ಅಂಕಣ

ಕೂಲಿ ಮಗ ಮುಸ್ತಫ಼ಾನ ‘ಐಡಿ‘ಯ; ಸೇರುತಿಹುದು ಮನೆಮನೆಯ.

ಹೊಸ ವಿಚಾರಗಳಿಗೆ ಯಾವತ್ತೂ ಸಾವಿಲ್ಲ. ಬದುಕಿನ ನಿರಂತರ ಪಯಣದಲಿ ನಾವು ಸತ್ತ ಮೇಲೂ ಜೀವಂತವಿರುವುದು ನಾವು ಬದುಕಿರುವಾಗ ಮಾಡಿದ ಒಳ್ಳೆ ಕೆಲಸಗಳು ಮಾತ್ರ. ಮಾನವನ ಆಸೆಗೆ ಕೊನೆಯೇ ಇಲ್ಲದ ಈ ಕಲಿಗಾಲದಲ್ಲಿ ಮನುಷ್ಯನ ಸ್ವಾರ್ಥವೇ ಎಲ್ಲವನ್ನೂ ಮೀರಿದ್ದು ಎಂದರೆ ಅತಿಶಯೋಕ್ತಿಯೇನಿಲ್ಲ ಎಂದುಕೊಂಡಿದ್ದೇನೆ. ಸ್ವಾರ್ಥವನ್ನೂ ಮೀರಿ ಸಮಾಜದ ಒಳಿತನ್ನು ಬಯಸುವವರನ್ನು “ಯಶಸ್ವೀ ವ್ಯಕ್ತಿಗಳು” ಎನ್ನಬಹುದು. ಭಾರತದಂತಹ ದೊಡ್ಡ ಜನಸಂಖ್ಯೆಯ ರಾಷ್ಟ್ರದಲ್ಲಿ ಹೊಸ ಹೊಸ ಯೋಚನೆಗಳು, ಪ್ರಯೋಗಗಳು ಸಾಮಾನ್ಯರ ಸೆಳೆಯುವಂತದ್ದಾದರೆ ಮಾತ್ರ ಯಶಸ್ವಿಯಾಗಬಹುದು. ಈ ಮೂಲ ಸತ್ವವನ್ನು ಅರಿಯದೆ ಸ್ಥಾಪಿಸಿದ ಅದೆಷ್ಟೋ ಕೈಗಾರಿಕೆಗಳು ಮಕಾಡೆ ಮಲಗಿದ್ದನ್ನು ನೀವು ಗಮನಿಸಬಹುದು. ಹೊಸ ಬ್ಯುಸೀನೆಸ್ಸ್’ಗಳು ಒಂದು ವರ್ಗಕ್ಕೆ ಸೀಮಿತವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿರುವುದನ್ನೂ ನಾವು ನೋಡಬಹುದು. ಆದರೆ ಈ ಅಡೆತಡೆಗಳನ್ನು ಮೀರಿ ಯೋಚಿಸಿ ಯಶಸ್ವಿಯಾದ ಅದೆಷ್ಟೋ ವ್ಯಕ್ತಿಗಳನ್ನು ನಾವು  “ಸಾಧಕರ” ಸಾಲಿನಲ್ಲಿ ನೋಡಬಹುದು. ಅವರ ಹೊಸ ಹೊಸ ಯೋಚನೆಗಳು ದೇಶದ ಆರ್ಥಿಕ ಸ್ಥಿತಿಗತಿಯನ್ನೂ ಕೂಡ ಕೊಂಚ ಮಟ್ಟಿಗೆ ಬದಲಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದು ಟಾಟಾ,ಬಿರ್ಲಾ,ಇನ್ಫೋಸಿಸ್, ಫ್ಲಿಪ್‌ಕಾರ್ಟ್  ನಂತಹ ಅದೆಷ್ಟೋ ಕಂಪನಿಗಳಾಗಿರಬಹುದು . ಪ್ರತಿ ಕಂಪನಿಯ ಸ್ಥಾಪನೆಯ ಹಿಂದೆ ಒಂದು ಕತೆಯಿರುತ್ತದೆ. ಅದು ಇನ್ನೊಂದು ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತದೆ. ಇದು ಅಂತದ್ದೇ ಒಂದು ಯಶಸ್ವೀ ಕಥೆ. ಸಾಮಾನ್ಯನೊಬ್ಬ ಅಸಾಮಾನ್ಯ ಸಾಧಕನಾದ ಕಥೆ.

