ಪ್ರಚಲಿತ

ರಾಜಕಾರಣಿಗೆ ನೀಡಿದ ‘ಓಟು’ ಆಗತಾನೇ ಸತ್ತಿತ್ತು

‘ಕಳೆದ ಒಂದು ವಾರದಿಂದ ಯಾವ ಎಂಪಿ-ಎಮ್ಎಲ್ಎ ರಸ್ತೆಗಿಳಿದಿಲ್ಲ, ಯಾಕಂದ್ರೆ ಎಲ್ಲಾ ರಾಜಕಾರಣಿಗಳು ನೋಟ್ ಎಣ್ಸೋದ್ರಲ್ಲಿ ಬ್ಯುಸಿ ಇದ್ದಾರೆ’ ಹೀಗಂತ ಮೊನ್ನೆ ವಾಟ್ಸಪ್ ಅಲ್ಲಿ ಮೆಸೇಜ್ ಬಂತು. ನೋಡೊಕೆ ಜೋಕಿನಂತೆ ಕಂಡು ಬಂದರೂ ಈಗಿನ ಪರಿಸ್ಥಿತಿ ನೋಡಿದ್ರೆ ಅದು ಬಹುಷಃ ನಿಜ ಎಂದು ಅನ್ನಿಸುತ್ತಿದೆ.

