ಅಂಕಣ

ಯಾರು ಮಹಾತ್ಮ?- ೩

                  ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಯಾರಿಗೂ ಶತ್ರುತ್ವ ಭಾವನೆ ಉಂಟಾಗುವುದಿಲ್ಲ. “ಅಹಿಂಸಾ ಪ್ರತಿಷ್ಠಾಯಾಂ ತತಸನ್ನಿಧೌ ವ್ಯರ್ಥಗಃ” ಎನ್ನುತ್ತದೆ ಪತಂಜಲಿ ಯೋಗ ಸೂತ್ರ. “ಬೇರೆಯವರಿಗೆ ಕಿಂಚಿತ್ತೂ ಹಾನಿ ಮಾಡದ ವ್ಯಕ್ತಿಯ ಎದುರಲ್ಲಿ ಕ್ರೂರ ಪ್ರಾಣಿಗಳೂ ವಿನೀತವಾಗುತ್ತವೆ. ಯೋಗಿಯ ಎದುರಲ್ಲಿ ಹುಲಿ ಮತ್ತು ಕುರಿಯೂ ಒಟ್ಟಿಗೆ ಆಟವಾಡುತ್ತವೆ. ನೀವು ಆ ಸ್ಥಿತಿಗೆ ತಲುಪಿದಾಗ ನಿಮ್ಮಲ್ಲಿ ಅಹಿಂಸೆ ದೃಢಗೊಂಡಿದೆ ಎಂದರ್ಥ” – ವಿವೇಕಾನಂದರು. ಗಾಂಧಿಯ ಪ್ರಕಾರ ಅಹಿಂಸೆಯೆಂದರೆ – ಆಕ್ರಮಣಕಾರಿಯೊಬ್ಬ ತಮಗೆ ಹೊಡೆದರೂ ಅದನ್ನು ಪ್ರತಿರೋಧಿಸದೆ ಸುಮ್ಮನಿರುವುದು. ಅವರೇ ಒಂದು ಉದಾಹರಣೆ ಕೊಡುತ್ತಾರೆ- ಹಸುಗಳು ತಮ್ಮನ್ನು ಕೊಲ್ಲಲು ಹುಲಿಗೆ ತಾವಾಗೇ ಅವಕಾಶ ಕೊಡುತ್ತವೆ. ಅಷ್ಟೆಲ್ಲಾ ಗೋವುಗಳನ್ನು ಕೊಂದ ಹುಲಿ ಕೊನೆಗೊಮ್ಮೆ ಆಯಾಸಗೊಳ್ಳುತ್ತದೆ. ಅಹಿಂಸೆಯ ನಂಬಿಗಸ್ಥ ಅನುಯಾಯಿಯಾಗುತ್ತದೆ!” ಯಾವ ಮಗುವಿಗೆ ಬೇಕಾದರೂ ಈ ರೀತಿ ಹೇಳಿ ನೋಡಿ – ನಿಮ್ಮನ್ನು “ಒಂದು ಸುತ್ತು ಲೂಸ್” ಎನ್ನದಿದ್ದರೆ ಮತ್ತೆ ಕೇಳಿ! ಹಿಂದೂಗಳು ಹತ್ಯೆಗೀಡಾಗುತ್ತಿದ್ದರೂ ಕೊಲ್ಲುವ ಮುಸ್ಲಿಮರನ್ನು ಗೌರವ-ಔದಾರ್ಯದಿಂದ ನೋಡಬೇಕು; ಸುಹ್ರಾವರ್ದಿ ಗೂಂಡಾಗಳ ನಾಯಕನಾಗಿದ್ದರೂ ದೆಹಲಿಯಲ್ಲಿ ಮುಕ್ತವಾಗಿ-ಸುರಕ್ಷಿತವಾಗಿ ತಿರುಗಾಡಲು ಬಿಡಬೇಕು. ಇವು ಗಾಂಧಿ ತಮ್ಮ ಪ್ರಾರ್ಥನೆಯ ಸಮಯದಲ್ಲಿ ಪದೇ ಪದೇ ಮಾಡುತ್ತಿದ್ದ ವಕಾಲತ್ತುಗಳು!

