ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಝಟಕಾ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ ಮೊದಲು ಒಂದಿನ ಬೇಕಾಯಿತು. ಜತೆಗೆ ಜನಸಾಮಾನ್ಯ ಮನುಷ್ಯ ಕೊಂಚ ಗಲಿಬಿಲಿಯಾಗಿ ಕೂತನಾದರೂ ಮರುದಿನದ ಹೊತ್ತಿಗೆ ಮೈ ಕೊಡವಿ ಎದ್ದು ನಿಂತಿದ್ದ ಕ್ಯೂನಲ್ಲಿ. ಕಾರಣ ಈ ದೇಶಕ್ಕೆ ಆರ್ಬುದದಂತೆ ಅಡರಿಕೊಂಡ ರಾಜಕಾರಣಿಗಳ ಕಡೆಗೊಂದು ಸ್ಪಷ್ಟ ಮತ್ತು ಪರಮ ನಿರ್ಲಜ್ಯಕಾರಕ ಅಸಹ್ಯತೆ ಅವನ ಮನದಲ್ಲಿತ್ತು. ಅದಕ್ಕಾಗೇ ಇಂತಹದ್ದೊಂದು ಕ್ಯೂ ಮತ್ತು ಇದ್ದಕ್ಕಿದ್ದಂತೆ ಕೈ ಮುರಿದ ಹಣಕಾಸಿನ ಸ್ಥಿತಿಯನ್ನೂ ಸಹಿಸಿಕೊಳ್ಳಲು ತಯಾರಾಗಿ ಬಿಟ್ಟಿದ್ದ ಈ ದೇಶದ ಜನಸಾಮಾನ್ಯ.
ವಾರದ ನಂತರವೂ ಅಂಥಾ ದೊಡ್ಡ ಮಟ್ಟದ ಯಾವ ತೊಂದರೆಯೂ ದೇಶದ ಯಾವ ಭಾಗದಲ್ಲೂ ಆಗಿಯೇ ಇಲ್ಲ. ಇವತ್ತಿಗೂ ಬೆಂಗಳೂರು, ಮೈಸೂರು, ಬೆಳಗಾಂವಿ, ಹುಬ್ಬಳ್ಳಿ ಹೀಗೆ ಜನ ಬಾಹುಳ್ಯ ಇರುವ ಪ್ರದೇಶದಲ್ಲಿ, ನಿಗದಿತ ಮಿತಿಗಿಂತ ಹೆಚ್ಚು ಹಣ ಜೋಬಲ್ಲಿ ಇಟ್ಟುಕೊಂಡು ಓಡಾಡುವ ಕಲ್ಚರ್ ಪ್ರದೇಶದಲ್ಲೇ ಸ್ವಲ್ಪ ಹುಂಯ್ಯೋ ಹುಂಯ್ಯೋ ಎನಿಸಿದ್ದು ಹೌದು. ಅದರೆ ಅದು ಅನಗತ್ಯದ ವೆಚ್ಚಕ್ಕಾಗಿ ಬೇಕಿರುವ ಹಣವಾಗಿತ್ತು. ಅವರೂ ಎರಡ್ಮೂರು ದಿನದಲ್ಲಿ ದಾರಿಗೆ ಬಂದರು. ಅವರಿಗೆ ತಮ್ಮ ಮಿತಿ ಮತ್ತು ಅಗತ್ಯತೆಯ ಅರಿವು ನಿಖರವಾಗಿ ಬಂದುಬಿಟ್ಟಿತ್ತು. ನನ್ನ ಸ್ನೇಹಿತೆಯೊಬ್ಬಳು “..ಎರಡು ಸಾವಿರ ಇಲ್ಲದೆ ಓಡಾಡುತ್ತಿರಲಿಲ್ಲ ಆದರೆ ಇವತ್ತಿನವರೆಗೂ ಮುನ್ನೂರೇ ರೂಪಾಯಿಯಲ್ಲಿ ಬದುಕಿದ್ದೇನೆ.. ಥ್ಯಾಂಕ್ಸ್ ಮೋದಿ ಜೀ…” ಎಂದು ಫೇಸ್‍ಬುಕ್, ವಾಟ್ಸ್‍ಆಪ್ ಸ್ಟೇಟಸ್ಸು ಮಾಡಿಕೊಂಡು ಬೀಗಿದಳು. ಅರಿವಿದ್ದೋ ಇಲ್ಲದೆಯೋ ಮೋದಿ ಎಲ್ಲರಿಗೂ ಬದುಕಿನ ಮತ್ತು ಸಾಮಾನ್ಯ ಜನತೆಗಿರಬೇಕಾದ ಪಾಠ ಹೇಳಿಬಿಟ್ಟಿದ್ದರು. ಇದೆಲ್ಲಾ ಆಗುವ ಹೊತ್ತಿಗೆ ಮೂರ್ನಾಲ್ಕು ದಿನ ಅಂದರೆ ಮೊದಲ ಧಡಾಪಢಿಯ (ಫಸ್ಟ್ ಕ್ರ್ಯೂಷಿಯಲ್ ) ಸಮಯ ಕಳೆದೇ ಹೋಗಿತ್ತು.