ಇದು ಕೇರಳದ ವೈನಾಡಿನ ಹಳ್ಳಿಯ ಹುಡುಗನೊಬ್ಬನ ಕಥೆ. ಆ ಹುಡುಗನ ತಂದೆ ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಕುಟುಂಬ ಸಾಗಿಸುತ್ತಿದ್ದರು. ತಾಯಿ ಶಾಲೆಯ ಮೆಟ್ಟಿಲನ್ನೂ ಹತ್ತದವಳಾಗಿದ್ದಳು. ಇದು ಆರನೇ ತರಗತಿಯಲ್ಲಿ ನಪಾಸಾದ ಆದರೆ  ಮುಂದೆ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ನಲ್ಲಿ ಪದವಿ ಪಡೆದ ಹುಡುಗನ ಕಥೆ. ಆ ಹುಡುಗನ ಗುರಿಯೇ ತಾನೊಬ್ಬ ಯಶಸ್ವೀ ಬಿಸ್ನೆಸ್‌ಮ್ಯಾನ್ ಆಗಬೇಕೆಂದಾಗಿತ್ತು. ಭಾರತದ ಹಳ್ಳಿಯ ಯುವಕರಿಗೆ ನಾನು ಕೆಲಸ ಕೊಡಬೇಕು ಎಂಬುದೇ ಅವನ ಗುರಿಯಾಗಿತ್ತು. ಅವನೇ “ಪಿ ಸಿ ಮುಸ್ತಫಾ”. ಇವತ್ತು ಲಕ್ಷಾಂತರ ಜನರಿಗೆ ಫ್ರೆಶ್ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಸುಲಭವಾಗಿ ದೊರಕುವಂತೆ ಮಾಡಿ ಹಿಟ್ಟಿಗೂ ಒಂದು ಬ್ರ್ಯಾಂಡ್ ತಂದ ವ್ಯಕ್ತಿ ಇದೇ ಮುಸ್ತಫಾ. ಐಡಿ ಫ್ರೆಶ್ ದೋಸಾ ಮಿಕ್ಸ್ ಮತ್ತು ಐಡಿ ಫ್ರೆಶ್ ಇಡ್ಲಿ ಮಿಕ್ಸ್ ಇವತ್ತು ಭಾರತದಲ್ಲೊಂದೇ ಅಲ್ಲ ದುಬೈನಲ್ಲಿ ಕೂಡ ಸುಲಭವಾಗಿ ದೊರಕುತ್ತದೆ.

ಮುಸ್ತಫಾ ತನ್ನ ಬಾಲ್ಯವನ್ನು ವೈನಾಡು ಸಮೀಪದ ಚೆನ್ನಾಲೋದೇ ಎಂಬ ಹಳ್ಳಿಯಲ್ಲಿ ಕಳೆದ. ಜೀವನಕ್ಕೆ ಬೇಕಾದ ಅವಶ್ಯ ವಸ್ತುಗಳು ಕೂಡ ದೊರಕದ ಹಳ್ಳಿ ಅದಾಗಿತ್ತು. ಸರಿಯಾದ ರಸ್ತೆಗಳಿಲ್ಲದ, ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿ ಅದಾಗಿತ್ತು. ಮಕ್ಕಳು ಶಾಲೆಗೆ ಹೋಗಬೇಕೆಂದರೆ ನಾಲ್ಕು ಕಿಲೋಮೀಟರ್ ನಡೆದು ಹೋಗಬೇಕಾದ ಪರಿಸ್ಥಿತಿ ಅಲ್ಲಿತ್ತು. ಮುಸ್ತಫಾ ಅವರ ಅಪ್ಪ ಅದೇ ಹಳ್ಳಿಯ ಕಾಫಿ ಎಸ್ಟೇಟ್ ಒಂದರಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. ಮುಸ್ತಫಾ ಮೂವರು ತಂಗಿಯರ ನೆಚ್ಚಿನ ಅಣ್ಣನಾಗಿದ್ದ. ಬಡತನ ಕುಟುಂಬವನ್ನು ವಿಪರೀತವಾಗಿ ಆವರಿಸಿತ್ತು. ಮುಸ್ತಫಾ ಕೂಡ ಓದಲು ಚುರುಕಾಗಿರಲಿಲ್ಲ. ಓದುವುದು ಅಂದರೆ ಆತನಿಗೆ ಚೂರು ಹಿಡಿಸುತ್ತಿರಲಿಲ್ಲ. ಆತ ಓದುವುದನ್ನು ಬಿಟ್ಟು ತನ್ನ ತಂದೆಗೆ ಕೂಲಿ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಚಿಮಣಿ ದೀಪದ ಬೆಳಕಲ್ಲಿ  ಓದಬೇಕಾದ ಪರಿಸ್ಥಿತಿ ಆ ಹಳ್ಳಿಯ ಹುಡುಗರದ್ದಾಗಿತ್ತು. ಓದಲು ಚೂರು ಇಷ್ಟವಿರದ ಮುಸ್ತಫಾ ಆರನೇ ತರಗತಿಯಲ್ಲಿ ನಪಾಸಾಗುತ್ತಾನೆ. ಅವನ ಆಸೆ ಕೂಡ ತಂದೆಗೆ ಕೂಲಿ ಕೆಲಸದಲ್ಲಿ ನೆರವಾಗುವುದಾಗಿತ್ತು. ಅವನ ತಂದೆ ಕೂಡ ಮಗನನ್ನು ಕೂಲಿಗೆ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದರು. ಆದರೆ ಸರಕಾರಿ ಶಾಲೆಯ ಶಿಕ್ಷಕರಾದ ಮ್ಯಾಥ್ಯು ಅವರು ಮುಸ್ತಫಾನನ್ನು ಪುನಃ ಶಾಲೆಗೆ ಸೇರಿಸುವಂತೆ ಅವರ ತಂದೆಯಲ್ಲಿ ಕೇಳಿಕೊಂಡಿದ್ದರು. ಮುಸ್ತಫಾನ ಬಳಿ ಮ್ಯಾಥ್ಯೂ ಸರ್ ಒಂದು ಪ್ರಶ್ನೆಯನ್ನು ಆ ಸಮಯದಲ್ಲಿ ಕೇಳಿದ್ದರು ಅದೇನೆಂದರೆ “ನೀನು ಬವಿಷ್ಯದಲ್ಲಿ ಕೂಲಿಯಾಗಲು ಬಯಸುತ್ತೀಯಾ ಅಥವಾ ಶಿಕ್ಷಕನಾಗಲು ಬಯಸುತ್ತೀಯಾ?”ಎಂದು. ಆ ಪ್ರಶ್ನೆ ಮುಸ್ತಫಾನ ಬದುಕನ್ನು ಬದಲಿಸಿತು.ಆ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ ಅಪ್ಪನ ಬಳಲಿದ ಮುಖ ಕಣ್ಮುಂದೆ ಬಂದಿತ್ತು. ತಾನು ಕೂಡ ಮ್ಯಾಥ್ಯೂ ಸರ್ ಆಂತೆಯೇ ಶಿಕ್ಷಕನಾಗಬೆಂಬ ಆಸೆ ಮುಸ್ತಫಾನ ಮನಸ್ಸಲ್ಲಿ ಚಿಗುರೊಡೆದಿತ್ತು. ತಾನೂ ಕೂಡ ಓದಬೇಕು ಎಂದು ಮುಸ್ತಫಾ ನಿರ್ಧರಿಸಿಯಾಗಿತ್ತು.ಶಾಲೆಯಲ್ಲಿ ತನಗಿಂತ ಕಿರಿಯ ವಿದ್ಯಾರ್ಥಿಗಳ ಜೊತೆ ಕುಳಿತು ಓದಲು ಮುಸ್ತಫಾನ ಮನಸ್ಸು ಹಿಂಜರಿಯುತ್ತಿತ್ತು. ಆದರೂ ಎಲ್ಲವನ್ನೂ ಸಹಿಸಿಕೊಂಡು ಕಷ್ಟಪಟ್ಟು ಓಡತೊಡಗಿದ ಮುಸ್ತಫಾ ಏಳನೇ ತರಗತಿಯಲ್ಲಿ ಮೊದಲನೇ ಸ್ಥಾನ ಬಂದು ಎಲ್ಲ ಶಿಕ್ಷಕರನ್ನು ಆಶ್ಚರ್ಯಗೊಳಿಸಿದ್ದ. ಅದಾದ ನಂತರ ಮುಸ್ತಫಾ ಹಿಂತಿರುಗಿ ನೋಡಿದ್ದೆ ಇಲ್ಲ. ಆಗೆಲ್ಲ ಮುಸ್ತಫಾನ ಮನಸ್ಸಲ್ಲಿ ಓಡುತ್ತಿದ್ದುದು ತಾನೂ ಕೂಡ ಮ್ಯಾಥ್ಯೂ ಸರ್ ಅಂತೆಯೇ ಗಣೀತ ಶಿಕ್ಷಕನಾಗಬೇಕೆಂದಾಗಿತ್ತು.ಮ್ಯಾಥ್ಯು ಸರ್ ಮುಸ್ತಫ಼ಾನ ರೋಲ್ ಮೊಡೆಲ್ ಆಗಿದ್ದರು. ಬದಲಾವಣೆಗೆ ತೆರೆದುಕೊಂಡ ಮುಸ್ತಫ಼ಾ ಯಶಸ್ವೀ ವ್ಯಕ್ತಿಯಾಗುವ ಸುಳಿವು ಆ ಸಮಯದಲ್ಲಿ ಮ್ಯಾಥ್ಯು ಅವರಿಗೆ ತಿಳಿದಿತ್ತು.

