ಅಂಕಣ

ಮರ್ಯಾದೆಯಿದ್ದರೆ ರಾಜಕಾರಣ ಮಾಡೋಕಾಯ್ತದಾ..!?

   ಪಾಪ ಪುಣ್ಯ ಲೆಕ್ಕ ಹಾಕಿ

   ಬದುಕೋಕಾಯ್ತದಾ..?

   ಒಂದೇ ನಾಣ್ಯದ ಎರಡು ಸೈಡು

   ಅಳಿಸೋಕಾಯ್ತದಾ..?

   ಎಲ್ಲೋ ಬಿದ್ದ ಮಳೆಗೆ ಕಡಲೊಂದೇ

   ಕೊನೆಯ ದಿಕ್ಕು..

   ಮೂರೂ ಬಿಟ್ಟ ಮನುಷ್ಯ ಯಾರನ್ನು

   ನೆನೆಯಬೇಕು..?

   ಮರ್ಯಾದೆಯಿದ್ದರೆ ರಾಜಕಾರಣ ಮಾಡೋಕಾಯ್ತದಾ??

ಯೋಗರಾಜ ಭಟ್ಟರ ದ್ಯಾವ್ರೆ ಚಿತ್ರದ ಗೀತೆಯೊಂದು ಟಿವಿಯಲ್ಲಿ ಸಾಗಿಕೊಂಡಿತ್ತು. ಅವರ ಸಂಗೀತ ರಚನೆಗೆ ತಲೆದೂಗಲೇ ಬೇಕು. ಪ್ರಚಲಿತ ವಿದ್ಯಮಾನಗಳನ್ನು ಎತ್ತಿಕೊಂಡು, ಅದಕ್ಕೆ ಹದವಾದ ಕುಹಕ ಅಳವಡಿಸಿ, ನಗು ತರಿಸುವಂತ ಪದಪುಂಜ ಜೋಡಿಸಿ, ವಿಷಯಗಳನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ತಲುಪಿಸುವುದನ್ನು ಅವರು ಬಹಳ ಚೆನ್ನಾಗಿ ಮೈಗೂಡಿಸಿಕೊಂಡಿದ್ದಾರೆ. ಅವರ ಸಾಹಿತ್ಯವನ್ನು ಸರಿಯಾಗಿ ಓದಿ, ಮತ್ತಷ್ಟು ಗಮನಿಸಿ ನೋಡಿ ಅರ್ಥೈಸಿಕೊಂಡರೆ ಮಾತ್ರ ಅದರ ಆಳ ನಮ್ಮ ತಲೆಗೆ ಹತ್ತುವಂತದ್ದು. ಆರು ಹೊಡೆದಾಟ, ಐದು ಹಾಡುಗಳು, ಮಧ್ಯದಲ್ಲಿ ಮೂರೂ ನಾಲ್ಕು ಹಾಸ್ಯ ಪ್ರಸಂಗಗಳನ್ನು ಸೇರಿಸಿ, ಇಬ್ಬರು ನಾಯಕಿಯರು ಮತ್ತು ಒಬ್ಬ ನಾಯಕನ ಪ್ರೇಮದ ಸುತ್ತವೆ ಗಿರಾಕಿ ಹೊಡೆಯುವ ಸಿನೆಮಾಗಳನ್ನು ನಾನು ಐದು ನಿಮಿಷವೂ ನೋಡಲಾರೆನೇನೋ.. ಸಮಾಜಕ್ಕೊಂದು ಸಂದೇಶ, ವೀಕ್ಷಕರಿಗೊಂದು ಪ್ರಶ್ನೆ, ವೈಚಾರಿಕತೆಗೊಂದು ಉತ್ತರ ಇಲ್ಲದಿರುವ ಚಲನಚಿತ್ರಗಳನ್ನು ನೋಡಿದರೂ, ನೋಡದಿದ್ದರೂ ಯಾವುದೇ ಬದಲಾವಣೆ ಇಲ್ಲ ಎಂಬುದೇ ನನ್ನ ಅಭಿಪ್ರಾಯ.

