Featured ಅಂಕಣ

ನ್ಯೂಟನ್ನನ ಸೇಬಿನ ಮರವೇನೋ ವಿಶ್ವಪ್ರಸಿದ್ಧವಾಯಿತು, ಆದರೆ…

ನ್ಯೂಟನ್ ಒಮ್ಮೆ ತೋಟದಲ್ಲಿ ಕೂತು ಯೋಚಿಸುತ್ತಿದ್ದನಂತೆ. ವಿಜ್ಞಾನಿಗಳಿಗೇನು ಕೆಲಸ ಯೋಚಿಸುವುದನ್ನು ಬಿಟ್ಟರೆ! ಹಾಗೆ ಏನನ್ನೋ ಯೋಚಿಸುತ್ತಿದ್ದಾಗ ಅವನ ತಲೆ ಮೇಲೆ ಒಂದು ಸೇಬಿನ ಹಣ್ಣು ಠೊಳ್ ಎಂದು ಬಿತ್ತಂತೆ. ನಮ್ಮ ಪ್ರೈಮರಿ ಶಾಲೆಯ ಮೇಷ್ಟ್ರು ಹಾಗೆ ಅಭಿನಯಪೂರ್ವಕ ಹೇಳುತ್ತಿದ್ದರೆ ಅದೆಲ್ಲ ನಿಜವೆಂದೇ ಭ್ರಮಿಸಿದ್ದೆವು (ಸೇಬಿನ ಬದಲು ಹಲಸಿನ ಹಣ್ಣು ಬಿದ್ದಿದ್ದರೆ ಅವನ ಮೂರು ನಿಯಮಗಳನ್ನು ಓದುವ ಕಷ್ಟವಾದರೂ ತಪ್ಪುತ್ತಿತ್ತೇ ಎಂದು ಪರಿತಪಿಸಿದ್ದೂ ಇದೆ!). ಆಮೇಲೆ ಯಾರೋ ಹೇಳಿದರು; ಆತನ ತಲೆ ಮೇಲೆ ಬಿದ್ದದ್ದೇನಲ್ಲ; ಬೇರಾವುದೋ ಜಾಗದಲ್ಲಿ ಕೂತ ಈತ ಹಾಗೆ ಸೇಬಿನ ಹಣ್ಣು ಮರದಿಂದ ಬೀಳುವುದನ್ನು ನೋಡಿದ್ದಷ್ಟೆ. ಇನ್ನೂ ಒಂದೆರಡು ವರ್ಷಗಳನ್ನು ಕಾಲೇಜಲ್ಲಿ ಕಳೆವಷ್ಟರಲ್ಲಿ, ಆ ಸೇಬಿನ ಪ್ರಸಂಗವೇ ಒಂದು ಕಟ್ಟುಕತೆ; ಹಾಗೆ ಸೇಬು ಬಿದ್ದದ್ದಾಗಲೀ ಅದನ್ನು ನ್ಯೂಟನ್ ನೋಡಿದ್ದಕ್ಕಾಗಲೀ ದಾಖಲೆ ಇಲ್ಲ. ರಸವತ್ತಾಗಿರುತ್ತದೆಂಬ ಕಾರಣಕ್ಕೆ ಯಾರೋ ಹೆಣೆದು ಸೇರಿಸಿದ ಆಧುನಿಕ ಐತಿಹ್ಯ ಇದು ಎಂಬುದು ಗೊತ್ತಾಯಿತು! ನ್ಯೂಟನ್ ಬಾಳಿ ಬದುಕಿದ ಮನೆಗೆ ಒಂದು ತೋಟವೂ, ಆ ತೋಟದಲ್ಲಿ ಒಂದಲ್ಲ ಹಲವಾರು ಸೇಬು ಮರಗಳಿರುವುದೇನೋ ನಿಜ.  ಅಷ್ಟರಲ್ಲಿ ಕತೆಯಲ್ಲಿ ಬರುವ ಮರ ಯಾವುದು ಎಂದೇ ಬುದ್ಧಿವಂತರು ಹಲವಾರು ವರ್ಷ ಜಗಳಾಡುತ್ತಿದ್ದರು! ಐತಿಹ್ಯವಾದರೂ ಜನರಿಗೆಷ್ಟು ಹುಚ್ಚುತನ ನೋಡಿ; ಭೂಮಿಯ ಗುರುತ್ವವನ್ನು ಬಿಡಿಸಿಕೊಂಡು ರಾಕೆಟ್ ಸಹಾಯದಿಂದ ಅಂತರಿಕ್ಷಕ್ಕೆ ಹಾರಿದ ವ್ಯೋಮಯಾನಿಗಳು ತಮ್ಮ ಜೊತೆ ನ್ಯೂಟನ್ ತೋಟದ ಸೇಬಿನ ಮರದ ಸಣ್ಣದೊಂದು ಟೊಂಗೆಯನ್ನೂ ತೆಗೆದುಕೊಂಡು ಹೋಗಿದ್ದರು!

