ಅಂಕಣ

ಬಂಡೇಯನೇರಿ ಭಾರತದ ಭವಿಷ್ಯ ಕಂಡ ಭಾಸ್ಕರ

ಕನ್ಯಾಕುಮಾರಿ ಎಂದೊಡನೆ ನೆನೆಪಾಗುವದು. ಮಾತೆ ಪಾರ್ವತಿಯ ದೇವಸ್ಥಾನ ಮತ್ತೆ ಸ್ವಾಮಿ ವಿವೇಕಾನಂದರ ಆ ಪವಿತ್ರ ಬಂಡೆ. ಚಿಕ್ಕಂದಿನಲ್ಲಿ ಸ್ವಾಮೀಜಿಯವರ ಭಾವಚಿತ್ರವೊಂದು ನಮ್ಮ ಮನೆಯ ಗೋಡೆಯಮೇಲಿತ್ತು ಚಿತ್ರದಲ್ಲಿ ಸಿಂಹಪುರುಷನಂತೆ ಕೈಕಟ್ಟಿ ನಿಂತಿದ್ದ ಸ್ವಾಮೀಜಿಯವರ ಹಿಂದೆ ಅದೇ ಕನ್ಯಾಕುಮಾರಿಯ ಬಂಡೆ, ಬಂಡೆಯ ಮೇಲಿದ್ದ ಸ್ಮಾರಕದ ತುದಿಯಲ್ಲಿ ಭಗವಾಧ್ವಜ. ಆ ಪಟವನ್ನು ನೋಡಿದಾಗೊಮ್ಮೆ ರೋಮಾಂಚನ ಮತ್ತು ಕುತೂಹಲ. ಅದೆಂತಹ ಶಕ್ತಿ ಆ ವ್ಯಕ್ತಿಯಲ್ಲಿ? ಆ ಬಂಡೆಗು, ಸ್ವಾಮೀಜಿಗೂ ಇರುವ ಸಂಬಂಧವಾದರೂ ಏನು. ಬಂಡೆಯ ಮೇಲಿರುವ ಅದ್ಭುತವಾದ ಮಂಟಪ ಹೇಗೆ ಬಂತು? ಅವೆರೆಡು ರೋಚಕವಾದ ಕತೆಗಳು.

ಅದು ೧೮೯೨ರ ಚಳಿಗಾಲ ದೇಶದ ಉದ್ದಗಲವನ್ನು ಸುತ್ತುತಿದ್ದ ಸ್ವಾಮೀಜಿಯೊಬ್ಬರು ಕನ್ಯಾಕುಮಾರಿಗೆ ಬಂದು ನಿಂತರು. ದೇವಿ ಕನ್ಯಾಕುಮಾರಿಯ ದರ್ಶನ ಪಡೆದ ಸ್ವಾಮೀಜಿ ವಿಶಾಲವಾದ ಸಮುದ್ರದೆಡೆಗೆ ಕಣ್ಣು ಹಾಯಿಸಿದಾಗ ಕಂಡದ್ದು, ಸಮುದ್ರರಾಜನ ಅಲೆಗಳಿಗೆ ಎದೆಯೊಡ್ಡಿ ನಿಂತಿದ್ದ ಬಂಡೆಗಳು. ಬಂಡೆಗಳೆಡೆಗೆ ನೋಡುತಿದ್ದ ಸ್ವಾಮೀಜಿಯನ್ನು ಕಂಡ ನಾವಿಕರಿಗೆ ದೋಣಿ ವಿಹಾರಕ್ಕೆ ಗಿರಾಕಿ ಸಿಕ್ಕನೆಂಬ ಖುಷಿ. ನಾವಿಕರಿಗೆ ಕೊಡಲು ಕೈಯಲ್ಲಿ ಬಿಡಿಗಾಸು ಇಲ್ಲದ ಫಕೀರನಿಗೆ ಹನುಮನ ನೆನೆಪಾಗಿರಬೇಕು! ತೆಲೆಗೆ ಕಟ್ಟಿದ್ದ ರುಮಾಲನ್ನು ಬಿಚ್ಚಿ ಸೊಂಟಕ್ಕೆ ಬಿಗಿದ, ನೋಡ ನೋಡುತ್ತಿದ್ದಂತೆ ಸಮುದ್ರಕ್ಕೆ ಹಾರಿಯೇ ಬಿಟ್ಟ. ನೆರೆದಿದ್ದ ನಾವಿಕರು ಅಚ್ಚರಿಯ ಜೊತೆ ಭಯದಿಂದ ಕೂಗಿ ಕರೆದರೂ ದೃತಿಗೆಡದ ಸ್ವಾಮೀಜಿ ಭಯಾನಕ ಅಲೆಗಳನ್ನು ಈಜಿ ಬಂಡೆಯನ್ನು ಹತ್ತಿ ಧ್ಯಾನಸ್ಥನಾಗಿ ಬಿಟ್ಟರು. ಹೇಗಿರಬೇಕು ಆ ದೃಶ್ಯ? ಭಾರತಾಂಬೆಯ ಪಾದತಡಿಯಲ್ಲಿ ಕುಳಿತ ಸ್ವಾಮಿ ವಿವೇಕಾನಂದ ತಾಯಿಗೆ ಪೂಜೆ ಸಲ್ಲಿಸುವ ದೃಶ್ಯ!