ಈ ದೇಶದ ಪ್ರಧಾನಮಂತ್ರಿ ಕಳೆದ 8 ನೇ ತಾರೀಖಿನ ರಾತ್ರಿ 8 ಘಂಟೆಗೆ ನೋಟು ರದ್ದತಿಯ ನಿರ್ಧಾರವನ್ನು ಜನರೆದುರು ಪ್ರಸ್ತಾಪಿಸಿದಾಗ ಇಡಿ ದೇಶದ ಜನತೆ ಒಮ್ಮೆ ಕಂಗಾಲಾಗಿದ್ದು ನಿಜ. ಕೆಲ ಕಾಳಧನಿಕರಿಗಂತೂ ಎರಡು-ಮೂರು ದಿನಗಳ ಕಾಲ ಮೋದಿ ಜ್ವರ ಬಂದಿದ್ದು ಸುಳ್ಳಲ್ಲ. ಸಾಮಾನ್ಯ ಜನತೆಯ ಜೊತೆಗೆ ರಾಷ್ಟ್ರದ ರಾಜಕಾರಣಿಗಳಿಗೂ ಇದು ಶಾಕಿಂಗ್ ನ್ಯೂಸ್ ಆಗಿತ್ತು. ಕೆಲವರು ಹೊಟ್ಟೆಯೊಳಗೆ ಬೆಂಕಿಯ ಹೊಗೆಯಾಡುತ್ತಿದ್ದರೂ, ಟಿವಿ ಕ್ಯಾಮೆರಾಗಳೆದುರು ನಗುಮುಖದಿಂದ ‘ಪ್ರಧಾನಿಯವರ ದಿಟ್ಟ ಕ್ರಮವನ್ನು ಸ್ವಾಗತಿಸುತ್ತೇವೆ, ಆದರೆ ಸ್ವಲ್ಪ ಸಮಯಾವಕಾಶ ನೀಡ್ಬೇಕಿತ್ತು’ ಎಂದು ಹೇಳಿಕೆ ಕೊಟ್ಟು ತಮ್ಮ ಕೆಲಸದಲ್ಲಿ ಮಗ್ನರಾದರು. ಕೆಲವರು ಏಳು ಜನ್ಮಕ್ಕಾಗುವಷ್ಟು ಮಾಡಿದ್ದ ದುಡ್ಡನ್ನೆಲ್ಲಾ ಮೋದಿ ಒಂದು ನಿಮಿಷದಲ್ಲಿ ಮಣ್ಣು ಮಾಡಿದ ಎಂದು ಶಪಿಸಿ, ಅನಿವಾರ್ಯವಾಗಿ ಕ್ಷೇತ್ರದ ಜನತೆಗೆ ರಾಜಾರೋಷವಾಗಿ ಹಂಚಿ ಮೀಡಿಯಾದವರ ಕೆಂಗಣ್ಣಿಗೆ ಗುರಿಯಾಗಿದ್ದು ನಾಡಿನ ಜನತೆಗೆ ತಿಳಿದಿರುವ ಸಂಗತಿ. ಇನ್ನು ಸೋ ಕಾಲ್ಡ್ ವಿರೋಧ ಪಕ್ಷದ ರಾಜಕಾರಣಿಗಳದ್ದೊಂತರಾ ಪಾಡು. ವಿರೋಧಿಸುವುದೇ ಅವರ ಕರ್ತವ್ಯವೆಂದು ತಿಳಿದು ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಈ ಕ್ಷಣದಲ್ಲಿ ನಿಜವಾಗಿ ಜನತೆಯೆದುರು ಬರಬೇಕಾಗಿದ್ದು ಬಾಯೆತ್ತಿದರೆ ಕಂಡ ಕಂಡ ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ಹಮಾರೆ ಮೋದಿಜಿ’,ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳು’ ಎಂದು ಮೋದಿಯ ಹೆಸರಿನಲ್ಲಿ ಚಪ್ಪಾಳೆ ಗಿಟ್ಟಿಸಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ಎಂಪಿ,ಎಮ್ಎಲ್ಎಗಳು. ಆದರೆ ಇಂದು ಅವರೂ ಸಹ ಮೋದಿಯವರ ನಿರ್ಧಾರವನ್ನು ಉಳಿದವರಂತೆ ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತಗೊಳಿಸಿದ್ದಾರೆ. ಇದರ ಪರಿಣಾಮ ಮರುದಿನ ಪತ್ರಿಕೆಯ ಜೊತೆ ಅವರ ಹೇಳಿಕೆಗಳೂ ರದ್ದಿಯನ್ನು ಸೇರಿವೆ. ರಾಷ್ಟ್ರದ ಕೆಲ ಪ್ರಜ್ಞಾವಂತ ನಾಗರಿಕರು ಮಾತ್ರ ವೈಯಕ್ತಿಕ ಕಾರ್ಯಗಳನ್ನು ಬದಿಗೊತ್ತಿ ದೇಶದ ಬದಲಾವಣೆಯಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ನನ್ನ ಪರಿಚಯದ ಬೆಂಗಳೂರಿನ ಸಾಮಾನ್ಯ ವ್ಯಕ್ತಿಯೊಬ್ಬರು 3 ದಿನಗಳ ಕಾಲ ಉದ್ಯೋಗಕ್ಕೆ ರಜೆ ಹಾಕಿ ಬ್ಯಾಂಕ್ ಎದುರಿಗೆ ನಿಂತ ಜನಸಾಮಾನ್ಯರಿಗೆ ಅರ್ಜಿ ತುಂಬಿ ಕೊಟ್ಟಿದ್ದಾರೆ ಎಂದು ಸ್ನೇಹಿತರೊಬ್ಬರು ಹೇಳಿದಾಗ, ನಾವು ರಾಜಕಾರಣಿಗೆ ನೀಡಿದ ಓಟು ಆಗತಾನೇ ಸತ್ತಿತ್ತು.