ತನ್ನ ಹತ್ತನೆ ತರಗತಿಯವರೆಗೆ ವೈನಾಡಿನಲ್ಲಿಯೆ ಓದಿದ ಮುಸ್ತಫ಼ಾ ತನ್ನ ಕಾಲೆಜ್ ಶಿಕ್ಷಣಕ್ಕಾಗಿ ಕ್ಯಾಲಿಕಟ್’ಗೆ ಹೊಗುವ ಪರಿಸ್ಥಿತಿ ಬಂತು.ತಂದೆಗೆ ಮಗನನ್ನು ಓದಿಸಬೆಕೆಂಬ ಆಸೆಯೆನೋ ಇತ್ತು ಆದರೆ ಹಣದ ಸಮಸ್ಯೆ ಕೂಡ ಇತ್ತು. ಆದರೂ ತನ್ನ ಸ್ನೆಹಿತನೊಬ್ಬನ ಸಹಾಯ ಪಡೆದು ಕೊಜ಼ಿಕೊಡೆಯ ಫ಼ಾರೂಕ್ ಕಾಲೆಜ್’ಗೆ ಮಗನನ್ನು ಸೆರಿಸಿದರು, ಮತ್ತು ಅದೆ ಕಾಲೇಜಿನ ಹೊಸ್ಟೆಲ್’ನಲ್ಲಿ ಮುಸ್ತಫ಼ಾಗೆ ಉಚಿತ ಊಟ ದೊರಕುವಂತೆ ಮಾಡಿದರು.ಉಚಿತ ಊಟ ಮಾಡುವ ಮುಸ್ತಫ಼ಾನನ್ನು ಉಳಿದ ವಿದ್ಯಾರ್ಥಿಗಳು ವಿಚಿತ್ರವಾಗಿ ನೋಡುತ್ತಿದ್ದರು.ಕೆಲವರು ಮುಸ್ತಫ಼ಾನನ್ನು ನೊಡಿ ಗೇಲಿ ಮಾಡುತ್ತಿದ್ದರು ಆದರೆ ಮುಸ್ತಫ಼ಾ ಇದನ್ನೆಲ್ಲ ಸಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು.ಹಳ್ಳಿಯಿಂದ ಬಂದಿದ್ದ ಮುಸ್ತಫ಼ಾಗೆ ಇಂಗ್ಲಿಷ್ ಬಲು ಕಠಿಣವಾಗಿ ಬಿಟ್ಟಿತ್ತು. ತನ್ನ ಪಕ್ಕ ಕೂರುವ ಗೆಳೆಯನ ಸಹಾಯ ಪಡೆದು ಕಷ್ಟಪಟ್ಟು ಇಂಗ್ಲಿಷ್ ಕಲಿತ ಮುಸ್ತಫ಼ಾ ಸಂಪೂರ್ಣವಾಗಿ ತನ್ನನ್ನು ತಾನು ಓದಲು ತೊಡಗಿಸಿಕೊಂಡಿದ್ದ. ಕಾಲೆಜ್’ನ ಓದು ಮುಗಿಯುತ್ತಿದ್ದಂತೆ ಇಂಜಿನೀಯರಿಂಗ್ ಪ್ರವೇಶ ಪರೀಕ್ಷೆ ಬರೆದ ಮುಸ್ತಫ಼ಾ ಇಡೀ ಕೇರಳ ರಾಜ್ಯಕ್ಕೆ 63 ನೇ ಸ್ಥಾನ ಪಡೆದು ರೀಜನಲ್ ಕಾಲೆಜ್ ಆಫ಼್ ಇಂಜಿನಿಯರಿಂಗ್’ಗೆ ಪ್ರವೇಶಾತಿಯನ್ನೂ ಪಡೆಯುತ್ತಾನೆ.ಮುಸ್ತಫ಼ಾ ಯಶಸ್ವೀಯಾಗಲು ಮೂರು ಮುಖ್ಯ ಕಾರಣವೆಂದರೆ ಒಂದು ಆತ ಸಫ಼ಲತೆಗಾಗಿ ಕಷ್ಟ ಪಡುತ್ತಿದ್ದ, ಎರಡನೆಯದಾಗಿ ಆತ ಗಣಿತದಲ್ಲಿ ತುಂಬಾ ಚುರುಕಾಗಿದ್ದ ಮತ್ತು ಮೂರನೆಯದಾಗಿ ದೇವರು ತನ್ನನ್ನು ಕಾಪಾಡುತ್ತಾನೆ ಎಂದು ನಂಬಿದ್ದ.REC ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಮುಸ್ತಫ಼ಾ ಯಾವುದೇ ಟ್ಯುಶನ್’ಗೆ ಹೋಗದೆ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ 1995 ರಲ್ಲಿ ಇಂಜಿನೀಯರಿಂಗ್ ಪದವಿಯನ್ನು ಪಡೆಯುತ್ತಾನೆ ಹಾಗೂ Manhattan Associates ಕಂಪನಿಯಲ್ಲಿ ಕೆಲಸವನ್ನೂ ಗಿಟ್ಟಿಸುತ್ತಾನೆ. ಸ್ವಲ್ಪ ದಿನಗಳ ಕಾಲ ಅಲ್ಲಿ ಕೆಲಸ ಮಾಡಿದ ಮುಸ್ತಫ಼ಾಗೆ ಮೊಟೊರೊಲ ಕಂಪನಿಯಿಂದ ಕೆಲಸದ ಕರೆ ಬರುತ್ತದೆ. ವೈನಾಡಿನ ಕುಗ್ರಾಮದಿಂದ ಬಂದ ಹುಡುಗನೊಬ್ಬನಿಗೆ ಮೊಟೊರೊಲದಂತಹ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುತ್ತದೆ ಎನ್ನುವುದೇ ದೊಡ್ಡ ವಿಷಯವಾಗಿತ್ತು. ಮುಸ್ತಫ಼ಾಗೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುವ ಅವಕಾಶ ಬಂದೊದಗಿತ್ತು. ಮುಸ್ತಫ಼ಾ ಐರ್ಲ್ಯಾಂಡ್’ಗೆ ಪ್ರಯಾಣ ಬೆಳೆಸಿದ್ದ. ಆದರೂ ಬೆಂಗಳೂರನ್ನು ಬಿಟ್ಟು ಹೋಗಲು ಮುಸ್ತಫ಼ಾಗೆ ತುಂಬಾ ಕಷ್ಟವಾಗಿತ್ತು. ಐರ್ಲ್ಯಾಂಡಿನಲ್ಲಿ ಮೂರು ತಿಂಗಳು ಕೆಲಸ ಮಾಡಿದ ಮುಸ್ತಫ಼ಾಗೆ ತನ್ನ ದೇಶ ಸೇರಿಕೊಳ್ಳಬೇಕೆಂಬ ಆಸೆ ತುಂಬಾ ಇತ್ತು. ಅದೇ ಸಮಯದಲ್ಲಿ ಸಿಟಿ ಬ್ಯಾಂಕ್ ನಲ್ಲಿ ಉತ್ತಮ ಹುದ್ದೆಯ ಕೆಲಸಕ್ಕೆ ಮುಸ್ತಫ಼ಾಗೆ ಅವಕಾಶ ಬಂದಿತ್ತು. ಅಲ್ಲಿಂದ ದುಬೈಗೆ ಪ್ರಯಾಣ ಬೆಳೆಸಿದ ಮುಸ್ತಫ಼ಾ ತನ್ನ ತಂದೆಗೆ ಸುಮಾರು ಒಂದು ಲಕ್ಷ ರೂಪಾಯಿಯನ್ನು ತನ್ನ ಸ್ನೆಹಿತನ ಮೂಲಕ ಕಳುಹಿಸಿದ. ಅದನ್ನು ನೋಡಿದ ಮುಸ್ತಫ಼ಾನ ತಂದೆಗೆ ಅತೀವ ಸಂತಸವಾಗಿತ್ತು ಮತ್ತು ಅವರು ಮುಸ್ತಫ಼ಾನ ತಂಗಿಯ ಮದುವೆಗೆ ತಯಾರಿಯನ್ನು ನಡೆಸಿದ್ದರು. ಇದಾದ ಸ್ವಲ್ಪವೇ ಸಮಯದ ನಂತರ ಮುಸ್ತಫ಼ಾ ತನ್ನೂರಿನಲ್ಲಿ ಮನೆಯೊಂದನ್ನು ಕಟ್ಟಿಸುತ್ತಾನೆ. ಮುರುಕು ಗುಡಿಸಿಲಲ್ಲಿ ಜೀವನ ಸಾಗಿಸುತ್ತಿದವರು ಮೂರಂತಸ್ತಿನ ಮನೆ ಕಟ್ಟುವಷ್ಟು ಬೆಳೆದಿದ್ದಾರೆ ಅಂದರೆ ಅದರ ಹಿಂದೆ ಮುಸ್ತಫ಼ಾನ ಯಶಸ್ಸಿನ ಕತೆಯಿತ್ತು. 2000 ನೇ ಇಸ್ವಿಯಲ್ಲಿ ಮುಸ್ತಫ಼ಾನ ಮದುವೆ ಕೂಡ ಆಯಿತು. 2003ನೇ ಇಸ್ವಿಯವರೆಗೆ ದುಬೈನಲ್ಲಿ ನೆಲೆಸಿದ ಮುಸ್ತಫ಼ಾಗೆ ತನ್ನೂರಿಗೆ ಮರಳಬೇಕೆಂಬ ಆಸೆ ಮೂಡಿತ್ತು.ಮೂರು ಕಾರಣಕ್ಕಾಗಿ ಮುಸ್ತಫ಼ಾ ಭಾರತಕ್ಕೆ ಮರಳಬೇಕೆಂದು ದುಬೈ ಇಂದ ಹೊರಡುತ್ತಾನೆ.ಅದೇನೆಂದರೆ, ತನ್ನ ತಂದೆ ತಾಯಿಯೊಂದಿಗೆ ಸಮಯ ಕಳೆಯಬೇಕೆಂಬುದು, ತಾನು ಇನ್ನೂ ಓದಬೇಕೆಂಬುದು ಮತ್ತು ಸಮಾಜಕ್ಕೆ ತನ್ನ ಕೈಲಾದಷ್ಟು ಸೇವೆ ಮಾಡಬೇಕೆಂಬುದಾಗಿತ್ತು.ತನ್ನೂರಿನ ಅದೆಷ್ಟೋ ಜನ ಯುವಕರು ಸರಿಯಾದ ಮಾರ್ಗದರ್ಶನ ಸಿಗದೆ ಪಡುತ್ತಿದ್ದ ಕಷ್ಟವನ್ನು ತಾನು ನಿವಾರಿಸಬೇಕೆಂಬುದು ಮುಸ್ತಫ಼ಾನ ಆಸೆಯಾಗಿತ್ತು. ಅದೇ ಕಾರಣಕ್ಕೆ ದುಬೈನಿಂದ ಸ್ವದೇಶಕ್ಕೆ ಮುಸ್ತಫ಼ಾ ಮರಳುತ್ತಾನೆ.