Featured ಅಂಕಣ

ಕನ್ನಡ ದಿನಪತ್ರಿಕೆಗಳ್ಯಾಕೆ ಹೀಗೆ?

ಒಂದೆರಡು ದಿನಗಳಿಂದ ವೈರಾಗ್ಯ ಬರುವ ರೀತಿಯಲ್ಲಿ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳು ವರ್ತಿಸುತ್ತಿದೆ.  ಪತ್ರಿಕೋದ್ಯಮ ವ್ಯಾಪಾರವಾಗಿದೆ, ಉದ್ಯಮ ದೊಡ್ಡ ಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೂ ಇತ್ತೀಚೆಗೆ ಅಗತ್ಯ ಮೀರಿದ ಪತ್ರಿಕೆಗಳ ವರ್ತನೆ ಓದುಗರಲ್ಲಿ ಇರುಸು ಮುರುಸು ಸೃಷ್ಟಿಸಿದೆ, ಸೃಷ್ಠಿಸುತ್ತಿದೆ. ಸರ್ಕಾರದ ವಿರುದ್ಧ ಪತ್ರಿಕೆಗಳ ಅತಿರೇಕದ ನಿಲುವು ಕನ್ನಡ ಪತ್ರಿಕಾ ಇತಿಹಾಸಕ್ಕೆ ಕಳಂಕ ಎಂಬಂತಾಗಿದೆ.

ಕನ್ನಡದ ಬಹುತೇಕ ದಿನಪತ್ರಿಕೆಗಳು ಎಡ, ಬಲದ ಧೋರಣೆಗೆ ಕಟಿಬದ್ಧವಾಗಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಸಮಾಜವನ್ನು ಒಂದು ಗೂಡಿಸುವ ಶಕ್ತಿ ಜನರನ್ನೇ ಎರಡು ಪಂಗಡಗಳಾಗಿ ಮಾರ್ಪಡಿಸುತ್ತಿವೆ.  ಪ್ರಸ್ತುತ ಕೇಂದ್ರ ಸರ್ಕಾರ ಏನು ಮಾಡಿದರೂ ಸರಿ ಎನ್ನುವವರು ಒಂದೆಡೆಯಾದರೆ, ಅವರ ಒಳ್ಳೆಯ ನಿರ್ಧಾರಗಳನ್ನು ಕೆಟ್ಟದ್ದು ಎಂದು ಬಿಂಬಿಸುವವರು ಕೆಲವರು. ಸಮಾಜದಲ್ಲಿ ಈಗಾಗಲೇ ಇಂತಹದ್ದೊಂದು ಕರ್ಮಕಾಂಡ ಘಟಿಸಿ ಹೋಗಿದೆ. ಆದರೆ ಅದಕ್ಕೆ ಇನ್ನಷ್ಟು ಹಾಲು, ತುಪ್ಪ ಸುರಿಯುವ ಪ್ರಯತ್ನ ಪತ್ರಿಕೆಗಳಿಂದ ನಡೆಯುತ್ತಿದೆ.

ದೇಶದಲ್ಲಿ ಅಮೇರಿಕಾ ಅಧ್ಯಕ್ಷೀಯ ಚುನಾವಣೆಗಿಂತಲೂ ಹೆಚ್ಚು ಸುದ್ಧಿಯಾಗುತ್ತಿರುವ 500, 1000 ಮುಖಬೆಲೆಯ ನೋಟುಗಳು ರದ್ದುಗೊಂಡ ಬಗೆಗೆ ಪತ್ರಿಕೆಗಳ ನಿಲುವು ನೋಡಿ ಆಘಾತವಾಯಿತು. ಯಾವುದೇ ಸರ್ಕಾರ ಬಂದರೂ ದೇಶದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗುವ ಒಳ್ಳೆಯ ನಿರ್ಧಾರಗಳನ್ನು ಮಾಧ್ಯಮಗಳನ್ನೂ ಒಳಗೊಂಡಂತೆ ಎಲ್ಲರೂ ಗೌರವಿಸಬೇಕು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಅಹಿತಕರ ಸನ್ನಿವೇಶಗಳನ್ನಷ್ಟೇ ಹೈಲೈಟ್ ಮಾಡುತ್ತಾ ಜನರನ್ನು ದಾರಿ ತಪ್ಪಿಸುವ ಉಸಾಬರಿ ಇವರಿಗ್ಯಾಕೆ?

