Featured ಅಂಕಣ

ಕೋಟೆಯೂರನ್ನು ಬೇಟೆಯಾಡಿದವರ ಜನ್ಮಜಯಂತಿ ಸಾಧುವೇ?

“ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು. ಮದಕರಿ ನಾಯಕನೆಂದರೂ ಅಷ್ಟೆ ಇತಿಹಾಸದಲ್ಲಿ ಇದ್ದು ಹೋದ ಒಬ್ಬ ಅರಸನಲ್ಲ, ತಮ್ಮ ಜೀವಂತ ಆಪ್ತನೆಂಟ. ಹಾಗೆಯೇ ಚಿತ್ರದುರ್ಗ – ಮದಕರಿ ನಾಯಕ ಎನ್ನುವುದು ಬೇರೆ ಬೇರೆಯಲ್ಲ, ಒಂದೇ ಎಂಬ ಅವಿನಾಭಾವ; ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ” – ಇದು ತರಾಸು ಅವರು ತಮ್ಮ “ದುರ್ಗಾಸ್ತಮಾನ” ಮಹಾ ಕಾದಂಬರಿಯ ಪ್ರಸ್ತಾವನೆಯಲ್ಲಿ ಹೇಳುವ ಮಾತುಗಳು. 700 ಪುಟಗಳ ಈ ಬೃಹತ್ಕಾದಂಬರಿಯಲ್ಲಿ ತರಾಸು ಅವರು ಮದಕರಿಯನ್ನು ಒಬ್ಬ ಐತಿಹಾಸಿಕ ಪುರುಷ ಎಂಬುದಕ್ಕಿಂತ ತನ್ನ ಆಪ್ತನೆಂಟ, ತನ್ನ ಜೀವದ ಒಂದು ಭಾಗ, ತನ್ನ ಕರುಳ ಸಂಬಂಧಿ ಎಂಬ ನೆಲೆಯಲ್ಲಿಯೇ ಆರ್ದೃವಾಗಿ ಚಿತ್ರಿಸಿಕೊಂಡು ಹೋಗುತ್ತಾರೆ. ಮದಕರಿಯ ವೀರ, ಗಾಂಭೀರ್ಯ, ಶೌರ್ಯ, ತೇಜ, ಪ್ರಬುದ್ಧತೆಗಳನ್ನು ಚಿತ್ರಿಸುವಾಗ ತರಾಸು ಅವರಲ್ಲಿ ಕಲ್ಲೊಂದನ್ನು ಕಡೆದು ಮೂರ್ತೀಕರಿಸುವ ಶಿಲ್ಪಿಯ ತಾದಾತ್ಮ್ಯ ಕಾಣುತ್ತದೆ. ಹಾಗಾಗಿಯೇ ಮಾಸ್ತಿಯವರ ಚಿಕ್ಕವೀರ ರಾಜೇಂದ್ರ ಕೃತಿಯಂತೆ ತರಾಸು ಅವರ ದುರ್ಗಾಸ್ತಮಾನ ಕಾಲ-ದೇಶಗಳನ್ನು ಮೀರಿ ಬಂದು ಚಿತ್ರದುರ್ಗವನ್ನು ನಮ್ಮ ಕಣ್ಣ ಮುಂದೆ ಅನಾವರಣಗೊಳಿಸುತ್ತದೆ. ಕೃತಿಯನ್ನು ಓದಿ ಕೆಳಗಿಡುವ ಹೊತ್ತಿಗೆ ನಮ್ಮೊಳಗೆ ದುರ್ಗವೂ ದುರ್ಗದ ಮದಕರಿಯೂ ಶಾಶ್ವತವಾದ ಜಾಗ ಪಡೆಯುತ್ತಾರೆ.

ಚಿತ್ರನಾಯಕನೆಂಬ ಈ ವಂಶದ ಮೂಲಪುರುಷ ಮಹಾ ಬಲಾಢ್ಯನಂತೆ. ಮದಿಸಿ ಕೆನೆಯುತ್ತಿದ್ದ ಆನೆಯನ್ನು ತಹಬದಿಗೆ ತಂದನೆಂಬ ಕಾರಣಕ್ಕೆ ಆತನಿಗೆ ಜನ ಮದಕರಿ ಎಂಬ ಬಿರುದು ಕೊಟ್ಟರಂತೆ. ಆ ಬಿರುದಿಗೆ ತಕ್ಕಂತೆ ಮದಕರಿ ನಾಯಕರ ವಂಶದಲ್ಲಿ ಬಂದು ಹೋದ ನಾಯಕರೆಲ್ಲ ವೀರಾಗ್ರಣಿಗಳೇ. ಶೌರ್ಯವೇ ಅವರ ಇತಿಹಾಸದ ಸ್ಥಾಯಿಭಾವ. ಈ ವಂಶದಲ್ಲಿ ಬಂದ ಹಿರೇ ಮದಕರಿ ನಾಯಕರ ಮಗ ಕಸ್ತೂರಿ ರಂಗಪ್ಪ ನಾಯಕರು ಮಾಯಕೊಂಡದ ಕಾಳಗದಲ್ಲಿ ಮಡಿದರು. ಸಂತಾನ ಭಾಗ್ಯವಿಲ್ಲದೇ ಇದ್ದದ್ದರಿಂದ ರಂಗಪ್ಪ ನಾಯಕರ ತೀರುವಿಕೆಯೊಂದಿಗೆ ದುರ್ಗದ ಆಡಳಿತ ದೊಡ್ಡದೊಂದು ಕ್ಷೋಭೆಗೆ ಒಳಗಾಯಿತು. ಆಗ ಹಿರೇ ಮದಕರಿಯವರ ಧರ್ಮಪತ್ನಿ ಗಂಡುಗಲಿ ಓಬವ್ವ ನಾಗತಿಯವರು ತನ್ನ ಗಂಡನ ಸೋದರ ಸಂಬಂಧಿಯಾದ ಜಾನಕಲ್ಲಿನ ಭರಮಪ್ಪ ನಾಯಕನಿಗೆ ಒಸಗೆ ಕಳಿಸಿ, ಆತನ ಕಿರಿಯ ಮಗ, ಹನ್ನೆರಡು ವರ್ಷದ ಕುಮಾರ ಚಿಕ್ಕ ಮದಕರಿ ನಾಯಕನನ್ನು ಪಟ್ಟಕ್ಕೆ ಆರಿಸಿದರು. ರಾಜ್ಯಾಡಳಿತವು ಮುಂದಿನ ದಾರಿ ಏನು ಎಂಬ ಗೊಂದಲಕ್ಕೆ ಬಿದ್ದು ಇಕ್ಕಟ್ಟಿಗೆ ಸಿಕ್ಕಾಗೆಲ್ಲ ನಮ್ಮ ರಾಜ್ಯದಲ್ಲಿ ಇಂಥ ಗಟ್ಟಿಗಿತ್ತಿ ಹೆಂಗಸರು ತೆಗೆದುಕೊಂಡ ದಿಟ್ಟ ನಿರ್ಧಾರಗಳದ್ದೇ ಒಂದು ವಿಶಿಷ್ಟ ಇತಿಹಾಸವಿದೆ. ಓಬವ್ವ ನಾಗತಿಯವರ ಆ ದೂರದರ್ಶಿತ್ವ, ಹದಿಹರೆಯದ ಹುಡುಗನನ್ನು ದುರ್ಗದಂಥ ಪ್ರಮುಖ ಪಾಳೇಪಟ್ಟಿಗೆ ಮುಖಂಡನಾಗಿ ಆರಿಸಿ ಪಟ್ಟದಲ್ಲಿ ಕೂರಿಸಿದ ಆತ್ಮಸ್ಥೈರ್ಯ – ಇವೆಲ್ಲವನ್ನು ಯೋಚಿಸಿದರೆ ಮೈ ನವಿರೇಳುತ್ತದೆ.