ಸೈಕಲ್ ತುಳಿಯುವವ, ಆಟೊ ಡ್ರೈವರು, ಪೆಟ್ರೋಲ್ ಬಂಕ್ ಹುಡುಗ, ಪೇಪರ್ ಬಾಯ್, ಹಾಲಿನ ನಾರಾಯ್ಣ, ಸರಕು ಸಾಗಾಟದ ಮಾದೇವ, ಮೋಟರ್ ಸೈಕಲ್ ಅಂಗಡಿ ಬಷೀರ್, ಹೂವಿನ ಸುಶೀಲಾ, ಟೀ ಸ್ಟಾಲ್ ಮಲೆಯಾಳಿ ನಾಯರ್ರು, ಬಸ್ ಸ್ಟ್ಯಾಂಡ್ ಅಂಗಡಿ ಪೀಟರು, ಟೈಲರ್ ಅಂಬಿಕಾ, ದಕ್ಷಿಣೆಯಿಂದಲೇ ಬದುಕು ತೆಗೆಯುವ ಭಟ್ಟರು, ಚಿಕನ್ ಅಂಗಡಿ ಲಿಂಗರಾಜು, ಜ್ಯೋತಿಷಿ ಹೆಗಡೆರು, ಬುಕ್‍ಶಾಪ್ ಸುಬ್ರಮಣ್ಯ, ನಾಟಕದ ನಂದಿನಿ ಕೊನೆಗೆ ತೀರ ರಸ್ತೆ ಬದೀಯ ಮದುವಣಗಿತ್ತಿಯರವರೆಗೂ, “…ಇದು ಕೊಂಚ ಕಷ್ಟವಾಗುತ್ತಿದೆ ಆದರೆ ಮೋದಿ ಸಖತ್ ಕೆಲಸ ಮಾಡಿದಾರೆ ಹಿಂಗೆ ನಡೀಲಿ ಎಳೆಂಟು ದಿನದಲ್ಲಿ ಸರಿ ಹೋಯ್ತದೆ…”ಎಂದೇ ಹೊಂದಿಕೊಂಡುಬಿಟ್ಟರು. ಯಾರಲ್ಲೂ ಯಾಕಾದರೂ ಈ ಎಕಾನಾಮಿಕಲ್ ಸ್ಟ್ರೈಕ್ ಮಾಡಿದರಪ್ಪಾ, ನಮ್ಮಂತಹವರ ಬದುಕು ಇನ್ನೆಂಗೆ ಎನ್ನುವ ಇನ್ನಾವುದೇ ಬಾಧೆಗಳೇ ಇರಲಿಲ್ಲ. ಇದರ ಹೊರತಾಗಿ ಒಂದು ಹಂತದ ಮೇಲ್ಮಟ್ಟದ ಬದುಕಿನ ನಾಗರಿಕರಲ್ಲೂ ಒಂದಿಷ್ಟು ಕ್ಯೂ ನಿಲ್ಬೇಕಾಗ್ತಿದೆ ಎನ್ನುವ ಗೊಣಗಾಟ ಬಿಟ್ಟರೆ ಅಪೂಟು ತಾಸುಗಟ್ಟಲೆ ನಿಲ್ಲುವ ಪ್ರಮೇಯಕ್ಕೆ ತಮ್ಮನ್ನು ಸಲೀಸಾಗೇ ಒಡ್ಡಿಕೊಂಡು ಈ ಐತಿಹಾಸಿಕ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು.
ತೀರ ಎಲ್ಲಿ ತಾಗಬೇಕೋ ಅಲ್ಲಿಗೇ ತಾಗಿತ್ತು ಮೋದಿ ಬೀಸಿದ್ದ ಚಾಟಿ. ಯಾರ ಹತ್ತಿರವೂ ಹೇಳಿಕೊಳ್ಳಲಾಗದ, ಇದ್ದರೂ ಅದನ್ನು ಬಿಳಿಯಾಗಿಸದ ಸಂಕಟಕ್ಕೆ ಬಿದ್ದವರು ಮಾತ್ರ ತೀರ ದೊಡ್ಡ ಮಂದಿಯೇ ಎನ್ನುವುದರಲ್ಲಿ ಯಾರಲ್ಲೂ ಸಂಶಯವೇ ಉಳಿದಿರಲಿಲ್ಲ. ಅದಕ್ಕಾಗೆ ಜನ ಸಾಮಾನ್ಯ ಕಷ್ಟ ಪಡಲು ತಯಾರಾಗಿದ್ದ. ಕಾರಣ ತನ್ನ ರಕ್ತ ಬಸಿದ ಹಣ ಕಪ್ಪಾಗಿ ಎಂಥೆಂಥವರದ್ದೋ ತಿಜೋರಿ ಸೇರುತ್ತಿದ್ದುದು ಈ ದೇಶದ ಪ್ರತಿಯೊಬ್ಬನಿಗೂ ತೀರಿಸಿಕೊಳ್ಳಲಾಗದ ಸಂಕಟವಾಗಿ ಕಾಡಿದ್ದು ಸುಳ್ಳಲ್ಲ. ಆದರೆ ಅದರ ಕಡೆಗೆ ಬೆರಳು ಮಾಡುವ ಧೈರ್ಯವಾಗಲಿ, ಜೀರ್ಣಿಸಿಕೊಳ್ಳುವ ಶಕ್ತಿಯಾಗಲಿ ಇಲ್ಲದ ಮೀಡಿಯಂ ವರ್ಗ ತೆಪ್ಪಗಿತ್ತು. ಆದರೆ ಈ ಹಂತದಲ್ಲಿ ಮಾಧ್ಯಮಗಳಿಗೆ ಅಸಲು ಜೀವ ತುಂಬುವ ಮಧ್ಯಮ ವರ್ಗದ ಬೆನ್ನಿಗೆ ಮತ್ತು ಮೋದಿಯವರ ನಿರ್ಧಾರಕ್ಕೆ ಜೊತೆ ನಿಲ್ಲಬೇಕಿದ್ದ ಮಾಧ್ಯಮಗಳು ಯಾಕೆ ವಿರೋಧ ಪಕ್ಷದ ಕೆಲಸ ಮಾಡ್ತೀವೆ…?