ಕೇಂದ್ರ ಸರಕಾರದ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಿದೆ. ದೇಶದ ಜನರೆಲ್ಲರೂ ಕೇಂದ್ರ ಸರಕಾರದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎಂದು ಹಲವು ಕಾಣದ ಗುಜರಿ ಕೈಗಳು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇನ್ನು ಕೆಲ ಮೀಡಿಯಾಗಳಂತೂ ತಾವೇ ಅರ್ಥಶಾಸ್ತ್ರ ಪಂಡಿತರಂತೆ ಇಲ್ಲದಿದ್ದನ್ನೆಲ್ಲಾ ಹೇಳಲು ಹೋಗಿ ಜನರೆದುರು ಮಂಗವಾಗಿದ್ದಾರೆ. ಚಿತ್ರನಟಿಯೊಬ್ಬಳು ರಾಜಕಾರಣದಲ್ಲೂ ನಟನೆ ಮಾಡಿ ಸಾರ್ವಜನಿಕರಿಂದ ಮಂಗಳಾರತಿ ಎತ್ತಿಸಿಕೊಂಡಿದ್ದಾಗಿದೆ. ಆದರೆ ಮೇಲೆ ಹೇಳಿದಂತೆ ಯಾವ ಸಾಮಾನ್ಯ ಜನತೆಯೂ ಮೋದಿಯ ಈ ನಿರ್ಧಾರವನ್ನು ವಿರೋಧಿಸುತ್ತಿಲ್ಲ, ಬದಲಾಗಿ ನಗುಮೊಗದಿಂದ ಸ್ವಾಗತಿಸಿದ್ದಾರೆ ಎಂಬುದು ಸತ್ಯ ಸಂಗತಿ. ಈ ಹಿಂದೆ ‘ಪ್ರಾಂಕ್ಲಿ ಸ್ಪೀಕಿಂಗ್ ವಿಥ್ ಅರ್ನಬ್ ಗೋಸ್ವಾಮಿ’ ಸಂದರ್ಶನದಲ್ಲಿ ಪ್ರಧಾನಿಯವರು ‘ನಮ್ಮ ಸರಕಾರ ಅಜೆಂಡಾ ಇರುವುದು ಬಡವರಿಗಾಗಿ. ಬಡವರ ಧ್ವನಿಯನ್ನು ನಾವು ಆಲಿಸುತ್ತೇವೆ’ ಎಂದಿದ್ದನ್ನು ತಾವು ರೆಕಾರ್ಡ್ ಮಾಡಿ ಭಾಷಣ ಬಿಗಿದ ಬಿಜೆಪಿ ರಾಜಕಾರಣಿಗಳು ಇಂದು ಜನಸಾಮಾನ್ಯರ ಧ್ವನಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟಿಸುವ ಪ್ರಯತ್ನವಾದರೂ ಮಾಡಿದ್ದಾರೆಯೆ..? ಯಾವ ಜನಪ್ರತಿನಿಧಿ ನೋಟು ರದ್ಧತಿಯ ವಿಚಾರದಲ್ಲಿ ಜನತೆಯ ಸಂಶಯ,ಪ್ರಶ್ನೆಗಳಿಗೆ ಉತ್ತರ ದೊರಕುವಂತೆ ವ್ಯವಸ್ಥೆ ಮಾಡಿದ್ದಾನೆ..? ಈ ಸಮಯದಲ್ಲಿ ಅಂತಹ ಸಣ್ಣ ಪ್ರಯತ್ನವನ್ನಾದರೂ ಯಾವನಾದರೂ ಆಕಸ್ಮಾತ್ ಮಾಡಿದ್ದರೆ ಆತ ನಿಜವಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದು ಬಿಡುತ್ತಿದ್ದ.

ಈ ಹೈ ಹ್ಯಾಂಡ್ ರಾಜಕಾರಣಿಗಳನ್ನು ಬಿಟ್ಟು ಬಿಡೋಣ. ಯಾಕಂದ್ರೆ ಅವರು ಈ ರೀತಿ ಯೋಚನೆ ಮಾಡುವಂತವರಾಗಿದ್ದರೆ, ಪ್ರಧಾನಮಂತ್ರಿಯ ಸೂಚನೆಗಾಗಿ ಕಾಯುತ್ತಿರಲಿಲ್ಲ ಮತ್ತು ಸೂಚನೆ ಬಂದ ಮೇಲೂ ಹೀಗೆ ಸುಮ್ಮನಿರುತ್ತಿರಲಿಲ್ಲ. ಇನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ವಿಷಯಕ್ಕೆ ಬಂದರೆ, ಅವರು ಸಹ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತಿದ್ದಾರೆ. ತಿಂಗಳಿಗೊಂದು ರಾಜಕೀಯ ಕಾರ್ಯಕ್ರಮಗಳಿಗೆ ಮಾತ್ರ ಬಂದು ಚಹ ಕುಡಿದು ಭಾಷಣ ಕೇಳಿ ಚಪ್ಪಾಳೆ ತಟ್ಟುವುದು. ಅವಕಾಶ ಸಿಕ್ಕರೆ ಸಣ್ಣ ಲಾಬಿ ಮಾಡಿ ತಮ್ಮ ಅಧಿಕಾರದ ದರ್ಜೆಯನ್ನು ಮೇಲಕ್ಕೇರಿಸಿಕೊಳ್ಳುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸರಕಾರದ ಯೋಜನೆಯನ್ನು ಜನರಿಗೆ ತಿಳಿಸುವುದು ಆ ಮೇಲಿನ ವಿಷಯ. ಅವರಿಗೆ ಯೋಜನೆಯ ಕುರಿತಾಗಿ ಮಾಹಿತಿ ಇಲ್ಲದಿರುವುದು ದುರದೃಷ್ಟಕರ. ಇನ್ನು ಎದೆ ಮೇಲೊಂದು ಜವಾಬ್ದಾರಿಯ ನಾಮಫಲಕ ನೇತಾಡಿಸಿಕೊಂಡು ಈಗೀಗ ರಾಜಕಾರಣಕ್ಕೆ ಬರುತ್ತಿರುವ ಯುವರಾಜಕಾರಣಿಗಳನ್ನಂತೂ ಇಂತಹ ವಿಷಯಗಳಲ್ಲಿ ಮಾತನಾಡಿಸುವ ಗೋಜಿಗೆ ಹೋಗದಿರುವುದು ಸೂಕ್ತ. ಯಾಕಂದ್ರೆ ಅವರಿಗೆ ಇಂತಹ ಜನಸ್ಪರ್ಶಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಭಾಷಣಕ್ಕೆ ಯಾವ ವೇದಿಕೆಯೂ ದೊರೆಯುವುದಿಲ್ಲ ಮತ್ತು ಶಾಲು-ಹಾರಗಳೂ ಹೆಗಲಿಗೆ ಬೀಳಲಿಕ್ಕಿಲ್ಲ ಎಂಬುದನ್ನು ತಿಳಿದುಕೊಂಡೆ ಸುಮ್ಮನಿದ್ದಂತಿದೆ.

