“ಗಿರಿ.. ಸುಮ್ಮನೆ ಬೈಕ್ ರೈಡ್ ಅಂತಾ ಬೇಡಪ್ಪಾ… ನೋಡೊಕೆ ಯಾವ್ದಾದ್ರೂ ಜಾಗ ಇರ್ಬೇಕು.. ವ್ಯೂ ಪಾಯಿಂಟ್ ರೀತಿದು.. ಬೈಕ್’ನಲ್ಲಿ ಹೋದ ಸುಸ್ತೆಲ್ಲ ಹೋಗ್ಬಿಡಬೇಕು.. ಅಂಥಾ ಜಾಗ ಹತ್ತಿರದಲ್ಲಿ ಯಾವ್ದಿದೆ ಅಂತಾ ವಿಚಾರ ಮಾಡು” ಎಂದ ಶಶಿಧರ. ಮೂರು ದಿನ ಸತತ ರಜೆಯಿದ್ದ ಕಾರಣ ಮೋಟಾರ್ ಸೈಕಲ್ ಪ್ರವಾಸದ ವಿಚಾರ ಮಾಡ್ತಾ ಇದ್ದರು… ಸ್ವಲ್ಪ ವಿಚಾರ ಮಾಡಿದ ಗಿರಿ, “ಒಂದು ಜಾಗ ಇದೆ.. ಬರೋವಾಗ ರಾತ್ರಿ ಆಗಬಹುದು.. ಆದ್ರೆ ತುಂಬ ಸುಂದರವಾದ ಜಾಗ.. ಬಂಗಾಡಿ ಅಂತ.. ಬೆಳ್ತಂಗಡಿಯಿಂದ ಒಳಗಡೆ ಹೋಗ್ಬೇಕು.. ಪಶ್ಚಿಮ ಘಟ್ಟದ ಬುಡ.. ಒಳ್ಳೆ ಮೋಡ ಮುಸುಕಿರುತ್ತೆ, ಚನ್ನಾಗಿ ಕಾಣತ್ತೆ.. ಆಗಬಹುದಾ..??” ಎಂದ. ಬಂಗಾಡಿ.. ಎಲ್ಲೋ ಕೇಳಿದ ಊರಿದು ಅಂತನಿಸಿತು ನನಗೆ.. ಮರುಕ್ಷಣವೇ ನೆನಪಾಗಿತ್ತು.. ಶಿವರಾಮ ಕಾರಂತರ ಚಿಗುರಿದ ಕನಸು ಕಾದಂಬರಿಯಲ್ಲಿ ಬರೊ ಊರು ಅದು. ಅದೆಷ್ಟು ಬಾರಿ ಓದಿಲ್ಲ ಅದನ್ನ.. ಅದನ್ನ ಓದೊಕೆ ಕುಳಿತರೆ ಕೊನೆಯ ಅಕ್ಷರ ಮುಗಿಸುವ ತನಕ ಸಮಾಧಾನವಿಲ್ಲ.. ಪ್ರತೀ ಬಾರಿ ಓದುವಾಗಲೂ ಮೊದಲನೇ ಸಾರಿ ಓದುತ್ತಿರುವ ಅನುಭವವೇ.. ಮಾಮರವೆಲ್ಲೋ, ಕೋಗಿಲೆಯೆಲ್ಲೊ ಎಂಬಂತೆ ಎಲ್ಲಿಯೋ ದಿಲ್ಲಿಯ ಶಂಕರನಂತೆ, ವಂಶದ ಮೂಲ ಹುಡುಕಿಕೊಂಡು ಬಂಗಾಡಿಗೆ ಬಂದು ಅಲ್ಲಿ ಪಾಳುಬಿದ್ದ ಪೂರ್ವಿಕರ ಜಮೀನನ್ನು ಉಳುಮೆ ಮಾಡುವುದಂತೆ.. ಎತ್ತಣದಿಂದೆತ್ತ ಸಂಬಂಧ..?? ಒಟ್ಟಿನಲ್ಲಿ ಮನದಲ್ಲಿ ಮನೆ ಮಾಡಿದ್ದ ಕಲ್ಪನೆಯ ಬಂಗಾಡಿಗೆ ಹೋಗಿಬರೋಣ ಎಂದು ಗಿರಿ ಹೇಳಿದಾಗ ಬೇಡ ಎಂದು ಹೇಗೆ ಹೇಳೋದು..?? ನಾನಂತೂ ಹೂಗುಟ್ಟಿದೆ.. ಶಶಿ ಯಾಕೋ ಅನುಮಾನಿಸಿದಂತೆ ಕಂಡ.. ನನಗೋ ಬಂಗಾಡಿ ಹುಚ್ಚು ಹಿಡಿಸಿ ಬಿಟ್ಟಿತು.. ಆತನನ್ನೂ ನಾನೇ ಒಪ್ಪಿಸಿದ್ದೆ.. ಅಂತೂ ಇಂತೋ ಹೊರಡೋ ನಿಶ್ಚಯವಾದಾಗ ಸಮಯ ರಾತ್ರಿ 11:30..
