ಮೋದಿಯವರು ಅಧಿಕಾರಕ್ಕೆ ಬಂದು ಸುಮಾರು ಎರಡುವರೆ ವರ್ಷ ಆಯಿತು. ಕಪ್ಪು ಹಣ ಎಲ್ಲಿ ಬಂದೇ ಇಲ್ಲ. ಏನು ಮಾಡ್ತಾ ಇದ್ದಾರೆ ಮೋದಿ..?? ಎನ್ನುವ ಪ್ರಶ್ನೆ ಕೇಳಿ ಕೇಳಿ ವಿರೋಧ ಪಕ್ಷವೂ ಸುಸ್ತಾಗಿ ಹೋಗಿತ್ತು. ಆದರೆ ಮೋದಿಯವರು ಮಾತ್ರ ತಮ್ಮ ಪಾಡಿಗೆ ಎಲ್ಲವೂ ಸದ್ದಿಲ್ಲದೆ ಮಾಡುತ್ತಲೇ ಇದ್ದಾರೆ. ಜಾರಿಗೆ ಬಂದಾಗ ಭಾರೀ ಸದ್ದು ಮಾಡಿದ್ದಂತು ಸತ್ಯ .. ಯಾರೇನೇ ಹೇಳಲಿ ನಾನು ಮಾತ್ರ ನನ್ನ ಕಾರ್ಯ ಮಾಡುತ್ತೇನೆ ಎನ್ನುತ್ತಾರೆ ಮೋದಿ. ಇಡೀ ದೇಶಾದ್ಯಂತ ಮೋದಿಯಷ್ಟು ಹೀಯಾಳಿಕೆಗೆ ಒಳಗಾದ ಮತ್ತೊಬ್ಬ ವ್ಯಕ್ತಿಯಿಲ್ಲ. ಅವಮಾನ ಹೇಗಿತ್ತೆಂದರೆ ವೈಯುಕ್ತಿಕವಾಗಿಯೂ ಟೀಕಿಸಿದ್ದರು.. ಆದರೂ ಅಂತಹಾ ಅವಮಾನಗಳನ್ನೆಲ್ಲ ಸಹಿಸಿಕೊಂಡು ದೇಶದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಈ ದೇಶದಲ್ಲಿ ಹಲವಾರು ಸಮಸ್ಯೆ ಇದೆ .ಅದು ಎಲ್ಲರೂ ಒಪ್ಪಿಕೊಳ್ಳುವಂತದ್ದೇ . ಕೇವಲ ಐದು ವರ್ಷದಲ್ಲಿ ಬಗಹರಿಸುವಂತದ್ದಲ್ಲ. ಶಿಕ್ಷಣ, ಉದ್ಯೋಗ, ವಸತಿ, ಬಡತನ ನಿರ್ಮೂಲನೆ ಹೀಗೆ ಹಲವಾರು ಸಮಸ್ಯೆಗಳು ಸ್ವಾತಂತ್ರ್ಯ ನಂತರ ನಮ್ಮನ್ನು ಇಲ್ಲಯವರೆಗೂ ಕಾಡುತ್ತಲೇ ಬಂದಿದೆ.
