ಅಂಕಣ

ನಿಜವಾಗುತ್ತಿದೆಯೇ ಐನ್ಸ್ಟೈನ್’ನ ಆತಂಕದ ಸಾಲುಗಳು……!!

ಅದೊಂದು ಸುಂದರ ಹಳ್ಳಿ. ಹಳ್ಳಿಯ ಮೂಲೆಯಲ್ಲೊಂದು ದೊಡ್ಡ ಮನೆ. ಪ್ರಕೃತಿ ಮಾತೆ ಧರೆಗಿಳಿದು ಬಂದಂತಿತ್ತು ಆ ಮನೆಯ ಸುತ್ತಲಿನ ವಾತಾವರಣ. ಮನೆ ತುಂಬಿಕೊಂಡಿರುವ ದೊಡ್ಡ ಕುಟುಂಬ. ಹೌದು ಅದು ಅವಿಭಕ್ತ ಕುಟುಂಬ. ಸದಾ ಸಂತೋಷ ತುಂಬಿಕೊಂಡಿದ್ದ ಮನೆ. ಎಲ್ಲರೂ ಒಟ್ಟಿಗೆ ಕೂತು ಮಾತನಾಡುತ್ತಾ ಉಪಹಾರ ಭೋಜನಗಳನ್ನುಮಾಡುತ್ತಿದ್ದರು. ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೊತೆಗಿರುವ ಸಂಬಂಧಿಗಳ ಮನದಾಳ ತಿಳಿದಿರುತ್ತಿತ್ತು. ಹಬ್ಬ ಹರಿದಿನಗಳು‌ ಬಂತೆಂದರೆ ಮನೆಯಲ್ಲಿ ಹೊಸತೊಂದು ಸಂಭ್ರಮ. ಎಲ್ಲರೂ ಸೇರಿ ಸಂಭ್ರಮದಿಂದ ಹಬ್ಬಗಳನ್ನು ಆಚರಿಸುತ್ತಿದ್ದರು. ಅವಿಭಕ್ತ ಕುಟುಂಬದ ಪರಿಕಲ್ಪನೆಯೇ ಸುಂದರ. ಪ್ರೀತಿ ತುಂಬಿದ ಮನೆ, ಬಬ್ಬರನ್ನೊಬ್ಬರುಅರ್ಥಮಾಡಿಕೊಂಡು ಬದುಕುವ ಪರಿ, ಸಂಬಂಧಗಳ ಅರ್ಥ, ಇದೆಲ್ಲದಕ್ಕೂ ಮಿಗಿಲಾಗಿ ಜೀವನದ ಅರ್ಥ ಚೆನ್ನಾಗಿ ತಿಳಿಯುತ್ತಿತ್ತು. ಮಕ್ಕಳಿಗೆ ಹಿರಿಯರ ಮೇಲಿನ ಭಯ, ಹಿರಿಯರಿಗೆ ಮಕ್ಕಳ ಮೇಲಿನ ಪ್ರೀತಿ. ಅವಿಭಕ್ತ ಕುಟುಂಬಗಳಲ್ಲಿ ಬೆಳೆಯುತ್ತಿದ್ದ ಮಕ್ಕಳು ಸಹಜವಾಗಿಯೇ ಒಳ್ಳೆಯ ಸಂಸ್ಕಾರಗಳನ್ನು ಕಲಿತುಬಿಡುತ್ತಿದ್ದವು. ಹಿರಿಯರ ಮಾರ್ಗದರ್ಶನ, ತಂದೆ ತಾಯಿಯ ಪ್ರೀತಿಯ ಪರಿಸರದೊಳಗೆ ಬೆಳೆಯುತ್ತಿದ್ದ ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬುದರ ಬಗ್ಗೆ ಚೆನ್ನಾಗಿ ತಿಳಿದುಬರುತ್ತಿತ್ತು. ಮಕ್ಕಳು ದೊಡ್ಡವರ ಮಾತಿಗೆ ಬೆಲೆ ಕೊಡುತ್ತಿದ್ದರು. ಕಡೇ ಪಕ್ಷ  ಎಲ್ಲವನ್ನೂ ಅನುಸರಿಸದಿದ್ದರೂ ಹಿರಿಯರ ಮಾತುಗಳನ್ನು ಕೇಳುವಷ್ಟು ತಾಳ್ಮೆಯನ್ನು ಹೊಂದಿದ್ದರು. ಎಂತಹ ಪರಿಸ್ಥಿತಿಯಲ್ಲೂಬದುಕಬಲ್ಲ ಆತ್ಮ ವಿಶ್ವಾಸ ಬೆಳೆಯುತ್ತಿತ್ತು. ಆ ದಿನಗಳ ಸುಂದರ ಚಿತ್ರಣ ಇನ್ನೆಂದು ನೋಡಲು ಸಿಗಲಾರವು. ಬದುಕಿನ ಅರ್ಥ ತಿಳಿದುಕೊಳ್ಳಲು ಕಲಿಯುಗದಲ್ಲಿ, ತಾನೇ ಬುದ್ಧಿವಂತ ಎಂದು ಕಲ್ಪಿಸಿಕೊಂಡು ಬದುಕುತ್ತಿರುವ ಮಾನವನಿಗೆ ತಿಳಿದೇ ಇಲ್ಲ ಹಾಗೂ ಸಮಯವಿಲ್ಲ. ಈಗಿನ ಕಾಲದ ಮಕ್ಕಳಿಗೆ ಅದುವೇ, ಪಟ್ಟಣದಲ್ಲೇ ಹುಟ್ಟಿ ಬೆಳೆವ ಮಕ್ಕಳಿಗೆಈ ಅವಿಭಕ್ತ ಕುಟುಂಬದ ಪರಿಚಯವೇ ಇಲ್ಲ. ಅವರಿಗೆ ತಿಳಿದಿರುವ ವಿಷಯಗಳೆಂದರೆ ಮೊಬೈಲ್ ಫೋನ್. ಸದಾ ಅದರೊಳಗೇ ಮುಳುಗಿಹೋಗಿರುವ ಮನುಷ್ಯನಿಗೆ ಸ್ಮಾರ್ಟ್ ಫೋನ್ ಹೊರತಾಗಿ ಬೇರೆ ಪ್ರಪಂಚದ ಪರಿಚಯ ಇಲ್ಲ. ತಾನೇ ಕಂಡುಹಿಡಿದ ತಂತ್ರಜ್ಞಾನ ತನ್ನನ್ನೇ ಗೆದ್ದಲು ಹುಳುವಿನಂತೆ ತಿನ್ನುತ್ತಿದೆ ಎಂಬ ಅರಿವೇ ಇಲ್ಲದಂತೆ ಬದುಕುತ್ತಿದ್ದಾನೆ.

ಅವಿಭಕ್ತ ಕುಟುಂಬದ ಪರಿಕಲ್ಪನೆ ಹಾಗೂ ಪರಿಧಿಯಿಂದ ಹೊರಬಂದು ಈಗ 21ನೇ ಶತಮಾನಕ್ಕೆ ಕಾಲಿಡೋಣ. ಅಂದರೆ ವರ್ತಮಾನಕ್ಕೆ ಬರೋಣ. ಸರಿಯೋ ತಪ್ಪೋ, ಇಷ್ಟವೋ ಕಷ್ಟವೋ ಬದುಕುಕಟ್ಟಿಕೊಳ್ಳಲು ಬೆಂಗಳೂರಿನಂತಹ ಮಾಯಾನಗರಕ್ಕೆ ಯುವಕರು ಬರುತ್ತಾರೆ. ಬದುಕು ಯಾಂತ್ರಿಕವಾಗುತ್ತಿದೆ ಎಂದು ತಿಳಿದಿದ್ದರೂ, ಬೇರೇ ದಾರಿಯಿಲ್ಲದೇಬದುಕು ಮುಂದುವರೆಯುತ್ತದೆ. ಒಂದಷ್ಟು ಹಿರಿತಲೆಗಳು ಹಳ್ಳಿಯಲ್ಲೇ ಉಳಿದುಬಿಡುತ್ತವೆ. ಅದೊಂದು ಸಣ್ಣ ಹಳ್ಳಿ. ಇನ್ನೂ ಪಟ್ಟಣದ ಜೀವನಕ್ಕೆ ಬಲಿಯಾಗಿರದ ಹಳ್ಳಿ. ಹಳೇಕಾಲದ ಒಂದು ದೊಡ್ಡ ಮನೆ. ದೊಡ್ಡ ಮನೆಯೊಳಗೆ ಇರುವುದು ಬರೀ ಎರಡು ಮುದಿ ಜೀವಗಳು. 