 

ಆದರೆ ಸ್ವಾರಸ್ಯ ಏನು ಗೊತ್ತೆ? ನ್ಯೂಟನ್ ಸೇಬಿನ ಹಣ್ಣು ಬಳಸಿಕೊಂಡು ಭೂಮಿಗೆ ಗುರುತ್ವ ಬಲವಿದೆ ಎಂದು ತಿಳಿಸುವುದಕ್ಕೆ ಸಾವಿರದಿನ್ನೂರು ವರ್ಷಗಳ ಮೊದಲೇ ನಮ್ಮ ಭಾರತದಲ್ಲಿ ಒಬ್ಬ ಗಣಿತಜ್ಞ ಭೂಮಿಯ ಈ ಬಲದ ಬಗ್ಗೆ ತನ್ನ ಅನುಮಾನವೊಂದನ್ನು ತೇಲಿಬಿಟ್ಟಿದ್ದ. ಭೂಮಿ ಗುಂಡಗಿದೆ; ಮಾತ್ರವಲ್ಲ ಚೆಂಡಿನಂಥ ಈ ರಚನೆಯ ಸುತ್ತಲೂ ಮನುಷ್ಯರು ತಮ್ಮ ಕಾಲುಗಳನ್ನು ನೆಲಕ್ಕಂಟಿಸಿ ಭದ್ರವಾಗಿ ನಿಲ್ಲಬೇಕಾದರೆ ಅಲ್ಲೊಂದು ಆಕರ್ಷಣ ಬಲ ಕೆಲಸ ಮಾಡುತ್ತಿರಬೇಕು; ಭೂಮಿಯು ತನ್ನ ಮೈಮೇಲಿನ ಸಕಲ ಚರಾಚರ ವಸ್ತುಗಳನ್ನೂ ಹಿಡಿದಿಟ್ಟುಕೊಂಡಿದೆ – ಎಂದು ಆತ ಹೇಳಿಬಿಟ್ಟಿದ್ದ. ಆತನಿಗೆ ಈ ಯೋಚನೆ ಬಂದದ್ದು ಕೂಡ ಒಂದು ಹಣ್ಣಿನಿಂದಲೇ! ನ್ಯೂಟನ್‍ಗಿಂತ ಬಹಳ ಮೊದಲೇ ತನ್ನ ಈ ಅನುಮಾನವನ್ನು ಜಗತ್ತಿನ ಮುಂದಿಟ್ಟಿದ್ದ ವ್ಯಕ್ತಿ ಆರ್ಯಭಟ. ಮತ್ತು ಆತನಿಗೆ ಪ್ರೇರಣೆ ಕೊಟ್ಟದ್ದು ಕದಂಬ ವೃಕ್ಷದ ಹಣ್ಣು. ಬ್ಯಾಂಡ್‍ಮಿಂಟನ್ ಚೆಂಡಿನಂತಿರುವ ಕದಂಬದ ಹಣ್ಣನ್ನು ದೂರದಿಂದ ನೋಡಿದರೆ ಸಣ್ಣದೊಂದು ಚೆಂಡಿನ ಮೈಗೆ ಸಾವಿರಾರು ಮುಳ್ಳುಗಳನ್ನು ಚುಚ್ಚಿಟ್ಟಿದ್ದಾರೇನೋ ಅನ್ನಿಸಬೇಕು. ಅದನ್ನು ಕಂಡ ಮೇಲೆ, ಭೂಮಿಯೂ ಹೀಗೆ ಮನುಷ್ಯರನ್ನು ತನ್ನ ಅಗೋಚರ ಬಲದಿಂದ ಹಿಡಿದಿಟ್ಟಿದೆ ಎಂದು ಆರ್ಯಭಟನಿಗೆ ಅನ್ನಿಸಿದ್ದರಲ್ಲಿ ತಪ್ಪೇನೂ ಇಲ್ಲ. ಆದರೆ ಆತ ತನ್ನ ಸಂಶೋಧನೆಯನ್ನು ಮುಂದುವರಿಸಿ ವಿವರಗಳನ್ನು ಬರೆದಿಡದೆ ಹೋದದ್ದರಿಂದ ಕ್ರೆಡಿಟ್ಟನ್ನು ನ್ಯೂಟನ್ ಪಡೆಯುವಂತಾಯಿತು.

 

ಅಂದ ಹಾಗೆ ಈಗ ನಾನು ಮಾತಾಡ ಹೊರಟಿರುವುದು ವಿಜ್ಞಾನದ ಬಗ್ಗೆ ಅಲ್ಲ, ವಿಜ್ಞಾನಕ್ಕೆ ಪ್ರೇರಣೆ ಕೊಟ್ಟ ಕದಂಬ ವೃಕ್ಷದ ಬಗ್ಗೆ ಮಾತ್ರ. ಕರ್ನಾಟಕದವರಾದ ನಾವು ಕದಂಬ ಎಂದೊಡನೆ ರಾಜ್ಯವನ್ನಾಳಿದ ಒಂದು ಸಮರ್ಥ ರಾಜವಂಶವನ್ನೂ ಅದರ ಪ್ರಸಿದ್ಧ ದೊರೆ ಮಯೂರವರ್ಮನನ್ನೂ ಆತನ ಕತೆಯನ್ನು ವಿಸ್ತಾರವಾಗಿ ಬರೆದು ಕನ್ನಡಿಗರಿಗೆ ಉಪಕಾರ ಮಾಡಿದ ದೇವುಡು ನರಸಿಂಹ ಶಾಸ್ತ್ರಿಗಳನ್ನೂ, ಪರಕಾಯಪ್ರವೇಶ ಮಾಡಿ ಆ ಗತಕಾಲದ ರಾಜನಿಗೆ ರಕ್ತ-ಮಾಂಸ ತುಂಬಿ ತೆರೆಯ ಮೇಲಬ್ಬರಿಸಿ ನಮಗೆಲ್ಲ ರೋಮಾಂಚನ ತಂದ ರಾಜ್‍ಕುಮಾರರನ್ನೂ ನೆನೆಯುತ್ತೇವೆ. ಕ್ರಿಸ್ತಶಕ 325ರಿಂದ 540ರವರೆಗೆ, ಹೆಚ್ಚೂ ಕಡಿಮೆ ಇನ್ನೂರು ವರ್ಷಗಳ ಕಾಲ ಕರ್ನಾಟಕವನ್ನು ಆಳಿದ ರಾಜವಂಶ ಕದಂಬರದ್ದು. ಕ್ರಿಶ 450ರ ಸುಮಾರಿಗೆ ಬರೆಯಲ್ಪಟ್ಟ ತಾಳಗುಂದದ ಶಾಸನದ ಪ್ರಕಾರ, ಕದಂಬರ ಮೂಲವಂಶಜರು ಬ್ರಾಹ್ಮಣರೆಂದೂ ಅವರ ಮನೆಯ ಮುಂದೆ ಕದಂಬದ ಮರವಿದ್ದುದರಿಂದ ಅದೇ ಹೆಸರು ವಂಶಕ್ಕೆ ಅಂಟಿಕೊಂಡಿತೆಂದೂ ತಿಳಿದು ಬರುತ್ತದೆ. ಹೀಗೆ ಮನೆ ಮುಂದಿನ ಮರವನ್ನೇ ತಮ್ಮ ವಂಶದ ಹೆಸರಾಗಿಸಿಕೊಂಡ ವೃಕ್ಷಪ್ರೇಮಿ ರಾಜವಂಶ ಬಹುಶಃ ಜಗತ್ತಿನಲ್ಲಿ ಕದಂಬ ಒಂದೇ ಇರಬೇಕು! ಕದಂಬರು ಕನ್ನಡವನ್ನು ರಾಜ್ಯಭಾಷೆಯಾಗಿಸಿಕೊಂಡ ಕರ್ನಾಟಕದ ಮೊದಲ ರಾಜರೂ ಹೌದು. ಅವರ ರಾಜ್ಯ ಈಗಿನ ಉತ್ತರ ಕನ್ನಡದಲ್ಲಿರುವ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡಿತ್ತು. ಸಾಮ್ರಾಜ್ಯ ಉತ್ತರದಲ್ಲಿ ಗೋವೆಯವರೆಗೂ ದಕ್ಷಿಣದಲ್ಲಿ ತುಳುನಾಡಿನವರೆಗೂ ವಿಸ್ತರಣೆಯಾಗಿತ್ತು. ಗೋವೆಯನ್ನು ಭರ್ತಿ ಇನ್ನೂರು ವರ್ಷಗಳ ಕಾಲ ಕದಂಬರು ಆಳಿದರೆಂಬ ನೆನಪಿಗೋ ಏನೋ, ಆ ರಾಜ್ಯದ ಸಾರಿಗೆ ವ್ಯವಸ್ಥೆಗೆ ಕದಂಬ ಎಂಬ ಹೆಸರಿದೆ. ಆರನೇ ಶತಮಾನದ ನಂತರವೂ ಕದಂಬರು ಚಾಲುಕ್ಯ, ರಾಷ್ಟ್ರಕೂಟರ ಸಾಮಂತರಾಗಿ ಹಲವು ವರ್ಷ ರಾಜ್ಯಭಾರ ಮಾಡಿದರು.

