Featured ಅಂಕಣ

ಒಂದು ಸಹ ಭೋಜನ ದಲಿತರನ್ನು ಬಲಿತರನ್ನಾಗಿಸೀತೆ?

ಇದೀಗ ಉಡುಪಿ ಮಠದ ಊಟದ ವಿಚಾರವು ಬಿರುಸಾದ ಚರ್ಚೆಯಲ್ಲಿದೆ. ಬ್ರಾಹ್ಮಣರ ಹಾಗೂ ಮಿಕ್ಕುಳಿದವರ ಮಧ್ಯೆ ಪಂಕ್ತಿಬೇಧವಿದೆ, ಇದು ಶೋಷಣೆಯ ಭಾಗ ಎಂಬುದು ವರ್ಗವೊಂದರ ಅಳಲು. ಪರಿಣಾಮ ‘ಉಡುಪಿ ಚಲೋ’ ಎಂಬ ಕಾರ್ಯಕ್ರಮವನ್ನು ದಲಿತ ಸಂಘಟನೆಯೊಂದು ಹಮ್ಮಿಕೊಂಡು ಉಡುಪಿ ಮಠದಲ್ಲಿ ಇರುವ ಪಂಕ್ತಿ ಬೇಧವನ್ನು ನಿಲ್ಲಿಸದೇ ಹೋದರೆ ದಾಳಿ ಮಾಡುವುದಾಗಿ ಬೆದರಿಕೆಯನ್ನೂ ಕೂಡ ನೀಡಿದೆ. ಈ ಹೋರಾಟಕ್ಕೆ ಪ್ರತಿ ಹೋರಾಟವನ್ನು ಮಾಡುವುದಾಗಿ ವಿರೋಧಿ ವರ್ಗವು ಸುಳಿವನ್ನು ನೀಡಿದೆ. ಇದರ ಅಂತಿಮತೆ ಅದೆಲ್ಲಿಗೆ ಬಂದು ನಿಲ್ಲುತ್ತೋ ಗೊತ್ತಿಲ್ಲ ಆದರೆ ಇಂದು ಈ ಒಂದು ಹೋರಾಟ- ಪ್ರತಿ ಹೋರಾಟದ ಯೋಚನೆಯು ಹಲವಾರು ಆಯಾಮಗಳ ಚರ್ಚೆಗೆ ವೇದಿಕೆಯನ್ನೊದಗಿಸ ಹೊರಟಿದೆ ಎಂಬುದು ಮಾತ್ರ ಸುಳ್ಳಲ್ಲ.

ಅಷ್ಟಕ್ಕೂ ಹಿಂದೂ ಸಮಾಜದಲ್ಲಿ ಜಾತಿ ಪದ್ಧತಿಯೆಂಬುದು ಅದ್ಯಾವ ಆಧಾರದ ಮೇಲೆ ನಿಂತಿದೆ? ಮೇಲು ಕೀಳುಗಳೆಂಬುದು ಧರ್ಮಾಧಾರಿತವೇ?

