Featured ಅಂಕಣ

ಭೂಮಿಯ ಅಂತ್ಯವನ್ನು ಸಾರುವ ಡೂಮ್ಸ್’ಡೇ ಸಿದ್ಧಾಂತಗಳು

ಸೃಷ್ಟಿಯ ನಿಯಮಗಳೇ ವಿಚಿತ್ರ. ಯಾವುದಕ್ಕೆ ಪ್ರಾರಂಭವಿರುತ್ತದೋ ಅದಕ್ಕೆ ಅಂತ್ಯವೂ ಇರುತ್ತದೆ. ಹುಟ್ಟು ಸಾವು ಒಂದು ರೀತಿಯ ಗೆಲ್ಲಲೂ ಹಾಗೂ‌ ಸೋಲಲೂ ಆಗದಂತಹ ವಿಚಿತ್ರ ಆಟ. ಮನುಷ್ಯನ ಜೀವಿತಾವಧಿ ಇನ್ನು ಮುಂದೆ ಕಡಿಮೆಯಾಗುತ್ತಾ ಹೋಗುತ್ತದಂತೆ. ಈ ಭೂಮಿಯ ಮೇಲೆ ಎಲ್ಲಾ ವಸ್ತುಗಳಿಗೂ, ಪ್ರಾಣಿ ಪಕ್ಷಿಗಳಿಗೂ ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಇದ್ದೇ ಇದೇ. ಪ್ರಶ್ನೆ ಏನೆಂದರೆ, ಅದು ಯಾವಾಗ ಎಂಬ ಸತ್ಯ ಯಾರಿಗೂ ತಿಳಿದಿಲ್ಲ. ಯಾಕೆಂದರೆ ಪರಮಾತ್ಮನ ಆಂತರ್ಯವನ್ನು ನಮಗೆಲ್ಲಿ ಅರಿಯಲು ಸಾಧ್ಯವಾಗುತ್ತದೆ ಹೇಳಿ. ಎಲ್ಲದಕ್ಕೂ ಕೊನೆ ಇದೆ ಎಂದಾದರೆ, ನಮ್ಮ ಭೂಮಿಗೂ‌ ಅಂದರೆ ಭೂಮಂಡಲಕ್ಕೂ‌ ಒಂದು‌ ಕೊನೆ ಅಂದರೆ ಅಂತ್ಯ ಅನ್ನೋದು ಇದೆಯೇ ? ಭೂಮಿಯ ಮೇಲೆ ಮನುಕುಲದ ಅಂತ್ಯ ಯಾವಾಗ ? ಹೌದು ವಿಜ್ಞಾನದ ಹಾದಿಯಲ್ಲಿ ಚಿಂತನೆ ಮಾಡಿದರೆ ಭೂಮಿಗೂ ನಿಖರವಾದ ಅಯಸ್ಸು ಅನ್ನೋದು ಇದ್ದೇ ಇದೆ. ಆದರೆ ಮನುಷ್ಯನ ಆಯಸ್ಸು ಇದರ ಮುಂದೆ ಒಂದು ಸಣ್ಣ ಚುಕ್ಕಿ ಅಷ್ಟೇ. ಭೂಮಿಯ ಆಯಸ್ಸನ್ನು ಹಾಗೂ ಭೂಮಿಯ ಮೇಲೆ ಮನುಕುಲದ ಅಂತ್ಯವನ್ನು ಸಾರಿ ಹೇಳುವ ಅದೆಷ್ಟೋ ಸಿದ್ಧಾಂತಗಳು ಈಗಾಗಲೆ ಹೊರ ಬಂದಿವೆ. ಆದರೆ ಇವೆಲ್ಲಾ ಸತ್ಯವೇ, ನಿಜವಾಗುತ್ತದೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕು. ಹಾಗಾದರೆ ಒಂದಷ್ಟು ಭೂಮಿಯ ಕೊನೆಯ ದಿನಗಳನ್ನು ಊಹಿಸಿ ನಿಗದಿಪಡಿಸಿರುವ ಕೆಲವೊಂದು ಸಿದ್ಧಾಂತಂಗಳು ಏನು ಹೇಳುತ್ತವೆ ಎಂಬುದನ್ನ ನೋಡೋಣ.