 

ಒಂದು ಮರದ ಹೆಸರನ್ನು ಯಾರಾದರೂ ವಂಶಕ್ಕೆ ಇಟ್ಟುಕೊಳ್ಳುತ್ತಾರಾ, ಇದೇನೋ ಬುರುಡೆ ಇರಬೇಕು ಎಂದು ಕೆಲವರು ಕೊಂಕು ತೆಗೆಯುವುದಕ್ಕೆ ಅವಕಾಶವಿದ್ದರೂ ಪಶ್ಚಿಮ ಘಟ್ಟದಲ್ಲಿನ ಕದಂಬ ವೃಕ್ಷದ ಬಾಹುಳ್ಯ ಅವರ ಬಾಯಿ ಮುಚ್ಚಿಸುತ್ತದೆ. ಪಶ್ಚಿಮ ಘಟ್ಟ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದಿಗೂ ಕದಂಬದ ಮರ ಹೇರಳವಾಗಿ ಕಾಣಸಿಗುತ್ತದೆ. ಕದಂಬ ಎಂಬುದು ಸಂಸ್ಕತದ ಹೆಸರು. ಹಿಂದೀ ಭಾಷೆಯಲ್ಲೂ ಅದೇ ಹೆಸರು ನಿಂತಿದೆ. ಕರ್ನಾಟದಲ್ಲಿ ಕದಂಬ, ಜನಸಾಮಾನ್ಯರ ನಾಲಗೆಯಲ್ಲಿ ಕಡವು, ಕಡಹ, ಕಡಬೆ ಇತ್ಯಾದಿ ರೂಪಗಳನ್ನು ಪಡೆದಿದೆ. ಉತ್ತರ ಕನ್ನಡದಲ್ಲಿ ಇದಕ್ಕೆ ಆಪತ್ತಿ ಮರ ಎಂದೂ ಕರೆಯುತ್ತಾರೆ. ಮಲಯಾಳಂನಲ್ಲಿ ಕತಂಪು, ಬಂಗಾಲಿಯಲ್ಲಿ ಗಾರೋ, ಮರಾಠಿಯಲ್ಲಿ ನೀವ್, ಗುಜರಾತಿಯಲ್ಲಿ ಅರ್ದುಸೀ ಎಂಬ ಹೆಸರುಗಳಿವೆ. ಅಂದರೆ ಈ ವೃಕ್ಷ ಭಾರತದ ನಾಲ್ಕೂ ಕಡೆಗಳಲ್ಲಿ ಹೇರಳ ಸಂಖ್ಯೆಯಲ್ಲಿ ಕಾಣ ಬರುತ್ತಿತ್ತು; ಬರುತ್ತಿದೆ ಎಂಬುದಕ್ಕೆ ಯಾವ ಸಂದೇಹವೂ ಇಲ್ಲ. ಸಸ್ಯಶಾಸ್ತ್ರಜ್ಞರು ಇದನ್ನು ಆಂತೊಸೆಫಾಲಸ್ ಕದಂಬ ಎಂದು ಗುರುತಿಸಿದ್ದಾರೆ. ಶಾನ್ ಬ್ಯಾಪ್ಟೈಸ್ ಲಮಾರ್ಕ್ ಎಂಬ ಫ್ರೆಂಚ್ ಸಸ್ಯಶಾಸ್ತ್ರಜ್ಞನೊಬ್ಬ ಈ ಮರವನ್ನು ಯುರೋಪಿನಲ್ಲೂ ಗುರುತಿಸಿದ್ದರಿಂದ; ಮತ್ತು ಹಾಗೆ ವೈಜ್ಞಾನಿಕವಾಗಿ ಗುರುತಿಸಿದವರ ಪೈಕಿ ಆತ ಮೊದಲಿಗನಾದ್ದರಿಂದ ಅವನ ನೆನಪಿಗಾಗಿ ಈ ವೃಕ್ಷಕ್ಕೆ ನಿಯೋಲಮಾರ್ಕಿಯಾ ಕದಂಬ ಎಂಬ ಹೆಸರು ಕೂಡ ಇಟ್ಟಿದ್ದಾರೆ.

