ಘಟನೆ 1:
ನಮ್ಮ ಅಪಾರ್ಟ್ಮೆಂಟಿನಲ್ಲಿ ವಾಸಿಸುವ ಡಾ. ಕುಲಕರ್ಣಿ (ಹೆಸರು ಬದಲಾಯಿಸಲಾಗಿದೆ)ಯವರು ಮೆಡಿಕಲ್ ಕಾಲೇಜೊಂದರಲ್ಲಿ ಪ್ರಿನ್ಸಿಪಾಲ್. ಅವರ ಹೆಂಡತಿ ಸಹ ಡಾಕ್ಟರ್, ಪ್ರೈವೇಟ್ ಕ್ಲಿನಿಕ್ಕೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬನೇ ಮಗ MBBS ಕೊನೆಯ ವರ್ಷದಲ್ಲಿದ್ದಾನೆ. ಎಲ್ಲ ಮಹಾನಗರಗಳಲ್ಲಿರುವಂತೆ ನಮ್ಮಲ್ಲೂ ಅಕ್ಕಪಕ್ಕದ ಮನೆಗಳಲ್ಲಿ ಅಷ್ಟಾಗಿ ಬಳಕೆ ಇಲ್ಲ. ಸಣ್ಣ ಮತ್ತು ಹಳೆಯ ಅಪಾರ್ಟ್ಮೆಂಟಾದ್ದರಿಂದ ಪ್ರತಿಯೊಬ್ಬರ ಪರಿಚಯವಿದೆ, ಹಾಗೂ ಎದುರಿಗೆ ಕಂಡಾಗ ಕುಶಲ ಸಮಾಚಾರ ವಿಚಾರಿಸುತ್ತೇವೆ.
ಕುಲಕರ್ಣಿಯವರು ಡಾಕ್ಟರಾದರೂ ಧಾರ್ಮಿಕ ಸ್ವಭಾವದವರು. ಅವರಲ್ಲಿ ಪೂಜೆ, ಪುನಸ್ಕಾರ ಜಾಸ್ತಿ. ವರ್ಷಕ್ಕೆ ನಾಲ್ಕೈದು ಬಾರಿಯಾದರೂ ಪ್ರಸಾದ, ಅರಿಶಿನ-ಕುಂಕುಮ ಎಂದು ನಾನು ಅವರ ಮನೆಗೆ ಹೋಗಬೇಕಾಗುತ್ತದೆ. ಕುಲಕರ್ಣಿ ಕಾಕು ತುಂಬ ಸ್ನೇಹಮಯಿ, ಕಾಕಾ ಮಾತ್ರ ಹುದ್ದೆಗೆ ತಕ್ಕ ಗಂಭೀರವನ್ನು ಕಾಯ್ದುಕೊಂಡಿದ್ದಾರೆ.(ಮರಾಠಿಯಲ್ಲಿ ಅಂಕಲ್, ಆಂಟಿಗಿಂತ ಕಾಕಾ, ಕಾಕು ಹೆಚ್ಚು ಬಳಕೆಯಲ್ಲಿದೆ)
ಕಳೆದ ತಿಂಗಳು, ಒಂದು ಶನಿವಾರದ ಸಂಜೆ ನಾನು ನನ್ನ ಪತಿ ಮಾರ್ಕೆಟ್ಟಿಗೆ ಹೊರಡುತ್ತಿದ್ದೆವು. ನಾನು ಪಾರ್ಕಿಂಗ್ ತಲುಪುವಷ್ಟರಲ್ಲಿ, ನನ್ನ ಪತಿಯ ಜೊತೆ ಕುಲಕರ್ಣಿ ಕಾಕಾ ಎನೋ ಗಹನವಾಗಿ ಮಾತಾಡುತ್ತಿದ್ದರು. ಎಂದೂ ಇಲ್ಲದೆ ಇವತ್ತೇನು ಚರ್ಚೆ ಎಂದು ನಾನೂ ಕುತೂಹಲಗೊಂಡೆ. ಅವರು ಹೇಳುತ್ತಿದ್ದ ವಿಷಯ ಇಂತಿತ್ತು.
