ಅಂಕಣ

ಗೆಲ್ಲಲ್ಲಾಗದ ಪಂಥದೆ ಆಟವಾಡಿಸುವಾ ವಿಧಿ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೬

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |

ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ ||

ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ |

ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ || ೩೬ ||

ಹಿಂದಿನ ಪದ್ಯದಲ್ಲಿ ಹೇಗೆ ಪರಬ್ರಹ್ಮನು ನರಮಾನವನನ್ನು ಸದಾ ಕತ್ತಲಿನಲ್ಲಿಟ್ಟೆ ಸತಾಯಿಸುತ್ತಾನೆಂದು ಹೇಳಿದ ಕವಿಯ ಗಮನ, ಈಗ ಆ ಮಾನವನ ಮತ್ತಿತರ ಪಾಡುಗಳತ್ತ ಹರಿದಿದೆ ಈ ಸಾಲುಗಳಲ್ಲಿ.

ಏನಾದರೂ ಸರಿ ಮನುಜನಿಗೆ ನಿಗೂಢ ಸೃಷ್ಟಿಯ ಗುಟ್ಟರಿಯಲು ಬಿಡೆನೆನ್ನುವ ಪರಬ್ರಹ್ಮನಿಗೆ ಆದರೂ ಎಲ್ಲೊ ಏನೊ ಸಂಶಯವಿದ್ದೇ ಇರಬೇಕು – ಈ ಚಿಕಿತ್ಸಕ, ಶೋಧಕ ಬುದ್ಧಿಯ, ಚತುರತೆ, ಸಾಮರ್ಥ್ಯವುಳ್ಳ ಮನುಜ ತನ್ನ ಅನ್ವೇಷಣೆಯನ್ನು ಬಿಡಲಾರ ಎಂದು. ಸದ್ಯಕ್ಕೆ ಸುಮ್ಮನಾಗಿ ಕೂತರು, ಹಾಗೆ ನಿರಂತರವಾಗಿರುವನೆಂದು ಹೇಳಲಾಗದು. ಮತ್ತೆ ಮನದ ಅಜ್ಞಾನದ ಕಿಚ್ಚು ಬಡಿದೆಬ್ಬಿಸಿ ಆ ಪರಿಶೋಧನೆಯತ್ತ ಪದೇಪದೆ ಓಡಿಸಬಹುದು – ಅಂತಿಮ ಉತ್ತರ ಸಿಗುವವರೆಗೆ.

ಅಂದರೆ ನರಮನುಜನು ಬಿಡುವಾಗಿರುವ ತನಕ ಅವನ ಅನ್ವೇಷಕ ಪ್ರವೃತ್ತಿ, ಅವನನ್ನು ಸುಮ್ಮನೆ ಕೂಡಲು ಬಿಡುವುದಿಲ್ಲ. ಅದಕ್ಕೆ ತಡೆ ಹಾಕುವ ಒಂದೆ ದಾರಿಯೆಂದರೆ ಅವನು ಆ ಅನ್ವೇಷಣೆಯ ದಾರಿ ಹಿಡಿಯಲು ಬಿಡದಂತೆ ಮತ್ತಾವುದಾದರೊಂದು ರೀತಿಯಲ್ಲಿ ಅವನ ಗಮನವನ್ನು ಬೇರೆಡೆಗೆ ಸೆಳೆದು ಸದಾ ಅದರಲ್ಲೆ ಹೋರಾಟ ನಿರತನಾಗಿರುವಂತೆ ಮಾಡಿಬಿಡುವುದು..!  ಅವನು ಸುಲಭದಲ್ಲಿ ತಪ್ಪಿಸಿಕೊಳ್ಳಲು ಆಗದಂತೆ ಸರಿಯಾದ ಬಲೆಯಲ್ಲೆ ಕೆಡವಬೇಕಲ್ಲ? ಅದಕ್ಕೆ ಸರ್ವಸೂಕ್ತ ಶ್ರೇಷ್ಠ ಮಾರ್ಗವೆಂದರೆ – ಅವನ ದೌರ್ಬಲ್ಯಗಳ ಮೂಲಕ ಅವನನ್ನು ನಿಯಂತ್ರಿಸುವುದು…!

