ಅಂಕಣ

‘ಸ್ವಚ್ಛ ಭಾರತ’ ಕೇವಲ ಕಲ್ಪನೆಯಾಗಿ ಉಳಿಯದಿರಲಿ

ಮೊನ್ನೆ ದೀಪಾವಳಿ ಹಬ್ಬದ ಒಂದು ದಿನ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಮೈಸೂರಿನ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ.ಎಲ್ಲಿ ನೋಡಿದರೂ ಪಟಾಕಿಯ ಕಸ.ಪೌರ ಕಾರ್ಮಿಕಳೊಬ್ಬಳು ಆಗಲೇ ಬಂದು ಆ ಪಟಾಕಿಯ ಕಸವನ್ನೆಲ್ಲ ಬಾಚಿ ಗುಡಿಸುವುದರಲ್ಲಿ ನಿರತಳಾಗಿದ್ದಳು.ಅವಳು ಯಾವತ್ತೂ ಆರು ಗಂಟೆಗೆಲ್ಲ ರಸ್ತೆ ಗುಡಿಸಲು ಬಂದವಳೇ ಅಲ್ಲ.ಏನಿದ್ದರೂ ಬೆಳಿಗ್ಗೆ ಏಳುವರೆಯ ನಂತರ ಬಂದು ರಸ್ತೆಯಲ್ಲಿ ಕಸ ಗುಡಿಸುತ್ತಾಳೆ.ಆದರೆ ಎಲ್ಲರೂ ದೀಪಾವಳಿಯನ್ನು ಖುಷಿಯಿಂದ ಆಚರಿಸುತ್ತ ಆರಾಮವಾಗಿ ಇದ್ದ ಸಮಯದಲ್ಲಿ ಅವಳು ಎಂದಿಗಿಂತ ಬೇಗ ತನ್ನ ಕರ್ತವ್ಯಕ್ಕೆ ಹಾಜರಾಗಿದ್ದಳು.ಕಾರಣವಿಷ್ಟೇ.ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದುಕೊಂಡಿರುವ ಪಟಾಕಿಯ ಕಸವನ್ನು ಸ್ವಚ್ಛ ಮಾಡುವುದಕ್ಕೆ ಅವಳಿಗೆ ಎಂದಿಗಿಂತ ಹೆಚ್ಚಿನ ಸಮಯ ಬೇಕಾಗಿತ್ತು.ಪಟಾಕಿ ಹೊಡೆದು ಕಸ ಹಾಕುವವರು ಯಾರೋ.ಕ್ಲೀನ್ ಮಾಡುವವರು ಮಾತ್ರ ಪೌರ ಕಾರ್ಮಿಕರು.ಆದರೂ ಅವರಿಗೆ ವಿಧಿಯಿಲ್ಲ,ಅವರು ಮಾಡಲೇಬೇಕು.

ಪಟಾಕಿ ಹೊಡೆಯಬೇಡಿ.ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸುಮಾರು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ ಯಾವ ವರ್ಷವೂ ಪಟಾಕಿಯಿಲ್ಲದೇ ದೀಪಾವಳಿ ನಡೆಯುವುದೇ ಇಲ್ಲ.ಇರಲಿ.ಅವರವರ ದುಡ್ಡಿನಲ್ಲಿ ಅವರು ಪಟಾಕಿ ತಂದು ಸುಟ್ಟು ಹಾಳು ಮಾಡುತ್ತಾರೆ.ಆದರೆ ಆ ಪಟಾಕಿಯಿಂದ ಉತ್ಪತ್ತಿಯಾಗುವ ಕಾಗದದ ಕಸವನ್ನು ಸ್ವಚ್ಛ ಮಾಡುವವರು ಯಾರು?ಹಳ್ಳಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಉದ್ಭವವಾಗುವುದಿಲ್ಲ.ಏಕೆಂದರೆ ತಮ್ಮ ಮನೆಯ ಅಂಗಳದಲ್ಲಿ ಪಟಾಕಿ ಹೊಡೆದು ಕೊನೆಗೆ ಅವರೇ ಅಂಗಳವನ್ನು ಗುಡಿಸಿ ಕಸವನ್ನು ವಿಲೇವಾರಿ ಮಾಡುತ್ತಾರೆ.ನಿಜಕ್ಕೂ ಕಸದ ಸಮಸ್ಯೆ ಇರುವುದು ನಗರಗಳಲ್ಲಿ.ಮನೆಯಲ್ಲಿ ವಿಶಾಲವಾದ ಅಂಗಳ ಇಲ್ಲದವರು ಮನೆಯ ಮುಂದಿನ ರಸ್ತೆಯಲ್ಲಿ ಪಟಾಕಿ ಹೊಡೆಯುತ್ತಾರೆ.