ಅವರ ಕಾಲೇಜಿನಲ್ಲ ಸೆಕೆಂಡ್ ಇಯರಿನಲ್ಲಿ ಓದುತ್ತಿದ್ದ ಹುಡುಗಿಯೊಬ್ಬಳು ಹಿಂದಿನ ಸಾಯಂಕಾಲ ಊರ ಅಂಚಿನಲ್ಲಿರುವ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ನಮ್ಮ ಮನೆಗೆ ಬರುವ ಪೇಪರಿನಲ್ಲಿ ಇದರ ಬಗ್ಗೆ ಚುಟುಕು ಸುದ್ದಿಯಿತ್ತು. ಅವರ ಬಳಿ ಕೆಲವು ಪೇಪರ್’ಗಳ ಕಟಿಂಗ್ಸ್ ಇದ್ದವು. ಆ ಹುಡುಗಿಯ ಹೆಸರು, ವಿಳಾಸ, ಕಾಲೇಜಿನ ಹೆಸರು, ಆತ್ಮಹತ್ಯೆಗೆ ಇರಬಹುದಾದ ಅನೇಕ ಕಾರಣಗಳನ್ನು ವಿವರವಾಗಿ(?) ಸಂಗ್ರಹಿಸಿದ್ದವು. ಕಾಕಾ ಅವರು ಹೇಳುತ್ತಲೇ ಹೋದರು. ” ಇವಳು ನಮ್ಮ ಗುರುತಿನವರ ಮಗಳೆ. ತಂದೆ ತಾಯಿ ಇಬ್ಬರೂ ಡಾಕ್ಟರ್, ಒಬ್ಬಳೇ ಮಗಳು. ಬಹಳ ಮುದ್ದಿನಿಂದ ಬೆಳೆಸಿದ್ದರು. ನಾನು ನಿನ್ನೆ ಮುಂಬೈಗೆ ಒಂದು ಕಾನ್ಫರೆನ್ಸ್ ಅಟೆಂಡ್ ಮಾಡಲು ಹೋಗಿದ್ದೆ. ಸಾಯಂಕಾಲ ಸುದ್ದಿ ತಿಳಿದ ತಕ್ಷಣ ಹೊರಟೆ. ಎಕ್ಸಾಮ್’ನಲ್ಲಿ ಫೇಲಾದ್ದರಿಂದ ಜಿಗುಪ್ಸೆಯಾಗಿದೇಂತ ಬರೆದು ಸತ್ತಿದ್ದಾಳೆ. ಪ್ರಿನ್ಸಿಪಾಲ್ ಆಗಿ ನನ್ನ ಜವಾಬ್ದಾರಿ ಬೇಕಾದಷ್ಟಿದೆ. ರಾತ್ರಿ ಬಂದಾಗಿನಿಂದ, ಪೋಲಿಸ್ ಸ್ಟೇಷನ್ ಅಲೆಯುತ್ತಿದ್ದೇನೆ. ಅಲ್ಲದೆ ಕಾಲೇಜಿನ ಹೆಸರು ಉಳಿಸಲು ಮ್ಯಾನೇಜ್’ಮೆಂಟಿನ ಪ್ರೆಷರ್ ಬೇರೆ. ಅವಳ ಅಪ್ಪ, ಅಮ್ಮನ್ನ ಸರಿಯಾಗಿ ಮಾತಾಡಿಸಲೂ ಆಗಿಲ್ಲ. ನನ್ನ ಹೆಂಡತಿ ಅಲ್ಲೇ ಇದ್ದಾಳೆ. ಸ್ವಲ್ಪ ಫ್ರೆಶ್ ಆಗಲು ನಾನು ಈಗ ಮನೆಗೆ ಬಂದೆ. ನಿನ್ನೆಯಿಂದ ನಾನು ಅನುಭವಿಸಿದ್ದನ್ನು ಹೇಳಿಕೊಂಡು ಹಗುರಾಗಲು ನನಗೆ ಒಬ್ಬರು ಬೇಕಾಗಿದ್ದರು, ಸದ್ಯ ನೀವು ಸಿಕ್ಕಿದಿರಿ.
