ಸಿದ್ಧರಾಮಯ್ಯನವರೇ, ನಾನಿದೆಷ್ಟನೇ ಭಾರಿ ಬಹಿರಂಗ ಪತ್ರ ಬರೆಯುತ್ತಿದ್ದೇನೋ ಗೊತ್ತಿಲ್ಲ, ನನ್ನಂತೆ ಅದೆಷ್ಟು ಜನ ನಿಮಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಬರೆದೂ ಬರೆದು ನಮ್ಮ ಪೆನ್ನಿನ ಇಂಕು ಖಾಲಿಯಾಯಿತೇ ಹೊರತು ಫಲಶೃತಿ ಮಾತ್ರ ಏನೇನೂ ಇಲ್ಲ. ಆದರೂ ಪ್ರತೀ ಭಾರಿ ಬರೆಯುವಾಗಲೂ ಈಗಲಾದರೂ ನೀವು ಜನರ ಮಾತು ಕೇಳಬಹುದೆಂಬ ಆಶಾವಾದ ನಮ್ಮದು. ಅಂತೆಯೇ ಮತ್ತೊಂದು ಪತ್ರ.
ಮೊನ್ನೆ ಮೊನ್ನೆಯಷ್ಟೇ ಮುಗಿದು ಹೋದ ಕನಕ ನಡೆ ಕಾರ್ಯಕ್ರಮದ ಹವಾ ಇನ್ನೂ ಮುಗಿದಿಲ್ಲ. ಫೋಟೋ, ವಿಡಿಯೋಗಳು ಇನ್ನೂ ಅಪ್’ಲೋಡ್ ಆಗುತ್ತಿರುವುದರಿಂದ ಸದ್ಯ ಹವಾ ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಬಹುಶಃ ಕನಕ ನಡೆ ಕಾರ್ಯಕ್ರಮವನ್ನು ನಿಲ್ಲಿಸಲು ವಿರೋಧಿಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡದೇ ಇರುತ್ತಿದ್ದರೆ ಅದು ಅಷ್ಟು ಯಶಸ್ವಿಯಾಗುತ್ತಿತ್ತೋ ಇಲ್ಲವೋ! ಇರಲಿ. ಗಮನಿಸಬೇಕಾದ ಅಂಶವೆಂದರೆ ಆವತ್ತು ಎಡಪಂಥೀಯರೋ ಅಥವಾ ಯುವಾ ಬ್ರಿಗೇಡಿನ ವಿರೋಧಿಗಳೋ (ಯುವಾ ಬ್ರಿಗೇಡಿನ ವಿರೋಧಿಗಳೆಲ್ಲಾ ಎಡಪಂಥೀಯರೇ ಬಿಡಿ) ಮಾತ್ರ ಆವತ್ತು ಕನಕ ನಡೆಯನ್ನು ನಿಲ್ಲಿಸಲು ಹರಸಾಹಸ ಪಟ್ಟಿದ್ದಲ್ಲ. ಇಡೀಯ ಸರಕಾರ, ಸರಕಾರದ ಆಯಕಟ್ಟಿನಲ್ಲಿರುವವರೆಲ್ಲೂ ಆ ಷಡ್ಯಂತ್ರದ ಭಾಗವೇ ಆಗಿದ್ದರು. ಅಸಲಿಗೆ ಆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಕ್ಕೆ ಉಡುಪಿಯ ಜಿಲ್ಲಾಡಳಿತಕ್ಕೆ ಯಾವ ಅಭ್ಯಂತರವೂ ಇರಲಿಲ್ಲ, ವಾಸ್ತವತೆಯ ಸಂಪೂರ್ಣ ಅರಿವು ಜಿಲ್ಲಾಡಳಿತಕ್ಕಿತ್ತು. ಆದರೆ ಜಿಲ್ಲಾಡಳಿತದ ಮೇಲೆ ಸರಕಾರದ ಆಯಕಟ್ಟಿನಲ್ಲಿ ಸೇರಿಕೊಂಡು ಅಖಿಲ ಕರ್ನಾಟಕ ಗಂಜಿಕೇಂದ್ರದ ನೇತೃತ್ವ ವಹಿಸಿರುವವರ ಒತ್ತಡವಿತ್ತಲ್ಲಾ? ಅದನ್ನು ಸುಲಭದಲ್ಲಿ ಮೀರಲು ಸಾಧ್ಯವೇ? ಜೊತೆಗೆ “ಎಡಪಂಥೀಯರು ಮುತ್ತಿಗೆ ಹಾಕುವ ಸಾಧ್ಯತೆಗಳಿದ್ದು ಗಲಭೆಗಳಾಗಬಹುದು, ಶಾಂತಿ ಕಾಪಾಡಲು ಪೋಲೀಸರಿಗೆ ಕಷ್ಟವಾಗಬಹುದು” ಎನ್ನುವ ಗುಪ್ತಚರ ಇಲಾಖೆಯ ಪ್ರಾಯೋಜಿತ ವಾರ್ತೆಯೂ ಇತ್ತಲ್ಲಾ? ಈ ಎಲ್ಲಾ ಕಾರಣಗಳಿಂದಾಗಿ ಜಿಲ್ಲಾಡಳಿತ ಕನಕ ನಡೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಿಲ್ಲ.
ಸರಿ, ಒಪ್ಪಿಕೊಳ್ಳೋಣ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರಕಾರದ ಕರ್ತವ್ಯ. ಮಠದ ಆವರಣದೊಳಗೆ ಸ್ವಚ್ಛತೆ ಮಾಡುವುದಕ್ಕೆ ಮತ್ತು ಸಭಾಂಗಣದೊಳಗೆ ಮೈಕ್ ಉಪಯೋಗಿಸುವುದಕ್ಕೆ ಯಾವ ದೊಣ್ಣೆ ನಾಯಕನ ಅನುಮತಿಯೂ ಬೇಕಿಲ್ಲ.ಆದರೂ ಸಾರ್ವಜನಿಕ ಶಾಂತಿಗೆ ಧಕ್ಕೆ ಬರುತ್ತದೆ ಎನ್ನುವುದಾದರೆ, ಕಾರ್ಯಕ್ರಮಕ್ಕೆ ಅನುಮತಿ ನೀಡುವ ಯಾ ನಿರಾಕರಿಸುವ ಹಕ್ಕು ಸರಕಾರಕ್ಕೆ ಇದೆ. ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ.
