವ ಒತ್ತಡದ ಬಗ್ಗೆ ತನಗೆ ಕಾಳಜಿಯಿಲ್ಲವೆಂದು ಹೇಳುವುದು ಕೂಡಾ ಹಿಂಸೆಯೇ. ನಿಜವಾದ ಅಹಿಂಸೆಯು ಬಾಹ್ಯ ಕ್ರಿಯೆಯಲ್ಲಿ ಅಥವಾ ಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ಇರದ ಒಂದು ಮನಃಸ್ಥಿತಿ. ಆಂತರಿಕ ಅಸ್ತಿತ್ವದಲ್ಲಿ ಯಾವುದೇ ಒತ್ತಡವು ಅಹಿಂಸೆಯ ಉಲ್ಲಂಘನೆಯೇ. ಅಹಮದಾಬಾದ್ ಗಿರಣಿಗಳ ಮುಷ್ಕರದಲ್ಲಿ ಗಿರಣಿಗಳ ಮಾಲಿಕರು ಹಾಗೂ ಕಾರ್ಮಿಕರ ನಡುವಿನ ವಿವಾದವನ್ನು ಬಗೆಹರಿಸಲು ಗಾಂಧಿಯವರು ಉಪವಾಸ ಕೈಗೊಂಡರು. ಗಿರಣಿಯ ಮಾಲಿಕರಿಗೆ ಗಾಂಧಿಯ ನಿಲುವು ಅರ್ಥವೇ ಆಗಲಿಲ್ಲ. ಕಾರ್ಮಿಕರ ಸಾವಿಗೆ ಜವಾಬ್ದಾರರಾಗಲು ಅವರು ಒಪ್ಪಲಿಲ್ಲ. ಬದಲಾಗಿ ಪರಿಹಾರ ವಿತರಿಸಲು ಒಪ್ಪಿಕೊಂಡರು. ಎಲ್ಲವೂ ಯಥಾಸ್ಥಿತಿಗೆ ಮರಳಿದ ಕೂಡಲೆ ಮಾಲಿಕರದ್ದು ಅದೇ ಹಳೆಯ ರಾಗ! ಅತ್ತ ಕಾರ್ಮಿಕರ ಸಮಸ್ಯೆಯೂ ಬಗೆಹರಿಯಲಿಲ್ಲ. ಇತ್ತ ಮಾಲೀಕನೂ ಬದಲಾಗಲಿಲ್ಲ. ಮೃತರಾದವರ ಕುಟುಂಬಕ್ಕೇನೋ ಒಂದಷ್ಟು ಪರಿಹಾರ ಸಿಕ್ಕಿತಷ್ಟೇ! ಇದು ಗಾಂಧಿಯವರ ಟೊಳ್ಳು ಅಹಿಂಸಾ ಸತ್ಯಾಗ್ರಹದ ಫಲಶ್ರುತಿ. ದಕ್ಷಿಣಾ ಆಫ್ರಿಕಾದಲ್ಲಿ ಆದುದು ಇದೇ. ಇಂತಹ ಪ್ರತಿರೋಧದಿಂದ ಅವರು ಕೆಲವು ರಿಯಾಯಿತಿಗಳನ್ನು ಪಡೆದದ್ದು ನಿಜ. ಆದರೆ ಅವರು ಭಾರತಕ್ಕೆ ಮರಳಿದ ನಂತರ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹಾಂ ಇಲ್ಲಿ ತಾವು ಮರಳಿದ ಬಳಿಕ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡರೆ ಗಾಂಧಿಯದ್ದೇನು ತಪ್ಪು ಎಂದು ವಾದಿಸಬಹುದು. ಗಾಂಧಿಯನ್ನು ಸಾಮಾನ್ಯ ಮನುಷ್ಯ ಎಂದು ಬೆಂಬಲಿಗರು ನೋಡುತ್ತಿದ್ದರೆ ಆಗ ಈ ಪ್ರಶ್ನೆ ಸರಿ. ಆದರೆ ಗಾಂಧಿಯನ್ನು ಮಹಾತ್ಮ ಪಟ್ಟಕ್ಕೆ ಏರಿಸಿರುವುದರಿಂದಲೇ ಈ ತರ್ಕ-ಲೇಖನಮಾಲೆ ಹುಟ್ಟಿಕೊಂಡಿದುದು. ನಿಜಾರ್ಥದಲ್ಲಿ ಮಹಾತ್ಮನಿದ್ದಿದ್ದರೆ ಈ ಸಮಸ್ಯೆಗಳು ಸಂಪೂರ್ಣವಾಗಿ ಬಗೆ ಹರಿಯಬೇಕಿತ್ತು. ನಿಜವಾದ ಮಹಾತ್ಮನಾಗಿದ್ದರೆ ಶತ್ರುತ್ವದ ಭಾವನೆಯೇ ನಶಿಸುತ್ತಿತ್ತು. ಆದರೆ ಮೇಲಿನ ಎರಡೂ ಸಂದರ್ಭಗಳಲ್ಲಿ ಅಹಿಂಸೆ ತೋರಿಕೆಯ ವಸ್ತುವಾಗಿ ಬಿಟ್ಟಿತು. ಸಮಸ್ಯೆಗಳು ಮತ್ತಷ್ತು ಹೆಚ್ಚಾದವು.

