Featured ಅಂಕಣ

ಕ್ಯಾನ್ಸರ್ ದೇಹಕ್ಕೇ ಬಂದಿರಲಿ ಅಥವಾ ದೇಶಕ್ಕೆ ಬಂದಿರಲಿ ಚಿಕಿತ್ಸೆಯ ಕೆಲ ಅಡ್ಡಪರಿಣಾಮಗಳನ್ನ ಎದುರಿಸಲೇಬೇಕಲ್ಲ!

ಕೆಲವೊಂದು ವಿಷಯಗಳು ಕೇಳುವಾಗ ಬಹಳ ಸರಳ ಎನಿಸುತ್ತದೆ ಆದರೆ ನಂತರವೇ ತಿಳಿಯುವುದು ಅದೆಷ್ಟು ಕ್ಲಿಷ್ಟಕರವಾಗಿರುತ್ತದೆ ಎಂದು. ಈ ಕ್ಯಾನ್ಸರ್ ಚಿಕಿತ್ಸೆಯೂ ಹೀಗೆಯೇ. ’ಆರು ಕೀಮೋ ಹಾಗೂ ಕೊನೆಯಲ್ಲಿ ಒಂದು ಆಪರೇಷನ್’ ಎಂದಾಗ ಕ್ಯಾನ್ಸರ್’ನಂತಹ ಖಾಯಿಲೆಯ ಚಿಕಿತ್ಸೆ ಸರಳವಾಗಿಯೇ ಇದೆಯಲ್ಲ ಎನಿಸಿತ್ತು. ಆದರೆ ಅದರ ತೀವ್ರತೆ ಅರ್ಥವಾಗಿದ್ದು ಮಾತ್ರ ಚಿಕಿತ್ಸೆ ಆರಂಭವಾದ ಮೇಲೆಯೇ! ಈ ಲೇಖನದಲ್ಲಿಂದು ನನ್ನ ಚಿಕಿತ್ಸೆ ಹೇಗೆಲ್ಲಾ ನಡೆಯಿತು ಎನ್ನುವುದರ ಬಗ್ಗೆ ಹೇಳಹೊರಟಿದ್ದೇನೆ. ಅದಕ್ಕೂ ಒಂದು ಮುಖ್ಯ ಕಾರಣವಿದೆ, ಅದನ್ನ ನಂತರ ತಿಳಿಸುತ್ತೇನೆ.

ಚಿಕಿತ್ಸೆಗೂ ಮೊದಲು ಕ್ಯಾನ್ಸರ್ ಇರುವುದನ್ನ ಖಚಿತಪಡಿಸಿಕೊಳ್ಳಲು ಸಾಕಷ್ಟು ಟೆಸ್ಟ್’ಗಳನ್ನ ಮಾಡಿಕೊಳ್ಳಲಾಗುತ್ತೆ. ಕ್ಯಾನ್ಸರ್ ಇರುವುದು ಖಚಿತವಾದ ನಂತರ ಯಾವ ರೀತಿಯ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುವುದರ ಬಗ್ಗೆ ಸರಿಯಾಗಿ ಪ್ಲ್ಯಾನಿಂಗ್ ಮಾಡಿಕೊಳ್ಳಬೇಕು. ನಮ್ಮ ದೇಹ ಎಷ್ಟರ ಮಟ್ಟಿಗೆ ಅದನ್ನ ತಡೆದುಕೊಳ್ಳಬಹುದು ಎನ್ನುವುದಕ್ಕೆ ಇನ್ನಷ್ಟು ಟೆಸ್ಟ್’ಗಳು! ಅದಕ್ಕೆ ತಕ್ಕಂತೆ ಎಷ್ಟು ಕೀಮೋ, ಅದರ ಡೊಸೇಜ್ ಎಷ್ಟಿರಬೇಕು ಅಂತೆಲ್ಲ ನಿರ್ಧರಿಸುತ್ತಾರೆ ಡಾಕ್ಟರ್’ಗಳು. ಇಷ್ಟೆಲ್ಲಾ ಆದ ನಂತರ ಚಿಕಿತ್ಸೆ ಆರಂಭವಾಗುವುದು..!

