Featured ಅಂಕಣ

ಲಾಸ್ಟ್ ಬುಕ್..!

ಬರೆದದ್ದು ಮೂರು ಅದರಲ್ಲಿ ಇದು “ಲಾಸ್ಟ್ ಬುಕ್” ಏನಿದು ಎಂದು ಹುಬ್ಬೇರಿಸುವವರೇ ಹೆಚ್ಚು. ನನ್ನ ಮಗ ಅಭಿ ಕೇಳಿಯೇ ಬಿಟ್ಟ ‘ಪಪ್ಪಾ..ನೀ ಇನ್ನು ಮುಂದೆ ಪುಸ್ತಕ ಬರೆಯೋದೇ ಇಲ್ವಾ..?’ ಮುಗ್ಧ ಪ್ರಶ್ನೆ. ನನ್ನ ಹೆಂಡತಿನೂ ‘ಹೆಸರು ಚೆನ್ನಾಗಿದೆ ಆದರೆ ಬೇರೆಯದೂ ಇದ್ದಿದ್ದರೆ ಇನ್ನೂ ಚೆನ್ನಾಗಿತ್ತು’ ಎಂದು ಅರೆ ಮನಸ್ಸಿಂದಲೇ ಹೇಳಿದಳು. ನಿಮಗೂ ಅನ್ನಿಸಿರಬಹುದು ಯಾಕೀ ಟೈಟಲ್.. ಎಲ್ಲದಕ್ಕೂ ಉತ್ತರ ಇದೆ.

ಜೂನ್-5ರಂದು ಗೋವಾದಲ್ಲಿ ನಡೆದ ‘ಪ್ರವಾಸಿ ಮಲೆಯಾಳಿ ಸಾಹಿತ್ಯ ಸಂಗಮ-2016’ರಲ್ಲಿ ‘ಇಂದಿನ ಹೊಸ ಬರಹಗಾರರ ಮುಂದಿರುವ ಸವಾಲುಗಳು’ ಎಂಬುದರ ಬಗ್ಗೆ ಮಾತನಾಡುವುದಕ್ಕೆ ಮಲೆಯಾಳಿ ಆಯ್ಕೆ ಸಮಿತಿಯು ನನ್ನನ್ನು ಆಯ್ಕೆ ಮಾಡಿತ್ತು. ನಾನು ಸಹ ಒಬ್ಬ ಹೊಸ ಬರಹಗಾರನೇ. ಹೊಸ ಬರಹಗಾರ ಅಂದರೆ ಯಾರು..? ತಾವು ಬರೆದ ಲೇಖನಗಳನ್ನಾಗಲಿ, ಕವಿತೆಗಳನ್ನಾಗಲಿ, ಕಥೆಗಳನ್ನಾಗಲಿ, ತಮ್ಮಲ್ಲಿಯೇ ಇಟ್ಟುಕೊಂಡು ಸುಮಾರು ವರುಷಗಳ ಮೇಲೆ ಸುದ್ದಿ ಪತ್ರಿಕೆಯಲ್ಲೊ, ಪುಸ್ತಕ ರೂಪದಲ್ಲೊ, ವೆಬ್‍ಸೈಟ್‍ನ ಮ್ಯಾಗ್‍ಜಿನ್‍ನಲ್ಲೊ ಕಾಣಿಸುವಂತೆ ಮಾಡುತ್ತಾರಲ್ಲಾ ಅವರೆ? ಅಥವಾ ನಿನ್ನೆ ಬರೆದುದನ್ನು ಇಂದು ಪ್ರಕಟಣೆಗೆ ಕೊಟ್ಟು ನಾಳೆ ಪುಸ್ತಕ ರೂಪದಲ್ಲಿ ತರುತ್ತಾರಲ್ಲಾ ಅವರೇ..? ಏಕೆಂದರೆ ಆ ಮಲೆಯಾಳಿ ಸಾಹಿತ್ಯ ಸಂಗಮದಲ್ಲಿ ಬಂದಿದ್ದ ಒಬ್ಬ ಮಹಿಳೆ ಅರವತ್ತು ದಾಟಿದವರು, ನಾನೂ ಹೊಸ ಲೇಖಕಿ ಎಂದು ಪ್ರಸ್ತಾಪಿಸುತ್ತಾ, ನಾಲ್ಕು ಪುಸ್ತಕ ಬರೆದುದಾಗಿ ಮತ್ತು ತಾವೇ ಪ್ರಕಾಶನ ಮಾಡಿದ್ದಾಗಿ ನಮ್ಮ ಜೊತೆ ಸಂವಾದಕ್ಕಿಳಿದರು. ಹಾಗಾದರೆ ಇಲ್ಲಿ ವಯಸ್ಸು ಅಡ್ಡ ಬರುವುದಿಲ್ಲವೆಂದಾಯಿತು.