ಅದೆಲ್ಲ ಸರಿ ಮಾರಾಯರೆ, ಆದರೆ ಈ ಮರ ನೋಡುವುದಕ್ಕೆ ಹೇಗಿರುತ್ತದೆ ಎನ್ನುವ ಪ್ರಶ್ನೆ ನಿಮ್ಮದಾಗಿರಬಹುದು. ಯಾಕೆಂದರೆ ಪ್ರಗತಿಯ ದಾರಿಯಲ್ಲಿ ನಾವು ಎಷ್ಟು ಮುಂದೆ ಹೋಗಿದ್ದೇವೆಂದರೆ ಮೂರೋ ನಾಲ್ಕೋ ಮರಗಳನ್ನು ಬಿಟ್ಟರೆ ಮಿಕ್ಕ ಯಾವುದನ್ನೂ ಗುರುತಿಸಲಾಗದ ಹಂತಕ್ಕೆ ಶಿಕ್ಷಣ ನಮ್ಮನ್ನು ನೂಕಿ ಬಿಟ್ಟಿದೆ. ಹಲಸೋ ಮಾವೋ ಹಣ್ಣುಗಳು ತೊನೆದಾಡದಿದ್ದರೆ ಆ ಮರಗಳನ್ನು ಕೂಡ ನಾವು ಗುರುತಿಸಲಾರೆವೇನೋ! ಹಾಗಿರುವಾಗ ಕದಂಬ ಮರವನ್ನು ಪತ್ತೆ ಹಚ್ಚುವುದು ದೊಡ್ಡ ಸಾಹಸವೇ ತಾನೇ! ಕದಂಬ ವೃಕ್ಷ ಹೆಚ್ಚು ದಪ್ಪ ಬೆಳೆಯದಿದ್ದರೂ ಸಾಧಾರಣ 25 ಮೀಟರ್‍ನಷ್ಟು ಉದ್ದಕ್ಕೆ ಹೋಗುತ್ತದೆ. ಏಳೆಂಟು ಮೀಟರ್ ಎತ್ತರಕ್ಕೆ ಹೋದ ಮೇಲೆ ತನ್ನ ರೆಂಬೆಕೊಂಬೆಗಳನ್ನು ಅದು ವಿಶಾಲವಾಗಿ ಹರಡುವುದರಿಂದ ಒಳ್ಳೆಯ, ತಂಪಾದ ನೆರಳು ಸಿಗುತ್ತದೆ. ಎಲೆಗಳು ದಪ್ಪವಾಗಿದ್ದು ದೊಡ್ಡದಾಗಿರುತ್ತವೆ. ವರ್ಷಕ್ಕೊಮ್ಮೆ ಕದಂಬ ವೃಕ್ಷ ತನ್ನ ಹಳೆ ಎಲೆಗಳನ್ನು ಉದುರಿಸಿಕೊಂಡು ಹೊಸದನ್ನು ತೊಡುತ್ತದೆ. ಇವೆಲ್ಲಕ್ಕಿಂತ ವಿಶೇಷವೆನಿಸುವುದು ಅದರ ಚೆಂಡಿನಂತಹ ಆಕರ್ಷಕ, ಸುವಾಸನೆಭರಿತ ಹೂವು. ಕಿತ್ತಲೆ ಬಣ್ಣದಲ್ಲಿರುವ ಈ ಹೂವುಗಳು ಕಳಚಿ ಹೀಚು ಮೂಡಿದ ಮೇಲೆ ಅದು ಬೆಳೆದು ಹಳದಿ ಬಣ್ಣದ ಹಣ್ಣನ್ನು ಕೊಡುತ್ತದೆ. ಬಾವಲಿಗೂ ಇತರ ಹಕ್ಕಿಗಳಿಗೂ ಈ ಹಣ್ಣುಗಳು ಬಹಳ ಪ್ರಿಯ. ತೆಳುವಾದ ಹುಳಿ ರುಚಿ ಇರುವ ಈ ಹಣ್ಣುಗಳನ್ನು ನಾವು ಮನುಷ್ಯರು ಕೂಡ ಬೇಯಿಸಿಯೋ ಹಸಿಯಾಗಿಯೋ ತಿನ್ನಬಹುದು. ಕದಂಬ ವೃಕ್ಷದ ತೊಗಟೆಯನ್ನು ಹೊಟ್ಟೆ ಸೇರಿದ ವಿಷ ನಿವಾರಣೆಗೆ, ಕಣ್ಣಿನ ಚಿಕಿತ್ಸೆಗೆ, ತ್ವಚೆಯ ಕಾಯಿಲೆಗಳಿಗೆ ಬಳಸುತ್ತಾರಂತೆ.