ಕಳೆದ ಹಲವಾರು ದಶಕಗಳಿಂದ ನೋಡುತ್ತಿರುವ ಜನತೆಗೂ ಗೊತ್ತಾಗಿದೆ ಈ ರಾಜಕಾರಣಿಗಳ ಹಣೆಬರಹ. ಹಾಗಾಗೇ ಯಾವ ಜನಸಾಮಾನ್ಯನೂ ತಾನು ಮತ ಹಾಕಿದ ರಾಜಕಾರಣಿಯಿಂದ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡತ್ತಿಲ್ಲ. ತನಗೆ ಬೇಕಿರುವ ಮಾಹಿತಿಯನ್ನು ಕಷ್ಟಪಟ್ಟಾದರೂ ತೆಗೆದುಕೊಂಡು ಉರಿ ಬಿಸಿಲಿನಲ್ಲಿ ನಿಂತು ಹಣವನ್ನು ನ್ಯಾಯಮಾರ್ಗದಲ್ಲಿ ತೆಗೆದುಕೊಳ್ಳುತ್ತಿದ್ದಾನೆ. ಮತ್ತು ಇತರರಿಗೆ ಮಾರ್ಗದರ್ಶಕನಾಗಿದ್ದಾನೆ. ಅದು ಅವನ ವೈಯಕ್ತಿಕ ಜೀವನಕ್ಕಾದರೂ, ರಾಷ್ಟ್ರದ ಬದಲಾವಣೆಗೆ ತನ್ನದೂ ಅಲ್ಪಮಟ್ಟಿಗಿನ ಕೊಡುಗೆಯಿದೆ ಎಂಬ ಹೆಮ್ಮೆ ಆತನಿಗಿದೆ. ತನ್ನಿಂದ ರಾಷ್ಟ್ರದ ಉನ್ನತಿಯ ಕಾರ್ಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ಎಲ್ಲ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿದು ಆ ನಿಟ್ಟಿನಲ್ಲಿ ಸಾಗುತ್ತಿರುವವರಿಗೆ ನನ್ನದೊಂದು ಪ್ರಣಾಮ್. ಆದರೆ ಪ್ರತಿಪಕ್ಷದವರ ವೈಫಲ್ಯದ ಫಲವಾಗಿ ತಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಘರ್ಜಿಸುವ ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳಿಗೆ ನನ್ನ ಕಡೆಯಿಂದ ಎರಡು ನಿಮಿಷದ ಮೌನ, ಅಷ್ಟೆ..

  – ಗುರುಪ್ರಸಾದ ಶಾಸ್ತ್ರಿ

sirsinow@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!