ದಾರಿಹೋಕರಿಗೆ,ವಾಹನಗಳಲ್ಲಿ ಹೋಗುವವರಿಗೆ ತೊಂದರೆಯಾದರೂ ಲೆಕ್ಕಿಸದೇ ಪಟಾಕಿ ಸಿಡಿಸಿ ಖುಷಿ ಪಡುತ್ತಾರೆ.ಬೆಳಿಗ್ಗೆ ನೋಡುವಾಗ ಮನೆಯ ಮುಂದಿನ ರಸ್ತೆಯಲ್ಲಿ ರಾಶಿ ರಾಶಿ ಪಟಾಕಿಯ ಕಸ ಬಿದ್ದಿರುತ್ತದೆ.ಪಟಾಕಿ ಹೊಡೆದು ಖುಷಿ ಪಡುವವರು ಅದರ ಕಸವನ್ನು ಸ್ವಚ್ಛ ಮಾಡುವ ಗೋಜಿಗೆ ಹೋಗುವುದಿಲ್ಲ.ಅದನ್ನು ಸ್ವಚ್ಛ ಮಾಡುವುದೇನಿದ್ದರೂ ಪೌರ ಕಾರ್ಮಿಕರು.ನಗರಗಳಲ್ಲಿ ಮನೆ ಮುಂದಿನ ರಸ್ತೆಯಲ್ಲಿ ಪಟಾಕಿ  ಹೊಡೆಯುವವರು ಅದರಿಂದ ಉಂಟಾಗುವ ಕಸವನ್ನು ಸ್ವಚ್ಛಗೊಳಿಸಲೂ ಬದ್ಧರಾಗಿರಬೇಕು.ಪೌರ ಕಾರ್ಮಿಕರು ಇದ್ದಾರಲ್ಲ,ಅವರು ಸ್ವಚ್ಛ ಮಾಡಲಿ, ನಾವೇಕೆ ಪಟಾಕಿಯ ಕಸ ಗುಡಿಸಬೇಕು ಎಂಬ ಮನೋಭಾವ ಹೊಂದಬಾರದು.ಮಾಮೂಲಿ ದಿನಗಳಲ್ಲಿ ಯಾವಾಗಲೂ ಉತ್ಪತ್ತಿಯಾಗುವ ಕಸವನ್ನು ಗುಡಿಸಲು ಪೌರ ಕಾರ್ಮಿಕರು ಬರುತ್ತಾರೆ ಸರಿ.ಆದರೆ ರಸ್ತೆಯಲ್ಲಿ ಯಾರೋ ಪಟಾಕಿ ಹೊಡೆದು ಹಾಕಿದ ರಾಶಿಗಟ್ಟಲೆ ಕಸವನ್ನು ಬಾಚುವ ಕರ್ಮ ಅವರಿಗೇಕೆ?

2014 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಕೆಂಪುಕೋಟೆಯಲ್ಲಿ ಮಾತಾಡುತ್ತ ಪ್ರಧಾನಿ ಮೋದಿ ಸ್ವಚ್ಛ ಭಾರತ ಆಂದೋಲನಕ್ಕಾಗಿ ಕರೆ ಕೊಟ್ಟಿದ್ದರು.2019 ರಲ್ಲಿ ಮಹಾತ್ಮ ಗಾಂಧಿಯವರ ನೂರೈವತ್ತನೆ ಜಯಂತಿಯ ವೇಳೆ ಬಾಪೂಜಿ ಕಂಡ ಸ್ವಚ್ಛ ಭಾರತದ ಕನಸು ನನಸಾಗಬೇಕು.ಹಾಗಾಗಿ ನೀವೆಲ್ಲರೂ ನೀವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಡಲು ವಿಶೇಷ ಗಮನ ಹರಿಸಬೇಕು ಅಂದಿದ್ದರು.ಅಲ್ಲದೇ ಗಾಂಧಿ ಜಯಂತಿಯ ದಿನ ದಿಲ್ಲಿಯ ಬೀದಿಗಳಲ್ಲಿ ಸ್ವತಃ ತಾವೇ ಪೊರಕೆ ಹಿಡಿದು ಗುಡಿಸುವ ಮೂಲಕ ನಮಗೆಲ್ಲ ಮೋದಿ ಮಾದರಿಯಾಗಿದ್ದರು.ಆದರೆ ಪ್ರಧಾನಿ ಹೇಳಿದ ಮಾತನ್ನು ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ನಾವು ಬಿಟ್ಟು ಬಿಟ್ಟೆವು.ಗಾಂಧಿ ಜಯಂತಿಯ ದಿನ ನೆಪ ಮಾತ್ರಕ್ಕೆ ಪೊರಕೆ ಹಿಡಿದು ಬೀದಿ ಗುಡಿಸಿ ಫೋಟೋ ತೆಗೆಸಿಕೊಂಡೆವು.ಕೆಲವು ದಿನಗಳ ಕಾಲ ಯಾವುದೋ ಸಂಘಟನೆಗಳು ನಡೆಸಿದ ಸ್ವಚ್ಛ ಭಾರತ ಆಂದೋಲನದಲ್ಲಿ ಭಾಗವಹಿಸಿದೆವು ಅಷ್ಟೆ.