                ಗಾಂಧಿಯ ಆಯ್ದ ಕೆಲವು ಅಣಿಮುತ್ತುಗಳನ್ನು ನೋಡೋಣ! “ಮುಸ್ಲಿಮರು ಹಿಂದೂಗಳ ಅಸ್ತಿತ್ವವನ್ನೇ ನಾಶ ಮಾಡಲು ಯೋಚಿಸಿದರೂ ಕೂಡಾ ಹಿಂದೂಗಳು ಎಂದಿಗೂ ಉದ್ರೇಕಗೊಳ್ಳಬಾರದು. ಕೋಪಿಸಿಕೊಳ್ಳಬಾರದು. ಅವರು ತಲವಾರ್ ತೋರಿಸಿದರೂ ನಾವು ಸಾವನ್ನು ಧೈರ್ಯದಿಂದ ಆಹ್ವಾನಿಸಬೇಕು. ಅವರು ಜಗತ್ತನ್ನೇ ಬೇಕಾದರೂ ಆಳಲಿ, ನಾವು ಅಲ್ಲಿ ವಾಸಿಸಬೇಕು. ಸಾವಿಗೆ ಅಂಜಬಾರದು. ಹುಟ್ಟು ಸಾವು ವಿಧಿಲಿಖಿತ. ಹೀಗಾಗಿ ಸಾವಿನ ಬಗ್ಗೆ ವಿಷಣ್ಣ ಭಾವ ತಾಳಬೇಕು. ನಾವೆಲ್ಲ ಕಿರುನಗೆಯನ್ನಿಟ್ಟುಕೊಂಡೇ ಸಾವನ್ನಪ್ಪಿದರೆ ನವ ಜೀವನವನ್ನು ಪ್ರವೇಶಿಸುತ್ತೇವೆ. ನಾವು ಹೊಸ ಹಿಂದೂಸ್ಥಾನವನ್ನು ನಿರ್ಮಿಸುತ್ತೇವೆ.”(1947 ಏಪ್ರಿಲ್ 6ರಂದು ಮಾಡಿದ ಭಾಷಣ) “ಒಂದು ವೇಳೆ ನಮ್ಮವರು ಕೊಲೆಯಾದರೂ ನಾವೇಕೆ ಕೊಲೆಗಾರರ ಮೇಲೆ ಕೋಪ ಮಾಡಿಕೊಳ್ಳಬೇಕು? ಅವರು ಕೊಲ್ಲಲ್ಪಟ್ಟರೂ ಸಹ ಉತ್ತಮ, ಸೂಕ್ತ ಅಂತ್ಯವನ್ನೇ ಕಂಡಿದ್ದಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. ನಮಗೆಲ್ಲಾ ಇಂಥದೇ ಸ್ವರ್ಗ ಕಾದಿರಬಹುದು. ದೇವರು ನಮ್ಮನ್ನೂ ಇದೇ ಹಾದಿಯಲ್ಲೇ ಕಳುಹಿಸಬಹುದು. ನಾವು ಹೃದಯಪೂರ್ವಕವಾಗಿ ಮಾಡಬೇಕಾದ ಪ್ರಾರ್ಥನೆ ಇದೇ”(1947 ಸೆಪ್ಟೆಂಬರ್ 23ರಂದು ಮಾಡಿದ ಭಾಷಣ). “ಪಂಜಾಬಿನಲ್ಲಿ ಸತ್ತವರ್ಯಾರೂ ತಿರುಗಿ ಬರಲಾರರು. ಸಾವಿಗೀಡಾದವರು ಧೈರ್ಯದಿಂದ ಮರಣವನ್ನು ಎದುರಿಸಿದ್ದರೆ ಅವರು ಏನನ್ನೂ ಕಳೆದುಕೊಳ್ಳುವುದಿಲ್ಲ. ಬದಲಾಗಿ ಕೆಲವನ್ನು ಗಳಿಸುತ್ತಾರೆ. ನಾವೆಲ್ಲಾ ಆ ರೀತಿ ವರ್ತಿಸಿದರೆ ದೇವರೇ ಅವರ ಖಡ್ಗವನ್ನು ತುಂಡರಿಸುತ್ತಾನೆ.” (ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್-೨, ಪ್ಯಾರೇಲಾಲ್). ಇವೆಲ್ಲವೂ ಹಿಂದೂಗಳನ್ನು ಮುಸ್ಲಿಮರು ಅಟ್ಟಾಡಿಸಿ ಕೊಲೆಗೈಯ್ಯುತ್ತಿದ್ದಾಗ, ನಮ್ಮ ಸ್ತ್ರೀಯರನ್ನು ಅತ್ಯಾಚಾರವೆಸಗುತ್ತಿದ್ದಾಗ, ಗರ್ಭಿಣಿಯರ ಗರ್ಭ ಸೀಳುತ್ತಿದ್ದಾಗ ಗಾಂಧಿ ನೀಡಿದ ಉಪದೇಶಗಳು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ ಎಂದ ಭಗವಾನ್ ಕೃಷ್ಣ ಇದನ್ನು ಕೇಳುತ್ತಿದ್ದರೆ ಗಾಬರಿಗೊಂಡು ಇಂತಹವನ್ನು ಖಂಡಿತ ಕೌರವ ಪಕ್ಷಕ್ಕೆ ಓಡಿಸುತ್ತಿದ್ದ!

