Featured ಅಂಕಣ

ಕ್ಯಾನ್ಸರ್ ಉಂಟಾದಾಗ ಕೋಪ ಸಹಜ, ಆದರೆ ಅದು ಇತರರ ಮೇಲೆ ಪರಿಣಾಮ ಬೀರದಿರಲಿ.!!

‘It is okay to be mad at someone during cancer’  ಅನ್ನೋ ಸಾಲನ್ನ ಇತ್ತೀಚೆಗೆ ಟ್ವಿಟರ್’ನಲ್ಲಿ ನೋಡಿದೆ. ಯಾರೋ ಒಬ್ಬ ಸರ್ವೈವರ್ ಆ ಮಾತನ್ನು ಹೇಳಿದ್ದರು. ನನಗೂ ಕೂಡ ಈ ಮಾತು ಅಕ್ಷರಶಃ ನಿಜ ಎನಿಸಿತು. ಆದರೆ..! ಆ ಸಾಲಿನಲ್ಲಿ ಸ್ವಲ್ಪ ಬದಲಾವಣೆಯಾಗಬೇಕೇನೋ ಎನಿಸಿತು. ಕ್ಯಾನ್ಸರ್ ಸಮಯದಲ್ಲಿ ನಮ್ಮ ಆ ಎಲ್ಲಾ ಋಣಾತ್ಮಕ ಭಾವಗಳನ್ನ ಹೊರ ಹಾಕುವುದು ಅವಶ್ಯಕ ಆದರೆ ’ಯಾರ ಮೇಲಾದರೂ’ ಅನ್ನುವುದು ಸಮಂಜಸವಾ..?!!

ಕ್ಯಾನ್ಸರ್ ಎನ್ನುವುದು ತಿಳಿಯುತ್ತಿದ್ದಂತೆಯೇ ಭಯ, ಕೋಪ, ಹತಾಶೆ, ಅಸಹಾಯಕತೆ, ಅನಿಶ್ಚಿತತೆ, ಚಿಂತೆ ಹೀಗೆ ಇನ್ನೂ ಹಲವಾರು ನೆಗೆಟಿವ್ ಎಮೋಷನ್’ಗಳು ನಮ್ಮನ್ನ ಕಾಡಲಾರಂಭಿಸುತ್ತದೆ. ನಮ್ಮೊಂದಿಗೆ ಅವುಗಳ ನಂಟು ಹೇಗಿರುತ್ತದೆ ಎಂದರೆ ಪ್ರತಿಕ್ಷಣ ಅವುಗಳ ಅನುಭವವಾಗುತ್ತಿರುತ್ತದೆ. ಒಂದು ದೊಡ್ಡ ಭಾರದಂತೆ..!! ಹೃದಯ ಆ ಭಾರವನ್ನು ಹೊತ್ತುಕೊಂಡೇ ತಿರುಗುತ್ತಿದೆಯೇನೋ ಎನ್ನುವಂತೆ. ಕೆಲವೊಮ್ಮೆ ಆ ’ಭಾರ’ ಹೆಚ್ಚುತ್ತಾ ವಿಪರೀತವಾಗಿ ಇನ್ನು ಸಹಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಬಂದಾಗ ಅದನ್ನ ಹೊರ ಹಾಕಲೇಬೇಕಲ್ಲ. ನಾವೆಷ್ಟೇ ಬೇಡವೆಂದರೂ ಒಂದಲ್ಲ ಒಂದು ದಾರಿ ಹುಡುಕಿಕೊಂಡು ಹೊರ ಬಂದೇ ತೀರುತ್ತದೆ..!

   ನಮ್ಮ ಆ ಎಲ್ಲಾ ನೆಗೆಟಿವ್ ಎಮೋಷನ್’ಗಳಲ್ಲಿ ಹೆಚ್ಚು ಪ್ರಾಬಲ್ಯ ಇರುವುದು ಕೋಪಕ್ಕೆ. ನಮಗೆ ಎಲ್ಲದರ ಬಗ್ಗೆ ಕೋಪ ಇರುತ್ತದೆ. ಕ್ಯಾನ್ಸರ್’ ಎಂಬ ರೋಗ ಇರುವುದರ ಬಗ್ಗೆ, ನಮ್ಮ ಅಸಹಾಯಕತೆಯ ಬಗ್ಗೆ, ನಮ್ಮ ಮುಂದಿರುವ ಅನಿಶ್ಚಿತತೆಯ ಬಗ್ಗೆ, ಆಕಸ್ಮಿಕವಾಗಿ ಬಂದ ಈ ಬದಲಾವಣೆಯ ಬಗ್ಗೆ, ಕೊನೆಗೆ ನಮ್ಮ ಮೇಲೆ ಕೂಡ ನಮಗೆ ಕೋಪವಿರುತ್ತೆ! ಅದು ಸಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟರ ಮಟ್ಟಿಗೆ ಬೆಳೆದಾಗ ಹೊರ ಹಾಕಲೇಬೇಕು. ಹೆಚ್ಚಾಗಿ ನಾವು ಅದನ್ನ ನಮ್ಮ ಅಕ್ಕಪಕ್ಕದವರ ಮೇಲೆಯೇ, ನಮ್ಮ ಕುಟುಂಬದವರ ಮೇಲೆಯೇ ಹಾಕಿ ಬಿಡುತ್ತೇವೆ. ಋಣಾತ್ಮಕ ಭಾವಗಳು ಅಷ್ಟೆಲ್ಲಾ ಭೋರ್ಗರೆಯುತ್ತಿರುವಾಗ ಅವುಗಳ ಮಧ್ಯೆ ’ತಾಳ್ಮೆ’ ಅನ್ನುವುದನ್ನ ಹುಡುಕುವುದು ಸ್ವಲ್ಪ ಕಷ್ಟವೇ..! ಅಲ್ಲದೇ.. ಅವುಗಳನ್ನ ಹೊರ ಹಾಕುವುದು ಅನಿವಾರ್ಯ ಕೂಡ ಹೌದು. ಒಳಗೆ ಇಟ್ಟುಕೊಂಡಷ್ಟೂ ನಮಗೇ ಹಾನಿ.!

  ನನ್ನ ಕೋಪ ಒಮ್ಮೆ ತಾರಕಕ್ಕೇರಿ ಕೈಗೆ ಸಿಕ್ಕಿದ ವಸ್ತುವೊಂದನ್ನು ಗೋಡೆಗೆ ’ರಪ್’ ಎಂದು ಬಿಸಾಕಿದ್ದೆ. ನನಗೆ ನನ್ನ ಅಸಹಾಯಕತೆಯ ಮೇಲಿದ್ದ ಕೋಪದ ಪರಿಣಾಮ ಆ ವಸ್ತು ಅನುಭವಿಸಿತ್ತು. ಶಬ್ದ ಕೇಳಿ ಓಡಿ ಬಂದ ಅಮ್ಮ ಸುಮ್ಮನೆ ಒಂದು ನಿಮಿಷ ನಿಂತು ನೋಡಿ, ಆ ವಸ್ತುವನ್ನು ಎತ್ತಿ ಪುನಃ ಅದರ ಸ್ಥಳದಲ್ಲಿ ಇಟ್ಟು ಹೋಗಿದ್ದರು. ಹಾಗೆ ಮಾಡಿದ ನಂತರ ನನಗೆ ಸಮಾಧಾನವಾಗಿತ್ತಾ ಎಂದರೆ ಒಂದು ರೀತಿಯಲ್ಲಿ ಹೌದು ಇನ್ನೊಂದು ರೀತಿಯಲ್ಲಿ ಇಲ್ಲ..! ನನ್ನ ಅಸಹಾಯಕತೆಯ ಮೇಲಿದ್ದ ಕೋಪ ಕಡಿಮೆಯಾಗಿ, ನನ್ನ ವರ್ತನೆಯ ಮೇಲೆ ಕೋಪ ಬಂದಿತ್ತು ಅಷ್ಟೆ..!!

  ನನ್ನ ಈ ವರ್ತನೆಯ ಬಗ್ಗೆ ಅತ್ತೆ ಬಗ್ಗೆ ಹೇಳಿದಾಗ ಅವರು, “ನೀನು ಕೋಪವನ್ನು ಹೊರ ಹಾಕಬಹುದು. ವಸ್ತುಗಳನ್ನ ಬಿಸಾಕು, ಎಲ್ಲರ ಮೇಲೆ ಕೂಗಾಡು ಪರವಾಗಿಲ್ಲ. ಆ ಕೋಪವನ್ನು ಹೊರ ಹಾಕಿದರೆ ಸ್ವಲ್ಪ ಸಮಾಧಾನವಾಗುತ್ತದೆ’ ಎಂದಿದ್ದರು. ಅದಕ್ಕೆ ಉತ್ತರವಾಗಿ, “ಅದರಿಂದ ನಿಜಕ್ಕೂ ನನಗೆ ಸಮಾಧಾನವಾಗುವಂತಿದ್ದರೆ ಸರಿ. ಆದರೆ ಪಶ್ಚಾತ್ತಾಪವಾಗುವಂತಿದ್ದರೆ?! ನನ್ನವರ ಮೇಲೆ ಕೂಗಾಡಿ, ಸಿಟ್ಟಿನ ಭರದಲ್ಲಿ ಏನೇನೋ ಹೇಳಿ ಅವರಿಗೆ ನೋವುಂಟು ಮಾಡಿದ ನಂತರ, ಅವರಿಗೆ ಹೀಗೆ ಮಾಡಿದೆನಲ್ಲ ಅನ್ನೋ ಪಶ್ಚಾತ್ತಾಪ, ಮತ್ತೆ ಅದರ ಬಗ್ಗೆ ಕೋಪ ಸಿಗುತ್ತದೆ ಅಷ್ಟೇ ಹೊರತು ಸಮಾಧಾನವಲ್ಲ!” ಎಂದಿದ್ದೆ.

  ನಾವು ನಮ್ಮದೇ ಆದ ಸಮಸ್ಯೆಗಳಲ್ಲಿ ಎಷ್ಟು ಮುಳುಗಿ ಹೋಗುತ್ತೇವೆಂದರೆ ನಮ್ಮ ಕುಟುಂಬದವರು ಕೂಡ ನೋವಿನಲ್ಲಿದ್ದಾರೆ ಎನ್ನುವುದನ್ನ ಮರೆತೇ ಬಿಡುತ್ತೇವೆ. ನಮ್ಮ ಪಯಣದಲ್ಲಿ ಅವರೂ ಕೂಡ ನಮ್ಮೊಂದಿಗೆ ನಡೆಯುತ್ತಿದ್ದಾರೆ ಎನ್ನುವುದನ್ನ ಗಮನಿಸುವುದೇ ಇಲ್ಲ. ನಮ್ಮ ನೋವನ್ನು ಕಡಿಮೆ ಮಾಡಲು ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿರುತ್ತಾರೆ. ಅದರ ನಡುವೆ ನಮ್ಮ ಈ ತರಹದ ವರ್ತನೆಗಳು ಅವರ ಈ ಪ್ರಯತ್ನಗಳನ್ನು ಇನ್ನಷ್ಟು ಕಠಿಣಗೊಳಿಸುತ್ತದೆ. ಇತ್ತೀಚೆಗೆ ನನ್ನ ಅನುಭವಕ್ಕೆ ಬಂದಿದ್ದೇನೆಂದರೆ, ನಾವು ಸ್ವತಃ ನೋವು ಅನುಭವಿಸುವುದಕ್ಕಿಂತ, ನಮ್ಮವರನ್ನ ನೋವಿನಲ್ಲಿ ನೋಡುತ್ತಾ, ಅವರ ನೋವನ್ನ ಕಡಿಮೆ ಮಾಡಲಾಗದೇ ಅಸಹಾಯಕರಾಗಿ ನಿಲ್ಲುವುದಿದೆಯಲ್ಲ ಅದಕ್ಕಿಂತ ದೊಡ್ಡ ಕಷ್ಟ ಇನ್ನೊಂದಿಲ್ಲ! ನಾವು ನೋವು ಅನುಭವಿಸುವಾಗ ನಮ್ಮ ಕುಟುಂಬದವರು ಕೂಡ ಇಂತಹದೇ ಅಸಹಾಯಕ ಸ್ಥಿತಿಯಲ್ಲಿರುತ್ತಾರೆ. ಅಂತಹ ಸಮಯದಲ್ಲಿ ನಾವು ನಮ್ಮ ಕೋಪವನ್ನು ಹೊರ ಹಾಕುವ ಭರದಲ್ಲಿ ಮಾಡುವ ವರ್ತನೆಗಳು ಅವರ ಅಸಹಾಯಕತೆಯನ್ನು ಇನ್ನೂ ಹೆಚ್ಚಿಸುತ್ತದೆ! ತಮ್ಮ ಕೈಯ್ಯಲ್ಲಿ ಇವರ ನೋವನ್ನು ಕಡಿಮೆ ಮಾಡಲಾಗುತ್ತಿಲ್ಲವಲ್ಲ ಎಂದು ಮತ್ತಷ್ಟು ಕೊರಗುತ್ತಾರೆ. ಕ್ಯಾನ್ಸರ್’ನಿಂದ ಬಳಲುತ್ತಿರುವ ವ್ಯಕ್ತಿ ಆ ರೀತಿ ವರ್ತಿಸಿದಲ್ಲಿ ಅದರಲ್ಲಿ ಆತನ ತಪ್ಪು ಏನಿಲ್ಲ, ಅದು ಉದ್ದೇಶಪೂರಿತವಾಗಿರುವುದಿಲ್ಲ ಕೂಡ, ಆತನ ಮಾನಸಿಕ ತೊಳಲಾಟಗಳು ಆ ರೀತಿ ಮಾಡಿಸುತ್ತದೆ. ಆದರೆ ಆ ವರ್ತನೆಗಳ ಪರಿಣಾಮ ಎದುರಿಸುವ ಕುಟುಂಬದವರದ್ದು ಕೂಡ ಅದರಲ್ಲಿ ಯಾವುದೇ ತಪ್ಪು ಇರುವುದಿಲ್ಲ. ವಿನಾ ಕಾರಣ ಅದನ್ನೆಲ್ಲಾ ಸಹಿಸಿಕೊಳ್ಳಬೇಕು ಅವರು!!