ಎಕ್ಸಾಂನಲ್ಲಿ ಫೇಲಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡೇಂತ ಬರ್ದಿದ್ದಾಳೆ, ಆದ್ರೆ ಪೊಲೀಸರು ತಮ್ಮ ಪ್ರಕಾರ ತನಿಖೆ ನಡೆಸುತ್ತಾರೆ. ಈ ವಿಷಯ ಎಲ್ಲೂ ಹೊರಗೆ ಬರುವುದಿಲ್ಲ, ಬರಲು ಬಿಡುವುದಿಲ್ಲ. ಇಲ್ನೋಡಿ, ಇವಳ facebook, whatsapp ನ ರೆಕಾರ್ಡುಗಳು. ನಿನ್ನೆ ಬೆಳಿಗ್ಗೆಯಿಂದ ರಿಸಲ್ಟ್ ಬರುವವರೆಗೂ ಆನ್’ಲೈನ್ ಇದ್ದಳು. ಎರಡರಲ್ಲೂ ಚಾಟಿಂಗ್ ನಡೆಸಿದ್ದಾಳೆ. ಕೆಲವು ಹುಡುಗರೂ ಇದ್ದಾರೆ. ನಿಮಗೆ ಎಲ್ಲಾ ತೋರಿಸೋಕಾಗಲ್ಲ, ಕೆಲವನ್ನು ನೋಡಿ.”
ನೋಡಿ ನಾವಿಬ್ಬರೂ ದಂಗಾದೆವು. ಈಗಿನ ಕಾಲದಲ್ಲಿ ಹುಡುಗ ಹುಡುಗಿಯರು ತುಂಬಾ ಬೋಲ್ಡ್, ಎಲ್ಲಾ ವಿಷಯಗಳಲ್ಲೂ ಫ್ರೀ ಆಗಿ ಮಾತಾಡ್ತಾರೆ, ಒಪ್ಪುವಂಥದ್ದೆ. ಆದರೂ ಹಾಯ್, ಹಲೋದಷ್ಟು ಸಲೀಸಾಗಿ, ಲವ್,ಕಿಸ್,ಫ್.. ಉಪಯೋಗಿಸ್ತಾರೇಂತ ಗೊತ್ತಿರಲಿಲ್ಲ.
ಕುಲಕರ್ಣಿ ಕಾಕಾ ಮುಂದುವರೆಸಿದರು, ” ಇದು ಬರಿ ನಿನ್ನೆ ಮಧ್ಯಾನ್ಹದ ರೆಕಾರ್ಡು. ಇಡೀ ದಿನದ್ದಾದರೆ ಒಂದಿನ್ನೂರು ಪೇಜಿನ ಪುಸ್ತಕವಾಗಬಹುದು. ಅಲ್ಲಾ, ಫೇಲಾಗಿದ್ದಕ್ಕೆ ಬೇಸರವಾಯಿತೂಂತ ಬರ್ದಿದ್ದಾಳಲ್ಲ, ನಿನ್ನೆ ರಿಸಲ್ಟ್ ಡಿಕ್ಲೇರಾಗುತ್ತದೆ ಎಂದು ಎರಡು ದಿನ ಮೊದಲೇ ಗೊತ್ತಿತ್ತು, ಅದರ ಟೆನ್ಶನ್ ಎಲ್ಲಾದರೂ ಇದೆಯಾ ಈ ಚಾಟಿಂಗ್ನಲ್ಲಿ? ಓದಿನ ಮೇಲೆ ಸ್ವಲ್ಪ ಲಕ್ಷ ಕೊಟ್ಟಿದ್ರೆ..” ಉಕ್ಕಿ ಬರುತ್ತಿದ್ದ ದುಃಖವನ್ನು ತಡೆದುಕೊಳ್ಳುತ್ತ ಹೇಳಿದರು, ” ಮಕ್ಕಳಿಗೆ ಬರೀ ಸೌಕರ್ಯಗಳನ್ನು ಒದಗಿಸಿ ಕೊಡುವುದಷ್ಟೇ ತಂದೆ ತಾಯಿಯ ಕರ್ತವ್ಯವಲ್ಲ. ತಮ್ಮ ಮಕ್ಕಳು ಹೇಗೆ ಬೆಳೀತಿದ್ದಾರೆ, ಯಾವ ಸಂಗತಿಯಲ್ಲಿದ್ದಾರೆ ಅಂತ ತಿಳಿದುಕೊಳ್ಳುವುದು ಅವರ ಕರ್ತವ್ಯ. ಮಕ್ಕಳ ಜೊತೆ ಆತ್ಮೀಯತೆ ಇರಬೇಕು, ಯಾವ ವಿಷಯವಾದರೂ ಅವರೊಡನೆ ಮುಕ್ತವಾಗಿ ಹಂಚಿಕೊಳ್ಳಬೇಕು. ಮುಖ್ಯವಾಗಿ ಅವರಿಗೆ ಮನೆಯ ಆರ್ಥಿಕ ಸ್ಥಿತಿ ಗೊತ್ತಿರಬೇಕು. ಬರುವ ಸಂಬಳದ ಜೊತೆಗೆ ಇರೋ ಸಾಲದ ಪರಿಚಯವೂ ಇರಬೇಕು. ಈಗ ಮಕ್ಕಳು ಒಬ್ರೊ ಇಬ್ರೊ ಇರ್ತಾರೆ. ಎಷ್ಟೋ ವಿಷಯಗಳನ್ನು ಹಂಚಿಕೊಳ್ಳಲಿಕ್ಕೆ ಮನೆಯಲ್ಲಿ ಯಾರೂ ಸಿಗದೆ ಹೊರಗಿನ ಪ್ರೀತಿಗಾಗಿ ಹಂಬಲಿಸುವಂತಾಗುತ್ತದೆ. ಫ್ರೆಂಡ್ಸ್ ಇರಬೇಕು, ಆದರೆ ಅವರು ಮನೆ ಜನರನ್ನು ರೀಪ್ಲೇಸ್ ಮಾಡಬಾರದು. ನೋಡಿ, ನಿಮಗೂ ಇರೋದು ಒಬ್ಳೆ ಮಗಳು, ನಮಗೂ ಒಬ್ನೇ ಮಗ, ಇಂಥದ್ದನ್ನೆಲ್ಲ ಕೇಳಿದ್ರೆ ದುಗುಡವಾಗುತ್ತದೆ. “
ನಾನಾಗಲೇ ಅದನ್ನು ಅನುಭವಿಸುತ್ತಿದ್ದೆ.
“ನಮ್ಮನೆಯಲ್ಲಿ ನಿಮಗೆ ಗೊತ್ತಿದ್ದಂತೆ ಪೂಜೆ ಪುನಸ್ಕಾರ ಬಹಳ. ದೇವರ ಮೇಲಿನ ಭಕ್ತಿಗಿಂತ ಆ ಕಾರಣದಿಂದ ನಾವು ನೆಂಟರೆಲ್ಲ ಸೇರ್ತೀವಿ, ಅದು ಮುಖ್ಯ. ನನ್ನ ಮಗನಿಗೆ ಒಡಹುಟ್ಟಿದವರಿಲ್ಲಾಂತ ಎಂದೂ ಅನಿಸಿಲ್ಲ. ನನ್ನ ತಂದೆಯ ಶ್ರಾದ್ಧ ಮಾಡ್ತೀನಿ, ಅದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಆ ಕಾರಣದಿಂದ, ನನ್ನ ಮಗ ಮನೇಲಿರ್ತಾನೆ, ಹಳೆ ನೆನಪುಗಳನ್ನು ಮೆಲುಕು ಹಾಕ್ತೀವಿ. ಇದರಿಂದ ನನ್ನ ತಾಯಿಗೂ ಸಮಾಧಾನವಾಗುತ್ತದೆ. “