          1924ರಲ್ಲಿ ಗಾಂಧಿ ತಮ್ಮ ಮಗ ದೇವದಾಸನನ್ನು ಅರವಿಂದರನ್ನು ಕಾಣಲು ಕಳುಹಿಸಿದರು. ಆತ ಅಹಿಂಸೆಯ ಬಗ್ಗೆ ಅರವಿಂದರ ದೃಷ್ಟಿಕೋನವನ್ನು ಕೇಳಿದಾಗ “ಅಪ್ಘನ್ನರು ಭಾರತವನ್ನು ಆಕ್ರಮಿಸಿದರೆ ಅದನ್ನು ಅಹಿಂಸೆಯಿಂದ ಹೇಗೆ ಎದುರಿಸುವಿರಿ” ಎಂದು ಮರುಪ್ರಶ್ನಿಸಿದರು. ಗಾಂಧಿಯ ಪ್ರತಿನಿಧಿಯಾಗಿ ಬಂದಿದ್ದ ದೇವದಾಸ ಅದಕ್ಕೆ ಉತ್ತರಿಸಲಿಲ್ಲ. ಅಲ್ಲ ಸಾಕ್ಷಾತ್ ಗಾಂಧಿಯೇ ಇರುತ್ತಿದ್ದರೂ ಅದಕ್ಕೆ ಉತ್ತರಿಸುತ್ತಿರಲಿಲ್ಲ ಬಿಡಿ.

            ಮಹಾಯುದ್ಧದ ಸಂದರ್ಭದಲ್ಲಿ ಗಾಂಧಿ ಬ್ರಿಟಿಷರನ್ನುದ್ದೇಶಿಸಿ ಬರೆದ ಬಹಿರಂಗ ಪತ್ರದಲ್ಲಿ. “ನಾನು ಕದನ ವಿರಾಮಕ್ಕೆ ಕೋರಿಕೊಳ್ಳುತ್ತೇನೆ. ನೀವು ನಾಝಿವಾದವನ್ನು ಮುಗಿಸಬೇಕೆಂದಿರುವಿರಿ. ನೀವು ನಾಝಿವಾದವನ್ನು ಅಹಿಂಸಾತ್ಮಕ ಅಸ್ತ್ರಗಳಿಂದ ಎದುರಿಸಬೇಕೆಂದು ನಾನು ಬಯಸುತ್ತೇನೆ. ನೀವು ನಿಮ್ಮದೆಂದು ಬಗೆದಿರುವ ನಿಮ್ಮೆಲ್ಲಾ ದೇಶಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ಹಿಟ್ಲರನನ್ನು ಆಹ್ವಾನಿಸಿ. ಅವರು ನಿಮ್ಮ ಅನೇಕ ಸುಂದರ ದ್ವೀಪ – ಕಟ್ಟಡಗಳನ್ನು ವಶಪಡಿಸಿಕೊಳ್ಳಲಿ. ಇವೆಲ್ಲವನ್ನು ಕೊಟ್ಟರೂ ನಿಮ್ಮ ಹೃದಯ ಮನಸ್ಸು ನಿಮ್ಮದಾಗುವುದು”(ಅಮೃತಬಜಾರ್ ಪತ್ರಿಕೆ, ಜುಲೈ 14, 1940). ಹ್ಹ..ಹ್ಹ ಹಿಂಸೆಯನ್ನು ಬಗ್ಗುವುದರ ಮೂಲಕ ವಿರೋಧಿಸಿ ಎನ್ನುವ ಸಲಹೆ…! ಆದರೆ ಬ್ರಿಟಿಷರು ಇದಕ್ಯಾವ ಕಿಮ್ಮತ್ತೂ ಕೊಡಲಿಲ್ಲ ಎನ್ನುವುದು ಬೇರೆ ಮಾತು! ಮಿತ್ರಪಕ್ಷಗಳು ನಾಝಿಗಳನ್ನು ಬಗ್ಗು ಬಡಿದವು.