‘ಚಾತುರ್ವಣ್ಯಂ ಮಯ ಸೃಷ್ಣಂ ಗುಣಕರ್ಮಾ ವಿಭಾಗಶಃ’ ಎಂಬ ಶ್ಲೋಕವೊಂದು ಶ್ರೀಮದ್ಭಗವದ್ಗೀತೆಯಲ್ಲಿದೆ. ಜಾತಿ ಪದ್ಧತಿಯು ದೇವರ ಸೃಷ್ಟಿಯೇ ಹೊರತು ಮಾನವನದಲ್ಲ ಹಾಗೂ ಆ ಜಾತಿ ಪದ್ಧತಿಯು ಅವರವರು ಮಾಡುವ ಕರ್ಮಾನುಗತವಾಗಿ ನಿರ್ಧರಿಸಲ್ಪಡುತ್ತದೆಯೇ ಹೊರತು ಹುಟ್ಟಿನ ಆಧಾರ ಅಥವಾ ಇನ್ಯಾವುದೇ ಅನ್ಯ ಆಧಾರದ ಮೇಲಲ್ಲ ಎಂಬುದು ಇಲ್ಲಿ ಶ್ರೀಕೃಷ್ಣನ ಮಾತಿನ ಒಳಾರ್ಥ. ಮಹಾಭಾರತದಂತಹ ದೊಡ್ಡ ಮಟ್ಟದ ಯುದ್ಧದ ಮಧ್ಯೆಯೂ ಶ್ರೀಕೃಷ್ಣ ಜಾತೀ ವ್ಯವಸ್ಥೆಯ ಬಗ್ಗೆ ಅಂದು ಈ ರೀತಿ ಮಾತನಾಡಿದ್ದಾನೆ ಎಂದರೆ ಅಲ್ಲೂ ಕೂಡ ಜಾತಿ ವ್ಯವಸ್ಥೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಲೇ ಇತ್ತು ಎಂಬುದು ವೇದ್ಯವಾಗುತ್ತದೆ. ಜಾತೀ ವ್ಯವಸ್ಥೆಯ ಬಗೆಗಿದ್ದ ಗೊಂದಲದ ನಿವಾರಣೆಗಾಗಿಯೇ ಇಲ್ಲಿ ಶ್ರೀಕೃಷ್ಣ ಅಥವಾ ಮಹರ್ಷಿ ವೇದವ್ಯಾಸರು ಈ ಜಾತಿ ಪದ್ಧತಿಯ ಕುರಿತು ಸ್ಪಷ್ಟತೆ ನೀಡ ಹೊರಟಿದ್ದಾರೆ. ಇನ್ನು ಮಹಾಭಾರತದ ಇನ್ನೊಂದು ಕಡೆಯಲ್ಲೂ ಯಕ್ಷ-ಧರ್ಮರಾಯನ ನಡುವೆ ನಡೆಯುವ ಸಂವಾದದಲ್ಲಿ ‘ಬ್ರಾಹ್ಮಣ’ನೆಂದರೆ ಯಾರು ಎಂಬ ಪ್ರಶ್ನೆಗೆ ಧರ್ಮರಾಯನು ಇದೇ ರೀತಿಯ ಸ್ಪಷ್ಟತೆಯನ್ನು ನೀಡುತ್ತಾನೆ. ಅಂದರೆ ವೇದೋಪನಿಷತ್ತುಗಳ ಸಾರದಂತಿರುವ ‘ಮಹಾಭಾರತದಲ್ಲೆ’ ಜಾತೀ ಪದ್ಧತಿಯನ್ನು ಬಲು ಚೆನ್ನಾಗಿ ವಿವರಿಸಲಾಗಿದೆ. ಶೋಷಣೆ ಮಾಡಬೇಕು, ಶೂದ್ರರನ್ನು ನಿಕೃಷ್ಟವಾಗಿ ಕಾಣಬೇಕು ಎಂದು ಪ್ರಸ್ತಾವಣೆಗೊಂಡದ್ದು ಅಲ್ಲೆಲ್ಲೂ ಕಾಣ ಬರುವುದಿಲ್ಲ. ‘ನಾ ಯೋನಿ ನಾಪಿ ಸಂಸ್ಕಾರೋ, ನಶೃತ ನಚಸಂತತಿ ಕಾರಣಾನೀ ದ್ವಿಜತ್ಪ್ರಶ್ಯ ವೃತ್ತಿಮೇವಾತೋ ಕಾರಣಾನ್’ ಎನ್ನುವ ಉಪನಿಷತ್ತ್’ನ ಶ್ಲೋಕವು ಕೂಡ ದ್ವಿಜರೆಂದರೆ ಯಾರು ಎಂಬುದಕ್ಕೆ ಬಹುತೇಕ ಸ್ಪಷ್ಟತೆಯನ್ನು ಒದಗಿಸಿದೆ. ಅಂದರೆ ಈ ಬ್ರಾಹ್ಮಣತ್ವವೆಂಬುದು ಅದು ಹುಟ್ಟಿನಿಂದ ಬರುವಂತಹುದಲ್ಲ ಬದಲಾಗಿ ಅದೊಂದು ಉತ್ಕೃಷ್ಟತೆಯ ಪದವಿಯಷ್ಟೇ ಎಂಬ ವಿವರಣೆಯದು. ಯಾರೊಬ್ಬರೂ ಕೂಡ ಹುಟ್ಟಿನಿಂದ ಶ್ರೇಷ್ಟರಲ್ಲ ಬದಲಾಗಿ ಸಮಾನರು. ಮನುಷ್ಯನೋರ್ವನು ತಾನು ಮಾಡುವ ಕಾರ್ಯ ಕೈಂಕರ್ಯದ ಮೂಲಕ ದ್ವಿಜನಾಗುವನೇ ಹೊರತು ಕೇವಲ ಆ ಜಾತಿಯೊಂದರಲ್ಲಿ ಹುಟ್ಟಿದ್ದೇನೆ ಅನ್ನುವ ಕಾರಣಕ್ಕೋ ಇಲ್ಲ ತಾನು ಉತ್ತಮ ಸಂಸ್ಕಾರಗಳನ್ನು ಪಾಲಿಸುತ್ತೇನೆ ಅನ್ನುವ ಒಂದೇ ಕಾರಣಕ್ಕೆ ಅಲ್ಲ ಎಂಬುದು ಉಪನಿಷತ್ತಿನ ವಿವರಣೆಯ ಒಟ್ಟು ತಾತ್ಪರ್ಯ. ಒಟ್ಟಿನಲ್ಲಿ ಹಿಂದೂಗಳ ಆಧಾರ ಸ್ತಂಭದಂತಿರುವ ವೇದೋಪನಿಷತ್ತುಗಳಲ್ಲಿ ಜಾತಿ ಪದ್ಧತಿಯನ್ನು ಒಂದು ‘ವ್ಯವಸ್ಥೆ’ಯನ್ನು ರೂಪಿಸುವ ಪದ್ಧತಿಯಾಗಿ ಚಿತ್ರಿಸಲಾಗಿತ್ತೇ ಹೊರತು ಮೇಲು ಕೀಳುಗಳೆಂದು ತಕ್ಕಡಿಯಲ್ಲಿಟ್ಟು ತೂಗುವ ಪದ್ಧತಿಯಾಗಿ ಅಲ್ಲ. ಇದಕ್ಕೆಲ್ಲಾ ಪುರಾವೆ ಎಂಬಂತೆ ಪುರಾತನ ಭಾರತದಲ್ಲಿ ಅದೆಷ್ಟೋ ಹೀನ ಕುಲದಲ್ಲಿ ಹುಟ್ಟಿ ಮಹಾತ್ಮರಾದ, ಋಷಿಮುನಿಗಳಾದ ಕತೆಗಳಿವೆ. ಮಹಾಭಾರತ ಬರೆದ ವೇದವ್ಯಾಸರು, ರಾಮಾಯಣದ ವಾಲ್ಮೀಕಿ ಮಹರ್ಷಿಗಳನ್ನೇ ಇದಕ್ಕೆ ಪ್ರಬಲ ಸಾಕ್ಷಿಗಳಾಗಿ ಪರಿಗಣಿಸಬಹುದು. ಇನ್ನು ಸ್ವಾಮೀ ವಿವೇಕಾನಂದರೂ ಕೂಡ ಈ ಬಗ್ಗೆ ಸ್ಪಷ್ಟತೆ ನೀಡುತ್ತಾ ಜಾತಿ ಪದ್ಧತಿ ಎಂಬುದನ್ನು ವೃತ್ತಿ ನೈಪುಣ್ಯತೆಯನ್ನು ವೃದ್ಧಿಸಲು ಇರುವ ವ್ಯವಸ್ಥೆಯೇ ಹೊರತು ಶೋಷಣೆಗಾಗಿ ಹುಟ್ಟಿಕೊಂಡದಲ್ಲ ಎಂಬ ಅರ್ಥದಲ್ಲಿಯೇ ಅರ್ಥೈಸಿಕೊಂಡು ವಿವರಿಸಿದ್ದಾರೆ.

