ನಿಶೆಯ ಛಾದರವ ಕೊಡವಿ ಉಲಿದಿದೆ;
ಜಗವು ಜಾಗರದ ಚಿಲಿಪಿಲಿ.!
ಸೂರ್ಯಕಿರಣಗಳು ಮರಳಿ ತಂದಿವೆ,
ನವ ಚೈತನ್ಯದ ಕಚಗುಳಿ.!
ಬೆಳ್ಳಿ ಇಬ್ಬನಿಯು ತೆಳ್ಳಗಾಗುತಿದೆ
ಹೊನ್ನ ಕಿರಣಗಳ ಶಾಖಕೆ.!
ಬಾನ ಕೆನ್ನೆಯದು ರಂಗೇರುತಿದೆ
ಮೊಗದಿ ಮೂಡಿದೆ ನಾಚಿಕೆ.!
ಹೂವ ದಳಗಳು ತೋಳ ಚಾಚಿವೆ,
ಮಧುಗುಂಜನದಾಲಿಂಗನಕೆ!
ಸಕಲ ಜೀವಗಳು ಸಜ್ಜುಗೊಂಡಿವೆ
ಹೊಸಬೆಳಕಿನ ಸುಸ್ವಾಗತಕೆ!
ಬೆಳ್ಳಕ್ಕಿಗಳ ಬಳಗವು ಬಾನಲಿ
ಬರೆದಿವೆ ಚಂದದ ರಂಗೋಲಿ!
ಮಲ್ಲಿಗೆ ಮುಡಿದಿಹ ಮಾನಿನಿ ಬರೆದಿರೆ
ಚಿತ್ತಾರವನು ಹೊಸ್ತಿಲಲಿ!
ಒಲ್ಲದ ಮನಸಲಿ ದೂರ ಸಾಗಿಹನು
ಚಂದಿರ ಈ ಭೂರಮೆಯಿಂದ!
ಮತ್ತೆ ಮತ್ತೆ ತಾ ತಿರುಗಿ ನೋಡುತಿಹ
ಮೋಡಗಳೆಡೆಯ ನಡುವಿಂದ!