 

ಮೊದಲ ಕೀಮೋ ಆರಂಭಗೊಂಡಿತ್ತು. ಒಂದೇ ಕೀಮೊವನ್ನು ಮೂರು ದಿನ ನೀಡುತ್ತಿದ್ದರು. ೨ನೇ ದಿನ ಡಾಕ್ಟರ್ ಬಂದು ಹೇಳಿದ್ದರು, ’ಕೀಮೋ ಮುಗಿದ ೪೮ ಗಂಟೆಗಳ ನಂತರ ಒಂದು ಇಂಜೆಕ್ಷನ್’ನ ಕೊಡಬೇಕಾಗುತ್ತದೆ. ಬಿಳಿರಕ್ತಕಣಗಳ ಮೇಲೆ ಬಹಳ ಪರಿಣಾಮ ಬೀರುವುದರಿಂದ ಈ ಇನ್ನೊಂದು ಇಂಜೆಕ್ಷನ್ ಬೇಕಾಗುವುದು. ಮೊದಲ ಕೀಮೋ ಅಲ್ಲವಾ.. ಹಾಗಾಗಿ” ಎಂದು. ಮೊದಲ ಕೀಮೋ ಆಗಿದ್ದರಿಂದ ದೇಹ ಹೇಗೆ ಪ್ರತಿಕ್ರಿಯಿಸುವುದೋ ಗೊತ್ತಿಲ್ಲ ಹಾಗಾಗಿ ಆಸ್ಪತ್ರೆಗೆ ಹತ್ತಿರದಲ್ಲೇ ಎಲ್ಲಾದರು ಇರುವಂತೆ ತಾಕೀತು ಕೂಡ ಮಾಡಿದ್ದರು. ಏನಾದರು ಆದಲ್ಲಿ ತಕ್ಷಣವೇ ಅಲ್ಲಿಗೆ ಬರಲು ಅನುವಾಗುವಂತೆ! ಮೊದಲು ಕೇಳಿದಾಗ ಎಲ್ಲ ಸರಳ ಎನಿಸಿತ್ತು!!

 

  ಸೈಡ್ ಎಫೆಕ್ಟ್’ಗಳು ಒಂದೆಡೆ ಶುರುವಾಗಿತ್ತು. ಅದರ ಮಧ್ಯೆ ಒಂದು ಬ್ಲಡ್ ಟೆಸ್ಟ್ ಬೇರೆ! ಎಲ್ಲವೂ ನಾರ್ಮಲ್ ಇದೆಯಾ ಎಂದು ನೋಡಲಿಕ್ಕೆ. ನಾರ್ಮಲ್ ಎಂದರೆ ತಾವು ನಿರೀಕ್ಷಿಸಿದಂತೆಯೇ ಎಲ್ಲ ಇದೆಯೋ ಇಲ್ಲವೋ ಎಂದು ನೋಡಲಿಕ್ಕೆ. ಒಂದೇ ವಾರಕ್ಕೆ ಮತ್ತೆ ಹೋಗಿ ಟೆಸ್ಟ್ ಮಾಡಿಸಿಯಾಯಿತು. ದಿನ ಕಳೆಯಿತು ಹಾಗೆ ೨ನೇ ಕೀಮೋ ಕೂಡ ಬಂದಿತ್ತು. ಅದರೊಂದಿಗೆ ಸೈಡ್ ಎಫೆಕ್ಟ್’ನ ತೀವ್ರತೆಯೂ ಜಾಸ್ತಿ. ಅದರ ತೀವ್ರತೆ ಕಡಿಮೆಗೊಳಿಸಲು ಇನ್ನಷ್ಟು ಮೆಡಿಸಿನ್. ಅದರ ಜೊತೆಗೆ ಆ ಇನ್ನೊಂದು ಇಂಜೆಕ್ಷನ್ ಕೂಡ ಮುಂದುವರೆದಿತ್ತು. “ಸುಮ್ಮನೆ ರಿಸ್ಕ್ ಯಾಕೆ ತೆಗೆದುಕೊಳ್ಳುವುದು” ಎಂದಿದ್ದರು ಡಾಕ್ಟರ್.

