ಅವಳೊಬ್ಬಳು ಮಾಯಾ ಸುಂದರಿ. ಅವಳೆಂದರೆ ಎಲ್ಲರಿಗೂ ಹಿತ. ತಾನು ಎಲ್ಲೇ ಹೋದರೂ, ಹೋದಲ್ಲೆಲ್ಲ ಎಲ್ಲರನ್ನೂ ಖುಷಿಪಡಿಸುವ ಲವಲವಿಕೆಯ ಅವ್ಯಕ್ತ ರೂಪ ಆಕೆ. ಸುತ್ತಮುತ್ತ ಓಡಾಡುತ್ತಿದ್ದರೂ ಕೈಗೆ ಸಿಗದವಳು ಅವಳು. ಅದಕ್ಕೆ ಅವಳನ್ನ ಕರೆದದ್ದು ಮಾಯಾ ಸುಂದರಿ ಎಂದು. ಯಾರವಳು ಎನ್ನುತ್ತಿದ್ದೀರಾ? ಅವಳ ಹೆಸರೇ ‘ತಂಗಾಳಿ’.
ತಂಗಾಳಿ ಎಂಬ ಸುಂದರಿ ಸೋಕಿದಾಗೆಲ್ಲ ಮನದ ತೋಟದಲ್ಲಿ ಸದ್ದಿಲ್ಲದೆ ಅರಳಿ ನಿಂತ ವಿಧವಿಧದ ಭಾವದ ಹೂಗಳು ಅತ್ತಿಂದಿತ್ತ ಓಲಾಡುತ್ತಾ ಹೊಸ ಹೊಸ ಭಾವತರಂಗಗಳನ್ನು ಸೃಷ್ಟಿಸುತ್ತವೆ. ಎರಡೂ ತೋಳುಗಳನ್ನ ಚಾಚಿ “ತಪ್ಪಿ ನನ್ನ ಅಪ್ಪಿಕೊ ಒಮ್ಮೆ…ಹಾಗೆ ಸುಮ್ಮನೆ…” ಎನ್ನುತ್ತಾ ನಿಂತು ಬಿಡಬೇಕು ಅನಿಸುತ್ತದೆ. ಎಲ್ಲೋ ದೂರದ ಬೆಟ್ಟವೊಂದನ್ನ ದಿಟ್ಟಿಸುತ್ತಾ ನನ್ನದೇ ಒಂದು ಹೊಸ ಕಲ್ಪನೆಯ ಲೋಕಕ್ಕೆ ರೆಕ್ಕೆಗಳೇ ಇಲ್ಲದೆ ಹಾರುವ ಅಸೆಯಾಗುತ್ತದೆ. ಇರುಳಿನ ಆಗಸದಲ್ಲಿ ಕಾಣುವ ಚುಕ್ಕಿಗಳ ಬಳಿ ತಂಗಾಳಿಯ ಜೊತೆ ಹಾಗೇ ಒಮ್ಮೆ ತೇಲಿ ಹೋಗಿ ಒಂದಿಷ್ಟು ಕಷ್ಟ-ಸುಖ ಮಾತನಾಡಿ ಬರುವ ಅನಿಸುತ್ತದೆ. ಈ ತಂಗಾಳಿ ಎಲ್ಲೊ ಇದ್ದ ಚಂದ್ರನನ್ನ ತನ್ನ ಪ್ರೇಮಗಾಳಿಯಿಂದ ತೇಲಿಸಿ ನಮ್ಮ ಮನೆಯಂಗಳಕ್ಕೆ ತರುವ ರಾಯಭಾರಿಯೇನೋ ಅನಿಸುತ್ತದೆ ನನಗೆ. ಹಾಗೆಯೇ ಇನ್ನೆಲ್ಲೋ ಓಡುತ್ತಿದ್ದ ಮೋಡವನ್ನ ಕರೆತಂದು ತುಂತುರು ಹನಿಸಿ, ಎದೆಯ ನೋವಿನ ಧಗೆ ತಣಿಸಿ ಸಾಂತ್ವನ ಹೇಳುತ್ತಿದೆಯೇನೋ ಎಂದು ಭಾಸವಾಗುತ್ತದೆ.