ಆದರೆ ಟಿಪ್ಪು ಜಯಂತಿ?? ಕಳೆದ ವರ್ಷದ ಟಿಪ್ಪು ಜಯಂತಿಯನ್ನೊಮ್ಮೆ ನೆನಪಿಸಿಕೊಳ್ಳಿ. ವ್ಯಾಪಕ ವಿರೋಧದ ನಡೆವೆಯೂ ಹಠಕ್ಕೆ ಬಿದ್ದು ಸರಕಾರ ನಡೆಸಿದ ಟಿಪ್ಪು ಜಯಂತಿಯಿಂದಾದ ನಷ್ಟ ಒಂದಾ ಎರಡಾ? ಮೊದಲಾಗಿ ಮಡಿಕೇರಿಯಲ್ಲಿ ಕುಟ್ಟಪ್ಪ ಎನ್ನುವ ಬಿಜೆಪಿ ನಾಯಕನನ್ನು ಕಲ್ಲು ಹೊಡೆದು ದೂಡಿ ಹಾಕಿ ಕೊಲ್ಲಲಾಯಿತು. ಅದಕ್ಕೆ ಪ್ರತೀಕಾರವೆಂಬಂತೆ ಮುಸ್ಲಿಂ ಯುವಕನೊಬ್ಬನನ್ನು ಗುಂಡಿಟ್ಟು ಕೊಲ್ಲಲಾಯಿತು. ಅಷ್ಟು ದಿನ ಶಾಂತಿ ಸೌಹಾರ್ಧತೆಯಿಂದಿದ್ದ ಮಂಜಿನ ನಗರಿ ದ್ವೇಷದ ಜ್ವಾಲೆಗೆ ಹೊತ್ತಿ ಉರಿಯಿತು. ಸಾರ್ವಜನಿಕ ಆಸ್ಥಿ ಪಾಸ್ತಿಗೆ ಅಪಾರ ನಷ್ಟವುಂಟಾಯಿತು. ಅಷ್ಟು ಸಾಲದೆಂಬಂತೆ ಮಂಗಳೂರಿನ ಬಿ.ಸಿ ರೋಡಿನಲ್ಲಿಯೂ ಅಮಾಯಕನೊಬ್ಬನ ಕೊಲೆಯಾಯಿತು. ಮಂಗಳೂರು, ಬಂಟ್ವಾಳ, ಪುತ್ತೂರು ಹೊತ್ತಿ ಉರಿಯಿತು. ಇದರ ಕಿಡಿ ಮೈಸೂರು, ಬೆಂಗಳೂರಿಗೂ ಹಬ್ಬಿತು. ಒಟ್ಟಿನಲ್ಲಿ ಹೆಸರು ಕೇಳಿದರೇ ಬೆಚ್ಚಿ ಬೀಳುವಂತಹಾ ನೆನಪನ್ನು ಕಳೆದ ವರ್ಷದ ಟಿಪ್ಪು ಜಯಂತಿ ರಾಜ್ಯಕ್ಕೆ ಕೊಟ್ಟಿದೆ. ಈ ಭಾರಿಯದ್ದನ್ನು ನೆನಪಿಸಿಕೊಂಡರೆ ಮತ್ತೆ ಬೆಚ್ಚಿ ಬೀಳುವ ಪರಿಸ್ಥಿತಿ ನಮ್ಮದು. ಒಟ್ಟಿನಲ್ಲಿ ಟಿಪ್ಪು ಜಯಂತಿಯ ನೆಪದಲ್ಲಿ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಿಸಿರುವ ಕೀರ್ತಿ ನಿಮ್ಮದು. ಈಗಾಗಲೇ ರಾಜ್ಯಾದ್ಯಂತ ಎದ್ದಿರುವ ವಿರೋಧದ ಕೂಗನ್ನು ನೋಡುವಾಗ ಈ ಭಾರಿಯೂ ಕೋಮು ಗಲಭೆಗಳಾಗುವುದು ನಿಶ್ಚಿತ ಎನ್ನುವುದಕ್ಕೆ ಯಾವ ಗುಪ್ತಚರ ಇಲಾಖೆಯೂ ಬೇಕಾಗಿಲ್ಲ. ನೆಟ್ಟಗೆ ಎರಡನೇ ಕ್ಲಾಸ್ ಪಾಸಾಗದವನೂ ಸಹ ಅದನ್ನು ನಿಖರವಾಗಿ ಹೇಳಬಲ್ಲ.