 

ಹಾಗೂ ಹೀಗೂ ಮೂರನೆಯ ಕೀಮೋ ಮುಗಿಯಿತು. ಆ ಸಮಯದಲ್ಲಿ ವಿಶೇಷವಾಗಿ ಯಾವುದೇ ಬದಲಾವಣೆ ಇರಲಿಲ್ಲ. ನಾಲ್ಕನೇ ಕೀಮೋಗೆ ಬಂದಾಗ ಎಮ್.ಆರ್.ಐ ಮಾಡಿ ನೋಡೋಣ ಎಂದಿದ್ದರು. ಈ ಬಾರಿ ಟೆಸ್ಟ್ ಮಾಡಿ ನೋಡಿ ಕೀಮೋ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂದು ನೋಡಿ, ಏನಾದರು ವ್ಯತ್ಯಾಸವಾಗಿದ್ದಲ್ಲಿ, ಪರಿಣಾಮಕಾರಿಯಾಗದಿದ್ದಲ್ಲಿ ಮತ್ತೆ  ಅವರ ಸ್ಟ್ರ್ಯಾಟಜಿ ಬದಲಾಗುವುದರಲ್ಲಿತ್ತು.ಪುಣ್ಯವಶಾತ್ ಎಮ್.ಆರ್.ಐ ಫಲಿತಾಂಶ ಧನಾತ್ಮಕವಾಗಿಯೇ ಇತ್ತು. ಹಾಗಾಗಿ ದೊಡ್ಡ ಮಟ್ಟದ ಬದಲಾವಣೆ ಅಲ್ಲದಿದ್ದರೂ ಮುಂದಿನ ಕೀಮೋನಲ್ಲಿ ಡೊಸೇಜ್ ಸ್ವಲ್ಪ ಕಡಿಮೆ ಮಾಡಲಾಗಿತ್ತು. ಇದರ ಮಧ್ಯೆ ಸೈಡ್ ಎಫೆಕ್ಟ್’ನ ತೀವ್ರತೆ ಕಡಿಮೆ ಮಾಡಲು ಕೊಡುತ್ತಿದ್ದ ಮೆಡಿಸಿನ್ ಪರಿಣಾಮಕಾರಿಯಾಗಿರದಿದ್ದ ಕಾರಣ, ಅದನ್ನ ಬದಲಾಯಿಸಲಾಗಿತ್ತು. ಹೊಸ ಮೆಡಿಸಿನ್ ಒಂದನ್ನ ಕಡಿಮೆ ಮಾಡಿದರೆ, ಇನ್ನೊಂದನ್ನ ಜಾಸ್ತಿ ಮಾಡುತ್ತಿತ್ತು.

 