ಡಾ! ಕುಲದರ್ಣಿಯವರನ್ನು ಬೀಳ್ಕೊಟ್ಟು ಮಾರ್ಕೆಟ್ಟಿಗೆ ಬಂದರೂ ಮನಸ್ಸು ಮಾತ್ರ ಆತ್ಮಹತ್ಯೆ ಮಾಡಿಕೊಂಡ ಆ ಹುಡುಗಿ ಮತ್ತವಳ ತಂದೆ ತಾಯಿಯ ಬಗ್ಗೆಯೇ ಸುತ್ತುತ್ತಿತ್ತು. ಒಂದು ಪರೀಕ್ಷೆಯ ಫಲಿತಾಂಶ ಎಷ್ಟೆಲ್ಲ ಜನರ ಬದುಕನ್ನೆ ಅಲ್ಲಾಡಿಸಿಬಿಟ್ಟಿತಲ್ಲ. ಇದರ ಜವಾಬ್ದಾರಿ ಹೊರುವವರಾರು? ಕೇಳಿದ್ದೆಲ್ಲ ಕೊಡಿಸಿ ಮಕ್ಕಳನ್ನು ಸುಖವಾಗಿರಿಸಿದೆವೆಂಬ ಹೆತ್ತವರೆ, ತಪ್ಪು ದಾರಿಗೆಳೆವ ಮಿತ್ರರೆ, ಶಾಲಾ ಕಾಲೇಜುಗಳನ್ನೊಳಗೊಂಡ ಶಿಕ್ಷಣ ವ್ಯವಸ್ಥೆಯೆ, ಮರುಳು ಮಾಡುವ ಅವಾಸ್ತವಿಕ ಜಗತ್ತೆ, ಯೋಚಿಸಿದಷ್ಟೂ ಸಂಕೀರ್ಣ.
ಘಟನೆ 2:
ನಮ್ಮ ಕಾಲೇಜಿನಲ್ಲಿ ಈಗ ಸೆಮಿಸ್ಟರ್ ಪರೀಕ್ಷೆ ಶುರುವಾಗಲು ಒಂದು ವಾರವಿದೆ. ವಿದ್ಯಾರ್ಥಿಗಳ ಅಟೆಂಡೆನ್ಸ್, ಟೆಸ್ಟ್ ಗಳಲ್ಲಿ ಪಡೆದ ಮಾರ್ಕ್ಸ್, ಎಲ್ಲದರ ಅನಾಲಿಸಿಸ್ ಮಾಡಿ, ಅತೀ ಕಡಿಮೆ ದರ್ಜೆಯ ಕೆಲವರನ್ನು defaulter ಎಂದು ಗುರುತಿಸಲಾಗುತ್ತದೆ. ಅವರಿಗೆ ವಿವಿಧ ತರಹದ ಶಿಕ್ಷೆಗಳಿರುತ್ತವೆ. assignment ಬರೆಯುವುದು, ದಂಡ ಕಟ್ಟುವುದು, ಪಾಲಕರನ್ನು ಕರೆತರುವುದು ಇತ್ಯಾದಿ. ಹೊಸದಾಗಿ ಕಾಲೇಜಿಗೆ ಸೇರಿದ ಶಿಕ್ಷಕರೊಬ್ಬರು prof. ಚಂದ್ರ ಅಂತ, ಅವರು ತಮ್ಮ ವಿದ್ಯಾರ್ಥಿನಿಯೊಬ್ಬಳಿಗೆ ಬಯ್ಯುತ್ತಿದ್ದರು. ಧ್ವನಿ ಸ್ವಲ್ಪ ಜೋರಾಗಿಯೇ ಇತ್ತು. ಹತ್ತಿರವೇ ಇದ್ದ ನಾನು ವಿಚಾರಿಸಿದೆ. ” ನೋಡಿ ಮೇಡಂ, ಇವಳು ಸೆಮಿಸ್ಟರ್ ಇಡೀ ಸರಿಯಾಗಿ ಪ್ರಾಕ್ಟಿಕಲ್ಲಿಗೆ ಬಂದಿಲ್ಲ, ಒಂದು ಪ್ರೋಗ್ರಾಂ ಸ್ವತಃ ಮಾಡಿಲ್ಲ, ಈಗ ಬಂದು ಜರ್ನಲ್ ಚೆಕ್ಮಾಡಿ ಅಂತಿದ್ದಾಳೆ.”