ಆದರೆ ನಿಮ್ಮ ಸರಕಾರಕ್ಕೆ ಇದೆಲ್ಲಾ ತಿಳಿಯುತ್ತಿಲ್ಲವೇ? ಕಳೆದ ಭಾರಿ ನಡೆದು ಗಲಭೆಗಳು ನೆನಪಿಲ್ಲವೇ? ಕನಕ ನಡೆಯಂತಹಾ ಕಾರ್ಯಕ್ರಮದ ಕುರಿತು ಅನಾವಶ್ಯಕವಾಗಿ ಮಾಹಿತಿ ನೀಡುವ ನಿಮ್ಮ ಗುಪ್ತಚರ ಇಲಾಖೆ “ಟಿಪ್ಪು ಜಯಂತಿ ಆಚರಿಸಿದರೆ ಈ ಭಾರಿಯೂ ಗಲಭೆಗಳಾಗುತ್ತವೆ” ಎನ್ನುವ ಮಾಹಿತಿ ನೀಡುವುದಿಲ್ಲವೇ? ಅಥವಾ, ಗುಪ್ತಚರ ಇಲಾಖೆ ಮಾಹಿತಿ ನೀಡಿಯೂ ನಿಮ್ಮ ಪ್ರತಿಷ್ಠೆಗೆ ಭಂಗ ಬರುತ್ತದೆಂದೋ ಇಲ್ಲಾ ವೋಟ್ ಬ್ಯಾಂಕ್ ಕುಸಿಯುತ್ತದೆಯೆಂದೋ ಟಿಪ್ಪು ಜಯಂತಿ ಮಾಡಿಯೇ ಸಿದ್ಧ ಎನ್ನುತ್ತಿದ್ದೀರೋ? ನಿಮ್ಮ ಹಠ, ಸ್ವಾರ್ಥ ಸಾಧನೆಗೆ ಅದಿನ್ನೆಷ್ಟು ಹೆಣ ಬೀಳಬೇಕು? ನಿಮ್ಮ ಅಧಿಕಾರಾವಧಿಯಲ್ಲಿ ಹಿಂದೂ ಮುಸ್ಲಿಮರು ಬಡಿದಾಡಿಕೊಂಡು ಸತ್ತರೆ, ಅದಕ್ಕೆ ನೀವೇ ಮರಣ ಶಾಸನ ಬರೆದರೆ ನಿಮಗೆ ಶೋಭೆಯೇ? ನಿಮ್ಮದೇ ಗೃಹ ಸಚಿವರು ಒಪ್ಪಿಕೊಂಡಂತೆ ಕಳೆದ ಭಾರಿ ಮಡಿಕೇರಿಯಲ್ಲಿ ಗಲಭೆಯಾದಾಗ ಕೇರಳದಿಂದ ಐದು ಸಾವಿರಕ್ಕೂ ಅಧಿಕ ಗಲಭೆಕೋರರು ಬಂದಿದ್ದರು, ಈ ಭಾರಿಯೂ ಅಂತಹಾ ಗಲಭೆಕೋರರು ಬರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟೀ? ಸ್ವಚ್ಛತೆ ಮಾಡುವ ಸ್ವಯಂಸೇವಕರನ್ನೇ ನಿಯಂತ್ರಿಸಲು ಕಷ್ಟವಾಗಬಹುದೆನ್ನುವ ನಿಮ್ಮ ಪೋಲೀಸ್ ಇಲಾಖೆಗೆ ಅಂತಹಾ ಗಲಭೆಕೋರರನ್ನು ನಿಯಂತ್ರಿಸಲು ಸಾಧ್ಯವಿದೆಯೇ? ಗಲಭೆಗಳಾಗುವ ಸಂಭವ ಕಣ್ಣೆದುರಿಗಿದ್ದರೂ ನಿಮ್ಮ ವೋಟ್ ಬ್ಯಾಂಕಿನ ಮುಂದೆ ಅವೆಲ್ಲಾ ಗೌಣವಾಗಿ ಬಿಡ್ತೇ? ಹಿಂದೂ ಮುಸ್ಲಿಮರು ಬಡಿದಾಡಿಕೊಂಡು ಸತ್ತರೆ ಸಾಯಲಿ, ಎರಡೂ ಕಡೆಗಳಿಂದ ವೋಟುಗಳನ್ನು ಗಳಿಸಿಕೊಂಡು ಮತ್ತೆ ಮುಖ್ಯಮಂತ್ರಿಯಾದರೆ ಸಾಕು ಎನ್ನುವುದಷ್ಟೇ ನಿಮ್ಮ ಧ್ಯೇಯವೇ? ನೀವು ಸಂವೇಧನಾ ಶೂನ್ಯ ಮನುಷ್ಯ ಅಂತ ನಮಗೆಲ್ಲಾ ಗೊತ್ತಿದೆ. ಆದರೂ ವಸಿ ಬಾಯಿ ಬಿಡಿ ಸಾರ್!
