ಅಂಕಣ

ಕೆಂಪುಬಾವುಟದ ಖದೀಮರ ಮುಖವಾಡ ಕಳಚುವ ‘Buddha in a traffic jam’

  “ಸಾಯುವ ಮೊದಲು ನನಗೊಂದು ಆಸೆಯಿದೆ.ದೆಹಲಿ,ಕಲ್ಕತ್ತಾ,ವಾರಣಾಸಿ,ಚೆನ್ನೈ,ಮುಂಬೈ ಮುಂತಾದ ನಗರಗಳ ಬೀದಿಗಳಲ್ಲಿ ಸಾವಿರಾರು ಕಾಮ್ರೇಡ್’ಗಳು ತಂಡೋಪತಂಡವಾಗಿ ‘ಲಾಲ್ ಸಲಾಂ’ ಎಂದು ಕೂಗುತ್ತ ಕೆಂಪು ಬಾವುಟ ಹಿಡಿದು ಮೆರವಣಿಗೆ ಮಾಡಬೇಕು.ಆಳುವ ಸರ್ಕಾರದ ಪ್ರತಿನಿಧಿಗಳ ಅಧಿಕಾರಶಾಹಿಯ ರಕ್ತ ಹೊರಚೆಲ್ಲಿ ನೆಲವೆಲ್ಲ ಕೆಂಬಣ್ಣಕ್ಕೆ ತಿರುಗಬೇಕು.ಕಾಮ್ರೇಡ್’ಗಳು ಆಡಳಿತ ಸರ್ಕಾರವನ್ನು ಕಿತ್ತೊಗೆದು ತಮ್ಮ ಪ್ರಭುತ್ವ ಸಾಧಿಸಬೇಕು” ಹೀಗೆಂದು ಹೇಳುವುದು ‘Buddha in a traffic jam’ ಸಿನಿಮಾದ ಪ್ರೊಫೇಸರ್ ರಂಜನ್ ಭಟ್ಕಿ ಎಂಬ ಪಾತ್ರ.ವಿವೇಕ್ ಅಗ್ನಿಹೋತ್ರಿಯವರು ಕಥೆ,ಚಿತ್ರಕಥೆ ಬರೆದು ನಿರ್ದೇಶಿಸಿದ್ದ ‘Buddha in a traffic jam’ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಉಮರ್ ಖಲೀದ್ ಮತ್ತು ಕನ್ಹಯ್ಯ ಕುಮಾರ್ ಅವರ ದೇಶದ್ರೋಹದ ಘೋಷಣೆಯ ಪ್ರಕರಣದ ಸಮಯದಲ್ಲಿ ಭಾರೀ ಚರ್ಚೆ ಮಾಡಿತ್ತು.ಸಿನಿಮಾ ಬಿಡುಗಡೆಗೂ ಮೊದಲೇ ವಿವೇಕ್ ಅಗ್ನಿಹೋತ್ರಿ ಇದನ್ನು JNU ನಲ್ಲಿ ವಿದ್ಯಾರ್ಥಿಗಳಿಗೆ ತೋರಿಸಬೇಕೆಂದಿದ್ದರು.ಆದರೆ ಅಲ್ಲಿ ನಡೆದ ದೊಂಬಿಗಳಿಂದಾಗಿ ಕ್ಯಾಂಪಸ್ ಒಳಗಡೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ.