ಸಾಮಾಜಿಕ ಕಾಳಜಿ ಮತ್ತು ದೇಶದ ಬಗೆಗಿನ ಕಿಂಚಿತ್ತಾದರೂ ಸಂವೇದನೆ ಎನ್ನುವುದನ್ನೇ ಮಾಧ್ಯಮಗಳಲ್ಲಿ ಕಳೆದು ಹೋಗಿದೆ ಎನ್ನಿಸುತ್ತಿಲ್ಲವೇ..? ಜನ ಸಾಮಾನ್ಯರು ಹೇಗೆಲ್ಲಾ ಸಮಸ್ಯೆಯನ್ನು ನಿಭಾಯಿಸಬಹುದು, ಎಲ್ಲೆಲ್ಲಿ ಹೇಗೆ ಬ್ಯಾಂಕ್‍ನವರು ಕೆಲಸ ನಿರ್ವಹಿಸಿ ಹಣ ವಹಿವಾಟು ನೇರ್ಪುಗೊಳಿಸುತ್ತಿದ್ದಾರೆ, ಹೇಗೆ ಮಾಡಿದರೆ ಜನ ಸಾಮಾನ್ಯರ ಮತ್ತು ಅಕೌಂಟು ಇಲ್ಲದವರ ಸಮಸ್ಯೆ ಸರಿಹೋಗುತ್ತದೆ, ಯಾವ್ಯಾವ ಜಾಗದಲ್ಲಿ ಏನು ನಡೆಯುತ್ತಿದೆ ಯಾಕೆ ಗೊಂದಲವಾಗುತ್ತಿದೆ ಅದಕ್ಕೆ ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿ, ವಿವರ ಹಾಗು ಅದಕ್ಕಾಗೆ ಸಿದ್ಧವಿದ್ದ ವಾಲಂಟೀಯರ್‍ಗಳ ಸೈನ್ಯವನ್ನೆ ಸಜ್ಜು ಮಾಡಿ ತಾವೂ ಈ ಅಭಿಯಾನದಲ್ಲಿ ಭಾಗವಹಿಸಿ ನಿರಂತರ ಮಾಹಿತಿ ಪ್ರಸರಣ ಮಾಡುತ್ತಾ ಅಧ್ಬುತ ಫಲಿತಾಂಶಕ್ಕೆ ಕಾರಣವಾಗಬಹುದಿತ್ತು ಮಾಧ್ಯಮಗಳು ಮತ್ತು ದೇಶವನ್ನು ಬದಲಿಸಲು ಸಂಕಲ್ಪ ತೊಟ್ಟ ಪ್ರಧಾನಿಯ ಬೆನ್ನಿಗೆ ನಿಲ್ಲಬೇಕಿತ್ತು. ಸೈದ್ಧಾಂತಿಕ ಸಂಘರ್ಷಗಳೇ ಇದ್ದರೂ ಯುದ್ಧ ಕಾಲದಲ್ಲಿ ಪ್ರತಿಯೊಬ್ಬನೂ ಕೈ ಸೇರಿಸಲೇಬೇಕೆನ್ನುವುದನ್ನು ಅರಿತುಕೊಳ್ಳಬೇಕಿತ್ತು.
ಆದರೆ ಅತಿ ರಂಜನೀಯ ಸುದ್ದಿಗಾಗಿ ಮೀಡಿಯಾಗಳು ಮಾಡುವ ಕರಾಳ ಮುಖ ದಿನವೂ ಜಾಹೀರಾಗತೊಡಗಿದೆ ನೋಡಿ. ಇವರೆಲ್ಲ ಬರೆಯುತ್ತಿರುವುದು ಮತ್ತು ಅತಿ ಹೆಚ್ಚು ಬಾರಿ ತೋರಿಸಿದ್ದು, ಈಗಲೂ ತೋರಿಸುತ್ತಿರುವುದು, ಜನ ಸರತಿ ಸಾಲಿನಲ್ಲಿ ಕಷ್ಟಪಡುತ್ತಿದ್ದಾರೆ, ದುಡ್ಡು ಸಿಗುತ್ತಿಲ್ಲ, ಜನರ ಪರಿಸ್ಥಿತಿ ಗಂಭೀರವಾಗಿದೆ, ಸರಕಾರ ಸರಿಯಾದ ತಯಾರಿ ಮಾಡಿಕೊಂಡಿಲ್ಲ, ರಾಜಕೀಯ ನಾಯಕನೊಬ್ಬ ಸರದಿ ಸಾಲಿನಲ್ಲಿ ನಿಂತು ಬೆವರೊರೆಸಿಕೊಳ್ಳುವ ಗಿಮಿಕ್ ಶೋ ದ ರಿಪೀಟ್ ಟೆಲಿಕಾಸ್ಟು, ಅಲ್ಲೆಲ್ಲೊ ವಯಸ್ಸಿನ ಮತ್ತು ಸಹಜ ಅಘಾತಕ್ಕೊಳಗಾಗಿ ಮತ್ತು ಕಾಕತಾಳೀಯ ಎಂಬಂತೆ ಸರದಿ ಸಾಲಿನಲ್ಲಿ ಕುಸಿದು ಬಿದ್ದು ಸತ್ತರೆ, ಅದಕ್ಕೂ ಈ ಸ್ಟ್ರೋಕೆ ಕಾರಣವಾಯಿತು ಎನ್ನುವುದನ್ನು ಮರು ಜೋಡಿಸುತ್ತಾ, (ಇವತ್ತು ಸಾವಿರಕ್ಕೂ ಮಿಗಿಲು ರೈತರು ಸತ್ತಿದ್ದಾರಲ್ಲ ಅದನ್ನೊಮ್ಮೆಯಾದರೂ ಸ್ಪೇಶಲ್ ಬುಲೆಟಿನ್ ಮಾಡಿದ್ದೀರಾ..?)ಎಲ್ಲೆಲ್ಲಿ ಜನರಿಗೆ ತೊಂದರೆ ಎನ್ನುವುದಕ್ಕೆ ಏನೇಲ್ಲಾ ಕಾರಣಗಳಿವೆ ಎನ್ನುವುದನ್ನು ಬೀಡದೆ ಪಟ್ಟಿ ಮಾಡಿ ಇದಕ್ಕಾಗೆ ಕ್ಯಾಮೆರಾದಲ್ಲಿ ಮುಖ ತೋರಿಸಲು ಕಾಯ್ದಿರುವ ಆಸೆಬುರಕ ಜನರ ಕೈಯ್ಯಲ್ಲಿ ಹಲುಬಿಸುತ್ತಾ, ಸರಾಸರಿ ಸಮಯವನ್ನೆಲ್ಲಾ ಇದೊಂದು ಸಾಮಾಜಿಕ ಪಿಡುಗಾಗುತ್ತಿದೆಯಾ ಎನ್ನುವಂತೆ ವರ್ತಿಸುತ್ತಿವೆಯಲ್ಲಾ, ಈ ಚಾನೆಲ್‍ಗಳವರೆಲ್ಲಾ ಈ ದೇಶದ ನಾಗರಿಕರಾ ಇಲ್ಲ ಪ್ರೊಗ್ರಾಂ ಮಾಡಲು ಕರೆಸಿದ ಪರದೇಶದ ಪ್ರಜೆಗಳಾ..?