ರಾತ್ರಿ ನನಗಂತೂ ನಿದ್ದೆಯಿಲ್ಲ.. ಬಂಗಾಡಿಯನ್ನು ನೋಡೊ ಆತುರವೋ ಏನೊ.. ಮುಂಜಾನೆ ಆರು ಗಂಟೆಯ ಹೊತ್ತಿಗೇ ಎದ್ದು ಸ್ನಾನ ಮಾಡಿ ಕುಳಿತಿದ್ದೆ.. ಶಶಿ ಮತ್ತು ಗಿರಿ ಎದ್ದು ಎಲ್ಲರೂ ಹೊರಡೊ ಹೊತ್ತಿಗೆ ಮುಂಜಾನೆ 8:30. ಉಡುಪಿಯಿಂದ ನೇರವಾಗಿ ಬೆಳ್ತಂಗಡಿ ಹೋಗೊ ಬದಲು ಪೆರ್ಡೂರು, ಹೆಬ್ರಿ, ಮುದ್ರಾಡಿಯ ದಾರಿಯಲ್ಲಿ ಕಾರ್ಕಳಕ್ಕೆ ಸೇರಿ ಅಲ್ಲಿಂದ ಬೆಳ್ತಂಗಡಿ ಹೋಗೊ ನಿರ್ಧಾರವಾಯ್ತು.. ಹೆಬ್ರಿ, ಮುದ್ರಾಡಿ ಎಲ್ಲವೂ ಪಶ್ಚಿಮ ಘಟ್ಟದ ಪಾದದಲ್ಲಿ ಬರುವ ಊರುಗಳು.. ಘಟ್ಟ ಹಸಿರು ಸೀರೆಯನ್ನು ಸುತ್ತಿ ಕಪ್ಪಂಚಿನ ಬಿಳಿ ಸೆರಗಿನಿಂದ ತನ್ನ ಮುಖವನ್ನು ಮುಚ್ಚಿಕೊಂಡಿದೆಯೇನೊ ಎಂಬಂತೆ ಗುಡ್ಡಗಳನ್ನು ಮೋಡ ಮುಚ್ಚಿರುತ್ತೆ.. ಅದನ್ನು ನೋಡೊ ಆನಂದವನ್ನು ಆ ತಂಪಿನಲ್ಲೇ ಅನುಭವಿಸಬೇಕು.. ಕಾರ್ಕಳದಿಂದ ನಾರಾವಿಗೆ ಬರುವ ಹೊತ್ತಿಗೆ ಅಗಸ್ಟ್ ತಿಂಗಳು ಮಳೆಗಾಲ ಎಂಬುದು ನೆನಪಾಗುವಂತಾಗಿತ್ತು.. ಜೋರು ಮಳೆ, ಬೀಸೋ ಗಾಳಿ, ತೊಯ್ದ ಕರಿಡಾಂಬರು ರಸ್ತೆ ಅಲ್ಲಲ್ಲಿ ನೀರು ತುಂಬಿದ ಹೊಂಡಗಳು, ಕೆಸರಿನ ಗಂಧ ಎಲ್ಲವೂ ನಾರಾವಿಯಲ್ಲಿ ಕಾಣೋ ಸಾಲು ಪರ್ವತದ ಸೌಂದರ್ಯಕ್ಕೆ ಸವಾಲೊಡ್ಡುತ್ತಿತ್ತು.. ಮಳೆಯ ಆರ್ಭಟಕ್ಕೆ ಫೊಟೊ ತೆಗೆಯಲಾಗದೇ ಬೇಸರದಿಂದ ಹೋಗುತ್ತಿದ್ದ ಗಿರಿ ಹೆಲ್ಮೇಟ್’ನ ಒಳಗಿನಿಂದಲೇ ಮಳೆಯನ್ನು ಶಪಿಸುತ್ತಿದ್ದ.. ಶಶಿ ಮಾತ್ರ ಚಳಿಗೆ ಹೆದರಿ ಟೀ ಬೇಕೇ ಬೇಕು ಎಂಬಂತೆ ಹೊಟೆಲಿಗಾಗಿ ಅತ್ತಿತ್ತ ನೋಡುತ್ತ ಬೈಕ್ ಬಿಡುತ್ತಿದ್ದ.. ನನಗೆ ಮಾತ್ರ ಬಂಗಾಡಿ ಇಷ್ಟು ಸುಂದರ ಸ್ವಾಗತವನ್ನು ಕೊಡುತ್ತಿದೆ ಅನ್ನಿಸುತ್ತಿತ್ತು…
ಬೆಳ್ತಂಗಡಿಗೆ ಬರುವ ಹೊತ್ತಿಗೆ ಮಧ್ಯಾಹ್ನ 2:30 ಹೊಟ್ಟೆ ಚುರ್ರೆನ್ನುತ್ತಿತ್ತು.. ದಾರಿಯ ಪಕ್ಕದಲ್ಲೇ ಇದ್ದ ಉಡುಪಿ ಹೋಟೆಲಿನಲ್ಲಿ ತಿಂಡಿ ಮತ್ತು ಕಾಫಿ ಆಯ್ತು.. ಎರಡು ಪರೋಟದ ಜೊತೆ ರುಚಿಯಾದ ಕಣಿಲೆಯ(ಬಿದಿರಿನ ಮೊಳಕೆ) ಕೂರ್ಮ ಹೊಟ್ಟೆ ತುಂಬಿಸಿ ಬಿಟ್ಟಿತ್ತು.. ಅಲ್ಲಿಂದ ಬಂಗಾಡಿಗೆ ಒಳ ತಿರುಗಬೇಕು. ಒಂದು ಹತ್ತು ಹದಿನೈದು ಕಿಲೋಮೀಟರ್ ಆಗಬಹುದು.. ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಗುಡ್ಡದ ಸಾಲುಗಳು, ಅದರ ಬುಡದಲ್ಲಿ ನಾಟಿ ಮಾಡಿ ಸುಮಾರು ಒಂದು ತಿಂಗಳಾದ ಗಿಳಿ ಹಸಿರು ಗದ್ದೆಗಳು, ಗುದ್ದಲಿ ಹಿಡಿದು ಕೆಲಸ ಮಾಡುತ್ತಿದ್ದ ಜನ, ಅಲ್ಲಲ್ಲಿ ಕಾಣೊ ಮನೆ, . ಯಾಕೊ ಉತ್ತರ ಕನ್ನಡದ ಒಂದು ಮೂಲೆಯಲ್ಲಿರುವ ನನ್ನೂರು ನೆನಪಾಗುತ್ತಿತ್ತು.. ಹೇಗೆ ಹದಿನೈದು ಕಿಲೋಮೀಟರ್ ಸವೆಸಿದೆವೊ ಏನೊ, ಬಂಗಾಡಿ ಬರಸೆಳೆದು ಅಪ್ಪಿತ್ತು.. ಕಾರಂತಜ್ಜ ಹುಟ್ಟಿಸಿದ ಶಂಕರ, ದತ್ತಣ್ಣ, ಶಾನುಬೋಗರು, ಮುತ್ತಣ್ಣ ಅನ್ನೊ ಕಾಲ್ಪನಿಕ ಪಾತ್ರದ ಗುಂಗಲ್ಲಿದ್ದ ನನಗೆ ಬಂಗಾಡಿ ಅದೇಕೊ ಆಪ್ತವಾಗುತ್ತಿತ್ತು.. ಸುತ್ತಲೂ ಗುಡ್ಡ, ರಸ್ತೆಯಂಚಲ್ಲಿ ಒಂದಷ್ಟು ಹಂಚಿನ ಮನೆಗಳು, ಊರ ನಡುವೆ ಒಂದು ದೇವಸ್ಥಾನ, ಮತ್ತೊಂದು ಸಹಕಾರಿ ಬ್ಯಾಂಕ್.. ಚಿಕ್ಕ ಊರು ಅನ್ನಿಸೋಕೆ ಅಷ್ಟು ಸಾಕು.. ಉಳಿದ ಮನೆಗಳೆಲ್ಲ ಒಳಗಿವೆ ಮತ್ತು ನಡೆದು ಹೋಗಬೇಕು ಎಂಬುದು ಹಳ್ಳಿಯ ಮೂಲದಿಂದ ಬಂದ ನನಗೆ ಅರ್ಥವಾಗಿತ್ತು.. ಮಳೆ ಕಡಿಮೆಯಾಗಿದ್ದು ಗಿರಿಗಂತೂ ಖುಷಿ, ಕ್ಯಾಮೆರಾ ತೆಗೆದು ಫೊಟೊ ತೆಗೆಯಲು ಪ್ರಾರಂಭಿಸಿದ್ದ..
ಗಿರಿಗೆ ನಿಸರ್ಗ ಅಪರೂಪ.. ಪೇಟೆಯ ಮೂಲದಿಂದ ಬಂದವನಿಗೆ ಹಸಿರಿನ ಆಕರ್ಷಣೆ ಸಹಜವೇ.. ರಸ್ತೆಯಂಚಿನ ಗದ್ದೆಗಳ ಫೊಟೊ ತೆಗೆಯುತ್ತಿದ್ದಾಗ ಅಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿ “ಸ್ವಾಮಿ.. ನೀವು ಪೇಪರಿನವರ”ಎಂದು ಕೂಗಿದ.. “ಅಲ್ಲ.. ನಮ್ಮದು ಉಡುಪಿ.. ನಿಮ್ಮೂರು ನೋಡಲು ಬಂದೆವು” ಎಂದ ಗಿರಿ. ಮಾತನಾಡುತ್ತಿದ್ದ ವ್ಯಕ್ತಿಯ ಮುಖ ಸ್ವಲ್ಪ ಸಣ್ಣದಾಯಿತು.. ಗುದ್ದಲಿಯನ್ನು ಹೆಗಲ ಮೇಲಿಟ್ಟುಕೊಂಡು ಹತ್ತಿರ ಬಂದವನೇ “ನಮ್ಮೂರಿಗೆ ಪ್ರವಾಸ ಮಾಡುಕೆ ಬರೋರು ಕಡಿಮೆ, ಪೇಪರಿನವರು ಬರ್ತಾ ಇರ್ತಾರೆ.. ನಂದು ಮೂರ್ನಾಲ್ಕು ಬಾರಿ ಪೇಪರಿನಲ್ಲಿ ಫೋಟೊ ಬಂದಿದೆ ಗೊತ್ತಾ..” ಎಂದ. ನನಗೆ ಮನದಲ್ಲೇ ನಗು.. ಪೇಪರಿನಲ್ಲಿ ಫೋಟೊ ಬಂದಾಗ ಆಗೊ ಖುಷಿಯ ಅರಿವಿದೆ ನನಗೆ.. ನಾನೂ ಚಿಕ್ಕವನಾಗಿದ್ದಾಗ ಯಾವುದೋ ಒಂದು ಜಾತಿಯ ಮಾವಿನ ಹಣ್ಣನ್ನು ಹಿಡಿದ ಫೋಟೊ ಪೇಪರಿನಲ್ಲಿ ಬಂದಿದ್ದು ಊರೆಲ್ಲ ಸುದ್ದಿಯಾಗಿದ್ದು ನೆನಪಾಯಿತು.. ಅವೆಲ್ಲ ನನಗೆ ದೊಡ್ಡ ದೊಡ್ಡ ಖುಷಿ ಕೊಟ್ಟ ಬಾಲ್ಯದ ಚಿಕ್ಕ ಚಿಕ್ಕ ನೆನಪುಗಳು.. ಆ ವ್ಯಕ್ತಿಯನ್ನೊಮ್ಮೆ ನೋಡಿದೆ.. ತುಂಬಾ ವರ್ಷಗಳಿಂದ ದುಡಿದು ದಣಿದ, ಸುಮಾರು ಅರವತ್ತೈದು ವರ್ಷದ ಇಳಿವಯಸ್ಸಿಗೆ ಹತ್ತಿರವಾದ ದೇಹವದು.. ನಾನು “ಈಗೆಲ್ಲಾ ಪೇಪರಿನಲ್ಲಿ ಸುಮ್ಮನೆ ಫೋಟೊ ಬರೊಲ್ಲ ತಾತ..” ಅಂತ ನಗುತ್ತ ಮಾತಿಗಿಳಿದೆ..
