Featured ಅಂಕಣ

ಅಮ್ಮ ಇಲ್ಲದ ತಮಿಳುನಾಡಿನ ರಾಜಕೀಯದ ಕಥೆ-ವ್ಯಥೆ!

ಜಯಲಲಿತಾ ನಿಧನದಿಂದಾಗಿ ದೇಶದ ಪ್ರಾದೇಶಿಕ ಪಕ್ಷಗಳ ರಾಜಕೀಯದ ಇತಿಹಾಸದಲ್ಲಿ ಒಂದು ವರ್ಣರಂಜಿತ ಅಧ್ಯಾಯ ಕೊನೆಗೊಂಡಿದೆ. ಪನೀರ್ ಸೆಲ್ವಂ ತಮಿಳುನಾಡಿನ ನೂತನ ಹಾಗೂ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಯೂ ಆಗಿದೆ. ಎಂಜಿಆರ್ ಗರಡಿಯಲ್ಲಿ ಪಳಗಿ ಅವರ ನಿಧನದ ನಂತರ ಎಐಡಿಎಂಕೆ ಪಕ್ಷವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಸರ್ವಾಧಿಕಾರಿಯಾಗಿ ಮೆರೆದ ಜಯಲಲಿತಾ ಪ್ರಾಯಶಃ ತನ್ನ ಬಳಿಕ ಪಕ್ಷದ ಉತ್ತರಾಧಿಕಾರಿ ಯಾರು ಅನ್ನುವುದನ್ನು ಯೋಚಿಸಲೇ ಇಲ್ಲವೋ ಅಥವಾ ಯೋಚಿಸಿದರೂ ಬಹಿರಂಗಪಡಿಸಲಿಲ್ಲವೋ ಗೊತ್ತಿಲ್ಲ. ಜಯಲಲಿತಾ ಮರಣದ ತರುವಾಯ ತಮಿಳುನಾಡಿನ ರಾಜಕೀಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಅಮ್ಮ ಜಯಲಲಿತಾ ಇಲ್ಲದ ಏಐಡಿಎಂಕೆ ಪಕ್ಷದ  ಗತಿ ಏನು? ಅಮ್ಮ ಅವರಿಗೆ ಸಮರ್ಥ ಉತ್ತರಾಧಿಕಾರಿ ಯಾರು? ಪ್ರಾದೇಶಿಕ ಪಕ್ಷಗಳಾದ ಎಐಡಿಎಂಕೆ ಮತ್ತು ಡಿಎಂಕೆ ಹಿಡಿತದಿಂದ ತಮಿಳುನಾಡು ಹೊರ ಬರುತ್ತದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಸಧ್ಯ ರಾಜಕೀಯ ಚಾವಡಿಯಲ್ಲಿ ಗಿರಕಿ ಹೊಡೆಯುತ್ತಿವೆ.

ಜಯಲಲಿತಾ ಏಐಡಿಎಂಕೆ ಪಕ್ಷದ ಅನಭಿಷಕ್ತ ರಾಣಿಯಾಗಿ ಮೆರೆದಿದ್ದರೂ ಹಲವಾರು ಪ್ರಮುಖ ನಿರ್ಧಾರಗಳಲ್ಲಿ ತನ್ನ ಆಪ್ತಸ್ನೇಹಿತೆ ಶಶಿಕಲಾ ಮಾತನ್ನು ಕೇಳುತ್ತಿದ್ದರು ಎನ್ನುವುದೂ ಸತ್ಯ. ಹಾಗಾಗಿ ಜಯಾ ನಿಧನರಾದ ಬಳಿಕ ಒಮ್ಮಿಂದೊಮ್ಮೆಲೇ ಶಶಿಕಲಾ ಹೆಸರು ಮುಂಚೂಣಿಗೆ ಬಂದಿದ್ದು. ಜಯಲಲಿತಾ ಜೈಲು ಪಾಲಾದಾಗ ತಮ್ಮ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿಯಾಗಿ ಪನೀರ್ ಸೆಲ್ವಂ ಅವರನ್ನು ಆಯ್ಕೆ ಮಾಡಿ ಪರೋಕ್ಷವಾಗಿ ತನ್ನ ರಾಜಕೀಯ ಉತ್ತರಾಧಿಕಾರಿ ಸೆಲ್ವಂ ಎನ್ನುವುದನ್ನು