ಈ ಸಿದ್ಧಾಂತಗಳು ಡೂಮ್ಸ್’ಡೇ ಸಿದ್ಧಾಂತಗಳು ಎಂದೇ ಪ್ರಸಿದ್ಧವಾಗಿವೆ. ನೆನಪಿಡಿ ಈ ಎಲ್ಲಾ ಸಿದ್ಧಾಂತಗಳನ್ನೇನು ದೇವರು ಬರೆದಿರೋದಲ್ಲ. ಹುಲುಮಾನವನ ಕಲ್ಪನೆಯಷ್ಟೇ. ಸುಮ್ಮನೆ ಓದಿ, ಓಹೋ ಹೀಗೂ ಆಗುತ್ತದೆಯೇ ಅಂತಾ ಒಂದೆರಡು ನಿಮಿಷ ಆಶ್ಚರ್ಯ ಪಟ್ಟು ಸುಮ್ಮನಾಗಿಬಿಡೋದು ಒಳ್ಳೆಯದು. ಯಾಕೆಂದರೆ ಜನ ಸುಮ್ಮನೇ ಕೆಲವೊಂದು‌ ವಿಷಯಗಳಿಗೆ ವಿನಾಕಾರಣ ಹೆದರಿ ಬಿಡುತ್ತಾರೆ.