ದೇಶದ ಉದ್ದಗಲಗಳನ್ನು ಬರಿಗಾಲಲ್ಲಿ ಸುತ್ತಿದ ಸ್ವಾಮೀಜಿಗೆ ಕಣ್ಣ ಮುಂದೆ ಬಂದದ್ದು ಬ್ರಿಟಿಷರ ಆಡಳಿತದಲ್ಲಿ ನರಳುತ್ತಿದ್ದ ಭಾರತ. ಸ್ವಾಭಿಮಾನ ಕಲಿಸಿದ ನಾಡಿಂದು ಪರಕೀಯರ ಗುಲಾಮಗಿರಿಯಲ್ಲಿ ಬಸವಳಿಯುತಿದ್ದ ಚಿತ್ರ. ವಿಶ್ವಮಾನವತೆಯನ್ನು ಪರಿಚಯಿಸಿದ ಧರ್ಮ, ಜಾತಿ-ಮತಗಳ ನಡುವೆ ಕಿತ್ತಾಡುವ ದೃಶ್ಯ ಮತ್ತು ಬಡತನದಲ್ಲಿ ಬಳಲುತ್ತಿದ್ದ ಜನರ ಕಷ್ಟ. ೧೮೯೪ರಲ್ಲಿ ಚಿಕಾಗೊದಿಂದ ತನ್ನ ಅನುಯಾಯಿಗಳಿಗೆ ಪತ್ರ ಬರೆಯುತ್ತ ಸ್ವಾಮೀಜಿ ಹೇಳುತ್ತಾರೆ ” ಭಾರತದಲ್ಲಿರುವ ಬಡತನ ಮತ್ತು ಅರಾಜಕತೆಯನ್ನು ನೋಡಿ ನನಗೆ ನಿದ್ದೆ ಬರುತ್ತಿಲ್ಲ, ತಾಯಿ ಕುಮಾರಿಯ ದೇವಸ್ಥಾನದಲ್ಲಿ ಭಾರತದ ಕಟ್ಟಕಡೆಯ ಬಂಡೆಯ ಮೇಲೆ ಕುಳಿತಾಗ ನನಗೆ ಒಂದು ಉಪಾಯ ಹೊಳೆದಿದೆ. ನಾವೆಲ್ಲ ಸನ್ಯಾಸಿಗಳು ಇಷ್ಟು ದಿನ ಜನರಿಗೆ ಆದ್ಯಾತ್ಮದ ಬಗ್ಗೆ ಕಲಿಸಿದ್ದು ಹುಚ್ಚುತನ, ನಮ್ಮ ಗುರುಗಳು ಹೇಳಿರಲಿಲ್ಲವೇ ” ಹಸಿದ ಹೊಟ್ಟೆ ದರ್ಮಕ್ಕೆಯೇನು ಒಳಿತು ಮಾಡುತ್ತೆ? ” ಮೊದಲು ನಾವು ಜನರ ಹೊಟ್ಟೆ ತುಂಬಿಸೋಣ ಸ್ವಾಭಿಮಾನ ಕಲಿಸೋಣ” ಬಡ ಭಾರತದ ದೃಶ್ಯ ಕಂಡ ಸ್ವಾಮೀಜಿಗೆ ತಾಯಿ ಕುಮಾರಿ ದಾರಿಯೊಂದನ್ನು ತೋರಿಸಿದಳು. ಇಷ್ಟು ದಿನ ಆದ್ಯಾತ್ಮದ ಬಗ್ಗೆ ಅರಿವು ಮೂಡಿಸುತಿದ್ದ ಸ್ವಾಮೀಜಿ ದೇಶ ಕಟ್ಟಲು ನಿಂತರು, ಭಾರತದ ತಾರುಣ್ಯದ ಶಕ್ತಿಯನ್ನು ತೋರಿಸುತ್ತ ಜನರಲ್ಲಿ ದೇಶದ ಮತ್ತು ಧರ್ಮದ ಬಗ್ಗೆ ಇದ್ದ ಕೀಳರಿಮೆಯನ್ನು ತೊಡೆಯುವ ಸಂಕಲ್ಪ ಮಾಡಿದರು. ಕನ್ಯಾಕುಮಾರಿಯ ಬಂಡೆಯನೇರಿ ಭಾರತದ ಭವಿಷ್ಯ ಕಂಡರೂ. ಹ್ಹ.. ಸ್ವಾಮೀಜಿ ಬಂಡೆಯನೇರಿದ ದಿನ ಯಾವುದು ಗೊತ್ತೇ ?  ಡಿಸೆಂಬರ್ ೨೫ !