ಸರಿ ನಾನೂ ಸಹ ಅವರ ಜೊತೆಗೂಡಿ ಅವಳನ್ನು ಸ್ವಲ್ಪ ಬಯ್ದು, “ಹೋಗಲಿ, ಒಂದೈದು ಪ್ರೋಗ್ರಾಂ ಮಾಡಿ ತೋರಿಸು, ಸರ್ ಸೈನ್ ಮಾಡ್ತಾರೆ” ಅಂತ ಹೇಳಿದೆ. ಆದರೆ ಆ ಹುಡುಗಿಯ ಧೋರಣೆಯೆ ಬೇರೆಯಾಗಿತ್ತು. ಪಶ್ಚಾತ್ತಾಪದ ಕುರುಹೂ ಅವಳಲ್ಲಿರಲಿಲ್ಲ. ಬರೀ ಹೂಂ ಅಂದು ಹೊರಟಳು. ನಾವು ಅವಳ ಬಗ್ಗೆ ಚರ್ಚಿಸುತ್ತಿರುವಾಗಲೆ ಚಂದ್ರ ಅವರಿಗೊಂದು ಫೋನ್ ಬಂದಿತು. ಮಾತಾಡುತ್ತಿದ್ದಂತೆ ಅವರ ಮುಖ ಒಮ್ಮೆಲೆ ಬದಲಾಯಿತು, ” ಅದು ಹಾಗಲ್ಲ” ಅಂತ ಏನೋ ಸಮಜಾಯಿಸಿ ಕೊಡುತ್ತಿದ್ದರೂ ಬಹುಶಃ ಕರೆ ಅರ್ಧದಲ್ಲೇ ಕಟ್ಟಾಯಿತು. ನಾನು ಸನ್ನೆಯಲ್ಲೇ ಯಾರೂಂತ ಕೇಳಿದೆ.
” ಈ ಬಂದಿದ್ಲಲ್ಲ, ಆ ಹುಡುಗಿಯ ತಾಯಿ. ನನ್ನ ಮಗಳು ತುಂಬಾ ಸೂಕ್ಷ್ಮ, ನೀವು ಹೀಗೆ ಪರೀಕ್ಷೆಯ ಟೈಮಿನಲ್ಲಿ ಬಯ್ಯುವುದು ತಪ್ಪು ಅಂತ ನನಗೇ ಹೇಳಿದ್ರು. ಅದು ಹೋಗ್ಲೀಂದ್ರೆ, ನನ್ನ ಮಗಳು ಬೇಜಾರು ಮಾಡಿಕೊಂಡು ಸುಸೈಡ್ ಮಾಡ್ಕೊಂಡ್ರೆ ಯಾರು ಜವಾಬ್ದಾರರು ಅಂತ ನನ್ನನ್ನೇ ದಬಾಯಿಸಿದರು”
ವಿಷಯ ಎಚ್.ಓ.ಡಿ ವರೆಗೂ ಹೋಗಿ, ಅವರು ತಾಯಿ ಮಗಳಿಬ್ಬರ ಜೊತೆಗೂ ಮಾತಾಡಿ ಹೇಗೊ ಸುಧಾರಿಸಿ…. ಅಂತೂ ಅವಳ ಜರ್ನಲ್ ಸಹಿಯಾಗಿ ಅವಳು ಪರೀಕ್ಷೆಗೆ ಕೂಡುವುದರೊಂದಿಗೆ ಪ್ರಕರಣ ಸುಖಾಂತ.
ಮೇಲಿನ ಎರಡು ಘಟನೆಗಳು ಉದಾಹರಣೆ ಮಾತ್ರ. ಈ ತರಹದ ಎಷ್ಟೋ ಅನುಭವಗಳು ಆಗುತ್ತಲೇ ಇರುತ್ತವೆ.