ಕ್ರಿಸ್ತಶಕ 1754ನೇ ಇಸವಿ ಆಷಾಢ ಶುದ್ಧ ದ್ವಾದಶಿಯಂದು ಕಾಮಗೇತಿ ವಂಶದ ಹೊಸ ಮುಖ್ಯಸ್ಥನಾಗಿ ಚಿಕ್ಕ ಮದಕರಿ ನಾಯಕರು ಪಟ್ಟಕ್ಕೇರಿದರು. ತನ್ನ ಎಳವೆಯಲ್ಲೇ ತಲೆ ಮೇಲೆ ಕೂತ ಈ ರಾಜ್ಯಾಧಿಕಾರವೆಂಬ ಮಣಭಾರದ ತೂಕವನ್ನು ರಾಜಮಾತೆಯ ನಿರ್ದೇಶನ, ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸುವುದನ್ನೂ ಕಲಿತರು. ಕ್ಷಾತ್ರವೇ ಅವರ ಉಸಿರಾಯಿತು. ದುರ್ಗದ ಒಂದೊಂದು ಕಲ್ಲನ್ನೂ ಮೀಟಿ ಮಾತಾಡಿಸಬಲ್ಲಷ್ಟು ಅವರು ತನ್ನ ಪಾಳೇಪಟ್ಟನ್ನು ಅಂತರ್ಗತವಾಗಿಸಿಕೊಂಡರು. ಊರನ್ನೂ ಊರ ಜನರನ್ನೂ ಪ್ರೀತಿಸಿದರು. ತನ್ನ ಪೂರ್ವಜರ ಕಾಲದಿಂದಲೂ ಕಟ್ಟುವಿಕೆಯ ವಿವಿಧ ಹಂತಗಳನ್ನು ಹಾದು ಬಂದಿದ್ದ ಏಳು ಸುತ್ತಿನ ದುರ್ಗದ ಕೋಟೆಯನ್ನು ಮತ್ತಷ್ಟು ಬಲಪಡಿಸಿದರು. ನಾಯಕರ ದಿನಚರಿಯನ್ನು ಹೇಳುವ ಒಂದು ಲಾವಣಿ ಹಾಡಿನಲ್ಲಿ ಬರುವ ವಿವರಗಳು ಚೇತೋಹಾರಿಯಾಗಿವೆ.

ಎದ್ದಾನು ಮದಕೇರಿ ಎಳೆಮೀಸೆ ತಿರುವೂತ

ಕೈಕಾಲು ಮುಖವ ತೊಳೆದಾನೋ, ಮದಕೇರಿ

ನಿಲುವು ಕನ್ನಡಿಯ ಹಿಡಿದಾನೊ ಮದಕೇರಿ

ಇಟ್ಟಾನೋ ಹಿರಿಯ ನಾಮಗಳ  – ಇದು ಅಲ್ಲಿನ ಒಂದು ಭಾಗ.

ದುರ್ಗ ಸದ್ಯಕ್ಕೆ ಹೆಂಗಸಿನ ಕೈವಶವಾಗಿದೆ ಮತ್ತು ಅಲ್ಲಿ ಮೀಸೆ ಚಿಗುರದ ಎಳೆ ಕುಮಾರನೊಬ್ಬ ರಾಜ್ಯಭಾರ ಹೊತ್ತಿದ್ದಾನೆಂಬ ವಿಷಯ ತಿಳಿದ ಅಕ್ಕಪಕ್ಕದ ಶತ್ರುಗಳು ಚುರುಕಾದರು. ಹರಪನಹಳ್ಳಿ, ಸವಣೂರು, ತರೀಕೆರೆ, ಕನಕಗಿರಿ, ಜರಿಮಲೆ ಮುಂತಾದ ಪಾಳೇಪಟ್ಟಿನ ನಾಯಕರು ಚಿತ್ರದುರ್ಗದ ಮೇಲೆ ಉರಿ ಕಾರತೊಡಗಿದರು. ನವಾಬ ಹೈದರಾಲಿಯ ವಶಕ್ಕೆ ಒಳಪಡದ ಏಕೈಕ ಪಾಳೇಪಟ್ಟು ದುರ್ಗ ಎಂಬುದೇ ಆ ದ್ವೇಷಕ್ಕೆ ಕಾರಣವಾಗಿತ್ತು. ರಾಯದುರ್ಗದ ಕೃಷ್ಣಪ್ಪ ನಾಯಕನೆಂಬ ಪಾಳೇಗಾರ ಸವಣೂರಿನ ನವಾಬ ಹಕೀಂ ಖಾನ್, ಹರಪನಹಳ್ಳಿ ಮತ್ತು ಬಿದನೂರು ಸಂಸ್ಥಾನಗಳ ದೊರೆಗಳ ಕಿವಿ ಕಚ್ಚಿ ಒಟ್ಟಾಗಿ ದುರ್ಗದ ಮೇಲೆ ಆಕ್ರಮಣ ಮಾಡುವಂತೆ ಹುರಿದುಂಬಿಸಿದ. ಆದರೆ ಈ ದಾಳಿಯ ಸುದ್ದಿಯನ್ನು ಮುಂದಾಗಿ ಪಡೆದ ಮದಕರಿ ನಾಯಕರು ತನ್ನ ಸೈನ್ಯವನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿ, ಸಮಯ ಸಂದರ್ಭ ನೋಡಿಕೊಂಡು ಶತ್ರುಗಳ ಮೇಲೆರಗಿ ಅವರನ್ನು ದಿಕ್ಕುಗೆಡಿಸಿ ಓಡಿಸಿದರು. ಈ ಮೊದಲ ದಿಗ್ವಿಜಯದಿಂದಾಗಿ ಮದಕರಿ ನಾಯಕರಿಗೆ ತನ್ನ ಮೇಲೂ, ದುರ್ಗದ ಜನತೆಗೆ ಮದಕರಿಯವರ ಮೇಲೂ ವಿಶ್ವಾಸ ಇಮ್ಮಡಿಯಾದವು.