“ನಿಮ್ಮ ಹೆಸರೇನು..?” ಎಂದು ಪರಿಚಯ ಮಾಡಿಕೊಳ್ಳುವತ್ತ ಸಾಗಿದೆ.. “ನನ್ನೆಸುರು ಬಸವ, ಎಲ್ರೂ ನನ್ನ ಬಚ್ಚಜ್ಜ ಅಂತಾರೆ” ಅಂದ.. “ನಾನು ನಿನ್ನ ಹಾಗೇ ಕರಿತೇನೆ ಬಚ್ಚಜ್ಜ.. ಇಲ್ಲಿಗೆ ಪ್ರವಾಸ ಮಾಡೋಕೆ ಯಾರೂ ಬರಲ್ವಾ..?? ಪೇಪರಿನೋರು ಯಾಕೆ ಬರ್ತಾರೆ..??” ಅಂತೆಲ್ಲ ವಿಚಾರಿಸಿದೆ.. ನನಗೋ ಬಂಗಾಡಿಯ ಜನ ಜೀವನ ತಿಳಿಯೋ ಕುತೂಹಲ. ಜಗತ್ತು ಸುಂದರವಾಗಿ ಕಾಣೋದೇ ಅದರ ವೈವಿಧ್ಯತೆಯಿಂದ ಎಂದು ನಂಬಿದೋನು ನಾನು. ವಿವಿಧ ರೀತಿಯ ಭಾಷೆ, ಬದುಕು, ಆಚಾರ, ಆಹಾರಗಳು ಜಗತ್ತು ಸುಂದರವಾಗಿ ಕಾಣುವಂತೆ ಮಾಡಲು ಬೇಕಾದ ಸೌಂದರ್ಯ ಸಾಧನಗಳು, ಹಾಗಾಗಿ ಸ್ಥಬ್ದ ಚಿತ್ರಣದ ಜೊತೆಗೆ ಜೀವ ಚಿತ್ರಣವನ್ನು ತಿಳಿಯೊ ಕುತೂಹಲ ನನ್ನದಾಗಿತ್ತು.. ಬಚ್ಚಜ್ಜ ಅಂತ ಕರಿಬೋದು ಅನ್ನೋ ಅನುಮತಿಯೊಂದಿಗೆ ಮಾತು ಆರಂಭಿಸಿದ ಬಸವ “ಕರಿ ತಮ್ಮಾ.. ಅದರಲ್ಲೇನು.. ತಿರುಗಿ ನೋಡೋಕೊಂದು ಹೆಸರು ಬೇಕಷ್ಟೇ.. ಇಲ್ಲಿ ಪ್ರವಾಸಕ್ಕೆ ಬರೋರು ಕಡಿಮೆ.. ಈಗೊಂದು ವರ್ಷದ ಹಿಂದೆ ಒಂದಷ್ಟು ಹುಡುಗರು, ಹುಡುಗಿಯರು ಬಂದಿದ್ರು.. ಇಲ್ಲೇ ಹತ್ತಿರದಲ್ಲಿ ದಿಡುಪೆ ಅಂತ ಊರಿದೆ, ಅಲ್ಲಿ ಫಾರೆಸ್ಟ್ ಅಧಿಕಾರಿಗಳದ್ದು ಒಂದೆರಡು ಮನೆ ಇದೆ.. ಅಲ್ಲಿಗೆ ಬಂದಿದ್ರು.. ಅದೇನೊ ಬಿಳಿ ಪುಡಿಗಳನ್ನೆಲ್ಲಾ ತಂದಿದ್ರು.. ಪಾಪ ಅದನ್ನು ತಿಂದು ಇಬ್ರು ಸತ್ತೋದ್ರು.. ಅವತ್ತು ನಾನೇ ಅವರಿಗೆಲ್ಲ ದಾರಿ ತೋರಿಸಿದ್ದು.. ಅದರ ನಂತರ ಇಲ್ಲಿಗೆ ಬರೋರಿಗೆ ಅಲ್ಲಿ ಉಳಿಯಲು ಬಿಡಲ್ಲ.. ಅದರಿಂದ ಪ್ರವಾಸಕ್ಕೆ ಬರೋರು ಕಡಿಮೆ..” ಅಂದ. ಆತ ಡ್ರಗ್ಸ್ ಬಗ್ಗೆ ಹೇಳಿದ್ದು ಅನ್ನಿಸಿತು..