ನಿಮಗೆ ಗೊತ್ತಿರುವಂತೆ ಈ ಕೋಮುಗಲಭೆಗಳಲ್ಲಿ ಸಿಕ್ಕಿ ಸಾಯುವವರು ಯುವಕರೇ ಹೆಚ್ಚು. ಹಚ್ಚಿನವರು ಸ್ವ ಇಚ್ಛೆಯಿಂದ ಪಾಲ್ಗೊಳ್ಳದಿದ್ದರೂ ನಿಮ್ಮಂತಹಾ ನಾಯಕರ ಪ್ರಚೋದನೆಗೊಳಗಾಗಿ ಬಾಗವಹಿಸುತ್ತಾರೆ. ನಿಮ್ಮ ಹಠಕ್ಕೆ ಇನ್ಯಾರೋ ಅಮಾಯಕರು ಬಲಿಯಾಗುತ್ತಾರೆ. ಗಲಭೆಗಳಲ್ಲಿ ಪಾಲ್ಗೊಂಡು ಕಲ್ಲೇಟು, ಲಾಠಿಯೇಟು ತಿನ್ನುತ್ತಾರೆ. ಗ್ರಹಚಾರ ಕೆಟ್ಟರೆ ಗುಂಡೇಟಿನ ರುಚಿಯನ್ನೂ ನೋಡುತ್ತಾರೆ. ಟಿಪ್ಪು ಅಭಿವೃದ್ಧಿಯ ಹರಿಕಾರ, ಸರ್ವ ಧರ್ಮ ಸಮನ್ವತೆಯ ಹರಿಕಾರ, ಆತ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮುಂತಾದ ವಿಷಯಗಳನ್ನೊಮ್ಮೆ ಬದಿಗಿಡಿ. ಅದಕ್ಕೆ ವ್ಯತಿರಿಕ್ತವಾದ, ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ, ಆತನಿಂದ ಕನ್ನಡ ನಾಡಿಗೇನೂ ಕೊಡುಗೆ ಸಿಕ್ಕಿಲ್ಲ, ಆತ ಕನ್ನಡ ವಿರೋಧಿ ಎನ್ನುವ ಚರ್ಚೆಯನ್ನೂ ಬದಿಗಿಡಿ. ಒಮ್ಮೆ ಪ್ರಬುದ್ಧರಾಗಿ ಆಲೋಚಿಸಿ. ಕಳೆದ ಭಾರಿ ಗಲಾಟೆಯಾಗಿದೆ, ಈ ಭಾರಿಯೂ ಭಾರೀ ಗಲಾಟೆಯಾಗುವ ಸಂಭವವಿದೆ. ಸಾರ್ವಜನಿಕ ಆಸ್ಥಿಪಾಸ್ತಿಯ ರಕ್ಷಣೆಯ ಹೊಣೆ ನಿಮ್ಮ ಕೈಯಲ್ಲಿದೆ. ಬೇರೆ ಯಾವ ಕಾರಣಕ್ಕಲ್ಲದಿದ್ದರೂ ಸಾರ್ವಜನಿಕರ ಪ್ರಾಣ, ಆಸ್ತಿಪಾಸ್ತಿಯ ದೃಷ್ಟಿಯಿಂದಾದರೂ ಟಿಪ್ಪು ಜಯಂತಿಯನ್ನು ರದ್ದು ಮಾಡಿ. ಪುಣ್ಯ ಕಟ್ಟಿಕೊಳ್ಳಿ.