ಸ್ವಚ್ಛತೆ ಎಂಬುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ ಅಂತ ನಾವು ಅರ್ಥ ಮಾಡಿಕೊಳ್ಳಲೇ ಇಲ್ಲ.ಸ್ವಚ್ಛ ಭಾರತ ಆಂದೋಲನ ಮುಗಿದ ಕೆಲ ದಿನಗಳಲ್ಲೇ ಎಂದಿನಂತೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲಲಾರಂಭಿಸಿದೆವು.ಕಂಡ ಕಂಡಲ್ಲಿ ಉಗುಳಿದೆವು.ರಸ್ತೆ ಬದಿ ನಿಂತು ಮೂತ್ರ ವಿಸರ್ಜನೆಯನ್ನೂ ಮುಂದುವರೆಸಿದೆವು.ಆದರೆ ಪ್ರಧಾನಿ ಮೋದಿ ಹೇಳಿದ ಮಾತನ್ನು ನಾವು ತುಂಬಾ ಸರಳವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಿದ್ದರೂ ಸಾಕಿತ್ತು.ನಮ್ಮ ಮನೆ ಮುಂದಿನ ರಸ್ತೆಯಲ್ಲಿ ನಾವು ಕಸ ಚೆಲ್ಲುವುದಿಲ್ಲ,ಬೀದಿಯಲ್ಲಿ ಉಗುಳುವುದಿಲ್ಲ.ಮುಖ್ಯ ರಸ್ತೆಯಲ್ಲೂ ಎಲ್ಲೂ ಕಸ ಚೆಲ್ಲುವುದಿಲ್ಲ ಅಂತ ಪ್ರತಿಯೊಬ್ಬರೂ ನಿರ್ಧರಿಸಿ ಅದನ್ನು ಕಾರ್ಯರೂಪಕ್ಕೆ ತಂದರೆ ಸಾಕಿತ್ತು.ಆಗ ಯಾವುದೋ ಸಂಘಟನೆಗಳು ಬಂದು ಸ್ವಚ್ಛ ಭಾರತ ಆಂದೋಲನ ಮಾಡುವ ಅವಶ್ಯಕತೆಯೂ ಇರುತ್ತಿರಲಿಲ್ಲ.ಮೋದಿ ಒಬ್ಬರು ಸ್ವಚ್ಛ ಭಾರತಕ್ಕೆ ಕರೆ ಕೊಟ್ಟ ಕೂಡಲೇ ಭಾರತ ಸ್ವಚ್ಛವಾಗುವುದಿಲ್ಲ.ಸಾಮಾನ್ಯ ಪ್ರಜೆಗಳಾದ ನಾವು ಅದನ್ನು ಸರಿಯಾದ ರೀತಿಯಲ್ಲಿ ವೈಯಕ್ತಿಕ ಮಟ್ಟದಲ್ಲಿ ಕಾರ್ಯರೂಪಕ್ಕೆ ತಂದರಷ್ಟೇ ಯಶಸ್ವಿಯಾಗುತ್ತದೆ.