ಆವತ್ತು ಡಿಸೆಂಬರ್ 20, 2012. ಆ ಸಮಯದಲ್ಲಿ ನಾನು‌ ಪದವಿ ವಿದ್ಯಾರ್ಥಿ. ಅಂದು ಸಂಜೆ ನಾವೊಂದಷ್ಟು ಜನ‌ ಸ್ನೇಹಿತರು ಹೀಗೆ ಸುಮ್ಮನೆ ತಮಾಷೆಗಾಗಿ ಬಹಳಷ್ಟು ವಿಷಯಗಳನ್ನು ಚರ್ಚಿಸುತ್ತಿದ್ದೆವು. ಚರ್ಚೆಯ ವಿಷಯ ಮತ್ತೇನಲ್ಲ. ನಾಳೆ ಏನೆಲ್ಲಾ ಆಗಬಹುದೆಂಬುದರ ಬಗ್ಗೆ. ಯಾಕೆಂದರೆ ಮರುದಿನವೇ ಡಿಸಂಬರ್ 21, 2012. ಹೌದು ಜಗತ್ತು ಅಂತ್ಯವಾಗಿಯೇ ಬಿಡುತ್ತದೆ. ಇನ್ನು ನಮಗೆ ಬೇರೆ ದಾರೀನೇ ಇಲ್ಲ ಎಂಬಂತೆ ಹಲವಾರು ಸುದ್ದಿ ವಾಹಿನಿಗಳು ಪಾಪ ಕೊನೇ ದಿನವಾದರೂ ಜೋರಾಗಿ ಕೂಗಿ ಕೂಗಿ ಹೇಳುತ್ತಿದ್ದವು. ಎಲ್ಲೆಡೆಯೂ ಕಳವಳ. ನೀವು ನಂಬುತ್ತೀರೋ ಇಲ್ಲವೋ, ವಿಜ್ಞಾನವನ್ನು ಓದಿರುವ ಹಲವಾರು ಮಂದಿಯೂ ಸಹಾ ಇದನ್ನ ನಂಬಿದ್ದರಂತೆ.ಪಾಪ ಇನ್ನು, ಏನೂ ಅರಿಯದ ಕೆಲ ಜನರ ಪಾಡನ್ನು ಕೇಳಬೇಕೆ. ನಾವೂ ಬಹಳಷ್ಟು ವಿಷಯಗಳ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಆಲೋಚನೆಗಳನ್ನು ಮಾಡಿದ್ದೆವು. ಸುಮ್ಮನೆ ತಮಾಷೆಗೆ ಅಷ್ಟೇ. ಒಂದು ವೇಳೆ ನಾಳೆ ಕೊನೆಯಾದರೆ ಈವತ್ತೇ ಕೆಲವೊಂದು ಆಸೆಗಳನ್ನೆಲ್ಲಾ ತೀರಿಸಿಕೊಂಡು ಬಿಡೋಣ ಎಂಬ ಅಲೋಚನೆಗಳನ್ನೆಲ್ಲಾ ಮಾಡಿದ್ದೆವು. ಹೇಳೀ ಕೇಳಿ ನಾನೂ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದೆ. ಇದನ್ನೆಲ್ಲಾ ನಂಬುತ್ತಿರಲಿಲ್ಲ. ಸುಮ್ಮನೇ ತಮಾಷೆಗಾಗಿ ಇಂತಹ ವಿಷಯಗಳ ಬಗ್ಗೆ ಒಂದು ಚರ್ಚೆ ನಡೆದಿತ್ತು ಅಷ್ಟೇ. ಈ ಡಿಸೆಂಬರ್ 21, 2012  ಜಗತ್ತಿನಾದ್ಯಂತ ದೊಡ್ಡ ಸಂಚಲನವನ್ನೇ ಎಬ್ಬಿಸಿತ್ತು. ಅದೆಷ್ಟೋ ಜನ ತಮ್ಮ ಆಸ್ತಿಯನ್ನೆಲ್ಲಾ ಹಂಚಿ ಬಿಟ್ಟಿದ್ದರಂತೆ.ಜೊತೆಗೆ ಈ ವಿಷಯವನ್ನೇ ಇಟ್ಟುಕೊಂಡು ಒಂದು  ಚಲನಚಿತ್ರವನ್ನೇ ಮಾಡಿಬಿಟ್ಟರು. ಅದುವೇ 2012.  ಅದೇನಿರಬಹುದು ಎಂಬ ಕೂತೂಹಲದಿಂದ ನಾನೂ ಈ ಚಲನಚಿತ್ರವನ್ನು ಚಿತ್ರಮಂದಿರಕ್ಕೇ ಹೋಗಿ ನೋಡಿ ಬಂದೆ. ಚಲನಚಿತ್ರ ಚೆನ್ನಾಗಿಯೇ ಮೂಡಿ ಬಂದಿದೆ. ಆದರೆ ಅದರಲ್ಲಿರುವ ವಿಷಯ ಕೇವಲ ಊಹೆಯಷ್ಟೆ. ಡಿಸಂಬರ್20 ಕಳೆಯಿತು. 21 ಎಂದಿನಂತೆ ಬಂದು ಹೋಗಿತ್ತು. ಏನೇನೂ ಆಗಲಿಲ್ಲ. ಅಷ್ಟು ದಿನ ಬಾಯಿಗೆ ಬಂದಂತೆ ಕೂಗಾಡುತ್ತಿದ್ದ ಯಾವ ಸುದ್ದಿ ವಾಹಿನಿಗಳೂ 21ನೇ ತಾರೀಖಿನ ನಂತರ ಬಾಯಿಯನ್ನೇ ತೆರೆಯಲಿಲ್ಲ. ನಾವು ಏನನ್ನೂ ಹೇಳಲೇ ಇಲ್ಲವೆಂಬಂತೆ ಸುಮ್ಮನಿದ್ದವು. ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ. ಅಲ್ಲಿ ಇಲ್ಲಿ ಒಂದೆರಡು ಭೂಕಂಪ, ಚಂಡಮಾರುತ, ಪ್ರವಾಹಗಳು ಪ್ರತೀ ವರ್ಷ ಬಂದು ಹೋಗುವಂತೆ ಈ ನಾಲ್ಕು ವರ್ಷಗಳ ಅವಧಿಯಲ್ಲೂ ಬಂದು ಹೋಗಿವೆಯೇ ಹೊರತು, ಭೂಮಿ ಹಾಗೇ ಇದೆ. ನಮ್ಮ ಬದುಕು ಸಾಗುತ್ತಲೇ ಇದೆ. ಜನರ ಮನದಲ್ಲಿದ್ದ ಭಯವೂ ದೂರಾಗಿದೆ. ಕಾಲವೇ ಉತ್ತರವನ್ನು ನೀಡಿದೆ. ಡಿಸೆಂಬರ್ 21 2012ರ ಸಿದ್ಧಾಂತ ಡೂಮ್ಸ್’ಡೇ ಸಿದ್ಧಾಂತಕ್ಕೆ ಕೇವಲ ಒಂದು ಉದಾಹರಣೆ ಅಷ್ಟೇ. ಇಂತಹ ಒಂದಷ್ಟು ಕುತೂಹಲಕರವಾದ ಒಂದಷ್ಟು ಸಿದ್ಧಾಂತಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ.

