ಅಂಕಣ

ಕನ್ನಡ ಚಿತ್ರರಂಗ ಬದಲಾಗಲು ಇದು ಪರ್ವಕಾಲ

ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ ಕನ್ನಡದಲ್ಲಿ ಕೆಲವೊಂದು ಹೊಸ ಅಲೆಯ ಸಿನಿಮಾಗಳು ಬಂದವು.ಅವುಗಳಲ್ಲಿ ಸ್ಟಾರ್ ನಟ-ನಟಿಯರಿರಲಿಲ್ಲ.ದೊಡ್ಡ ನಿರ್ದೇಶಕರಿರಲಿಲ್ಲ.ಭರ್ಜರಿ ಫೈಟ್ಸ್’ಗಳು,ಐಟಂ ಸಾಂಗ್’ಗಳು ಇರಲಿಲ್ಲ.ಬಿಡುಗಡೆಗೆ ಮುನ್ನ ಅವುಗಳಿಗೆ ಹೆಚ್ಚು ಪ್ರಚಾರವೂ ಸಿಗುತ್ತಿರಲಿಲ್ಲ.2013ರಲ್ಲಿ ಬಂದ ‘ಲೂಸಿಯಾ’ ದಿಂದ ಹಿಡಿದು ಮೊನ್ನೆ ಮೊನ್ನೆಯ ‘ರಾಮಾ ರಾಮಾ ರೆ’ ಗಳ ತನಕ ಕೆಲವೊಂದು ವಿಭಿನ್ನ ಚಿತ್ರಗಳು ಬಂದಿವೆ.ಕನ್ನಡ ಚಿತ್ರರಂಗದ ದಿಕ್ಕು ಬದಲಾಯಿತು,ಇನ್ನೇನು ಹಳೆಯ ಮಾಸ್ ಸಿನಿಮಾಗಳ ಜಮಾನ ಹೋಗಿ ಹೊಸಬಗೆಯ ಕಲಾತ್ಮಕ ಸಿನಿಮಾಗಳೇ ಕನ್ನಡ ಚಿತ್ರರಂಗವನ್ನು ಆವರಿಸಿಕೊಳ್ಳುತ್ತವೆ ಎಂದು ನಾವು ಆಸೆಪಡುವಷ್ಟರಲ್ಲಿ ನಮ್ಮ ಸ್ಟಾರ್ ನಟರುಗಳು ತಮಗೆ ಬಿಲ್ಡಪ್ ಡೈಲಾಗ್’ಗಳಿರುವ,ಭರ್ಜರಿ ಹೊಡೆದಾಟ ಇರುವ ನೈಜತೆಗೆ ತೀರಾ ದೂರವಾದ ಸಿನಿಮಾಗಳನ್ನು ಮಾಡಿ ನಾವು ಮತ್ತೆ ಅದೇ ಮಾಸ್ ಸಿನಿಮಾಗಳನ್ನು ನೋಡುವಂತೆ ಮಾಡುತ್ತಾರೆ.

ಬಾಲಿವುಡ್ ಅನ್ನು ಹೊರತುಪಡಿಸಿ ತೆಲುಗು,ತಮಿಳಿನ ನಂತರ ಅತೀದೊಡ್ಡ ಮಾರುಕಟ್ಟೆ ಹೊಂದಿರುವುದು ಕನ್ನಡ ಚಿತ್ರರಂಗವೇ.ವರ್ಷಕ್ಕೆ ಏನಿಲ್ಲವೆಂದರೂ ನೂರರಿಂದ ನೂರೈವತ್ತು ಸಿನಿಮಾಗಳು ಕನ್ನಡದಲ್ಲಿ ಬರುತ್ತವೆ.ಅದರಲ್ಲಿ ಸ್ಟಾರ್ ನಟರ ಸಿನಿಮಾಗಳು ವರ್ಷಕ್ಕೆ ಇಪ್ಪತ್ತರಿಂದ ಮೂವತ್ತು ಇರುತ್ತವೆ ಅಷ್ಟೇ.ಅಂದರೆ ವರ್ಷಕ್ಕೆ ಬರುವ ಅಷ್ಟೂ ಸಿನಿಮಾಗಳಲ್ಲಿ ಶೇಕಡಾ ಎಪ್ಪತ್ತೈದರಷ್ಟು ಸಿನಿಮಾಗಳನ್ನು ಇನ್ನೂ ಗುರುತಿಸಿಕೊಳ್ಳದ ನಟ,ನಿರ್ದೇಶಕರುಗಳೇ ತಯಾರಿಸುತ್ತಾರೆ.ಕೆಲವೊಮ್ಮೆ ನಿರೀಕ್ಷೆಗೂ ಮೀರಿ ಈ ಹೊಸಬರ ಚಿತ್ರ ಯರ್ರಾಬಿರ್ರಿ ಹಿಟ್ ಆಗಿ ಬಿಡುತ್ತದೆ.ಅದಕ್ಕೆ ಒಂದಷ್ಟು ಉದಾಹರಣೆಗಳನ್ನು ಕೊಡುವುದಾದರೆ ರಂಗಿತರಂಗ,ಗೋಧಿಬಣ್ಣ ಸಾಧಾರಣ ಮೈಕಟ್ಟು,ಯೂಟರ್ನ್,ರಾಮಾ ರಾಮಾ ರೆ ಗಳನ್ನು ಪರಿಗಣಿಸಬಹುದು.