ನಾನು ಹೈಸ್ಕೂಲಿನಲ್ಲಿ ಇದ್ದಾಗ ನಮ್ಮ ಶಾಲೆಯ ಮೈದಾನದಲ್ಲಿ ಯಾವುದೋ ಸಂಘಟನೆಯವರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟವೊಂದು ನಡೆದಿತ್ತು.ಪಂದ್ಯಾಟ ಮುಗಿದ ಮರುದಿನ ಮೈದಾನದ ತುಂಬೆಲ್ಲ ಕಸ ತುಂಬಿಕೊಂಡಿತ್ತು.ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಆ ಸಂಘಟನೆಯವರಿಗೆ ಬಂದು ಮೈದಾನವನ್ನು ಸ್ವಚ್ಛ ಮಾಡಲು ತಿಳಿಸಿದರು.ಆದರೆ ಆ ಸಂಘಟನೆಯವರು ಬರಲೇ ಇಲ್ಲ.ಕೊನೆಗೆ ನಾವು ವಿದ್ಯಾರ್ಥಿಗಳೇ ಸೇರಿಕೊಂಡು ಅವರಿಗೆ ಬಯ್ಯುತ್ತ ನಮ್ಮ ಆಟದ ಮೈದಾನವನ್ನು ಸ್ವಚ್ಛ ಮಾಡಿದೆವು.ಇದನ್ನು ಏಕೆ ಹೇಳಿದೆ ಅಂದರೆ ಯಾವುದಾದರೂ ಒಂದು ಸಾರ್ವಜನಿಕ ಸ್ಥಳದಲ್ಲಿ ಸಮಾರಂಭ ಏನಾದರೂ ನಡೆದರೆ ಕಾರ್ಯಕ್ರಮ ಮುಗಿದ ಮೇಲೆ ಸ್ಥಳವನ್ನು ಸ್ವಚ್ಛ ಮಾಡಿ ಕಸವನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನೂ ಕಾರ್ಯಕ್ರಮದ ಆಯೋಜಕರು ಹೊರಬೇಕು.ಅದಕ್ಕಾಗಿ ಪೌರ ಕಾರ್ಮಿಕರನ್ನು ಅವಲಂಬಿಸಬಾರದು.ನಗರಾಡಳಿತ,ಜಿಲ್ಲಾಡಳಿತವೂ ಅಷ್ಟೇ.ಸಾರ್ವಜನಿಕ ಸ್ಥಳದಲ್ಲಿ ದೊಡ್ದದೊಂದು ಸಮಾರಂಭ ನಡೆಸಲು ಅನುಮತಿ ಕೊಡುವಾಗಲೇ ಕಾರ್ಯಕ್ರಮ ಮುಗಿದ ಮೇಲೆ ಸ್ಥಳವನ್ನು ಸ್ವಚ್ಛ ಮಾಡಲೇಬೇಕು ಎಂದು ಆಯೋಜಕರಿಗೆ ಸ್ಪಷ್ಟವಾಗಿ ತಿಳಿಸಬೇಕು.ಒಂದು ವೇಳೆ ಕಾರ್ಯಕ್ರಮದ ಸಂಘಟಕರು ಹಾಗೆ ನಡೆದುಕೊಳ್ಳದಿದ್ದರೆ ಅವರಿಗೆ ತಕ್ಕ ಶಿಕ್ಷೆಯನ್ನೂ ವಿಧಿಸಬೇಕು.ಇದೆಲ್ಲ ತುಂಬಾ ಸಣ್ಣ ವಿಷಯ ಅಂತ ನಿಮಗೆ ಅನ್ನಿಸಬಹುದು.ಆದರೆ ಇಂಥ ಸಣ್ಣ ಸಣ್ಣ ಸಂಗತಿಗಳಲ್ಲಿ ನಾವು ತೋರುವ ಆಸಕ್ತಿ,ಜಾಣತನ ಇವುಗಳೇ ಸ್ವಚ್ಛ ಭಾರತದಂಥ ದೊಡ್ದ ಯೋಜನೆಯನ್ನು ಯಶಸ್ವಿಗೊಳಿಸುವಂಥವು.