ತಮ್ಮ ನಲವತ್ತೈದನೇ ವಯಸ್ಸಿನಲ್ಲಿ ಚಲನ ಚಿತ್ರ ಜಗತ್ತಿಗೆ ಕಾಲಿಟ್ಟು ಮೊದಲನೆ ಬಾರಿಗೇ ಫಿಲ್ಮ್‍ಫೇರ್ ಪ್ರಶಸ್ತಿ ಪಡೆದ ಬೊಮ್ಮನ್ ಇರಾನಿಯೂ ಹೊಸಬರೇ ಆಗಿದ್ದರು. ‘ಹೊಸ’ ಎಂದಾಕ್ಷಣ ಇಪ್ಪತ್ತೇ ಆಗಬೇಕೆಂದಿಲ್ಲ. ಹಾಗಾಗಿ ಯಾವತ್ತಿನಿಂದ ನೀವು ಬರೆಯಲು ಪ್ರಾರಂಭ ಮಾಡುತ್ತೀರೋ ಅಲ್ಲಿಂದ ನೀವೂ ಹೊಸ ಲೇಖಕರೇ..!

ಹಾಗಾದರೆ ಹಳೆಯ ಲೇಖಕರೆಂದರೆ..? ಸುಮಾರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಜನರ ಮನದಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ, ಯಾರ ತಂಟೆಗೂ ಹೋಗದೆ ತಾವಾಯಿತು ತಮ್ಮ ಬರಹವಾಯಿತು ಎಂದು ಕುಳಿತಿರುವವರೇ.. ಅಥವಾ ಕೇವಲ ಹಣದ ದಾಹಕ್ಕೆ ಪುಸ್ತಕ ಬರೆದು ಅದರಲ್ಲಿ ಕೇಂದ್ರ ಗ್ರಂಥಾಲಯಕ್ಕೆ ಸ್ವಲ್ಪ ಹಾಕಿ ಇನ್ನುಳಿದ ಕೆಲವೊಂದನ್ನು ತಮ್ಮ ಮನೆಯಲ್ಲಿ ಕೊಳೆಯಲು ಬಿಟ್ಟು ತಾವು ಲೇಖಕರೆಂದು ಹೇಳಲ್ಪಡುವ ಲೇಖಕರೇ..? ಅಥವಾ ಒಂದೆರೆಡು ಪುಸ್ತಕ ಬರೆದು ಸುದ್ದಿ ವಾಹಿನಿಯಲ್ಲಿ ಕಾಂಟ್ರವರ್ಸಿಯಲ್ ಸುದ್ದಿಯಾಗಿ, ಜನರ ಹಿತಾಸಕ್ತಿಗೆ ಧಕ್ಕೆ ತರುವಂತಹ, ಮನಸ್ಸಿಗೆ ನೋವುಂಟು ಮಾಡುವಂತಹ ನಾಲ್ಕಾರು ವಾಕ್ಯಗಳನ್ನು ಸಭೆ ಸಮಾರಂಭದಲ್ಲಿ ಹೇಳುವಂಥವರೇ?. ಯಾರು ಹೊಸ ಲೇಖಕರು..? ಯಾರು ಹಳೇ ಲೇಖಕರು..? ಮತ್ತು ಹೊಸಬ, ಹಳಬ ಎನ್ನುವ ಭೇದ ಬರವಣಿಗೆಯಲ್ಲಿ ಬೇಕೆ? ಎಂಬುದನ್ನು ನೀವೇ ನಿರ್ಧರಿಸಿ.