ಅದರಲ್ಲಿ ಅತ್ಯಂತ ಹೆಚ್ಚು ಕಾಡಿದ್ದು ಆಂದರೆ ಅದು ಭ್ರಷ್ಟಾಚಾರ. ಎಲ್ಲೇ ಹೋಗಲಿ ಅಲ್ಲಿ ಲಂಚ ಲಂಚ ಲಂಚ!!! ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಗಬ್ಬೆಬ್ಬಿಸಿದ್ದರು. ಇನ್ನು ಸಾಧ್ಯವೇ ಇಲ್ಲ. ಎನ್ನುವ ಮಟ್ಟಕ್ಕೆ ಸಾಗಿತ್ತು. ಇದನ್ನೆಲ್ಲಾ ತಡೆಯಲು ಯಾರಿಂದಲೂ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹಳಸಿ ಹೋಗಿತ್ತು. ಕಾಳಧನಿಕರ ಪಾರುಪಥ್ಯಕ್ಕೆ ಅಡೆತಡೆಗಳೇ ಇಲ್ಲದಾಗಿತ್ತು. ಅದು ಸಾಲದೆಂಬಂತೆ ಸರ್ಕಾರಗಳೇ ಅದರಲ್ಲಿ ಸಿಲುಕಿದ್ದು ಮಾತ್ರ ವಿಪರ್ಯಾಸವೇ ಸರಿ. ದಾರಿ ತಪ್ಪಿದವರನ್ನು ಹೆಡೆಮುರಿ ಕಟ್ಟಬೇಕಿದ್ದ ಸರ್ಕಾರಗಳು ತಾನೂ ಭ್ರಷ್ಟರೊಂದಿಗೆ ‘ಕೈ’ ಜೋಡಿಸಿ ಜನರ ಆಶೋತ್ತರಗಳಿಗೆ ಎಳ್ಳುನೀರು ಬಿಟ್ಟಿದ್ದರು. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಯೇ ಹದಗೆಟ್ಟು ವಿಶ್ವಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿತ್ತು. ಬಹುಕೋಟಿ ಹಗರಣ ಸರಮಾಲೆಯಲ್ಲಿ ಸಿಲುಕಿ ವಿಲವಿಲನೆ ಒದ್ದಾಡುವ ಪರಿಸ್ಥಿತಿ ಎದುರಾಗಿತ್ತು. ಭಾರತದ ಆರ್ಥಿಕ ಸಂಕಷ್ಣಕ್ಕೆ ಜನತೆ ರೋಸಿ ಹೋಗಿದ್ದರು. ಹಿಂದಿನ ಸರ್ಕಾರವಂತೂ ಮಾಡಿದ ಪಾಪ ಕರ್ಮಗಳಿಗೆ ಲೆಕ್ಕವೇ ಇರಲಿಲ್ಲ . ಯಾರೂ ಮಾಡದಷ್ಟು ಅವರು ಮಾಡಿದ್ದರು. ಬಗೆದಷ್ಟು ಸಿಗುತ್ತಿತ್ತು ಹಗರಣಗಳು. ಜನರ ಹಣವನ್ನು ನುಂಗಿ ನೀರು ಕುಡಿದಿತ್ತು. ಹೆಸರಿಗೆ ದೇಶದ ಪ್ರಧಾನಿ ಆರ್ಥಿಕ ತಜ್ಞರಾಗಿದ್ದರು. ಅವರ ಕಾಲದಲ್ಲಿಯೇ ಪರಿಸ್ಥಿತಿ ಹದಗೆಟ್ಟಿದ್ದು ಅವರಲ್ಲಿದ್ದ ಅಜ್ಞಾನವು ಎತ್ತಿ ಹಿಡಿದಿತ್ತು. ಯಾರದ್ದೋ ಕೈಗೊಂಬೆಯಾಗಿ ಕಾರ್ಯನಿರ್ವಸುತ್ತಿದ್ದದ್ದು ಒಬ್ಬ ಮೂರ್ಖನಿಗೂ ತಿಳಿದಿತ್ತು. ವಿಶ್ವದಾದ್ಯಂತ ಅಪಹಾಸ್ಯಕ್ಕೀಡಾಗಿತ್ತು. ಪಾಕಿಸ್ಥಾನವೇ ಕಾಲೆಳೆದಿತ್ತು ನಮ್ಮ ಪ್ರಧಾನಿಗಳ ಅವ್ಯವಸ್ಥೆ ಕಂಡು. ಸಾಲದ್ದಕ್ಕೆ ಆ ಪಕ್ಷದ ಸದಸ್ಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ತಮ್ಮದು ಎನ್ನುವ ಅಹಂಕಾರ. ಇಡೀ ದೇಶವೇ ಮಂಕಾಗಿ ಹೋಗಿತ್ತು. ಭಾರತಕ್ಕೆ ಭವಿಷ್ಯವೇ ಇಲ್ಲವೇ ಎನ್ನುವಂತಿತ್ತು ಅವರ ಆಡಳಿತ ಶೈಲಿ. ಆಷ್ಟರಲ್ಲಿ ಭಾಜಪದವರು ಹೇಗಾದರು ಮಾಡಿ ಮುಂದೆ ಅಧಿಕಾರದ ಗದ್ದುಗೆಯನ್ನು ಏರಲೇ ಬೇಕು ಎಂದು ತನ್ನ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಿ ಬಿಟ್ಟಿತು .. ‘ನರೇಂದ್ರ ಮೋದಿ’ ಎನ್ನುವ ಹೆಸರು ಬಹಿರಂಗವಾದ ತಕ್ಷಣವೇ ಏನೋ ಒಂದು ಹೊಸದಿಗಂತವೇ ಸಿಕ್ಕಂತಾಯಿತು.. ಹಾಗೆಯೇ ಮೋದಿ ಅಲೆ ಇಡೀ ಭಾರತದಲ್ಲಿ ಹೊಸ ಸಂಚಲನವನ್ನೆ ಸೃಷ್ಠಿಸಿತ್ತು. ಪ್ರಧಾನಿಯಾದ ನಂತರ ಭಾರತದ ಚಿತ್ರಣವೇ ಬದಲಾಯಿತು. ವಿಶ್ವಮಟ್ಟದಲ್ಲಿ ಭಾರತವನ್ನು ನೋಡುವ ದೃಷ್ಟಿ ಕೋನವೇ ಬದಲಾಯಿತು.