ಸಿಂಗಾಪುರ,ಹಾಂಕಾಂಗ್ ಮುಂತಾದ ದೇಶಗಳು ಸ್ವಚ್ಛತೆಗಾಗಿ ಏಕೆ ಹೆಸರುವಾಸಿಯಾಗಿವೆ ಅಂದರೆ ಅಲ್ಲಿನ ಜನರು ವೈಯಕ್ತಿಕ ಮಟ್ಟದಲ್ಲಿ ತಮ್ಮ ತಮ್ಮ ಪರಿಸರವನ್ನು ಶುಚಿಯಾಗಿಡುವಲ್ಲಿ ಯಶಸ್ವಿಯಾಗಿದ್ದಾರೆ.ಅದಕ್ಕಾಗಿ ಅವರು ಸರ್ಕಾರವನ್ನಾಗಲಿ ಅದು ಮಾಡುವ ಯಾವುದೇ ಯೋಜನೆಯನ್ನಾಗಲೀ ಅವಲಂಬಿಸಿಲ್ಲ.ನಮ್ಮಲ್ಲಿ ಸ್ವಚ್ಛ ಭಾರತ ಎಂಬುದು ಒಂದು ಯೋಜನೆಯಲ್ಲ.ಅದೊಂದು ಅಭಿಯಾನ.ಯೋಜನೆಯೊಂದು ಯಶಸ್ವಿಯಾಗಬೇಕಾದರೆ ಸರ್ಕಾರ ಪ್ರಮುಖ ಪಾತ್ರ ವಹಿಸಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕು.ಆದರೆ ಯಾವುದೇ ಒಂದು ಅಭಿಯಾನವನ್ನು ಯಶಸ್ವಿಯಾಗಿಸುವುದು ಪ್ರಜೆಗಳಾದ ನಮ್ಮ ಹೊಣೆ.ಅದರಲ್ಲೂ ಇದು ಏನೂ ದುಡ್ಡು ಖರ್ಚಿನ ತಾಪತ್ರಯವಿಲ್ಲದೇ ಯಶಸ್ವಿಯಾಗುವಂಥ ಅಭಿಯಾನ.ನಾವು ಇದಕ್ಕೆ ಸರಿಯಾಗಿ ಕೈಜೋಡಿಸಿ ನಮ್ಮ ದೇಶವನ್ನು ಸ್ವಚ್ಛವಾಗಿಡಬೇಕು ಅಷ್ಟೇ.

ಸ್ವಚ್ಛ ಭಾರತದ ಬಗ್ಗೆ ಇಷ್ಟೆಲ್ಲ ಬರೆಯುತ್ತಿರುವ ನಾನು ಸ್ವಚ್ಛತೆಯ ಕುರಿತು ಸರಿಯಾಗಿ ಕೆಲಸ ಮಾಡುತ್ತಿದ್ದೇನೆಯೇ ಅಂತ ನೀವು ಕೇಳಬಹುದು.ಹೌದು,ಲೇಖನ ಬರೆಯುವುದು ಸುಲಭ.ಆದರೆ ಕೆಲಸ ಮಾಡುವುದು ಬರೆದಷ್ಟು ಸುಲಭವಲ್ಲ ಅಂತ ನನಗೂ ಗೊತ್ತಿದೆ.ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಬಿರುದು ಗಳಿಸಿರುವ ಮೈಸೂರಿನಲ್ಲಿರುವ ನಾನು ರಸ್ತೆಯಲ್ಲಿ ಯಾವುದೇ ಕಸ ಎಸೆಯುವುದಿಲ್ಲ.ಸಿಕ್ಕ ಸಿಕ್ಕಲ್ಲಿ ಉಗುಳುವುದಿಲ್ಲ.ಮನೆ ಮುಂದೆ ಕಸ ಚೆಲ್ಲದೇ ನಗರಪಾಲಿಕೆಯವರು ಡಂಪಿಂಗ್ ಯಾರ್ಡ್ ಎಲ್ಲಿ ನಿರ್ಮಿಸಿದ್ದಾರೋ ಅಲ್ಲಿಗೇ ಕಸವನ್ನು ತೆಗೆದುಕೊಂಡು ಹೋಗಿ ಹಾಕುತ್ತೇನೆ.ದೀಪಾವಳಿಯಲ್ಲಿ ನಾನು ಪಟಾಕಿ ಹೊಡೆಯುವುದಿಲ್ಲವಾದ್ದರಿಂದ ಅದರಿಂದ ಕಸ ಉಂಟಾಗುವ ಸಾಧ್ಯತೆಯೇ ಇಲ್ಲ.ನಮ್ಮ ದೌರ್ಭಾಗ್ಯ ಏನೆಂದರೆ ಭಾರತೀಯರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲೂ ಮೋದಿಯೇ ಬರಬೇಕಾಯಿತು.ಅಲ್ಲಿಯವರೆಗೂ ಭಾರತವನ್ನು ಸ್ವಚ್ಛ,ಸುಂದರ ದೇಶವನ್ನಾಗಿಸುವುದು ಪ್ರಜೆಗಳ ಹೊಣೆ ಅಂತ ನಮಗೆ ಅನ್ನಿಸಿರಲೇ ಇಲ್ಲ.ಈಗಲೂ ಕಾಲ ಮಿಂಚಿಲ್ಲ.ನಮ್ಮ ಪರಿಸರವನ್ನು ಸ್ವಚ್ಛವಾಗಿಡೋಣ.ಸ್ವಚ್ಛ ಭಾರತ ಅಭಿಯಾನ ಕೇವಲ ಕಲ್ಪನೆಯಾಗಿ ಉಳಿಯದಂತೆ ನೋಡಿಕೊಳ್ಳೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!