ಬಿಂಬಿಸಿದ್ದರು. ಈ ಒಂದು ಅಂಶವೇ ಸಧ್ಯ ಶಶಿಕಲಾ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ದೂರವಿಡಲು ಕಾರಣ ಅನ್ನಲಾಗುತ್ತಿದೆ. ಸೆಲ್ವಂ ತಾನು ಹೇಳಿದಂತೆ ಕೇಳುವವರಾಗಿದ್ದರಿಂದ ಅವರನ್ನು ಜಯಲಲಿತಾ ಆಯ್ಕೆ ಮಾಡಿದ್ದಿರಬಹುದು. ಅವರ ಬದಲಿಗೆ ಶಶಿಕಲಾ ಅವರನ್ನು ಮುಖ್ಯಮಂತ್ರಿ ಮಾಡಿದ್ದರೆ ತನ್ನ ಪಾಲಿಗೆ ಮಗ್ಗುಲ ಮುಳ್ಳಾಗಬಹುದು ಅಂತ ಆಲೋಚಿಸಿದರೇನೊ ಗೊತ್ತಿಲ್ಲ.

ಜಯಲಲಿತಾ ಮನೆ ಪೋಯಸ್ ಗಾರ್ಡನ್ ಏಐಡಿಎಂಕೆ ಪಕ್ಷದ  ಶಕ್ತಿಕೇಂದ್ರ. ಸಧ್ಯ ಅಲ್ಲಿ ಶಶಿಕಲಾ ವಾಸವಿದ್ದು, ಸರಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು ಸಮಾಲೋಚನೆ ಮಾಡುತ್ತಿದ್ದಾರೆ. ಪಕ್ಷದಲ್ಲಿ ತನ್ನದೇ ಆದ ಹಿಡಿತವನ್ನು ಶಶಿಕಲಾ ಹೊಂದಿದ್ದು, ಪಕ್ಷದ  ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನೇಮಕವಾಗಬೇಕು ಅನ್ನೋ ಕೂಗು ಕೇಳಿ ಬರುತ್ತಿದೆ. ಶಶಿಕಲಾ ಅವರ ಫ್ಲೆಕ್ಸ್ ಮತ್ತು ಬ್ಯಾನರ್ ತಮಿಳುನಾಡಿನಾದ್ಯಂತ ರಾರಾಜಿಸುತ್ತಿದೆ.  ಶಶಿಕಲಾ ಅಭಿಮಾನಿಗಳ ಪ್ರೀತಿಯ ಚಿಕ್ಕಮ್ಮ ಆಗಿದ್ದಾರೆ. ಜಯಲಲಿತಾ ಸ್ಪರ್ಧಿಸಿದ್ದ ಆರ್.ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಶಿಕಲಾ ಸ್ಪರ್ಧೆ ಮಾಡಬೇಕು ಅನ್ನೋ ಒತ್ತಾಸೆಯೂ ಪಕ್ಷದ ಕೆಲವು ಕಾರ್ಯಕರ್ತರದ್ದು. ಪಕ್ಷದಲ್ಲಿ ಶಶಿಕಲಾ ಹಿಡಿತ ಪನೀರ್ ಸೆಲ್ವಂಗಿಂತ ಒಂದು ಕೈ ಮೇಲೆ ಇದೆ. ತಾನೇ ಟಿಕೆಟ್ ಕೊಟ್ಟು ಗೆಲ್ಲಿಸಿದ್ದ ಶಾಸಕರು ತನಗೆ ಬೆಂಬಲ ನೀಡಿಯಾರು ಅನ್ನೋ ನಂಬಿಕೆ ಕೂಡಾ ಅವರಿಗಿದೆ. ಎಂಜಿಆರ್ ನಿಧನದ ಸಮಯದಲ್ಲಿ ಜಯಲಲಿತಾ ರಾಜಕೀಯದಲ್ಲಿ ತಕ್ಕ ಮಟ್ಟಿಗೆ ಪಳಗಿದ್ದರು. ಆದರೆ ಶಶಿಕಲಾ ಇನ್ನೂ ರಾಜಕೀಯದ ಎಬಿಸಿಡಿ ಕಲಿಯಬೇಕಾಗಿದೆ. ಅದಲ್ಲದೇ ಕೆಲವೊಂದು ಭ್ರಷ್ಟಾಚಾರದ ಪ್ರಕರಣಗಳು ಅವರ ಮೇಲಿರುವುದು ಸಧ್ಯದ ರಾಜಕೀಯ ಬೆಳವಣಿಗೆಗೆ ಹಿನ್ನಡೆಯಾಗಿದೆ.