ಕಮ್ಯುನಿಸ್ಟರು,ಮಾವೋವಾದಿಗಳು,ನಕ್ಸಲರು ಇವರು ಯಾರೂ ನಮ್ಮ ದೇಶಕ್ಕೆ ಹೊಸಬರಲ್ಲ.ಲಾಲ್ ಸಲಾಂ ಹೆಸರಲ್ಲಿ ಇವರು ಹರಿಸಿದ ಅಮಾಯಕರ ರಕ್ತಕ್ಕೆ ಲೆಕ್ಕವೇ ಇಲ್ಲ.ಆದರೆ ಇವರಿಗೆಲ್ಲ ಕ್ರಾಂತಿ,ಬಡವರಿಗೆ,ಆದಿವಾಸಿಗಳಿಗೆ ನ್ಯಾಯ ಕೊಡಿಸುವುದು ಎಂಬುದೆಲ್ಲ ಒಂದು ನೆಪ ಮಾತ್ರ.ಕಷ್ಟಪಟ್ಟು ದುಡಿದು ತಿನ್ನಲಾಗದ ಒಂದಷ್ಟು ಜನ ಕಾಡು ಸೇರಿಕೊಂಡು ನಕ್ಸಲ್ ಕ್ರಾಂತಿಯ ಹೆಸರಲ್ಲಿ ಒಂದಷ್ಟು NGO ಗಳಿಂದ ನಿರಂತರವಾಗಿ ಹಣ ಪಡೆಯುತ್ತ ಬಂದಿದ್ದಾರೆ.ತಮ್ಮ ಸಿದ್ಧಾಂತಗಳೆಲ್ಲ ಅವರಿಗೆ ಭಾಷಣ ಮಾಡಲು,ಪೀತಪತ್ರಿಕೆಗಳಲ್ಲಿ ಲೇಖನ ಬರೆಯಲು ಮಾತ್ರ.ಅವರಿಗೆ ಬೇಕಾಗಿರುವುದು ಹಣ ಮತ್ತು ಒಂದಷ್ಟು ಹೆಸರು ಅಷ್ಟೇ.ಅದಕ್ಕೆ ಮುಗ್ಧ ಜನರನ್ನು,ಆದಿವಾಸಿಗಳನ್ನು ದಾಳವನ್ನಾಗಿಸಿಕೊಳ್ಳುತ್ತಾರೆ.ಇಂಥ ಕೆಂಪು ಬಾವುಟದ ವೀರರಿಗೆ ಸಹಾಯ ಮಾಡಲೆಂದು ಒಂದಷ್ಟು NGO ಗಳಿವೆ.ಸರ್ಕಾರದಿಂದ ಅವುಗಳಿಗೆ ಹಣವೂ ಬರುತ್ತದೆ.ಎಲ್ಲೆಲ್ಲಿಂದಲೋ ಅಪಾರ ಪ್ರಮಾಣದಲ್ಲಿ ಕಪ್ಪು ಹಣ ದೇಣಿಗೆಯಾಗಿ ಬರುತ್ತದೆ.ಈ ಹಣದಿಂದ ಹೊಟ್ಟೆ ತುಂಬುವುದು NGO ಗಳ ಸದಸ್ಯರದ್ದು,ದೇಶದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮನಸ್ಸಲ್ಲಿ ನಕ್ಸಲ್ ವಾದವನ್ನು ತುಂಬುತ್ತಿರುವ ಪ್ರೊಫೇಸರ್’ಗಳದ್ದು,ಸರ್ಕಾರದಲ್ಲಿ ತಮ್ಮ ಪ್ರಭಾವ ಬೀರಲು ಸಾಮರ್ಥ್ಯವುಳ್ಳ ಒಂದಷ್ಟು ಪತ್ರಕರ್ತರದ್ದು ಮತ್ತು ಕಂಡವರ ಮಕ್ಕಳಿಗೆ ಕೋವಿ ಕೊಟ್ಟು ಮುಗ್ಧ ಜನರ ರಕ್ತ ಹರಿಸುವ ನಕ್ಸಲ್ ಮುಖಂಡರದ್ದು.ಬಡವರು,ಆದಿವಾಸಿಗಳು ಮೊದಲು ಹೇಗಿದ್ದಾರೋ ಈಗಲೂ ಹಾಗೇ ಇದ್ದಾರೆ.ಮುಂದೂ ಹಾಗೆಯೇ ಇರುತ್ತಾರೆ.ಅವರ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಕೆಂಪು ಬಾವುಟದ ಖದೀಮರು.ಇವರ ಕ್ರೌರ್ಯ ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೆ ಬಾಹ್ಯ ಭಯೋತ್ಪಾದನೆಯ ಜೊತೆಗೇ ನಮ್ಮ ದೇಶದೊಳಗೇ ಇರುವ ಲಾಲ್ ಸಲಾಂನ ರಕ್ತ ಪಿಪಾಸುಗಳ ವಿರುದ್ಧ ಬಹಳ ಎಚ್ಚರಿಕೆಯಿಂದ ಸರ್ಕಾರ ಹೋರಾಡಬೇಕಿದೆ.ತಮ್ಮ ಉದ್ದೇಶ ಸಾಧನೆಗಾಗಿ ಮುಗ್ಧ ಗ್ರಾಮಸ್ಥರ,ಆದಿವಾಸಿಗಳ ಹೆಣ ಉರುಳಿಸುವ ಇವರನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ.

