ಸರ್ಜಿಕಲ್ ಸ್ಟ್ರೈಕ್! ಭಾರತದ ಸೈನಿಕರು ಪಾಕ್ ವಿರುದ್ಧ ಮುಗಿಬಿದ್ದು ನಡೆದ ಕಾರ್ಯಾಚರಣೆಯಿದು. ಎಲ್ಲಾ ಕಡೆಗಳಿಂದಲೂ ಪ್ರಶಂಸೆಗಳ ಸುರಿಮಳೆ. ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಭಾರತ ನಡೆಯನ್ನು ಪ್ರಶಂಸಿಸಿ ಸಂದೇಶ ಕಳುಹಿದ್ದರು. ಅಷ್ಟೇ ಏಕೆ ಅಫ್ಘಾನ್, ಬಾಂಗ್ಲಾ ದೇಶದಂತಹ ಮುಸಲ್ಮಾನ ರಾಷ್ಟ್ರಗಳೂ ಕೂಡ ಭಾರತದ ನಡೆಯನ್ನು ಹೊಗಳಿ ಪಾಕ್ಗೆ ಸಡ್ಡು ಹೊಡೆಯಿತು. ಪಾಕ್ನ ಕಪಟ ನೀತಿಯಿಂದ ರೋಸಿಹೋಗಿದ್ದ ಭಾರತೀಯರಿಗೂ ಇಂತಹದೊಂದು ಪ್ರತಿ ಹೊಡೆತದ ಮೂಲಕ ಪಾಕ್ ಶಾಕ್ ಕೊಟ್ಟಿದ್ದು ಹೆಮ್ಮೆ ಎಂದೆನ್ನಿಸಿತ್ತು. ಯಾಕೆಂದರೆ ಈ ವರೆಗೂ ಭಾರತೀಯರು ಕಂಡಿದ್ದು, ಕೇಳಿದ್ದು ಪಾಕ್ ವಿರುದ್ಧ ಬರೇ ಪೌರುಷದ ಹೇಳಿಕೆಗಳನ್ನಷ್ಟೇ ಅಲ್ಲವೇ! ಆಶ್ಚರ್ಯವೆಂದರೆ ಪ್ರತಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಕೂಡ ಮೋದಿಯನ್ನು ಒಂದು ದಿನದ ಮಟ್ಟಿಗೆ ಹೊಗಳಿತ್ತು! ಆದರೆ ಮತ್ತೆಲ್ಲಿ ಎಡವಟ್ಟಾಯಿತೋ ಗೊತ್ತಿಲ್ಲ. ತಮ್ಮ ಹೊಗಳಿಕೆಯೆಲ್ಲಿ ಮೋದಿಗೆ ಲಾಭ ತರಿಸುತ್ತೋ ಎಂದು ಹೆದರಿ ಈ ಅಟ್ಯಾಕೇ ಸುಳ್ಳು, ಸಾಕ್ಷಿ ಕೊಡಿ ಎನ್ನುತ್ತಾ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಹುಲ್ಗಾಂಧಿ ಸಹಿತ ಕೆಲವು (ನ)ಗಣ್ಯ ರಾಜಕಾರಣಿಗಳು ತಗಾದೆ ತೆಗೆಯಲು ಸುರುವಿಟ್ಟರು!