ಹಾಗಾದರೆ ಈ ಮೇಲು-ಕೀಳುಗಳೆಂಬ ತುಚ್ಚ ಭಾವ ಅದೆಲ್ಲಿಂದ ಸೃಷ್ಟಿಯಾಯಿತು? ಜಾತಿ ಪದ್ಧತಿಯ ಸ್ವರೂಪವೇಕೆ ಬದಲಾಯಿತು? ವೃತ್ತಿ ನೇಮ ನಿಷ್ಠೆಗಳ ಮೂಲಕ ಓರ್ವನ ಜಾತಿಯನ್ನು ಗುರುತಿಸಬೇಕೆ ಹೊರತು ಜನ್ಮದಿಂದ ಅಲ್ಲ ಎಂದು ನಮ್ಮ ವೇದ ಸಾಹಿತ್ಯಗಳೇ ಸಾರಿ ಸಾರಿ ಹೇಳಿದ್ದರೂ ಅದನ್ನೇ ಹೊಟ್ಟೆಪಾಡಾಗಿಸಿಕೊಂಡಿರುವ ಜನರು ಇಂದೇಕೆ ಜಾತಿಯನ್ನು ಹುಟ್ಟಿನಿಂದ ನಿರ್ಧರಿಸ ಹೊರಟಿದ್ದಾರೆ? ಇವತ್ತು ‘ಬ್ರಾಹ್ಮಣ’ ತಂದೆ ತಾಯಿಗೆ ಹುಟ್ಟಿದ ಓರ್ವ ವ್ಯಕ್ತಿ ಆತನೆಷ್ಟು ನೀಚನಾಗಿದ್ದರೂ, ಅಧಮನಾಗಿದ್ದರೂ ತನ್ನನ್ನು ಬ್ರಾಹ್ಮಣನೆಂದೇ ಪರಿಭಾವಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳ ಬಯಸುತ್ತಾನೆ ಎಂದಾದರೆ, ನೈಜ ಬ್ರಾಹ್ಮಣನಿಗೆ ಸಿಗಬೇಕಾದ ಸ್ಥಾನ ಮಾನಗಳನ್ನು ಈತನೂ ಪಡೆಯುತ್ತಿರುತ್ತಾನೆ ಎಂದಾದರೆ ಅದು ಹಿಂದೂ ಸಮಾಜದ ದುರಂತವಲ್ಲವೇ? ಸಮಾಜದಲ್ಲಿ ಇಂದು ಜಾತಿ ವೈಮನಸ್ಸುಗಳು ಬಲಿತಗೊಂಡಿವೆ ಎಂದರೆ ಅದಕ್ಕೆ ಮೂಲ ಕಾರಣ ಈ ರೀತಿಯ ಅಪವಸವ್ಯಗಳೇ. ಹಿಂದೂ ಧರ್ಮದ ಮುಂಚೂಣಿ ನಾಯಕರುಗಳು, ಮಠಾಧಿಪತಿಗಳು ಈ ಬಗ್ಗೆ ಸ್ಪಷ್ಠ ಹಾಗೂ ಅಷ್ಟೇ ಕಠಿಣ ನಿಲುವುಗಳನ್ನು ತಳೆಯಬೇಕಿದೆ. ಸದ್ಯದ ಸಮಾಜದಲ್ಲಿ ಈ ರೀತಿಯಾಗಿ ಆಚಾರ ವಿಚಾರ ವೃತ್ತಿಗಳನ್ನು ಪರಿಗಣಿಸಿ ‘ಜಾತಿ’ ಯನ್ನು ಗುರುತಿಸಬೇಕೆನ್ನುವುದು ಕಷ್ಟವಾದರೂ ಕನಿಷ್ಟ ಪಕ್ಷ ವಿಶೇಷ ಪ್ರಾಶಸ್ತ್ಯ, ವಿಶೇಷ ಗೌರವವನ್ನು ನೀಡುವ ‘ಸಂದರ್ಭ’ದಲ್ಲಾದರೂ ಬ್ರಾಹ್ಮಣನನ್ನು ‘ಗುಣ-ಕರ್ಮ’ ಆಧಾರಿತವಾಗಿಯೇ ಗುರುತಿಸುವಂತಾಗಲಿ. ಈ ರೀತಿಯಾದರೆ ಆವಾಗ ಪೌರೋಹಿತ್ಯವನ್ನು ನಡೆಸುವ ಒಂದಷ್ಟು ಗೌರವಯುತ ಮಂದಿಯಷ್ಟೇ ಈ ಬ್ರಾಹ್ಮಣ ವರ್ಗವನ್ನು ಶೃಂಗರಿಸಿ ಮಿಕ್ಕುಳಿದ ಎಲ್ಲರೂ ಒಂದೇ ಸೂರಿನಡಿಗೆ ಬರಬಲ್ಲರು!

ನೇರವಾಗಿ ಹೇಳುವುದಾದರೆ ಇವತ್ತಿನ ಮೇಲು ಕೀಳುಗಳೆಂಬ ಆಚರಣೆ, ಶೋಷಣೆಗಳು ಹುಟ್ಟಿನ ಆಧಾರದ ಮೇಲೆ ಸಿಗುವ ಮನ್ನಣೆಯ ಮೇಲೆಯೇ ನಿಂತಿದೆ. ದೇವರ ಸೃಷ್ಟಿಯಲ್ಲಿ ಅದ್ಯಾರೂ ಕೀಳಲ್ಲ ಎಂಬುದನ್ನು ಹಿಂದೂ ಧರ್ಮವೇ ಬೋಧಿಸುತ್ತವೆಯಾದ್ದರಿಂದ ಹಿಂದೂಗಳು ಈ ಅಸ್ಪೃಶ್ಯತೆ, ಶೊಷಣೆಗಳನ್ನು ಮನದಿಂದ ತೊಡೆದು ಹಾಕುವ ಅಗತ್ಯತೆ ಇದೆ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶೊಷಣೆ ಅದೆಷ್ಟೋ ಇಳಿಮುಖವಾಗಿದೆ ಎಂಬುದೂ ಕೂಡ ಸುಳ್ಳಲ್ಲ. ಬಸವಣ್ಣ, ಅಂಬೇಡ್ಕರ್ ಅಥವಾ ಅವರಿಗಿಂತಲೂ ಹಿಂದಿನ ಸಮಾಜದಲ್ಲಿದ್ದಂತಹ ಶೋಷಣೆ ಇಂದಿನ ಸಮಾಜದಲ್ಲಿ ಕಾಣ ಬರಲು ಸಾಧ್ಯವೆ? ಈವಾಗ ಅದೇನಿದ್ದರೂ ದಲಿತ, ಶ್ರೂದ್ರ, ಬಡವ ಎಂದೆನ್ನುತ್ತಾ ಅವರ ಹೆಸರಲ್ಲಿ ಮತ ಕೀಳುವ ವಿಚಾರವಷ್ಟೇ ಎಂಬುದು ತೆರೆದ ಸತ್ಯ!

ಇದೀಗ ಇದರದ್ದೇ ಒಂದು ಭಾಗವೆಂಬಂತೆ ಉಡುಪಿಯ ‘ಪಂಕ್ತಿ ಬೇಧ’ವನ್ನು ಉತ್ತುಂಗದ ಚರ್ಚೆಗೆ ತರಲಾಗಿದೆ! ಭೋಜನಕ್ಕೆ ಬ್ರಾಹ್ಮಣರನ್ನು ಪ್ರತ್ಯೇಕ ಕೂರಿಸುವುದು ತಪ್ಪು ಎನ್ನುವುದು ವಿರೋಧಿಗಳ ವಾದವಾದರೆ, ಬ್ರಾಹ್ಮಣರ ಭೋಜನಾ ವ್ಯವಸ್ಥೆಯು ಮಿಕ್ಕುಳಿದವರ ಪದ್ಧತಿಗಿಂತ ತೀರಾ ವಿಭಿನ್ನವಾಗಿರುವುದರಿಂದ ಅಂತವರಿಗೆ ಪ್ರತ್ಯೇಕವಾದ ಬೋಜನದ ವ್ಯವಸ್ಥೆಯನ್ನು ಒದಗಿಸುವುದು ನ್ಯಾಯ ಸಮ್ಮತವೆನ್ನುವುದು ಪರವಾಗಿರುವವರ ವಾದ! ಹೌದು, ಊಟದ ವ್ಯವಸ್ಥೆಯೊಳಗೆ ದಬ್ಬಾಳಿಕೆ, ಜಾತಿ ಶೋಷಣೆ, ನಿಂದನೆಗಳು ನಡೆದರೆ ಅದನ್ನು ಖಂಡಿತವಾಗಿಯೂ ಅಕ್ಷಮ್ಯವೆನ್ನಬೇಕು. ಆದರೆ ಉಡುಪಿ ಅಥವಾ ಇನ್ನಿತರೆಡೆಗಳಲ್ಲಿ ಇಂತಹ ದಬ್ಬಾಳಿಕೆಗಳು ನಡೆಯುತ್ತಿವೆಯೆ!? ಅಷ್ಟಕ್ಕೂ ಅಲ್ಲಿ ನಡೆಯುವ ಊಟೋಪಚಾರವೇನು ಅದು ಕಡ್ಡಾಯವಾದ ವ್ಯವಸ್ಥೆಯಲ್ಲ! ಯಾರಿಗೆ ಇಷ್ಟವಿದೆಯೋ ಅಂತವರು ಅಲ್ಲಿ ಉಂಡರಾಯಿತು ಅಲ್ಲವೇ!? ಇಷ್ಟವಿಲ್ಲದೇ ಹೋದರೆ ಹಾಗೇ ಸುಮ್ಮನೆ ದೇವರ ದರ್ಶನ ಮಾಡಿಕೊಂಡು ಮನೆಗೆ ತೆರಳಬಹುದು! ಅಲ್ಲಿ ಯಾರೂ ನಿಮ್ಮನ್ನು ತಡೆದು ‘ಊಟವೇಕೆ ಮಾಡಿಲ್ಲ’ ಎಂದು ವಿಚಾರಿಸಲಾರರು! ಹೀಗಿರುವಾಗ ಅಲ್ಲಿ ಶೋಷಣೆಯ ಮಾತೇ ಬಾರದು. ಇನ್ನು ಪಂಕ್ತಿ ಬೇಧವನ್ನು ವಿರೋಧೀಸಿ ‘ಉಡುಪಿ ಚಲೋ’ ಎಂದೆನ್ನುತ್ತಾ ಬ್ರಾಹ್ಮಣರ ತಟ್ಟೆಯ ವಿರುದ್ದ ದಾಳಿಯಿಟ್ಟರೆ ಅದರಿಂದ ಸಾಧಿಸುವುದಾದರೂ ಏನು? ಬ್ರಾಹ್ಮಣರ ಜೊತೆ ಸಹಪಂಕ್ತಿ ಭೋಜನ ನಡೆಸಿಬಿಟ್ಟರಷ್ಟೇ ಶೂದ್ರ, ದಲಿತರ ಸ್ಥಿತಿಗತಿಗಳು ಬದಲಾಗಬಲ್ಲುದೇ!? ಬೇರು ಬಿಟ್ಟಿರುವ ಜಾತಿ ವ್ಯವಸ್ಥೆ ಮುರಿದು ಹೋಗಬಲ್ಲುದೇ!? ಬ್ರಾಹ್ಮಣರ ಪಕ್ಕ ಕೂತು ಊಟ ಮಾಡಿದಾಕ್ಷಣ ಇಲ್ಲಿರುವ ಜಾತಿ ಪದ್ಧತಿಯಾಗಲಿ, ಮೇಲು ಕೀಳುಗಳೆಂಬ ಅಸಹ್ಯ ಮನೋಸ್ಥಿತಿಯಾಗಲಿ ಖಂಡಿತಾ ನಿಂತು ಹೋಗದು. ನೆನಪಿಡಿ ಹೋರಾಟ, ಪ್ರತಿಭಟನೆಗಳು ಇದಕ್ಕೆ ಖಂಡಿತಾ ಪರಿಹಾರ ಒದಗಿಸದು ಬದಲಾಗಿ ಜಾತಿ ವೈಮನಸ್ಸನನು ಇನ್ನಷ್ಟು ಬಲಿತಗೊಳಿಸಬಲ್ಲದು ಅಷ್ಟೇ!

ಆದರೆ ಇದರ ಜೊತೆ ಜೊತೆಗೆ ಇಲ್ಲಿ ಬ್ರಾಹ್ಮಣ ವರ್ಗ ಕೂಡ ಒಂದಷ್ಟು ಯೋಚಿಸಬೇಕಿದೆ. ತನ್ನ ಒಣ ಪ್ರತಿಷ್ಠೆಯನ್ನು ಬದಿಗಿಟ್ಟು ಈ ಪಂಕ್ತಿ ಬೇಧವನ್ನು ಮರೆತು ಎಲ್ಲರೊಳಗೆ ಒಂದಾಗಲು ಪ್ರಯತ್ನಿಸಿದರೆ ಅದು ನಿಜವಾಗಿಯೂ ‘ನೊಂದಿರುವ’ ಸಮಾಜಕ್ಕೆ ನೀಡುವ ಆದರ್ಶವಾಗಬಲ್ಲುದು. ಉಡುಪಿಯನ್ನೇ ತೆಗೆದುಕೊಂಡರೆ ಅಲ್ಲಿನ ಪುರೋಹಿತರನ್ನು ಬಿಟ್ಟರೆ ಮತ್ತ್ಯಾರು ವರ್ಷ ಪೂರ್ತಿ ಅನ್ನ ಛತ್ರದಲ್ಲಿ ಉಣ್ಣಲಾರರು ಅಲ್ಲವೇ!? ಹಾಗಿರುವಾಗ ಬ್ರಾಹ್ಮಣನೋರ್ವ ಅದ್ಯಾವುದೋ ಒಂದು ದಿನ ದೇವಸ್ಥಾನಕ್ಕೆ ಪ್ರವೇಶಿಸಿ ಭೋಜನ ಶಾಲೆಯಲ್ಲಿ ಕೂತಾಗ ತನ್ನ ಸಂಪ್ರದಾಯದ್ದ ಪದ್ಧತಿಯನ್ನು ಬದಿಗಿರಿಸಿ ಎಲ್ಲರೊಳಗೆ ಬೆರತರೆ ಆಗುವ ನಷ್ಟವಾದರೂ ಏನು? ಎಲ್ಲರೂ ಒಂದು ಎಲ್ಲರೂ ಹಿಂದೂ ಎನ್ನುವುದಾದರೆ ತಮ್ಮ ತಮ್ಮ ಸಹೋದರರ ಜೊತೆ ಉಣ್ಣಲು ಮುಜುಗರವೇಕೆ ಇವರಿಗೆ!? ಅದೆಷ್ಟೋ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಹೋಟೇಲ್‍ಗೆ ಪ್ರವೇಶಿದರೆ ಅಲ್ಲಿ ಎಲ್ಲರಂತೆ ಉಣ್ಣಲು ಸಾಧ್ಯವಾಗುತ್ತದೆ ಎಂದಾದರೆ ದೇವಸ್ಥಾನಗಳಲ್ಲೇಕೆ ಸಾಧ್ಯವಾಗದು ಎಂದು ಬ್ರಾಹ್ಮಣ ಸಮಾಜವು ಯೋಚಿಸಲು ಪ್ರಾರಂಭಿಸಿದರೆ ಸಮಸ್ಯೆಗೆ ಖಂಡಿತಾ ಪರಿಹಾರ ದೊರೆತೀತು! ಯೋಚಿಸುವ ಮನಸು ಮಾಡಬೇಕಷ್ಟೇ!