ಈ ಮಾಯಾ ಸುಂದರಿ ಸುತ್ತಮುತ್ತ ಸುಳಿದಾಡುತ್ತಿರುವಾಗ ಸಮಯ ಒಂದಷ್ಟು ಹೊತ್ತು ಚಲಿಸದೆ ನಿಂತು ಬಿಡಬಾರದೇ ಅನಿಸದಿರದು. ನಮ್ಮನ್ನು ಪ್ರೀತಿಸುವ ಹೃದಯಗಳ ಜೊತೆ ಬದುಕಿನ ಎಲ್ಲ ತಲೆಬಿಸಿಗಳನ್ನು ಮರೆತು ಸುಮ್ಮನೆ ಮಾತನಾಡುತ್ತಾ ಕುಳಿತು ಬಿಡುವ ಬಯಕೆಯಾಗುತ್ತದೆ. ನೆನಪುಗಳನ್ನೆಲ್ಲ ಒಂದೆಡೆ ರಾಶಿಹಾಕಿ ಒಂದೊಂದಾಗಿ ನೆನಪಿಸಿಕೊಳ್ಳುವ ಆಸೆಯಾಗುತ್ತದೆ. ತಂಗಾಳಿಯ ತಂಪಿನ ಹಿತಾನುಭವಕ್ಕೆ ಕೂತಲ್ಲಿಯೇ ಸಣ್ಣದೊಂದು ಜೊಂಪು ಹತ್ತಿ, ಆ ಮುದ್ದಾದ ನಿದ್ದೆಯಲ್ಲಿ ಅರಳುವ ಕನವರಿಕೆಗಳ ಹಿಂದಿನ ಅವ್ಯಕ್ತ ಕಥೆಗಳಿಗೆ ನಾಮಕರಣ ಮಾಡುವಾಸೆಯಾಗುತ್ತದೆ. ಗೆಳತಿಯ ಜೊತೆ ಏಕಾಂತದಲ್ಲಿ ಮಾತನಾಡುತ್ತಾ ಕುಳಿತಿರುವಾಗ ಪದೆ ಪದೆ ನಮ್ಮಿಬ್ಬರ ನಡುವೆ ಅವಳ ಮುಂಗುರಳನ್ನು ತಂದು ಕಾಟ ಕೊಡುವ ತಂಗಾಳಿಯ ಮೇಲೆ ಒಂದಿಷ್ಟು ಮುನಿಸಾದರೂ, ಆ ಮುಂಗುರಳನ್ನು ಸರಿಸುವಾಗ ಗೆಳತಿಯು ಇನ್ನೂ ಮೋಹಕವಾಗಿ ಕಂಡು ಆ ಕಾರಣಕ್ಕೆ ಈ ಮಾಯಾ ಸುಂದರಿಗೊಂದು ಧನ್ಯವಾದ ಹೇಳುವ ಮನಸಾಗುತ್ತದೆ. ಲೇಖನಿ ಹಿಡಿದು ಏನನ್ನೋ ಬರೆಯಹೊರಟರೆ, ಹೊಸ ಹೊಸ ಪದಗಳನ್ನು ತನ್ನ ಸೆರಗಿನಲ್ಲಿರಿಸಿಕೊಂಡು ತಂದು ಹಾಳೆಗಳ ಮೇಲೆ ಸುರಿಯುತ್ತಿಹಳೋ ಎಂಬಂತೆ ಭಾಸವಾಗುತ್ತದೆ. ಎಂದೋ ಒಮ್ಮೆ ಮನಸ್ಸು ಅತೀವ ನೋವಿನಿಂದ ತೊಳಲಾಡುತ್ತಿರುವಾಗ, ಒಂಟಿತನದ ಬೇಗೆಯಲ್ಲಿ ಬೇಯುತ್ತಿರುವಾಗ; ಮನಸಿನ ಅವ್ಯಕ್ತ ಆಮಂತ್ರಣವನ್ನು ಮನ್ನಿಸಿ ಭಾವಗಳಿಗೊಂದು ಆತ್ಮೀಯ ಆಲಿಂಗನವನ್ನಿತ್ತು ಸಂತೈಸುವ ಈ ಅಘೋಶಿತ ಸ್ನೇಹಿತೆಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ಗೆಳೆಯರೇ, ಇನ್ನೊಂದು ವಿಚಾರ ಗೊತ್ತಿದೆಯೇ? ಈ ಮಾಯಾ ಸುಂದರಿಯದ್ದು ಕೂಡ ಒಂದು ‘ಪ್ರೇಮ್ ಕಹಾನಿ’ ಇದೆಯಂತೆ. ನಭೋಮಂಡಲದಲ್ಲೆಲ್ಲಾ ಇದೇ ಸುದ್ದಿಯಂತೆ. ತಾರಾ ಸಮೂಹದಲ್ಲಿ ಗುಲ್ಲೆದ್ದಿದೆಯಂತೆ. ಆ ಹಾಲ್ಗೆನ್ನೆಯ ಸುಂದರಾಂಗ ಶಶಿಗೂ, ಈ ಮಾಯಾ ಸುಂದರಿ ತಂಗಾಳಿಗೂ ಒಲವಾಗಿದೆಯಂತೆ. ಇವಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಾ ಆ ಹಾಲ್ಗೆನ್ನೆಯ ಪೋರನ ಕೆನ್ನೆ ಸವರುವುದೇ ಕೆಲಸವಂತೆ. ಇನ್ನು ಅವನೋ “ಗಾಳಿಯೋ ಗಾಳಿಯೋ…ಆಹಾ ಪ್ರೇಮ ಗಾಳಿಯೋ…ಗಾಳಿಗೂ ಮೈಯಿಗೂ ಆಹಾ ರಾಸಲೀಲೆಯೋ…” ಎಂದು ಹಂಸಲೇಖರ ಹಾಡು ಹೇಳುತ್ತಾ ನುಲಿಯುತ್ತಿರುತ್ತಾನಂತೆ. ಇದು ಹೀಗೆ ಮುಂದುವರಿದರೆ “ಪೂರ್ಣ ಚಂದಿರ ರಜಾ ಹಾಕಿದ ಪ್ರೀತಿಯ ಬಲೆಯಲಿ ಬಿದ್ದ ಕ್ಷಣ…” ಎಂದು ಹಾಡುವ ಹಾಗಾದರೂ ಆಗಬಹುದೇನೋ.