   ೫ನೇ ಕೀಮೋ ಎನ್ನುವಷ್ಟರಲ್ಲಿ ಹಿಮೋಗ್ಲೋಬಿನ್ ತುಂಬಾನೆ ಕಡಿಮೆ ಇದ್ದಿದ್ದರಿಂದ ಮೊದಲ ದಿನ ರಕ್ತ ಕೊಟ್ಟುಕೊಂಡು ನಂತರ ಕೀಮೋವನ್ನು ನೀಡಲಾಯಿತು. ೬ ನೇ ಕೀಮೋ ಸಂದರ್ಭದಲ್ಲಿ ಕೂಡ ಇದೇ ಹಣೆಬರಹ! ಈ ಪ್ಲಾನ್’ಗಳೆಲ್ಲಾ ಯಾಕೆ ಹೀಗೆ ಬದಲಾಗುತ್ತಿರುತ್ತವೋ ಎನಿಸುತ್ತಿತ್ತು ಆಗಾಗ. ಆದರೆ ಇದೆಲ್ಲವೂ ನನ್ನ ಒಳ್ಳೆಯದಕ್ಕೆ ತಾನೇ ಎಂಬ ಅಂಶವೂ ಆ ಕ್ಷಣಕ್ಕೆ ನೆನಪಾಗುತ್ತಿತ್ತು. ಸರಿ ಆರು ಕೀಮೋಗಳು ಕೂಡ ಮುಗಿಯಿತು, ಇನ್ನು ಮೊದಲು ಪ್ಲ್ಯಾನ್ ಮಾಡಿದಂತೆ ಸರ್ಜರಿ ಆಗಬೇಕಷ್ಟೆ ಎಂದೆಣಿಸುತ್ತಿರುವಾಗಲೇ ಅನಿರೀಕ್ಷಿತವಾಗಿ ಚಿಕನ್’ಪಾಕ್ಸ್ ಉಂಟಾಗಿತ್ತು. ಸಣ್ಣ ಇನ್’ಫೆಕ್ಷನ್ ಕೂಡ ಆಗದೇ ಇರಲಿ ಎನ್ನುವಂತಹ ಸಂದರ್ಭದಲ್ಲಿ ಇಂತಹದ್ದೊಂದು ಆಗಿತ್ತು. ಎಲ್ಲವೂ ನಾವು ಪ್ಲಾನ್ ಮಾಡಿದಂತಾಗುವುದಿಲ್ಲ. ಕೆಲವೊಮ್ಮೆ ಈ ರೀತಿಯ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ಆಗೆಲ್ಲಾ ಸ್ಟ್ರಾಟೆಜಿಯನ್ನ ಬದಲಾಯಿಸಲೇಬೇಕಲ್ಲ..! ಸರ್ಜರಿಯನ್ನು ಮುಂದಕ್ಕೆ ಹಾಕಿ, ಸಂಪೂರ್ಣ ಹದಗೆಟ್ಟು ಹೋಗಿದ್ದ ದೇಹಸ್ಥಿತಿಯನ್ನು ಸರಿಪಡಿಸುವಲ್ಲಿ ತೊಡಗಿಕೊಂಡರು ಡಾಕ್ಟರ್’ಗಳು. ಅಂತು ಇಂತೂ ಸುಮಾರು ಒಂದು-ಒಂದೂವರೆ ತಿಂಗಳ ನಂತರ ಸರ್ಜರಿ ಮಾಡಿ ಶುಭಂ ಎಂದರು.

 

ಮೊದಲು ಕೇಳಿದಾಗ ಬಹಳ ಸರಳ ಎನಿಸಿತ್ತು. ಆದರೆ ಆ ಪ್ಲ್ಯಾನ್ ಪರಿಸ್ಥಿತಿಗೆ ಅನುಗುಣವಾಗಿ, ದೇಹಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಲೇ ಹೋಗುತ್ತದೆ. ಈಗ ಹೇಳಿದ್ದು ನನ್ನ ಚಿಕಿತ್ಸೆಯ ಸಮಯದಲ್ಲಿ ಡಾಕ್ಟರ್’ಗಳ ಸ್ಟ್ರ್ಯಾಟೆಜಿಯಲ್ಲಿ ಹೇಗೆ ಬದಲಾವಣೆ ಉಂಟಾಯಿತು ಎಂದು. ಬೇರೆ ಬೇರೆ ಕ್ಯಾನ್ಸರ್ ರೋಗಿಗಳ ವಿಷಯದಲ್ಲಿ ಹೀಗೆ ಹಲವಾರು ಬಾರಿ, ಹಲವಾರು ರೀತಿಯಲ್ಲಿ ಬದಲಾವಣೆ ಉಂಟಾಗಿರಬಹುದು. ಎಲ್ಲವನ್ನೂ ಮೊದಲೇ ಊಹಿಸಲು ಆಗುವುದಿಲ್ಲ. ಕೆಲವೊಮ್ಮೆ ನಮ್ಮ ಊಹೆಗೆ ಮೀರಿದ ಬೆಳವಣಿಗೆಗಳಾಗಿಬಿಡುತ್ತದೆ. ಕ್ಯಾನ್ಸರ್ ಸೆಲ್ಸ್ ಹೇಗೆ ವರ್ತಿಸಿಬಿಡುತ್ತವೆ ಎಂದು ಹೇಳುವುದು ಕಷ್ಟ.