“ಇನ್ನು ಪೇಪರಿನೋರು ಆಗಾಗ ಬರ್ತಾರೆ.. ಇಲ್ಲೆಲ್ಲಾ ಕರೆಂಟಿನ ಸಮಸ್ಯೆ, ನದಿ ನೀರು ಜಮೀನಿಗೆ ಹತ್ತೋದು, ಕೆಲವೊಮ್ಮೆ ಕಾಡಾನೆಗಳು ಬರೋದು ಎಲ್ಲ ಜಾಸ್ತಿ.. ಆಗೆಲ್ಲ ಪೇಪರಿನೋರು ಬರ್ತಾರೆ.. ಈ ಜಮೀನಿಗೂ ಒಂದೆರಡು ಬಾರಿ ನೀರು ಹತ್ತಿತ್ತು, ಕಾಡಾನೆಗಳು ಬಂದಿತ್ತು ಆಗ ಪೇಪರಿನೋರು ಬಂದು ನನ್ನ ಫೋಟೊ ತೆಗೆದಿದ್ರು.. ನನಗೆ ಓದಲು ಗೊತ್ತಿಲ್ಲ.. ಇದು ನಮ್ಮ ಐತಾಳರ ಗದ್ದೆ.. ಅವರು ಫೋಟೊ ತೋರಿಸಿದ್ರು” ಎಂದ ಬಚ್ಚಜ್ಜ.. ಅದೇ ಸಮಯಕ್ಕೆ ಮತ್ತೊಂದು ಆಕೃತಿ ಏರು ಧ್ವನಿಯಲ್ಲಿ “ಏ ಬಸವ.. ಕೆಲಸ ಬಿಟ್ಟು ಅದ್ಯಾರ ಜೊತೆ ಮಾತಾಡ್ತಾ ಇದ್ಯೋ..” ಎಂದು ಕೂಗುತ್ತ, ನಮ್ಮತ್ತ ಬರುತ್ತಿತ್ತು.. “ಅವರೇ ನಮ್ಮ ಐತಾಳ್ರು.. ಈ ಜಮೀನು ಅವ್ರದ್ದೇ.. ಈ ಊರಲ್ಲಿ ಬಸವ ಅಂತ ಕರಿಯೋದು ಅವರೊಬ್ಬರೇ..” ಎಂದು ಅವರು ಹತ್ತಿರ ಬರುವ ಮೊದಲೇ ಪರಿಚಯ ಮಾಡಿಸಿ ಬಿಟ್ಟಿದ್ದ ಬಚ್ಚಜ್ಜ.. ಐತಾಳರು ಹತ್ತಿರ ಬರುವ ಹೊತ್ತಿಗೆ ಫೋಟೊ ತೆಗೆಯುತ್ತಿದ್ದ ಗಿರಿ ಮತ್ತು ಅದಕ್ಕೆ ಪೋಸು ಕೊಡ್ತಾ ಇದ್ದ ಶಶಿ ಹತ್ತಿರ ಬಂದರು. “ಇವರು ಉಡುಪಿಯಿಂದ ಬಂದವರಂತೆ, ಊರಿನ ಬಗ್ಗೆ ಹೇಳ್ತಾ ಇದ್ದೆ” ಎಂದ ಬಸವ. ಹತ್ತಿರ ಬಂದ ಐತಾಳರನ್ನು ದಿಟ್ಟಿಸಿದೆ, ಎಪ್ಪತ್ತು ದಾಟಿದ ದೇಹವಾದರೂ ಜಮೀನಿನಲ್ಲಿ ದುಡಿದ ಕಟ್ಟು ಮಸ್ತು ದೇಹ ಎಂದು ಹೇಳಬಹುದು.. ಮುಖದಲ್ಲಿ ಸೌಮ್ಯತೆಗೆ ಹಣೆಯಲ್ಲಿನ ಕುಂಕುಮ ಕೆಂಪಾಗಿ ಎದ್ದು ಕಾಣುತ್ತಿತ್ತು..