ಅಲ್ಲಿಂದ ಮುಂದೆ ಮದಕರಿ ನಾಯಕರನ್ನೂ ದುರ್ಗವನ್ನೂ ಕಾಡಿದ ಏಕೈಕ ದೊಡ್ಡ ಶತ್ರು ಎಂದರೆ ಹೈದರಾಲಿ. ಸಣ್ಣ ಸೇನಾ ತುಕಡಿಯೊಂದರ ನಾಯಕನಾಗಿ ತನ್ನ ರಾಜಕಾರಣದ ಬದುಕನ್ನು ಪ್ರಾರಂಭಿಸಿದ ಹೈದರಾಲಿ, ಕೊನೆಗೆ ಮೈಸೂರು ಅರಸರನ್ನೇ ಬದಿಗಿಟ್ಟು ಇಡೀ ರಾಜ್ಯಾಧಿಕಾರ ತನ್ನ ಅಂಗೈಯೊಳಗಿರುವಂತೆ ನೋಡಿಕೊಂಡದ್ದು ಕರ್ನಾಟಕದ ಮಟ್ಟಿಗೊಂದು ದುರಂತ ಕತೆ. ಕನ್ನಡನಾಡಿನ ಹೃದಯ ಭಾಗದಲ್ಲಿದ್ದ ಚಿತ್ರದುರ್ಗವನ್ನು ವಶ ಮಾಡಿಕೊಂಡರೆ ಕೃಷ್ಣಾ ನದಿಯವರೆಗೂ ತನ್ನ ರಾಜ್ಯವನ್ನು ವಿಸ್ತರಿಸಿಕೊಳ್ಳಬಹುದೆಂಬ ಹಂಚಿಕೆ ಹಾಕಿದ ಹೈದರಾಲಿ ಮದಕರಿ ನಾಯಕರನ್ನು ಇನ್ನಿಲ್ಲದಂತೆ ಕಾಡಿದ. ಮೊದಲ ಸಲ ಆತ ದಂಡೆತ್ತಿ ಬಂದಾಗ ದುರ್ಗದ ಕೋಟೆಯ ಹೊರಗಿದ್ದ ಕೆಲವು ಸಣ್ಣಪುಟ್ಟ ಊರುಗಳನ್ನು ಸೂರೆಗೈದ. ಮದಕರಿ ನಾಯಕರ ಬಲವಿದ್ದದ್ದು ದುರ್ಗದ ಕೋಟೆಯೊಳಗೇ ಹೊರತು ಹೊರಗಿನ ಪ್ರದೇಶಗಳಲ್ಲಲ್ಲ. ಹಾಗಾಗಿ, ಹೈದರಾಲಿಯ ದೊಡ್ಡ ಸೈನ್ಯವನ್ನು ಎದುರು ಹಾಕಿಕೊಳ್ಳಲಾಗದೆ ಮದಕರಿ ನಾಯಕರು 2 ಲಕ್ಷ ವರಹಗಳ ಪೊಗದಿ ಕೊಡುವುದಾಗಿ ಹೇಳಿ ಬೀಸುದೊಣ್ಣೆಯಿಂದ ತಪ್ಪಿಸಿಕೊಂಡರು. ಮುಂದೆ ಇಂತಹ ಬಲಾಢ್ಯ ಶತ್ರುವನ್ನು ಎದುರು ಹಾಕಿಕೊಳ್ಳುವ ಬದಲು ಸಂಧಿ ಮಾಡಿಕೊಂಡು ಸ್ನೇಹದಿಂದಿರುವುದು ಕ್ಷೇಮವೆಂದು ಬಗೆದ ನಾಯಕರು ಹೈದರಾಲಿ ಕೇಳಿದಾಗೆಲ್ಲ ತನ್ನ ಕಡೆಯಿಂದ ಸಹಾಯ ಒದಗಿಸುತ್ತಾ ಬಂದರು. ಬಿದನೂರಿನ ಮೇಲೆ ಹೈದರ್ ದಾಳಿ ಮಾಡಿದಾಗ ಮದಕರಿಯವರ ಸಹಾಯವೂ ಆತನಿಗಿತ್ತು. ಕ್ರಿಸ್ತಶಕ 1764ರಲ್ಲಿ, ಮರಾಠ ರಾಜ್ಯದ ಪೇಶ್ವೆಗಳು ಮೈಸೂರಿನ ಮೇಲೆ ತಮ್ಮ ಮೂರು ಲಕ್ಷ ಯೋಧರ ಸೇನೆ ಕಟ್ಟಿಕೊಂಡು ಆಕ್ರಮಣ ಮಾಡಿದಾಗ, ಹೈದರಾಲಿ ಜೀವ ಉಳಿಸಿಕೊಳ್ಳಲು ಮಾರುವೇಷದಲ್ಲಿ ಕಾಡಿಗೆ ಓಡಿ ಹೋಗಬೇಕಾಯಿತು. ಆ ಸಂದರ್ಭದಲ್ಲಿ ಹೈದರಾಲಿಯ ಪರವಾಗಿ ನಿಂತು ಹೋರಾಡಿ ಪೇಶ್ವೆಗಳು ಹಿಮ್ಮೆಟ್ಟುವಂತೆ ಮಾಡಿದವರು 22ರ ಹರೆಯದ ದುರ್ಗದ ನಾಯಕರೇ. ಗುತ್ತಿ ಎಂಬ ಕೋಟೆಗೆ ಹೈದರಾಲಿಯು ರಾಯದುರ್ಗ, ಹರಪನಹಳ್ಳಿ ಸಂಸ್ಥಾನಗಳ ಪಾಳೇಗಾರರ ದಂಡು ಕಟ್ಟಿಕೊಂಡು ಮುತ್ತಿಗೆ ಹಾಕಿ ಮೂರು ತಿಂಗಳು ತಿಣುಕಾಡಿದರೂ ಕೋಟೆಯನ್ನು ವಶಪಡಿಸಿಕೊಳ್ಳಲು ಆಗಲಿಲ್ಲ. ಕೊನೆಗೆ ಮದಕರಿ ನಾಯಕರಿಗೆ ದಮ್ಮಯ್ಯ ಹಾಕಿದಾಗ ಅವರು ಅತ್ಯಲ್ಪ ಸಮಯದಲ್ಲಿ ಗುತ್ತಿಯ ಮುರಾರಿರಾಯನನ್ನು ಸೋಲಿಸಿ ಕೋಟೆಯನ್ನು ಗೆದ್ದು ಹೈದರಾಲಿಗೆ ಒಪ್ಪಿಸಿದರು. ನಿಡುಗಲ್ಲ ಕೋಟೆಗೆ ಹೈದರಾಲಿ ಮುತ್ತಿಗೆ ಹಾಕ ಹೋದಾಗಲೂ ಅಲ್ಲಿನ ಸೈನ್ಯ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕಿತ್ತು. ಕೋಟೆಯ ಬುರುಜುಗಳಿಂದ ಎಣ್ಣೆ, ಅಂಬಲಿ ಸುರುವಿದ್ದರಿಂದ ಗೋಡೆ ಹತ್ತಲಾಗದೆ ಹೈದರನ ಸೈನಿಕರು ಪರದಾಡುವಂತಾಗಿತ್ತು. ಕೊನೆಗೆ ದುರ್ಗದ ನಾಯಕರಿಗೆ ಹೇಳಿ ಬೇಡಿಕೊಂಡಾಗ, ಅವರು ತನ್ನ ತಂತ್ರ-ಚಾಣಾಕ್ಷತೆಗಳಿಂದ ಒಂದೇ ದಿನದಲ್ಲಿ ಕೋಟೆಯನ್ನು ವಶಪಡಿಸಿಕೊಂಡು ಹೈದರನಿಗೆ ಒಪ್ಪಿಸಿದರು. ದುರ್ಗದ ವೀರಕತೆಗಳಲ್ಲಿ ಹೀಗೆ ಬಂದು ಹೋಗುವವು ಲೆಕ್ಕವಿಲ್ಲದಷ್ಟು.