ಇನ್ನು ಒಂದು ವರ್ಷಕ್ಕೆ ನೂರರಿಂದ ನೂರೈವತ್ತು ಸಿನಿಮಾಗಳು ಕನ್ನಡದಲ್ಲಿ ಬಂದರೆ ಅವುಗಳಲ್ಲಿ ಎರಡೋ ಮೂರೋ ಸಿನಿಮಾಗಳು ಮಾತ್ರ ಆ ವರ್ಷದ ಶ್ರೇಷ್ಠ ಸಿನಿಮಾಗಳೆಂದು ಗುರುತಿಸಲ್ಪಡುತ್ತವೆ.ಒಬ್ಬ ಸ್ಟಾರ್ ನಟ ವರ್ಷಕ್ಕೆ ಮೂರು ಸಿನಿಮಾಗಳಲ್ಲಿ ನಟಿಸಿದರೆ ಒಂದು ಚಿತ್ರ ಮಾತ್ರ ಸೂಪರ್ ಹಿಟ್ ಆಗಿ ನೂರು ದಿನ ಪ್ರದರ್ಶನ ಕಾಣುವ ಸಂಭವವಿರುತ್ತದೆ.ಕೆಲವೊಮ್ಮೆ ಅದೂ ಇಲ್ಲ.ಆದರೆ ಸ್ಟಾರ್ ನಟರಿಗೆ ಯಾವತ್ತೂ ನಷ್ಟವಾಗುವುದಿಲ್ಲ.ಅವರು ಅದೇ ಹಳಸಲು ಕಥೆಗಳನ್ನು ಇಟ್ಟುಕೊಂಡು ಬಿಲ್ಡಪ್ ಡೈಲಾಗ್’ಗಳು,ಫೈಟ್ ಗಳು,ಐಟಂ ಸಾಂಗ್’ಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೂ ಜನ ನೋಡೇ ನೋಡುತ್ತಾರೆ.ಅವರ ಮಾರ್ಕೆಟ್ ಯಾವತ್ತೂ ಬಿದ್ದು ಹೋಗುವುದಿಲ್ಲ.ಆದರೆ ಈ ಸ್ಟಾರ್ ನಟರ ಸಿನಿಮಾಗಳ ಭರಾಟೆಯಲ್ಲಿ ನಿಜಕ್ಕೂ ಚೆನ್ನಾಗಿರುವ ಒಂದಷ್ಟು ಹೊಸಬರ ಚಿತ್ರಗಳು ಅವುಗಳನ್ನು ಜನ ಗುರುತಿಸುವುದರೊಳಗೇ ಚಿತ್ರಮಂದಿರದಿಂದ ಎತ್ತಂಗಡಿ ಆಗುತ್ತವೆ.

ಇವತ್ತು ಭಾರತದ ಮೂಲೆ ಮೂಲೆಯಲ್ಲೂ ಆಗಿರುವ ಇಂಟರ್ನೆಟ್ ಕ್ರಾಂತಿ ಪ್ರೇಕ್ಷಕರನ್ನು ಮತ್ತಷ್ಟು ಬುದ್ಧಿವಂತರನ್ನಾಗಿಸಿದೆ.ಕೇವಲ ತನಗೆ ಗೊತ್ತಿರುವ ಭಾಷೆಯ ಸಿನಿಮಾಗಳನ್ನು ಮಾತ್ರ ಪ್ರೇಕ್ಷಕ ಇವತ್ತು ನೋಡುತ್ತಿಲ್ಲ.ಬೇರೆ ಬೇರೆ ಭಾಷೆಯ ಒಳ್ಳೊಳ್ಳೆ ಸಿನಿಮಾಗಳ ಬಗ್ಗೆ ಮಾಹಿತಿ ಬಹಳ ಬೇಗ ಸಿಗುತ್ತದೆ.ಅವುಗಳನ್ನು ಚಿತ್ರಮಂದಿರಗಳಲ್ಲೇ ನೋಡಬೇಕೆಂದೇನೂ ಇಲ್ಲ.ಟೊರೆಂಟ್ಸ್’ನ ಯುಗದಲ್ಲಿ ತಮಗೆ ಬೇಕಾದ ಭಾಷೆಯ ಚಿತ್ರಗಳನ್ನು ಸಬ್ ಟೈಟಲ್ಸ್ ಸಹಿತವಾಗಿ ಡೌನ್ಲೋಡ್ ಮಾಡಿಕೊಂಡು ಮನೆಯಲ್ಲೇ ಕುಳಿತು ನೋಡುವ ಸ್ವಾತಂತ್ರ್ಯ ಇದೆ.ಈಗ ಟೊರೆಂಟ್ಸ್ ನಿಷೇಧಕ್ಕೊಳಗಾಗಿದ್ದರೂ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಳ್ಳಲೆಂದೇ ಅನೇಕ ಜಾಲತಾಣಗಳೂ ಇವೆ.