ಅಂಕಣ

ಪರಿಪರಿ ಪರೀಕ್ಷಿಸುವವನ ಗುರುವೆಂದು ಕರೆಯುವುದೆಂತು ?

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೩

ನರ ಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |

ಬರಿ ಸಮಸ್ಯೆಯೆ ? ಅದರ ಪೂರಣವದೆಲ್ಲಿ ? ||

ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ |

ಗುರುವೆಂದು ಕರೆಯುವೆಯ ? – ಮಂಕುತಿಮ್ಮ || ೩೩ ||

ಪರಬ್ರಹ್ಮದೊಡನೆಯೆ ಪಂಥಕ್ಕಿಳಿದಂತೆ ಆ ತತ್ವದೊಡನೆ ಕವಿಯ ವಾಗ್ವಾದ, ಸಂವಾದ ಈ ಕಗ್ಗದ್ಲಲೂ ಮುಂದುವರೆಯುತ್ತದೆ (ಜತೆಗೆ 30,31,32 ಕಗ್ಗಗಳನ್ನು ನೋಡಿ). ಇಲ್ಲಿ ಸಂವಾದಕ್ಕೆ ಕವಿಯೆತ್ತಿಕೊಂಡ ವಿಷಯ : ಪರಬ್ರಹ್ಮದ ಪರಮಗುರು ಸ್ವರೂಪದ ಕುರಿತು ; ಪರಬ್ರಹ್ಮವನ್ನು ಗುರುವಿನ ಗುರುವೆಂದು ಭಾವಿಸುವ ಭಾವನೆಯ ಮೂಲಕ್ಕೆ ಸವಾಲೊಡ್ಡುವ ಪ್ರಶ್ನೆಯ ರೂಪದಲ್ಲಿ.

‘ನರ ಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |

ಬರಿ ಸಮಸ್ಯೆಯೆ ? ಅದರ ಪೂರಣವದೆಲ್ಲಿ ? ||’

ನಮ್ಮ ಬಾಳೆನ್ನುವುದರತ್ತ ಒಮ್ಮೆ ದಿಟ್ಟಿಸಿ ನೋಡಿದರೆ ಬರಿಯ ಸಮಸ್ಯೆಗಳೆ ಎದ್ದು ಕಾಣುತ್ತವೆ, ಅದರಲ್ಲು ಉತ್ತರವಿಲ್ಲದ (ಪೂರಣವಿಲ್ಲದ) ಅನೇಕಾನೇಕ ಒಗಟುಗಳ ರೂಪದಲ್ಲಿ. ಆ ಪ್ರಶ್ನೆ, ಸಮಸ್ಯೆ, ಒಗಟುಗಳ ಮೊತ್ತ, ಆಳ, ಅಗಲ, ವಿಸ್ತಾರಗಳನ್ನೆಲ್ಲ ನೋಡುತ್ತಿದ್ದರೆ, ‘ಅವೆಲ್ಲವನ್ನು ಆ ದೇವರು ಹುಟ್ಟುಹಾಕಿರುವುದೇ ಕೇವಲ ನರಮಾನವನ ಪರೀಕ್ಷೆಗೇನೊ?’ ಅನಿಸಿಬಿಡುತ್ತದೆ. ಯಾವ ಕಾರಣಕ್ಕೊ ಏನೊ – ನರಮಾನವ ಆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಕೊಂಡು ಹೊರಬರಲಾಗದೆ ಅದರ ನಡುವಲ್ಲೆ ತೊಳಲಾಡುವಂತೆ ಮಾಡುವುದೆ ಆ ಬೊಮ್ಮನ (ಸೃಷ್ಟಿಕರ್ತನ) ಉದ್ದೇಶ, ಮೂಲ ಆಶಯವಿದ್ದಂತೆ ಕಾಣುತ್ತದೆ. ಮೊದಲ ಸಾಲಿನ ಭಾಗಾಂಶ ಈ ಸಾರವನ್ನೆ ನೇರವಾಗಿ ಬಿಂಬಿಸುತ್ತಿದ್ದರೆ, ಅದರ ಮಿಕ್ಕ ಭಾಗ ಮತ್ತು ಎರಡನೇ ಸಾಲು – ಈ ಬದುಕೆಂದರೆ ಬರಿ ಉತ್ತರವಿಲ್ಲದ ಪ್ರಶ್ನೆಗಳು ಮಾತ್ರವೇನಾ? ಅದೇಕೆ ಹೀಗೆ ? ಎನ್ನುವ ಪ್ರಶ್ನೆಯನ್ನು ಮುಂದಿಡುತ್ತದೆ.