ದೆಹಲಿಯಲ್ಲಿ Potter’s club ಹೆಸರಿನ ಒಂದು NGO ಇರುತ್ತದೆ.Indian institute of business ವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೇಸರ್ ಆಗಿರುವ ರಂಜನ್ ಭಟ್ಕಿ(ಅನುಪಮ್ ಖೇರ್) ತನ್ನ ಪತ್ನಿ ಶೀತಲ್(ಪಲ್ಲವಿ ಜೋಷಿ) ಜೊತೆ ಸೇರಿಕೊಂಡು ಹುಟ್ಟು ಹಾಕಿರುವ NGO ಅದು.ಮಣ್ಣಿನ ಮಡಕೆಗಳನ್ನು ಮಾರಿ ಅದರಿಂದ ಬರುವ ಹಣದಲ್ಲಿ ಮತ್ತು ಸರ್ಕಾರದಿಂದ ಬರುವ ದೇಣಿಗೆಯಲ್ಲಿ ಆದಿವಾಸಿಗಳ ಕಲ್ಯಾಣ ಮಾಡುವುದು ಅವರ ಉದ್ದೇಶವಾಗಿರುತ್ತದೆ.ಒಂದು ಸಲ ಸರ್ಕಾರ ಇದ್ದಕ್ಕಿದ್ದಂತೆಯೇ ತನ್ನ ದೇಣಿಗೆಯನ್ನು ನಿಲ್ಲಿಸಿ ಬಿಡುತ್ತದೆ.ಆಗ ರಂಜನ್ ಭಟ್ಕಿ ಮಡಕೆ ಮಾರಾಟದ ಮೂಲಕವೇ ನಮಗೆ ಬೇಕಾದಷ್ಟು ಹಣ ಹುಟ್ಟುವ ಹಾಗೆ ಮಾಡಲು ಯಾವುದಾದರೂ ಪ್ಲ್ಯಾನ್ ತಯಾರಿಸುವಂತೆ ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಾನೆ.ವಿಕ್ರಮ್ ಪಂಡಿತ್(ಅರುಣೋದಯ್ ಸಿಂಗ್) ಎಂಬಾತ ಮಡಕೆಗಳನ್ನು ಆನ್ಲೈನ್’ನಲ್ಲಿ ಮಾರಾಟ ಮಾಡೋಣ.ಯಾವ ಮಧ್ಯವರ್ತಿಗಳ ಕಾಟವಿಲ್ಲದೇ ಹಣ ನೇರವಾಗಿ ಮಡಕೆ ತಯಾರಿಸುವ ಕಾರ್ಮಿಕರಿಗೆ ಹೋಗುತ್ತದೆ.ಆ ಮೂಲಕ ಆದಿವಾಸಿಗಳು ತಾವು ತಯಾರಿಸಿದ ಮಡಕೆಗಳ ಮಾರಟದಿಂದ ಬರುವ ಹಣದಲ್ಲಿ ಶೇಕಡಾ ತೊಂಬತ್ತರಷ್ಟನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾನೆ.ಈ ಯೋಜನೆಯನ್ನು ಎಲ್ಲರೂ ಒಪ್ಪಿದರೆ ಪ್ರೊ.ರಂಜನ್ ಏನಕೇನ ತಿರಸ್ಕರಿಸಿ ವಿಕ್ರಮ್ ಪಂಡಿತನನ್ನು ಬಾಯಿಗೆ ಬಂದ ಹಾಗೆ ಬೈದು ಚಾರಿಟಿಯಂತಿರುವ ನಮ್ಮ NGO ಅನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡುತ್ತಿದ್ದೀಯ ನೀನು ಎನ್ನುತ್ತಾನೆ.ಆದರೆ ಇದರ ಹಿಂದಿನ ಹಿಡನ್ ಅಜೆಂಡಾ ಏನೆಂದರೆ ಮಡಕೆಗಳು ಆನ್ಲೈನ್’ನಲ್ಲಿ ಮಾರಾಟವಾಗಿ ಬಿಟ್ಟರೆ ಇಷ್ಟು ವರ್ಷ ಆದಿವಾಸಿಗಳ ಅಭಿವೃದ್ಧಿಯ ಹೆಸರಲ್ಲಿ ತನಗೆ,ನಕ್ಸಲ್ ಸಿದ್ಧಾಂತವನ್ನು ಬೆಂಬಲಿಸುವ ತನ್ನ ಗೆಳೆಯರಿಗೆ,ಕೆಲವು ರಾಜಕಾರಣಿಗಳಿಗೆ ಮತ್ತು ಮುಖ್ಯವಾಗಿ ನಕ್ಸಲರಿಗೆ ಸಿಗುತ್ತಿದ್ದ ಹಣವು ನಿಂತು ಹೋಗುತ್ತದೆ.