ಮೋದಿಯವರು ನುಡಿದ ಮಾತನ್ನು ಒಂದೊಂದಾಗಿ ಜಾರಿಗೆ ತರುತ್ತಲೇ ಇದ್ದಾರೆ .. ಅದರಲ್ಲಿ ಪ್ರಮುಖವಾದದ್ದು ‘ಭ್ರಷ್ಟಾಚಾರ’ ದ ಸಮಸ್ಯೆ. ಅದುವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೋದಿಯವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದರು. ಕಪ್ಪು ಹಣ ಭಾರತಕ್ಕೆ ತರುತ್ತೇನೆ ಎಂದು. ಅದರ ಪರಿಣಾಮ ಒಂದೊಂದಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರು .. ಮೊತ್ತ ಮೊದಲು ಮಾಡಿದ್ದು ಜನ-ಧನ ಯೋಜನೆ . ದೇಶದ ಹೆಚ್ಚಿನ ಜನರಿಂದ ಬ್ಯಾಂಕ್ ಖಾತೆಯನ್ನು ತೆರೆಸಿದರು.ಭರ್ಜರಿ ಯಶಸ್ಸು ಕಂಡಿತು ಆ ಯೋಜನೆ !!! ಇದರಿಂದ ಬ್ಯಾಂಕ್ ಖಾತೆಗಳಿಗೆ ಭರ್ಜರಿ ಹಣ ಬಂದು ಬಿದ್ದವು. ತದ ನಂತರ 2005 ನೇಯ ಇಸವಿಯ ಹಿಂದಿನ ನೋಟನ್ನು ಸ್ವಲ್ಪ ಸಮಯಾವಕಾಶವನ್ನು ಕೊಟ್ಟು ಬದಲಾವಣೆ ಮಾಡಿಸಿಕೊಂಡರು. ನಂತರ ಒಂದು ಎಚ್ಚರಿಗೆ ಕೊಟ್ಟರು ಕಾಳಧನಿಕರರೇ … ನಿಮ್ಮಲ್ಲಿರುವ ಧನಕನಕಗಳನ್ನು ಘೋಷಿಸಿಕೊಳ್ಳಿ. ಇಲ್ಲವಾದಲ್ಲಿ ಅದರ ನೇರ ಪರಿಣಾಮವನ್ನು ಎದುರಿಸಿ ಎಂದು. ಕೆಲವರು ಹೆದರಿ ತಮ್ಮಲ್ಲಿನ ಕಪ್ಪು ಹಣವನ್ನೆಲ್ಲಾ ಘೋಷಿಸಿಕೊಂಡರು. ಇನ್ನುಳಿದವರು ಹಾಗೆಯೇ ಸಮಯ ಕಳೆದರು. ಮೋದಿಯವರ ಎಚ್ಚರಿಕೆಗೆ ಯಾವುದೇ ಮಹತ್ವ ನೀಡದೆ ಸುಮ್ಮನಾಗಿ ಬಿಟ್ಟರು. ಆದರೆ ಮೋದಿ ಸುಮ್ಮನಿರುತ್ತಾರೆಯೇ??? ಮೋದಿಯವರ ತಾಳ್ಮೆಗೂ ಒಂದು ಮಿತಿಯಿತ್ತು. ಅದು ಮೀರಿದಾಗ ಸೂಕ್ತ ಕ್ರಮ ಕೈಗೊಂಡು ಬಿಟ್ಟರು.
