ಅಂಕಣ

ನಾವು ಹೆಣ್ಮಕ್ಕಳು ಹೀಗೇಕಿದ್ದೇವೆ?

ನಾನೇಕೆ ಹೀಗಿದ್ದೇನೆ..? ಮತ್ತು ನಾವು ಹೆಣ್ಮಕ್ಕಳು ಏಕೆ ಹೀಗಿದ್ದೇವೆ..? ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ..ಉತ್ತರ “ನಾನು ಹೆಣ್ಣು”ಅಷ್ಟೇ ಸಿಗುತ್ತದೆ‌..ಹೆಣ್ಮಕ್ಕಳು, ಅದೇ ಉತ್ತರಿಸುತ್ತಾರೆ” ನಾವು ಹೆಣ್ಮಕ್ಕಳು..ಅದಕ್ಕೆ ಹೀಗಿದ್ದೇವೆ” ಸರಿ ಹೋಗಲಿ ಬಿಡು ಎಂದು ಅಪ್ಪ,ಅಣ್ಣನನ್ನು ಕೇಳಿದರೆ “ನೀನೊಂದು ಹೆಣ್ಣು” ಅದಕ್ಕೆ ಹೀಗೆಯೇ ಇರಬೇಕು ಎಂದುತ್ತರಿಸುತ್ತಾರೆ..ಕೊನೆಗೆ ನಾನೂ ಅಂದುಕೊಳ್ಳುತ್ತೇನೆ “ಓ..ನಾನು ಹೆಣ್ಣಾಗಿದ್ದಕ್ಕೆ ಹೀಗಿದ್ದೇನೆ…”

 

ಕೆಲವೊಂದು ಬಾರಿ ಹಂಚಲಾರದವನ್ನೂ ಹಂಚುತ್ತೇನೆ.‌.”ಸವತಿ”ಅನ್ನುವ ಪಟ್ಟಕ್ಕೆ ತೃಪ್ತಿ ಪಟ್ಟುಕೊಳ್ಳುತ್ತೇನೆ.ಹೆಣ್ಣೊಬ್ಬಳು ಎದುರಿಸುವ ಇಂತಹದ್ದೊಂದು ಸನ್ನಿವೇಶವನ್ನು ಅವನಿಂದ ನಿರೀಕ್ಷಿಸಲು ಸಾಧ್ಯವಿದೆಯಾ…? ಕಲ್ಪಿಸಲೂ ಭಯವೆನಿಸುತ್ತದೆ..ಕಲ್ಪನೆ ವಾಸ್ತವಕ್ಕೆ ಬಂದಾಗಲೆಲ್ಲ ಕೊಲೆಗಳೇ ನಡೆದು ಹೋಗಿವೆ..ನನ್ನ ಹೆಮ್ಮೆಯ ದೇಶದ ಸಮಾಜದಲ್ಲಿ ಹೆಣ್ಣೊಬ್ಬಳು ಅಂತಹದನ್ನು ಕಲ್ಪಿಸಲೂ ಭಯ ಪಡುತ್ತಾಳೆ ಬಿಡಿ.ಎಲ್ಲೋ ಬೆರಳೆಣಿಕೊಂದು ಅಂತಹ ಅಪರೂಪದ ಘಟನೆ ನಡೆದಿರಬಹುದು..ನೂರು ಒಳ್ಳೆಯದಿರುವ ಕಡೆ ಕೆಟ್ಟದ್ದೊಂದು ಇದ್ದೇ ಇರುತ್ತದೆ‌ ಅಲ್ಲವೇ..?

 

ವೇದಿಕೆಯ ಮೇಲೆ ತಾಸುಗಟ್ಟಲೇ ಭಾಷಣ ಮಾಡುತ್ತೇನೆ..”ಇದು ಇಪ್ಪತ್ತೊಂದನೆ ಶತಮಾನ ಮಹನಿಯರೇ ..ಕಾನೂನಾತ್ಮಕವಾಗಿ ಸಮಾನತೆ ಬಂದರೂ ಅದನ್ನಳವಡಿಕೊಳ್ಳಲು ಹಿಂಜರಿಯುತ್ತಿದ್ದೇವೆ..ಯಾಕೆ ಸಮಾನತೆ ಬರುತ್ತಿಲ್ಲ‌‌..?” ಎಂದು ಜೋರು ಭಾಷಣ ಬಿಗಿದು ನೆರೆದಿರುವ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೇನೆ..

 

ವಿಪರ್ಯಾಸವೆಂದರೆ ಇದೆ ಏನೋ..!!! ಗಂಡನ ಮನೆಗೆ ಹೋಗುತ್ತಿರುವ ಮಗಳಿಗೆ “ನೀನು ಹೆಣ್ಣು ಮಗಳೇ..ಗಂಡನ ತಪ್ಪಿದ್ದರೂ ನೀನೇ ಸೋತು ನಡೆ..ನೀನೇ ಸಹಿಸಿಕೊ..” ಎಂದು ಕಿವಿಯೂದುತ್ತೇನೆ..ಸೊಸೆ ಸಂಜೆ ಕೆಲಸದಿಂದ ಮನೆಗೆ ಚೂರು ತಡವಾಗಿ ಬಂದರೆ “ಏನೇ..ಕೆಲಸದಿಂದ ಬರುವುದು ಇಷ್ಟು ತಡ… ಹೆಣ್ಮಕ್ಕಳು ಸಂಜೆ ಒಳಗೆ ಮನೆ ಸೇರಿದ್ರೇನೆ ಒಳ್ಳೆದು ಕಣೆ..” ಅಂತ ಜಾಗರೂಕತೆಯ ಮಾತುಗಳನ್ನು ಹೇಳುತ್ತೇನೆ..ಪಾಪ ಅವಳಿಗೇನು ಕೆಲಸವಿತ್ತೋ ಅರಿಯುವ ಗೋಜಿಗೆ ಹೋಗುವುದಿಲ್ಲ..ಸಾಲದ್ದಕ್ಕೆ ಮಗನಿಗೆ “ಅವಳನ್ನು ಹದ್ದುಬಸ್ತಿನಲ್ಲಿಡು “ಎಂದು ಅವಳಿಗೆ ಗೊತ್ತಾಗದಂತೆ ಅವನ ಕಿವಿಯಲ್ಲಿ ಪಿಸುಗುಡುತ್ತೇನೆ‌‌..