ತೀರ ತಾವೇ ಪ್ರಪಂಚದ ಸರ್ವ ಮಾಹಿತಿಯ ಭಂಡಾರದ ಅಂತಿಮ ವಿಶ್ಲೇಷಕರು ಎಂದು ಚರ್ಚೆಯ ಮಧ್ಯೆ ಮಧ್ಯೆ ಊಳಿಡುತ್ತಾ ಕೂಡುವ ಚಾನೆಲ್ ಸುದ್ದಿ ಸಂಪಾದಕರುಗಳೇ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿಕೊಂಡಿರುವ ನನಗೇ, ಈ ಪರಿಸ್ಥಿತಿಯ ಕಾರಣ ಭವಿಷ್ಯತ್ತಿನಲ್ಲಿ ಗಣನೀಯವಾಗಿ ಬೆಲೆ ಇಳಿಕೆ ಸೇರಿದಂತೆ ದೇಶಾದ್ಯಂತದ ಆರ್ಥಿಕ ಪ್ರಗತಿ ದುಪ್ಪಟ್ಟಾಗುತ್ತದೆ ಎನ್ನುವ ಸಣ್ಣ ಅಂದಾಜು ದಕ್ಕುವಾಗ ಮೇಧಾವಿಗಳಿಗೆಲ್ಲಾ ಇದರ ಭವಿಷ್ಯದ ಅರಿವು ಖಂಡಿತಕ್ಕೂ ಸಿಕ್ಕಲೇಬೇಕಲ್ಲ. ಜತೆಗೆ ಸುಪ್ರಿಂಕೋರ್ಟು ಇಂತಹ ಬ್ಯಾನ್‍ಗಳಿಗೆಲ್ಲಾ ತಡೆಯಾಜ್ಞೆ ಸಾಧ್ಯವೇ ಇಲ್ಲ ಎನ್ನುವುದನ್ನೂ ಸುದ್ದಿ ಮಾಡದ ನೀವೆಲ್ಲಾ ಯಾವ ರೀತಿಯ ಸಮಾಜದ ಜನತೆಗೆ ಸುದ್ದಿ ಕೊಡಬಲ್ಲಿರಿ..?
(ಇವತ್ತು ಮನೆಯಲ್ಲೊಂದು ಮದುವೆ ನಡೆಯುತ್ತಿದೆ ಎಂದಾದರೆ ಅನಾಮತ್ತು ತಿಂಗಳಗಟ್ಟಲೆಯಿಂದ ತಯಾರಿ ಮಾಡಿಕೊಳ್ಳುವ ಯಜಮಾನ ಮತ್ತವನ ಅವನ ಕುಟುಂಬ ಕೊನೆಯ ಕ್ಷಣದಲ್ಲಿ ಏನೋ ಮರೆತು ಬಿಟ್ಟಿರುತ್ತದೆ. ಮಂಟಪದಲ್ಯಾರೊ ಅದಕ್ಕಾಗಿ ಓಡಾಡುತ್ತಾರೆ. ಕೊನೆಗೆಲ್ಲಾ ಸಾಂಗವಾಗುತ್ತದೆ. ಒಂದು ಟೂರ್ ಅಂತಾ ಹೊರಟವರು ಅಯ್ಯೋ ಅದನ್ನು ಮರೆತು ಬಂದೆನೆನ್ನುವುದೇ ಸಾಮಾನ್ಯ ಆಗಿರುವಾಗ ನೂರೂ ಚಿಲ್ರೆ ಕೋಟಿ ಜನರನ್ನು ಸಂಭಾಳಿಸುವ ನಾಯಕ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಧೃಢ ನಿರ್ಧಾರ ಕೈಗೊಂಡು ಅಲ್ಲಲ್ಲಿ ಕೊಂಚ ಕ್ಯೂ ನಿಲ್ಲಿಸಿದಾಗಲೂ ಅದು ಕಾಮನ್ ಮ್ಯಾನ್‍ಗೆ ಹಬ್ಬದಂತೆ ಅನ್ನಿಸುತ್ತಿದ್ದಾಗಲೂ, ಏನು ಪ್ರಕಟಿಸಬೇಕು ಪ್ರಕಟಿಸಬಾರದು ಎನ್ನುವ ಪರಿಜ್ಞಾನ ಮಾಧ್ಯಮಗಳಿಗಿರಲೇ ಬೇಕಿತ್ತು.. )