ಹತ್ತಿರ ಬಂದವರೇ “ನಿಮ್ಮದು ಉಡುಪಿಯೋ.. ಏನಿಲ್ಲಿ ಬಂದದ್ದು..?” ಎಂಬಂತೆ ವಿಚಾರಿಸಿದರು.. “ಏನಿಲ್ಲ.. ಸುಮ್ಮನೇ ಬಂದದ್ದು ಅಂಕಲ್.. ಮೂರು ದಿನ ರಜಾ ಇತ್ತು.. ಕೆಲಸ ಇಲ್ಲ, ಸುತ್ತೋಣ ಎಂದು ಬಂದ್ವಿ..” ಎಂದ ಶಶಿ. “ಬಂಗಾಡಿಯ ಬಗ್ಗೆ ಕೇಳಿದ್ದೆ.. ಊರು ನೋಡೋಣ ಅನ್ನಿಸ್ತು.. ಬೈಕಿನಲ್ಲಿ ಹಾಗೇ ಬಂದ್ವಿ” ಎಂದ ಗಿರಿ.. “ಏನು ಹುಡುಗರಪ್ಪಾ.. ಮನೆಯಲ್ಲಿ ಹೇಳಿ ಬಂದಿದ್ದೀರಾ..? ಹಾಗೆಲ್ಲ ಬೈಕ್’ನಲ್ಲಿ ತಿರುಗಬಾರ್ದು.. ಈ ಊರಲ್ಲಿ ಏನಿದೆ..? ಹಿಡಿದು ಹೊಯ್ಯೋ ಮಳೆ, ಒಂದಷ್ಟು ನುಸಿ, ಕಂಬಳಿ ಹೊದ್ದು ಮಲಗುವಷ್ಟು ಚಳಿ.. ಹಾಗೆ ಸುತ್ತಾಡಿದರೆ ನಮ್ಮಂಥ ನಾಲ್ಕಾರು ಮುದುಕರು ಸಿಕ್ಕಿಯಾರು..” ಎಂದರು ಐತಾಳರು.. ಅವರ ಇಷ್ಟವಾದ ಕಾಳಜಿಯ ಹಿಂದೆಯೇ, ಮನದಲ್ಲಿ ನೋವೊಂದು ಮನೆ ಮಾಡಿದೆ ಎಂಬುದು ನಾಲ್ಕಾರು ಮುದುಕರು ಸಿಕ್ಕಿಯಾರು ಎನ್ನುವಾಗ ಮರೆಯಲ್ಲಿ ಕಾಣುತ್ತಿತ್ತು.. ಅವರೇ ಮಾತು ಮುಂದುವರೆಸಿ “ಬನ್ನಿ ನಮ್ಮ ಮನೆಗೆ ಹೋಗುವ ಒಂಚೂರು ಕಾಫಿ ಕುಡಿದು ಹೋಗಿ ಸಂಜೆ ಆರು ಘಂಟೆಗೆ ಬಯಲಿಗೆ ದಾರಿ ತೋರಿಸ್ತೇನೆ.. ಆಗ ಗುಡ್ಡಗಳೆಲ್ಲ ಚಂದ ಕಾಣುತ್ತೆ” ಎಂದರು.. ನಮಗೆ ಸಂಕೋಚ, ಅವರದು ಒತ್ತಾಯ. ಕೊನೆಗೂ ಅವರ ಒತ್ತಾಯ ಗೆದ್ದು ಅವರ ಮನೆಗೆ ಹೊರಟೆವು..
ಸ್ವಲ್ಪ ಹಳೆಯ ಕಾಲದ ಹೆಂಚಿನ ಮನೆ ಅದು.. ಮನೆಯಲ್ಲಿ ಐತಾಳರ ಮಡದಿ ಮತ್ತು ಇಬ್ಬರು ಪುಟ್ಟ ಮಕ್ಕಳು ನಮ್ಮನ್ನು ಸ್ವಾಗತಿಸಿದರು.. ಕೈ ಕಾಲು ತೊಳೆದು ಪಡಸಾಲೆಗೆ ಬಂದು ಕೂತಾಗ ಸುಸ್ತೆಲ್ಲ ಹೋಯಿತೇನೊ ಅನ್ನಿಸಿತು.. ಕುಡಿಯೋಕೆ ಕಾಫಿ ಮಾಡುತ್ತೇನೆ ಎಂದು ಒಳ ಹೋದರು ಐತಾಳರ ಮಡದಿ. ಅಷ್ಟರಲ್ಲೇ ಮತ್ತೊಬ್ಬಳು ಮಧ್ಯವಯಸ್ಕ ಹೆಂಗಸು ಹೊರಗಡಿ ಇಟ್ಟು, ನಮ್ಮನ್ನು ನೋಡಿ ಮಾತನಾಡಿಸಿದೆ ಎಂಬಂತೆ ನಕ್ಕಳು. ಐತಾಳರು ಮಾತು ಪ್ರಾರಂಭಿಸಿ “ಈಕೆ ನನ್ನ ಸೊಸೆ, ಆಗ ಎದುರುಗೊಂಡ ಮಕ್ಕಳು ನನ್ನ ಮೊಮ್ಮಕ್ಕಳು. ಮಗ ಇರೋದು ಬೆಂಗಳೂರಲ್ಲಿ.. ಮೂರ್ನಾಲ್ಕು ದಿನ ರಜಾ ಇದ್ಯಲ್ವಾ.. ಮೊಮ್ಮಕ್ಕಳನ್ನು ನೋಡುವ ಬಯಕೆ.. ಬರ್ತೀರಾ ಎಂದು ಕೇಳಿದ್ದೆ.. ಬಂದಿದ್ದಾರೆ.. ನಾಳೆ ರಾತ್ರಿ ಹೊರಡಬೇಕು.. ಅಂದ ಹಾಗೆ ನಿಮ್ಮದು ಉಡುಪಿಯಾ..?” ಎಂದರು.. ಅದಕ್ಕೆ ಗಿರಿ ನನ್ನದು ಬೆಂಗಳೂರು ಎಂದ, ಶಶಿಯದು ಹುಬ್ಬಳ್ಳಿ.. “ನನ್ನದು ಶಿರಸಿ ಹತ್ತಿರ ಚವತ್ತಿ ಅನ್ನೋ ಹಳ್ಳಿ.. ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುತ್ತೆ.. ಉಡುಪಿಯಲ್ಲಿ ಪಿ.ಹೆಚ್.ಡಿ ಮಾಡ್ತಾ ಇದೇವೆ ಎಲ್ಲರೂ” ಎಂದು ಹೇಳಿದೆ.. ನನ್ನದು ಹಳ್ಳಿ ಎಂದಾಗ ಮಾತಿಗೆ ಇಳಿದರು.. ನಮ್ಮ ಮನೆಯ ಉದ್ಯೋಗ ಕೃಷಿ ಎಂದಾಗ ಮತ್ತೂ ಖುಷಿಯಾದದ್ದು ನೋಡಿ ಅವರ ಕೃಷಿಯ ಆಸಕ್ತಿ ನನ್ನ ತಂದೆಯನ್ನು ನೆನಪಿಸಿತ್ತು.. ಅಷ್ಟರಲ್ಲಿ ಅವಲಕ್ಕಿ ಮತ್ತು ಬಿಸಿ ಬಿಸಿ ಕಾಫಿ ನಮ್ಮೆದುರು ಬಂದಿತ್ತು.. ಅವಲಕ್ಕಿ ಗಂಟಲಲ್ಲಿ ಇಳಿದಾಗಲೇ ಹಸಿವಿನ ಜೋರು ತಿಳಿದದ್ದು, ಜೊತೆಗೆ ನಮ್ಮ ಮಾತೂ ಮುಂದುವರೆದಿತ್ತು..