              ಜುಲೈ 27, 1947ರ “ಹರಿಜನ”ದಲ್ಲಿ ಗಾಂಧಿ “ನನ್ನ ಹಿರಿಮಗ ಪ್ರತೀ ಬಾರಿ ಬಂದಾಗಲೂ “ನಾನು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗುತ್ತೇನೆ. ಇನ್ನು ಮುಂದೆ ವೈನ್ ಮುಟ್ಟುವುದಿಲ್ಲ” ಎಂದು ಹೇಳುತ್ತಿದ್ದ. ನಿನ್ನ ಮಾತಿನಲ್ಲಿ ವಿಶ್ವಾಸವಿಲ್ಲದಿದ್ದರೂ ನಿನಗೆ ಒಂದು ಅವಕಾಶ ನೀಡುತ್ತೇನೆ ಎನ್ನುತ್ತಿದ್ದೆ. ಆತನಿಂದ ಅದನ್ನು ಪಾಲಿಸಲು ಆಗುತ್ತಿರಲಿಲ್ಲ. ಅದು ನನಗೂ ತಿಳಿದಿತ್ತು. ಆದರೂ ನಾನು ಅವನು ಬದಲಾಗುತ್ತಾನೆ ಎಂದು ನಂಬಿದ್ದೆ. ಪ್ರತೀ ಬಾರಿ ಬಂದಾಗಲೂ ಇದೇ ರೀತಿ ನಡೆಯುತ್ತಿತ್ತು. ಇದೇ ರೀತಿ ನಾವು ಮುಸ್ಲಿಮರ ಮೇಲೆ ವಿಶ್ವಾಸವಿಡಬೇಕು” ಎಂದು ಬರೆದಿದ್ದರು. ಅಂದರೆ ಮುಸ್ಲಿಮನೊಬ್ಬ ಬದಲಾಗದಿದ್ದರೂ ಅವನ ಮೇಲೆ ವಿಶ್ವಾಸವಿಡಬೇಕು. ಅವನು ನಮ್ಮ ಮೇಲೆ ಹಲ್ಲೆ ಮಾಡಿದರೂ ಅವನ ಮೇಲೆ ವಿಶ್ವಾಸವಿಡಬೇಕು. ನಮ್ಮವರನ್ನು ಕೊಲೆ ಮಾಡಿದರೂ ಅವನನ್ನು ನಾವು ನಂಬಬೇಕು. ನಮ್ಮ ಸ್ತ್ರೀಯರ ಮೇಲೆ ಅತ್ಯಾಚಾರವೆಸಗಿದರೂ ಅವನ ಬಳಿ ಜೊಲ್ಲು ಸುರಿಸುತ್ತಾ ಬೇಡಬೇಕು! ಅಂದರೆ ಮುಸ್ಲಿಮನೊಬ್ಬ ಬದಲಾಗುವುದಿಲ್ಲವೆಂದು ಗಾಂಧಿಗೂ ತಿಳಿದಿತ್ತು. ಆದರೂ ತನ್ನದೇ ಆದ ಅಹಿಂಸಾ ನೀತಿಯನ್ನು ಬಡಪಾಯಿ ಹಿಂದೂಗಳ ಮೇಲೆ ಅನ್ಯಾಯವಾಗಿ ಹೇರಲೆತ್ನಿಸಿದರು. ಒಂದು ರೀತಿಯಲ್ಲಿ ಹಿಂದೂಗಳ ಕೊಲೆಗೆ ಗಾಂಧಿಯೇ ಕಾರಣಕರ್ತರಾದರು.