ಅದೊಂದು ದಿನ ನಮ್ಮ ರಾಜ್ಯದ ಮಾಧ್ಯಮಗಳಲ್ಲಿ ಚಲನಚಿತ್ರವೊಂದರ ದುರಂತದ ಸುದ್ದಿಯೇ ಪ್ರಸಾರವಾಗುತ್ತಿತ್ತು. ಅದೇ ಸಮಯದಲ್ಲಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ಪ್ರಸಾರ ಮಾಡಲಾಂಭಿಸಿದವು .. ಪಾಕ್ ವಿರುದ್ಧ ಯುದ್ಧ ಸಾರುವುದಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಮಾಧ್ಯಮದವರ ಅನುಮಾನವಾಗಿತ್ತು. ಆದರೆ ಅಸಲಿ ಚಿತ್ರವೇ ಬೇರೆ ಆಗಿತ್ತು. ಅವರ ಭಾಷಣವನ್ನು ಕೇಳಿದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಅಂತಹಾ ವಿಷಯವನ್ನು ತಮ್ಮ ಭಾಷಣದಲ್ಲಿ ಮೋದಿಯವರು ಪ್ರಸ್ತಾಪಿಸಿದ್ದರು.ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಸಲುವಾಗಿ 500 ಮತ್ತಯ 1000 ದ ನೋಟಿನ ಚಲಾವಣೆಯನ್ನು ನಿಷೇಧಿಸಿ ಬಿಟ್ಟರು. ಬದಲಾಯಿಸುವುದಕ್ಕೆ ಕೊಂಚ ಸಮಯ ಕೊಟ್ಟು ಸಾರ್ವಜನಿಕ ಕ್ಷೇತ್ರಗಳಲ್ಲಿ ಚಲಾವಣೆಯನ್ನು ನಿಷೇಧಿಸಿದ್ದು ಭ್ರಷ್ಟಾಚಾರಿಗಳಿಗೆ ನುಂಗಲಾದ ತುತ್ತಾಗಿ ಮಾಡಿದ್ದರು. ತಲೆ ಮೇಲೆ ಕೈಕೊಟ್ಟು ಕೂತು ಬಿಟ್ಟರು ಕೆಲವರು. ನಾನು ಸಂಪಾದಿಸಿದ ದುಡ್ಡು ಏನು ಮಾಡಲಿ ಎಂದು. ಮೋದಿಯವರ ಈ ನಿರ್ಧಾರವು ದೇಶದ ಜನರಿಂದ ಕೊಂಡಾಡುವಂತೆ ಮಾಡಿತ್ತು. ಬ್ಯಾಂಕ್’ಗಳಲ್ಲಿಯೇ ಬದಲಾಯಿಸುವ ಷರತ್ತು ಭ್ರಷ್ಟಾಚಾರಿಗಳ ನಿದ್ದೆಗೆಡಿಸಿತ್ತು. ಅವರಲ್ಲಿದ್ದ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವುದಕ್ಕೆ ದಾರಿಯೇ ಇಲ್ಲದಾಯಿತು. ಕಾಳಧನಿಕರಿಗೆ ದಿಕ್ಕೇ ತೋಚದಾಯಿತು. ಕಾಳಧನಿಕರು ಕಪ್ಪು ಹಣವನ್ನು ಬಿಳಿ ಮಾಡುವುದಕ್ಕೆ ಪ್ರಸಿದ್ಧ ಜಾಲತಾಣ googleನಲ್ಲಿ ಹುಡುಕಲು ಪ್ರಾರಂಭಿಸಿದ್ದರು. ಆದರೆ ಯಾವುದಕ್ಕೂ ಅವಕಾಶ ಸಿಗಲೇ ಇಲ್ಲ.. ಮೋದಿಯವರ ಷರತ್ತುಗಳು ಅಷ್ಟರ ಮಟ್ಟಿಗೆ ತೊಂದರೆ ಕೊಟ್ಟಿತ್ತು ಮತ್ತು ಎಲ್ಲಾ ಕಳ್ಳ ಮಾರ್ಗಗಳನ್ನು ಮುಚ್ಚಿಸಿದ್ದರು. ಕೆಲವೊಂದು ನಿಯಮಗಳು ಸಾಮಾನ್ಯ ಜನರಿಗೂ ತೊಂದರೆಯಾದದ್ದಿರಬಹುದು. ಆದರೆ ಮುಂದಿನ ದಿನಗಳ ಒಳಿತಿಗಾಗಿ ಈ ಮಹತ್ವದ ಕಾರ್ಯವನ್ನು ಬೆಂಬಲಿಸಲೇ ಬೇಕಾದ ಅನಿವಾರ್ಯತೆ ನಮ್ಮದಾಗಿದೆ.