ಜಾಗತಿಕ ತಾಪಮಾನ (Global Warming) :

ಭೂಮಿಯ ಅಂತ್ಯ ಸಮೀಪದಲ್ಲೇ ಇದೇ ಎಂದು ಸಾರುವ ವಿಷಯ ಅಥವಾ ಸಿದ್ಧಾಂತಗಳಲ್ಲಿ ಈ ಜಾಗತಿಕ ತಾಪಮಾನ ಮೊದಲ ಸ್ಥಾನವನ್ನೇ ಪಡೆದುಕೊಳ್ಳುತ್ತದೆ.ವಾತಾವರಣದ ಮೇಲೆ ಉಂಟಾಗುತ್ತಿರುವ ಹೆಚ್ಚಿನ ಪ್ರಮಾಣದ ಮಾಲಿನ್ಯದಿಂದ ಜಾಗತೀಕ ತಾಪಮಾನ ಹೆಚ್ಚಾಗುತ್ತಿದೆ. ಈ ಜಾಗತೀಕ ತಾಪಮಾನದ ಹೆಚ್ಚಳದಿಂದ ಹಲವಾರು ದುಷ್ಪರಿಣಾಮಗಳಿವೆ. ಅತಿಯಾದ ತಾಪಮಾನದಿಂದ ಹಲವೆಡೆ ಬರ ಪರಿಸ್ಥಿತಿ ಉಂಟಾಗಬಹುದು. ಪ್ರಕೃತಿಯಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ. ಅತ್ಯಂತ ಕೆಟ್ಟ ಪರಿಣಾಮವೆಂದರೆ ಕೊನೆಗೆ ಭೂಮಿಯ ಮೇಲೆ ಬದುಕು ಸಾಧ್ಯವಿಲ್ಲ ಎಂಬಂತ ಪರಿಸ್ಥಿತಿ ಬಂದೊದಗಬಹುದು. ವಿಜ್ಞಾನಿಗಳು ಈ ವಿಷಯವಾಗಿ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದಕ್ಕೆ ಪುರಾವೆಯಂತೆ ಭೂಮಿಯ ತಾಪಮಾನ ಹೆಚ್ಚಾಗಿದೆ. ನೆನಪಿರಲಿ ಇದೆಲ್ಲದಕ್ಕೂ ಮನುಷ್ಯನೇ ಕಾರಣ.

 

ಕ್ಷುದ್ರ ಗ್ರಹಗಳು (Asteroids) :

ಹಲವಾರು ಶತಮಾನಗಳಿಂದಲೂ ಮನುಷ್ಯನ ಆತಂಕಕ್ಕೆ ಕಾರಣವಾಗಿರುವ ಈ ಕ್ಷುದ್ರ ಗ್ರಹಗಳು ಇಂದಿಗೂ ಬಹಳಷ್ಟು ಊಹಾಪೋಹಗಳನ್ನು ಸೃಷ್ಟಿಸುತ್ತಲೇ ಇವೆ.  ಕ್ಷುದ್ರಗ್ರಹಗಳು ಭೂಮಿಯನ್ನು ನುಂಗಿ ಬಿಡುತ್ತವೆ, ಆಮೂಲಕ ಭೂಮಿಯ ಅಂತ್ಯವಾಗುತ್ತದೆಯಂತೆ‌. ಇನ್ನು ವಿಜ್ಞಾನಿಗೂ ಈ ವಿಷಯದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಯಾಕೆಂದರೆ ಡೈನೋಸಾರ್’ಗಳನ್ನು ನಾಶ ಮಾಡಿದ್ದು ಈ ಕ್ಷುದ್ರ ಗ್ರಹಗಳೇ ಎಂಬ ಉಲ್ಲೇಖವಿದೆ. ನಾವು ನೀವು ನೋಡಿಲ್ಲ ಅಷ್ಟೇ. ಒಂದಂತು ಸತ್ಯ ಆಕಾಶದಲ್ಲಿ ಹಲವಾರು ಕಾಯಗಳು ಸದಾ ತಿರುಗಾಡುತ್ತಲೇ ಇರುತ್ತವೆ‌‌. ಆದರೆ ಯಾವಾಗ ಭೂಮಿಯ ಮೇಲೆ ಅಪ್ಪಳಿಸುತ್ತವೋ ಯಾರಿಗೂ ತಿಳಿದಿಲ್ಲ. ಒಂದು ವೇಳೆ ದೊಡ್ಡ ಆಕಾಶಕಾಯವೊಂದು ಭೂಮಿಯ ಮೇಲೆ ಬಿದ್ದು ಭೂಮಿಯ ನಾಶವಾದರೂ ಆಗಬಹುದು. ಅದರೆ ಯಾವಾಗ ಬೀಳಬಹುದೆಂಬ ವರದಿ ಇನ್ನೂ ಯಾವ ಸುದ್ದಿವಾಹಿನಿಯಲ್ಲೂ ಬಂದಿಲ್ಲ. ಬಂದರೂ ಹೆದರಬೇಡಿ. ಭೂಮಿಯ ಆಯಸ್ಸು ಬಹಳಾ ಗಟ್ಟಿಯಾಗಿದೆ.