ಈಗ ಹೊಸ ಲೇಖಕರಿಗೆ ಬಹಳವಾಗಿ ಕಾಡುವ ಪ್ರಶ್ನೆ ಎಂದರೆ ತಮ್ಮ ಪುಸ್ತಕವನ್ನು ಪ್ರಕಾಶನ ಮಾಡುವುದು, ಮತ್ತು ಯಾರೂ ಪ್ರಕಾಶನ ಮಾಡಲು ಮುಂದೆ ಬರುತ್ತಿಲ್ಲ ಎನ್ನುವುದು ಕಾರಣವೇನು..? ಓದುಗರ ಸಂಖ್ಯೆ ವಿರಳವಾಗಿದೆ ಎನ್ನುವುದು ಪ್ರಕಾಶಕರ ಮಾತು, ಹಾಗಾದರೆ ಯಾರ ಪುಸ್ತಕವೂ ಪ್ರಕಟಣೆಯಾಗಬಾರದು. ಕೆಲವು ಕಾಂಟ್ರವರ್ಸಿಯಲ್ ಲೇಖಕರ ಪುಸ್ತಕಗಳು ಆಗುತ್ತವೆ ಅಂದರೆ ಬರಹಗಾರ ಅವರಂತೆಯೇ ಬರೆದಾಗ ಮಾತ್ರ ಪ್ರಕಾಶಕರು ಒಪ್ಪುತ್ತಾರೆಯೇ?

ಇಂದಿನ ಯುವಕರು ನಾಳಿನ ಸದೃಢ ದೇಶ ಕಟ್ಟುವವರು ಎನ್ನುವುದನ್ನು ಹಿಂದಿನಿಂದಲೂ ಹೇಳುತ್ತಾ ಬರಲಾಗಿದೆ. ಹಿಂದೆ ಹೆಚ್ಚೆಚ್ಚು ಪುಸ್ತಕಗಳನ್ನು ಓದುತ್ತಿದ್ದರು ಮತ್ತು ಅದರಲ್ಲಿಯ ತಿರುಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈಗ ಫೇಸ್‍ಬುಕ್, ವ್ಯಾಟ್ಸ್’ಪ್’ನ ಹಾವಳಿಯು ಯುವಜನತೆಯಲ್ಲಿ ಆವರಿಸಿಕೊಂಡಿದೆ. ಒಬ್ಬ ಫೇಸ್‍ಬುಕ್‍ನಲ್ಲಿ ಕುಳಿತನೆಂದರೆ ಎರಡು ಮೂರು ತಾಸು ಹೇಗೆ ಕಳೆದು ಹೋಗುವುದೆಂದು ಆತನಿಗೇ ಗೊತ್ತಾಗುವುದಿಲ್ಲ. ಅದರಲ್ಲಿ ಬಹುಪಾಲು ಸಮಯ ‘ಲೈಕ್’ ಒತ್ತುವುದರಲ್ಲಿಯೇ ಕಳೆಯುತ್ತಾನೆ. ಅಲ್ಲಿ ಪೇಸ್ಟ್ ಆಗಿದ್ದ ವಿಷಯ ಓದಲಿ ಬಿಡಲಿ, ತನ್ನ ಸ್ನೇಹಿತ ಖುಶಿಯಾಗಲಿ ಎಂದು ಒಂದು ‘ಲೈಕ್’ ಮಾಡುತ್ತಾನೆ. ಇನ್ನು ಸ್ವಲ್ಪ ಹೆಚ್ಚು ಪ್ರೀತಿಸುವವರು ಗುಡ್, ಅಭಿನಂದನೆಗಳು, ವೆರಿ ನೈಸ್ ಎನ್ನುವ ಕಾಮೆಂಟ್ ಹಾಕಿ ಮುಗಿಸುತ್ತಾರೆ. ಹಾಗಾದರೆ ಅಷ್ಟು ಹೊತ್ತು ತಮ್ಮ ಅಮೂಲ್ಯ ಸಮಯವನ್ನು ಸುಮ್ಮನೆ ಕಳೆದ ಹಾಗಾಯಿತಲ್ಲವೇ..? ಇದು ಈಗಿರುವ ಸತ್ಯಾಂಶ.