ಹಾಗಾಗಿ ಕನ್ನಡದ ಪ್ರೇಕ್ಷಕ ಇಲ್ಲಿನ ಚಿತ್ರಗಳನ್ನು ಬೇರೆ ಭಾಷೆಯ ಸಿನಿಮಾಗಳ ಜೊತೆ ಕಂಪೇರ್ ಮಾಡುತ್ತಾನೆ.ಮಲಯಾಳಂ,ಮಾರಾಠಿ,ಗುಜರಾತಿ,ಬಂಗಾಳಿ ಭಾಷೆಯ ಸಿನಿಮಾಗಳ ಮುಂದೆ ಕನ್ನಡದ ಸಿನಿಮಾಗಳು ಇನ್ನೂ ಎಳಸು ಅಂತ ಪ್ರೇಕ್ಷಕನಿಗೆ ಅನ್ನಿಸುತ್ತದೆ.ಇತರ ಭಾಷೆಗಳ ಸ್ಟಾರ್ ನಟರು ಬಿಲ್ಡಪ್ ಇಲ್ಲದೆ,ಫೈಟ್ಸ್’ಗಳಿಲ್ಲದೆ ಸುಂದರ ಕಲಾತ್ಮಕ ಸಿನಿಮಾಗಳಲ್ಲಿ ನಟಿಸುವುದನ್ನು ನೋಡಿ ಕನ್ನಡದ ಸ್ಟಾರ್ ನಟರೇಕೆ ತಮ್ಮ ಸ್ಟಾರ್ ಇಮೇಜ್’ನಿಂದ ಆಚೆ ಬಂದು ಹೊಸ ಥರದ ಸಿನಿಮಾಗಳಲ್ಲಿ ನಟಿಸುವುದಿಲ್ಲ ಅನ್ನಿಸುತ್ತದೆ.

ಸುಮ್ಮನೇ ಉದಾಹರಣೆಗಾಗಿ ಮಲಯಾಳಂ ಚಿತ್ರರಂಗವನ್ನು ಪರಿಗಣಿಸೋಣ.ಒಂದು ಕಾಲದಲ್ಲಿ ಬಿ ಗ್ರೇಡ್’ನ ವಯಸ್ಕರ ಚಿತ್ರಗಳಿಗೆ ಕುಖ್ಯಾತಿ ಪಡೆದಿದ್ದ ಮಲಾಯಾಳಂ ಇಂಡಸ್ಟ್ರಿ ಇವತ್ತು ಬಾಲಿವುಡ್’ನ ನಂತರ ಚಿತ್ರಗಳ ಗುಣಮಟ್ಟದಲ್ಲಿ ಭಾರತದಲ್ಲೇ ಅಗ್ರಸ್ಥಾನವನ್ನು ಪಡೆದಿದೆ.ಅಲ್ಲೂ ಕನ್ನಡದಂತೆ ವರ್ಷಕ್ಕೆ ನೂರರಿಂದ ನೂರೈವತ್ತು ಸಿನಿಮಾಗಳು ಬರುತ್ತವೆ.ಸ್ಟಾರ್ ನಟರ ಸಿನಿಮಾಗಳು ಮೂವತ್ತರಿಂದ ನಲವತ್ತು ಬರುತ್ತವೆ.ಆದರೆ ಬಹುತೇಕ ಎಲ್ಲ ಚಿತ್ರಗಳೂ ಗುಣಮಟ್ಟದಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ ತುಂಬಾ ಚೆನ್ನಾಗಿರುತ್ತವೆ.ಒಂದೋ ಉತ್ಕೃಷ್ಟ ದರ್ಜೆಯ ಕಥೆ ಇರುತ್ತದೆ.ಇಲ್ಲವಾದರೆ ಸಾಧಾರಣ ಕಥೆಯನ್ನಿಟ್ಟುಕೊಂಡೇ ಸಿನಿಮಾವನ್ನು ಗೆಲ್ಲಿಸಬಲ್ಲ ಒಳ್ಳೆಯ ಚಿತ್ರಕಥೆ ಇರುತ್ತದೆ.ಮಲಯಾಳಂನ ಸ್ಟಾರ್ ನಟರು ಬಿಲ್ಡಪ್ ಡೈಲಾಗ್’ಗಳನ್ನು,ಹೊಡೆದಾಟದ ದೃಶ್ಯಗಳನ್ನು ಬಿಟ್ಟು ಯಾವುದೋ ಕಾಲವಾಗಿದೆ.ಬಹುತೇಕ ಎಲ್ಲ ಸ್ಟಾರ್ ನಟರೂ ಹೊಸ ರೀತಿಯ ಕಲಾತ್ಮಕ ಚಿತ್ರಗಳಲ್ಲಿ ನಟಿಸುತ್ತಾರೆ.ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ.ಎಂದಿನ ಮಾಸ್ ಡೈಲಾಗ್’ಗಳು,ಐಟಂ ಸಾಂಗ್’ಗಳು ಈ ಕಾಲಕ್ಕೆ ವರ್ಕೌಟ್ ಆಗಲಾರವು ಎಂಬುದನ್ನು ಮಲಯಾಳಂನ ಸ್ಟಾರ್’ಗಳು ಅರ್ಥ ಮಾಡಿಕೊಂಡಿದ್ದಾರೆ.ಅಲ್ಲಿನ ಹೊಸಬರ ಸಿನಿಮಾಗಳೂ ಅಷ್ಟೇ.ಸ್ಟಾರ್ ನಟರು ಇಲ್ಲ ಎಂಬುದನ್ನು ಬಿಟ್ಟರೆ ಕಥೆಯಲ್ಲಾಗಲಿ,ಚಿತ್ರಕಥೆಯಲ್ಲಾಗಲೀ.ಮೇಕಿಂಗ್ ನಲ್ಲಾಗಲಿ ಯಾವುದೇ ರೀತಿಯಲ್ಲೂ ಸ್ಟಾರ್ ನಟರ ಚಿತ್ರಗಳಿಗಿಂತ ಕಮ್ಮಿ ಅಂತ ಅನ್ನಿಸುವುದೇ ಇಲ್ಲ.ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರನ್ನು ಉದಾಹರಣೆಗೆ ನೋಡುವುದಾರೆ ಅವರು ವರ್ಷಕ್ಕೆ ಹೆಚ್ಚೆಂದರೆ ನಾಲ್ಕರಿಂದ ಆರು ಸಿನಿಮಾಗಳಲ್ಲಿ  ನಟಿಸುತ್ತಾರೆ.ಅವರ ಇತ್ತೀಚಿನ ಯಾವ ಸಿನಿಮಾಗಳಲ್ಲೂ ಬಿಲ್ಡಪ್ ಡೈಲಾಗ್ ಗಳು,ಹೊಡೆದಾಟದ ಸೀನ್’ಗಳು ಇರುವುದಿಲ್ಲ. ಬೇರೆ ಬೇರೆ ರೀತಿಯ ಕಲಾತ್ಮಕ ಚಿತ್ರಗಳು,ಥ್ರಿಲ್ಲರ್,ರೊಮ್ಯಾಂಟಿಕ್ ಚಿತ್ರಗಳಲ್ಲಿ ಪೃಥ್ವಿರಾಜ್ ನಟಿಸುತ್ತಾರೆ.ಎಲ್ಲವೂ ಸೂಪರ್ ಹಿಟ್ ಆಗುತ್ತವೆ.ನಮ್ಮಲ್ಲಿರುವಂತೆ ಅಲ್ಲಿಯೂ ಪೃಥ್ವಿರಾಜ್’ಗೆ ಅಭಿಮಾನಿ ಸಂಘಗಳಿವೆ.ಅಭಿಮಾನವನ್ನೂ ಮೀರಿದ ಭಕ್ತರೂ ಇದ್ದಾರೆ.ಆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಲು ಬಿಲ್ಡಪ್ ಡೈಲಾಗ್’ಗಳನ್ನು ಇಟ್ಟುಕೊಂಡು,ಅದ್ಧೂರಿ ಹೊಡೆದಾಟದ ಸೀನ್’ಗಳನ್ನು ಹಾಕಿಕೊಂಡು ಎರಡು ವರ್ಷಕೊಮ್ಮೆ ಪೃಥ್ವಿರಾಜ್ ಮಾಸ್ ಸಿನಿಮಾದಲ್ಲೂ ನಟಿಸುತ್ತಾರೆ.ಅದು ಕೇವಲ ಅಭಿಮಾನಿಗಳನ್ನು ಅತಿಯಾಗಿ ರಂಜಿಸಲು ಮಾತ್ರ.ಅದು ಬಿಟ್ಟರೆ ವರ್ಷವಿಡೀ ಕ್ಲಾಸ್ ಸಿನಿಮಾಗಳನ್ನೇ ಮಾಡುತ್ತಾರೆ.ಇವತ್ತು ಟೊರೆಂಟ್ಸ್’ನಲ್ಲಿ ಮಲಯಾಳಂ ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಂಡು ನೋಡುವ ನಮಗೆ ನಮ್ಮ ಕನ್ನಡದ ಸ್ಟಾರ್ ನಟರೂ ಏಕೆ ಕಲಾತ್ಮಕ,ಕ್ಲಾಸ್ ಚಿತ್ರಗಳಲ್ಲಿ ನಟಿಸಬಾರದು?ಅದೇ ಮಾಸ್ ಸಿನಿಮಾಗಳಿಗೆ ಜೋತು ಬಿದ್ದುಕೊಂಡಿರುವುದೇಕೆ ಅಂತ ಅನ್ನಿಸದೇ ಇರಲಾರದು.