ಅಣ್ವಸ್ತ್ರ ಯುದ್ಧ (Nuclear War)

ಇನ್ನು ಈ ಅಣ್ವಸ್ತ್ರ ಯುದ್ಧದಿಂದ ಭೂಮಿಯ ಅಂತ್ಯ ಸಂಭವಿಸುತ್ತದಂತೆ. ಹೌದು ಇದೊಂದು ನಿಜವಾಗಿಯೂ ಆತಂಕಪಡಲೇಬೇಕಾದ ವಿಷಯ. ಇಂದು ಯಾವ ದೇಶದ ಬಳಿ ಈ ಅಣ್ವಸ್ತ್ರವಿದೆಯೋ ಆ ದೇಶಗಳ ಜೊತೆ ಸ್ವಲ್ಪ ಎಚ್ಷರಿಕೆಯಿಂದರಬೇಕು. ಇಂದು ಭಾರತವೂ ಅಣ್ವಸ್ತ್ರವನ್ನು ಹೊಂದಿದೆ. ಜಗತ್ತಿನ ಹಲವಾರು ರಾಷ್ಟ್ರಗಳ ಬಳಿ ಅಣ್ವಸ್ತ್ರವಿದೆ. ಒಂದು ವೇಳೆ ಯಾವುದೇ ಕಾರಣಕ್ಕಾಗಿಯಾದರೂ ಯುದ್ಧದ ಪರಿಸ್ಥಿತಿ ಉಂಟಾದರೆ, ಅಣ್ವಸ್ತ್ರಗಳ ಬಳಕೆಯಾದರೆ ಭೂಮಿಯ ಮೆಲೆ ಉಂಟಾಗುವ ದೊಡ್ಡ ಮಟ್ಟದ ಪರಿಣಾಮದಿಂದ ಭೂಮಂಡಲದ ಅಂತ್ಯವಾದರೂ ಅಚ್ಚರಿಯೇನಲ್ಲ. ಹಾಗಾಗಿ ಈ ಅಣ್ವಸ್ತ್ರಗಳೂ ಭೂಮಿಯ ಅಂತ್ಯವನ್ನು ಸಾರಿ ಹೇಳುತ್ತಿವೆ.

ಕೃತಕ ಬುದ್ಧಿವಂತಿಕೆ (Artificial Intelligence) ಹಾಗೂ ರೋಬೋಗಳು :