ಆದರೆ ಮದಕರಿ ನಾಯಕರಿಂದ ಇಷ್ಟೆಲ್ಲ ಸಹಾಯ ಪಡೆದರೂ ಹೈದರಾಲಿ ತನ್ನ ವಿಷಬುದ್ಧಿಯನ್ನು ಮಾತ್ರ ಬಿಡಲಿಲ್ಲ. ಮದಕರಿಗೆ ಮರಾಠರ ಜೊತೆ ಸ್ನೇಹ ಸಂಬಂಧವಿದೆ ಎಂದು ಗೂಢಚಾರರ ಮೂಲಕ ಕೇಳಿ ತಿಳಿದ ಹೈದರಾಲಿ ಹೇಗಾದರೂ ಮಾಡಿ ಮದಕರಿಯವರನ್ನು ಮುಗಿಸಬೇಕೆಂಬ ಹಂಚಿಕೆ ಹಾಕಿದ! ಸಿರಾ ತಾಲೂಕಿಗೆ ಬೇಟೆಗೆ ಹೋಗೋಣ ಎಂದು ಕರೆದ. ಅಪಾಯದ ಸೂಚನೆಯರಿತ ನಾಯಕರು ಅನಾರೋಗ್ಯದ ಕಾರಣ ಮುಂದೊಡ್ಡಿ ತಪ್ಪಿಸಿಕೊಂಡರು. ರತ್ನಗಿರಿಯಲ್ಲಿ ಭೇಟಿಯಾಗೋಣ ಎಂದು ಮತ್ತೆ ಬಲೆ ಬೀಸಿದ ತುರುಕ ಸುಲ್ತಾನ. ಆಗಲೂ ನೆಪ ಹೇಳಿ ತಪ್ಪಿಸಿಕೊಂಡದ್ದಾಯಿತು. ತನ್ನ ಮಾತು ನಡೆಯುತ್ತಿಲ್ಲವೆಂಬುದನ್ನು ತಿಳಿದ ಹೈದರಾಲಿ ಮತ್ತೋಡು ಹಾಲಪ್ಪ ನಾಯಕನ ಸಹಾಯ ಪಡೆದು ಬೂದಿಹಾಳದಲ್ಲಿ ನಾಯಕರ ದಂಡಿನ ಮೇಲೆ ಮುಗಿಬಿದ್ದ. ಖಡಕ್ ಪ್ರತ್ಯುತ್ತರ ಕೊಟ್ಟ ದುರ್ಗದ ಸೇನೆ, ಹೈದರಾಲಿಯ ಇಬ್ಬರು ಭಾವ ಮೈದುನರಾದ ಮಖದುಂ ಸಾಹೇಬ್ ಮತ್ತು ಮೊಯಿದೀನ್ ಸಾಹೇಬ್‍ರನ್ನು ಸೆರೆ ಹಿಡಿದು ಜೈಲಿಗೆ ತಳ್ಳಿತು. ಇದರಿಂದ ಕಂಗಾಲಾದ ಹೈದರಾಲಿ ಮದಕರಿ ನಾಯಕರಿಗೆ ಸ್ನೇಹಪೂರ್ಣ ಪತ್ರ ಬರೆದು ತಾನೇ ಕಳಿಸಿದ್ದ ಹಾಲಪ್ಪ ನಾಯಕನ ಮೇಲೆ ಚಾಡಿ ಹೇಳಿ, ಅವನು ಕೊಟ್ಟ ತಪ್ಪು ಮಾಹಿತಿಗಳಿಂದ ತನಗೆ ದುರ್ಗದ ದೊರೆಯೊಡನೆ ಮನಸ್ತಾಪ ಹುಟ್ಟುವಂತಾಯಿತೆಂದು ಹೇಳಿ, ತನ್ನ ಮೈದುನರನ್ನು ಬಿಟ್ಟು ಕೊಡುವಂತೆ ಕೇಳಿಕೊಂಡ. ಕರಗಿದ ನಾಯಕರು ಅವರಿಬ್ಬರನ್ನು ಬಿಟ್ಟು ಕಳಿಸಿದ್ದೇ ತಡ, ಹೈದರಾಲಿಯ ಸೇನೆ ದುರ್ಗಕ್ಕೆ ಮುತ್ತಿಗೆ ಹಾಕಿತು!