   ಹಾಗಾದರೆ ಕೋಪವನ್ನು ಹೊರ ಹಾಕುವುದೇ ತಪ್ಪಾ..?!! ಖಂಡಿತಾ ಇಲ್ಲ. ಕೋಪವನ್ನು ನಮ್ಮವರಿಗೆ ನೋವಾಗದಂತೆ ಕೂಡ ಹಾಕಬಹುದು. ಕೆಲವರು ಆ ಕೋಪವನ್ನು ಪಾಸಿಟಿವ್ ಆಗಿ, ಸೃಜನಾತ್ಮಕವಾಗಿ ಹೊರ ಹಾಕುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ. ಅದು ಸಾಧ್ಯವಾಗದಿದ್ದಲ್ಲಿ ಸುಲಭದ ದಾರಿಯೂ ಇದೆ.  ನ್ಯಾನ್ಸಿ ಎಂಬ ಕ್ಯಾನ್ಸರ್ ಸರ್ವೈವರ್ ತನಗೆ ಈ ರೀತಿ ಕೋಪ ಬಂದಾಗೆಲ್ಲಾ ಪೇಪರ್ ಪೆನ್ನು ತೆಗೆದುಕೊಂಡು ಮನಸಿಗೆ ಅನಿಸಿದ್ದನ್ನೆಲ್ಲಾ ಗೀಚಿ ನಂತರ ಬಿಸಾಡುತ್ತಿದ್ದಳಂತೆ. ಮನಸ್ಸು ಹಗುರವೂ ಆಗುತ್ತಿತ್ತು, ಇತರರಿಗೆ ನೋವೂ ಕೂಡ ಆಗುತ್ತಿರಲಿಲ್ಲ. ನನಗಂತೂ ನನ್ನ ತಲೆದಿಂಬು ಯಾವಾಗಲೂ ಕೆಲಸಕ್ಕೆ ಬರುತ್ತಿತ್ತು. ಕೋಪ ಕಡಿಮೆಯಾಗುವವರೆಗೂ ಅದರೊಂದಿಗಿನ ಗುದ್ದಾಟ ಸಮಾಧಾನ ನೀಡುತ್ತಿತ್ತು. ಇಂತಹ ಹಲವು ದಾರಿಗಳಿವೆ ಆ ಮಡುಗಟ್ಟಿದ ಕೋಪವನ್ನು ಹೊರ ಹಾಕಲು. ಕ್ಯಾನ್ಸರ್ ಸಮಯದಲ್ಲಿ ಹೆಚ್ಚು ವಿಚಾರ ಮಾಡುವಷ್ಟು ತಾಳ್ಮೆ ನಮ್ಮಲ್ಲಿ ಇಲ್ಲದಿರಬಹುದು, ಆದರೂ ಸ್ವಲ್ಪ ಪ್ರಯತ್ನ ಪಡೋಣ! ನಮ್ಮ ಪರಿವಾರ ನಮಗಾಗಿ ಎಷ್ಟೊಂದೆಲ್ಲ ಕಷ್ಟ ಪಡುತ್ತಿರುವಾಗ, ನಮ್ಮ ನೋವಿನ ಮಧ್ಯೆ ಸ್ವಲ್ಪ ಅವರ ಬಗ್ಗೆ ಯೋಚಿಸುವ ಪ್ರಯತ್ನ ಪಡೋಣ. ನಮ್ಮ ಎಮೋಷನ್ಸ್ ಅವರಿಗೆ ನೋವುಂಟು ಮಾಡದಿರುವಂತೆ ಎಚ್ಚರಿಕೆ ವಹಿಸೋಣ. ನಿಜ.. ಕ್ಯಾನ್ಸರ್ ಇರುವಾಗ It is okay to be mad! ಆದರೆ ಅದು ವ್ಯಕ್ತಿಯ ಮೇಲಾಗದಿರಲಿ, ಕ್ಯಾನ್ಸರ್ ಉಂಟಾದಾಗ ಕೋಪ ಸಹಜ, ಆದರೆ ಅದು ಇತರರ ಮೇಲೆ ಪರಿಣಾಮ ಬೀರದಿರಲಿ.!!

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!