ಮೋದಿ ಹೇಳಿದ ಅಚ್ಛೇ ದಿನ್ ಬರಲೇ ಇಲ್ಲವಲ್ಲ ಅಂತ ಇಷ್ಟು ದಿನ ಲೇವಡಿ ಮಾಡುತ್ತಿದ್ದವರು, ಒಳ್ಳೆಯ ದಿನಗಳು ಬರುತ್ತವೆ ಎಂದರೂ ಅದನ್ನು ಸ್ವೀಕರಿಸಲು ತಯಾರಿಲ್ಲವಲ್ಲ ಇದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಇಷ್ಟು ದಿನ ಕಪ್ಪು ಹಣ ಹೊರ ತನ್ನಿ ಎನ್ನುತ್ತಿದ್ದವರು, ಅದರ ಮೂನ್ಸೂಚನೆ ಸಿಗುತ್ತಿದ್ದಂತೆ ವರಸೆಯನ್ನು ಬದಲಿಸಿದ ರೀತಿ ಹಾಸ್ಯಾಸ್ಪದ. ಕಪ್ಪುಹಣ ಧನಿಕರ, ರಾಜಕಾರಣಿಗಳ ಕೈಯಲ್ಲಿದೆ ಅವರಿಂದ ಹಣವನ್ನು ಹೊರ ತೆಗೆಸುವುದನ್ನು ಬಿಟ್ಟು ಜನಸಾಮಾನ್ಯರಿಗೆ ಮೋದಿ ಹಿಂಸೆ ಕೊಡುತ್ತಿದ್ದಾರೆ ಅಂತಿರಲ್ಲಾ, ಅದಕ್ಕೆ ಉತ್ತರ ಮೋದಿ ನೀಡಬೇಕಿಲ್ಲ. ದೇಶದ ಬಗೆಗೆ ಕಾಳಜಿ ಇರುವ ನನ್ನಂತ ಸಾಮಾನ್ಯರೂ ಕೊಡಬಹುದು, ಕೇಳಿ.

ಒಂದೊಮ್ಮೆ ನೀವು ಹೇಳಿದ ಹಾಗೇ ಮಾಡಿದ್ದಿದ್ದರೆ, ಗ್ರಾಮ ಪಂಚಾಯತ್ ಮಟ್ಟದಲ್ಲೂ ನಡೆಯುವ ಕಾಳಸಂತೆಯನ್ನು ನೀವು ನಿಲ್ಲಿಸ್ತಾ ಇದ್ರಾ? ಸರ್ಕಾರದ ನಿರ್ಧಾರದಿಂದ ಆಗುತ್ತಿರುವ ಗೊಂದಲಗಳನ್ನೇ ಇಷ್ಟು ದೊಡ್ಡ ಮಟ್ಟಕ್ಕೆ ಸುದ್ಧಿ ಮಾಡುವ ಪತ್ರಿಕೆಗಳೇ, ಒಮ್ಮೆ ಇಲ್ಲಿ ಕಿವಿ ಕೊಡಿ. ಇಂದು ಒಂದು ವಾರ ನಾವು ಪಡುವ ಕಷ್ಟ, ದೇಶದ ಲೂಟಿಕೋರರ ಬೆವರಿಳಿಸುತ್ತದೆ ಎಂದಾದರೆ ನಾವ್ಯಾಕೆ ಕಷ್ಟ ಪಡಬಾರದು. ಗಡಿಯಲ್ಲಿ ನಮಗಾಗಿ ಪ್ರಾಣತೆತ್ತ ವೀರಯೋಧರ ಸ್ಮರಿಸುವ ದಿನದಂದು, ದೇಶದ ರಕ್ಷಣೆಗಾಗಿ ಗಡಿಯಲ್ಲಿ ನೀವಿದ್ದರೆ, ದೇಶದ ಒಳಗೆ ನಾವಿದ್ದೇವೆ ಎಂದು ನೀವೇ ನಿಮ್ಮ ಪತ್ರಿಕೆಗಳಲ್ಲಿ ಬರೆದುಕೊಂಡಿರಲ್ಲ, ದೇಶದ ಹಿತಕ್ಕಾಗಿ ಇಷ್ಟೂ ಮಾಡಲಿಕ್ಕಾಗದ ನೀವೂ ಭಾರತೀಯರಾ?

ಭಾರತೀಯ ಯೋಧರು ಸತ್ತಾಗ ಒಂದು ದಿನದ ಸುದ್ಧಿಗೆ ಸೀಮಿತ ಮಾಡುವ ನೀವು, ಅದೇ ಸರ್ಜಿಕಲ್ ಸ್ರ್ಟೈಕ್ ಆದಾಗ ನಮ್ಮನ್ನು ಸಾಯಿಸುವವರನ್ನು ಸಾಯಿಸಿದ್ದು, ದೇಶಕ್ಕೆ ಒಳಿತಲ್ಲ ಎಂದಿರಲ್ಲವೇ? ಯಾಕೇ ಸ್ವಾಮಿ, ಭಾರತದ ಯೋಧರು ನಿಮಗೆ ವಸ್ತುಗಳಂತೆ ಕಾಣುತ್ತಿದ್ದಾರಾ? ಅಥವಾ ಪಾಕಿಸ್ತಾನದವರೇನಾದರೂ ನಿಮ್ಮ ಕಪ್ಪು ಹಣವನ್ನು ವೈಟ್‍ಮನಿ ಮಾಡಿಕೊಡುತ್ತೇವೆಂದು ಮಾತು ಕೊಟ್ಟಿದ್ದಾರಾ? ನಮ್ಮವರಿಗಿಲ್ಲದ ಮಮಕಾರ ಅವರಿಗ್ಯಾಕೆ?