ಲಕ್ಷ ಸಂಬಳ ಸಿಗುತ್ತಿದ್ದ ಕೆಲಸಕ್ಕೆ ರಾಜಿನಾಮೆ ನೀಡುವ ನಿರ್ದಾರವನ್ನು ಕೇಳಿ ಮುಸ್ತಫ಼ಾನ ತಂದೆ ಬೇಸರಿಸುತ್ತಾರೆ. ಆದರೆ ಮುಸ್ತಫ಼ಾನ ಸೋದರ ಸಂಬಂಧಿ ನಾಸರ್ ಮಾತ್ರ ಮುಸ್ತಫ಼ಾನ ಜೊತೆ ನಿಲ್ಲುತ್ತಾನೆ. ಅಲ್ಲಿಯವರೆಗೆ ತಾನು ದುಡಿದು ಕೂಡಿಟ್ಟಿದ್ದ ಸುಮಾರು ಹದಿನೈದು ಲಕ್ಷ ಹಣವನ್ನು ಬಂಡವಾಳವನ್ನಾಗಿಸಿಕೊಂಡು ಎನಾದರೂ ಶುರು ಮಾಡಬೇಕೆಂಬುದು ಮುಸ್ತಫ಼ಾನ ಯೋಚನೆಯಾಗಿತ್ತು. ಊರಿಗೆ ಮರಳಿದ ಮುಸ್ತಫ಼ಾ ತನ್ನ ಯೋಜನೆಯಂತೆ ತನ್ನ ತಂದೆ ತಾಯಿಯೊಂದಿಗೆ ಸ್ವಲ್ಪ ಸಮಯ ಕಳೆದು CAT ಪರೀಕ್ಷೆ ಬರೆದು IIM-Bangalore ನಲ್ಲಿ ಪ್ರವೆಶ ಪಡೆದು ತನ್ನ ಓದನ್ನು ಮುಂದುವರಿಸುತ್ತಾನೆ.ಓದುವಾಗಲೂ ಕೂಡ ತನ್ನ ಸಹೋದರರೊಡನೆ  ಹೊಸ ಬ್ಯುಸಿನೆಸ್ ವಿಚಾರವನ್ನು ಮುಸ್ತಫ಼ಾ ಮಾಡುತ್ತಿದ್ದ. ಮುಸ್ತಫ಼ಾನ ಸಹೋದರ ಸಂಬಂಧಿಯೊಬ್ಬನಾದ ಶಂಸುದ್ದೀನ್ ದೋಸೆ ಹಿಟ್ಟನ್ನು ತಯಾರು ಮಾಡಿ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿ ರಬ್ಬರ್ ಬ್ಯಾಂಡ್ ಕಟ್ಟಿ ಮಾರಾಟ ಮಾಡುತ್ತಿದ್ದ.ಇದನ್ನು ಗಮನಿಸಿದ ಮುಸ್ತಫ಼ಾ ಹೊಸ ಕಂಪನಿಯನ್ನು ಶುರು ಮಾಡಲು ನಿರ್ಧಾರ ಮಾಡುತ್ತಾನೆ. ಇದು ಐಡಿ ಎಂಬ ಕಂಪನಿ ಹುಟ್ಟಿದ ಸಮಯ.

ಐದು ಜನ ಸಹೊದರರು ಸೇರಿ ಪಾಲುದಾರಿಕೆಯಲ್ಲಿ ಹೊಸ ಕಂಪನಿಯನ್ನು ಶುರು ಮಾಡುತ್ತಾರೆ. ನಾಸರ್,ಶಂಸುದ್ದೀನ್, ಜಾಫ಼ರ್,ನೌಶಾದ್ ಮತ್ತು ಮುಸ್ತಫ಼ಾ ಸೇರಿ ದೋಸೆ, ಇಡ್ಲಿ ಹಿಟ್ಟನ್ನು ಮಾರುವ ಐಡಿ ಎಂಬ ಕಂಪನಿಯನ್ನು ಶುರು ಮಾಡುತ್ತಾರೆ.ಕೇವಲ ಹತ್ತು ಪೊಟ್ಟಣ ಹಿಟ್ಟನ್ನು ಪ್ರಾರಂಭದಲ್ಲಿ ತಯಾರು ಮಾಡುವುದನ್ನು ಗುರಿಯಾಗಿಸಿಕೊಂಡು ಯಾರನ್ನೂ ಕೆಲಸಕ್ಕೆ ತೆಗೆದುಕೊಳ್ಳದೇ ಐದೇ ಜನ ಗುರಿ ಮುಟ್ಟಲು ಶ್ರಮಿಸಿದರು.ಪ್ರಾರಂಭದಲ್ಲಿ ಯಾವ ಅಂಗಡಿಯವರೂ ಹೊಸ ಬ್ರಾಂಡ್’ನ ಮಾರಾಟಕ್ಕೆ ಒಪ್ಪಲೇ ಇಲ್ಲ ಆಗ ಅಂಗಡಿಯವರೊಂದಿಗೆ ಒಪ್ಪಂದ ಮಾಡಿಕೊಂಡ ಮುಸ್ತಫ಼ಾ ಮತ್ತು ಆತನ ತಂಡ ಹಿಟ್ಟು ಮಾರಾಟವಾದ ಮೇಲಷ್ಟೆ ಹಣ ನೀಡಿ ಎಂದು ಮಾರಾಟಗಾರರನ್ನು ಒಪ್ಪಿಸಿದರು. ಯಾವಾಗ ಗ್ರಾಹಕರು ಐಡಿ ಫ಼್ರೆಶ್ ಹಿಟ್ಟನ್ನು ಮೆಚ್ಚಿಕೊಂಡರೋ ವರ್ತಕರು ಐಡಿ ಬ್ರಾಂಡ್ ಹಿಟ್ಟಿಗೆ ಬೇಡಿಕೆಯನ್ನಿಟ್ಟರು.ಪ್ರಾರಂಭದಲ್ಲಿ ಕೇವಲ ಇಪ್ಪತ್ತು ಅಂಗಡಿಗೆ ತನ್ನ ಸೇವೆ ಒದಗಿಸುತ್ತಿದ್ದ ಮುಸ್ತಫ಼ಾ&ಟೀಮ್ ಸುಮಾರು ಒಂಬತ್ತು ತಿಂಗಳ ನಂತರ ದಿನಕ್ಕೆ ನೂರು ಪ್ಯಾಕೆಟ್  ಹಿಟ್ಟನ್ನು ಮಾರಾಟ ಮಾಡಲು ಶುರು ಮಾಡಿದರು.