                ತಪ್ಪಾಗಿ ಗ್ರಹಿಸಿದ ಗುರಿ, ಅದನ್ನು ಈಡೇರಿಸಲು ನಿಷ್ಕಪಟವಲ್ಲದ, ಮನಃಪೂರ್ವಕವಾಗಿಲ್ಲದ ಸೂಕ್ತವಿಧಾನಗಳನ್ನು ಹೊಂದಿರುವ ಕಾಂಗ್ರೆಸ್ ಒಕ್ಕಣ್ಣರಿಂದ ನಡೆಸಲ್ಪಡುತ್ತಿದೆ ಎಂದಿದ್ದರು ಅರವಿಂದರು. ಗಾಂಧಿಯ ಬಗ್ಗೆ ತಮ್ಮ ನಿಲುವುಗಳನ್ನು ಅರವಿಂದರು ವ್ಯಕ್ತಪಡಿಸಿದ್ದಾರೆ. “ಗಾಂಧಿಯನ್ನು ಕ್ರಿಶ್ಚಿಯನ್ನರಿಗಿಂತ ಹೆಚ್ಚು ಕ್ರಿಶ್ಚಿಯನ್ ಎಂದು ಹಲವು ಯೂರೋಪಿಯನ್ನರು ಹೇಳಿದ್ದರು. ಕೆಲವರಂತೂ “ಆಧುನಿಕ ಕ್ರಿಸ್ತ” ಎನ್ನುವ ಬಿರುದನ್ನೇ ಕೊಟ್ಟಿದ್ದರು. ಇದು ಸಂಪೂರ್ಣ ಸುಳ್ಳೇನೂ ಅಲ್ಲ. ಗಾಂಧಿಯವರ ಉಪದೇಶಗಳು ಕ್ರಿಶ್ಚಿಯನ್ ಮತದಿಂದ ಎರವಲು ಪಡೆದುದಾಗಿತ್ತು. ಅವರ ವೇಷ ಭಾರತೀಯವಾಗಿದ್ದರೂ ಅಂತಃಸತ್ವ ಕ್ರೈಸ್ತ ಮತದ್ದೇ ಆಗಿತ್ತು. ಅವರು ಕ್ರಿಸ್ತ ಆಗಿರಲಿಕ್ಕಿಲ್ಲ, ಆದರೆ ಯಾವ ಲೆಕ್ಕದಲ್ಲಿ ನೋಡಿದರೂ ಆ ಪ್ರೇರಣೆಯ ಮುಂದುವರಿದ ಭಾಗವೇ ಆಗಿದ್ದರು. ಟಾಲ್ ಸ್ಟಾಯ್, ಬೈಬಲ್’ನಿಂದ ಗಾಢ ಪ್ರಭಾವಕ್ಕೆ ಒಳಗಾಗಿರುವ ಗಾಂಧಿಯವರ ವ್ಯಾಖ್ಯಾನಗಳಲ್ಲೂ ಈ ಪ್ರಭಾವ ಎದ್ದು ಕಾಣುತ್ತದೆ. ಅವರ ಬೋಧನೆ, ಸಿದ್ಧಾಂತಗಳಲ್ಲಿ ಜೈನ ಧರ್ಮದ ಛಾಯೆಯಿದೆ. ಬಹಳಷ್ಟು ಸುಶಿಕ್ಷಿತರು ಗಾಂಧಿಯವರನ್ನು ಆಧ್ಯಾತ್ಮಿಕ ವ್ಯಕ್ತಿ ಎಂದು ಕರೆಯುತ್ತಾರೆ. ಆದರೆ ಅವರು ಬೋಧಿಸುವುದು ಭಾರತೀಯ ಆಧ್ಯಾತ್ಮವಲ್ಲ. ರಷ್ಯಾದ ಕ್ರೈಸ್ತ ಮತದಿಂದ ಎರವಲು ಪಡೆದ ಅಹಿಂಸೆ, ಸೈರಣೆ, ವೇದನೆ ಇತ್ಯಾದಿಗಳನ್ನು. ಗಾಂಧಿಯವರ ವ್ಯಕ್ತಿತ್ವ ಅತ್ಯಂತ ನೀರಸ. ಬೌದ್ಧಿಕ ತೀವ್ರತೆ, ಸಂಕಲ್ಪ ಶಕ್ತಿ ಇದ್ದರೂ ಅವರ ವ್ಯಕ್ತಿತ್ವ ರಷ್ಯನ್ನರಿಗಿಂತಲೂ ನೀರಸ. ಗಾಂಧಿಯವರ ಚಳುವಳಿ ಆರಂಭವಾದಾಗಲೇ ಅದು ಅಭಾಸಕ್ಕೆ ಅಥವಾ ದೊಡ್ಡ ಗೊಂದಲಕ್ಕೆ ಗುರಿಯಾಗುತ್ತದೆಯಂದು ನಾನು ಹೇಳಿದ್ದೆ. ಅದು ಎರಡಕ್ಕೂ ಗುರಿಯಾಗಿದೆ.