ಹೀಗಿರುವ ಸಂಧರ್ಭದಲ್ಲಿ ಒಬ್ಬ ಹೊಸ ಸಾಹಿತಿ ತಾನು ಕಷ್ಟ ಪಟ್ಟು ಬರೆದ ಬರಹ ಫೇಸ್‍ಬುಕ್, ವ್ಯಾಟ್ಸಾಪ್’ನಲ್ಲಿ ಹಾಕಿದಾಗ ಅದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಕ್ಕಿರುವುದಿಲ್ಲ ಅದಕ್ಕಾಗಿ ಪುಸ್ತಕ ರೀತಿಯಲ್ಲಿ ಹೊರತರಲು ಪ್ರಯತ್ನಿಸುತ್ತಾನೆ.

ಚೊಚ್ಚಲು ಹೆರಿಗೆಯನ್ನು ತವರು ಮನೆಯಲ್ಲಿಯೇ ಮಾಡಿಸುವುದು ವಾಡಿಕೆ. ತವರಿಲ್ಲದವರು ಗಂಡನ ಮನೆಯಲ್ಲಿಯೇ. ಇದು ಗೊತ್ತಿದ್ದ ವಿಚಾರ. ಚೊಚ್ಚಲು ಹೆರಿಗೆಯನ್ನು ಅತೀ ಕಾಳಜಿಯಿಂದ ಮಾಡಿಸುವುದು ಎರಡೂ ಮನೆಯ ಉದ್ದೇಶವಾಗಿರುತ್ತದೆ. ಅದಕ್ಕಾಗಿ ದೊಡ್ಡ ಆಸ್ಪತ್ರೆಯನ್ನೇ ಹುಡುಕುತ್ತಾರೆ, ಹಿರಿತಲೆಯ ಡಾಕ್ಟರ್‍ಗಳೇ ಆಗಿರಬೇಕೆನ್ನುತ್ತಾರೆ, ಬಾಣಂತಿಯನ್ನು ನೋಡಲು ಸದಾ ನರ್ಸಮ್ಮ ಇರಬೇಕೆನ್ನುತ್ತಾರೆ. ವೆಚ್ಚಕ್ಕಂತೂ ಚಿಂತೆಯೇ ಇರುವುದಿಲ್ಲ, ಇಷ್ಟೆಲ್ಲಾ ಏಕೆಂದರೆ ‘ಚೊಚ್ಚಲು ಹೆರಿಗೆ’ ಎಂದರೆ ಹಾಗೆಯೇ..!