ಒಳ್ಳೊಳ್ಳೆ ಸಿನಿಮಾಗಳು ಕನ್ನಡದಲ್ಲೂ ಬರುತ್ತಿವೆ. ಹೊಸಬರು ಭಿನ್ನ ರೀತಿಯ ಕ್ಲಾಸ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.ಕನ್ನಡ ಚಿತ್ರರಂಗ ಬದಲಾಗುತ್ತಿದೆ ಅಂತ ನಾವೆಷ್ಟೇ ಒದರಾಡಿದರೂ ಸಿನಿಮಾರಂಗದ ಟ್ರೆಂಡ್ ಬದಲಾಯಿಸಲು ಸಾಧ್ಯವಿರುವುದು ಮೊದಲೇ ಹೆಸರು ಗಳಿಸಿರುವ ಸ್ಟಾರ್ ನಟ,ನಿರ್ದೇಶಕರ ಕೈಯಲ್ಲಿ ಮಾತ್ರ.ನಿರ್ದೇಶಕ ಬಿ.ಎಂ.ಗಿರಿರಾಜ್ ಅವರು ‘ಮೈತ್ರಿ’ ಎಂಬ ಕನ್ನಡ ಸಿನಿಮಾವನ್ನು ಮಾಡಿದ್ದರು.ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಆ ಸಿನಿಮಾದ ಮುಖ್ಯ ಭೂಮಿಕೆಯಲ್ಲಿರುತ್ತಾರೆ,ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಅಂತ ಚಿತ್ರ ಬಿಡುಗಡೆ ಆಗುವವರೆಗೂ ಪ್ರಚಾರ ಮಾಡಲಾಯಿತು.ಸಣ್ಣ ಅತಿಥಿ ಪಾತ್ರದಲ್ಲಿ ಪುನೀತ್ ಏನು ಮಾಡಿರಬಹುದು ಎಂದು ನೋಡಲು ಅವರ ಮಾಸ್ ಸಿನಿಮಾಗಳ ಅಭಿಮಾನಿಗಳೆಲ್ಲ ಮುಗಿಬಿದ್ದು ಚಿತ್ರಮಂದಿರಕ್ಕೆ ಹೋದರು.ಎಲ್ಲರಿಗೂ ಚಿತ್ರ ನೋಡಿದ ಮೇಲೆಯೇ ಗೊತ್ತಾಗಿದ್ದು.‘ಮೈತ್ರಿ’ಯಲ್ಲಿ ಪುನೀತ್ ಅವರದ್ದು ಅತಿಥಿ ಪಾತ್ರವಲ್ಲ,ಚಿತ್ರದ ನಾಯಕನೇ ಅವರು ಅಂತ.ಇದನ್ನು ಏಕೆ ಹೇಳಿದೆ ಅಂದರೆ ಸ್ಟಾರ್ ನಟರು ಎಂಥ ಸಿನಿಮಾಗಳಲ್ಲಿ ನಟಿಸಿದರೂ ಜನ ನೋಡಿಯೇ ನೋಡುತ್ತಾರೆ.ಮಾಸ್ ಚಿತ್ರವಾದರೂ ಅಷ್ಟೇ,ಕಲಾತ್ಮಕ ಚಿತ್ರವಾದರೂ ಅಷ್ಟೇ.ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ನಟರ ಸಿನಿಮಾಗಳನ್ನು ನೋಡಿಯೇ ನೋಡುತ್ತಾರೆ.ಹಾಗಿರುವಾಗ ತಮ್ಮ ಎಂದಿನ ಮಾಸ್ ಇಮೇಜ್ ಅನ್ನು ಬದಿಗಿಟ್ಟು,ವಿಭಿನ್ನ ರೀತಿಯ ಕಲಾತ್ಮಕ ಚಿತ್ರಗಳಲ್ಲಿ ಸ್ಟಾರ್ ನಟರು ನಟಿಸಿದರೆ ಅವರ ಮಾರ್ಕೆಟ್ ಏನೂ ಬಿದ್ದು ಹೋಗುವುದಿಲ್ಲ.ಇವತ್ತು ವಿಭಿನ್ನ ರೀತಿಯ,ಹೊಸ ಅಲೆಯ ಸಿನಿಮಾಗಳನ್ನು ನಿರ್ದೇಶಿಸುವ ನಿರ್ದೇಶಕರೆಲ್ಲರೂ ಬಳಸಿಕೊಳ್ಳುವುದು ಇನ್ನೂ ಹೆಸರು ಮಾಡದ ಹೊಸ ನಟರನ್ನೇ.ಆ ನಿರ್ದೇಶಕರುಗಳಿಗೆ ಸ್ಟಾರ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡಲು ಒಂಥರಾ ಭಯ.ತಮ್ಮ ಸಿನಿಮಾ ಫ್ಲಾಪ್ ಆದರೆ ಏನು ಮಾಡುವುದು?ಅದರಿಂದ ಅವರ ಸ್ಟಾರ್ ಇಮೇಜ್ ಬಿದ್ದು ಹೋದರೆ ಏನು ಕಥೆ ಎಂಬ ಆಲೋಚನೆಗಳಿಂದಾಗಿಯೇ ಅವರು ಸ್ಟಾರ್ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವುದಿಲ್ಲ.ಅದಕ್ಕೆ ಸರಿಯಾಗಿ ಸ್ಟಾರ್ ನಟರೂ ಹಾಗೇ ವರ್ತಿಸುತ್ತಾರೆ.ಅವರಿಗೆ ಹೊಸ ನಿರ್ದೇಶಕರೊಂದಿಗೆ ಸಿನಿಮಾ ಮಾಡುವ ಧೈರ್ಯವಿಲ್ಲ.