ಅದೇನೇ ಇರಲಿ, ತಂಗಾಳಿ ಪ್ರೀತಿಯ ರಾಯಭಾರಿ ಎನ್ನವುದಂತೂ ಸತ್ಯ. ಆಕೆ ಸುಳಿದಾಡಿದಲ್ಲೆಲ್ಲ ಮನಸುಗಳು ತಂಪಾಗುತ್ತವೆ, ಎಲ್ಲೋ ಮೂಲೆಯಲ್ಲಿರುವ ಒಂದಿಷ್ಟು ಮುನಿಸು ಕರಗುತ್ತದೆ. ಒಂದಿಷ್ಟು ಮಂದಹಾಸಗಳು ಮೆಲ್ಲ ಅರಳುತ್ತವೆ. ಅದೆಷ್ಟೋ ಎದೆಯ ಕದಗಳು ತೆರೆಯುತ್ತವೆ. ಇನ್ನೆಷ್ಟೋ ನೋವುಗಳು ನಮ್ಮನ್ನು ತೊರೆಯುತ್ತವೆ. ಮತ್ತೆಷ್ಟೋ ಕನಸುಗಳ ಮಳೆ ಸುರಿಯುತ್ತದೆ.
ಇಷ್ಟೆಲ್ಲ ಖುಷಿ ಕೊಡುವ ಈ ಆತ್ಮೀಯ ಸ್ನೇಹಿತೆ ಆದಷ್ಟು ಸನಿಹವೇ ಇರಲಿ, ಪದೆ ಪದೆ ನಮ್ಮ ಭೇಟಿಯಾಗಲಿ, ಕೇವಲ ತಲೆ’ಬಿಸಿ’ಗಳಲ್ಲೇ ಸಾಗುತ್ತಿರುವ ಬದುಕು ಒಂದಿಷ್ಟು ನೆಮ್ಮದಿಯ ತಂಗಾಳಿಗೆ ತೆರೆದುಕೊಳ್ಳಲಿ ಎಂಬೊಂದು ಪುಟ್ಟ ಬಯಕೆ ನನ್ನದು. ಇಂದಿನ ಈ ಯಾಂತ್ರಿಕ ಬದುಕಿನ ವಿಪರ್ಯಾಸ ಏನೆಂದರೆ, ಹಿಂದೆಲ್ಲ ಕರೆದಾಗಲೆಲ್ಲ ಬರುವಷ್ಟು ಹತ್ತಿರವಿದ್ದ ಈ ಅಘೋಶಿತ ಸ್ನೇಹಿತೆಯ ಬೆಲೆ ಅರಿಯದೆ; ಅದೇನೋ ಆಧುನಿಕತೆ, ನಗರೀಕರಣ ಎನ್ನುತ್ತಾ ವಿಧವಿಧವಾಗಿ ದೂರ ತಳ್ಳಿ, ಈಗ ನಾವೇ ತಂದುಕೊಂಡ ಅವಸ್ಥೆಗೆ ನಮ್ಮನ್ನು ನಾವೇ ಬೈಯ್ಯಲೂ ಆಗದೆ ನಾಲ್ಕು ಗೋಡೆಗಳ ನಡುವೆ ಕುಳಿತು ಅಸಹಾಯಕರಾಗಿ ಬೊಬ್ಬಿಡುತ್ತಿರುವುದು ಏನೆಂದು ಗೊತ್ತೇ? – “ಹೇ ಎ. ಸಿ. ಹಾಕಿ ಮಾರ್ರೆ”