ಮದಕರಿ ನಾಯಕರನ್ನು ಬಿಟ್ಟೂ ಬಿಡದೆ ಗೋಳಾಡಿಸಿದ ಹೈದರಾಲಿ “ನಮಗೆ ಪರಿಹಾರವಾಗಿ ಆರು ಲಕ್ಷ ವರಹಗಳನ್ನು ಕೊಡಿ. ದುರ್ಗ ಬಿಟ್ಟು ಹೋಗುತ್ತೇವೆ. ಇಲ್ಲವಾದರೆ ಎರಡೇ ದಿನದಲ್ಲಿ ಕೋಟೆಯನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ” ಎಂಬ ಒಸಗೆ ಕಳಿಸಿದನಂತೆ. “ಎರಡು ದಿವಸದಲ್ಲಿ ವಶ ಮಾಡಿಕೊಳ್ಳಲು ಕೋಟೆಯನ್ನೇನೂ ಮೇಣದಿಂದ ಮಾಡಿಲ್ಲ. ತಾಕತ್ತಿದ್ದರೆ ವಶ ಮಾಡಿಕೊಳ್ಳಿ ನೋಡೋಣ” ಎಂದು ವೀರ ಮದಕರಿ ನಾಯಕರು ಮಾರೋಲೆ ಬರೆದರಂತೆ. ದುರ್ಗದ ದುರ್ಗಮ ಕೋಟೆಯನ್ನು ತನ್ನ ಕೈಗೆ ತೆಗೆದುಕೊಳ್ಳಲು ಹೈದರಾಲಿ ಹೂಡದ ತಂತ್ರವಿಲ್ಲ, ಮಾಡದ ಯೋಜನೆಗಳಿಲ್ಲ. ಕೋಟೆಯ ಸುತ್ತಣ ಇದ್ದ ಗಿರಿ ಕಂದರಗಳನ್ನೂ ಹಳ್ಳಿ ಹಾಡಿಗಳನ್ನೂ ತನ್ನ ವಶಕ್ಕೆ ತೆಗೆದುಕೊಂಡ. ದುರ್ಗದ ಸುತ್ತಮುತ್ತಲಿನ ಲಾಲ್ ಬತೇರಿ, ರಣಬತೇರಿ, ತುಪ್ಪದ ಕೊಳದ ಬತೇರಿ, ಕಹಳೆ ಬತೇರಿ, ಹಿಡಿಂಬನ ಬತೇರಿ, ಝಂಡಾ ಬತೇರಿ, ಬಸವನ ಬತೇರಿ ಎಂಬ ಏಳು ಬತೇರಿ (ಶಿಖರ)ಗಳ ಮೇಲೆ ಪಾರಮ್ಯ ಗಿಟ್ಟಿಸಲು ನೋಡಿದ. ದುರ್ಗದ ಕೋಟೆಯ ಸುತ್ತಲೂ ಆಳವಾದ ಅಗಳುಗಳಿದ್ದವು. ನೀರಿನ ಕಾಲುವೆಗಳಿದ್ದವು. ಅವನ್ನು ಮುಚ್ಚಿಸಿ ಬಿಡಲು ಪ್ರಯತ್ನಪಟ್ಟ. ಕೋಟೆಯೊಳಗೆ ಹೋಗುತ್ತಿದ್ದ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಹಾಳುಗೆಡವಿದರೆ ಒಳಗಿರುವವರು ಹಾಹಾಕಾರ ಎಬ್ಬಿಸಬಹುದೆಂಬ ಲೆಕ್ಕಾಚಾರ ಹಾಕಿದ. ಕೋಟೆಯೊಳಗೆ ನುಸುಳಲು ಅನುವಾಗುವ ಸುರಂಗ ಮಾರ್ಗವನ್ನು ಪತ್ತೆ ಮಾಡಿ ಆ ಮೂಲಕ ತನ್ನ ಸೈನಿಕರನ್ನು ಕಳಿಸಿದ. ಆದರೆ ಆ ಕಿಂಡಿಯ ಮೂಲಕ ಹೊರಬರುತ್ತಿದ್ದ ಸೈನಿಕರನ್ನು ನೋಡಿದ ಕಾವಲುಗಾರನೊಬ್ಬನ ಹೆಂಡತಿಯಾದ ಓಬವ್ವ ಎಂಬಾಕೆ ಒನಕೆ ತಂದು ಆ ಸೈನಿಕರನ್ನು ಒಬ್ಬೊಬ್ಬರನ್ನಾಗಿ ಹೊಡೆದು ಸಾಯಿಸಿ ದುರ್ಗದ ರಕ್ಷಣೆಗೆ ತನ್ನ ಪಾಲಿನ ಹಿರಿಕಾಣಿಕೆಯನ್ನೂ ಕೊಟ್ಟಳು.