ಕಂಪನಿ ಶುರು ಮಾಡಿದ ಪ್ರಾರಂಭದಲ್ಲಿ ಐದೂ ಜನ ಸಂಬಳವನ್ನೇ ಪಡೆಯದೆ ಕೆಲಸ ಮಾಡಿದರು. ಮೊದಲ ತಿಂಗಳ ಅಂತ್ಯಕ್ಕೆ ಐಡಿ ಕಂಪನಿ ಗಳಿಸಿದ್ದು ನಾಲ್ಕು ನೂರು ರೂಪಾಯಿ ಲಾಭವಾಗಿತ್ತು.ಒಂಬತ್ತು ತಿಂಗಳ ನಂತರ ಯಾವಾಗ ಕಂಪನಿ ನೂರು ಪ್ಯಾಕೆಟ್ ಹಿಟ್ಟನ್ನು ದಿನಕ್ಕೆ ಮಾರಲು ಯಶಸ್ವೀಯಾಯಿತೊ ಮುಸ್ತಫ಼ಾ ಮತ್ತೆ ಆರು ಲಕ್ಷ ರೂಪಾಯಿಯನ್ನು ಕಂಪನಿಯಲ್ಲಿ ಇನ್ವೆಸ್ಟ್ ಮಾಡಿದ. ಹೊಸ ತಂತ್ರಜ್ಞಾನದೊಂದಿಗೆ ಹೊಸ ಜಾಗದಲ್ಲಿ ಐಡಿ ಹೊಸದಾಗಿ ತಲೆ ಎತ್ತಿ ನಿಂತಿತ್ತು. ನಾಸರ್ ಒಬ್ಬನೆ ಅಡಿಗೆ ಮನೆಯ ಜವಾಬ್ದಾರಿ ಹೊತ್ತಿದ್ದರಿಂದ ಐದು ಜನ ಕೆಲಸದವರನ್ನು ಕಂಪನಿ ಕೆಲಸಕ್ಕೆ ಸೇರಿಸಿಕೊಂಡಿತು.

2008ರಲ್ಲಿ MBA ಡಿಗ್ರೀ ಮುಗಿಸಿದ ಮುಸ್ತಫ಼ಾ ಕಂಪನಿಯ CEO  ಆಗಿ ಅಧಿಕಾರ ವಹಿಸಿಕೊಂಡನು. ಐಡಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿತು. ವರ್ಷಕ್ಕೆ ಸರಾಸರಿ ಹತ್ತರಿಂದ ಹನ್ನೆರಡು ಪ್ರತಿಶತ ನಿವ್ವಳ ಲಾಭ ಗಳಿಸಿ ಬ್ರಹದಾಕಾರವಾಗಿ ಬೆಳೆದು ನಿಂತು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು.2008ರಲ್ಲಿ ಹೊಸ್ಕೊಟೆಯ ಬಳಿ ಹೊಸ ಇಂಡಸ್ಟ್ರಿಯನ್ನು ಶುರು ಮಾಡಿ ಐದು ಹೊಸ ಗ್ರೈಂಡರ್ಸ್ ಅನ್ನು ಅಮೇರಿಕಾದಿಂದ ಆಮದು ಮಾಡಿಕೊಂಡು ತನ್ನ ವ್ಯಾಪ್ತಿಯನ್ನು ಪುನಃ ಹೆಚ್ಚಿಸಿಕೊಂಡ ಐಡಿ ಕೇವಲ ದೋಸೆ ಇಡ್ಲಿ ಹಿಟ್ಟನ್ನು ಮಾತ್ರವಲ್ಲದೆ ಪರಾಠ ಮತ್ತು ಚಪಾತಿಯನ್ನು ಕೂಡ ಮಾರಾಟ ಮಾಡಲು ಶುರು ಮಾಡಿತು.2012ರಲ್ಲಿ ಭಾರತದ ಅನೇಕ ನಗರಗಳಾದ ಚೆನ್ನೈ,ಮಂಗಳೂರು,ಮುಂಬೈ,ಪುಣೆ, ಹೈದರಾಬಾದ್ ಮತ್ತು ಮೈಸೂರಿಗೆ ತನ್ನ ಸೇವೆಯನ್ನು ಪ್ರಾರಂಭಿಸಿದ ಐಡಿ 2013ರಲ್ಲಿ ದುಬೈನಲ್ಲೂ ಐಡಿ ಫ಼್ರೆಶ್ ಹಿಟ್ಟುಗಳು ದೊರಕುವಂತೆ ಮಾಡಿ ತನ್ನ ವ್ಯಾಪಾರವನ್ನು ವಿದೇಶಕ್ಕೂ ವಿಸ್ತರಿಸಿಕೊಂಡು ಬಹಳ ವೇಗವಾಗಿ ಬೆಳೆದ ಕಂಪನಿಯಾಯಿತು.