ಅದರಂತೆ ಲೇಖಕರಿಗೂ ಪುಸ್ತಕ ತರುವುದೊಂದು ಹೆರಿಗೆ ಮಾಡಿಸಿದಂತೆ. ಮೊದಲನೇ ಪುಸ್ತಕ ಎಷ್ಟೇ ಖರ್ಚಾಗಲಿ ತಾನೇ ಹಣ ಹಾಕುವುದಕ್ಕೆ ಸಿದ್ಧನಾಗುತ್ತಾನೆ, ಅದರಲ್ಲಿ ಸಂತೋಷವನ್ನು ಕಾಣುತ್ತಾನೆ ಆದರೆ ಎರಡನೇ ಪುಸ್ತಕಕ್ಕೆ ಸ್ವಲ್ಪ ಯೋಚಿಸಲು ಶುರು ಮಾಡುತ್ತಾನೆ. ಮೂರನೇ ಮತ್ತು ಮುಂದಿನ ಪುಸ್ತಕದ ಪ್ರಕಾಶನಕ್ಕೆ ಕೈ ಹಾಕುವುದಿಲ್ಲ. ಕೆಲವೊಮ್ಮೆ ಹಾಕುತ್ತಾನೆ ಆದರೆ ತನ್ನ ಹಿಂದಿನ ಪುಸ್ತಕಗಳು ಸಂಪೂರ್ಣ ಮಾರಾಟವಾಗಿರಬೇಕು. ಇದು ಸಾಧ್ಯವೇ..? ಇಲ್ಲ. ಕಾರಣ ಒಬ್ಬ ಬರಹಗಾರನಿಗೆ ಬರೆಯುವುದು ಗೊತ್ತು ಆದರೆ ತನ್ನ ಸರಕನ್ನು ಮಾರಾಟ ಮಾಡುವುದು ಗೊತ್ತಿರುವುದಿಲ್ಲ. ‘ಹಿ ಈಜ್ ನಾಟ್ ಎ ಬಿಜಿನೆಸ್ ಮ್ಯಾನ್’ ಹಾಗಾಗಿ ಮಾರಾಟ ಮಾಡುವ ಕಲೆ ಗೊತ್ತಿರುವ ಲೇಖಕ ಮುಂದೆ ಹೋಗುತ್ತಾನೆ.

ಲೇಖಕನ ಪರಿಚಯ ಸಮಾಜಕ್ಕೆ ಆಗುವುದು ಸುದ್ದಿ ಪತ್ರಿಕೆಗಳ ಮೂಲಕವೇ ಹೆಚ್ಚು. ಈಗಂತೂ ಫೇಸ್‍ಬುಕ್, ವ್ಯಾಟ್ಸಾಪ್’ಗಳೂ ಸಹಾಯ ಮಾಡುತ್ತವೆ. ಆದರೆ ಎಷ್ಟು ಲೇಖಕರು ನಿಯತಕಾಲಿಕ ಪತ್ರಿಕೆಗಳಲ್ಲಿ ತಮ್ಮ ಹೆಸರನ್ನ ಕಂಡಿದ್ದಾರೆ..? ಇದು ಸ್ವಲ್ಪ ಕಷ್ಟವೇ ಸರಿ. ಒಂದು ನಿಮ್ಮ ಬರವಣಿಗೆಯಲ್ಲಿ ತಾಕತ್ತು ಇರಬೇಕು ಇಲ್ಲವೇ ತಾಕತ್ತಿದ್ದವರ ಕೈ ನಿಮ್ಮ ತಲೆಯ ಮೇಲಿರಬೇಕು. ಹಾಗಾದರೆ ಸಾಧಾರಣ ಮಟ್ಟದಲ್ಲಿ ಬರೆಯುವ ಬರಹಗಾರನ ಪಾಡೇನು..? ‘ಹಾಡಿದಷ್ಟು ರಾಗ ಉಗುಳಿದಷ್ಟು ರೋಗ’, ಸರಿ..,  ಪದೇ ಪದೇ ಹಾಡಿದ ಹಾಗೆ  ಹಾಡು ಚೆಂದ ಬರುತ್ತದೆ ಅದರಂತೆ ಪದೇ ಪದೇ ಬರೆದಾಗಲೂ ಬರವಣಿಗೆಯೂ ಸುಧಾರಣೆ ಆಗುತ್ತದೆ, ಆದರೆ ಪತ್ರಿಕೆಯವರು  ಆ ಚಾನ್ಸ್ ಕೊಡುವುದಿಲ್ಲ. ಹಾಗೆ ಒಂದು ವೇಳೆ ಕೊಟ್ಟ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಬ್ಬ ಒಳ್ಳೆಯ ಲೇಖಕರಾಗುವುದರಲ್ಲಿ ಸಂದೇಹವೇ ಇರುವುದಿಲ್ಲ. ಇದು ಒಂದು ತರಹ ‘ಎಕ್ಸಪೀರಿಯನ್ಸ್ ಇಲ್ಲದೆ ಕೆಲಸ ಕೊಡುವುದಿಲ್ಲ, ಕೆಲಸ ಬೇಕೆಂದರೆ ಎಕ್ಸಪೀರಿಯನ್ಸ್ ತೋರಿಸಬೇಕು’ ಎನ್ನುವ ಹಾಗೆ..!