 

ಕದಂಬ ಕೇವಲ ಭಾರತಕ್ಕೆ ಸೀಮಿತವಾದ ಮರವಲ್ಲ. ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಮತ್ತು ಬಹುತೇಕ ಎಲ್ಲ ಆಗ್ನೇಯ ಏಷ್ಯಾ ದೇಶಗಳಲ್ಲೂ ಕಂಡು ಬರುವ ಮರ ಇದು. ಭಾಗವತ ಪುರಾಣದಲ್ಲಿ ಕದಂಬದ ಉಲ್ಲೇಖ ಉಂಟು. ಸುಮೇಧ ಬುದ್ಧ ಜ್ಞಾನೋದಯ ಪಡೆದದ್ದು ಇದೇ ಮರದ ಕೆಳಗೆ ಎಂಬ ಐತಿಹ್ಯ ಉಂಟು. ಪಾರ್ವತೀ ದೇವಿಗೆ ಈ ಮರದ ಕೆಳಗೆ ಒಂದು ಮಗು ಹುಟ್ಟಿತೆಂದೂ ಆ ಮಗುವಿಗೆ ಆಕೆ ಕದಂಬ ಎಂದೇ ಹೆಸರಿಟ್ಟಳೆಂದೂ ಪುರಾಣ ಕತೆಗಳುಂಟು. ಒಂದೊಂದು ನಕ್ಷತ್ರಕ್ಕೂ ಒಂದೊಂದು ಮರ ಎಂದು ಪ್ರಾಚೀನರು ಗುರುತು ಹಾಕುತ್ತಾ ಬರುವಾಗ ಕದಂಬವನ್ನು ಬಿಟ್ಟಿಲ್ಲ. ಶತಭಿಷಾ ನಕ್ಷತ್ರಕ್ಕೆ ಈ ವೃಕ್ಷವನ್ನು ಅಂಟಿಸಿ ಬಿಟ್ಟಿದ್ದಾರೆ. ಮುಂದಿನ ಜನ್ಮದಲ್ಲಿ ಮರಿದುಂಬಿಯಾಗಿ ಹುಟ್ಟಿದರೂ ಬನವಾಸಿಯನ್ನು ಬಿಡಲಾರೆ ಎಂದ ಪಂಪ ತನ್ನೂರಿನ ಕದಂಬವನ್ನು ಬಿಟ್ಟಾನೇ? ಕಕುಭ, ಅಶೋಕ, ಕದಂಬ, ಲುಂಗ, ಲವಲೀ, ಭೂರ್ಜ, ಆರ್ಜುನ ಎನ್ನುತ್ತ ಮರ-ಹೂವುಗಳ ಪಟ್ಟಿ ಮಾಡುವಾಗ ಮರೆಯದೆ ಈ ವೃಕ್ಷವನ್ನು ನೆನೆಸಿಕೊಂಡಿದ್ದಾನೆ.