ಕಾಲೇಜುಗಳಲ್ಲಿ ಕೆಲಸ ಮಾಡುವುದರಿಂದ ಲಾಭ ಹಾಗೂ ನಷ್ಟ ಎರಡೂ ಇವೆ. ಹೆಚ್ಚು ಸಮಯ ಯುವಜನರ ಮಧ್ಯೆ ಇರುವುದರಿಂದ ಯಾವಾಗಲೂ ಮನಸ್ಸು ಉತ್ಸಾಹದಿಂದಿರುತ್ತದೆ. ಆದರೆ ಕೆಲವರು ದಾರಿ ತಪ್ಪಿದ್ದನ್ನು ನೋಡಿಯೂ ಏನೂ ಮಾಡದಂತೆ ಅಸಹಾಯಕವಾದಾಗ ಬೇಜಾರಾಗುತ್ತದೆ. ಅಷ್ಟೆ ಅಲ್ಲ ಅವರನ್ನು ತಮ್ಮ ಮಕ್ಕಳೊಂದಿಗೆ ಹೋಲಿಸಿ ಅವರೂ ಹೀಗೇ ಆಗಿ ಬಿಡುತ್ತಾರೆಂಬ ಅವ್ಯಕ್ತ ಭಯ ಕಾಡುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಕಾಲೇಜಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವುಗಳಲ್ಲಿ ಪಾಲಕರ ಸಭೆಯೂ ಒಂದು. ಅನೇಕ ಕಾಲೇಜು ಮಕ್ಕಳಿಗೆ ತಮ್ಮ ತಂದೆ ತಾಯಿಯರು ತಮ್ಮ ಕಾಲೇಜಿಗೆ ಬಂದು ವಿಚಾರಿಸುವುದು ಇಷ್ಟವಾಗುವುದಿಲ್ಲ. ಪಾಲಕರೂ ಸಹ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಇದೊಂದು ಅವಕಾಶ, ನಿಮ್ಮ ಮಕ್ಕಳ ಬಗ್ಗೆ ತಿಳಿದುಕೊಳ್ಳಲು. ಎಲ್ಲರಿಗೂ ತಮ್ಮ ಮಕ್ಕಳು ಒಳ್ಳೆಯವರು, ಸಂಭಾವಿತರೇ ಆಗಿರುತ್ತಾರೆ. ಅದೂ ಅಲ್ಲದೆ, ಪಾಸಾಗುತ್ತಿದ್ದಾನೆ/ಳೆ ಹಾಗಾಗಿ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದಾನೆ/ಳೆ ಎಂಬುದೊಂದು ತಪ್ಪು ಕಲ್ಪನೆ. ಇವತ್ತಿನ ಪರೀಕ್ಷಾ ಪದ್ಧತಿಯಲ್ಲಿ ಪಾಸಾಗುವುದು ಅಷ್ಟು ಕಠಿಣವೇನಲ್ಲ. ಅದರಲ್ಲೂ ಪ್ರೈವೇಟ್ ಕಾಲೇಜುಗಳಲ್ಲಿ ರಿಸಲ್ಟ್ ಚೆನ್ನಾಗಿರಲೇಬೇಕೆಂಬ ಒತ್ತಡದವಿರುತ್ತದೆ. ಅದಕ್ಕಾಗಿ ಮಕ್ಕಳು ಎಷ್ಟೇ ವಿರೋಧಿಸಿದರೂ ಅಗಾಗ ಕಾಲೇಜಿಗೆ ಹೋಗಿ ಶಿಕ್ಷಕರನ್ನು ಕಂಡು ಬನ್ನಿ. ಮಕ್ಕಳಿಗೆ ಬೇಕಾದಷ್ಟು ಸ್ವಾತಂತ್ರ್ಯ ಕೊಟ್ಟರೂ, ಅದರ ದುರುಪಯೋಗವಾಗುತ್ತಿಲ್ಲವೆಂದು ಗಮನಿಸುತ್ತಿರುವುದು ದೊಡ್ಡವರ ಕರ್ತವ್ಯವಾಗಿದೆ.
ಕೊನೆಯದಾಗಿ, ನಾನು ಯಾವಾಗಲೂ ಕ್ಲಾಸಿನಲ್ಲಿ ಹೇಳುವ ಮಾತು: ನಿಮ್ಮ ಪೇರೆಂಟ್ಸ್ ದುಡ್ಡು ಹೆಚ್ಚು ಖರ್ಚು ಮಾಡಿದಷ್ಟು, ನಿಮ್ಮ ಫೋನುಗಳು ಸ್ಮಾರ್ಟ್ ಆಗುತ್ತವೆ.