ಕನ್ನಡದಲ್ಲಿ ಹೊಸ ನಿರ್ದೇಶಕರ ಒಳ್ಳೆ ಕ್ಲಾಸ್ ಸಿನಿಮಾಗಳು ಬಂದರೂ ಅವುಗಳಿಗೆ ಇಲ್ಲಿ ಚಿತ್ರಮಂದಿರಗಳು ಸಿಗುವುದು ಕಡಿಮೆ.ಒಂದೊಮ್ಮೆ ಸಿಕ್ಕರೂ ಸ್ಟಾರ್ ನಟರ ಮಾಸ್ ಸಿನಿಮಾಗಳ ಮುಂದೆ ಹೊಸಬರ ಒಳ್ಳೆ ಕ್ಲಾಸ್ ಸಿನಿಮಾ ಥಿಯೇಟರ್’ಗಳಲ್ಲಿ ನಿಲ್ಲುವುದಿಲ್ಲ.ಆದರೆ ಸ್ಟಾರ್ ನಟರಿಗೆ ಥಿಯೇಟರ್’ಗಳ ಸಮಸ್ಯೆ ಎಂದಿಗೂ ಉದ್ಭವವಾಗುವುದಿಲ್ಲ.ಅವರು ಎಂಥ ಸಿನಿಮಾ ಮಾಡಿದರೂ ಜನ ಚಿತ್ರಮಂದಿರಕ್ಕೆ ಹೋಗಿ ನೋಡಿಯೇ ನೋಡುತ್ತಾರೆ.ಹಾಗಿರುವಾಗ ಅವರು ಕನ್ನಡ ಚಿತ್ರರಂಗದ ಅಭ್ಯುದಯದ ದೃಷ್ಟಿಯಿಂದ ಹೊಸ ನಿರ್ದೇಶಕರ ಜೊತೆ ಕಲಾತ್ಮಕ ಚಿತ್ರಗಳನ್ನು ಮಾಡಿದರೂ ತಮ್ಮ ಸ್ಟಾರ್ ಇಮೇಜ್,ಮಾರ್ಕೆಟ್ ಉಳಿಸಿಕೊಳ್ಳುತ್ತಾರೆ.ಕ್ಲಾಸ್ ಚಿತ್ರಗಳಲ್ಲಿ ಸ್ಟಾರ್ ನಟರು ನಟಿಸುವುದು ಶುರುವಾದ ಕೂಡಲೇ ಅಂಥದ್ದೇ ಸಿನಿಮಾಗಳನ್ನು ಮಾಡುವ ಹೊಸಬರೂ ಹೆಚ್ಚು ಬೆಳಕಿಗೆ ಬರುತ್ತಾರೆ.ಅವರಿಗೂ ಚಿತ್ರಮಂದಿರಗಳು ಸಿಗುತ್ತವೆ.ಹೊಸ ನಿರ್ದೇಶಕರಿಗೂ ತಾವು ಸ್ಟಾರ್ ನಟರನ್ನು ಹಾಕಿಕೊಂಡೇ ಕ್ಲಾಸ್ ಸಿನಿಮಾಗಳನ್ನು ಮಾಡಬಲ್ಲೆವು ಎಂಬ ಧೈರ್ಯ ಬರುತ್ತದೆ.ಇವತ್ತಿನ ಪರಿಸ್ಥಿತಿಯಲ್ಲಿ ಸ್ಟಾರ್’ಗಳ ಮಾಸ್ ಸಿನಿಮಾಗಳ ಮುಂದೆ ಹೊಸಬರ ಒಳ್ಳೆ ಕ್ಲಾಸ್ ಸಿನಿಮಾಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ.ಹಾಗಾಗಿ ಹೊಸ ನಟರು,ನಿರ್ದೇಶಕರು ಕನ್ನಡ ಚಿತ್ರರಂಗವನ್ನು ಬದಲಿಸುವುದು ಅಷ್ಟು ಸುಲಭವಲ್ಲ.ಸ್ಟಾರ್’ಗಳು ಬಿಲ್ಡಪ್,ಫೈಟ್ಸ್,ಐಟಂ ಸಾಂಗ್’ಗಳು ಇಲ್ಲದ ಒಳ್ಳೆ ಕಥೆ,ಚಿತ್ರಕಥೆಯುಳ್ಳ,ವಾಸ್ತವತೆಗೆ ಹತ್ತಿರವಾದ ಕ್ಲಾಸ್ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ನಟಿಸಿದರೆ ಕನ್ನಡ ಚಿತ್ರರಂಗದ ಟ್ರೆಂಡ್ ಬದಲಾಗಬಹುದು.