ಇವತ್ತು ಐಡೀ ದಿನಕ್ಕೆ 50,000kg ಹಿಟ್ಟನ್ನು ಉತ್ಪಾದಿಸುವ ಕಂಪನಿಯಾಗಿ ಬೆಳೆದು ನಿಂತಿದೆ. ಕಂಪನಿಯ ವಾರ್ಷಿಕ ಆದಾಯ ಸುಮಾರು ನೂರು ಕೋಟಿಯನ್ನು ದಾಟಿ ಯಶಸ್ವೀ ಉದ್ಯಮವಾಗಿ ಬೆಳೆದು ನಿಂತಿದೆ.ದಿನಕ್ಕೆ ಹತ್ತು ಪ್ಯಾಕೆಟ್ ಮಾರಾಟ ಮಾಡಲು ಹೆಣಗಾಡುತ್ತಿದ್ದ ಕಂಪನಿ ಇಂದು ದಿನಕ್ಕೆ ಐವತ್ತು ಸಾವಿರ ಪ್ಯಾಕೆಟ್ ಹಿಟ್ಟನ್ನು ಮಾರಾಟ ಮಾಡುವಷ್ಟು ಬೆಳೆದು ನಿಂತಿದೆ ಅದು ಬೆಳೆದ ವೇಗವನ್ನು ನೀವು ಗಮನಿಸಿ.ಮುಸ್ತಫ಼ಾ ಈಗ ಸುಮಾರು ಒಂದುವರೆ ಸಾವಿರ ಯುವಕರಿಗೆ ಕೆಲಸ ನೀಡಿದ್ದಾನೆ. ಅದು ಕೇವಲ ಹತ್ತು ವರ್ಷದಲ್ಲಿ.

ಮುಸ್ತಫ಼ಾನ ಗುರಿ ಕಂಪನಿಯನ್ನು ಮುಂದಿನ ಐದು ವರ್ಷದಲ್ಲಿ ಒಂದು ಸಾವಿರ ಕೋಟಿ ವಹಿವಾಟು ಮಾಡುವ ಕಂಪನಿಯನ್ನಾಗಿಸಬೇಕೆಂಬುದಾಗಿದೆ.ಮುಸ್ತಫ಼ಾ ಹೊಸ ಯೊಚನೆಯನ್ನು ತುಂಬಿಕೊಂಡಿರುವ ಯುವಕರಿಗೆ ಹೇಳುವುದು ನಾಳೆಗಾಗಿ ಕಾಯಬೇಡಿ, ನಿಮ್ಮ ಯೋಚನೆಗೆ ಜೀವ ಕೊಡುವ ಕೆಲಸವನ್ನು ಇಂದಿನಿಂದಲೇ ಶುರು ಮಾಡಿ ಎಂಬುದಾಗಿದೆ.ಸರಿಯಾದ ಯೋಚನೆಯನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಅಳವಡಿಸಿದರೆ ಬದುಕು ಬದಲಾಗುವುದರಲ್ಲಿ ಸಂಶವೇ ಇಲ್ಲ ಎಂಬುದಕ್ಕೆ ಮುಸ್ತಫ಼ಾನ ಕಥೆ ಮಾದರಿ ಎಂದುಕೊಂಡಿದ್ದೇನೆ.

ನೂರು ಕೋಟಿ ಕಂಪನಿ ಕಟ್ಟುವುದು ಸುಲಭದ ಕೆಲಸವಂತೂ ಅಲ್ಲ ಆದರೆ ಅದನ್ನು ನಿಜವಾಗಿಸಿದ ಈ ಐವರು ನಿಜವಾಗಿಯೂ ಗೌರವಕ್ಕೆ ಅರ್ಹರು. ನಮ್ಮಾಸೆಗಳು ಬದುಕಿನ ಕೆಲವು ತಿರುವುಗಳ ನಡುವೆ ಸಿಲಿಕಿ ನಲುಗಿ ಹೋಗಿದೆ ಆದರೆ ನಾವು ಮಾಡಬೇಕೆಂದುಕೊಂಡಿರುವ ಅದೆಷ್ಟೋ ಯೋಚನೆಗಳು ತಲೆಯೊಳಗೆ ಹಾಗೆಯೇ ಕುಳಿತು ಬಿಡುತ್ತದೆ,ಅದಕ್ಕೆ ಜೀವಕೊಡುವ ಕೆಲಸ ಈ ಕ್ಷಣದಿಂದಲೇ ಶುರುವಾಗಲಿ..

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!