ರಾಜಕಾರಣವೆಂದರೆ ಇದೇನಾ? ಪ್ರತಿಪಕ್ಷವೆಂದರೆ ಆಡಳಿತದವರು ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು, ಕೈಗೆತ್ತಿಕೊಂಡಿರುವ ಎಲ್ಲಾ ಕಾರ್ಯಗಳನ್ನು ಏಕಕಂಠವಾಗಿ ತೆಗಳಬೇಕು ಎಂಬ ರೂಢೀಗತ ನಿಯಮವೇನಾದರೂ ಇದೆಯಾ!? ಅದಕ್ಕೆ ಇರಬೇಕು ಮೊನ್ನೆ ಸರ್ಜಿಕಲ್ ಸ್ಟೈಕ್ ನಡೆದಾಗ ರಾಹುಲ್ಗಾಂಧಿಯ ಹೊಗಳಿಕೆಯನ್ನು ಕಂಡು ಸ್ವತಃ ಜನರೇ ಆಶ್ಚರ್ಯಚಕಿತರಾಗಿದ್ದರು! ಅದು ರಾಹುಲ್ಗೂ ಅರ್ಥವಾಗಿರಬೇಕು. ಅದಕ್ಕೆ ಮರುದಿನವೇ ಪ್ಲೇಟ್ ಬದಲಾಯಿಸಿ ತೆಗಳಲು ಸುರುವಿಟ್ಟರು! ಆ ಮೂಲಕ ಪ್ರತಿಪಕ್ಷದ ಸ್ಥಾನಕ್ಕೊಂದು ನ್ಯಾಯ ಒದಗಿಸಿದರು!! ಇನ್ನು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ರ ಕತೆಯನ್ನು ಕೇಳುವುದೇ ಬೇಡ. ಮೋದಿ ಎಂದರೆ ಒಂಥರಾ ಅಲರ್ಜಿ ಅವರ ರಕ್ತಗತವೇ ಆಗಿಬಿಟ್ಟಿದೆ ಎಂಬಂತಿದ್ದಾರೆ. ಸೈನಿಕರ ಪ್ರತಿದಾಳಿಯನ್ನು ಹೊಗಳಿದರೆ ಅತ್ತ ಮೋದಿಗೆ ಲಾಭ, ತೆಗಳಿದರೆ ಇತ್ತ ಸೈನಿಕರಿಗೆ ಅಪಮಾನವೆಂದರಿತು ಅದೇನು ಮಾಡುವುದು ಎಂದೇ ತೋಚದೆ ಕೊನೆಗೆ ಈ ಅವಕಾಶವಾದಿ ರಾಜಕಾರಣಿ ಸರ್ಜಿಕಲ್ ದಾಳಿಗೆ ಸೈನಿಕರನ್ನಷ್ಟೇ ಹೊಗಳಿ ಕೇಂದ್ರದ ಆಡಳಿತವನ್ನು ಕುಹಕವಾಡಿದರು! ಸರ್ಜಿಕಲ್ ದಾಳಿ ನಡೆದಿದ್ದರೆ ಅದಕ್ಕೆ ಬೇಕಾದ ಸಾಕ್ಷ್ಯವನ್ನು ತೋರಿಸಿ ಎಂದು ಪಾಕ್ ಪ್ರಧಾನಿಯಂತೆ ಮಾತನಾಡಲಾರಂಭಿಸಿದರು! ಭಾರತದಾದ್ಯಂತ ಛೀಮಾರಿ ಹಾಕಿಸಿಕೊಂಡರೂ ಚಿಂತಿಲ್ಲ ಪಾಕ್ ಪತ್ರಿಕೆಗಳಲ್ಲಿ ಇದೇ ಕೇಜ್ರಿವಾಲ ಹೀರೋವಾಗಿ ಮೆರೆದಾಡಿದರು ನೋಡಿ! ಮಾನ ಕಳೆದುಹೋಗಿದ್ದ ಪಾಕ್ಗೆ ವಿಶ್ವದ ಬಹುತೇಕ ರಾಷ್ಟ್ರಗಳು ಸಡ್ಡು ಹೊಡೆದಿದ್ದರೂ ನಮ್ಮದೇ ದೇಶದ ಅದೂ ರಾಜ್ಯವೊಂದರ ಮುಖ್ಯ ಮಂತ್ರಿ ಈ ರೀತಿಯಾಗಿ ಕೈಹಿಡಿದದ್ದು ತೀರಾ ನಾಚಿಗೆಗೇಡಿನ ವಿಷಯವೆನ್ನದೆ ವಿಧಿಯಿಲ್ಲ!
ಏನಾಗಿದೆ ಈ ನಮ್ಮ ರಾಜಕಾರಣಿಗಳಿಗೆ? ರಾಷ್ಟ್ರದ ಹಿತಕ್ಕಿಂತಲೂ ಅಧಿಕಾರದ ಲಾಲಾಸೆಯೇ ಅಧಿಕವಾಗೋಯಿತೇ ಇವರಿಗೆಲ್ಲಾ?