ಹಾಗಾಗಿ ವಿಕ್ರಮ್ ಪಂಡಿತನ ಯೋಜನೆಯನ್ನು ತಡೆಯಲೇ ಬೇಕು ಅಂತ ಪಣ ತೊಡುತ್ತಾನೆ.ರಂಜನ್ ಇದರಲ್ಲಿ ಯಶಸ್ವಿಯಾಗುತ್ತಾನೆಯೇ,ನಕ್ಸಲರಿಗೆ ಮೊದಲಿನಂತೆಯೇ ಹಣ ಸಿಗುತ್ತದೆಯೇ,ವಿಕ್ರಮ್ ಏನಾಗುತ್ತಾನೆ ಎಂಬುದನ್ನು ತಿಳಿಯಲು ನೀವು ‘Buddha in a traffic jam’ ಸಿನಿಮಾ ನೋಡಬೇಕು.

ವಿದ್ಯಾರ್ಥಿಗಳ ತಲೆಯಲ್ಲಿ ನಕ್ಸಲ್ ವಾದವನ್ನು ತುಂಬುವ,ಅವರ ಬ್ರೈನ್ ವಾಶ್ ಮಾಡಿ ತಮ್ಮ ಸಿದ್ಧಾಂತಗಳಿಗೆ ಅವರು ಪ್ರೇರಿತರಾಗುವಂತೆ ಮಾಡಿ ಕೆಂಪು ಕ್ರಾಂತಿಯ ಹೆಸರಲ್ಲಿ ಮುಗ್ಧರನ್ನು ನಕ್ಸಲರನ್ನಾಗಿಸುವ ಕೆಲಸದಲ್ಲಿ ಕೆಲವು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳ ಪ್ರೊಫೇಸರ್’ಗಳು ತೊಡಗಿಕೊಂಡಿದ್ದಾರೆ.ದಮನಿತರಿಗೆ ನ್ಯಾಯ ಒದಗಿಸಲು ಕೆಂಪು ಕ್ರಾಂತಿ ಮಾಡುತ್ತೇವೆ ಎನ್ನುವ ಈ ಎಡಪಂಥೀಯ ವಿಚಾರಧಾರೆಯವರಿಗೆ ದೇಶಕ್ಕಿಂತಲೂ ತಮ್ಮ ಸಿದ್ಧಾಂತವೇ ಮುಖ್ಯ.ತಮ್ಮ ಉದ್ದೇಶ ಸಾಧನೆಗಾಗಿ ದೇಶಕ್ಕೇ ಆಪತ್ತು ತಂದೊಡ್ಡಲೂ ಇವರು ಹೇಸುವುದಿಲ್ಲ.ಇಂಥ ರಕ್ತಪಿಪಾಸು ಕಮ್ಯುನಿಷ್ಟರಿಗೆ ದೇಶಾದ್ಯಂತ ಕೆಲವು ಪತ್ರಕರ್ತರ,ಸರಕಾರದ ಆಯಕಟ್ಟಿನ ಜಾಗಗಳಲ್ಲಿರುವ ರಾಜಕಾರಣಿಗಳ,ಕೆಲವು ವೈದ್ಯರ,ಇಂಜಿನಿಯರುಗಳ ಬೆಂಬಲವಿದೆ.ಕಂಡವರ ಮಕ್ಕಳನ್ನು ನಕ್ಸಲರನ್ನಾಗಿಸಿ ಅವರ ಕೈಯಿಂದ ರಕ್ತ ಹರಿಸಿ ತಾವು ಸುಖವಾಗಿರುವ ಖದೀಮರು ಇವರು.ತಮ್ಮ ಪ್ರಭಾವವನ್ನು ಬಳಸಿ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯುವಲ್ಲಿ ಇವರು ನಿಸ್ಸೀಮರು.ಸರ್ಕಾರ ಇವರಿಗೆ ಕೊಡುವ ಇಡುಗಂಟಿನಲ್ಲಿ ಸ್ವಲ್ಪ ಕಡಿಮೆಯಾದರೂ ಸರ್ಕಾರದ ವಿರುದ್ಧ ಕಿಡಿಕಾರುತ್ತಾರೆ.ಅಸಹಿಷ್ಣುತೆ ಇದೆ ಎಂದು ಗದ್ದಲವೆಬ್ಬಿಸುತ್ತಾರೆ.