                  ಕೆಟ್ಟ ಕೆಲಸಗಳನ್ನು ಮಾಡುವವರನ್ನು ಶಿಕ್ಷಿಸಲು ಹಿಂದೂ ಧರ್ಮ ಅನುಮತಿ ನೀಡುವುದಿಲ್ಲವೇ? ಅವಕಾಶ ನೀಡುವುದಿಲ್ಲ ಎಂದಾದರೆ ಕೌರವರನ್ನು ಕೊಲ್ಲುವಂತೆ ಕೃಷ್ಣ ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಬೋಧಿಸಿರುವುದನ್ನು ಹೇಗೆ ವಿವರಿಸುತ್ತೀರಿ? ಎನ್ನುವ ಪ್ರಶ್ನೆಯನ್ನು ಸ್ವಲ್ಪ ಬೊಂಡಿದ್ದ ಗಾಂಧಿ ಭಕ್ತನೊಬ್ಬ ಕೇಳಿದ. ಆಗ ಗಾಂಧಿ “ಮೊದಲನೇ ಪ್ರಶ್ನೆಗೆ ಹೌದು ಅಥವಾ ಇಲ್ಲ ಎನ್ನುವ ಎರಡೂ ಉತ್ತರವನ್ನು ನೀಡಬೇಕಾಗುತ್ತದೆ. ಯಾರನ್ನಾದರೂ ಕೊಲ್ಲುವ ಪ್ರಶ್ನೆ ಉದ್ಭವಿಸುವಾಗ ಯಾರು ಅನಿಷ್ಟ ಕಾರ್ಯ ಮಾಡುವವರು ಎನ್ನುವುದನ್ನು ನಿರ್ಧರಿಸಲು ಒಬ್ಬಾತ ನಿಷ್ಪಕ್ಷಪಾತ ನ್ಯಾಯಾಧೀಶನಾಗಿರಬೇಕಾಗುತ್ತದೆ. ಯಾರಾದರೊಬ್ಬರಿಗೆ ಈ ಹಕ್ಕು ಸಿಗಲು ಆತ ಸಂಪೂರ್ಣವಾಗಿ ದೋಷರಹಿತನಾಗಿರಬೇಕಾಗುತ್ತದೆ. ತಾನೇ ಸ್ವತಃ ತಪ್ಪು ಮಾಡುವ ವ್ಯಕ್ತಿ ಇನ್ನೊಬ್ಬನ ದೋಷಗಳನ್ನು ನಿರ್ಣಯಿಸುವ ಅಥವಾ ಶಿಕ್ಷಿಸುವ ಹಕ್ಕು ತನಗಿದೆ ಎಂದು ಹೇಗೆ ಪ್ರತಿಪಾದಿಸಲು ಸಾಧ್ಯ? ಇನ್ನು ಗೀತೆಯಲ್ಲಿ ಹೇಳಿರುವಂತೆ ಅನಿಷ್ಟ ಕೆಲಸ ಮಾಡುವವನನ್ನು ಶಿಕ್ಷಿಸುವ ಹಕ್ಕು ಕುರಿತಾದ ಎರಡನೇ ಪ್ರಶ್ನೆ. ಇದನ್ನು ಸರ್ಕಾರ ಮಾತ್ರ ಸೂಕ್ತ ರೀತಿಯಲ್ಲಿ ಜಾರಿ ಮಾಡಬಹುದು” ಎಂದು ಪ್ರತಿಕ್ರಿಯಿಸಿದರು. ಎಷ್ಟೊಂದು ದ್ವಂದ್ವತೆ! ಅಂದರೆ ಮುಸ್ಲಿಮನೊಬ್ಬ ವಿನಾ ಕಾರಣ ಹಿಂದೂವೊಬ್ಬನ ಹತ್ಯೆ ಮಾಡಿದರೂ ಅವನನ್ನು ಕೊಲ್ಲುವ ಹಾಗಿಲ್ಲ. ಯಾಕೆಂದರೆ ಕೊಲ್ಲುವವ ಗಾಂಧಿಯಿಂದ “ದೋಷರಹಿತ ಸರ್ಟಿಫಿಕೇಟ್” ಪಡೆಯಬೇಕಾಗುತ್ತದೆ. ಕೆಲವೊಮ್ಮೆ ಅನ್ನಿಸುವುದಿದೆ ಬಹುಷಃ ಕೇಜ್ರಿವಾಲ್ ಗಾಂಧಿಯ ಪಳಿಯುಳಿಕೆಯೇನೋ! ಹಾಗೆಯೇ ಅನಿಷ್ಟ ಕೆಲಸ ಮಾಡುವವನನ್ನು ಸರ್ಕಾರ ಮಾತ್ರ ಶಿಕ್ಷಿಸಬಹುದು; ಗಾಂಧಿಗೆ ಆಳುವ ಬ್ರಿಟಿಷರ ಮೇಲೆ ಎಷ್ಟೊಂದು ನಂಬಿಕೆ! ಅವರೇನಾದ್ರೂ ಶಿಕ್ಷಿಸದಿದ್ದರೆ ಆತ ನಿರಪರಾಧಿ! ಅಲ್ಪಸಂಖ್ಯಾತರು ಏನು ಮಾಡಿದರೂ ಸುಮ್ಮನಿದ್ದು ಬಹುಸಂಖ್ಯಾತರನ್ನು ಸಾಯ ಬಡಿವ ಇಂದಿನ ರಾಜಕಾರಣಕ್ಕೆ ತಳಹದಿ ಹಾಕಿದ ಅಧ್ವರ್ಯು ಯಾರೆಂದು ಬೇರೆ ಹೇಳಬೇಕಿಲ್ಲ ತಾನೆ!

              ಗಾಂಧಿಯ ಅಹಿಂಸೆ ಹಿಂದೂಗಳಿಗೆ ಮಾತ್ರ! “ಎಲ್ಲಾ ಹಿಂದೂಗಳು ನನ್ನ ಮಾತು ಕೇಳಿದರೆ ಇಡೀ ಜಗತ್ತೇ ಅನುಸರಿಸಲು ಮುಂದಾಗುವಂತಹ ಮಾದರಿಯನ್ನು ನಾವು ಹಾಕಿಕೊಡಬಹುದು. ಈ ಮಾತನ್ನು ಮುಸ್ಲಿಮರಿಗೆ ಯಾಕೆ ಹೇಳಿಕೊಡುತ್ತಿಲ್ಲ ಎಂದರೆ ಅವರಿಂದು ನನ್ನನ್ನು ಶತ್ರುವೆಂದು ಪರಿಗಣಿಸಿದ್ದಾರೆ. ಹಿಂದೂಗಳು ನನ್ನನ್ನು ಶತ್ರು ಎಂದು ನೋಡುವುದಿಲ್ಲ. ಅದಕ್ಕಾಗಿ ತಮ್ಮ ಆಯುಧಗಳನ್ನು ಸಮುದ್ರಕ್ಕೆಸೆಯುವಂತೆ ಧೈರ್ಯತನದ ಅಹಿಂಸೆಯ ಅದ್ವಿತೀಯ ಸಾಮರ್ಥ್ಯ ಮನವರಿಕೆ ಮಾಡಿಕೊಳ್ಳುವಂತೆ ಅವರಿಗೆ ಹೇಳುತ್ತೇನೆ”(ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್-೨, ಪ್ಯಾರೇಲಾಲ್). ಅಬ್ಬಾ ಈತನ ಪ್ರಲಾಪವೇ! ಹಿಂದೂಗಳು ನಾನು ಬಾವಿಗೆ ಹಾರಲು ಹೇಳಿದರೂ ಸಿದ್ಧರಿದ್ದಾರೆ ಎನ್ನುತ್ತಾ ಅವರಿಗೆ ಬಿಟ್ಟಿ ಉಪದೇಶ! ಮುಸ್ಲಿಮರು ಶತ್ರುವೆಂದು ಪರಿಗಣಿಸಿದ ಕಾರಣ ಅವರಿಗೆ ಅಹಿಂಸೆಯ ಉಪದೇಶ ಮಾಡುವುದಿಲ್ಲವೇ? ಅಹಿಂಸೆಯ ಅರ್ಥವೇ ಸತ್ತು ಹೋಯಿತು! ಶತ್ರುತ್ವ ಮರೆತು ಅಹಿಂಸೆಯನ್ನು ಪಾಲಿಸುವವನ ಎದುರಲ್ಲಿ ಪಶುಗಳೂ ಮಂಡಿಯೂರುತ್ತವೆ ಎಂದ ವಿವೇಕಾನಂದರ ಮಾತೂ ಕಸದ ಬುಟ್ಟಿ ಸೇರಿತು! ಅಥವಾ ಮುಸ್ಲಿಮರು