ನಡೆದ ಘಟನೆ ದೇಶಕ್ಕೆ ಅಪಮಾನವೆಂದಾದರೆ, ನಷ್ಟವೆಂದಾದರೆ ಅದನ್ನು ವಿರೋಧೀಸಬೇಕು. ಸತ್ಯಾಸತ್ಯತೆಯ ಪರೀಕ್ಷೆ ನಡೆಯಬೇಕು. ಆದರೆ ದೇಶಕ್ಕೆ ಬಲ ತುಂಬುವ ಘಟನೆಗಳು ನಡೆದಾಗಲೂ ತುಚ್ಚ ಮನೋಸ್ಥಿತಿಯಿಂದ ವರ್ತಿಸಿ ರಾಷ್ಟ್ರ ವಿರೋಧಿಗಳಿಗೆ ಬೆಂಗಾವಲಾಗುವುದೆಂದರೆ ಏನರ್ಥ!? ಒಂದು ವೇಳೆ ಸರ್ಜಿಕಲ್ ದಾಳಿ ನಡೆದೇ ಇಲ್ಲ ಎಂದು ಸಾಬೀತಾದರೆ ಆವಾಗ ವಿಶ್ವಮಟ್ಟದಲ್ಲಿ ಮಾನಹೋಗುವುದು ಬರೇ ಆಡಳಿತ ಪಕ್ಷದಲ್ಲ ಬದಲಾಗಿ ಈ ನಮ್ಮ ರಾಷ್ಟ್ರದ್ದು ಎಂಬುದಾದರೂ ಈ ವಿರೋಧಿಗಳಿಗೆ ಅರ್ಥವಾಗದೇ!?
ಮೊನ್ನೆ ಮೊನ್ನೆ ತಾನೆ ನಡೆದ ಭಯೋತ್ಪಾದಕರುಗಳ ಎನ್ಕೌಂಟರ್ ಸ್ಥಿತಿಯೂ ಇದಕ್ಕೆ ಇನ್ನೊಂದು ಉದಾಹರಣೆಷ್ಟೇ. ಅಲ್ಲಿ ಸತ್ತ ಆ ಎಂಟೂ ಭಯೋತ್ಪಾದಕರುಗಳು ನಿಷೇಧಿತ ಸಿಮಿ ಸಂಘಟನೆಯವರು. ಒಟ್ಟಿನಲ್ಲಿ ಭಾರತ ವಿರೋಧಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅವರನ್ನು ಉಳಿಸಿದಷ್ಟೂ ದಿನ ಈ ನಮ್ಮ ದೇಶಕ್ಕೇ ಅಪಾಯ ಹಾಗು ದೊಡ್ಡ ಹೊರೆ. ಆದ್ದರಿಂದ ಅವರ ಮೇಲೆ ನಡೆದಿರೋ ಎನ್ಕೌಂಟರ್ ಅಸಲಿಯೋ ಅಥವಾ ನಕಲಿಯೋ ಎಂಬುದು ದೊಡ್ಡ ವಿಷಯವಾಗಲೇಬಾರದಾಗಿತ್ತು. ಒಟ್ಟಾರೆಯಾಗಿ ಮತ್ತೊಂದಷ್ಟು ಅವಘಡ ಸಂಭವಿಸುವ ಮೊದಲೇ ಹತ್ಯೆಗೀಡಾದರಲ್ಲಾ ಎಂಬುದೇ ಇಲ್ಲಿ ಜನಸಾಮಾನ್ಯ ಖುಷಿ ಪಡುವ ವಿಚಾರ. ಅವರಿನ್ನೂ ವಿಚಾರಣಾಧೀನ ಕೈದಿಗಳೇ ಇರಬಹುದು. ಹಾಗಂತ ಅವರ ಮೇಲಣ ಆಪಾದನೆಗಳೂ ಸಾಮಾನ್ಯದ್ದೇ? ಅವರು ನಡೆಸಿದ್ದ ಪಾಷವೀಯ ಕೃತ್ಯಗಳನ್ನು ಅಷ್ಟು ಸುಲಭದಲ್ಲಿ ಮರೆಯಕ್ಕಾಗುತ್ತದೆಯೇ!? ಅದರಲ್ಲೂ ಅವರೆಲ್ಲಾ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನೇ ಬಲಿ ಪಡೆಯಲು ನೀಲ ನಕಾಶೆ ಸಿದ್ಧ ಪಡಿಸಿದ್ದರು ಎಂಬ ದೊಡ್ಡ ಆರೋಪವೇ ಅವರ ಮೇಲಿದೆ. ಜೊತೆಗೆ ಅಮೇರಿಕಾದ 9/11ರ ಭಯೋತ್ಪಾದನೆಯ ಆಪಾದಿತ, ಯುಎಸ್ನ ಎಫ್ಬಿಐ ಕಸ್ಟಡಿಯಲ್ಲಿರುವ ಆಫಿಯಾ ಸಿದ್ದಿಖಿ ಎನ್ನುವ ಭಯೋತ್ಪಾದಕನನ್ನು ಬಿಡಿಸಲು ಅಲ್ ಖೈದಾ ಸಂಘಟನೆಯ ಜೊತೆ ಸೇರಿಕೊಂಡು ಮಾಸ್ಟರ್ ಪ್ಲಾನ್ ಬೇರೆ ಮಾಡುತ್ತಿದ್ದರು ಎಂಬ ಆರೋಪವೂ ಇವರ ಮೇಲಿದೆ. ಹಾಗಿರುವಾಗ ಇಂತಹ ಆರೋಪಿಗಳ ಪರವಾಗಿ ಕಣ್ಣೀರು ಸುರಿಸುವುದು ಎಂದರೆ ಅದು ಯಾರಿಗೆ ಮಾಡುವ ಅಪಮಾನ? ಅಷ್ಟಕ್ಕೂ ನಡೆದಿರುವುದು ನಕಲಿ ಎನ್ಕೌಂಟರ್ ಎಂದು ಆರೋಪಿಸುವುದಾದರೆ ಇನ್ನು ಆ ಭಯೋತ್ಪಾದಕರುಗಳು ತಪ್ಪಿಸಿಕೊಂಡು ಓಡಿ ಹೋಗಿದ್ದರು ಎನ್ನುವುದು ಕೂಡ ಕಪೋಲಕಲ್ಪಿತ ಎನ್ನಬೇಕಷ್ಟೇ! ಒಂದು ವೇಳೆ ನಕಲಿ ಎನ್ಕೌಂಟರ್ಗಾಗಿ ಪೋಲೀಸರೇ ಬಂಧಿಗಳನ್ನು ಓಡಿ ಹೋಗಿ ಎಂದು ಪ್ರೇರೇಪಿಸಿದ್ದಾರೆ ಎಂದು ಕಲ್ಪಿಸಿಕೊಳ್ಳುವುದಾದರೆ, ಅವರೇಕೆ ರಮಾಶಂಕರ್ ಯಾದವ್ ಎನ್ನುವ ಪೋಲೀಸ್ ಸಿಬಂದಿಯನ್ನು ಕೊಂದು ಓಡಿ ಹೋಗಬೇಕಾಗಿತ್ತು!? ಹಾಗಾದರೆ ಆ ಸಾವು ಕೂಡ ಸುಳ್ಳೇ!? ಈ ಭಯೋತ್ಪಾದಕರುಗಳು ಕೈಗೆ ಸಿಕ್ಕಿದರೆ ಯಾರನ್ನೂ ಬಿಡುತ್ತಿರಲಿಲ್ಲ ಎಂಬುದಕ್ಕೇ ಈ ಪೋಲೀಸ್ ಸಿಬಂದಿಯ ಸಾವೇ ಜ್ವಲಂತ ನಿದರ್ಶನ. ಹಾಗಿರುವಾಗ ಭಯೋತ್ಪಾದಕರುಗಳ ಕೈಯಲ್ಲಿ ಆಯುಧಗಳಿರಲಿಲ್ಲ, ಅಸಾಹಯಕಾರಗಿದ್ದರು ಎಂದು ಬೊಬ್ಬಿರುವುದೇ ಒಂದು ಮೂರ್ಖತನದ್ದು! ಒಟ್ಟಿನಲ್ಲಿ ಭಯೋತ್ಪಾದಕರ ಸಾವಿಗೆ ಮರುಗಿ ದೇಶದ ವಿರುದ್ಧವೇ ಹೇಳಿಕೆ ನೀಡುತ್ತಿರುವ ಮಂದಮತಿಗಳಿಗೆ ದಯಾಶಂಕರ್ ಎನ್ನುವ ಪೋಲೀಸ್ ಸಿಬ್ಬಂದಿಯ ಸಾವು ಲೆಕ್ಕಕ್ಕೆ ಸಿಗದೇ ಹೋಗಿರುವುದು ವಿಪರ್ಯಾಸವೇ ಸರಿ! ಅಷ್ಟಕ್ಕೂ ಇವರೆಲ್ಲಾ ಅಮಾಯಕರು ಎಂದಾಗಿರುತ್ತಿದ್ದರೆ ಈ ದೇಶದ ಕಾನೂನಿನಲ್ಲಿ ನ್ಯಾಯಯುತವಾಗಿಯೇ ಹೋರಾಡಿ ನಿರಪರಾಧಿಗಳು ಎಂದು ಸಾಬೀತು ಪಡಿಸಬಹುದಿತ್ತು. ಎಷ್ಟಾದರೂ ಇವರ ಪರ ವಕಾಲತ್ತು ವಹಿಸಲು ಇಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ದಂಡೇ ಇದೆಯಲ್ಲಾ!?
ನಮ್ಮ ದೇಶದ ಒಟ್ಟು ರಾಜಕೀಯ ವ್ಯವಸ್ಥೆಯೇ ಈ ರೀತಿಯಾಗಿ ಹೊಲಸೆದ್ದಿದೆಯೇನೋ. ಅಧಿಕಾರದ ಮಣೆ ಏರಲು ಹೊಲಸನ್ನಾದರೂ ತಿನ್ನಬಲ್ಲೆ ಎಂಬ ಮನೋಸ್ಥಿತಿಯ ಪರಕಾಷ್ಠೆ ಇದು. ಇದೀಗ ಕೇಂದ್ರ ಸರಕಾರ ಕಪ್ಪು ಹಣದ ವಿರುದ್ಧ ದೊಡ್ಡ ಪ್ರಮಾಣದ ಸಮರ ಸಾರಿದ್ದು 500 -1000 ರೂ.ಗಳ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿದೆ. ಕೇಂದ್ರ ಸರಕಾರದ ಈ ನೀತಿಗೆ ದೇಶ ವಿದೇಶಗಳಿಂದ ವ್ಯಾಪಕ ಪ್ರಶಂಸೆಗಳು ಹರಿದು ಬಂದಿವೆ. ದೇಶದ ಶ್ರೀಮಂತ ಕುಳಗಳ, ರಾಜಕಾರಣಿಗಳ ನಿದ್ದೆಗೆಡಿಸಿದ ರಾಜಕಾರಣಿ ಎಂದೇ ಹೊಗಳಲಾಗುತ್ತಿದೆ ಈ ಮೋದಿಯನ್ನು. ಅಷ್ಟೇ ಏಕೆ ಸಿಂಗಪೂರದ ಪತ್ರಿಕೆಯಲ್ಲೂ ಮೋದಿಯನ್ನ ಅದಿನ್ನಾರಿಗೋ ಹೋಲಿಸಿಕೊಂಡು ವರ್ಣಿಸಲಾಗಿದೆ. ನಿಜಕ್ಕೂ ಇದೊಂದು ಐತಿಹಾಸಿಕವಾದ ತೀರ್ಮಾನವೇ ಸರಿ. ಅಕ್ರಮವಾಗಿ ಕೂಡಿಟ್ಟ ಕೋಟಿ ಕೋಟಿ ದುಡ್ಡು ಇದೀಗ ರದ್ದಿಯಾಗುತ್ತಿರುವುದು, ಲಂಚ, ಭ್ರಷ್ಟಾಚಾರದಂತಹ ಕೆಲಸಗಳಿಗೆ ಕಡಿವಾಣ ಬಿದ್ದಿರುವುದು, ಅದೆಷ್ಟೋ ಬ್ಯಾಂಕ್ ಖಾತೆಗಳು ಮತ್ತೆ ಚುರುಕಾಗಿರುವುದು, ಎನ್ಪಿಎ ಅಕೌಂಟ್ಗಳು ಮತ್ತೆ ಟ್ರ್ಯಾಕ್ಗೆ ಬಂದಿರುವುದುಗಳೆಲ್ಲವೂ ಮೋದಿಯ ಈ ಒಂದು ತೀರ್ಮಾನದಿಂದ ನಡೆದಿದೆ ಎಂದರೆ ಅದು ಹೊಗಳಿಕೆಯಲ್ಲ ಬದಲಾಗಿ ವಾಸ್ತವ. ಸ್ವತಃ ಮೋದಿಯೇ ಹೇಳುವಂತೆ ದೇಶದಲ್ಲಿ ನಡೆಯುವ ಈ ಸ್ವಚ್ಚತಾ ಅಭಿಯಾನದಲ್ಲಿ ಜನರಿಗೂ ಸ್ಪಲ್ಪ ತೊಂದರೆಯಾಗಬಹುದು. ಆದರೆ ಇದೊಂದು ದೇಶ ಕಟ್ಟುವ ಬೃಹತ್ ಕಾಯಕವಾದ್ದರಿಂದ ಎಲ್ಲರೂ ಸಹಕರಿಸಬೇಕು. ಆದರೆ ಮೋದಿಯ ಈ ಅಭಿಯಾನ ಅದಾಗಲೇ ಸರಕಾರದ ಬೊಕ್ಕಸಕ್ಕೆ ಮಣ್ಣೆರಚಿ ಕೋಟಿ ಲೆಕ್ಕದಲ್ಲಿ ಕೂಡಿಟ್ಟ ರಾಜಕಾರಣಿಗಳನ್ನು, ಶ್ರೀಮಂತರನ್ನು ಚಿಂತೆಗೀಡು ಮಾಡಿದೆಯಾದ್ದರಿಂದ ಇದೀಗ ಅಂತವರಿಗೆ ಮೋದಿ ನಡೆ ‘ಬಡವರ’ ವಿರುದ್ಧ ಎಂಬಂತೆ ಕಾಣುತ್ತಿದೆ! ವಿರೋಧ ಪಕ್ಷ ಸಹಿತ ಹಲವಾರು ರಾಜಕೀಯ ಪಕ್ಷಗಳೂ ಇಂದು ದುಡ್ಡಿನ ದಾಸ್ತಾನಿಗೆ ಬೆಂಕಿ ಹಚ್ಚಿಸಿಕೊಂಡು ಮೊದಿಗೆ ಹಿಡಿ ಶಾಪ ಹಾಕುತ್ತಿದಾರೆ! ಆದ್ದರಿಂದ ನೋಟು ಬದಲಾವಣೆಗಾಗಿ ಜನ ಒಂದರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತಿರುವುದೇ ಇವರಿಗೆ ಬಲು ದೊಡ್ಡ ಯಾತನಾಮಯ ವಿಷಯವಾಗಿದೆ! ಅದಕ್ಕಾಗಿ ಇವರೆಲ್ಲಾ ಮೋದಿ ವಿರುದ್ಧ ಒಂದಾಗಿದ್ದಾರೆ. ಕರೆನ್ಸಿ ವಾಪಾಸ್ ತೆಗೆದುಕೊಂಡಿರುವ ನಿರ್ಧಾರವನ್ನು ಈ ಕೂಡಲೇ ವಾಪಾಸ್ ತೆಗೆದುಕೊಳ್ಳಬೇಕೆಂದು ಬೊಬ್ಬಿರಿಯುತ್ತಿದ್ದಾರೆ! ಆದರೆ ಐದು ವರ್ಷಗಳಿಗೆ 2-3 ಬಾರಿ ಮತದಾನಕ್ಕಾಗಿ ಜನರು ಸರತಿ ಸಾಲಿನಲ್ಲಿ ನಿಂತು ಪರದಾಡುವುದು ಮಾತ್ರ ಇವರಿಗೆ ಪ್ರಯಾಸದಾಯಕ ಎಂದೆನ್ನಿಸಲೇ ಇಲ್ಲ! ಅಷ್ಟೇ ಏಕೆ ಇಂದಿಗೂ ಒಂದು ಕೆಲಸ ಮಾಡಿಸಿಕೊಳ್ಳಬೇಕಾದರೆ ಜನ ಸರಕಾರಿ ಕಛೇರಿಗಳ ಮುಂದೆ ದಿನಗಟ್ಟಲೆ ಪರದಾಡಲೇ ಬೇಕು. ಇವೆಲ್ಲವುಗಳು ಅದ್ಯಾವ ರಾಜಕಾರಣಿಗೂ ಪ್ರಜೆಗಳ ಸಂಕಟವೆಂದೆನ್ನಿಸಲೇ ಇಲ್ಲ! ಗುಬ್ಬಿಮೇಲೆ ಬ್ರಹ್ಮಾಸ್ತ್ರ ಎನ್ನುತ್ತಾ ಮೋದಿ ನಡೆಯನ್ನು ಟೀಕಿಸುತ್ತಿರುವ ರಾಜಕಾರಣಿಗಳಿಗೆ ನಿಜವಾಗಿಯೂ ಇಂದು ಕಾಡಿದ್ದು ಬಡವನ ಸಂಕಟವಲ್ಲ ಬದಲಾಗಿ ತಮ್ಮ ತಿಜೋರಿಯಲ್ಲಿ ರದ್ದಿಯಾಗಿ ಬಿದ್ದಿರುವ ಕರೆನ್ಸಿಗಳಷ್ಟೇ ಎಂಬುದು ಜನಸಾಮಾನ್ಯನಿಗೂ ಗೊತ್ತು! ಆದ್ದರಿಂದಲೇ ಜನಸಾಮಾನ್ಯ ಕೇಂದ್ರ ಸರಕಾರದ ಪರ ಧ್ವನಿಯಾಗಿದ್ದಾನೆ. ನಿಯತ್ತಿನಲ್ಲಿ ದುಡಿಯುತ್ತಾ ಸರಕಾರಕ್ಕೆ ತೆರಿಗೆ ಸಲ್ಲಿಸುತ್ತಿರುವ ಮಂದಿಗಳೆಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟೇ ಏಕೆ ನಿದ್ದೆಗೆಟ್ಟು ದುಡಿಯುತ್ತಿರುವ ಬ್ಯಾಂಕ್ ಸಿಬಂದಿಗಳೂ ಕೂಡ ತಮಗೆ ತೊಂದರೆಯಾದರೂ ಪರವಾಗಿಲ್ಲ. ದೇಶ ಕಟ್ಟುವ ಕಾಯಕದಲ್ಲಿ ನಾವೆಲ್ಲಾ ಸಹಭಾಗಿಗಳಾಗುತ್ತೇವೆ ಎಂದೆನ್ನುತ್ತಾ ಮೋದಿ ಕಾರ್ಯಕ್ಕೆ ಶ್ಲಾಘನೆಯನ್ನು ಸಲ್ಲಿಸಿಸುತ್ತಿದ್ದಾರೆ. ಇದು ನಿಜಕ್ಕೂ ಆಶಾದಾಯಕ ಬದಲಾವಣೆ.
ಒಟ್ಟಿನಲ್ಲಿ ವಿರೋಧಿಗಳು ಹೇಳುವ ಹುಳುಕು ಅದೇನೆ ಇರಲಿ. ದೇಶ ಬದಲಾಗಿ ಭ್ರಷ್ಟಾಚಾರ ಕೊನೆಯಾಗಿ ಪ್ರತೀಯೋರ್ವನ ಜೀವನವು ಸುಧಾರಣೆಯಾದರೆ ಇಲ್ಲಿ ಅಷ್ಟೇ ಸಾಕು. ವಿರೋಧಕ್ಕಾಗಿ ವಿರೋಧ ಎಂಬ ಧೋರಣೆಯ ಬಿಟ್ಟು ಕನಿಷ್ಟ ಪಕ್ಷ ದೇಶ ಕಟ್ಟುವ ವಿಚಾರದಲ್ಲಾದರೂ ತಮ್ಮ ಹೊಲಸು ರಾಜಕೀಯವನ್ನು ಬಿಟ್ಟು ಸಹಮತವನ್ನು ತೋರ್ಪಡಿಸಿದರೆ ಈ ದೇಶ ಬೆಳಗೀತು.