ಅಂಕಣ

ತೋರಿಕೊಳ್ಳುವನೇನು ತನ್ನನು, ಊಸರವಳ್ಳಿ ಎಂದಾಗಲಾದರೂ ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೮

ಬೇರಯಿಸಿ ನಿಮಿಷನಿಮಿಷಕಮೊಡಲ ಬಣ್ಣಗಳ |

ತೋರಿಪೂಸರವಳ್ಳಿಯಂತೇನು ಬೊಮ್ಮಂ ? ||

ಪೂರ ಮೈದೋರೆನೆಂಬಾ ಕಪಟಿಯಂಶಾವ |

ತಾರದಿಂದಾರ್ಗೇನು ?- ಮಂಕುತಿಮ್ಮ || ೩೮ ||

ಪರಬ್ರಹ್ಮವೆಂಬ ಅಸ್ತಿತ್ವದ ಮೇಲೆ ಅಷ್ಟೆಲ್ಲ ನಿರ್ಭಿಡೆಯಿಂದ ಟೀಕೆ, ಟಿಪ್ಪಣಿ ಮಾಡುವ ಕವಿ ಈ ಸಾಲುಗಳಲ್ಲಿ ಸ್ವಲ್ಪ ಹೆಚ್ಚೆ ಸ್ವೇಚ್ಛೆ, ಸಲಿಗೆಯನ್ನು ತೆಗೆದುಕೊಂಡು ಬ್ರಹ್ಮದ ಅಲೌಕಿಕ ಅಸ್ತಿತ್ವವನ್ನು ಇಹದ ಲೌಕಿಕ ಅಸ್ತಿತ್ವದ ಜತೆ ಹೋಲಿಕೆಗೆ ಇರಿಸುತ್ತ ‘ಅದೇನು ಊಸರವಳ್ಳಿಯ ತರವೇನು?’ ಎಂದು ಉಚಾಯಿಸಿಬಿಡುತ್ತಾರೆ ! ಊಸರವಳಿಯ ಸಹಜ ಸ್ವಭಾವವೆ ಅಗತ್ಯಕ್ಕೆ ತಕ್ಕಂತೆ ಒಡಲಿನಲ್ಲಿ ನಿಮಿಷಕ್ಕೊಂದು ತರದ ಬಣ್ಣ ಧರಿಸುತ್ತ, ತನ್ನ ಸ್ವರೂಪದಿರುವಿಕೆಯ ರೀತಿಯನ್ನೆ ಬದಲಾಗಿಸುತ್ತ ಹೋಗುವುದು ತಾನೆ? ಈ ಪರಬ್ರಹ್ಮವೂ ತನಗೆ ಬೇಕುಬೇಕಾದ ನಾನಾವೇಷ ಧರಿಸಿ ಬದಲಾಗುವ ಪರಿಯನ್ನು ನೋಡಿದರೆ ಅವನ ಗುಣ ಸ್ವರೂಪವೂ ಒಂದು ರೀತಿ ಆ ಊಸರವಳ್ಳಿಯಂತದ್ದೇ ಎಂದೆನ್ನಬಹುದಲ್ಲವೆ ?

ತಾನು ಸಹಜವಾಗಿ ಇದ್ದ ಹಾಗೆ ತೋರಿಕೊಳ್ಳದೆ ಕಪಟ ನಾಟಕವಾಡುತ್ತ, ತರತರದ ಅವತಾರಗಳನ್ನೆತ್ತುತ್ತ ಆ ಮೂಲಕ ಮಾತ್ರವಷ್ಟೆ ತನ್ನನ್ನು ಆಂಶಿಕವಾಗಿ ಮಾತ್ರ ಪ್ರಕಟ ಪಡಿಸಿಕೊಳ್ಳುವ ಅವನ ಅರೆಬರೆ ರೂಪವನ್ನು ಕಟ್ಟಿಕೊಂಡು ಯಾರಿಗೇನಾಗಬೇಕಿದೆ? ‘ಬೇಕಿದ್ದರೆ ಊಸರವಳ್ಳಿಯಂತಾಡದೆ ಪೂರ್ಣರೂಪದಲ್ಲಿ ಬರಲಿ, ಅದಾಗದು ಎಂದಾದರೆ ಬರದಿದ್ದರೂ ಸರಿಯೆ! ‘ ಎನ್ನುವ ನಿರ್ಲಕ್ಷ್ಯದ ಭಾವ  ಇಣುಕುತ್ತದೆ. ಬಹುಶ ಹೀಗೆ ಕೆಣಕಿ ಕೆಣಕಿ ಕೋಪ ಬರಿಸಿದ ಕಾರಣಕ್ಕಾದರೂ ತನ್ನ ಅಸಲೀ ರೂಪದಲ್ಲಿ ತೋರಿಕೊಳ್ಳಬಹುದೇನೊ – ಎನ್ನುವ ದೂರದಾಸೆಯಲ್ಲಿ.