ಬಹುತೇಕ NGO ಗಳಿಗೆ ಸೇವೆಯೆಂಬುದು ನೆಪ ಮಾತ್ರ.ಸೇವೆಯ ಹೆಸರಲ್ಲಿ ತಾವು ಲಾಭ ಮಾಡಿಕೊಳ್ಳಲು ಸರ್ಕಾರವನ್ನೂ ಪ್ರಭಾವಿಸುತ್ತಾರೆ ಅವರು.NGO ನಡೆಸುವವರು ಮುಲಾಜಿಲ್ಲದೇ ಸರ್ಕಾರದಿಂದ ದೇಣಿಗೆ ಪಡೆಯುತ್ತಾರೆ.ಈ ಹಣ ನಿಜವಾದ ಉದ್ದೇಶಕ್ಕೆ ಬಳಕೆಯಾಗದೇ ನಕ್ಸಲರಿಗೆ,ಮಾವೋವಾದಿಗಳಿಗೆ,ಮತಾಂತರ ಮಾಡುವ ಸಂಸ್ಥೆಗಳಿಗೆ ಮತ್ತು ಭಯೋತ್ಪಾದಕರಿಗೆ ಹೋಗುತ್ತದೆ.ಇದನ್ನು ವಿವೇಕ್ ಅಗ್ನಿಹೋತ್ರಿ  ‘Buddha in a traffic jam’ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ.ಮೋದಿ ಸರ್ಕಾರ ಬಂದ ಮೇಲೆ ಸುಮಾರು NGOಗಳ ಮಾನ್ಯತೆ ರದ್ದು ಮಾಡಿ,ಅವುಗಳಿಗೆ ಕೊಡುವ ದೇಣಿಗೆಯನ್ನು ನಿಲ್ಲಿಸಿ ಅವರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಾಗ ಬುದ್ಧಿಜೀವಿಗಳ ನೇತೃತ್ವದಲ್ಲಿ ದೇಶದಲ್ಲಿ ಅಸಹಿಷ್ಣುತೆಯ ಹೊಗೆ ಎಬ್ಬಿಸಲಾಯಿತು.ತಮಗೆ ಸರ್ಕಾರದಿಂದ ಬರುತ್ತಿದ್ದ ಸವಲತ್ತುಗಳು ನಿಂತ ಕೂಡಲೇ ಕೆಲ ಸಾಹಿತಿಗಳು,ಪ್ರೊಫೇಸರ್’ಗಳು ಕೆಂಡಾಮಂಡಲರಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.JNU ನಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿತರಾದವರನ್ನು ನೇರವಾಗಿ ಬೆಂಬಲಿಸಿದರು.ಇಂಥ ಸಂದರ್ಭಗಳಲ್ಲಿ ತಮ್ಮ ಪ್ರಖರ ಲೇಖನಗಳ ಮೂಲಕ,ಬಹಿರಂಗ ಪತ್ರಗಳ ಮೂಲಕ ವಿವೇಕ್ ಅಗ್ನಿಹೋತ್ರಿ ಲಾಲ್ ಸಲಾಂನ ವೀರರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.ತಮ್ಮ ಸಿನಿಮಾದಲ್ಲೂ ಎಡಬಿಡಂಗಿ ಬುದ್ಧಿಜೀವಿಗಳನ್ನು ಬೆತ್ತಲುಗೊಳಿಸಿದ್ದಾರೆ.