ನಮಗೆ ಅವಕಾಶವಿಲ್ಲವೆಂದು, ಪ್ರಕಾಶನ ಮಾಡಲು ಆಗುವುದಿಲ್ಲವೆಂದು ಬರೆಯಲು ನಿಲ್ಲಿಸಿ ಬಿಡಬಹುದೇನೋ..? ನಿಲ್ಲಿಸಿಯೂ ಬಿಡಬಹುದು..! ಆದರೆ ಹೇಗೆ ಒಂಬತ್ತು ತಿಂಗಳ ತಾಯಿ ಗರ್ಭದಿಂದ ಮಗು ಹೊಸ ಜಗತ್ತನ್ನು ಕಾಣಲು ಹಾತೊರೆಯುತ್ತಿರುತ್ತದೆಯೋ ಹಾಗೆ ಒಬ್ಬ ಲೇಖಕನಿಗೆ ತನ್ನ ತಲೆಯಲ್ಲಿ ತುಂಬಿರುವ ವಿಷಯಗಳು ಅಕ್ಷರ ರೂಪದಲ್ಲಿ ಹೊರ ಬಂದಾಗ ಮಾತ್ರ ತಾನು ನೆಮ್ಮದಿಯಿಂದ ನಿದ್ರಿಸಲು ಸಾಧ್ಯ. ನಿಮಗೆ ಗೊತ್ತಿರುವ ಹಾಗೆ ಎಷ್ಟೋ ಕವಿಗಳ ಕವಿತೆಗಳು ಮಧ್ಯರಾತ್ರಿಯಲ್ಲಿ ಅರಳಿಕೊಂಡಿವೆ. ಹಾಗಾಗಿ ಲೇಖಕನೂ ಪ್ರಸವ ವೇದನೆಯಿಂದ ನಿರುಮ್ಮಳವಾಗಬೇಕಾದರೆ ತಲೆಯಲ್ಲಿರುವ ಅಕ್ಷರಗಳು ಹಾಳೆಯ ಮೇಲೆ ಮೂಡಲೇ ಬೇಕು ಮತ್ತು ಅದನ್ನೋದಿ ತಾನು ಖುಷಿಪಡುವುದರ ಜೊತೆಗೆ ಓದುಗನೂ ಮೆಚ್ಚಿಕೊಂಡಾಗ ತನ್ನ ಬರವಣಿಗೆಯ ಸಾರ್ಥಕತೆಯನ್ನು ನೆನೆಯುತ್ತಾನೆ.

   ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ‘ಎದೆ ತುಂಬಿ ಹಾಡಿದೆನು..’ ಎನ್ನುವ ಭಾವಗೀತೆಯಲ್ಲಿ ಯಾರು ಕಿವಿ ಮುಚ್ಚಿ ಕುಳಿತರೂ ನನಗಿಲ್ಲ ಚಿಂತೆ ಎನ್ನುವ ಹಾಗೆ, ಯಾರು ಓದಲಿ ಬಿಡಲಿ ನಾನಂತು ಬರೆಯುತ್ತೇನೆ ಎಂದು ಶಿವರಾಂ ಕಾರಂತರು ಬರೆಯುತ್ತಿದ್ದುದು, ಇವೆಲ್ಲವೂ ಒಬ್ಬ ಕವಿ ಅಥವಾ ಲೇಖಕ ತಾನಿಷ್ಟಪಟ್ಟರೂ ನಿಲ್ಲಿಸಲಾಗದೆ ಜರುಗುತಿದ್ದ ಕಾಯಕ ಆದ್ದರಿಂದ ನಾನೂ ಸಹ ಯಾರು ಓದಲಿ ಬಿಡಲಿ ನಾನಂತು ಬರೆಯುತ್ತೇನೆ  ಎಂದು ನಿಲ್ಲಿಸಲಾಗದೇ ಬರೆದ ಬರಹಗಳು ನಿಮ್ಮ ಮುಂದಿವೆ ಮತ್ತು ಒಂದು ಚೌಕಟ್ಟಿನಡಿಯಲ್ಲಿ ಬರೆದಿದ್ದೇನೆ. ಓದಿದರೆ ನಾನು ಬರೆದ ಭಿನ್ನವಾದ ವಿಷಯ ನಿಮಗೆ ಗೊತ್ತಾಗಬಹುದು.