 

ಇಷ್ಟೆಲ್ಲ ಹೇಳುವುದಕ್ಕೆ ಕಾರಣವಿದೆ ಎಂದಿದ್ದೆನಲ್ಲ ಅದನ್ನ ಹೇಳುತ್ತೇನೆ. ಇತ್ತೀಚೆಗೆ ನ್ಯೂಸ್ ಚಾನೆಲ್’ಗಳಲ್ಲಿ ಬರುತ್ತಿದ್ದ “ಆರ್.ಬಿ.ಐ.’ನ ಯೂ ಟರ್ನ್”, “ತುಘಲಕ್ ಸರ್ಕಾರವೇ ವಾಸಿ,” “ಪ್ರಧಾನ ಮಂತ್ರಿ ಬಟ್ಟೆ ಬದಲಿಸಿದಂತೆ ಆರ್.ಬಿ.ಐ ರೂಲ್ಸ್ ಬದಲಿಸುತ್ತಿದೆ” ಎಂಬಂತಹ ಕೆಲ ವಿಷಯಗಳು ಈ ಲೇಖನ ಬರೆಯಲು ಪ್ರೇರೇಪಿಸಿತು. ’ಭ್ರಷ್ಟಾಚಾರ ಎನ್ನುವುದು ಈ ದೇಶಕ್ಕೆ ತಗುಲಿರುವ ಕ್ಯಾನ್ಸರ್’ ಎಂದು ಈ ಹಿಂದೆ ದೊಡ್ಡ ದೊಡ್ಡ ಜನ ಹೇಳುತ್ತಿದ್ದರು. ಈಗ ಅದಕ್ಕೆ ಡಿಮಾನಟೈಸೇಶನ್ ಎನ್ನುವ ಥೆರಪಿ ಆರಂಭಿಸಿದ್ದಾರೆ, ಆದರೆ ಸೈಡ್ ಎಫೆಕ್ಟ್ ಎದುರಿಸಲು ಸಿದ್ಧರಿಲ್ಲ ಎಂದರೆ ಹೇಗೆ?! ಕ್ಯಾನ್ಸರ್ ದೇಹಕ್ಕೇ ಬಂದಿರಲಿ ಅಥವಾ ದೇಶಕ್ಕೆ ಬಂದಿರಲಿ ಚಿಕಿತ್ಸೆಯ ಕೆಲ ಅಡ್ಡಪರಿಣಾಮಗಳನ್ನ ಎದುರಿಸಲೇಬೇಕಲ್ಲ! ಕೀಮೋಥೆರಪಿಯನ್ನ ಕೊಡುವುದು ಕ್ಯಾನ್ಸರ್ ಸೆಲ್ಸ್’ನ ಧ್ವಂಸಗೊಳಿಸುವುದಕ್ಕೆ. ಆದರೆ ಕೀಮೋ ಇತರ ನಾರ್ಮಲ್ ಜೀವಕೋಶಗಳ ಮೇಲೆ ಕೂಡ ಪರಿಣಾಮ ಬೀರಿಯೇ ಬೀರುತ್ತದೆ. ಸರಿಯಾಗಿರುವ ಜೀವಕೋಶಗಳಿಗೂ ಅದರಿಂದ ತೊಂದರೆಯಾಗುತ್ತದೆ. ಇದೊಂಥರ ಅನ್ಯಾಯ ಅಂತ ಅನಿಸುವುದು ಸಹಜ. ಆದರೆ ಅದರಿಂದ ನಂತರ ಒಂದು ಆರೋಗ್ಯಪೂರ್ಣ ಬದುಕು ಸಿಗುವುದಾದರೆ, ದೇಹ ಕ್ಯಾನ್ಸರ್ ಮುಕ್ತವಾಗುವುದಾದರೆ ಸ್ವಲ್ಪ ಕಷ್ಟವನ್ನು ಸಹಿಸಿಕೊಳ್ಳಬಹುದು ಅಲ್ಲವಾ.?