ಪನೀರ್ ಸೆಲ್ವಂ ಹಿರಿಯ ಮತ್ತು ಅನುಭವಿ ರಾಜಕಾರಣಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಜಯಲಲಿತಾ ತರ ಮಾಸ್ ಲೀಡರ್ ಅಲ್ಲ. ಜಯಾ ಅಲೆಯಲ್ಲೇ ಬೆಳೆದ ನಾಯಕ. ಹಾಗಾಗಿ ವೈಯಕ್ತಿಕ ವರ್ಚಸ್ಸು ಇನ್ನ್ನೂ ಬೆಳೆಸಿಕೊಳ್ಳಬೇಕಿದೆ. ಹೀಗಾಗಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಶಶಿಕಲಾ ಸರಕಾರದ ಮೇಲೆ ಪರಿಣಾಮ ಬೀರುವುದಂತೂ ಪಕ್ಕ. ಒಂದು ವೇಳೆ ಕೋರ್ಟ್’ನಲ್ಲಿ ತನಗೆ ವ್ಯತಿರಿಕ್ತವಾಗಿ ತೀರ್ಮಾನ ಬಂದರೆ ತಂಬಿದೊರೈ ಅವರನ್ನಿಟ್ಟುಕೊಂಡು ಪನೀರ್ ಸೆಲ್ವಂ ಅವರನ್ನು ಆಡಿಸುವ ಸಾಧ್ಯತೆ ಇದೆ ಅನ್ನಲಾಗುತ್ತಿದೆ. ಅಮ್ಮಾ ಸರಕಾರ ನೀಡಿದ್ದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಿನಿತು ತೊಡಕಾದರೂ ಜನರು ಏಐಡಿಎಂಕೆಯಿಂದ ನಿಧಾನವಾಗಿ ದೂರ ಹೋಗಬಹುದು. ಹೀಗಾಗಿ ಬಹುದೊಡ್ಡ ಜವಾಬ್ದಾರಿ ಸೆಲ್ವಂ ಮೇಲಿದೆ.

ಅಮ್ಮಾ ಅಲೆಯಲ್ಲಿ ಸತತ ಎರಡು ಬಾರಿ ಸೋತಿದ್ದ ಡಿಎಂಕೆ ಪಕ್ಷ ಕನಿಷ್ಟ ಮುಂದಿನ ವಿಧಾನಸಭೆ ಚುನಾವಣೆಯಲ್ಲಾದರೂ ಅಧಿಕಾರದ ಗದ್ದುಗೆ ಸಿಗಬಹುದು ಅಂತ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಕರುಣಾನಿಧಿಯವರ ಆರೋಗ್ಯ ಕೈಕೊಟ್ಟಿರುವುದು ಮತ್ತು ಸಹೋದರರಾದ ಸ್ಟಾಲಿನ್ ಮತ್ತು ಅಳಗಿರಿ ಹಾವು ಮುಂಗುಸಿಗಳಂತೆ ಕಚ್ಚಾಡುತ್ತಿರುವುದು ಪಕ್ಷದ ವರ್ಚಸ್ಸನ್ನು ಇನ್ನೂ ಕುಗ್ಗಿಸುತ್ತಿದೆ. ಆದರೂ ಶಶಿಕಲಾ ಮತ್ತು ಸೆಲ್ವಂ ಗುಂಪಿನ ಮಧ್ಯೆ ಕಿತ್ತಾಟ ಶುರುವಾಗಿ ಪಕ್ಷ ಹೋಳಾದರೆ ತಮ್ಮ ಭವಿಷ್ಯಕಾಗಿ ಏಐಡಿಎಂಕೆ ನಾಯಕರು ಸಧ್ಯದ ಮಟ್ಟಿಗೆ ತಮಿಳುನಾಡಿನ ಪ್ರಬಲ ಪಕ್ಷ ಡಿಎಂಕೆ ಪರ ವಾಲಿದರೂ ಆಶ್ಚರ್ಯವಿಲ್ಲ. ಏಐಡಿಎಂಕೆ ಪಕ್ಷವನ್ನು ಒಡೆದು ಸ್ಟಾಲಿನ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾದರೂ ಅಚ್ಚರಿಯೇನಿಲ್ಲ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕೂಡಾ ತಮಿಳುನಾಡಿನಲ್ಲಿ ತಮ್ಮ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಲು ಉತ್ಸುಕವಾಗಿವೆ. ಹಾಗೆ ನೋಡಿದರೆ ಕಾಂಗ್ರೆಸ್’ಗಿಂತ ಬಿಜೆಪಿಯ ಬಲವರ್ಧನೆಗೆ ಅವಕಾಶಗಳು ಅಧಿಕವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಖಾತೆ ತೆರೆಯಲು ವಿಫಲವಾದರೂ ಭಾರತೀಯ ಜನತಾ ಪಕ್ಷ ತಮಿಳುನಾಡಿನಲ್ಲೂ ಸಣ್ಣ ಮಟ್ಟಿಗೆ ತನ್ನ ಇರುವಿಕೆಯನ್ನು ಸಾಬೀತು ಪಡಿಸಿದೆ. ರಜನೀಕಾಂತ್ ರಾಜಕೀಯಕ್ಕೆ ಸೇರುವ ಸುದ್ದಿ ಬಹಳ ಹಿಂದೆಯೇ ಕೇಳಿ ಬಂದಿತ್ತಾದರೂ ತಲೈವಾ ರಾಜಕೀಯಕ್ಕೆ ಬರಲಿಲ್ಲ. ಅಪಾರ ಜನಬೆಂಬಲ ಹೊಂದಿದ್ದರೂ ಜಯಲಲಿತಾ ಮತ್ತು ಕರುಣಾನಿಧಿ ಪ್ರವಾಹದ ಮುಂದೆ ಕೊಚ್ಚಿ ಹೋಗುವ ಭೀತಿಯೋ ಏನೋ ರಜನೀಕಾಂತ್ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಕೂಡಿ ಬರಲಿಲ್ಲ. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮೋದಿ ಪರ ರಜನಿಕಾಂತ್ ಒಲವು ತೋರಿದ್ದು ಎಲ್ಲೋ ಒಂದು ಬಾರಿ ರಜನಿ ಬಿಜೆಪಿ ತೆಕ್ಕೆಗೆ ಜಾರಿ ಬಿಟ್ಟರೇನೋ ಅನ್ನುವ ಸುದ್ದಿಯೂ ರಾಜಕೀಯ ಪಡಸಾಲೆಯಲ್ಲಿ ಹರಿದಾಡತೊಡಗಿತ್ತು. ರಜನೀಕಾಂತ್ ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೋದಿ ಸರ್ಕಾರ ಪುನರಾಯ್ಕೆಯಾಗಿ ಕೇಂದ್ರದ ಮಂತ್ರಿಯಾದರೆ ಬಿಜೆಪಿಯ ಪ್ರಾಬಲ್ಯ ವೃದ್ಧಿಸಬಹುದು.