5 ಜನ ಗಂಡು ಮಕ್ಕಳಿದ್ದಾರೆ, ಆದರೆ ಯಾರೂ ಜೊತೆಗಿಲ್ಲ. ಎಲ್ಲರೂ ಪಟ್ಟಣದಲ್ಲಿಬದುಕು ಕಟ್ಟಿಕೊಂಡಿದ್ದಾರೆ. ಅಂದು ಮನೆಯಲ್ಲಿ ಒಂದು ಶುಭ ಸಮಾರಂಭವಿತ್ತು. ಐದೂ ಜನ ಮಕ್ಕಳು ಪಟ್ಟಣದಿಂದ ತಮ್ಮ ಊರಿನ ದೊಡ್ಡ ಮನೆಗೆ ಬಂದಿದ್ದರು. ಮೊಮ್ಮಕ್ಕಳನ್ನು ಕಂಡ ಅಜ್ಜ ಅಜ್ಜಿಗೆ ಬಹಳಾ ಸಂತೋಷವಾಗಿತ್ತು. ಬಿಕೋ ಎನ್ನುತ್ತಿದ್ದ ಮನೆಯಲ್ಲೀಗ ಜನರೇನೋ ತುಂಬಿಕೊಂಡಿದ್ದಾರೆ. ಮಗ , ಸೊಸೆ , ಮೊಮ್ಮಕಳೆಲ್ಲರೂ ಬಂದಿದ್ದಾರೆ.ಆದರೆ ಮನೆಯಲ್ಲಿ ಅದೇ ಮೌನ. ಅಪರೂಪಕ್ಕೆ ಒಂದೆಡೆ ಸೇರಿರುವ ಎಲ್ಲರೂ ಸಂತೋಷದಿಂದ ಮಾತನಾಡುತ್ತಿಲ್ಲ. ಮೊಮ್ಮಕ್ಕಳೆಲ್ಲಾ ಬಂದಿದ್ದಾರೆ ಆದರೆ ಅಜ್ಜ ಅಜ್ಜಿಯ ಜೊತೆ ಮಾತೇ ಅಡುತ್ತಿಲ್ಲಾ. ಮನೆಯೆಲ್ಲಾ ಸುತ್ತಾಡುತ್ತಾ ಬೊಬ್ಬೆ ಹೊಡೆಯುತ್ತಿಲ್ಲ. ಎಲ್ಲರೂ ಒಂದೊಂದು ಮೂಲೆ ಸೇರಿಕೊಂಡಿದ್ದಾರೆ. ಯಾಕೆ ಅಂತಾ ಕೆಳ್ತೀರಾ. ಅವರೆಲ್ಲರಕೈಯಲ್ಲೂ ಸ್ಮಾರ್ಟ್’ಫೋನ್ ಎಂಬ ಸಣ್ಣದೊಂದು‌ ಮಾಯಾ ಪೆಟ್ಟಿಗೆ ಇದೆ. ಹೌದು ನೀವು ನಂಬುತ್ತೀರೋ ಇಲ್ಲವೋ ಇದು ಸತ್ಯ. ಇದು ಇಂದಿನ ಕಾಲದ ಚಿತ್ರಣ. ಇದು ಮುಂದೆ ನಮಗಾಗಿ‌ ಬಂದೊದಗಲಿರುವ ಕೆಟ್ಟ ಪರಿಣಾಮದ ಮುನ್ಸೂಚನೆ. ಯಾಕೆ ಗೊತ್ತ ಮನುಷ್ಯ ಮನುಷ್ಯನ ಒಡನಾಟಗಳನ್ನು, ಸಂಭಾಷಣೆಯಗಳನ್ನು, ಸಂತೋಷದ ಸಂದರ್ಭಗಳನ್ನು ತಂತ್ರಜ್ಞಾನತನ್ನೊಳಗೆ ನುಂಗಿತ್ತಿದೆ. ಮನುಷ್ಯ ಒಂಟಿಯಾಗುತ್ತಿದ್ದಾನೆ. ಅದೂ ಎಲ್ಲವೂ, ಎಲ್ಲರೂ ಜೊತೆಗಿದ್ದರೂ ಒಂಟಿಯಾಗುತ್ತಿದ್ದಾನೆ.

20ನೇ ಶತಮಾನದ ಖ್ಯಾತ ವಿಜ್ಞಾನಿ ಐನ್’ಸ್ಟೈನ್ ಬೆಳೆಯುತ್ತಿರುವ ತಂತ್ರಜ್ಞಾನದಬಗ್ಗೆ ಒಂದು ಆತಂಕವನ್ನು ವ್ಯಕ್ತಪಡಿಸಿದ್ದಾನೆ. ಅದೇನೆಂದರೆ,

‘’I fear the day technology will surpass our human interaction. The world will have a generation of idiots.’’

ಒಂದೆಡೆ ಈ ಸಾಲುಗಳನ್ನು ಐನ್’ಸ್ಟೈನ್ ಸ್ವತಃ ತಾನೇ ಹೇಳಿದ್ದಾನೆಯೋ ಅಥವಾ ಮತ್ತಿನ್ಯಾರು ಹೇಳಿದ್ದಾರೆ ಎಂಬ ಖಚಿತವಾದ ಮಾಹಿತಿಯಿಲ್ಲ. ಈ ಮೇಲಿನ ಸಾಲುಗಳನ್ನು ಯಾರು ಹೇಳಿದರು ಎಂಬುದನ್ನು ಹುಡುಕುವ ಅವಶ್ಯಕತೆ ಇಲ್ಲ. ಆದರೆ ನಿಜವಾಗಿಯೂ ಈ ಸಾಲುಗಳು ವಾಸ್ತವದ ಚಿತ್ರಣವನ್ನು ಹಾಗೂ ಮುಂದೊದಗಿಬರಲಿರುವ ಕೆಟ್ಟಪರಿಸ್ಥಿತಿಯನ್ನು ತಿಳಿಸುತ್ತಿವೆ. ಹೌದು ಮನುಷ್ಯ ಯಾಂತ್ರಿಕವಾಗಿ ಬದುಕುತ್ತಿದ್ದಾನೆ. ತಂತ್ರಜ್ಞಾನವನ್ನು ಹೇಗೆ ಹಾಗೂ ಎಷ್ಟು ಬಳಸಬೇಕು ಎಂಬುದನ್ನು ತಿಳಿದುಕೊಳ್ಳುತ್ತಿಲ್ಲ. ಎಲ್ಲಾ  ಸಂದರ್ಭದಲ್ಲಿಯೂ ಮೊಬೈಲ್’ನೊಳಗೇ ಮುಳುಗಿರುವ ಜನರು ತಮ್ಮ ಸುತ್ತಲಿನ ಪ್ರಪಂಚವನ್ನು ಮರೆಯುತ್ತಿದ್ದಾರೆ. ಜೊತೆಗೇ ಇರುವ ಜನರ ಜೊತೆಗೆ ಮಾತನಾಡುವುದನ್ನೇ ಮರೆತಿರುವ ಜನರು WhatsApp ಹಾಗೂ Facebook ಗಳ ಮುಖಾಂತರ ಎಲ್ಲೋ ಇರುವ ಗುರುತೂ ಪರಿಚಯ ಇಲ್ಲದವರ ಜೊತೆ ಕೆಲಸಕ್ಕೆ ಬಾರದ ಸಂಭಾಷಣೆ ಹಾಗೂ ಸಂದೇಶಗಳನ್ನು ವಿನಿಮಯ ಮಾಡುವುದರಲ್ಲಿ ಮುಳುಗಿಹೋಗಿದ್ದಾರೆ. ನಾನು ಯಾವುದೇ ಸಾಮಾಜಿಕ ಜಾಲತಾಣಗಳನ್ನು ವಿರೋಧಿಸುತ್ತಿಲ್ಲ. ಆದರೆ ನಾವು ಅದನ್ನು ಯಾವುದಕ್ಕೆ ಉಪಯೋಗಿಸಿಕೊಳ್ಳಬೇಕೆಂಬುದನ್ನಮರೆಯುತ್ತಿದ್ದೇವೆ. ದಿನವಿಡೀ ಮೊಬೈಲ್ ಸ್ಕ್ರೀನ್ ನೋಡುವ ಯಾವುದೇ ರೀತಿಯ ಅವಶ್ಯಕತೆಗಳೇ ಇಲ್ಲ. ಆದರೂ ಪ್ರತಿ ಕ್ಷಣ ಮನಸ್ಸು ಮೊಬೈಲ್ ಒಳಗೆ ಬರುವ ಕೆಲಸಕ್ಕೆ ಬಾರದ ಸಂದೇಶಗಳನ್ನು ತೆರೆದು ನೋಡುವುದರಲ್ಲೇ ಮುಳುಗಿಹೋಗಿರುತ್ತದೆ. ಯೋಚಿಸಿ ನೋಡಿ, ಮಾನವೀಯತೆ, ಪ್ರೀತಿ, ಬಾಂಧವ್ಯ,‌ಮೌಲ್ಯಗಳೇ ಇಲ್ಲದಿರುವ ಸಮಾಜದಲ್ಲಿ ಮನುಷ್ಯನಇರುವಿಕೆಗೆ ಅರ್ಥವಿಲ್ಲ. ಬರೀ ತಂತ್ರಜ್ಞಾನವಿದ್ದರೆ ಸಾಕು ಅಷ್ಟೇ. ಬರೀ ರೋಬೋಗಳಿದ್ದರೆ ಸಾಕು.

ಐನ್’ಸ್ಟೈನ್’ನ ಆತಂಕದ ಸಾಲುಗಳು ನಿಜವಾಗಲು ಇನ್ನು ಜಾಸ್ತಿ ದಿನಗಳೇನು ಬೇಕಿಲ್ಲ.  ಪ್ರತೀ ಕ್ಷಣವೂ ಮೊಬೈಲ್ ಫೋನ್ ಸ್ಕ್ರೀನ್ ನೋಡುವ ಅಗತ್ಯ ನಮಗಿದೆಯೇ? ಎಲ್ಲೇ ಹೋದರು, ಜೊತೆಗೆ ಯಾರಿದ್ದರೂ, ಗೆಳೆಯರ ಜೊತೆಗಿದ್ದರೂ, ಸಂಬಂಧಿಕರ ಜೊತೆಗಿದ್ದಾಗಲೂ, ಶುಭ ಸಮಾರಂಭಗಳಲ್ಲಿಯೂ ಹಾಗೂ ಊಟ ತಿಂಡಿ ಮಾಡುವಾಗಲೂ ಸದಾಮೊಬೈಲ್ ಒಳಗೇ ಮುಳುಗಿಹೋಗಿರುವ ಮನುಷ್ಯನಿಗೆ ಈ ಎಲೆಕ್ಟ್ರಾನಿಕ್ ಉಪಕರಣದಿಂದ ಸ್ವಲ್ಪ ಕಾಲವೂ ದೂರ ಇರಲು ಆಗುವುದೇ ಇಲ್ಲವೇ. ಬಹುಶಃ ಎಲ್ಲದಕ್ಕಿಂತ ದೊಡ್ಡ ಕೆಟ್ಟ ಹವ್ಯಾಸವೆಂದರೆ ಸದಾ ಈ ಸ್ಮಾರ್ಟ್’ಫೋನ್’ಗೆ ತೂಗಿಕೊಂಡಿರುವುದು.