             ಎಲ್ಲಿಯವರೆಗೆ ನೀವು ಸದ್ಗುಣ ಸಂಪನ್ನರಾಗಿರಬೇಕಾಗುತ್ತದೋ ಅಲ್ಲಿಯವರೆಗೆ ಶುದ್ಧ ಆಧ್ಯಾತ್ಮಿಕ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ಅಲ್ಲಿ ಕ್ರಿಯೆಯು ನೈತಿಕವೋ ಅಲ್ಲವೋ ಎಂದು ಚಿಂತಿಸಬೇಕಿಲ್ಲ. ಜನರಿಗೆ ನೀವು ನೈತಿಕತೆಯನ್ನು ಮೀರಿ ಹೋಗಿ ಎಂದಾಗ ಅವರು ಅದು ಒಳಿತು ಮತ್ತು ಕೆಡುಕುಗಳೆರಡರ ಕೆಳಗೆ ಕುಸಿಯಲು ಹೇಳುತ್ತಿದ್ದೀರಿ ಎಂದು ಭಾವಿಸುತ್ತಾರೆ. ಆದರೆ ಅದು ಅಪಾರ್ಥ. ನೈತಿಕತೆಯಿಂದ ನೀವು ಮಾನವರಾಗಬಹುದು. ಆದರೆ ಮಾನವತೆಯನ್ನು ಮೀರಿ ಹೋಗಲಾಗುವುದಿಲ್ಲ. ಕ್ರಿಶ್ಚಿಯನ್ನರಂತೆ ಜನರು ಯಾವಾಗಲೂ ನೈತಿಕತೆ ಮತ್ತು ಆಧ್ಯಾತ್ಮಿಕತೆ ನಡುವೆ ಗೊಂದಲ ಮಾಡಿಕೊಳ್ಳುತ್ತಾರೆ. ಕ್ರಿಶ್ಚಿಯನ್ನರಿಗೆ ನೈತಿಕತೆ ಹಾಗೂ ಆಧ್ಯಾತ್ಮಿಕತೆಯ ನಡುವೆ ವ್ಯತ್ಯಾಸವಿರುವುದಿಲ್ಲ. ಉದಾಹರಣೆಗೆ ಗಾಂಧಿಯವರು ಘೋಷಿಸಿರುವ ಉಪವಾಸವನ್ನೇ ತೆಗೆದುಕೊಳ್ಳಿ. ಪಾಪಮಾರ್ಜನೆಗಾಗಿ ಇರುವ ಕ್ರೈಸ್ತ ಮತೀಯರ ಕಲ್ಪನೆ ಅದು. ಅದಕ್ಕೆ ನೀಡಲಾದ ಬೇರೆಲ್ಲಾ ಕಾರಣಗಳು ಅದನ್ನು ಹಾಸ್ಯಾಸ್ಪದವನ್ನಾಗಿಸುತ್ತವೆ. ಭಾರತೀಯ ಸಂಸ್ಕೃತಿಗೆ ನೈತಿಕತೆಯ ಮೌಲ್ಯವೂ ಗೊತ್ತಿತ್ತು. ಅದರ ಮಿತಿಗಳೂ ತಿಳಿದಿದ್ದವು. ಉಪನಿಷತ್ತುಗಳು ಮತ್ತು ಗೀತೆ ನೈತಿಕತೆಯನ್ನು ಮೀರಿ ಹೋಗುವ ಆದರ್ಶಳಿಂದ ತುಂಬಿವೆ.”(ಇಂಡಿಯಾಸ್ ರೀಬರ್ತ್- ಶ್ರೀ ಅರವಿಂದೋ)

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!