ಹಿಂದೆ ಅಮ್ಮಾ ಕ್ಯಾಂಪ್ನಲ್ಲಿದ್ದ ಸುಬ್ರಮಣ್ಯಂ ಸ್ವಾಮಿ ಸಧ್ಯ ಬಿಜೆಪಿಯ ಟ್ರಂಪ್ ಕಾರ್ಡ್.  ಅಮ್ಮಾ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಮೋದಿಯವರನ್ನು ನೋಡಿ ಸಾಗರೋಪಾದಿಯಲ್ಲಿ ಸೇರಿದ್ದ ಜನ ಮೋದಿ ಪರ ಘೋಷಣೆ ಕೂಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ತಮಿಳುನಾಡಿನ ಜನ ಮೊದಲಿನಿಂದಲೂ ಪಕ್ಷಕ್ಕಿಂತಲೂ ವ್ಯಕ್ತಿ ಪ್ರಧಾನ ರಾಜಕೀಯಕ್ಕೆ ತಮ್ಮ ಬೆಂಬಲ ನೀಡುತ್ತಾ ಬಂದಿರುವುದರಿಂದ ರಜನಿ ಮತ್ತು ಮೋದಿ ಅಲೆ ಸೇರಿದರೆ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುವುದು ದೊಡ್ಡ ಕಷ್ಟವೇನಲ್ಲ. ಪನ್ನೀರ್ ಸೆಲ್ವಂ ಆಯ್ಕೆಯಲ್ಲೂ ಬಿಜೆಪಿಯ ವೆಂಕಯ್ಯ ನಾಯ್ಡು ಪ್ರಮುಖ  ಪಾತ್ರ ವಹಿಸಿದ್ದರು. ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳಿದ್ದು, ಬಿಜೆಪಿಯ ಬೇರುಗಳನ್ನು ತಮಿಳುನಾಡಿನಲ್ಲಿ ಭದ್ರಪಡಿಸಲು ಇದು ಸಕಾಲ. ಆದ್ರೆ ಬಹಳ ದೊಡ್ಡ ವರ್ಚಸ್ಸು ಹೊಂದಿರುವ ಸ್ಥಳೀಯ ನಾಯಕ ಇಲ್ಲದಿರುವುದು ಬಿಜೆಪಿಗೆ ತಲೆನೋವು.

ಜಯಲಲಿತಾ ಇಲ್ಲದ ತಮಿಳುನಾಡಿನ ರಾಜಕೀಯ ಸಧ್ಯಕ್ಕೆ ಬಿಕೋ ಅನ್ನುತ್ತಿದೆ. ಆದರೆ ರಾಜಕೀಯವೆಂಬ ಚದುರಂಗದಾಟದಲ್ಲಿ ಯಾವಾಗ ಏನೂ ಬೇಕಾದರೂ ಸಂಭವಿಸಬಹುದು. ಸಧ್ಯಕ್ಕಲ್ಲದಿದ್ದರೊ ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಧ್ರುವೀಕರಣವಾಗಬಹುದು ಅನ್ನುವುದು ಲೆಕ್ಕಾಚಾರ. ಆಪ್ತಸ್ನೇಹಿತೆಯಾಗಿದ್ದ ಜಯ ವಿರುದ್ಧವೇ ಸಂಚು ಹೂಡಿ ಅವರನ್ನೇ ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದ್ದ ಶಶಿಕಲಾ, ಪನ್ನೀರ್ ಸೆಲ್ವಂ ವಿರುದ್ದ ಕತ್ತಿ ಮಸೆಯದೇ ಇರುವುದು ಅನುಮಾನ. ಪನೀರ್ ಸೆಲ್ವಂ ಪೋಯಸ್ ಗಾರ್ಡೆನ್ ತಾಳಕ್ಕೆ ಕುಣಿಯುತ್ತಾರಾ ಇಲ್ಲವೋ ಎನ್ನುವುದರ ಮೇಲೆ ನಿರ್ಧಾರವಾಗಲಿದೆ ತಮಿಳುನಾಡಿನ ಮುಂದಿನ ರಾಜಕೀಯ ಬೆಳವಣಿಗೆ. ೧೯೬೭ರಿಂದಲೂ ತಮಿಳುನಾಡಿನ ಮತದಾರ ಪ್ರಾದೇಶಿಕ ಪಕ್ಷದ ಕೈ ಹಿಡಿಯುತ್ತಾ ಬಂದಿದ್ದಾನೆ. ಅಮ್ಮ ಇಲ್ಲದಿರೋ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಬೆಂಬಲ ಸಿಗುತ್ತಾ ಅನ್ನುವುದನ್ನು  ಕಾದು ನೋಡಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!