ಸ್ವಾಮೀಜಿ ಮೊದಲ ಬಾರಿ ಬಂಡೆಯನೇರಿದ್ದು ಡಿಸೆಂಬರ್ ೨೫  ೧೮೯೨ ಎಂದು ಗೊತ್ತಾಯಿತು. ಆದರೆ ಸ್ವಾಮೀಜಿ ಶಾಶ್ವತವಾಗಿ ಕನ್ಯಾಕುಮಾರಿಯ ಮಂಟಪವನ್ನು ಏರಿದ್ದು ೧೯೭೦ರಲ್ಲಿ ಸುಮಾರು ೮೦ ವರ್ಷಗಳ ನಂತರ. ಸ್ವಾಮೀಜಿಯ ಬಂಡೆಯ ತಪಸ್ಸಿನಂತೆ ಮಂಟಪದ ನಿರ್ಮಾಣದ ಕಥೆ ಸ್ವಾರಸ್ಯಕರವಾದದ್ದು.

ಅದು ೧೯೬೨ರ ಸಮಯ ಸ್ವಾಮೀಜಿಯವರ ಹುಟ್ಟು ಹಬ್ಬದ ದಿನ ಸ್ವಾಮೀಜಿಯವರ ಅನುಯಾಯಿಗಳು ಮತ್ತು ಮದ್ರಾಸಿನಲ್ಲಿದ್ದ ರಾಮಕೃಷ್ಣ ಮಠ, ಕನ್ಯಾಕುಮಾರಿಯ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರ ಮಂಟಪವನ್ನು ನಿರ್ಮಿಸಬೇಕೆಂದು ಸಂಕಲ್ಪ ಮಾಡಿದರು. ಈ ವಿಚಾರ ತಿಳಿದ ಸ್ಥಳೀಯ ಕ್ಯಾಥೊಲಿಕ್ ಚರ್ಚ್ ಒಂದು, ಮತಾಂತರಗೊಂಡ ಮೀನುಗಾರರನ್ನು ಒಕ್ಕಲೆಬ್ಬಿಸಿ ಕನ್ಯಾಕುಮಾರಿಯ ಬಂಡೆಯ ಮೇಲೆ ದೊಡ್ಡ ಶಿಲುಬೆಯನ್ನು ಸ್ಥಾಪಿಸಿ ಸಂತ ಕ್ಸೇವಿಯರ್ ರಾಕ್ ಎಂದು ನಾಮಕರಣ ಮಾಡಿಯೇ ಬಿಟ್ಟಿತು. ಈ ಬೆಳವಣಿಗೆಯಿಂದ ಸ್ಥಳೀಯ ಹಿಂದು ಸಮಾಜದ ಆಚರಣೆಗಳಿಗೆ ಅಡ್ಡಿ ಉಂಟಾದಾಗ. ಮದ್ಯ ಪ್ರವೇಶಿಸಿದ ಆಗಿನ ಮದ್ರಾಸ್ ಉಚ್ಚ ನ್ಯಾಯಾಲಯ, ಕನ್ಯಾಕುಮಾರಿಯ ಬಂಡೆಯನ್ನು ವಿವೇಕಾನಂದ ಬಂಡೆಯೆಂದು ಆದೇಶ ಹೊರಡಿಸಿ ರಾಜ್ಯ ಸರ್ಕಾರಕ್ಕೆ ಶಿಲುಬೆಯನ್ನು ಸ್ಥಳಾಂತರಿಸಲು ನಿರ್ದೇಶನ ನೀಡಿತು. ಆಗಿನ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಭಕ್ತವತ್ಸಲಂ ಕನ್ಯಾಕುಮಾರಿಯ ಬಂಡೆಯನ್ನು ಸ್ವಾಮಿ ವಿವೇಕಾನಂದ ಬಂಡೆಯೆಂದು ನಾಮಕರಣ ಮಾಡಿ ಒಂದು ಫಲಕವನ್ನು ನೆಡಲು ಅನುಮತಿ ಕೊಟ್ಟರು, ಆದರೆ! ಸ್ವಾಮೀಜಿಯ ಮಂಟಪದ ಕಾಲ ಇನ್ನು ಕೊಡಿ ಬಂದಿರಲಿಲ್ಲ.