ಅವರು ಅದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಕೃಷಿಯನ್ನು ಹುಟ್ಟಿನಿಂದಲೇ ಬಲ್ಲವರು, ಅವರೆದುರು ನಾನೇನು ಹೇಳಲಿ ಎಂಬುದೇ ನನಗೆ ದೊಡ್ಡ ಚಿಂತೆ. ನಮ್ಮೂರಿನ ಕೃಷಿ ಪದ್ಧತಿಯ ಬಗ್ಗೆ, ಬೆಳೆಗಳ ಬಗ್ಗೆ ಕೇಳಿದರು.. ಅಡಿಕೆ, ತೆಂಗು, ಮೆಣಸು, ಬಾಳೆ, ಕಬ್ಬು, ಏಲಕ್ಕಿ, ಕೊಕೊ ಎಲ್ಲವನ್ನೂ ನಾವು ಬೆಳೆಯುತ್ತೇವೆ ಎಂದು ಕೇಳಿ ಖುಷಿಪಟ್ಟರು.. ಆಳುಗಳ ಕೊರತೆ ಇದೆ ಎಂದಾಗ “ಇಲ್ಲೂ ಅದೇ ಸಮಸ್ಯೆ.. ಇದ್ದವರ ಹತ್ತಿರವೇ ಕೆಲಸ ಮಾಡಿಸಬೇಕು.. ಅವರ ಸಂಬಳವೂ ಹೆಚ್ಚು.. ಎಲ್ಲರೂ ನಮ್ಮ ಬಸವನಂತವರೇ.. ಹುಡುಗರೆಲ್ಲ ಪೇಟೆಯ ಹಾದಿ ಹಿಡಿದಾಗಿದೆ.. ತಿಂಗಳು ತಿಂಗಳು ಸಂಬಳ ಬರುತ್ತೆ, ಆರಾಮದ ಕೆಲಸ, ಹಾಗಿರುವಾಗ ಕೃಷಿಗೆ ಒಲವು ಎಲ್ಲಿ..?? ಕಲಿತ ವಿದ್ಯೆಗೆ ಇಲ್ಲಿ ಉದ್ಯೋಗವೂ ಇಲ್ಲ.. ನನ್ನ ಮಗನೂ ಇಂಜಿನಿಯರ್.. ಆತನಿಗೆ ಇಲ್ಲಿ ಉದ್ಯೋಗ ಇಲ್ಲ, ಬೆಂಗಳೂರಲ್ಲಿದ್ದಾನೆ.. ಒಳ್ಳೆ ಸಂಬಳ. ವರ್ಷಕ್ಕೊಮ್ಮೆ ಬರುತ್ತಾನೆ.. ಹೀಗಾದರೆ ಮುಂದಿನ ತಲೆಮಾರಿಗೆ ಹಳ್ಳಿಗಳು ನಿಮ್ಮ ಹಾಗೇ ನಾಲ್ಕಾರು ಜನ ಬಂದು ಹೋಗೊ ಪ್ರವಾಸಿ ತಾಣ ಆಗಿ ಬಿಡುತ್ತೆ” ಎಂದು ನೋವು ಮಿಶ್ರಿತ ವ್ಯಂಗ್ಯವಾಡಿದ್ದರು.. ಯಾಕೋ ಮನಸ್ಸಿಗೆ ಚುಚ್ಚಿದಂತಾಗಿತ್ತು.. ಅವರು ಹೇಳಿದ ಹುಡುಗರ ಗುಂಪಲ್ಲಿ ನಾನೂ ಒಬ್ಬ ಸದಸ್ಯನಲ್ಲವೇ..??