ಪ್ರಾಜ್ಞರೆಂದು ಜನರಿಂದ ಗೌರವಿಸಲ್ಪಡುವ ಹಿಡನ್ ಅಜೆಂಡಾವುಳ್ಳ ಕೆಲವು ಪ್ರೊಫೆಸರ್’ಗಳ,ಬುದ್ಧಿಜೀವಿಗಳ ನೈಜ ಮುಖದ ಅನಾವರಣವಾಗಬೇಕಾದರೆ,ಕ್ರಾಂತಿಯ ಹೆಸರಲ್ಲಿ ಅಮಾಯಕರನ್ನು ಹಿಂಸಿಸುವ ನಕ್ಸಲರ ಕ್ರೌರ್ಯವನ್ನು ವೈಚಾರಿಕವಾಗಿ ಬೆತ್ತಲು ಮಾಡಿದ್ದನ್ನು ನೋಡಬೇಕಾದರೆ ನೀವು ’Buddha in a traffic jam’ ಸಿನಿಮಾ ವೀಕ್ಷಿಸಲೇ ಬೇಕು.ಸಿನಿಮಾ ಕೆಲವು ಆಯ್ದ ಮಲ್ಟಿಪ್ಲೆಕ್ಸ್’ಗಳಲ್ಲಿ ಮಾತ್ರ ಬಿಡುಗಡೆಯಾಗಿತ್ತು.ಇನ್ನು ಒಂದಷ್ಟು ಕಡೆಗಳಲ್ಲಿ ವಿವೇಕ್ ಅಗ್ನಿಹೋತ್ರಿಯವರೇ ಸಾರ್ವಜನಿಕ ಪ್ರದರ್ಶನವನ್ನು ಏರ್ಪಡಿಸಿದ್ದರು.ನಾವೆಲ್ಲ ನೋಡಲೇಬೇಕಾದ ಸಿನಿಮಾವನ್ನುಈಗ ಯೂಟ್ಯೂಬ್’ನಲ್ಲಿ ವೀಕ್ಷಿಸಬಹುದು.ಅದರ ಲಿಂಕ್ ಕೆಳಗಿದೆ.ಕೆಂಪು ಕ್ರಾಂತಿಯ ಖದೀಮರ ಮುಖವಾಡ ಕಳಚುವ ‘Buddha in a traffic jam’ ಅನ್ನು ಒಮ್ಮೆ ನೋಡಿ.ಕಮ್ಯುನಿಷ್ಟರ,ದೇಶದ್ರೋಹಿಗಳ,ಎಡಪಂಥೀಯರ ಪೊಳ್ಳುತನವನ್ನು ವೈಚಾರಿಕವಾಗಿ ಬಯಲು ಮಾಡುತ್ತಿರುವ ವಿವೇಕ್ ಅಗ್ನಿಹೋತ್ರಿಯವರನ್ನು ಬೆಂಬಲಿಸಿ.ಅಂದ ಹಾಗೆ ಈ ಸಿನಿಮಾದಲ್ಲಿ ನೈತಿಕ ಪೋಲೀಸ್’ಗಿರಿ ಹೆಸರಲ್ಲಿ ಗೂಂಡಾಗಿರಿ ಮಾಡುವ ಹಿಂದೂ ಸಂಘಟನೆಗಳನ್ನೂ ಖಂಡಿಸಲಾಗಿದೆ.ಆದಷ್ಟು ಬೇಗ ಯೂಟ್ಯೂಬ್’ನಲ್ಲಿ ಈ ಚಿತ್ರವನ್ನು ನೋಡಿಬಿಡಿ.ತಮ್ಮ ಪ್ರಭಾವ ಬಳಸಿ ಕೆಂಪು ಬಾವುಟದ ವೀರರು ಯಾವಾಗ ಅದನ್ನು ಯೂಟ್ಯೂಬಿನಿಂದ ತೆಗೆಸುತ್ತಾರೋ ಯಾರಿಗೆ ಗೊತ್ತು.

ಯೂಟ್ಯೂಬ್’ನಲ್ಲಿ ಸಿನಿಮಾ ವೀಕ್ಷಿಸಲು ಲಿಂಕ್ ಇಲ್ಲಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!