ಒಬ್ಬ ಸಾಮಾನ್ಯ ಬರಹಗಾರನಾಗಿ ಹಲವಾರು ಹಿರಿಯ ಕಿರಿಯ ಬರಹಗಳನ್ನು ಓದಿ ಆ ವಿಷಯಗಳೊಂದಿಗೆ ತನ್ನವನ್ನೂ ಓರೆ ಹಚ್ಚಿ ನೋಡಿದಾಗ ಕೆಲವು ಸಾಮ್ಯತೆ ಹೊಂದುತ್ತವೆ ಮತ್ತು ಕೆಲವು ವಿರುದ್ಧ ದಿಕ್ಕಿನಲ್ಲಿ ನಿಲ್ಲುತ್ತವೆ. ಇನ್ನೂ ಕೆಲವು ಸಂದರ್ಭಗಳು, ಸನ್ನಿವೇಶಗಳು ತನ್ನ ಮಿದುಳಿನ ಯಾವುದೋ ಕೋಣೆಯಲ್ಲಿ ಮನೆಮಾಡಿ ಆಗಾಗ ಮೆಲುಕು ಹಾಕುವಂತೆ ಮಾಡುತ್ತಿರುತ್ತವೆ. ಹೆಚ್ಚಿನವು ಪ್ರಶ್ನಾರ್ಥಕ ವಿಷಯಗಳೇ ಆಗಿರುತ್ತವೆ ಹಾಗಿರುವಾಗ ಒಬ್ಬೊಬ್ಬರನ್ನೇ ಹಿಡಿದು ಕೇಳುವುದು ಆಗುವುದಿಲ್ಲ ಮತ್ತು ಮೆದುಳಿನಲ್ಲಿಯ ವಿಷಯದ ‘ಡೆಲಿವರಿ’ ಆಗಲೇಬೇಕು. ಅದಕ್ಕೆಂದೇ ಬರೆಯುವುದು ಅನಿವಾರ್ಯವಾಗಿ ಬಿಡುತ್ತದೆ.