ಮೇಲು ಕೀಳುಗಳೆಂಬ ಭಾವ ಮಾನವತೆಗೆ ಶಾಪವೆಂಬುದರಲ್ಲಿ ಎರಡು ಮಾತಿಲ್ಲ. ಜಾತೀಯ ಮಾನದಂಡದಲ್ಲಿ ಒಬ್ಬರನ್ನು ಅಳೆದು ಶೋಷಿಸುವುದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸಲೇಬೇಕಾದ ವಿಚಾರ. ದಲಿತರು, ಶೂದ್ರರು, ಬ್ರಾಹ್ಮಣರು, ವೈಷ್ಣವರು, ಶೈವರೆಂದೆನ್ನುತ್ತಾ ಇಲ್ಲಿ ನಮ್ಮದೇ ನಡೆಯಬೇಕು, ನಮ್ಮದೇ ಉಳಿಯಬೇಕು ಎಂದೆನ್ನುತ್ತಾ ಇತರರ ಭಾವನೆಗಳಿಗೆ, ಮಾನವೀಯ ಸಂಬಂಧಗಳಿಗೆ, ಆಚರಣೆ ಸಂಸ್ಕೃತಿಗಳಿಗೆ ಅಪಹಾಸ್ಯವ ಮಾಡುವುದು ಹೇಯವೆನ್ನದೆ ವಿಧಿಯಿಲ್ಲ. ಅವರವರು ಹುಟ್ಟಿ ಬೆಳೆದ ಪರಿಸರ ಅವರವರ ಭಾವಗಳ ಅಭಿವ್ಯಕ್ತಿಗೆ, ಆಚಾರಗಳ ಅನುಷ್ಠಾನಕ್ಕೆ ಕಾರಣವಾಗಬಲ್ಲುದು. ಇದರಲ್ಲಿ ಯಾರದು ಮೇಲು ಯಾರದು ಕೀಳು ಎಂಬುದಕ್ಕೆ ಅರ್ಥವಿಲ್ಲ. ಅವರವರದ್ದು ಅವರವರಿಗೆ ಸರಿ ಅಷ್ಟೇ. ಒಬ್ಬರಿಗೊಬ್ಬರು ಪರಸ್ಪರ ಗೌರವ ಸಲ್ಲಿಸುತ್ತಾ, ನಾವೆಲ್ಲರು ದೇವ ಸೃಷ್ಟಿಯ ಭಾಗಗಳೆಂದು ನಂಬಿಕೊಂಡು ಜೀವನ ನಡೆಸಲು ಎಂದು ಪ್ರಾರಂಭಿಸುತ್ತೇವೆಯೋ ಅಂದೇ ಈ ಮಾನವ ಜನ್ಮಕ್ಕೆ ಅರ್ಥ. ಆಗಾದಾಗ ಈ ಪಂಕ್ತಿ ಬೇಧವೋ ಅಥವಾ ಇನ್ನಾವುದೇ ದಲಿತ ಶೂದ್ರ ವಿಚಾರಗಳೋ ಹೇಳ ಹೆಸರಿಲ್ಲದಂತೆ ಮಾಯವಾಗಬಲ್ಲದು.

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!