ಆದರೆ ಅಂತಹ ಸಿನೆಮಾ ಮಾಡಿದರೆ ಕೇವಲ ಅದು ಪ್ರಶಸ್ತಿ ಗೆಲ್ಲುವ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆಯೇ ಹೊರತು ಜನರ ಮನ ಮುಟ್ಟುವುದೇ ಇಲ್ಲ. ನಿರ್ದೇಶಕ, ನಿರ್ಮಾಪಕನ ಜೇಬಿಗೆ ನಷ್ಟ ಮಾಡುವುದೇ ಜಾಸ್ತಿ. ಹಾಗಾಗಿ ನಮ್ಮ ಚಿತ್ರರಂಗವೂ ಕೂಡ “Entertainment Entertainment, Entertainment..” ಅನ್ನೇ ತನ್ನ ಜೀವಾಳ ಮತ್ತು ಬಂಡವಾಳವನ್ನಾಗಿಸಿಕೊಂಡಿದೆ. “ದ್ಯಾವ್ರೆ” ಅಂತಹ ಚಲಚಿತ್ರಗಳು, ಎಂದಿನ ಮೋಜು  ಮಸ್ತಿ ಹಾಗೂ ಆ ಕ್ಷಣದ ಮನೋರಂಜನೆಯನ್ನೇ ದೃಷ್ಠಿಕೋನದಲ್ಲಿಟ್ಟುಕೊಂಡು ಮೂಡಿ ಬರುವ ಬಹುತೇಕ ಚಲನಚಿತ್ರಗಳ ಸಾಲಿನಲ್ಲಿ ನಿಲ್ಲದ ಚಿತ್ರವಾಗಿ ನಿಲ್ಲುತ್ತವೆ. ಒಬ್ಬ ನಾಯಕನ ಅಥವಾ ನಾಯಕಿಯ ಸತ್ವದ ಮೇಲೆ ಚಿತ್ರ ನಿಂತಿರದೆ ವಿಷಯವೇ ಅದರ ಜೀವಾಳವಾಗಿರುತ್ತದೆ. ಆದರೆ ನೋಡುವವರು ಎಷ್ಟು ಜನ? ತಪ್ಪು ಯಾರದ್ದು? ಎಂದುಕೊಂಡರೆ…. ಜನ ನೋಡುವುದಿಲ್ಲ ಎಂಬ ಕಾರಣಕ್ಕೆ ಒಳ್ಳೆಯ ಕಥೆಗಳಿಂದ ದೂರವಾದ ಚಿತ್ರರಂಗದ್ದಾ?? ಅಥವಾ ಈಗೀಗ ಒಳ್ಳೆಯ ಕ್ರಿಯೇಟಿವಿಟಿ ಸಿನಿಮಾಗಳೇ ಬರುತ್ತಿಲ್ಲ ಎಂದು ಹೇಳುತ್ತಲೇ ಐಟಂ ಸಾಂಗ್ ಬರುತ್ತಲೇ ಎದ್ದು ನಿಂತು ಸಿಳ್ಳೆ ಹೊಡೆಯುವ ನಮ್ಮ ನಿಮ್ಮಂತ ಜನಸಾಮಾನ್ಯರದಾ..?  ಹಾಗಾಗಿ ಇಲ್ಲಿ ಯಾರು ತಪ್ಪು ಯಾರು ಸರಿ ಎಂದು ಹೇಳುವುದು ಕಷ್ಟ. ಇದನ್ನು ನೀವು ಯೋಚಿಸಿ ನೋಡಿ ಉತ್ತರ ಸಿಕ್ಕರೆ ನನಗು ಹೇಳಿ. ಸರಿ ವಿಷಯ ಮುಂದುವರೆಸೋಣ.

ಹೀಗೆ ಭಟ್ಟರ ಹಾಡು ಮುಗಿದು ಎಡ್ವರ್ಟೈಸಮೆಂಟ್ ಬರುತ್ತಲೇ ನಾನು ಚಾನಲ್ ಬದಲಾಯಿಸಿದೆ. ನ್ಯೂಸ್ ಚಾನಲ್ ಒಂದರಲ್ಲಿ ಹೆಡ್ ಲೈನ್ಸ್ ಬರುತ್ತಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮುಖ್ಯಮಂತ್ರಿಯಾದ ಕೇಜ್ರಿವಾಲ್ ಅವರ ಲೈವ್ ಬರುತ್ತಿತ್ತು.

ನಾಲ್ಕು ವರ್ಷದ ಹಿಂದಾದರೆ ಇದೇ ಅರವಿಂದ ಕೇಜ್ರಿವಾಲ್ ಮಾತನಾಡುತ್ತಿದ್ದರೆ ನಾನು ಟಿವಿಯ ಮುಂದಿನಿಂದ ಏಳುತ್ತಿರಲಿಲ್ಲ. ಹಾಗೆ ನೋಡಿದರೆ ಕೇಜ್ರಿವಾಲ್ ಮಾತಿನಲ್ಲಿ ಅಟಲ್’ಜಿಯವರ ಮಾತುಗಳ ಮೋಡಿ ಆಗಲಿ, ಯಾವುದೋ “TED Talks” ನಲ್ಲಿ ಮಾತನಾಡುವ ಮನುಷ್ಯರ ಮಾತಿನಲ್ಲಿರುವ ವಿಷಯ ಸಾಂಧ್ರತೆಯಾಗಲಿ, ಹೋಗಲಿ ಮೋದಿಜಿಯವರ ಮಾತಿನಲ್ಲಿರುವ ದೇಶ ಪ್ರೇಮದ ಕೆಚ್ಚಾಗಲಿ ಇರುತ್ತಿರಲಿಲ್ಲ. ಈಗಲೂ ಇಲ್ಲ. ಹಾಗಿದ್ದರೂ ಕೂಡ ನನ್ನಂತವರು, ಆತ ಮಾತನಾಡುವುದನ್ನು ಕುಳಿತು ಕೇಳಿದ್ದೆವು ಎಂದರೆ, ಕೇಜ್ರಿವಾಲ್ ಆಗಿನ ಭ್ರಷ್ಟಾಚಾರಿ ರಾಜಕಾರಣಿಗಳ ನಡುವೆ ಮೇಲೆದ್ದು ಬರುತ್ತಿದ್ದ ಒಂದು ಹೊಸ ಕನಸಿನಂತೆ ಕಂಡಿದ್ದು. ದೇಶಕ್ಕೆ ಇಂಥವರ ಅಗತ್ಯವಿದೆ ಎಂದು ನನ್ನಂತೆ ಯೋಚಿಸಿದವರು ಅದೆಷ್ಟು ಜನ. ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿ ಲೋಕಪಾಲ್ ಯೋಜನೆ ಜಾರಿಯಾಗಬೇಕು ಎಂದು ಉಪವಾಸಕ್ಕೆ ಕುಳಿತಿದ್ದಾಗ ಇದೇ ಅರವಿಂದ್ ಕೇಜ್ರಿವಾಲ್ ಅಣ್ಣಾ ಹಜಾರೆಯ ಹಿಂದೆ ಮುಂದೆ ಓಡಾಡುತ್ತ ಮಾತನಾಡಿದ ಭಾಷಣದ ತುಣುಕುಗಳನ್ನು ಈಗ ನೋಡಿದರೆ, ಇದೇ ಮನುಷ್ಯನಾ ಆಗಿನ ಕೇಜ್ರಿವಾಲ್ ಅನ್ನಿಸಿಬಿಡುತ್ತದೆ.

ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎನ್ನುತ್ತಲೇ ದೆಹಲಿಯ ಚುನಾವಣೆಗೆ ಬಂದು ನಿಂತಾಗ, ಮಾಡಿದರೆ ತಪ್ಪೇನು? ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಎಂದುಕೊಂಡವರೇ ಎಷ್ಟೋ ಜನ. ಪಕ್ಷ ಕಟ್ಟುವುದು ಎಂದರೆ ಸುಮ್ಮನೆ ಆಗುವಂಥದ್ದಲ್ಲ. ರಾಜಕಾರಣ ಎಂಬುದು ಸಮುದ್ರವಿದ್ದಂತೆ. ಅಲ್ಲಿ ತಿಮಿಂಗಲಗಳಿವೆ. ಹರಿದು ತಿಂದು ಬಿಡುವ ಶಾರ್ಕ್’ಗಳಿವೆ. ಒಂದೇ ಆಕ್ರಮಣದಲ್ಲಿ ಪೂರ್ತಿ ಕಬಳಿಸಿಬಿಡುವ ಆಕ್ಟೊಪಸ್’ಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟು ದೊಡ್ಡ ಸಮುದ್ರದ ಜಲರಾಶಿಯನ್ನೂ ಉಪ್ಪಾಗಿಸಿದ ಲವಣಾಂಶದಂತ ಕಳ್ಳ ಹಣವಿದೆ. ಇದೆಲ್ಲವನ್ನೂ ಮೆಟ್ಟಿ ನಿಂತು ಕೇಜ್ರಿವಾಲ್ ಮೇಲೇಳಬಲ್ಲನಾ ಎಂಬುದೇ ಅಂದಿನ ಡಿಬೇಟ್.

ಅಂಥ ಸಮಯದಲ್ಲಿ ಆತನ ಬೆನ್ನಿಗೆ ನಿಂತವರು ನನ್ನಂತ ಯುವಕರು. ಸಮಾಜದ ಸ್ವಾಸ್ಥ್ಯ ಬಯಸುವ ಅದೆಷ್ಟೋ ಸಾಮಾನ್ಯ ಜನರು. ಹತ್ತು ರೂಪಾಯಿಯಾದರೆ ಹತ್ತು, ಐವತ್ತಾದರೆ ಐವತ್ತು, ನೂರಾಗುವವರು ನೂರು.. ಆಮ್ ಆದ್ಮಿ ಪಕ್ಷಕ್ಕೆ ಹಣ ಹರಿದು ಬಂದಿತ್ತು. ಕಾರ್ಯಕರ್ತರಿಗೆ ಹಣ ಕೊಟ್ಟು ಪ್ರಚಾರ ಮಾಡಿಸಬೇಕಾಗಿರಲಿಲ್ಲ. ಪ್ರತಿಯೊಬ್ಬ ಆಮ್ ಆದ್ಮಿಯೂ ಅಂದು ಇದೆ ಆಮ್ ಆದ್ಮಿ ಪಕ್ಷಕ್ಕೆ ಮಣ್ಣು ಹೊತ್ತಿದ್ದರು. ಭಾರತ ದೇಶದಲ್ಲಿ ಅದೊಂದು ಬದಲಾವಣೆ. ಯಾರೋ ಒಬ್ಬ ಸಾಮಾನ್ಯ ಬಂದು ಚುನಾವಣೆಗೆ ಸ್ಪರ್ದಿಸಿ ಮೂವತ್ತು ಸೀಟುಗಳನ್ನು ಗೆದ್ದು ಬರುವುದು ಸುಲಭದ ಮಾತಲ್ಲ. ಹಾಗೆ ಕೇಜ್ರಿವಾಲ್ ಮೂವತ್ತು ಸೀಟ್ ಗೆದ್ದು ಬಂದಾಗ ಖುಷಿ ಪಟ್ಟವರು ಮತ್ತದೇ ಸಾಮಾನ್ಯ ಜನರು.

ಆದರೆ ಈಗ.?! ಕೇಜ್ರಿವಾಲ್ ಎಂಬ ಸಾಮಾನ್ಯ ವ್ಯಕ್ತಿ ದೆಹಲಿಯ ಮುಖ್ಯಮಂತ್ರಿಯಾಗಿ ಕುಳಿತ ಮರುಘಳಿಗೆಯಿಂದ ಶುರು ಹಚ್ಚಿಕೊಂಡ, ಮಾಡಿದ ರಾಜಕೀಯವನ್ನು ನೋಡಿದರೆ ಭಟ್ಟರು ಬರೆದ ಹಾಡು ನೂರಕ್ಕೆ ನೂರು ಸತ್ಯ ಎನ್ನಿಸಿಬಿಡುತ್ತದೆ.

ಆತ ಹೇಳಿಕೊಂಡ ಒಂದು ಮಾತಿನಂತಾದರೂ ನಡೆದಿದ್ದಾನಾ?? ಹೋಗಲಿ, ಈಗೀಗ ಮಾತನಾಡುವ ಒಂದು ವಿಷಯದಲ್ಲಾದರೂ ಹುರುಳಿದೆಯಾ?? ಅದೇಕೆ ಈ ಮನುಷ್ಯ ಹೀಗೆ ಬದಲಾಗಿಬಿಟ್ಟ?? ಗೆಲ್ಲುವ ಹಂಬಲ.. ರಾಜಕೀಯದ ಮಹಾಂತ್ಕಾಂಕ್ಷೆ.. ಎಂತಹ ವ್ಯಕ್ತಿಯನ್ನೂ  ಬದಲು ಮಾಡಿಬಿಡುತ್ತದಾ?? ನಿಜವಾಗಿಯೂ “ಮರ್ಯಾದೆಯಿದ್ದರೆ ರಾಜಾಕಾರಣ ಮಾಡಲಾಗುವುದಿಲ್ಲವಾ??” ಎಂಬ ಪ್ರಶ್ನೆಗಳಿಗೆ ಅರವಿಂದ್ ಕೇಜ್ರಿವಾಲ್ ಉತ್ತರ ನೀಡಿದರೆ ನಾವು ಈಗ ಆತನನ್ನು ನಂಬುವ ಪರಿಸ್ಥಿತಿಯಲ್ಲೇ ಇಲ್ಲ.