ಕನಿಷ್ಟ ಸುಪ್ರಿಂಕೋರ್ಟಿನ ಆದೇಶ ಮತ್ತು ಆಶಯವನ್ನಾದರೂ ರಿಪೀಟೆಡ್ಲಿ ತೋರಿಸಿ ಕಾನೂನಿನ ದೃಷ್ಟಿಯಲ್ಲೂ ಇದು ಸರಿಯಾದ ನಿರ್ಧರವೇ ಎನ್ನುವ ಧನಾತ್ಮಕ ಧೋರಣೆ ಬಿತ್ತರಿಸಿ ಸಾಲಿನಲ್ಲಿ ನಿಲ್ಲುತ್ತಿರುವವರ ಮತ್ತು ಕ್ರಮೇಣ ಸಹನೆ ಕಳೆದುಕೊಳ್ಳುವ ಸಿಡುಕರ ಮನಸ್ಸಿಗೆ ಮುದ ಒದಗಿಸಬಹುದಿತ್ತು. ಆದರೇನು ಅಂಥಾ ಯಾವ ಪ್ರಯತ್ನಗಳೂ ಮೀಡಿಯಾಗಳಿಂದ ಆಗುತ್ತಲೇ ಇಲ್ಲ. ನಟಿಯೊಬ್ಬಳ ರಂಕುಗಳಿಗೆ ದಿನವಿಡೀ ಸಮಯ ಕೊಡುವ ಚಾನೆಲ್ಲುಗಳು, ದೇಶದ ಏಳ್ಗೆಗಾಗಿ ದಿನದಲ್ಲಿ ನಾಲ್ಕಾರು ಗಂಟೆ ಧನಾತ್ಮಕ ಕಾರ್ಯಕ್ರಮ ಮಾಡಲು ಸಮಯ ಇರಲಿಲ್ಲವಾ..?
ಇತ್ತ ಪತ್ರಿಕೆಗಳೂ ನಂ.1 ಎನ್ನುವ ಪೈಪೋಟಿಗೆ ಬೀಳುತ್ತಿರುವುದನ್ನು ಹೊರತಾಗಿಸಿದರೆ ಯಾವ ರೀತಿಯಲ್ಲೂ ಧನಾತ್ಮಕ ವರದಿಯ ಮುಖಗಳು ಎದ್ದು ಕಾಣುತ್ತಲೇ ಇಲ್ಲ. ಅದರಲ್ಲೂ ಇವತ್ತು ಐದಾರು ಲಕ್ಷದ ಆಸುಪಾಸಿನಲ್ಲಿರುವ ಪ್ರಸಾರಕ್ಕೆ ಕನಿಷ್ಟ ಇಬ್ಬರಂತೆ ಹಿಡಿದರೂ ಹತ್ತು ಲಕ್ಷ ಓದುಗರಿರುತ್ತಾರೆ. ಹಾಗಿದ್ದಾಗ ದಿನವೂ “… ಬ್ಯಾಂಕಿನ್ ಮುಂದೆ ತಪ್ಪದ ಸಾಲು, ಖಾಲಿಯಾದ ಏ.ಟಿ.ಎಮ್., ಎಲ್ಲೊ ದೊರೆಯುತ್ತಿಲ್ಲ ಹಣ, ಜನ ಸಾಮಾನ್ಯರಿಗೆ ಬರೆ-ಧನಿಕರಿಗೆ ಹೊರೆ, ಸುಧಾರಣೆಯೊಲ್ಲದ ಆರ್ಥಿಕ ತುರ್ತು ಪರಿಸ್ಥಿತಿ, ಎನ್ನುವಂತಹ ಟ್ಯಾಗ್‍ಲೈನಿನ ಬರಹವನ್ನೇ ಪ್ರಕಟಿಸುತ್ತಿದ್ದರೆ ಇದಕ್ಕೆ ಕಾಯ್ದು ಕೂತ ಪೇಸ್‍ಬುಕ್ಕಿನ ಪೇಡ್ ಗಿರಾಕಿಗಳು ಲಬಕ್ಕನೆ ಅದನ್ನು ಶೇರ್ ಮಾಡಿ ಅಯ್ಯಯ್ಯೊ ಹೀಗೆಗೆ ಪತ್ರಿಕೆಗಳೆಲ್ಲಾ ಬರ್ದಿದಾವೆ, ಜನ ಸಿಕ್ಕಾಪಟ್ಟೆ ಸಮಸ್ಯೆಯಲ್ಲಿದ್ದಾರೆ ನಿಮಗೂ ಹೌದೆನ್ನಿಸುವುದಾದರೆ ಶೇರ್, ಲೈಕ್ ಮಾಡಿ ಎನ್ನುತ್ತಾ ಹುಯಿಲಿಗೆ ಬೀಳುತ್ತಿದ್ದಾರೆ. ಅತ್ತ ಅವನ್ಯಾರೋ ಕೃತಕ ಸರದಿ ಸೃಷ್ಟಿಸಲು ಸೂಚನೆ ಕೊಡುತ್ತಿದ್ದುದನ್ನು ಫೇಸ್‍ಬುಕ್ಕಿನಲ್ಲಿ ನೇರವಾಗಿ ಬಯಲು ಮಾಡುತ್ತಿದ್ದರೂ ಅದನ್ನೆಲ್ಲಾ ಸುದ್ದಿಯಾಗಿಸಬೇಕೆನ್ನುವ ಯಾವ ತಪನೆಯೂ ಸುದ್ದಿ ಮನೆಯಲ್ಲಿ ಕಂಡು ಬರುತ್ತಲೇ ಇಲ್ಲ.
