ಕವಿತೆ

ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ..

ದೀಪ ಹಚ್ಚುವ ವೇಳೆ
ಧೂಪ ಹಾಕುವ ಸಮಯ
ಹೊತ್ತಿಸು ಊದಿನಕಡ್ಡಿ
ಬೆಳಗಿಸು ಮಂಗಳದಾರತಿ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||
ಜಾಜ್ವಾಲಮಾಲಾ ಬೆಳಗಲಿ
ಉಜ್ವಲ ಕಾಂತಿ ಹೊಮ್ಮಲಿ
ದಿಕ್ಕುದಿಕ್ಕುಗಳೆಡೆ ಪಸರಿಸಲಿ
ಕನ್ನಡ ಕಂಪ ಹೊತ್ತು ಮೆರೆಸಲಿ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||
ಜೊಳ್ಳೆಲ್ಲ ಉರಿದು ಹೋಗಲಿ
ಎಳ್ಳುಬತ್ತಿ ಹರಕೆ ತೀರಿಸಲಿ
ಪುಟಕ್ಕಿಟ್ಟ ಅಪರಂಜಿ ಹೇಮ
ಜಗಮಗಿಸಲಿ ಕನ್ನಡದ ಪ್ರೇಮ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||
ಕಿಚ್ಚುರಿಸಲಿ ನೀರಸ ನಿರ್ಲಿಪ್ತತೆ
ತುಡಿಸುತ್ತ ಹೃದಯದಲಾಪ್ತತೆ
ಉರಿದ್ಹೋಗಲಿ ಸಂಕೋಚ ಕೀಳರಿಮೆ
ತೊಲಗಿಸಲಿ ಸೌಜನ್ಯದ ಹುಸಿ ಸೀಮೆ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||
ಹಿಂದೆಂದಿಗಿಂತ ಇಂದು ಏ ಬಂಧು
ಅನಿವಾರ್ಯ ಒಗ್ಗೂಡಿಸೆ ಸುಸಿಂಧು
ಬಿಡು ಮತ ಜಾತಿ ಒಕ್ಕಲು ಪ್ರಾಂತ್ಯ
ಮಾಡಿಸುತೆಲ್ಲ ಬೇಧ ಭಾವಕೆ ಅಂತ್ಯ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||
– ನಾಗೇಶ ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!