ರಾಜಕೀಯ ಎಂದ ಮೇಲೆ ಕೆಲವು ನಾಟಕಗಳು, ಸುಳ್ಳುಗಳು, ಕಣ್ಣು ತಪ್ಪಿಸುವಿಕೆ  ಎಲ್ಲವೂ ಬೇಕು. ಇಲ್ಲವೆಂದು ಯಾರು ಹೇಳುತ್ತಿಲ್ಲ. ಆದ್ರೆ ಎಲ್ಲಿಯವರೆಗೆ? ತನ್ನದೇ ಪಾರ್ಟಿಯ ಕಾರ್ಯಕರ್ತರಿಂದ ಮಸಿ ಹಾಕಿಸಿಕೊಂಡು ವಿರೋಧ ಪಕ್ಷ ಮಾಡಿದ್ದು ಎಂದ. ಯಾವುದೋ ದಾಖಲೆಯಿಲ್ಲದ ಕಾಗದ ಹಿಡಿದು ಮೋದಿ ಸ್ವಿಸ್ ಬ್ಯಾಂಕ್ ಖಾತೆಯದು ಎಂದ. ಆರೋಪ ಪ್ರತ್ಯಾರೋಪ ಇರುವುದು ಸರಿಯೇ ಅಂದುಕೊಳ್ಳೋಣ. ಬಿಹಾರಕ್ಕೆ ಹೋಗಿ ಬಹು ಕೋಟಿ ಹಗರಣದ ವ್ಯಕ್ತಿ ಲಾಲುವನ್ನು ತಬ್ಬಿಕೊಂಡು ಅವನ ಪಕ್ಷದ ಪರವಾಗಿ ಪ್ರಚಾರ ಮಾಡಿದ. ಕಾಶ್ಮೀರ ತುಂಬಾ ಗಲಾಟೆ. ಮಾತು ಕಥೆ ಮಾಡಿ ಬಿಟ್ಟು ಬಿಡೋಣ ಅಂದ. ಹೀಗೆ ಒಂದರ ಹಿಂದೆ ಒಂದು ಹುರುಳಿಲ್ಲದ, ತಲೆ ಬುಡ ಅರ್ಥವಿಲ್ಲದ ಮಾತುಗಳು. ಯಾವುದೋ ಭರವಸೆ, ಹೊಸ ಕನಸಿನೊಂದಿಗೆ ಆರಿಸಿ ಕಳುಹಿಸಿದ ವ್ಯಕ್ತಿ ಉಳಿದೆಲ್ಲರಿಗಿಂತ ನೀಚ ಸ್ಥಾನದಲ್ಲಿ ನಿಂತರೆ, ರಾತ್ರಿ ನಿದ್ದೆಗಣ್ಣಿನಲ್ಲಿ ಎದ್ದಾಗಲೂ ಮೈ ಪರಚಿಕೊಳ್ಳುವಂತಾಗಿಬಿಡುತ್ತದೆ.

ಇನ್ನು ಪ್ರಚಲಿತ ವಿದ್ಯಮಾನಕ್ಕೆ ಬಂದರೆ ಕೇಜ್ರಿವಾಲ್ ಎಂಬ ವ್ಯಕ್ತಿ, ರಾಹುಲ್ ಗಾಂಧಿ ಎಂಬ ಗುಂಪಿನಿಂದ ಹೊರ ತೆಗೆದಿಟ್ಟ ಮನುಷ್ಯನಿಗಿಂತ ಬೇಡವಾಗಿ ನಿಂತಿದ್ದಾನೆ.

ಭಾರತ ದೇಶದಲ್ಲಿ ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರ, ದೇಶ ವಿರೋಧಿ ನಡೆಗಳು, ಕಪ್ಪು ಹಣ, ಕಳ್ಳ ನೋಟು ಇವುಗಳನ್ನೆಲ್ಲ ತಡೆಯಲು ಪ್ರಧಾನ ಮಂತ್ರಿಗಳು ತೆಗೆದುಕೊಂಡ ನಡೆ ನಿಜವಾಗಲೂ ಉತ್ತಮವಾದದ್ದು. ದೇಶ ವಿದೇಶಗಳಲ್ಲೂ ಅದರ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ವಿದೇಶಗಳು ಹೇಳಿಕೊಳ್ಳಲಿ ಬಿಡಲಿ ನಮ್ಮ ದೇಶದ ಜನ ಸಾಮಾನ್ಯರೇ ಇದನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

ಇಷ್ಟು ದೊಡ್ಡ ದೇಶದಲ್ಲಿ ಇಂತದ್ದೊಂದು ವಿಚಾರ, ಅದರಲ್ಲೂ ದುಡ್ಡಿನಂತ ಭಾವನಾತ್ಮಕ, ಆರ್ಥಿಕ ವಿಷಯದ ಮೇಲೆ ಕತ್ತಿ ವರಸೆ ಮಾಡುವಾಗ, 125 ಕೋಟಿ ಜನರಿಗೆ ಬೇಡದ ವಿಚಾರವನ್ನು ಮೋದಿಯವರು ಹೇರಿದ್ದರೆ ದೇಶ ಹೊತ್ತಿ ಉರಿದು ಬಿಡುತ್ತಿತ್ತು. ಮೋದಿಜಿಯವರು ಎಷ್ಟೇ ಭಾಷಣ ಮಾಡಿದರೂ, ಐವತ್ತು ದಿನ ಕೊಡಿ ಎಂದು ಬೇಡಿಕೊಂಡರೂ 125 ಕೋಟಿ ಜನ ಸುಮನಿರುತ್ತಿದ್ದರೆ..!? ಹೋಗಲಿ 75 ಕೋಟಿ ಜನ ಮೋದಿಯವರ ಕಟ್ಟರ್ ಗಳು, ಅಭಿಮಾನಿಗಳು ಎಂದುಕೊಂಡರೂ ಉಳಿದ 50 ಕೋಟಿ ಜನ ಸಾಕಲ್ಲವೇ?? ದೊಂಬಿ ಏಳಲು.? ಗಲಾಟೆ ಮಾಡಲು.? ಸರ್ಕಾರಿ ಬಸ್ಸುಗಳಿಗೆ ಬೆಂಕಿ ಹಚ್ಚಲು..?

ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದೆಂದು 25 ಬಸ್ಸುಗಳಿಗೆ ಬೆಂಕಿ ಹಚ್ಚುತ್ತಾರೆ. ತಮಿಳುನಾಡಿಗೆ ಕೇಳಿದಷ್ಟು ನೀರು ಬರಲಿಲ್ಲವೆಂದು ರೈಲ್ವೆಯನ್ನೇ  ನಿಲ್ಲಿಸುತ್ತಾರೆ. ಹಿಂದುಸ್ಥಾನದಲ್ಲಿ ಜನರು ಉಪ್ಪು, ಹುಳಿ, ಕಾರ ಜಾಸ್ತಿಯೇ ತಿನ್ನುವುದರಿಂದ ಜಗಳಕ್ಕೆ ನಿಲ್ಲಲು ಬಹಳ ಹೊತ್ತು ಬೇಡ!! ತಮ್ಮದಲ್ಲದ ವಸ್ತುಗಳನ್ನು ಹಾಳು ಮಾಡಲು ಇನ್ನು ಕಡಿಮೆ ಸಮಯ ಸಾಕು. ಹೀಗಿರುವಾಗ ಇಂಥದ್ದೊಂದು ದೊಡ್ಡ ನಿರ್ಧಾರ ತೆಗೆದುಕೊಂಡಾಗ ಅಸಮಾಧಾನ ಭುಗಿಲೆದ್ದಿದ್ದರೆ? ನಿರ್ಧಾರ ತೆಗೆದುಕೊಂಡ 15 ದಿನದ ನಂತರವೂ ದೇಶ ಇಷ್ಟು ಶಾಂತವಾಗಿರುತ್ತಿರಲಿಲ್ಲ. ಮೋದಿಜಿ ಪ್ರಧಾನಮಂತ್ರಿಯಾಗಿಯೂ ಉಳಿಯುತ್ತಿರಲಿಲ್ಲ. ಈ ಮಟ್ಟಿಗೆ ಹೇಳುವುದಾದರೆ ಹಿಂದುಸ್ಥಾನ ಇನ್ನು ತನ್ನಲ್ಲಿ ಒಳ್ಳೆಯದರ ಜೊತೆ ನಿಲ್ಲುವುದನ್ನು ಪೂರ್ತಿಯಾಗಿ ಬಿಟ್ಟಿಲ್ಲ. ಜಡತ್ವ ಹಿಂದುಸ್ಥಾನಿಗಳನ್ನು ಇನ್ನು ಪೂರ್ತಿಯಾಗಿ ಆವರಿಸಿಲ್ಲ. ದೇಶ ಹಣವನ್ನು ರದ್ದು ಮಾಡಿದ್ದರ ಜೊತೆ ನಿಂತಿದೆ ಎಂಬುದಕ್ಕೆ ಬೇರೆ ಯಾವುದೇ ಸರ್ವೇಗಳು, ಸಾಕ್ಷಿಗಳು, ಬೇರೆ ಯಾರೋ ರಾಜಕೀಯ ನಾಯಕರ ಸರ್ಟಿಫಿಕೆಟೋ ಬೇಕಿಲ್ಲ. ಜನ ಸಾಮಾನ್ಯ ಖುಷಿಯಾಗಿದ್ದಾನೆ. ಹಾ ಕಷ್ಟಗಳು ಇಲ್ಲವೆಂದಿಲ್ಲ. ಆದರೆ ದೇಶಕ್ಕಾಗಿ ಅದನ್ನು ಸಹಿಸುತ್ತಿದ್ದಾನೆ. ನಿದಾನವಾಗಿ ಮೊಬೈಲುಗಳಲ್ಲಿ “Pay Tym” ಗಳಂಥ “App” ಗಳು ಜಾಗ ಪಡೆದುಕೊಳ್ಳುತ್ತಿವೆ. ಇಂಥಹ ಸಮಯದಲ್ಲಿ ಕಣ್ಣೀರು, ಅವಾಜುಗಳು ಬರುತ್ತಿರುವುದು ಕೋಟಿ ಕೋಟಿಗಳ ಮೇಲೆ ಕುಳಿತಿರುವವರ ಕಡೆಯಿಂದ.