ಕೇವಲ ಡಿಪಾಸಿಟ್ ಮಾಡಿ, ಇರುವ ಹಣವನ್ನಷ್ಟೆ ಬಳಸಿಕೊಳ್ಳಿ, ಎರಡೂ ರೀತಿಯ ವ್ಯವಹಾರಕ್ಕೆ ಬ್ಯಾಂಕುಗಳೂ ಬೇರೆಬೇರೆ ಸರದಿ ಸಾಲು ನಿಲ್ಲಿಸಿ ವ್ಯವಹರಿಸಲಿ, ಹೇಗೆಲ್ಲಾ ಸುಲಭಕ್ಕೆ ಕಡಿಮೆ ಸಮಯದಲ್ಲಿ ಹಣ ಪಡೆಯಬಹುದು, ಬ್ಯಾಂಕೂ ಕೂಡಾ ಹೇಗೆ ಇದಕ್ಕೆ ಸುಲಭವಾಗಿ ಸಹಕರಿಸಬೇಕು, ಹೆಚ್ಚಿನ ಕೌಂಟರ್ ತೆಗೆಯಲು ಹೇಗೆ ನಾಗರಿಕರೂ ಸಹಕರಿಸಬೇಕು, ಹೀಗೆ ಹಲವು ರೀತಿಯಲ್ಲಿ ಜನರನ್ನೂ ಬ್ಯಾಂಕ್ ಸಿಬ್ಬಂದಿಯನ್ನೂ ಪುಸಲಾಯಿಸಬಹುದಿತ್ತು. ಸುಲಭವಾಗಿ ದಿನಗಳನ್ನು ದಾಟಿಸಬಹುದಿತ್ತು. ಆದರೆ ಇವತ್ತಿಗೂ ಎಲ್ಲಾ ಪತ್ರಿಕೆ ನ್ಯೂಸ್ ಚಾನೆಲ್‍ನ ಪ್ರಮುಖ ಸುದ್ದಿಗಳೇನಿವೆ ನೋಡಿ..? ಬರೀ ಸರತಿ ಸಾಲಿನ ಚಿತ್ರಗಳು ಬಿಟ್ಟರೆ ಚಿಲ್ಲರೆ ಅಭಾವ. ಏನು ಬರೀ ಸ್ಮಶಾನ ಭಾವಗಳೇ ನಿಮ್ಮ ಸುದ್ದಿಯಾಗಬೇಕೇ..?
ತೀರ ಬೆರಳೆಣಿಕೆಯ ನಗರ ಹೊರತು ಪಡಿಸಿದರೆ ಎಲ್ಲೂ ಅನಾಮತ್ತು ಎರಡ್ಮೂರು ಗಂಟೆ ಕ್ಯೂ ನಿಂತಿದ್ದ ಉದಾ ಇಲ್ಲವೇ ಇಲ್ಲ. ಅದರಲ್ಲೂ ಬೆಂಗಳೂರು,ಮೈಸೂರು,ಹುಬ್ಬಳ್ಳಿ,ಮಂಗಳೂರು ಮಾತ್ರವೇನಾ ಕರ್ನಾಟಕ ಎಂದರೆ ಎನ್ನುವುದನ್ನು ವಾಹಿನಿಗಳು ಮೊದಲು ಪ್ರಶ್ನಿಸಿಕೊಳ್ಳಬೇಕು. ನೆನಪಿರಲಿ ಅದು ಮುದ್ರಣ ಮಾಧ್ಯಮವೋ, ಚಾನೆಲ್‍ನ ಪ್ರಸಾರವೋ ಎರಡೂ ಕಡೆಯಲ್ಲಿ ಸಂಪಾದಕನ ತೀರ್ಮಾನ ಅಂತಿಮವಾಗುತ್ತದಾದರೂ, ಸ್ವಂತದ ಅಭಿಪ್ರಾಯಕ್ಕೀಗ ಸಮಾಜಿಕ ಜಾಲಾತಾಣಗಳಿಸುವಾಗ ಯಾವ ದೊಣೆನಾಯಕನ ಅಪ್ಪಣೆ ಜರೂರತ್ತು ಬೇಕಿಲ್ಲ. ಉತ್ತಮ ಬರಹವಾಗಿದ್ದರೆ ನೋಡುನೋಡುತ್ತಿದ್ದಂತೆ ನೂರಾರು ಜನ ಶೇರ್ ಮಾಡುತ್ತಾರೆ. ಯಾವನಿಗಿದೆ ಇವತ್ತು ಸಂಪಾದಕನ ಮುಲಾಜು..?
