ನಮ್ಮ ದೇಶದಲ್ಲಿ ನಡೆಯುವ ಚುನಾವಣಾ ಪ್ರಚಾರಗಳೆಂದರೆ ಕುರಿಯನ್ನು ಕೊಬ್ಬಿಸುವ ಪ್ರಕ್ರಿಯೆಯಿದ್ದಂತೆಯೇ ಸರಿ. ಸುಳ್ಳು ಪೊಳ್ಳು ಆಶ್ವಾಸನೆಗಳೇ ಭಾಷಣಕಾರರ ಉಚ್ವಾಸ, ನಿಶ್ವಾಸ!! ಕಲರ್ ಕಲರ್ ಆಸೆ ತೋರಿಸಿ ಬ್ಲ್ಯಾಕ್&ವೈಟ್ ರೀಲು ಓಡಿಸುತ್ತಾರೆ. ಗಿಲೀಟು ಮಾಡಿ ಓಟು ಗಿಟ್ಟಿಸಿಕೊಂಡು ತಮ್ಮ ಸೀಟು ಭದ್ರಪಡಿಸಿಕೊಂಡ ಮೇಲೆ ಇವರ ಕಿವಿಗೆ ಯಾವುದೂ ನಾಟುವುದೇ ಇಲ್ಲ ಬಿಡಿ. ಕೊಬ್ಬಿದ ಮೇಲೆ ಕುರಿಯನ್ನೇ ಕಡಿಯುವಂತೆ, ಚುನಾವಣೆ ಮುಗಿದ ನಂತರ ತಮ್ಮ ದುರ್ವರ್ತನೆಗಳ ಮೂಲಕ ಜನರ ನಂಬಿಕೆ, ಭರವಸೆಗಳನ್ನು ಅಡ್ಡಡ್ಡ ಸಿಗಿದು ಮಲಗಿಸಿ ಬಿಡುತ್ತಾರೆ ನಮ್ಮ ನಾಯಕರೆನಿಸಿಕೊಂಡವರು! ಕಲಾಪಗಳಲ್ಲಿ ನಮ್ಮ ಜನಪ್ರತಿನಿಧಿಗಳ ವರ್ತನೆ ನೋಡಿದರೆ ನಾವು ಓಟ್ ಮಾಡಿದ್ದರಿಂದ ನಮ್ಮ ಬೆರಳಷ್ಟೇ ಮಸಿಯಾಗಿದ್ದಲ್ಲ ನಮ್ಮ ನಮ್ಮ ಮುಖಕ್ಕೂ ಸಾನೆ ಮಸಿ ಬಳಿದುಕೊಂಡಿದ್ದೇವೆನ್ನುವುದು ಬೇಗ ಅರ್ಥವಾಗಿಬಿಡುತ್ತದೆ.
ಸಾಮಾನ್ಯವಾಗಿ ಬಾವಿಕಟ್ಟೆಗಳಲ್ಲಿ ಸೇರುವ ಕೆಲವು ಹೆಂಗಳೆಯರು ಬಿಂದಿಗೆ ನೀರಿಗಾಗಿ ಜುಟ್ಟು ಜುಟ್ಟು ಹಿಡಿದು ಜಟ್ಟಿಯಂತೆ ಬಡಿದಾಡಿಕೊಳ್ಳುವುದಿದೆ. ನಮ್ಮ ಶಾಸನಾ ಸಭೆಯ ಸದಸ್ಯರದ್ದೂ ಅದೇ ಚಾಳಿ. ಅವರು ಸಾರ್ವಜನಿಕ ಬಾವಿಯ ಮುಂದೆ ಜಗಳವಾಡಿದರೆ ಇವರು ಸದನದ ಬಾವಿಯ ಆವರಣದಲ್ಲಿ ಲಡಾಯಿಗಿಳಿಯುತ್ತಾರೆ. ಕೈಕೈ ಮಿಲಾಯಿಸಿಯೇ ಬಿಡುತ್ತಾರೆ. ಹಾಗಾಗಿ ಇದೂ ಒಂಥರಾ ಬಾವಿಕಟ್ಟೆ, ನಲ್ಲಿಕಟ್ಟೆಯ ಜಗಳಕ್ಕೆ ಸಮಾನ. ಆದರೆ ತೀವ್ರತೆ ಹಾಗೂ ಹಾನಿ ಮಾತ್ರ ವಿಪರೀತ. ಸದ್ಯ ಅವರು ಬಾವಿಗಿಳಿಯುವುದಿಲ್ಲ, ಇವರು ಮಾತ್ರ ಜಗಳದ ಮುಂದುವರಿದ ಭಾಗವಾಗಿ ಬಾವಿಗೇ ಇಳಿದುಬಿಡುತ್ತಾರೆ!