ತನ್ನ ಯಾವ ಪ್ರಯತ್ನಗಳೂ ಯಶಗೂಡದೆ ಇದ್ದಾಗ ಬಾಹ್ಯ ಒತ್ತಡ ತಂದು ಜನರನ್ನು ಗಲಿಬಿಲಿಗೊಳಿಸುವ ಕೆಲಸಕ್ಕೆ ಹೈದರಾಲಿ ಕೈ ಹಾಕಿದ. ಹತ್ತಾರು ಫಿರಂಗಿಗಳನ್ನು ಒಟ್ಟಾಗಿ ಇಟ್ಟು ಕೋಟೆಯತ್ತ ಗುಂಡು ಸಿಡಿಸಿ ನೋಡಿದ. ಆದರೆ ಅವೆಲ್ಲ ಸಿಡಿಗುಂಡುಗಳು ಕೋಟೆಯ ಕಲ್ಲುಗಳ ಮೇಲೆ ಉಳಿಯ ಸಣ್ಣ ಹೊಡೆತದಷ್ಟು ಗಾಯ ಮಾಡಿದವೇ ಹೊರತು ಬೇರೆ ಪರಿಣಾಮವೇನೂ ಆಗಲಿಲ್ಲ. ಕೊಟ್ಟಕೊನೆಯ ಪ್ರಯತ್ನವಾಗಿ ಹೈದರಾಲಿ, ಮದಕರಿ ನಾಯಕರ ಸೈನ್ಯದಲ್ಲಿದ್ದ ಮೂರು ಸಾವಿರ ಮುಸ್ಲಿಮ್ ಸೈನಿಕರಿಗೆ ಬಲೆ ಬೀಸಿದ. ಮತದ ಮಾತನ್ನು ಮುಂದೆ ಮಾಡಿದ. ಅವರಿಗೆಲ್ಲ ಬೇಕು ಬೇಕಾದಲ್ಲಿ ಮಸೀದಿ ಕಟ್ಟಿಸಿ ಕೊಡುವ ಆಮಿಷ ಒಡ್ಡಿದ. ತಮ್ಮ ನಿಷ್ಠೆಯೇನಿದ್ದರೂ ಅನ್ನ ಕೊಟ್ಟ ನೆಲಕ್ಕಿಂತ ಅಸ್ಮಿತೆ ಕೊಟ್ಟ ಮತಕ್ಕೇ ಎಂದು ಭಾವಿಸಿದ ಮತಾಂಧ ಸೈನಿಕರು ಕೊನೆಗೂ ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವುದಕ್ಕೆ ಸಿದ್ಧರಾಗಿ ಬಿಟ್ಟರು. ಎಚ್.ಎಸ್. ಪಾಂಡುರಂಗ ಜೋಯಿಸರು ಬರೆದ ಒಂದು ಕೃತಿಯಲ್ಲಿ ಬರುವ ಸಾಲುಗಳು ಆ ಕಾಲದ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ: “ಹೈದರನ ಕಡೆಯಿಂದ ದಿನದಿನವೂ ಕದನ ಪ್ರಬಲವಾಗುತ್ತಾ ಬಂದಿತು. ಮುಖ್ಯದ್ವಾರಗಳ ಬಳಿ ಲಗ್ಗೆ ಹತ್ತುವುದು ಹೆಚ್ಚಾಯಿತು. ಒಂದು ಸಲ ಮದಕರಿಯ ಕಡೆ ಸಾವಿರಾರು ಯೋಧರು ಮಡಿದರು. ಮತ್ತೊಂದು ಸಲ ಎಂದೂ ಬೆನ್ನು ಕೊಡದ ದುರ್ಗದ ಸೈನಿಕರು ಓಡಿ ಹೋದರು. ಇದೇ ಸಮಯವೆಂದು ರಂಗಯ್ಯನ ಬಾಗಿಲ ಸುರಂಗ ಮಾರ್ಗದ ಮೂಲಕ ಶತ್ರು ಸೈನಿಕರು ನುಗ್ಗಿದರು. ಪಿತೂರಿಗೆ ಒಳಗಾದ ಮದಕರಿ ಸೈನಿಕರು ಯುದ್ಧ ಮಾಡದೆ ನಿಂತರು. ಮದ್ದು ಸಂಗ್ರಹಕ್ಕೆ ಎಣ್ಣೆ ಹಾಕಿದ್ದುದು ಕಂಡು ಬಂದಿತು. ನಿಷ್ಠರಾದ ಪಡೆಗಳು ಮದ್ದು ಹಾರದೆ ಶತ್ರು ವಶರಾದರು. ಸಂತೇಬಾಗಿಲ ಬಳಿ ಸೈನ್ಯವು ನಾಶವಾಗಿ ಎದುರಿಸಲು ಯಾರೂ ಇಲ್ಲವಾಯಿತು. ವೈರಿಗಳು ಅಪಾರ ಸಂಖ್ಯೆಯಲ್ಲಿ ಒಳನುಗ್ಗಿದರು. ಬಸವನ ಬುರುಜಿನ ಮದ್ದು ಸಿಡಿಯದೆ ವೈರಿಗಳಿಗೆ ಸುಲಭವಾಗಿ ವಶವಾಯಿತು. ಜರಮಲೆಯವರು ಕಳ್ಳದಾರಿ ತೋರಿಸಿದರು. ಹೊರಕೋಟೆಯ ಒಳಭಾಗವೆಲ್ಲಾ ಶತ್ರುಮಯವಾಯಿತು. ಹೈದರಾಲಿಯು ಉತ್ಸವಾಂಬ ದೇವಸ್ಥಾನದಲ್ಲಿ ಬಿಡಾರ ಮಾಡಿದನು”. ಈ ಸಾಲುಗಳು ಮದಕರಿ ನಾಯಕರನ್ನು ಅವರ ಸೈನ್ಯದೊಳಗಿನ ವಂಚಕರು ಹೇಗೆ ರಾಜದ್ರೋಹ ಮೆರೆದು ಸದೆಬಡಿದರು ಎಂಬುದನ್ನು ಹೇಳುವ ಜತೆಗೇ ಏಳು ಸುತ್ತಿನ ಕೋಟೆಯನ್ನು ಬಗ್ಗುಬಡಿಯಲು ವೈರಿಗಳು ಏನೆಲ್ಲ ಕಸರತ್ತುಗಳನ್ನು ಮಾಡಬೇಕಾಯಿತು ಎಂಬುದನ್ನೂ ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ. ದುರ್ಗದ ಕೋಟೆಯೆಂಬುದು ಮಹಾವೃಕ್ಷ; ಕೆಡುವುದಿದ್ದರೆ ಒಳಗಿನ ಒರಲೆಗಳಿಂದಲೇ ಹೊರತು ಹೊರಗಿನ ಕೊಡಲಿಯಿಂದಲ್ಲ ಎಂಬ ಮಾತು ಜನಮಾನಸದಲ್ಲಿತ್ತು. ಅದು ಹೀಗೆ ನಿಜವಾಯಿತು.