 

   ಈ ಮಧ್ಯೆ ಆಗುವ ಸೈಡ್ ಎಫೆಕ್ಟ್’ನ ತೀವ್ರತೆ ಕಡಿಮೆಗೊಳಿಸುವುದಕ್ಕೆ ಕೂಡ ಮೆಡಿಸಿನ್ ಕೊಡುತ್ತಿರುತ್ತಾರೆ. ಒಂದು ವೇಳೆ ಅದು ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ ಅಂತ ಅನಿಸಿದರೆ ಅದನ್ನ ಬದಲಾಯಿಸಿ ಬೇರೆಯದು ಕೊಡುತ್ತಾರೆ. ಹೀಗೆ ಪದೇ ಪದೇ ಸ್ಟ್ರಾಟೆಜಿಯಲ್ಲಾಗುವ ಬದಲಾವಣೆಗಳು ನಮ್ಮ ಒಳಿತಿಗಾಗಿಯೇ, ನಮ್ಮ ಕಷ್ಟಗಳನ್ನ ಕಡಿಮೆಗೊಳಿಸುವುದಕ್ಕಾಗಿಯೇ ಎನ್ನುವಂತಹ ವಿವೇಕ ಇರಬೇಕು.

 

ಇನ್ನು ಕೀಮೋ ಮುಗಿದ ಮರುದಿನದಿಂದಲೇ ದೇಹಸ್ಥಿತಿ ಮೊದಲಿನಂತಾಗುವುದಿಲ್ಲ. ಕ್ರಮೇಣವಾಗಿ, ದಿನಗಳೆದಂತೆ ದೇಹ ಮತ್ತೆ ಸುಸ್ಥಿತಿ ಬರಲಾರಂಭಿಸುತ್ತದೆ. ’ಕೀಮೋ ಮುಗಿದ ನಂತರ ಎಲ್ಲ ಸರಿ ಹೋಗುತ್ತದೆ ಎಂದಿದ್ದಿರಿ, ಇನ್ನೂ ಎಲ್ಲವೂ ಸರಿಯಾಗಿಲ್ಲ” ಎಂದು ಎರಡೇ ದಿನಕ್ಕೆ ಡಾಕ್ಟರ್ ಮುಂದೆ ಹೋಗಿ ಧರಣಿ ಮಾಡುವುದಕ್ಕಾಗುತ್ತದೆಯೇ..?!

 

ಕ್ಯಾನ್ಸರ್ ಸೆಲ್ ಸುಮ್ಮನೇ ಇರುವಂಥದ್ದಲ್ಲ, ತಮ್ಮ ಅಕ್ಕ-ಪಕ್ಕದ ಜೀವಕೋಶಗಳನ್ನು ಕೂಡ ತಮ್ಮಂತಯೇ ಮಾಡಿಕೊಳ್ಳುತ್ತಾ ತಮ್ಮ ಶಕ್ತಿಯನ್ನ ವರ್ಧಿಸಿಕೊಳ್ಳುತ್ತಾ ಹೋಗುತ್ತದೆ. ಆರೋಗ್ಯಪೂರ್ಣ ಜೀವಕೋಶಗಳು ಈ ಕ್ಯಾನ್ಸರ್ ಸೆಲ್’ಗೆ ’ಸ್ಟಾಪ್’ ಸಿಗ್ನಲ್ ಕೊಟ್ಟರೂ ಕೂಡ ಅದನ್ನ ಪರಿಗಣಿಸದೇ ಬೆಳೆಯುತ್ತಾ ಹೋಗುತ್ತದೆ. ಕೆಲವೊಮ್ಮೆ ಕೀಮೋ ಆರಂಭಿಸಿದ ನಂತರವೂ ಬೇರೆಡೆ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೀಮೋ ಮಧ್ಯೆ ಕೂಡ ಟೆಸ್ಟ್ ಮಾಡುತ್ತಿರಬೇಕಾಗುತ್ತದೆ. ಒಂದು ವೇಳೆ ಅಂತಹ ಬೆಳವಣಿಗೆ ಕಂಡುಬಂದಲ್ಲಿ ಚಿಕಿತ್ಸೆಯ ತೀವ್ರತೆಯನ್ನ ಹೆಚ್ಚು ಮಾಡಬೇಕಾಗುತ್ತದೆ. ಅದರಿಂದ ಇನ್ನಷ್ಟು ಕಷ್ಟವಾಗುವುದು ಕೂಡ ಸಹಜವೇ! ಆದರೆ ಆ ಕ್ಯಾನ್ಸರ್’ನ್ನು ಹೇಗಾದರೂ ತಡೆಯಲೇಬೇಕಲ್ಲ. ಇಲ್ಲವೆಂದಲ್ಲಿ ಇಡೀ ದೇಹವನ್ನೇ ವ್ಯಾಪಿಸಿಬಿಡುತ್ತದೆ. ಭ್ರಷ್ಟರು ಕೂಡ ಈ ಕ್ಯಾನ್ಸರ್ ಸೆಲ್’ನಂತೆಯೇ! ಅವರನ್ನು ತಡೆಯುವುದು ಕೂಡ ಅನಿವಾರ್ಯ.