ಸಂಜೆ ಆರು ಸಮೀಪಿಸುತ್ತಿತ್ತು.. ಮನೆಯವರಿಗೆ ವಿದಾಯ ಹೇಳಿ ಹೊರಟೆವು.. ಐತಾಳರು ಮತ್ತೊಮ್ಮೆ ಬನ್ನಿ ಎನ್ನುತ್ತಾ ಬಯಲಿಗೆ ದಾರಿ ತೋರಿಸಿದರು.. ನಾನೂ ಸಹ ಬಿಡುವು ಮಾಡಿಕೊಂಡು ನಮ್ಮೂರಿಗೆ ಬನ್ನಿ ಎಂದೆ.. ಬಯಲಿಗೆ ಹೋಗಿ ಪರ್ವತದ ಸಾಲು, ಮುಸುಕಿದ ಮೋಡ ಅಲ್ಲೆಲ್ಲೊ ಮಧ್ಯದಲ್ಲಿ ಹರಿಯೊ ಜಲಪಾತ ನೋಡಿ ಕಣ್ತುಂಬಿತ್ತು.. ಸಂಜೆಯ ಹೊತ್ತಿಗೆ ಕೆಲಸಗಾರರೆಲ್ಲ ಮನೆಗೆ ಹೋಗುವುದು ಕಂಡು ಇದು ನನ್ನ ಹಳ್ಳಿಯ ರೀತಿಯೇ ಮತ್ತೊಂದು ಹಳ್ಳಿ ಎಂದುಕೊಂಡೆ.. “ನನ್ನ ಊರಿಗೂ ನಾಲ್ಕಾರು ಜನ ಬಂದರೆ ನನ್ನ ತಂದೆಯೂ ಅವರನ್ನು ಕರೆಯಬಹುದು, ಕಾಫಿ ತಿಂಡಿಯ ಜೊತೆ ಐತಾಳರು ಹೇಳಿದ ಮಾತುಗಳನ್ನೇ ಆಡಬಹುದು.. ನೋವಿನ ವ್ಯಂಗ್ಯವಿರಬಹುದು.. ಆತನ ಮನಸ್ಸಲ್ಲೂ ನಾನಿರಬಹುದು.. ನಾನು ಊರಿಗೆ ಹೋಗಿ ನನಗೆ ಜೊತೆಯಾಗಬಹುದಿತ್ತೇನೊ ಅನ್ನಿಸಬಹುದು” ಹೀಗೆ ಸಾವಿರ ಸಾವಿರ ಯೋಚನೆಗಳು.. ಆದರೇನು ಮಾಡಲಿ.. ನನಗೂ ಮನಸ್ಸಿದೆ.. ಹಳ್ಳಿಯ ಕರೆಗೆ ಓಗುಟ್ಟು ಓಡುವ ಬಯಕೆ ಪ್ರತೀ ದಿನವೂ ಜೀವ ತಳೆಯುತ್ತೆ.. ಆದರೆ ಹಳ್ಳಿಯ ಸ್ಥಿತಿ, ಸರಿಯಾಗಿ ಬಾರದ ಮಳೆ, ಸಿಗದ ಕೆಲಸದವರು, ಬೆಳೆಗೆ ಬಾರದ ಬೆಲೆ, ಜೊತೆಗೆ ಹೆಗಲ ಮೇಲಿನ ಜವಾಬ್ದಾರಿ, ಎಲ್ಲವೂ ಜೀವ ತಳೆದ ಬಯಕೆಯನ್ನು ಸಾಯಿಸಿಬಿಡುತ್ತೆ. ಪೇಟೆ ಬೇಡವಾದರೂ ಬದುಕೋ ಅನಿವಾರ್ಯತೆ, ಪಕ್ಕದ ಮನೆಯವರು ಪರಿಚಯವಿರದಂತೆ ನಟಿಸೋ ಪೇಟೆಯೆಲ್ಲಿ..?? ಇರುವವರೆಲ್ಲ ಬಂಧುಗಳು ಎಂದು ಬದುಕೋ ಹಳ್ಳಿಯೆಲ್ಲಿ..?? ಆದರೂ ಬದುಕಬೇಕು, ನನ್ನುಳಿವಿಗೆ ಹೋರಾಡಬೇಕು.. ಕಾರಂತಜ್ಜನ ಶಂಕರ ದಿಲ್ಲಿಯಿಂದ ಬಂಗಾಡಿಗೆ ಬಂದು ಬೆಳೆದಿದ್ದ.. ಆದರೆ ನನ್ನೊಳಗಿನ ಶಂಕರ ಪ್ರತೀದಿನ ಹೋಗಬೇಕೆಂದು ತುಡಿದರೂ ಸಹ ಸಾಧ್ಯವಾಗದೇ ಸಾಯುತ್ತಿದ್ದಾನೆ… ಮನದ ಯೋಚನೆಗೆ ಮನಸಲ್ಲೇ ಮರುಗಿದೆ.. ಎಲ್ಲ ಪ್ರವಾಸಿಗರಂತೆ, ಬಂಗಾಡಿಯಲ್ಲಿ ಒಂದಷ್ಟು ಸೆಲ್ಫೀ ತೆಗೆದು ಕತ್ತಲಾಗುವುದನ್ನು ಗಮನಿಸಿ ಶಶಿ ಮತ್ತು ಗಿರಿಯ ಜೊತೆ ಬೈಕ್ ಹತ್ತಿ ಉಡುಪಿಯೆಡೆಗೆ ಹೊರಟಿದ್ದೆ.. ಮನದಲ್ಲಿ ಹುಟ್ಟಿದ್ದ ಶಂಕರ ಮುಳುಗಿದ ಸೂರ್ಯನ ಜೊತೆ ಸತ್ತಿದ್ದ..