 

ಇಷ್ಟವೋ ಕಷ್ಟವೋ ಹೆಣ್ಣು ಗಂಡಿನ ಮುಂದೆ ಸಣ್ಣವಳೇ ಎನ್ನುವ ಹಿರಿಯರಾಡಿದ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತೇನೆ..ವ್ಯವಸ್ಥೆಯ ವಿರೋಧಿಯಂತೂ ನಾನಲ್ಲ..ಅಥವಾ ನಾನು ಸ್ತ್ರೀ ಪರ ಅಷ್ಟೇ ಅನ್ನುವವಳಲ್ಲ‌..ಅಲ್ಲಲ್ಲಿ ಚೂರು ಬದಲಾವಣೆಗಳು ಬೇಕಿತ್ತು..ಬದಲಾವಣೆಗಳು ಬರದಿರಲೂ ಒಂದರ್ಥದಲ್ಲಿ ನಾನೂ ಕಾರಣಳೇ..ಆದರೂ ನನ್ನ ಹೆಣ್ತನದ ಬಗ್ಗೆ ಹೆಮ್ಮೆ ಇದೆ..ತಾಳಿಕೊಳ್ಳಲು ಇಷ್ಟೊಂದು ಶಕ್ತಳು ಅನ್ನುವ ಸಮಾಧಾನವಿದೆ..ಶತಮಾನಗಳೇ ಉರುಳಿ ಹೋದವು…ಸಮಾಜದಲ್ಲಿ ಸಮಾನತೆ ಬರಲಿಲ್ಲ.‌.”ಬದಲಾಯಿಸಲಾಗದ್ದು ಹೊಂದಾಣಿಕೆಯಲ್ಲಿದೆ” ಎಂದು ನಿರಾಶೆ ಹೊತ್ತ ಸಮಾಧಾನ ಪಟ್ಟುಕೊಳ್ಳುತ್ತೇನೆ..ನನ್ನವ್ವ ಹೇಳಿದ್ದಾಳೆ ಮತ್ತು ಪಾಠ ಕಲಿಸಿಕೊಟ್ಟಿದ್ದಾಳೆ‌..” ಹೆಣ್ಣೆಂದರೆ ಹೀಗೇಯೇ ಇರಬೇಕು “ಎಂದು..ಇಷ್ಟವೋ-ಕಷ್ಟವೋ ಅಥವಾ ಮನೆ ಯಜಮಾನನ ಆಣತಿಯನ್ನು ಪಾಲಿಸುವ ಸಲುವಾಗಿಯೋ ನಾನೂ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿಯನ್ನು ಬಲು ಜಾಗರೂಕತೆಯಿಂದ ನಿಭಾಯಿಸುತ್ತೇನೆ..ಛೇ…! ಕಲಿತವಳಾಗಿ ಏನಿದು…? ನನ್ನಿಂದ ಬದಲಾವಣೆ ಶುರುವಾಗಲಿ ಅಂದುಕೊಂಡರೂ ಹೆಣ್ಮನಸು ಒಳಗೊಳಗೆ ಭಯ ಪಡುತ್ತದೆ..ವ್ಯವಸ್ಥೆಯ ಗೆರೆ ದಾಟುತ್ತಿದ್ದೇನೆನೋ..ಎಲ್ಲರ ವಿರೋಧಕ್ಕೊಳಗಾಗುತ್ತೇನೆನೋ ಅನ್ನಿಸಲು ಶುರುವಾದಾಗ ಯಥಾ ಪ್ರಕಾರ ಮೊದಲ ವ್ಯವಸ್ಥೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ..ಅದಕ್ಕೆ ನೋಡಿ “ನಾವು ಹೆಣ್ಮಕ್ಕಳು ಹೀಗೇಕಿದ್ದೇವೆ?” ಎನ್ನುವ ಪ್ರಶ್ನೆ ನಮ್ಮನ್ನು ನಾವೇ ಕೇಳಿಕೊಳ್ಳುವಂತಾಗಿದೆ.ನಾವು ಹೆಣ್ಮಕ್ಕಳು ಚೂರು ಬದಲಾವಣೆಗೆ ಒಗ್ಗಿಕೊಂಡರೆ ಬರೀ ಕಾನೂನಾತ್ಮಕವಾಗಿ ಸರಿಹೋಗಿರುವ ವ್ಯವಸ್ಥೆ ಸಮಾಜದಲ್ಲಿ ವಾಸ್ತವವಾಗಿ ಸರಿ ಹೋಗಬಹುದು ಎನ್ನುವುದು ನನ್ನ ಅಭಿಪ್ರಾಯ..

Facebook ಕಾಮೆಂಟ್ಸ್

ಲೇಖಕರ ಕುರಿತು

Mamatha Channappa

ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!