ಹಾಗೇಯೆ ಪ್ರತಿಯೊಬ್ಬ ಪರ – ವಿರೋಧ ಅಬ್ಬರದ ಚರ್ಚೆ ಜತೆಗೆ ಪೇಡ್ ಪುಟನಿರ್ವಾಹಕರ ಅಕ್ಷರ ಹಾದರತನವೂ ಇಂತಹ ಸಂದರ್ಭದಲ್ಲಿ ಬೇತ್ತಲಾಗುತ್ತಲೇ ಇರುತ್ತದೆ. ಕಾರಣ ಎನೇ ಇವತ್ತು ಪ್ರಧಾನಿ ಕಾರ್ಯಾಲಯ ಕೆಲಸ ಮಾಡುತ್ತಿದೆ ಮತ್ತದು ಈ ದೇಶದ ಪ್ರಗತಿಗೆ ಕಟಿಬದ್ಧವಾಗಿದೆ ಎನ್ನುವುದನ್ನು ಪಬ್ಲಿಕಾಗಿ ಮಾಡುತ್ತಿದ್ದರೂ ಅದು ಗಂಜಿ ಗಿರಾಕಿಗಳಿಗೆ ಪಥ್ಯವಾಗುವುದಿಲ್ಲ ಅವರೆಂದಿಗೂ ಗಂಜಲದಲ್ಲಿ ಬಿದ್ದ ನೊಣಗಳಂತೆ ಪತರುಗುಟ್ಟುತ್ತಲೇ ಇರುತ್ತಾರೆ. ಅದರೆ ಇದನ್ನೆಲ್ಲಾ ತಹಬಂದಿಗೆ ತರಬಹುದಾಗಿದ್ದ ಮಾಧ್ಯಮಗಳಿಗೇನಾಗಿದೆ ಧಾಡಿ…?
ಬರೀ ಟಿ.ಆರ್.ಪಿ. ಮಾತ್ರ ನಿಮ್ಮ ಉಸಿರಾ..? ನೆನಪಿರಲಿ. ಪುಟಗೋಸಿ ನೂರೈವತ್ತು ಕ್ಯಾಮೆರಾ ಪಾಯಿಂಟುಗಳು ಜನಾಭಿಪ್ರಾಯವನ್ನು ನಿರ್ಧರಿಸಲಾರವು. ಹಾಗಾಗೇ ಅಧ್ಬುತ ಪ್ರೊಗ್ರಾಂ ಆಗಬಹುದೆಂದು ಏಣಿಸಿದ ಕಾನ್ಸೆಪ್ಟುಗಳು ಅಷ್ಟೆ ಬೇಗ ಮಕಾಡೆ ಮಲಗಿದ ಉದಾ. ಗಳು ಎದುರಿಗಿವೆ.
ಏನೇ ಇರಲಿ. ಜನರು ಪತ್ರಿಕೆ ಮತ್ತು ಮಾಧ್ಯಮದಲ್ಲಿ ಬರುವುದನ್ನು ಸುಲಭಕ್ಕೆ ನಂಬುವ ಪರಿಸ್ಥಿತಿ ಇರುವಾಗ ಕನಿಷ್ಟ ಜರೂರತ್ತಿನ ಸಮಯದಲ್ಲಾದರೂ ಅತಿಮಾನುಷ, ಅತಿ ರಂಜನೀಯ ಸುದ್ದಿಗಳ ಹಸಿವು ಕಡಿಮೆ ಮಾಡಿಕೊಳ್ಳಿ. ಆಫ್ಟರ್‍ಆಲ್ ನೀವೆಲ್ಲರೂ ಈ ದೇಶಕಾಯುವ ಅಥವಾ ನಿರ್ಧಾರ ರೂಪಿಸುವಂತಹ ಎರಡೂ ಆಯಕಟ್ಟಿನ ಜಾಗದಲ್ಲೂ ಇಲ್ಲ. ನೀವೇನಿದ್ದರೂ ಬರೀ ಚಿತ್ರಣ ಕೊಡುವ ಮಂದಿ. ಈಗಾಗಲೇ ಸಾರ್ವಜನಿಕರಿಗೆ ನಿಮ್ಮ ಹಣೆಬರಹ ಗೊತ್ತಾಗಿರುವಾಗ ಅದಕ್ಕೆಲ್ಲಾ ಅತ ತಲೆ ಕೆಡಿಸಿಕೊಳ್ಳಲಾರ. ಆದರೆ ಇದ್ದರೂ ಇರಬಹುದೇನೋ ನಮ್ಮ ಹುಡುಗ ಟಿ.ವಿ.ಲಿ ಹೇಳ್ತಿದಾನೆ ಎಂದು ನಂಬಿಕೂಡುವ ಇನ್ನೊಂದು ವರ್ಗವಿದೆಯಲ್ಲ ಅಂತವರ ನಂಬುಗೆಯ ಬುನಾದಿಯನ್ನೇ ಹಳ್ಳ ಹಿಡಿಸಿಬಿಡುತ್ತೀರಲ್ಲಾ ನಿಮಗೆಲ್ಲಾ ನಿಜಾಯಿತಿ ಮತ್ತು ಆತ್ಮಸಾಕ್ಷಿ ಎನ್ನುವ ಪದಗಳ ಅರ್ಥವನ್ನು ಇನ್ನೊಮ್ಮೆ ವಿವರಿಸಬೇಕಿದೆಯಾ..?
ಇದಕ್ಕೆಲ್ಲಾ ವಿವರಣೆ ಇದೆಯಾ..?
ಜನರು ಹಿಂದೆಯೂ ಆಧಾರ ಕಾರ್ಡಿಗೆ, ರೇಶನ್ನಿಗೆ, ಪಂಚಾಯತ್ ಸೌಲಭ್ಯಕ್ಕೆ, ಪಹಣಿ ಪತ್ರಕ್ಕೆ, ರೇಲ್ವೆ ಟಿಕೇಟ್ಟಿಗೆ (ತತ್ಕಾಲಗಾಗಿ ಬೆಳಿಗ್ಗೆ ಐದಕ್ಕೆ ಸರದಿ ಹಿಡಿಯುವವರೂ ಇವತ್ತಿಗೂ ಇದ್ದಾರೆ) ಹೀಗೆ ಸತತವಾಗಿ ಬದುಕಿನಲ್ಲಿ ಆಗಾಗ ಸರದಿ ಕಾಯುತ್ತಲೇ ಇದ್ದಾರೆ. ನೆನಪಿರಲಿ ವೈದ್ಯರೊಬ್ಬರ ಭೇಟಿಗೆ ದಿನವೂ ಕನಿಷ್ಟ ನಾಲ್ಕೈದು ಗಂಟೆಯೂ ಕಾಯಬೇಕಾಗುತ್ತದೆ. ಮುಂದೂ ಕಾಯುತ್ತಾರೆ ಇದರಲ್ಲಿ ಡೌಟೇ ಇಲ್ಲ. ಆದರೆ ಇದಕ್ಕೆ ಮಾತ್ರ ಯಾಕೆ ಈ ಹುಯಿಲು..? ಅದೂ ಯಾವ ವರ್ಗದಲ್ಲೂ ಅಸಮಾಧಾನ ಎನ್ನುವುದು ಕಂಡುಬಾರದಿದ್ದಾಗಲೂ..?