ಮೊನ್ನೆ ಬಂದ್ ಎಂಬ ಪ್ರಹಸನ ನಡೆಸಿದ್ದೂ ಆಯ್ತು. ಭಾರತವೇನು ಇವರಪ್ಪನ ಮನೆಯ ಆಸ್ತಿಯಾ?? ಬಂದ್ ಎಂದರೆ ಬಂದ್ ಮಾಡಲು. ಓಪನ್ ಮಾಡಿ ಎಂದ ಕೂಡಲೇ ಓಪನ್ ಮಾಡಲು. ಹಣ ನಿಷೇಧ ನಿರ್ಧಾರದಿಂದ ದೇಶಕ್ಕೆ ಅಷ್ಟು ನಷ್ಟ, ಇಷ್ಟು ಕಷ್ಟ ಎಂದು ಕೂಗುವ ವಿರೋಧ ಪಕ್ಷದ ನಾಯಕ ನಾಯಕಿಯರಿಗೆ ಭಾರತ್ ಬಂದ್ ನಿಂದ ಜನ ಸಾಮಾನ್ಯರಿಗೆ ಎಷ್ಟು ಕಷ್ಟವಾಗುತ್ತದೆ ಎಂಬ ಅರಿವಿಲ್ಲವಾ? ಎಲ್ಲಕ್ಕಿಂತ ಹಾಸ್ಯಾಸ್ಪದ ಎಂದರೆ ಇದರ ಮುಂದಾಳತ್ವ ವಹಿಸಿದ್ದು ಇದೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ತಾನು ಸನ್ಯಾಸಿನಿಯೇ ಎಂಬಂತೆ  ಫೋಸು ಕೊಟ್ಟು ಓಡಾಡುವ ಬಂಗಾಳದ ದೀದಿ ಮಮತಾ ಬ್ಯಾನರ್ಜಿ. ದೀದಿ, ಬಿಹಾರದ ಲಾಲು ಪ್ರಸಾದ್ ಯಾದವ್ ಅಥವಾ ಉತ್ತರ ಪ್ರದೇಶದ ಮುಲಾಯಂ ಹೀಗೆ ಮಾತನಾಡಿದರೆ ಅದು ತಪ್ಪಲ್ಲ. ಅದವರ ಮಾನಸಿಕತೆ. ಅದವರ ಹಕ್ಕು ಸಂಕಟ ಪಟ್ಟುಕೊಳ್ಳಲಿ, ಕೂಗಿಕೊಳ್ಳಲಿ. ಆದರೆ ದೇಶವನ್ನೇ ಬದಲಾಯಿಸುತ್ತೇನೆ ಎಂದು ಬಂದ ಕೇಜ್ರಿವಾಲ್ ಅವರೆಲ್ಲರಿಗಿಂತ ಮುಂದೆ ನಿಂತಾಗಲೇ ನಮ್ಮ ಬಾಳು ಸಾರ್ಥಕವಾಯಿತು.

ಹಳೆಯವರು ಸುಮ್ಮನೆ ಹೇಳಿದ್ದಲ್ಲ, “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು” ಎಂದು.  ಈತ “ದೇಶ ಉದ್ಧಾರ ಮಾಡುತ್ತೇನೆ, ನಾನು ಎಲ್ಲರಿಗಿಂತ ಬೇರೆ” ಎಂದನಂತೆ . ನಾವು “ಜೈ ಜೈ” ಎಂದೆವಂತೆ. ಭ್ರಷ್ಟಾಚಾರ ಮಾಡಿದ, ಹಲವು ಸ್ಕ್ಯಾಮ್ ಮಾಡಿದ ಶೀಲಾ ದೀಕ್ಷಿತ್ ಳನ್ನು ಒಳಗೆ ಕಳುಹಿಸುತ್ತೇನೆ ಎಂದನಂತೆ, ಸಬೂಬು ತೋರಿಸಿದನಂತೆ. ನಾವು ಮತ ಹಾಕಿದೆವಂತೆ.  “ಮೋದಿಜಿ ಈ ದೇಶದ ಅತಿದೊಡ್ಡ ಭ್ರಷ್ಟನಂತೆ”. ಅದಕ್ಕೂ ನಾವು “ಜೈ ಜೈ” ಎನ್ನಬೇಕಂತೆ. ಕಾಶ್ಮೀರ ಯಾವಾಗಲೂ ಹೊತ್ತಿ ಉರಿಯುತ್ತಿರುತ್ತದೆ ಹಾಗಾಗಿ ಮಾತನಾಡಿ ಅದನ್ನು ಬೇರ್ಪಡಿಸಬೇಕಂತೆ..

ಅಪ್ಪಾ ತಂದೆ, ನಿನಗೆ ಬುದ್ಧಿ ಇಲ್ಲ ಎಂದರೆ ಯಾರಿಗೂ ಇಲ್ಲ ಎಂದುಕೊಂಡಿದ್ದೀಯಾ?? ನಿನಗೆ ರಾಜಕೀಯ ಮಾಡಬೇಕು, ಅದಕ್ಕಾಗಿಯೇ ಮರ್ಯಾದೆ ಬಿಟ್ಟಿದ್ದೀಯಾ ಎಂದೇ ಅಂದುಕೊಳ್ಳೋಣ ಆದರೆ ಜನರಿಗೆ ರಾಜಕೀಯ ಬೇಕಿಲ್ಲ. ಮರ್ಯಾದೆ ಬಿಡುವುದೂ ಬೇಕಿಲ್ಲ. ಅದೇ ಹೊತ್ತಿ ಉರಿಯುವ ಕಾಶ್ಮೀರವನ್ನು ಉಳಿಸಿಕೊಳ್ಳಲು ನಮ್ಮ ಆರ್ಮಿಯವರು ಗುಂಡು ತಿನ್ನುತ್ತಿದ್ದಾರೆ. ದುಡ್ಡು ತೆಗೆದುಕೊಂಡು ಕಲ್ಲು ಹೊಡೆಯುವ ಕೂಳರನ್ನೂ ಸಹಿಸಿಕೊಂಡು ಸುಮ್ಮನೆ ನಗುತ್ತಿದ್ದಾರೆ. ಮೋದಿಜಿ ಭ್ರಷ್ಟನೋ, ಅನಾಚಾರಿಯೋ ಆಗಿದ್ದರೆ, ಹೀಗೆ ರಾತ್ರೋ ರಾತ್ರಿ ಕಳ್ಳತನದ ಹಾದಿಯಲ್ಲಿ, ಕದ್ದು ತಿಂದು, ಸುಖ ನಿದ್ದೆ ಮಾಡುವ ಭೂಪರ ನಿದ್ದೆಗೆಡಿಸುತ್ತಿರಲಿಲ್ಲ. ಸುಮ್ಮನೆ ಬಡಾಯಿ ಕೊಚ್ಚಿಕೊಂಡೂ, ಇಲ್ಲ ಸಲ್ಲದ ಆರೋಪ ಮಾಡಿಕೊಂಡು, ಮಾತುಗಳಲ್ಲಿ ಮನೆ ಕಟ್ಟಿಕೊಡುತ್ತ ಓಡಾಡುವ ನಿನ್ನಂತ ಮನುಷ್ಯರಿಗಿಂತ, ದೇಶಕ್ಕಾಗಿ ದೃಢ ನಿರ್ಧಾರ ತೆಗೆದುಕೊಳ್ಳಬಲ್ಲ ಮೋದಿಯವರು ತುಂಬಾ ಎತ್ತರದಲ್ಲಿ ನಿಲ್ಲುತ್ತಾರೆ.