 

ಒಬ್ಬ ಕ್ಯಾನ್ಸರ್ ರೋಗಿ ಕ್ಯಾನ್ಸರ್’ನಿಂದ ಮುಕ್ತಗೊಳ್ಳಲು ಇದೆಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಳ್ಳುತ್ತಾನೆ. ಎಷ್ಟೇ ಆದರೂ ನಮ್ಮ ಬದುಕಿನ ಪ್ರಶ್ನೆ! ’ನನ್ನ ಬದುಕು’ ಅಂತ ಬಂದಾಗ, ಮುಂದಾಗುವ ಒಳಿತಿಗಾಗಿ ಬರುವ ಕಷ್ಟಗಳನ್ನೆಲ್ಲಾ ಸಹಿಸಿಕೊಳ್ಳುತ್ತೇವೆ. ಆದರೆ ದೇಶ ಅಂತ ಬಂದಾಗ ಆ ತಾಳ್ಮೆ ಇರುವುದೇ ಇಲ್ಲ. ಕೆಲವರು ಮಾತ್ರ ತಮ್ಮ ಬದುಕಿಗಿಂತ ಮೇಲಿನ ಸ್ಥಾನದಲ್ಲಿ ದೇಶವನ್ನ ಇಡಬಲ್ಲರು.

 

ಕೀಮೋ ಪರಿಣಾಮ ಕ್ಯಾನ್ಸರ್ ಸೆಲ್ಸ್ ಮೇಲೆ ಯಾವ ರೀತಿ ಆಗುತ್ತಿದೆ, ದೇಹ ಯಾವ ರೀತಿ ಪ್ರತಿಕ್ರಿಯಿಸುತ್ತಿದೆ ಎನ್ನುವುದರ ಮೇಲೆ ಚಿಕಿತ್ಸೆಯ ಸ್ಟ್ರ್ಯಾಟೆಜಿಯನ್ನ ಬದಲಾಯಿಸುತ್ತಿರಬೇಕಾಗುತ್ತದೆ. ದೇಹದ ಕ್ಯಾನ್ಸರ್’ಗೆ ಚಿಕಿತ್ಸೆ ನೀಡುವಾಗ, ದೇಹಸ್ಥಿತಿಗೆ ಅನುಗುಣವಾಗಿ ಬದಲಾಯಿಸಿದರೆ, ದೇಶದ ಕ್ಯಾನ್ಸರ್’ಗೆ ಚಿಕಿತ್ಸೆ ಮಾಡುವಾಗ ಪರಿಸ್ಥಿತಿಗೆ ಅನುಗುಣವಾಗಿ ರೂಲ್ಸ್’ನ್ನ, ಸ್ಟ್ರಾಟೆಜಿಯನ್ನ ಬದಲಾಯಿಸಬೇಕಾಗುತ್ತದೆ..! ಕ್ಯಾನ್ಸರ್ ಗುಣವಾಗಬೇಕು ಆದರೆ ಸೈಡ್ ಎಫೆಕ್ಟ್ ಆಗಬಾರದು, ಅದರಿಂದಾಗುವ ಬದಲಾವಣೆಗೆ ಸಿದ್ಧರಿಲ್ಲ ಎಂದರೆ ಹೇಗೆ??!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!