ಕನ್ನಡದಲ್ಲಿ ಹೊಸ ರೀತಿಯ ಕಥೆಗಳನ್ನು ತಯಾರಿಸುವ ಬರಹಗಾರರಿಗೇನೂ ಕೊರತೆಯಿಲ್ಲ.ಬೇರೆಲ್ಲ ಭಾಷೆಗಳಿಗಿಂತ ಕನ್ನಡದ ಸಾಹಿತ್ಯ ಶ್ರೀಮಂತವಾಗಿದೆ.ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡದ್ದು.ಹಾಗಿದ್ದೂ ಕನ್ನಡ ಚಿತ್ರರಂಗ ಮಾತ್ರ ಇನ್ನೂ ಒಳ್ಳೆಯ ಗುಣಮಟ್ಟದ ಚಿತ್ರಗಳನ್ನು ಹೆಚ್ಚಾಗಿ ತಯಾರಿಸುತ್ತಿಲ್ಲವೆಂಬುದು ನೋವಿನ ಸಂಗತಿ.ಇವತ್ತು ಕನ್ನಡದ ಒಬ್ಬ ಹೆಸರಾಂತ ಲೇಖಕನ ಕಥೆಯನ್ನೋ ಕಾದಂಬರಿಯನ್ನೋ ಸಿನಿಮಾ ಮಾಡುವ ಮೊದಲು ನಿರ್ದೇಶಕನೊಬ್ಬ ಸಾವಿರ ಬಾರಿ ಆಲೋಚಿಸುವ ಪರಿಸ್ಥಿತಿ ಇದೆ.ಏಕೆಂದರೆ ಸ್ಟಾರ್ ನಟರು ಯಾರೂ ಕಾದಂಬರಿ ಆಧಾರಿತ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ.ಹೊಸಬರನ್ನು ಹಾಕಿಕೊಂಡು ಮಾಡಿದರೆ ಚಿತ್ರ ಗೆಲ್ಲದಿದ್ದರೆ ಎಂಬ ಭಯ ನಿರ್ದೇಶಕನಿಗಿರುತ್ತದೆ.ಇದನ್ನು ಹೋಗಲಾಡಿಸುವ ಕೆಲಸವನ್ನು ಸ್ಟಾರ್ ನಟರು ಮಾಡಬೇಕಿದೆ.ತಮ್ಮ ಎಂದಿನ ಮಾಸ್ ಇಮೇಜ್’ನಿಂದ ಹೊರಬಂದು ಕಲಾತ್ಮಕ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ನಟಿಸಬೇಕಾಗಿದೆ.

‘ಮಾಸ್ತಿಗುಡಿ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಹೆಲಕಾಪ್ಟರ್’ನಿಂದ ಹಾರಿ ಜಲಸಾಮಾಧಿಯಾದ ಕನ್ನಡದ ಉದಯೋನ್ಮುಖ ನಟರಾದ ಉದಯ್ ಮತ್ತು ಅನಿಲ್ ಅವರ ಸಾವು ಕನ್ನಡ ಚಿತ್ರರಂಗಕ್ಕೊಂದು ಪಾಠವಾಗಬೇಕು.ಹೆಲಿಕಾಪ್ಟರ್’ನಿಂದ ಹಾರುವ,ಗಾಜು ಒಡೆಯುವ,ಒಬ್ಬನೇ ಹೀರೋ ಇಪ್ಪತ್ತು ಜನರನ್ನು ಹೊಡೆಯುವ ಹಳೇ ಕಾಲದ ಮಾಸ್ ಇಮೇಜ್’ಗೆ ನಮ್ಮ ಸ್ಟಾರ್ ನಟರು ಇನ್ನೂ ಏಕೆ ಜೋತು ಬಿದ್ದಿದ್ದಾರೋ ಗೊತ್ತಿಲ್ಲ.ಅಂಥ ಚಿತ್ರಗಳನ್ನು ಜನರು ಶಿಳ್ಳೆ ಹೊಡೆದು ಚಿತ್ರಮಂದಿರಗಳಲ್ಲಿ ನೋಡುವುದನ್ನೂ ಕಡಿಮೆ ಮಾಡಬೇಕು.ಕೇವಲ ಸ್ಟಾರ್ ನಟರನ್ನು ಮಾತ್ರ ಏಕೆ ದೂಷಿಸುತ್ತೀರಿ,ಮಾಸ್ ಸಿನಿಮಾಗಳನ್ನು ಮಾಡುವಲ್ಲಿ ನಿರ್ದೇಶಕನದ್ದೂ ಪಾಲಿದೆ ಅಲ್ಲವೇ ಅಂತ ಪ್ರಶ್ನಿಸಬಹುದು.