ಇದು ಕೇವಲ ಕೇಜ್ರಿವಾಲ್ ರಿಗೆ ಮಾತ್ರ ಹೇಳುತ್ತಿರುವ ಮಾತುಗಳಲ್ಲ. ನಾವೇ ಆರಿಸಿಕೊಂಡ ಕನಸೊಂದು ನಮ್ಮೆದುರೇ ಕಮರಿ ಹೋದ ಸಿಟ್ಟಿಗೆ ಹೀಗೆ ಕೇಜ್ರಿವಾಲರ ಹೆಸರನ್ನು ಆಯ್ದುಕೊಂಡೆನೇ ಹೊರತು, ನಾವೆಲ್ಲರೂ ಒಂದೇ ಎನ್ನುತ್ತಾ ಅಧಿವೇಶನದ ಒಳಗೆ ಹೋಗದೆ, ಮಧ್ಯರಸ್ತೆಯಲ್ಲಿ ಗಲಾಟೆ ಮಾಡಿಕೊಂಡು ನಿಂತು ಕಾಲಹರಣ ಮಾಡುವ ಕೇಜ್ರಿವಾಲರಂತ ಎಲ್ಲರಿಗೂ ಧಿಕ್ಕಾರವಿರಲಿ. ದೇಶದ ಹಿತಕ್ಕಾಗಿ ಮಾಡುತ್ತಿರುವ ಕೆಲಸದಲ್ಲೂ ತಪ್ಪು ಹುಡುಕುವ ನಿಮಗೆ ಎಟಿಎಂ ಮುಂದೆ, ಬ್ಯಾಂಕ್ ಗಳ ಮುಂದೆ, ಕಾಣುವ ಸಾಲು ಸಾಲು ಜನ ನಿಮ್ಮದೇ ಹಳದಿ ಕಣ್ಣಿನ ಪ್ರತೀಕ. ದೇಶ ಕೊಳ್ಳೆ ಹೊಡೆದದ್ದು ಸಾಕು. ನೀವು ಒಳ್ಳೆಯದನ್ನು ಮಾಡಲಾರಿರಿ. ಯಾರೋ ಮಾಡುತ್ತಾರೆ ಎಂದರೆ ಅವರಿಗೂ ಬಿಡಲಾರಿರಿ.

ಕೇವಲ ಹಣ ನಿಷೇಧವೆಂದಲ್ಲ. ಏನೇ ಒಳ್ಳೆಯದನ್ನು ಮಾಡಲು ಹೊರಟರೂ ನಿಮ್ಮ ವಿರೋಧವಿದೆ. “ಒಂದು ದೇಶ, ಒಂದು ನ್ಯಾಯ” ಎಂದರೆ ಅದರಲ್ಲೂ ಹುಳುಕು. ನಾವು ಜಾತ್ಯಾತಿತರಂತೆ, ನ್ಯಾಯ ಎಲ್ಲರಿಗೂ ಒಂದೇ ಅಲ್ಲವಂತೆ. “ಯಾರಪ್ಪಾ ಹೇಳಿದ್ದು..”?! ಜಾತ್ಯಾತೀತ ಎಂದರೆ ಎಲ್ಲರಿಗೂ ಒಂದೇ ನ್ಯಾಯ ಎಂದು. ಒಂದೇ ದೇಶದಲ್ಲಿರುವ ಎಲ್ಲರಿಗೂ ಒಂದೇ ನ್ಯಾಯ ಯಾಕಿರಬಾರದು? “One India, One Election” No.. No.. ಅದು ಬೇಡ. ಯಾಕೆ ಬೇಡ?? ಪದೇ ಪದೇ ದುಡ್ಡು ತಿನ್ನಲಾಗುವುದಿಲ್ಲ ಅದಕ್ಕೆ ಅಲ್ಲವೇ? ಯಾವಾಗಲೂ ದೇಶದ ಯಾವುದಾದರೂ ಒಂದು ಭಾಗದಲ್ಲಿ ಚುನಾವಣಾ ನಡೆದಿರುತ್ತದೆ. ಜನರು ಸರದಿಯಲ್ಲಿ ನಿಂತಿರುತ್ತಾರೆ. ಇದು ಜನ ಸಾಮಾನ್ಯರಿಗಾಗುವ ತೊಂದರೆಯಲ್ಲವಾ?? ಪಂಚಾಯ್ತಿ, ತಾಲ್ಲೂಕು, ಜಿಲ್ಲಾ, ರಾಜ್ಯ, ದೇಶ. ಎಲ್ಲ ಚುನಾವಣೆಯೂ ಒಂದೇ ಸಲ. ಹೊಡೆದಾಡಿಕೊಳ್ಳಿ, ದುಡ್ಡು ಹಂಚಿಕೊಳ್ಳಿ. ನಾವು ಬೇಡ ಅಂದರು ನೀವು ಬಿಡುವುವರಲ್ಲ ಗೊತ್ತು. ಹಾಗಾಗಿ ಐದು ವರ್ಷಕ್ಕೆ ಒಂದೇ ಬಾರಿ ಸಾಕು. ಗೆದ್ದು ಬಂದ ಮರುದಿನದಿಂದ ದೇಶಕ್ಕಾಗಿ ಕೆಲಸ ಮಾಡಬೇಕು. ಇಂಥದ್ದೊಂದು ಯೋಜನೆಯ ಬಗ್ಗೆ ಮೋದಿ ಮಾತನಾಡಿದರೆ ಮತ್ತದೇ ಕೂಗಾಟ.