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |

ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ ||

ಮೋಹ, ಪಾಶಾದಿ ವಿವಿಧ ಭ್ರಾಂತಿಗಳು ತಾನೆ ಮಾನವನ ದೌರ್ಬಲ್ಯದ ಮೂಲಸರಕು? ಅವುಗಳ ಬಲೆಯಲ್ಲಿ ಅವನನ್ನು ಸಿಕ್ಕಿಸಿಬಿಟ್ಟರೆ ಅದರೊಡನೆ ಹೋರಾಡುತ್ತ ನಿಂತ ಮನುಜನಿಗೆ ಅದರಿಂದ ಹೊರಗೆ ಬಂದು ಸತ್ಯಾನ್ವೇಷಣೆಯ ಮಾರ್ಗ ಹಿಡಿಯುವ ವೇಳೆ, ವ್ಯವಧಾನವಾದರೂ ಎಲ್ಲಿರುತ್ತದೆ ?  ಅದರಿಂದವನು ಸುಲಭದಲ್ಲಿ ತಪ್ಪಿಸಿಕೊಂಡುಬಿಡದ ಹಾಗೆ ನೋಡಿಕೊಳ್ಳುವ ಕಾರಣಕ್ಕೆ , ಬೇಡದ ಕುಮಾರ್ಗಗಳಲ್ಲು ಅವನನ್ನು ನಡೆಸಿಬಿಡುತ್ತಾನಂತೆ ಪರಬ್ರಹ್ಮ. ಒಂದೆಡೆ ಅಲ್ಲಿ ಹೋರಾಟ ನಡೆಯುತ್ತಿರುವ ಹೊತ್ತಲ್ಲೆ ಅದನ್ನು ಮನುಜನ ಸತ್ವಪರೀಕ್ಷೆಯೆನ್ನುವ ಹೊದಿಕೆ ಹೊದಿಸಿ ಅದರಲ್ಲೆ ಮುಳುಗಿಹೋಗುವಂತೆ ಪ್ರಚೋದಿಸುತ್ತಾನಂತೆ.

ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ |

ಸೊಲ್ಲಿಪುದು ಸರಿಯೇನೊ? – ಮಂಕುತಿಮ್ಮ ||

ಇಷ್ಟೆಲ್ಲಾ ಮಾಡಿದನೆಂದು ಪರಬ್ರಹ್ಮನಿಗೆ ದೂರು ಬರಬಾರದಲ್ಲ? ಅದಕ್ಕೆ ಇದನ್ನೆಲ್ಲಾ ಜೀವನವೊಡ್ಡುವ ಪಂಥ, ಪರೀಕ್ಷೆಯೆಂದುಬಿಟ್ಟರೆ ? ಆ ದೂರು ಬರುವ ಚಿಂತೆಯೆ ಇರದಲ್ಲ ! ಇದೆಲ್ಲವನ್ನು ಮೀರಿಯೂ ಯಾರಾದರೂ ಅಪ್ಪಿತಪ್ಪಿ ಆ ಪರೀಕ್ಷೆಯನ್ನು ಗೆದ್ದು, ತಾನುಟ್ಟ ಅಡೆತಡೆಗಳನ್ನೆಲ್ಲ ದಾಟಿ ಬಂದುಬಿಡಬಾರದಲ್ಲ ? ಅದಕ್ಕೆ ಅವರನ್ನಲ್ಲೆ ಹಣ್ಣುಗಾಯಿ, ನೀರುಗಾಯಾಗಿಸಿ ಸೋತು ಸುಣ್ಣವಾಗಿ ಹೋಗುವಂತೆ ಮಾಡಿ, ಕೊನೆಗೆ ಆ ಫಲಿತದ ಜವಾಬ್ದಾರಿ, ಹೊಣೆಯನ್ನು ಅವನ ತಲೆಗೆ ಕಟ್ಟುತ್ತದೆ – ವಿಧಿ, ಹಣೆಬರಹದ ಹೆಸರಿನಲ್ಲಿ. ಹೀಗೆ ಬಿಡಿಸಲಾಗದ ಒಗಟಲ್ಲಿ ಸಿಕ್ಕಿಸಿ, ಗೆಲ್ಲಲಾಗದ ಪಂಥದಲ್ಲಿ ಬಳಲಾಡಿಸಿ ಕೊನೆಗೆ ತಾನಿಟ್ಟ ಪರೀಕ್ಷೆಯಲ್ಲಿ ಹುಲುಮಾನವ ಗೆಲ್ಲಲಿಲ್ಲವೆಂದು ಕಠೋರವಾದ ತೀರ್ಪಿತ್ತುಬಿಡುವುದು ಸರಿಯೆ ? ಇಷ್ಟೆಲ್ಲ ಹುನ್ನಾರವನ್ನು, ತಾನೇ ತನ್ನ ಸ್ವಂತ ಸೃಷ್ಟಿಯ ಮೇಲೆ ಮಾಡುವುದು ಸರಿಯೆ ? ಎಂದು ನಿಷ್ಠೂರವಾಗಿ ಕೇಳುತ್ತಿದ್ದಾನಿಲ್ಲಿ ಮಂಕುತಿಮ್ಮ.


#ಕಗ್ಗಕೊಂದು_ಹಗ್ಗ

#ಕಗ್ಗ_ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!