ಏನಿಲ್ಲದಿದ್ದರೂ ಬದುಕಬಹುದು ಆದರೆ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಮನುಷ್ಯ ಹುಚ್ಚನಾಗಿಬಿಡುತ್ತಾನೆ. ಇದೊಂತರ ಮಾದಕ ದ್ರವ್ಯ ವ್ಯಸನದಂತೆ. ಕೆಲವೊಂದು ಅಂಕಿ ಅಂಶಗಳ ಪ್ರಕಾರ ನಮ್ಮ ಕಣ್ಣುಗಳು ಸರಾಸರಿ 3.5 ರಿಂದ 4 ಗಂಟೆ ಮೊಬೈಲ್ ಪರದೆಯ ಮೇಲಿರುತ್ತದಂತೆ. ಒಂದುವಾರದಲ್ಲಿ ಒಂದು ದಿನಕ್ಕಿಂತ ಹೆಚ್ಚು ನಾವುಮೊಬೈಲ್ ಫೋನ್ ಸ್ಕ್ರೀನ್ ನೋಡುವುದರಲ್ಲೇ ಕಳೆಯುತ್ತೇವೆ. ಈ ಅವಧಿಯಲ್ಲಿ ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ಸಂಪೂರ್ಣವಾಗಿ ಮರೆತಿರುತ್ತೆವೆ. ಅಂಕಿ ಅಂಶಗಳು ಹೇಳುವ ಇನ್ನೊಂದು ವಿಷಯವೆಂದರೆ ಮೊಬೈಲ್ ಫೋನ್ ಜಾಸ್ತಿ ಬಳಸುವುದರಲ್ಲಿ ಯುವಕರಿಗಿಂತ ಯುವಕಿಯರೇ ಮೇಲುಗೈ.

ನಮಗೆ ತಂತ್ರಜ್ಞಾನದ ಅವಶ್ಯಕತೆ ಇರುವುದು ಸತ್ಯ. ಪ್ರಾಯಶಃ ತಂತ್ರಜ್ಞಾನದಿಂದ ಮನುಷ್ಯನಿಗೆ ಬಹಳಷ್ಟು ಸಹಾಯವಾಗಿದೆ. ಬಹುಶಃ ನಾವು ನಮ್ಮ ಅವಶ್ಯಕತೆಗಳನ್ನು ಸರಿಯಾಗಿ ಅರಿತುಕೊಂಡು ಎಷ್ಟು ಬೇಕೋ ಅಷ್ಟು ಮಾತ್ರ ತಂತ್ರಜ್ಞಾನವನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಬಳಸಬೇಕು. ಇಲ್ಲದಿದ್ದರೆ ಅವುಗಳೇ ನಮ್ಮನ್ನುಆಳುವ ಪರಿಸ್ಥಿತಿ ಬಂದೊದಗಬಹುದು. ಮನುಷ್ಯ ಸಂಘ ಜೀವಿ. ಸಮಾಜದಲ್ಲಿ ಎಲ್ಲರೊಟ್ಟಿಗೂ ಬೆರೆತು ಬಾಳಬೇಕು. ಮನುಷ್ಯನ ಒಡನಾಟಗಳನ್ನು ಹಾಗೂ ಬಾಂಧವ್ಯವನ್ನು ಈ ತಂತ್ರಜ್ಞಾನಗಳು ಮನುಷ್ಯನಿಂದ ಕಸಿದುಕೊಳ್ಳಬಾರದು. ಹಾಗಾಗಿ ನಾವು ಸ್ಮಾರ್ಟ್ ಫೋನ್ ಅಥವಾ ಯಾವುದೇ ತಂತ್ರಜ್ಞಾನವನ್ನು ಎಚ್ಚರಿಕೆಯಿಂದ ಬಳಸಬೇಕು. ಯುವಜನತೆ ಇದನ್ನುಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದಿದ್ದರೆ ಐನ್’ಸ್ಟೈನ್ ವ್ಯಕ್ತಪಡಿಸಿದ ಆತಂಕದ ಪ್ರಕಾರ ಜಗತ್ತು ಬರೀ ಮೂರ್ಖರ ಸಂತೆಯಾಗಿಬಿಡುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Madhyasta

ಹೆಸರು ಮಂಜುನಾಥ್ ಮಧ್ಯಸ್ಥ. ಓದಿದ್ದು ವಿಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ. ಸಾಹಿತ್ಯ ಹಾಗೂ ಅಧ್ಯಾತ್ಮದಲ್ಲಿ ಬಹಳ ಆಸಕ್ತಿ. ಬರೆಯೋದು ನೆಚ್ಚಿನ ಹವ್ಯಾಸ. ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರ ನನ್ನ ನೆಚ್ಚಿನ ವಿಷಯಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!