ಇಷ್ಟೆಲ್ಲ ಆದ ಮೇಲೆ ರಾಜ್ಯ ಉಳಿದೀತೇ? ದುರ್ಗ ಹೈದರಾಲಿಯ ವಶವಾಯಿತು. ಮದಕರಿ ನಾಯಕರ ಜೊತೆ ಕೊನೆಗೂ ಉಳಿದವರು ಅವರ ನಿಷ್ಠಾವಂತ ಬೇಡ ಸಮುದಾಯದ ಸೈನಿಕರು ಮಾತ್ರ. ಮದಕರಿಯವರನ್ನೂ ಅವರ ಅಷ್ಟೂ ಜನ ಸೈನಿಕರನ್ನೂ ತುರುಕಸೇನೆ ಕೊನೆಗೆ ಯುದ್ಧ ಕೈದಿಗಳಾಗಿ ಹಿಡಿಯಿತು. ಹೈದರಾಲಿಯು ಮದಕರಿ ನಾಯಕರನ್ನು ಶ್ರೀರಂಗಪಟ್ಟಣದ ಸೆರೆಯಲ್ಲಿಟ್ಟ, ಅಲ್ಲೇ ಅವರು ಕೊನೆಯುಸಿರೆಳೆದರು ಎಂದು ಚರಿತ್ರೆ ಹೇಳುತ್ತದೆ. ತರಾಸು ಅವರು ತನ್ನ ಕಾದಂಬರಿಯ ನಾಯಕನಿಗೆ ರಣರಂಗದಲ್ಲೇ ವೀರಮರಣವನ್ನು ಕೊಡಿಸಿ ಚರಿತ್ರೆಗೆ ಕಾವ್ಯಾತ್ಮಕ ಸ್ಪರ್ಶ ನೀಡಿದ್ದಾರೆ. ತನ್ನ ಕೈ ಕಾಲು ಎದೆ ಹೊಟ್ಟೆಗಳಿಗೆ ಮಾರಣಾಂತಿಕವಾದ ಏಟುಗಳು ಬಿದ್ದರೂ ಮದಕರಿ ನಾಯಕರು ಕಣ್ಣೆದುರಿದ್ದ ಹೈದರಾಲಿಯ ಧ್ವಜವನ್ನು ಹೊಡೆದುರುಳಿಸುತ್ತಾರಂತೆ. “ತಾಯ ತೊಡೆಯ ಮೇಲೆ ಮಲಗಿದಂತೆ ದುರ್ಗದ ನೆಲದ ಮೇಲೊರಗಿತ್ತು ಮದಕರಿ ನಾಯಕನ ದೇಹ. ಹತ್ತಾರು ಕಡೆಯಿಂದ ರಕ್ತ ಪುಟಿದು ಚಿಮ್ಮುತ್ತಿರಲು ಕೆಳಗೆ ಬಿದ್ದ ಮದಕರಿ ನಾಯಕ ತನ್ನ ರಕ್ತಸಿಕ್ತ ತುಟಿಗಳಿಂದ, “ಅವ್ವಾ” ಎಂದು ಮುತ್ತಿಟ್ಟ, ದುರ್ಗದ ಭೂಮಿಯನ್ನು. ಮತ್ತವನ ದೇಹ ಅಲುಗಾಡಲಿಲ್ಲ. ರಕ್ತ ನೆಲವನ್ನು ತೋಯಿಸುತ್ತಿತ್ತು. ನನ್ನ ರಕ್ತದ ಕೊನೆಯ ಹನಿಯೂ ನಿನ್ನ ಚರಣವನ್ನು ತೊಳೆಯಲು ಮೀಸಲು, ಎಂಬಂತೆ. ದುರ್ಗದಲ್ಲೀಗ ಮಸಣ ಮೌನ. ಬೆಳಕನ್ನು ಕಬಳಿಸುತ್ತಿರುವ ಕತ್ತಲು, ಕತ್ತಲಿನೊಂದಿಗೆ ದಟ್ಟವಾಗಿ ಹೆಣೆದ ಮೌನವನ್ನು ಕಣ್ಣೀರಾಗಿ ಹಿಂಡಿ ಮಾತುಗಳನ್ನು ಹನಿಹನಿಯಾಗಿ ಕರೆದಂತೆ ಆ ರಣ ಬಯಲಿನಲ್ಲೆಲ್ಲೋ ಪರಶುರಾಮನಾಯಕನ ಧ್ವನಿ, “ಅಣ್ಣಾ ಅಣ್ಣಾ ಮದಕೇರಣ್ಣಾ..” ಎಂದು ಕೂಗಿಕೊಂಡು ಪ್ರೇತದಂತೆ ಅಲೆಯುತ್ತಿತ್ತು. ದುರ್ಗದ ಹೃದಯವೇ ಹಂಬಲಿಸಿ ಕರೆದಂತೆ. ಆ ಕೂಗನ್ನೂ ನುಂಗಿ ದುರ್ಗವನ್ನು ಕತ್ತಲಾವರಿಸಿತು. ಕತ್ತಲಾಯಿತು. ಮತ್ತೆ ಹಗಲಾಗಲಿಲ್ಲ” – ಇದು ತರಾಸು ಕಟ್ಟಿಕೊಡುವ ಚಿತ್ರಣ. ಮದಕರಿ ಎಂಬ ಮಹಾ ಸಂಕೀರ್ಣ ವ್ಯಕ್ತಿತ್ವದ ಅಂತ್ಯವನ್ನು ಬಹುಶಃ ಇದಕ್ಕಿಂತ ಭಾವಪೂರ್ಣವಾಗಿ ಚಿತ್ರಿಸಲು ಸಾಧ್ಯವಿಲ್ಲವೇನೋ ಅನ್ನಿಸುವಂತಹ ವಿವರಗಳು ಇವು.