ಕೃತಕ ಬುದ್ಧಿವಂತಿಕೆ(AI) ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಸುದ್ದಿಯನ್ನು ಮಾಡಿರುವಂತಹ ವಿಷಯ. ಮನುಷ್ಯನಂತೆಯೇ ಯೋಚನಾಲಹರಿಯನ್ನು ಕೃತಕವಾಗಿ ಸೃಷ್ಟಿಸಲು ಹೊರಟಿರುವ ಮನುಷ್ಯನಿಗೆ ಮುಂದೊಂದು ದಿನ ಈ ರೊಬೋಗಳೇ ಜಗತ್ತಿನ ಅಂತ್ಯಕ್ಕೆ ಕಾರಣವಾಗುತ್ತವೆ ಎಂಬ ವಿಷಯ ತಿಳಿದೂ ತಿಳಿಯದಂತಿದೆ. ಹೌದು ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳುತ್ತಾನೆ, ಮುಂದೊಂದು ದಿನ ಈ ರೋಬೋಗಳು ತಾವೇ ಎಲ್ಲವನ್ನು ಕಲಿತು ಮನುಷ್ಯನ ಅಗತ್ಯವೇ ಇಲ್ಲದಂತೆ ಮಾಡಿ, ಭೂಮಿಯಿಂದ ಮನುಷ್ಯನನ್ನು ನಾಶ ಮಾಡಿ ಬಿಡುವಷ್ಟು ಸಾಮರ್ಥ್ಯವನ್ನು ಹೊಂದುತ್ತವಂತೆ. ಹಾಗಾಗಿ ಈ ರೋಬೋಟಿಕ್ಸ್ ತಂತ್ರಜ್ಞಾನ ಉನ್ನತ ಹಂತವನ್ನು ತಲುಪಿದಷ್ಟು ನಮಗೆ ತೊಂದರೆ ಹೆಚ್ಚಾಗುವ ಸಾಧ್ಯತೆಗಳೂ ಹೆಚ್ಚು.

ಜನಸಂಖ್ಯಾ ಸ್ಪೋಟ :

ಅತಿಯಾದ ಜನಸಂಖ್ಯೆಯಿಂದ ಭೂಮಿಯ ಮೇಲೆ ಆಹಾರದ ಕೊರತೆಯುಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಮನುಷ್ಯನ ಸಾವು ಸಂಭವಿಸುತ್ತದೆಯಂತೆ. ಇದು ಅಷ್ಟೇನು ಸದ್ದು ಮಾಡಿರದ ವಿಷಯ. ಹಾಗೂ ಜನಸಂಖ್ಯಾ ಸ್ಪೋಟದಿಂದ ಭೂಮಿಯ ಮೇಲೆ ಮನುಷ್ಯನ ಅಂತ್ಯವಾಗುತ್ತದೆ ಎಂಬುದನ್ನು ಹಲವಾರು ಮೇಧಾವಿಗಳು ಒಪ್ಪಿಕೊಳ್ಳಲು ತಯಾರಿಲ್ಲವಂತೆ. ಸದ್ಯದ ಪರಿಸ್ಥಿತಿಯಲ್ಲಿ ಇದೇನು ಅಷ್ಟೇನು ಆತಂಕ ಪಡಬೇಕಾದ ವಿಷಯವಲ್ಲ ಬಿಡ..

 

ಇನ್ನೂ ಹಲವಾರು ಊಹೆಗಳು ಹಾಗೂ ಸಿದ್ಧಾಂತಗಳು ಭೂಮಿಯ ಅಂತ್ಯದ ಬಗ್ಗೆ ಆತಂಕವನ್ನು ಹುಟ್ಟಿಸಿವೆ. ಅದೇನೇ ಇರಲಿ ಆದಿಯ ಜೊತೆ ಅಂತ್ಯವೂ ಇದ್ದೇ ಇರುತ್ತದೆ. ಹಾಗೆಯೇ ಎಲ್ಲಾ ಪ್ರಾರಂಭಕ್ಕೂ ಒಂದು ಅಂತ್ಯವಿದ್ದೇ ಇರುತ್ತದೆ. ಪ್ರಶ್ನೆಯೊಂದೇ, ಅದು ಯಾವಾಗ ಎಂಬುದು. ಕೆಲವೊಂದು ಪ್ರಶ್ನೆಗಳ ಆಳವನ್ನು ಅತಿಯಾಗಿ ಹೊಕ್ಕಬಾರದು. ಪ್ರಪಂಚ ವಿಶಾಲವಾಗಿದೆ. ನಮ್ಮ ಬದುಕು ನೀರ ಮೇಲಿನ ಗುಳ್ಳೆಯಷ್ಟೇ. ಭೂಮಿಯಿರುವ ತನಕ ಬದುಕು ಸಾಗುತ್ತಲೇ ಇರುತ್ತದೆ. ಈ ಸುಂದರ ಭೂಮಂಡಲಕ್ಕೆ ಯಾವುದೇ ತೊಂದರೆ ಬರದಿರಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳಬೇಕು ಅಷ್ಟೇ.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!