ಇಂಥಹ ಲೇಖಕರು ಸಾವಿರಾರು ಅವರಿಗೂ ಇದೇ ತರಹದ ಬೇನೆ ಇರಬಹುದು. ಅದಕ್ಕೆಂದೇ ಬರೆಯುತ್ತಿರಬಹುದು. ಅದನ್ನು ಜನರಿಗೆ ತಲುಪಿಸುವುದು ಪ್ರಕಾಶಕರ ಕೆಲಸ ಮತ್ತು ಹೊಸ ಬರಹಗಾರರನ್ನು ಬೆಳೆಸುವುದು ಓದುಗ ಮಿತ್ರರ ಜವಾಬ್ದಾರಿ ಎನ್ನುವುದು ನನ್ನ ಅಭಿಪ್ರಾಯ ಅದಕ್ಕೆ ಪೂರಕವಾಗಿ ಬರಹಗಾರರ ವಿಷಯಗಳು ಸಹ ಪ್ರಕಾಶನಕ್ಕೊಳಪಡಿಸುವಂಥಹ ಜವಾಬ್ದಾರಿಯುತ ಬರಹಗಳಾಗಿರಬೇಕು, ಓದುಗನಿಗೆ ಆಪ್ತವೆನ್ನಿಸುವಂಥಹದ್ದಾಗಿರಬೇಕು, ಹಾಗೆ ಇದ್ದಾಗಲೂ ಲೇಖಕನಿಗೆ ಬೆಲೆ ಸಿಗದಿದ್ದಾಗ ತನ್ನಲ್ಲಿದ್ದ ಬೇರೆಯವರಿಗಿಂತ ಭಿನ್ನವಾದ ವಿಷಯಗಳು ಹಾಗೆಯೇ ಬಾಡಿ ಹೋಗುತ್ತವೆ. ಆದರೂ ಬರೆಯುವವರು ಬರೆಯುತ್ತಾರೆ. ಮೊದಲನೆಯ ಪುಸ್ತಕವನ್ನು ಹೇಗೋ ಸ್ವಂತ ಪ್ರಕಾಶನದಲ್ಲಿ ತರುತ್ತಾರೆ, ಮುಂದೆ ಬರುವ ಬರಹಗಳಿಗೆ ಪ್ರಕಾಶಕರಿಲ್ಲದೆ, ಓದುಗರಿಲ್ಲದೇ ಮೊದಲನೆಯ ಪುಸ್ತಕವೇ ಲಾಸ್ಟ್’ಬುಕ್ ಆಗಿ ಬಿಡುತ್ತದೆ. ಎಲ್ಲರೂ ಲೇಖಕನನ್ನು ಬರೆಯಲು ಹುರಿದುಂಬಿಸಿದಾಗ ಲೇಖಕನ ಬರಹಕ್ಕೆ ತನ್ನ ಲಾಸ್ಟ್’ಬುಕ್ ಎನ್ನುವುದೇ ಇರುವುದಿಲ್ಲ. ಹಾಗಾಗಿ ನಿಮ್ಮ ಸಂಪೂರ್ಣ ಬೆಂಬಲದ ನಿರೀಕ್ಷೆಯಲ್ಲಿ ಈ ‘ಲಾಸ್ಟ್’ಬುಕ್’ನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ಇಷ್ಟವಾದಲ್ಲಿ ಬೆನ್ನು ತಟ್ಟಿ, ಕೊಂಚ ತಪ್ಪಾದಲ್ಲಿ ಕೈ ಹಿಡಿದು ಮೇಲೆ ಎಳೆಯಿರಿ.

ಈ ‘ಲಾಸ್ಟ್’ಬುಕ್’ ಮುಂದೆ ಬರುವ ಹಲವಾರು ಕೃತಿಗಳಿಗೆ ಮುನ್ನುಡಿಯಾಗುತ್ತದೆ ಎನ್ನುವ ಆಶಯದೊಂದಿಗೆ ನಿಮಗೆ ಸಮರ್ಪಿಸುತ್ತಿದ್ದೇನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagaraj Mukari

ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ. ಪ್ರಸಕ್ತ ಕಾರವಾರದ ಕೈಗಾ ಅಣು ಸ್ಥಾವರದಲ್ಲಿ ನೌಕರಿ. ನಿಸರ್ಗ ಪ್ರಕಾಶನ, ಹಾಸನ ಅವರಿಂದ 2012ರಲ್ಲಿ ‘ಮಲೆನಾಡಿನ ಕಾನನ’ ಕವಿತೆಗೆ ‘ಕವನ ಕುಸುಮ’ ಪ್ರಶಸ್ತಿ. 2013ರಲ್ಲಿ ಚೊಚ್ಚಲ ಕೃತಿ ‘ನನ್ನ ಹೆಜ್ಜೆಗಳು’ ಕವನ ಸಂಕಲನ, 2016ರಲ್ಲಿ ‘ಲಾಸ್ಟ್ ಬುಕ್’ಅನುಭವ ಬರಹಗಳು ಎರಡನೇ ಕೃತಿ ಬಿಡುಗಡೆ. ಮೂರನೇ ಕೃತಿ ಹನಿಗವನ ಸಂಕಲನ ‘ಪ್ರೂಟ್ಸ್ ಸಲಾಡ್’ ಬಿಡುಗಡೆಯ ಹಂತದಲ್ಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!