ಆದರೆ ಕನ್ನಡ ಚಿತ್ರರಂಗ ಇವತ್ತು ಹೇಗಿದೆಯೆಂದರೆ ಸ್ಟಾರ್ ನಟರ ಚಿತ್ರಗಳಿಗೆ ಹೆಸರಿಗೆ ಮಾತ್ರ ನಿರ್ದೇಶಕ ಇರುತ್ತಾನೆ.ಉಳಿದಂತೆ ಇಡೀ ಚಿತ್ರ ಹೇಗೆ ಮೂಡಿ ಬರಬೇಕು ಎಂದು ತೀರ್ಮಾನಿಸುವುದು ನಾಯಕ ನಟರೇ.ಕೆಲವೊಮ್ಮೆ ನಿರೀಕ್ಷಿತ ಮಟ್ಟದಲ್ಲಿ ಸ್ಟಾರ್ ನಟರು ನಟಿಸದಿದ್ದಾಗ,ನಿಮ್ಮ ನಟನೆ ಸರಿಯಾಗಿಲ್ಲ.ತಿದ್ದಿಕೊಂಡು ಮತ್ತೊಮ್ಮೆ ಟೇಕ್ ತೆಗೆದುಕೊಳ್ಳಿ ಎಂದು ನಟರಿಗೆ ಹೇಳುವ ಧೈರ್ಯವೂ ಎಷ್ಟೋ ನಿರ್ದೇಶಕರಿಗಿಲ್ಲ.ಹಾಗಾಗಿ ಸ್ಟಾರ್ ನಟರು ಮನಸ್ಸು ಮಾಡಿ ತಮ್ಮ ಹೀರೋ ಇಮೇಜ್’ನಿಂದ ಹೊರಬಂದು ಕಲಾತ್ಮಕ ಚಿತ್ರಗಳಲ್ಲಿ ಹೆಚ್ಚು ಹೆಚ್ಚಾಗಿ ನಟಿಸಿದರೆ ಕನ್ನಡ ಚಿತ್ರರಂಗದ ಸುವರ್ಣ ಅಧ್ಯಾಯ ಮತ್ತೊಮ್ಮೆ ಆರಂಭವಾಗುತ್ತದೆ.

ಒಂದು ಚಿತ್ರರಂಗಕ್ಕೆ ಕ್ಲಾಸ್ ಸಿನಿಮಾಗಳೂ ಬೇಕು.ಮಾಸ್ ಸಿನಿಮಾಗಳೂ ಬೇಕು.ಹಾಗಂತ ಹಳೇ ಕಾಲದ ಸಿದ್ಧಾಂತಗಳನ್ನೇ ನೆಚ್ಚಿಕೊಂಡು ಸ್ಟಾರ್ ನಟರು ಢಂ ಢಂ ಡಿಶುಂ ಡಿಶುಂ ಎನ್ನುತ್ತ ಬರೀ ಮಾಸ್ ಸಿನಿಮಾಗಳನ್ನೇ ಮಾಡುತ್ತ ಹೋದರೆ ಮುಂದಿನ ವರ್ಷಗಳಲ್ಲಿ ಅವರು ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಸ್ಥಿತಿ ಬಂದರೂ ಬರಬಹುದು.ಅಂತಾರಾಷ್ಟ್ರೀಯ ಚಲನಚಿತ್ರೋತ್ಸಗಳಲ್ಲಿ,ಆಸ್ಕರ್’ಗೆ ಭಾರತದಿಂದ ನಾಮಿನೆಟ್ ಆಗುವಲ್ಲಿ ಬೇರೆ ಭಾಷೆಯ ಚಿತ್ರಗಳ ಜೊತೆ ಕನ್ನಡದ ಚಿತ್ರಗಳೂ ಸ್ಪರ್ಧಿಸಿ ಗೆಲ್ಲಬೇಕಾದರೆ ನಮ್ಮ ಸ್ಟಾರ್ ನಟರು ಕಲಾತ್ಮಕ ಚಿತ್ರಗಳನ್ನು ತಯಾರಿಸುವುದು ಅನಿವಾರ್ಯ.ಅದು ಈಗಲೇ ಆಗಬೇಕಿದೆ.ಇಲ್ಲವಾದರೆ ಬೇರೆ ಭಾಷೆಯ ಸಿನಿಮಾಗಳ ಪ್ರಭಾವಕ್ಕೆ ಒಳಗಾಗಿ ಪ್ರೇಕ್ಷಕ ಕನ್ನಡದ ಸ್ಟಾರ್ ನಟರ ಮಾಸ್ ನಿನಿಮಾಗಳನ್ನು ಸರಾಸಗಟಾಗಿ ತಿರಸ್ಕರಿಸುವ ಕಾಲವೂ ಬರಬಹುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!