ಮದಕರಿ ನಾಯಕರು ಬದುಕಿದ್ದು ಕೇವಲ 37 ವರ್ಷಗಳು ಮಾತ್ರ. ಅದರಲ್ಲಿ 25 ವರ್ಷಗಳ ಕಾಲ ಅವರು ದುರ್ಗದ ದೊರೆಯಾಗಿದ್ದರು. ಹದಿನಾರರ ಹರೆಯದಲ್ಲೇ ತನ್ನ ಮೊದಲ ಯುದ್ಧವನ್ನು ರಣರಂಗದಲ್ಲಿ ನೋಡಿದ ಜೀವ ಅದು. ಹಿರೇ ಮದಕರಿ ನಾಯಕರು 1721ರಿಂದ 1748ರವರೆಗೆ ಇಪ್ಪತ್ತೇಳು ವರ್ಷ ಪಾಳೇಪಟ್ಟು ನೋಡಿಕೊಂಡಿದ್ದರೆ ಸರಿಸುಮಾರು ಅಷ್ಟೇ ಅವಧಿಯನ್ನು ಚಿಕ್ಕ ಮದಕರಿ ನಾಯಕರೂ ಆಳಿ ತೋರಿಸಿದರು ಎನ್ನಬಹುದು. ಹೈದರಾಲಿ ಇವರ ಜೊತೆ ಮುಖ್ಯವಾಗಿ ನಾಲ್ಕು ಬಾರಿ (1762, 1774, 1777 ಮತ್ತು 1779) ಯುದ್ಧ ಮಾಡಿದ. ಮೊದಲ ಮೂರು ಕದನಗಳಲ್ಲಿ ಹೀನಾಯವಾಗಿ ಸೋತು ಗಡ್ಡಕ್ಕೆ ಮಣ್ಣು ಮೆತ್ತಿಕೊಂಡ ರೋಷಾಗ್ನಿ ಅವನೊಳಗೆ ಬೇಯುತ್ತಿದ್ದದ್ದು ಸುಳ್ಳಲ್ಲ. ಆ ಎಲ್ಲ ಕೋಪವನ್ನು ಆತ ತನ್ನ ನಾಲ್ಕನೇ ಸಮರದಲ್ಲಿ ಮದಕರಿಯವರ ಮೇಲೆ ತೋರಿಸಿಕೊಂಡ. ಸೆರೆಯಲ್ಲಿದ್ದಾಗಲೂ ಮದಕರಿಯವರು ಹೈದರಾಲಿಗೆ ತಲೆ ಬಾಗದೆ, “ಸಿಂಹ ಎಂದೆಂದೂ ಸಿಂಹವೇ. ಯಾವ ಕಾರಣಕ್ಕೂ ನಾನು ಇತರರನ್ನು ಪ್ರಭುಗಳೆಂದು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿ, ಸೊಂಟದಲ್ಲಿ ಅಡಗಿಸಿಟ್ಟುಕೊಂಡಿದ್ದ ಕಠಾರಿಯನ್ನು ತೆಗೆದು ತನ್ನ ಶಿರಚ್ಛೇದ ಮಾಡಿಕೊಂಡರಂತೆ. ಮದಕರಿ ನಾಯಕರು ರಣರಂಗದಲ್ಲಿ ಮಡಿದರೋ ತನ್ನ ಖಡ್ಗವನ್ನು ಗಾಳಿಯಲ್ಲಿ ಹಾರಿಸಿ ಅದಕ್ಕೆದೆಯೊಡ್ಡಿ ತೀರಿಕೊಂಡರೋ ವಿಷಪ್ರಾಶನದಿಂದ ದೇಹಾಂತ್ಯವಾಯಿತೋ ಯಾವುದೂ ಸ್ಪಷ್ಟವಿಲ್ಲ. ಕೆಲವು ಐತಿಹ್ಯಗಳ ಪ್ರಕಾರ ಹೈದರಾಲಿ ಅವರನ್ನು ಅವರ ಇಪ್ಪತ್ತು ಸಾವಿರ ಬೇಡ ಸಮುದಾಯದ ಸೈನಿಕರ ಜೊತೆ ಸೇರಿಸಿ ಬೆಟ್ಟದಿಂದ ನೂಕಿಸಿ ಬಿಟ್ಟನೆಂಬ ಕತೆಯೂ ಇದೆ. ಅದೇನೇ ಇರಲಿ, ಮದಕರಿ ನಾಯಕರ ಮರಣದೊಂದಿಗೆ ದುರ್ಗದ ವೈಭವೋಪೇತ ಇತಿಹಾಸಕ್ಕೆ ಮಂಕು ಕವಿಯಿತು ಎಂಬುದರಲ್ಲಿ ಎರಡು ಮಾತಿಲ್ಲ. ಎರಡು ದಿನದಲ್ಲಿ ದುರ್ಗದ ಕೋಟೆಯನ್ನು ವಶ ಮಾಡಿಕೊಳ್ಳುತ್ತೇನೆಂದು ಜಂಬ ಕೊಚ್ಚಿದ್ದ ತುರುಕನಿಗೆ, ಅದೇನು ಮೇಣದಿಂದಾಗಿದೆಯೇ ಎಂದು ಹೂಂಕರಿಸಿ 1 ವರ್ಷ 6 ತಿಂಗಳು 25 ದಿನಗಳ ಕಾಲ ಅಟ್ಟಾಡಿಸಿದ, ಆಟವಾಡಿಸಿದ ಮದಕರಿ ನಾಯಕರು ಮತ್ತು ಅವರ ದುರ್ಗ ಕ್ಷಾತ್ರತೇಜದ, ಹೆಮ್ಮೆ, ಅಭಿಮಾನಗಳ ಸಂಕೇತ. ಅಂತಹ ಸಾಮ್ರಾಜ್ಯವನ್ನು ಕುಟ್ಟಿ ಪುಡಿಗಟ್ಟಿದ ಹೈದರಾಲಿ ಎಂಬ ಕುಟಿಲ ದೊರೆಯ ಮಗನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಹೊರಟಿರುವುದು ಚಿತ್ರದುರ್ಗಕ್ಕೆ, ಅಲ್ಲಿನ ಏಳು ಸುತ್ತಿನ ಕೋಟೆಗೆ, ಸಾಯುವವರೆಗೂ ಮದಕರಿ ನಾಯಕರಿಗೆ ಬೆಂಬಲವಾಗಿ ನಿಂತ ನಿಷ್ಠಾವಂತ ಬೇಡರ ಸಮುದಾಯಕ್ಕೆ ಸರಕಾರವು ಮಾಡುತ್ತಿರುವ ಬಹುದೊಡ್ಡ ಅವಮಾನ.

(‘ವಿಕ್ರಮ’ ಪತ್ರಿಕೆಯ ೬ ನವೆಂಬರ್ ೨೦೧೬ – ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!