ಸ್ವಾಮೀಜಿಯ ಮಂಟಪವನ್ನು ಕಟ್ಟಿಯೇ ತಿರಬೇಕೆಂಬ ಉದ್ದೇಶದಿಂದ ರಾಮಕೃಷ್ಣ ಮಠದ ಉಸ್ತುವಾರಿಯಲ್ಲಿ ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಕಮಿಟಿ ಒಂದನ್ನು ರಚಿಸಿ, ಅದರ ಉಸ್ತುವಾರಿಯನ್ನು ಏಕನಾಥ ರಾನಡೆ ಅವರಿಗೆ ವಹಿಸಲಾಯಿತು. ಬಂಡೆಯ ಮೇಲೆ ಮಂಟಪ ಕಟ್ಟಲು ರಾಜ್ಯ ಸರ್ಕಾರದ ವಿರೋಧದಿಂದಾಗಿ ಏಕನಾಥ ರಾನಡೆ ಕೇಂದ್ರ ಸರ್ಕಾರದ ಮೊರೆ ಹೋದರು. ಅಲ್ಲಿ ಕೇಂದ್ರದ ಮಂತ್ರಿಯಾಗಿದ್ದ ಹುಮಾಯೂನ ಕಭಿರ್ ಸ್ವಾಮಿ ವಿವೇಕಾನಂದರ ಮಂಟಪ ಕಟ್ಟಲು ವಿರೋಧ ವ್ಯಕ್ತ ಪಡಿಸಿದರು. ಏಕನಾಥ ರಾನಡೆ ಕೋಲ್ಕತ್ತಾವನ್ನು ಪ್ರತಿನಿಸುತಿದ್ದ ಹುಮಾಯೂನ ಕಬೀರರಿಗೆ ಬಂಗಾಳಿಗಳಿಂದಲೇ ಉತ್ತರ ಕೊಡಿಸಿ ಬಾಯಿ ಮುಚ್ಚಿಸಿ, ಸ್ವಾಮೀಜಿಯವರ ಮಂಟಪ ನಿರ್ಮಾಣಕ್ಕೆ ಸುಮಾರು ೩೨೩ ಸಂಸದರ ಸಹಿ ಸಂಗ್ರಹಿಸಿ ಪ್ರದಾನ ಮಂತ್ರಿಗಳಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಭೇಟಿಯಾಗಿ ವಿಷಯವನ್ನು ಮುಟ್ಟಿಸಿದ ನಂತರ, ಪ್ರದಾನಮಂತ್ರಿಗಳ ಸಂಪೂರ್ಣ ಬೆಂಬಲದೊಂದಿಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು  ಯಶಸ್ವಿಯಾದರು. ಮೊದಲಿಗೆ ಚಿಕ್ಕ ಮಂಟಪ ನಿರ್ಮಾಣಕ್ಕೆ ಮಾತ್ರ ಅನುಮತಿ ನೀಡಿದ ತಮಿಳುನಾಡಿನ ಮುಖ್ಯಮಂತ್ರಿ ಕಂಚಿ ಶ್ರೀಗಳ ಮಧ್ಯಪ್ರವೇಶದಿಂದ ಮಂಟಪದ ನಿರ್ಮಾಣದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ. ಸಮುದ್ರದ ಮಧ್ಯೆ ಮಂಟಪದ ನಿರ್ಮಾಣವೆಂದರೆ ಆಗಿನ ಕಾಲದಲ್ಲಿ ತುಂಬಾ ದೊಡ್ಡ ಯೋಜನೆ. ಈ ಮಂಟಪ ದೇಶದ ಆಸ್ತಿಯಾಗಬೇಕೆಂಬ ಅಸೆ ಹೊತ್ತಿದ್ದ ಏಕನಾಥ ರಾನಡೆ, ದೇಶದ ಎಲ್ಲ ರಾಜ್ಯಗಳಿಂದಲೂ ಹಣ ಸಂಗ್ರಹಿಸಿದರು. ಕೇರಳ ಹೋರಿತುಪಡಿಸಿ ಎಲ್ಲ ರಾಜ್ಯ ಸರ್ಕಾರಗಳು ಈ ಯೋಜನೆಯಲ್ಲಿ ಭಾಗವಹಿಸಿದವು. ದೇಶದ ಜನರನ್ನು ಯೋಜನೆಯಲ್ಲಿ ವಿನಿಯೋಗಿಸಿಕೊಂಡ ರಾನಡೆ ಸುಮಾರು ಏಳು ವರ್ಷಗಳಲ್ಲಿಯೇ ಬೃಹತ್ ಯೋಜನೆಯನ್ನು ಪೂರ್ಣಗೊಳಿಸಿ ದೇಶದ ಜನರ ಮುಂದಿಟ್ಟರು.

ಸ್ವಾಮೀಜಿಯವರ ಮಂಟಪ ಇಂದು ದೇಶದ ಜನರ ದೇಶಾಭಿಮಾನ ಮತ್ತು ಸ್ವಾಭಿಮಾನದ ಪ್ರತೀಕವಾಗಿ ನಿಂತಿದೆ. ಬಂಡೆಯನೇರಿ ದೇಶದ ಭವಿಷ್ಯ ಕಂಡ ಈ ದಿನವನ್ನು ದೇಶಾದ್ಯಂತ ವಿವೇಕಾನಂದ ರಾಕ್ ಡೇ ಎಂದು ಆಚರಿಸಲಾಗುತ್ತಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sachin anchinal

Writer by Love, Politician by Passion, Engineer by Profession. basically from Vijayapur (Bijapur). and loves to travel, read books and cricket .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!