ಪ್ರಧಾನಿ ನೋಟ್ ಬ್ಯಾನ್ ಎನ್ನುತ್ತಿದ್ದಂತೆ ಪತ್ರಕರ್ತನೊಬ್ಬ ನಿಮ್ಮ ನೋಟೆಲ್ಲ ಬರೀ ಪೇಪರು ಎನ್ನುತ್ತಾನೆ. ಅದರರ್ಥ ಅದರ ಬೆಲೆ ಕಳೆದು ಹೋಯಿತು ಎಂದೇ..? 50 ದಿನ ಕಾಲಾವಕಾಶ ಇದ್ದರೂ ನಾಳೆನೆ ಬದಲಾವಣೆ ಬೇಕೆನ್ನುವಂತೆ ಪಬ್ಲಿಕ್ಕನ್ನು ರೊಚ್ಚಿಗೆಬ್ಬಿಸಿದ್ದೇ ಇಂತಹ ಸುದ್ದಿಗಳು.
ಸರತಿ ಸಾಲಿನಲ್ಲಿ ನಿಂತು ಸತ್ತದ್ದೇ ದೊಡ್ಡ ಸುದ್ದಿ ಮಾಡಿದ ಮಾಧ್ಯಮಗಳು, ನಂತರದಲ್ಲಿ ಅದಾಗಿದ್ದು ಸಹಜ ಸಾವು ಎನ್ನುವ ಫ್ಯಾಕ್ಟ್‍ನ್ನು ಬಿತ್ತರಿಸುವುದೇ ಇಲ್ಲವಲ್ಲ. ಏನಾಗಿದೆ ನಿಮಗೆ ಧಾಡಿ..? ಪಿಂಕ್ ನೋಟಿನ ಕಲರ್ರು ತುಟಿಗೆ ಸಖತ್ತಾಗಿದೆ ಎನ್ನುವುದೇ ಪ್ರಮುಖ ಸುದ್ದಿಯಾ ಅಥವಾ ನೋಟು ಒರಿಜಿನಲ್, ಅದರಲ್ಲಿ ಮೋದಿ ಆಪ್ ಮೂಲಕ ಒರಿಜಿನಾಲಿಟಿ ನೋಡಬಹುದು ಎನ್ನುವುದನ್ನು ಪ್ರಮುಖ ಸರಕಾಗಿಸಬೇಕಾ..?
ಈ ಬ್ಯಾನ್ ಮೂಲಕ ದೊಡ್ಡ ಮಟ್ಟದ ಭ್ರಷ್ಠಾಚಾರ ತಡೆಯಲಾಗುತ್ತಿದೆ ಇದಕ್ಕಾಗಿ ನಾವು ಏನು ಮಾಡಬೇಕು..? ದೇಶದ ಕೊನೆಯ ವ್ಯಕ್ತಿಯವರೆಗೂ ಇದರ ಪ್ರಕ್ರಿಯೆ ಹೇಗೆ ತಲುಪಬೇಕು ಮತ್ತು ಇದನ್ನು ಸರಿದೂಗಿಸಲು ಬ್ಯಾಂಕು ಹೇಗೆ ತತಕ್ಷಣಕ್ಕೆ ಚುರುಕಾಗಿ ಕೆಲಸ ನಿರ್ವಹಿಸದರೆ ಇನ್ನೂ ಅನುಕೂಲವಾದೀತು ಎನ್ನುವುದನ್ನು ಚಿಂತಿಸಿ ತರ್ಕಿಸಿ ಜನರ ಬಳಿಗೆ ಮಾಹಿತಿ ಕೊಡಬೇಕಿದ್ದವರೆಲ್ಲರೂ, ಇಲ್ಲ ಇದನ್ನು ಮೊದಲೇ ಹೇಳಿ ಮಾಡಬೇಕಿತ್ತು, ಈ ನಿರ್ಧಾರ ಹಿಂಪಡೆಯಬೇಕಿತ್ತು, ನೋಟು ಬ್ಯಾನ್ ಮಾಡುವುದನ್ನು ಕೂಡಲೇ ಹಿಂದಕ್ಕೆ ಪಡೆಯದಿದ್ದರೆ ನಾವು ಹೋರಾಟ ಮಾಡುತ್ತೇವೆ ಇವುಗಳೂ ಸುದ್ದಿಗಳೇನ್ರಿ..? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಇಷ್ಠು ಋಣಾತ್ಮಕ ಧೋರಣೆ ಅನುಸರಿಸಿದರೆ ಪ್ರಜಾ ಪ್ರಭುತ್ವಕ್ಕೆ ಧಕ್ಕೆಯಾಗುವುದು ಅತ್ಲಾಗೆ ಇರಲಿ, ನಾಲ್ಕನೆಯ ಅಂಗದ ಸ್ಥಾನವನ್ನೂ ಕಳೆದುಕೊಳ್ಳಬೇಕಾದೀತು ಎಚ್ಚರ.