ನಮ್ಮ ಪರಂಪರೆಯಲ್ಲಿ ಗುರುವಿನ ಸ್ಥಾನ ಅಸಾಮಾನ್ಯವಾದದ್ದು. ‘ನಡೆಯಲೊಂದು ಗುರಿ, ನಡೆಸಲೊಬ್ಬ ಗುರು’ ಇವೆರಡಿದ್ದರೆ ಸಾಕು ಪ್ರಪಂಚವನ್ನೆ ಜಯಿಸಿ ಬರಬಹುದೆನ್ನುವ ಮಾತು ಜನಜನಿತ. ಅದರಲ್ಲೂ ಪರಬ್ರಹ್ಮನನ್ನು ಗುರುವಿಗೇ ಗುರು ಎನ್ನುತ್ತಾರೆ. ಅರಿಮೆಯ ಪರಿಧಿಯಲ್ಲಿ ಅಜ್ಞಾನವೆಂಬ ಮಾಯದ ಮುಸುಕನ್ನು ಸರಿಸಿ, ಜ್ಞಾನದ ಬೆಳಕಿನತ್ತ ಸರಿಯಾದ ಹಾದಿಯಲ್ಲಿ ನಡೆಯಬೇಕಾದರೆ ಅವನ ಕೃಪೆಯಿಲ್ಲದೆ ಸಾಧ್ಯವಿಲ್ಲ ಅನ್ನುವುದು ಕೂಡ ಆಳವಾಗಿ ಬೇರೂರಿಕೊಂಡಿರುವ ನಂಬಿಕೆ. ಹೀಗಿರುವಲ್ಲಿ ಬರಿ ಉತ್ತರವಿಲ್ಲದ ಪ್ರಶ್ನೆಗಳನ್ನು ಮಾತ್ರ ನಮ್ಮೆದುರಿಗಿಟ್ಟು, ಅದರಲ್ಲಿ ಸೆಣೆಸಿ ಮುನ್ನಡೆಯಲು ಮಾರ್ಗದರ್ಶಿಯಾಗುವ ಗುರುವಂತೆ ಇರದೆ ಮರೆಯಾಗಿರುವುದು ಸರಿಯೇ? ಎಂದು ಮುಂದಿನ ಸಾಲುಗಳಲ್ಲಿ ಪ್ರಶ್ನಿಸುತ್ತಾನೆ ಮಂಕುತಿಮ್ಮ.

ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ |

ಗುರುವೆಂದು ಕರೆಯುವೆಯ ? – ಮಂಕುತಿಮ್ಮ ||

ಇಲ್ಲೊಂದು ಕಿರು ಟಿಪ್ಪಣಿ : ಆಧ್ಯಾತ್ಮಿಕ ಹಾದಿಯಲ್ಲಿ ಪರಬ್ರಹ್ಮನನ್ನು ಕಾಣಲು ನಡೆಯಬೇಕಾದ ದೂರ, ಸಾಗಬೇಕಾದ ಹಾದಿ ಕಠಿಣ. ಅದಕ್ಕೆ  ಸಾಧಕ ಚಿತ್ತ, ಮನೋಬಲ, ಆತ್ಮಸ್ಥೈರ್ಯ, ಪರಿಶ್ರಮ ಇತ್ಯಾದಿಗಳ ಅಗತ್ಯವಿದೆಯೆನ್ನುತ್ತಾರೆ. ಗುರುವನ್ನು ಹುಡುಕಿ ಹೊರಡಬೇಕಾದ್ದು ಸಾಧಕನ ಕೆಲಸ, ಗುರುವಿನದಲ್ಲ ಅನ್ನುವುದು ಮತ್ತೊಂದು ದೃಷ್ಟಿಕೋನ. ಆದರಿಲ್ಲಿ ಮಂಕುತಿಮ್ಮ ಪ್ರತಿನಿಧಿಸುತ್ತಿರುವುದು ಜನಸಾಮಾನ್ಯರ ಬದುಕು, ಬವಣೆ, ಭಾವನೆ, ಚಿಂತನೆಯನ್ನ. ಹೀಗಾಗಿ ಗುರುವಿಲ್ಲ ಎನ್ನುವ ಮಾತನ್ನು ಸಾಧಕನ ದೃಷ್ಟಿಯಿಂದಲ್ಲ, ಜನಸಾಮಾನ್ಯನ ದೃಷ್ಟಿಯಿಂದ ಪರಿಗಣಿಸಬೇಕು.

ಅವನ ಸೃಷ್ಟಿ ನಿಯಮದ ಸಮೀಕರಣದಲ್ಲಿ ಬರಿಯ ಉತ್ತರವಿಲ್ಲದ, ಗೊಂದಲ, ಸಂಶಯ ತುಂಬಿದ ಸಮಸ್ಯೆಗಳ ಸುರಿಮಳೆಯೆ ಜೀವನ ಕ್ರಮವಾದಂತೆ ಕಾಣಿಸುತ್ತದಲ್ಲ ? ಎಂದು ಕೊರಗುತ್ತದೆ ಕವಿ ಹೃದಯ. ಉತ್ತರವೆ ಇರದ ಹಾಗೆ ಬರಿಯ ಪ್ರಶ್ನೆಗಳನ್ನು ಮಾತ್ರ ಸುರಿದು ಕಂಗೆಡಿಸಿ , ಕೊನೆಗೆ ಅಸಹಾಯಕತೆಯಿಂದ ಕರೆದಾಗಲೂ ಉತ್ತರ ಕೊಡಲು ಬಾರದವನನ್ನು ಗುರುವೆಂದು ಕರೆಯುವುದಾದರು, ಒಪ್ಪಿಕೊಳ್ಳುವುದಾದರು ಎಂತು? ಆ ಪರಬ್ರಹ್ಮನೆನಿಸಿಕೊಂಡವನಿಗೆ ಹಾಗೆ ಕರೆಸಿಕೊಳ್ಳುವ ಅರ್ಹತೆ ನಿಜಕ್ಕೂ ಇದೆಯೆ ? ಎಂದು ಪಂಥಕ್ಕೆ ಬಿದ್ದಂತೆ ಕೇಳುತ್ತಾನಿಲ್ಲಿ ಮಂಕುತಿಮ್ಮ. ಹಾಗೆ ಪಂಥಕ್ಕೆ ಬಿದ್ದಂತೆ ಕೆಣಕಿದ ಕೋಪದಿಂದಲಾದರೂ ರೇಗಿಕೊಂಡು ಉತ್ತರ ಕೊಡಲು ಬರಬಹುದೇನೊ ಆ ಸೃಷ್ಟಿಕರ್ತ – ಎನ್ನುವ ಕವಿಯ (ಹುಸಿ) ಆಶಯವನ್ನು ನಿಷ್ಪತ್ತಿಸಬಹುದು ಓದುಗ ಮನ.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!