ಆತ್ಮರಕ್ಷಣೆಗಾಗಿ ಬಣ್ಣ ಬದಲಿಸುವ ಊಸರವಳ್ಳಿಯನ್ನು ಮನುಜರಿಗೆ ಹೋಲಿಸುವಾಗ ಅಲ್ಲೊಂದು ಋಣಾತ್ಮಕ ಅನಿಸಿಕೆ ಇಣುಕುತ್ತದೆ – ಆ ವ್ಯಕ್ತಿ ನಂಬಲು ಅರ್ಹನಲ್ಲ, ಓತಿಕ್ಯಾತದಂತೆಯೆ ಮಾತು ಬಣ್ಣ ಬದಲಿಸುತ್ತಾನೆ ಎಂಬರ್ಥದಲ್ಲಿ. ಆದರೆ ನೈಜದಲ್ಲಿ ಊಸರವಳ್ಳಿಗು ನಂಬಿಕಾರ್ಹತೆಗು ಯಾವುದೆ ಸಂಬಂಧವಿಲ್ಲ. ಅದು ಶತೃವಿನ ಅಥವಾ ಬೇಡದವರ ಕಣ್ಣಿಂದ ಪಾರಾಗುವ ಆತ್ಮರಕ್ಷಣೆಯ ತಂತ್ರವಾಗಿಯಷ್ಟೆ ತನ್ನ ಬಣ್ಣ ಬದಲಿಸುವುದೆ ಹೊರತು ಯಾರಿಗು ಮೋಸ, ವಂಚನೆ ಮಾಡುವ ಉದ್ದೇಶದಿಂದಲ್ಲ. ಆ ಅಪಭ್ರಂಶ ರೂಪ ಕೇವಲ ಮಾನವ ನ್ಯಾಯದಲ್ಲಿ ವಿಪರಿತಗೊಂಡಿರಬಹುದಾದ ವಿಕೃತ ರೂಪವಷ್ಟೆ.

ಕೇವಲ ಭೌತಿಕ ದೇಹದ ಬಣ್ಣ ಮಾತ್ರ ಬದಲಾಗುವ ದೃಷ್ಟಿಕೋನದಿಂದ ನೋಡಿದರೆ, ಪರಬ್ರಹ್ಮವೂ ಯಾವುದೊ ಅದೇ ರೀತಿಯ ಉದ್ದೇಶದಿಂದ ಸ್ವರೂಪ ಬದಲಿಸುತ್ತದೆಂದು ತರ್ಕಿಸಬಹುದು. ಆಗ ಈ ಪರಬ್ರಹ್ಮ- ಉಸರವಳ್ಳಿಯ ಹೋಲಿಕೆ ಕೇವಲ ಭೌತಿಕ ಸ್ವರೂಪಕ್ಕೆ ಮಾತ್ರ ಸೀಮಿತಗೊಳ್ಳುತ್ತದೆಯೆ ಹೊರತು ಮೋಸ ವಂಚನೆಗಳ ಗುಣಾತ್ಮಕ ಮಟ್ಟಕ್ಕಿಳಿಯುವುದಿಲ್ಲ. ಆದರೆ ಇಲ್ಲಿಯು ಪಾಮರ – ಪಂಡಿತ ಸ್ತರದ ಅರಿವಿನಲ್ಲಿ ಎರಡೂ ವ್ಯಾಖ್ಯಾನಗಳು ಸಂಗತವಾಗುವುದು ಮತ್ತೊಂದು ವಿಶೇಷ.

ಇಲ್ಲಿ ಪರಿಗಣಿಸಬಹುದಾದ ಮತ್ತೊಂದು ಅಂಶ ಉಸರವಳ್ಳಿಯನ್ನು ಹೋಲಿಕೆಗೆ ಬಳಸಿದ್ದು. ಕವಿಮನ ಬ್ರಹ್ಮದ ಕುರಿತಾಗಿಯೇ ಆಲೋಚಿಸುತ್ತಾ ಯಾವುದಾವುದೋ ಕಲ್ಪನಾವಿಲಾಸದ ಅಗೋಚರ ವೈವಿಧ್ಯದಲ್ಲಿ ಸಂಚರಿಸುತ್ತಾ, ಯಾಂತ್ರಿಕವಾಗಿಯೆಂಬಂತೆ ಅಲ್ಲಿಲ್ಲಿ ಅಡ್ಡಾಡ ಹೊರಟಾಗ ಆಕಸ್ಮಿಕವಾಗಿ ಬೇಲಿಯಲ್ಲೋ, ಪೊದೆಯಲ್ಲೊ ಬಣ್ಣ ಬದಲಿಸುತ್ತಿರುವ ಉಸರವಳ್ಳಿಯೊಂದು ಕಣ್ಣಿಗೆ ಬಿದ್ದಿರಬೇಕು. ಅದರ ರೂಪಾಂತರದ ವಿಸ್ಮಯಾದ್ಭುತ ಕಣ್ಣಿಗೆ ಕಟ್ಟುತ್ತಾ ಇರುವಾಗಲೆ, ಮೂಲ ಸ್ವರೂಪದ ಬದಲು ಮುಖವಾಡದ ರೂಪಧಾರಣೆ ಮಾಡುವ ಅದರ ನಡುವಳಿಕೆಯಿಂದಾಗಿ ಆಂತರಿಕ ತೊಳಲಾಟಕ್ಕೊಂದು ಮೂರ್ತರೂಪ ಸಿಕ್ಕಂತಾಗಿ ‘ಅರೆರೆ..! ಬ್ರಹ್ಮದ ತೋರ್ಪಡಿಕೆಯ ಪ್ರಕಟ ಸ್ವರೂಪವು ಈ ಓತಿಕ್ಯಾತದ ಹಾಗೆಯೆ ಅಲ್ಲವಾ?’ ಅನಿಸಿ, ಅದೇ ಈ ಕಗ್ಗದ ಪದಸಾಲುಗಳಾಗಿ ಹೊಸೆದುಕೊಂಡಿರಬೇಕು !

– ನಾಗೇಶ ಮೈಸೂರು

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!