ನಿಜವಾಗಿ ಹೇಳಬೇಕೆಂದರೆ ಇವರಿಂದಲೇ ಮೋದಿಯವರ ಗೌರವವು ಇನ್ನಷ್ಟು ಹೆಚ್ಚುತ್ತಿದೆ. ಒಂದೊಂದೇ ಇಲಿಗಳು ಹೊರ ಬಂದು ಪರಿಸ್ಥಿತಿಯನ್ನು ವೀಕ್ಷಿಸಿ ಮತ್ತೆ ಅದೇ ಬಿಲದೊಳಗೆ ಸೇರುತ್ತಿದೆ. ಮೋದಿ ಕೊಟ್ಟ ಏಟು ತಡೆದುಕೊಳ್ಳಲಾರದೆ ಬರಸಿಡಿಲು ಬಡಿದವರಂತೆ ಸ್ಥಬ್ಧರಾಗಿದ್ದಾರೆ. ಇನ್ನು ಕೆಲವೇ ದಿನಗಳು ಎಲ್ಲಾ ಇಲಿ ಹೆಗ್ಗಣಗಳು ಹೊರಬರಲೇಬೇಕು. ಆದರೂ ಕೆಲವೊಂದು ಕಡೆ ಭಾರಿ ಅವ್ಯವಹಾರ ನಡೆಯುತ್ತಿದೆ. ರಾಜಕಾರಣಿಗಳು ತಮ್ಮಲ್ಲಿರುವ ಹಣವನ್ನು ಇನ್ನೊಂದು ಖಾತೆಗಳಿಗೆ ರವಾನಿಸಿ ಕಪ್ಪು ಹಣವನ್ನು ಬಿಳಿ ಮಾಡುತ್ತಿದ್ದಾರೆ.
ಇದರ (ಆರ್ಥಿಕ ಸರ್ಜಿಕಲ್ ಸ್ಟ್ರೈಕ್) ನೇರ ಹೊಡೆತ ಯಾರಿಗೆಲ್ಲ ಬಿದ್ದಿದೆ ಎಂದು ಕೇಳಿದರೆ ಅದಕ್ಕೆ ಉತ್ತರ ಪ್ರಪ್ರಥಮವಾಗಿ ರಾಜಕಾರಣಿಗಳಿಯೇ. ಅದು ಬಿಟ್ಟರೆ ಪಾಕಿಸ್ಥಾನಕ್ಕೆ. ಪಾಕಿಸ್ಥಾನದಿಂದ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳು ಭಾರತಕ್ಕೆ ಬರುತ್ತಿದ್ದವು. ಅಲ್ಲಿ ಭಾರತದ ನೋಟುಗಳನ್ನು ಪಾಕಿಸ್ಥಾನಿ ಸರ್ಕಾರದ ಅಧಿಕೃತ ಮುದ್ರಣಾಯಲದಲ್ಲೇ ಮುದ್ರಿಸಲಾಗುತ್ತಿತ್ತು ಎನ್ನುವ ಖಚಿತ ಮಾಹಿತಿ ನಮ್ಮ ಸರ್ಕಾರಕ್ಕೆ ದೊರಕಿತ್ತು. ಭಾರತದ ಮೇಲೆ ನೇರ ದಾಳಿ ಮಾಡಲು ಸಾಧ್ಯವಾಗದೇ ಆರ್ಥಿಕ ದಾಳಿ ಮಾಡಿ ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬುಡ ಮೇಲು ಮಾಡುವ ಪ್ರಯತ್ನ ಮಾಡುತ್ತಿತ್ತು. ಇಲ್ಲಿರುವ ಕೆಲವರು ಅವರೊಂದಿಗೆ ಕೈ ಜೋಡಿಸಿದ್ದರು. ಇಷ್ಟೊಂದು ಅವಸರದಲ್ಲಿ ನಿಷೇಧ ಮಾಡುವ ಪ್ರಸಂಗ ಏನಿತ್ತು ಎಂದರೆ ಸಾವಿರಾರು ಕೋಟಿ ಮೌಲ್ಯದ ನಕಲಿ ನೋಟುಗಳು ಪಾಕಿಸ್ಥಾನದಿಂದ ಸರಬರಾಜಾಗುವ ಎಲ್ಲಾ ಸಿದ್ಧತೆಯಲ್ಲಿತ್ತು . ಅದು ಸಾಗಿಸುವ ಕೆಲವೇ ದಿನಗಳಲ್ಲಿ ಈ ನೋಟು ನಿಷೇಧದ ಆದೇಶವು ಪಾಕಿಸ್ಥಾನಕ್ಕೆ ಕೊಟ್ಟ ದಿಟ್ಟ ಉತ್ತರ ಯುದ್ಧ ಮಾಡುವುದಕ್ಕಿಂತ ಹೆಚ್ಚು. ಈ ನೋಟು ನಿಷೇಧ ಮಾಡದೆ ಇದ್ದಿದ್ದರೆ ಭಾರತದ ಆರ್ಥಿಕ ಪರಿಸ್ಥಿಯೇ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಎಲ್ಲಾ ಗುಪ್ತಚರ ಮಾಹಿತಿಯನ್ನು ಆಧರಿಸಿ ಮೋದಿಯವರು ದಿಟ್ಟವಾದ ನಿರ್ಧಾರವನ್ನು ಕೈಗೊಂಡು ಭಾರತದ ಭವಿಷ್ಯವನ್ನು ಉಜ್ವಲವಾಗಿಸಿದ್ದಾರೆ. ಈಗ ಪಾಕಿಸ್ಥಾನಕ್ಕೆ ಹಳೆಯ ನೋಟನ್ನು ಮುದ್ರಿಸಿಟ್ಟುಕೊಂಡು ಕೆಂಡವನ್ನು ತನ್ನ ಸೆರಗಿನಲ್ಲಿಯೇ ಇಟ್ಟುಕೊಂಡಂತಹ ಪರಿಸ್ಠಿತಿ ಎದುರಾಗಿದೆ.
ಇನ್ನು ನಮ್ಮ ಹಲವು ರಾಜಕಾರಣಿಗಳ ಕಥೆ ಹೇಳತೀರದು.. ಸುಮಾರು ಐದು ತಲೆಮಾರಿನ ತನಕ ಕುಳಿತು ಉಂಡರೂ ಖಾಲಿಯಾಗದಷ್ಟು ಕಪ್ಪು ಹಣ ಸಂಗ್ರಹಿಸಿಟ್ಟುಕೊಂಡಿದ್ದವರು. ಸಾರ್ವಜನಿಕ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದವರು. ಅದನ್ನೆಲ್ಲಾ ಹೊರ ತರುವ ಸಲುವಾಗಿಯೇ ಈ ನೋಟು ನಿಷೇಧದ ಪ್ರಕ್ರಿಯೆ. ಅದೊಂದು ದಿಟ್ಟ ನಿರ್ಧಾರ ಮೋದಿಯವರು ಕೈಗೊಂಡಿದ್ದಾರೆ. ಎಲ್ಲ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೋದಿಯವರ ಮೇಲಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಅಚ್ಛೆದಿನ್ ಎಲ್ಲಿ ? ಎಂದು ಪ್ರಶ್ನಿಸಿದವರ ಬಾಯಿಗೆ ಬೀಗ ಹಾಕಿದ್ದಾರೆ. ನಿರ್ಧಿಷ್ಟ ಸಮಯದ ವರೆಗೆ ಭಾರತದಲ್ಲಿ ಸ್ವಲ್ಪ ಗೊಂದಲವಿರಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರ ಎಂದು ಎಲ್ಲಾ ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಇದಕ್ಕೆ ಸಾಕ್ಷಿ ಬ್ಯಾಂಕ್’ನ ಮುಂದೆ ಸಹನೆಯಿಂದ ನಿಂತ ಜನರು. ಕಾಳಧನಿಕರು ಮಾತ್ರ ತಮ್ಮ ಉಸಿರನ್ನೇ ನಿಲ್ಲಿಸುವ ಹಂತಕ್ಕೆ ತಲುಪಿದ್ದಾರೆ . ಮೋದಿಯನ್ನು ನಿಂಧಿಸಲೂ ಆಗದೇ ಬೆಂಬಲಿಸಲೂ ಆಗದೇ ತಮ್ಮ ತಲೆಯನ್ನು ತಾವೇ ಚಚ್ಚಿಕೊಳ್ಳುತ್ತಿದ್ದಾರೆ . ಒಟ್ಟಾರೆ ಮೋದಿ ಕೊಟ್ಟ ಏಟು ಸಹಿಸಲು ಸಾಧ್ಯವಾಗದೆ ಕಾಳಧನಿಕರಿಗೆ ಅಸಹಿಷ್ಣುತೆ ಉಂಟಾಗುತ್ತಿದೆ. ಆ ಭ್ರಷ್ಟಾಘಾತಕ್ಕೆ ಯಾವ ವೈದ್ಯರೂ ಔಷಧಿಯನ್ನು ನೀಡಲಾರರು. ತಮ್ಮ ಪಾಪ ಕರ್ಮಗಳಿಗೆ ಪರಿಹಾರವೇ ಇಲ್ಲದಾಯಿತು. ಮಾಡಿದ್ದುಣ್ಣೋ ಮಹರಾಯ ಎನ್ನುವ ಪರಿಸ್ಥಿತಿ ಎದುರಾಗಿದೆ.