ಯಾಕೆ ಸ್ವಾಮೀ?? ಜನ ಪ್ರತಿನಿಧಿಗಳು ಎನ್ನಿಸಿಕೊಂಡವರದ್ದು ಇಂಥ ಬಂಡ ಬಾಳು?? ನಾವು ನಿಮಗೆ ಮತ ನೀಡಿದ್ದೇವೆಯೇ ಹೊರತು ನಮ್ಮನ್ನು ನಾವು ಮಾರಿಕೊಂಡಿಲ್ಲ. ಈ ದೇಶ ಮಾರಾಟ ಮಾಡಲು ಬಿಡುವುದಿಲ್ಲ. ಬಿಜೆಪಿಯೇ ಆಗಲಿ, ಕಾಂಗ್ರೆಸ್ಸೇ ಆಗಲಿ, ಯಾವುದೇ ಸಣ್ಣ ಗ್ರಾಮೀಣ ಪಕ್ಷಗಳೇ ಆಗಲಿ, ಒಳ್ಳೆಯದು ಮಾಡಿದಾಗ ಬೆನ್ನಿಗೆ ನಿಲ್ಲಬಲ್ಲೆವು.. ಕಚಡಾ ಕೆಲಸ ಮಾಡಿದರೆ ಕ್ಯಾಕರಿಸಿ ಉಗುಳಲೂ ಬಲ್ಲೆವು. ಜನರು ಬದಲಾಗುತ್ತಿದ್ದಾರೆ.. ಶೈಕ್ಷಣಿಕ ಪರಿಸ್ಥಿತಿ ಸುಧಾರಿಸುತ್ತಿದೆ.. ಮಾನಸಿಕ ಪ್ರೌಢಿಮೆ ಹೆಚ್ಚುತ್ತಿದೆ. ಹಾಗಾಗಿ ದುಡ್ಡು ಕೊಟ್ಟು ನಂಬಿಸುವುದು, ಮಾತನಾಡಿ ಮೋಡಿ ಮಾಡುವುದು ಇವೆಲ್ಲ ನಡೆಯುವುದಿಲ್ಲ. ದೇಶಕ್ಕಾಗಿ ಕೆಲಸ ಮಾಡಿ. ಪಕ್ಷಕ್ಕಿಂತ ದೇಶ ದೊಡ್ಡದು. ನಮ್ಮ ಪಕ್ಷ, ನಿಮ್ಮ ಪಕ್ಷ ಎನ್ನುವುದನ್ನು ಬಿಟ್ಟು ನಮ್ಮ ದೇಶ ಎಂದು ಒಂದಾದರೆ ಗೌರವ ಸಿಕ್ಕೇ ಸಿಗುತ್ತದೆ.

ಇಲ್ಲದಿದ್ದರೆ ಜನರು ಕಪಾಳಕ್ಕೂ ಹೊಡೆಯುತ್ತಾರೆ, ಕಲ್ಲಿನಿಂದಲೂ ಹೊಡೆಯುತ್ತಾರೆ. ಅಲ್ಲಿಗೆ ಮತ್ತದೇ ಪ್ರಶ್ನೆ. ಈ ರಾಜಕೀಯ ಹಾಗೂ ಚಲನಚಿತ್ರ ರಂಗ ಎರಡಕ್ಕೂ ಬಹಳ ಸಾಮ್ಯತೆ. ದುಡ್ಡು, ಹೆಂಡ ಹಂಚದಿದ್ದರೆ ಜನ ಮತ ನೀಡುವುದಿಲ್ಲ ಎಂದು ನಮ್ಮ ನಾಯಕರು ಹೀಗಾಗಿದ್ದಾರಾ? ಅಥವಾ ಒಳ್ಳೆಯ ಅಭ್ಯರ್ಥಿಯೇ ಇಲ್ಲ ಹಾಗಾಗಿ ದುಡ್ಡು ತೆಗೆದುಕೊಂಡು ಮತ ಹಾಕುತ್ತೇನೆ ಎಂದುಕೊಳ್ಳುತ್ತ ನಾವು ಹೀಗಿದ್ದೇವಾ ಎಂಬುದು. ಅದೇನೇ ಇರಲಿ ದೇಶ ಪ್ರೇಮ ಬೆಳಸಿಕೊಳ್ಳೋಣ. ಎಲ್ಲಕಿಂತ ದೇಶ ಮೊದಲು. ದೇಶವನ್ನು ಕಟ್ಟುವ ನಮ್ಮ ಪ್ರಧಾನಿಗಳಿಗೆ ಸಹಕರಿಸೋಣ. ಆ ಹೆಜ್ಜೆಯಲ್ಲಿ ತಪ್ಪಿದರೆ ಅವರನ್ನೂ ಎಚ್ಚರಿಸೋಣ. ಯಾಕೆಂದರೆ ದೇಶವಿಲ್ಲದಿದ್ದರೆ ಅವರೂ ಇಲ್ಲ ನಾವೂ ಇಲ್ಲ ಮರ್ಯಾದೆಯಿದ್ದರೂ ರಾಜಕೀಯ ಮಾಡಬಹುದೆಂದು ತೋರಿಸಿ, ನಿದರ್ಶನವಾಗುವಂತೆ ಬದುಕಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!