ಸಂಸತ್ ನಮ್ಮ ದೇಶದ ಹೃದಯವಿದ್ದಂತೆ. ಆ ಹೃದಯ ಮಂದಿರದೊಳಗೆ ಕುಳಿತ ಕೆಲವು ಕಲ್ಲುಹೃದಯಿ ಸದಸ್ಯರು ಕಲಾಪದ ಸಂದರ್ಭದಲ್ಲಿ ಕಾಳುಮೆಣಸಿನ ಘಾಟಿನ ದ್ರವವನ್ನು ಸಿಂಪಡಿಸಿ ಹಲವರ ಹೃದಯ ಬಡಿತ ಏರಿಳಿತಗೊಳ್ಳುವಂತೆ ಮಾಡಿದ್ದ ಘಟನೆ ಹಿಂದೊಮ್ಮೆ ಮಹತ್ವದ ಚರ್ಚೆಯ ಸಂದರ್ಭದಲ್ಲಿ ನಡೆದಿತ್ತು. ದೇಶದ ಹೆಮ್ಮೆಯ ಕೇಂದ್ರ ದಮ್ಮು, ಕೆಮ್ಮುಗಳಿಂದ ತುಂಬಿ ಹೋಗಿದ್ದು ಇತಿಹಾಸ. ಆ ಘಾಟು, ಮೆಣಸು ಹುರಿಯುವಾಗ ಸುತ್ತೆಲ್ಲಾ ಹಬ್ಬುವ ಘಾಟಿನಂತೆ ಇಡೀ ದೇಶವಾಸಿಗಳಿಗೆಲ್ಲಾ ತಾಕಿ, ವಿಷಾದ ಮೂಡಿಸಿತ್ತು. ಅದು ಅಂದಿಗೆ ಆರಿ ಹೋಗಿದ್ದರೂ ಕಲಾಪ ಸಂದರ್ಭದ ಜಗಳ, ವೃಥಾ ದೋಷಾರೋಪ, ಬಹಿಷ್ಕಾರ, ಮುಂದೂಡಿಕೆ, ಅನಾವಶ್ಯಕ ವಾಗ್ವಾದದ ಅನರ್ಥಗಳ ದುರ್ನಾತ ಅರ್ಥಪೂರ್ಣ ಚರ್ಚೆಯನ್ನು ಉಸಿರುಗಟ್ಟಿಸುತ್ತಿದೆ, ದೇಶದ ಜನರನ್ನು ಕಂಗಾಲಾಗಿಸಿದೆ. ಹಿಂದೆಲ್ಲಾ ಕಲಾಪಗಳಲ್ಲಿ ನಡೆಯುತ್ತಿದ್ದ ಕಳೆಗಟ್ಟಿದ ಚರ್ಚೆಯ ಮಾತಿನ ಧಾಟಿಗೆ ಪಕ್ಷಬೇಧವಿಲ್ಲದೆ ಎಲ್ಲಾ ಸದಸ್ಯರು ಮೇಜು ಕುಟ್ಟಿ ಅಭಿನಂದಿಸುತ್ತಿದ್ದರು. ಆದರೆ ಈಗ ನಮ್ಮ ಪ್ರತಿನಿಧಿಗಳು ತಮ್ಮ ವೈಖರಿಯಿಂದ ಜನರ ವಿಶ್ವಾಸವನ್ನು ಪುಡಿಗಟ್ಟಿ ಎಸೆಯುತ್ತಿದ್ದಾರೆ. ಈ ದೊಂಬರಾಟಗಳನ್ನು ನೋಡುವ ಜನಸಾಮಾನ್ಯ ತಲೆ ಚಿಟ್ಟು ಹಿಡಿದು, ಅದನ್ನೆಲ್ಲಾ ತೋರಿಸುವ ಟಿ.ವಿಯನ್ನೇ ಕುಟ್ಟಿ ಪುಡಿ ಮಾಡಬೇಕಷ್ಟೇ!
‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆಂತಯ್ಯಾ?’ ಎನ್ನುವುದು ಬಲ್ಲಿದರ ಮಾತು. ಅಂತೆಯೇ ನೋಟಿನಾಸೆಗೆ ಬಿದ್ದು ಅಯೋಗ್ಯರು, ವಿಚಾರಶೂನ್ಯರು, ಕಾಳಜಿಹೀನರನ್ನೆಲ್ಲಾ ಆರಿಸಿ ಶಕ್ತಿಕೇಂದ್ರದ ಪೀಠಗಳ ಮೇಲೆ ಪ್ರತಿಷ್ಠಾಪಿಸಿದ ಮೇಲೆ ಕಲಾಪಗಳಲ್ಲಿನ ಅವರ ದಾಂಗುಡಿಗೆ ದಂಗಾದೊಡೆಂತಯ್ಯಾ ಎಂದು ಪರಿತಪಿಸುವ ಸರದಿ ಪ್ರಜೆಗಳದ್ದು. ಚರ್ಚೆಗಳ ಮೂಲಕ ಮಸೂದೆಗಳನ್ನು ಅನುಮೋದಿಸಬೇಕಾದವರು ಚರ್ಚೆಗೇ ಆಸ್ಪದ ಕೊಡದೆ ಮಸಿ ಬಳಿಯುತ್ತಿರುವುದನ್ನು ನೋಡಿ ಪ್ರಜಾಪ್ರಭುಗಳು ಛೇ! ಛೇ! ಛೇ! ಎಂದು ಮೂರ್ಛೆ ಹೋಗುವುದೊಂದೇ ಬಾಕಿ!!
ಓವರ್ ಡೋಸ್: ಬೇಕಾಬಿಟ್ಟಿಯಾಗಿ ಸದನದ ಬಾವಿಗಿಳಿದು ಬಾಯಿ ಬಡಿದುಕೊಳ್ಳುವ ಚುನಾಯಿತ ಪ್ರತಿನಿಧಿಗಳನ್ನು ನೋಡುವಾಗ ಜನರಿಗನಿಸುವುದು, “ಅಯ್ಯೋ, ಬಾವಿ ಒಮ್ಮೆಗೆ ಒಂದು ಇಪ್ಪತ್ತು ಇಪ್ಪತ್ತೈದು ಅಡಿ ಆಳಕ್ಕೆ ಕುಸಿದು ಬಿಡಬಾರದೇ?!!