ಅದೇನೇ ಇರಲಿ ನಾನು ಮಾತ್ರ ಮೋದಿಯವರನ್ನು ಬೆಂಬಲಿಸುತ್ತೇನೆ ಎನ್ನುವ ಮಾತು ಜನಸಮೂಹಗಳಲ್ಲಿ ಕೇಳಿ ಬರುತ್ತಿದೆ. ಕಳೆದ ತಿಂಗಳು ಪಾಕಿಸ್ಥಾನಕ್ಕೆ ಉರಿ .. ಈ ತಿಂಗಳು ಪಾಪಿಗಳಿಗೆ ಉರಿ ಮುಟ್ಟಿಸಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇಲ್ಲಿಗೆ ನಿಲ್ಲಲಿಲ್ಲ ಇನ್ನೂ ಆಟ ಮುಗಿದಿಲ್ಲ. ಮುಂದಿದೆ ಮಾರಿ ಹಬ್ಬ ಎನ್ನುವ ಸೂಚನೆ ಮೋದಿಯವರು ಈಗಾಗಲೇ ಕೊಟ್ಟಿದ್ದಾರೆ. ಮೋದಿಯವರ ಆಟ ಯಾರಿಗೆಲ್ಲ ಸಂಕಟ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ. ಸತತ ಆರು ತಿಂಗಳಿನಿಂದ ತಮ್ಮ ತಂಡದೊಂದಿಗೆ ಸಮಾಲೋಚನೆಯನ್ನು ಗುಪ್ತವಾಗಿಯೇ ಮಾಡಿ ಯಾರೊಬ್ಬರಿಗೂ ಸಣ್ಣದೊಂದು ಅನುಮಾನ ಸುಳಿವೂ ಸಿಗದಂತೆ ಆರ್ಥಿಕ ಸರ್ಜಿಕಲ್ ಸ್ಟ್ರೈಕ್ ಮಾಡಿ ಭ್ರಷ್ಟರಿಗೆ ನಿದ್ದೆಯಲ್ಲಿಯೂ ಮೋದಿಯ ಕನಸು ಕಾಣುವಂತಾಗಿದೆ. ಮೋದಿಯವರ ಎಲ್ಲಾ ಕಾರ್ಯಗಳಿಗೆ ಬೆಂಬಲಿಸುವ ಮೂಲಕ ಸದೃಢ ಭಾರತ ನಿರ್ಮಿಸೋಣ. ಆದಷ್ಟು ಬೇಗ ಗಬ್ಬೆಬ್ಬಿದ್ದ ನಮ್ಮ ಆರ್ಥಿಕ ವ್ಯವಸ್ಥೆ ಸುಧಾರಿಸಲಿ, ಭಾರತವೇ ವಿಶ್ವಗುರುವಾಗಲಿ ಮತ್ತು ಭ್ರಷ್ಟಾಚಾರ ರಹಿತ ಸ್ವಚ್ಛ ಭಾರತ ನಿರ್ಮಾಣವಾಗಲಿ ಎನ್ನುವುದು ಭಾರತೀಯರ ಆಶಯವಾಗಿದೆ.