ನಿಮ್ಮ ಸರಕಾರ ಕನಕ ನಡೆ ಕಾರ್ಯಕ್ರಮವನ್ನು ಶಾಂತಿ ಭಂಗದ ನೆಪದಲ್ಲಿ ರದ್ದು ಮಾಡಲು ಶತಾಯ ಗತಾಯ ಪ್ರಯತ್ನಿಸಿತಲ್ಲಾ, ಅಸಲಿಗೆ ನಿಷೇಧವಾಗಬೇಕಾದದ್ದು ಯಾವುದು? ಶಾಂತಿಯುತವಾಗಿ ನಡೆಯುವ ಸ್ವಚ್ಛತೆಯ ಕಾರ್ಯಕ್ರಮವೋ ಅಲ್ಲಾ ರಕ್ತಸಿಕ್ತವಾಗಿ ನಡೆಯುವ ಟಪ್ಪು ಜಯಂತಿಯೋ? ದುರಾದೃಷ್ಟಕ್ಕೆ ನಿಮ್ಮ ಆಡಳಿತದಲ್ಲಿ, ಯಾವುದು ನಿಷೇಧವಾಗವಾಗಬಾರದೋ ಆದು ಆಗುತ್ತದೆ, ಯಾವುದು ನಿಷೇಧ ಆಗಬೇಕೋ ಅದು ಆಗುತ್ತಿಲ್ಲ.
ಸಿದ್ಧರಾಮಯ್ಯನವರೇ, ರಾಜ್ಯದ ಜನರ ಧ್ವನಿಯಾಗಿ ಈ ಭಾರಿ ಟಿಪ್ಪು ಜಯಂತಿ ಬೇಡ ಅಂತ ಪರಿ ಪರಿಯಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.ಅಷ್ಟಾಗಿಯೂ ನಿಮಗೆ ಅರ್ಥವಾಗಿಲ್ಲದಿದ್ದರೆ, “ಯಾವ ತಂದೆ ತಾಯಿಗೂ ಇಂತಹಾ ಸ್ಥಿತಿ ಬರವುದು ಬೇಡ” ಎನ್ನುವ ನಿಮ್ಮದೇ ಹೇಳಿಕೆಯನ್ನೊಮ್ಮೆ ನೆನಪಿಸಿಕೊಳ್ಳಿ. ಕಳೆದ ವರ್ಷ ಟಿಪ್ಪು ಜಯಂತಿಯಿಂದಾಗಿ ಪ್ರಾಣ ಕಳೆದುಕೊಂಡವರನ್ನೊಮ್ಮೆ ನೆನಪಿಸಿಕೊಳ್ಳಿ. ಬಿ.ಸಿ ರೋಡಿನಲ್ಲಿ ಕ್ರಿಕೆಟ್ ಆಡಿ ಬರುತ್ತಿದ್ದಾಗ ಕೊಲೆಯಾದ ಅಮಾಯಕ ಹರೀಶ್ ಪೂಜಾರಿಯನ್ನೊಮ್ಮೆ ನೆನಪಿಸಿಕೊಳ್ಳಿ. ಆತನ ತಂದೆ ತಾಯಿಯ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ನಿಮಗೆ ಬಂದಂತಹ ಸ್ಥಿತಿಯೇ ಅಲ್ಲವೇ ಅವರಿಗೂ ಬಂದಿದ್ದು? ನಿಮ್ಮಂತೆಯೇ ಅವರೂ ಸಹ ಕಣ್ಣೆದುರೇ ಹುಟ್ಟಿ ಬೆಳೆದ ಮಗನನ್ನೇ ಅಲ್ಲವೇ ಕಳೆದುಕೊಂಡಿದ್ದು? ಮತ್ತೆ ಮಾತ್ತೆ ಇನ್ಯಾರದ್ದೋ ತಂದೆ ತಾಯಿಗಳಿಗೆ ಅಂತಹಾ ಸ್ಥಿತಿಯನ್ನು ನೀವೇ ತಂದೊಡುತ್ತೀರಾ? ಆಲೋಚಿಸಿ!