ಪಶುಗಳಿಗಿಂತಲೂ ಕಡೆ! ವಿಪರ್ಯಾಸವೆಂದರೆ ಇಂದು ಜಗತ್ತಿನಲ್ಲಿ ಎರಡೂ ಸತ್ಯವಾಗಿರುವುದು. ಅಹಿಂಸೆಯೆಂದರೆ ಗಾಂಧಿಯದ್ದೇ ಎನ್ನುವ ಮೂರ್ಖ ಪ್ರಪಂಚ. ಪಶುಗಳಿಗಿಂತಲೂ ಕ್ರೂರವಾಗಿ ವರ್ತಿಸುವ ಮತಾಂಧ ಮುಸಲರು! ಈ ತುಂಡುಬಟ್ಟೆ ತೊಟ್ಟ ಮುದುಕನ ಮಾತು ಕೇಳಿ ಹಿಂದೂಗಳು ನಿರ್ವೀರ್ಯರಾದರು. ಮುಸಲ್ಮಾನರು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾಗಲೂ, ತಮ್ಮವರನ್ನು ಕೊಲ್ಲುತ್ತಿದ್ದಾಗಲೂ ಗಾಂಧಿಯ ಅಹಿಂಸೆಗೆ ಜೋತು ಬಿದ್ದರು.

                  ಒಬ್ಬ ಉನ್ಮತ್ತನ ಕೈಯಲ್ಲಿ ನಾವು ಹೆದರಿಕೆಯಿಲ್ಲದೆ ಉದ್ವೇಗವಿಲ್ಲದೆ ಕೋಪವಿಲ್ಲದೆ ಸಾವನ್ನಪ್ಪಿದರೆ ಅದು ಅವನ ಉನ್ಮಾದವನ್ನು ನಿವಾರಿಸುತ್ತದೆ ಎಂದರು ಮಹಾವೈದ್ಯ ಗಾಂಧಿ! ಹಿಂದೂಗಳನ್ನು ರಕ್ಷಿಸುವ ಭರದಲ್ಲಿ ಮುಸಲರಿಂದ ಮಾರಕ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಸಚಿನ್ ಮಿತ್ರಾ ಹಾಗೂ ಸ್ಮೃತೀಶ ಬ್ಯಾನರ್ಜಿಯ ಸಾವಿಗೆ ಶೋಕ ವ್ಯಕ್ತಪಡಿಸಲೂ ನಿರಾಕರಿಸಿದರು. ಬದಲಾಗಿ ಸಚಿನ್ ಮಿತ್ರಾರ ಪತ್ನಿಗೆ ನೀವು ಶೋಕಿಸುವ ಬದಲು ಸೇವೆಯಲ್ಲಿ ತೊಡಗಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿದರು. ಪಂಜಾಬಿನಲ್ಲಿ ಅತ್ಯಾಚಾರದ ಬೆದರಿಕೆಗೆ ಒಳಗಾದ ಹುಡುಗಿಯರಿಗೆ “ನಿಮ್ಮ ನಾಲಗೆಯನ್ನು ಕಚ್ಚಿಕೊಳ್ಳಿ ಮತ್ತು ಸಾಯುವವರೆಗೆ ಉಸಿರನ್ನು ಬಿಗಿ ಹಿಡಿಯಿರಿ” ಎನ್ನುವ ಹಿತವಚನ ಕೊಟ್ಟರು. ಇದಕ್ಕೂ ಆತ್ಮಹತ್ಯೆಗೂ ಏನು ವ್ಯತ್ಯಾಸವಿದೆ. ಇದು ಮಾಡಲರಿಯದವನ ಪ್ರಲಾಪವೇ ಹೊರತು ಯಾವ ಆದರ್ಶವೂ ಅಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!