 

ಇನ್ನು, ಕದಂಬಕ್ಕೂ ಶ್ರೀಕೃಷ್ಣನಿಗೂ ಬಿಡದ ನಂಟು. ಆತ ಯಮುನೆಯ ದಡದಲ್ಲಿ ಹೇರಳವಾಗಿ ಬೆಳೆದಿದ್ದ ಕದಂಬಗಳ ತೋಪಿನಲ್ಲಿ ಕೂತು ತನ್ನ ಮುರಳೀಗಾನವನ್ನು ಮಾಡುತ್ತಿದ್ದ ಎಂದು ಕವಿ ಸೂರದಾಸ ಹಾಡಿ ಹೊಗಳಿದ್ದಾನೆ. ರಾಧಾ-ಮಾಧವರ ಪ್ರಣಯದಾಟಗಳು ನಡೆದದ್ದೆಲ್ಲವೂ ಕದಂಬದ ಕೆಳಗೇ ಅಂತೆ. ಅಷ್ಟೇ ಏಕೆ, ಕೃಷ್ಣ ಮೂರುತಿ ಇನ್ನೂ ಎಳೆ ಹುಡುಗನಾಗಿದ್ದಾಗ ಯಮುನೆಯಲ್ಲಿ ಸ್ನಾನಕ್ಕಿಳಿದ ಹೆಂಗಸರ ಬಟ್ಟೆಗಳನ್ನು ಕದ್ದು ಮರ ಹತ್ತಿ ಕೂತು, ಅದರ ಕೊಂಬೆಗಳಿಗೆ ಬಟ್ಟೆಯನ್ನು ನೇತು ಹಾಕಿದ್ದು; ಕೊನೆಗೆ ಆ ಹೆಂಗಸರು ಬೇಡಿಕೊಂಡಾಗ ನೀರಿಂದೀಚೆ ಬಂದು ಕೈಯೆತ್ತಿ ಬೇಡಿಕೊಳ್ಳುವಂತೆ ಮಾಡಿದ್ದು, ಅವರು ಹಾಗೆ ಮಾಡಿದ ಮೇಲೆ ಮರದ ಮೇಲಿಂದ ಇಳಿದು ಬಟ್ಟೆಗಳನ್ನು ವಾಪಸ್ ಕೊಟ್ಟ ಕತೆ ಗೊತ್ತಲ್ಲ? ಆ ಪ್ರಸಂಗವನ್ನು ಸವಿವರವಾಗಿ ಚಿತ್ರಿಸಿರುವ ಪೇಂಟಿಂಗ್ ಎಲ್ಲಾದರೂ ಸಿಕ್ಕರೆ ಅಲ್ಲಿರುವ ಹೆಂಗಸರ ಅಂದಚೆಂದಗಳನ್ನು ನೋಡುವ ಬದಲು, ಹಿನ್ನೆಲೆಯಲ್ಲಿರುವ ಮರದ ಕಡೆ ಸ್ವಲ್ಪ ಕಣ್ಣಾಡಿಸಿ. ಅಲ್ಲಿ ನಿಮಗೆ ಕದಂಬದ ಚೆಂಡು ಹೂವುಗಳು ಕಂಡರೂ ಕಂಡಾವೇನೋ. ಯಾಕೆಂದರೆ, ಕೃಷ್ಣ ಆ ತುಂಟಾಟವಾಡಿದ್ದು ಕದಂಬದ ಮರದಲ್ಲೇ ಅಂತೆ! ಮುಂದೆಂದಾದರೂ ದಾರಿಯಲ್ಲಿ ಹೋಗುತ್ತ, ಕಿತ್ತಲೆ ವರ್ಣದ ದುಂಡಗೆ ಹೂ ಬಿಟ್ಟ ಕದಂಬ ಕಾಣಿಸಿಕೊಂಡಾಗ ಈ ಚರಿತ್ರೆ, ಪುರಾಣ, ವಿಜ್ಞಾನಗಳೆಲ್ಲ ನಿಮ್ಮ ಮನಃಪಟಲದಲ್ಲಿ ಒಮ್ಮೆ ಚಿತ್ರಪಟದಂತೆ ಹಾದು ಹೋಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!