ಅದೆಲ್ಲಾ ಬಿಡಿ, ಕೊನೆಗೆ ದೇಶವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಕೈಗೊಂಡ ಸ್ವಚ್ಛತಾ ಆಂದೋಲನದ ಬಗ್ಗೆಯೂ ಒಂದೆರಡು ಒಳ್ಳೆಯ ಮಾತುಗಳನ್ನಡಲಿಲ್ಲ ನೀವು.  ನಿಮ್ಮ ಸೋ ಕಾಲ್ಡ್ ಸಂವೇದನಾಶೀಲ ಬರಹಗಳ ಹಿಂದಿರುವ ತಂತ್ರವನ್ನು ತಿಳಿಯಲು ಇದಕ್ಕಿಂತ ಸಾಕ್ಷಿ  ಬೇಕಾ? ಇತ್ತೀಚೆಗೆ ನಮ್ಮ ಗುರುಗಳೊಬ್ಬರು ಹೇಳಿದ ಪದವೊಂದು ನೆನಪಿಗೆ ಬರುತ್ತಿದೆ, ‘ಸೆಲೆಕ್ಟಿವ್ ಕಮೆಂಟ್’.

ಸಾಮಾನ್ಯವಾಗಿ ಪ್ರಸ್ತುತ ಆಗುಹೋಗುಗಳ ಬಗೆಗೆ ವಿಚಾರ ವಿಮರ್ಶೆ ಮಾಡುವುದು ಒಂದು ಬಗೆಯ ಕಮೆಂಟ್. ಅದು ಸ್ವಾಗತಾರ್ಹ ಮತ್ತು ಒಪ್ಪತಕ್ಕಂಹದ್ದು. ಆದರೆ ತಮಗಾಗದ ವ್ಯಕ್ತಿ ಮತ್ತು ವಿಚಾರಗಳ ಬಗೆಗಷ್ಟೇ ಕಮೆಂಟ್ ಮಾಡುತ್ತಾ ಅವರು ಮಾಡಿದ್ದೆಲ್ಲವೂ ತಪ್ಪು ಎಂದು ವಾದಿಸುವವರು ಸೆಲೆಕ್ಟಿವ್ ಕಮೆಂಟರ್ಸ್‍ಗಳ ಸಾಲಿಗೆ ಸೇರುತ್ತಾರೆ. ಇವರನ್ನು ನೋಡಿ ನಗಬೇಕೇ ವಿನಃ ನಂಬಲೂಬಾರದು, ಒಪ್ಪಲೂಬಾರದು. ಯಾಕಂದ್ರೆ ಈ ಬಗೆಯ ವ್ಯಕ್ತಿ ಮತ್ತು ಬರಹಗಳು ತಾನಂದುಕೊಂಡಿದ್ದೇ ಸರಿ ಎಂದು ವಾದಿಸುವವರು ಮತ್ತು ಋಣಾತ್ಮಕ ಚಿಂತನೆಗಳನ್ನು ಆಡಳಿತಾರೂಢರ ವಿರುದ್ದ ಹಬ್ಬಿಸುವವರೇ ವಿನಃ ತಪ್ಪುಗಳನ್ನು ಸರಿಪಡಿಸಿ ಜನರ ಒಳಿತಿಗಾಗಿ ಚಿಂತಿಸುವವರಲ್ಲ.

ಇದೇ ಹಾದಿಯಲ್ಲಿ ಪತ್ರಿಕೆಗಳೂ ಸಾಗುತ್ತಿವೆ ಎಂಬುದೇ ಬೇಸರ. ದೇಶದಲ್ಲಿ ಕರೆನ್ಸಿ ವಿಷಯದಲ್ಲಿ ನಡೆಯುತ್ತಿರುವ ಸರ್ಜಿಕಲ್ ಸ್ರ್ಟೈಕ್ ಒಂದು ಹಂತಕ್ಕೆ ಭ್ರಷ್ಟಾಚಾರಿಗಳ ಬುಡಮೇಲು ಮಾಡುತ್ತಿದೆ ಎಂದು ತಿಳಿದಿದ್ದರೂ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಸರ್ಕಾರದ ನಿರ್ಧಾರವೇ ತಪ್ಪು ಎನ್ನುವುದು ಮೊಂಡುವಾದ ಎನಿಸುತ್ತಿದೆ. ಸಾಮಾನ್ಯ ಜನರಿಗೆ ಇದರಿಂದಾಗುತ್ತಿರುವ ಗೊಂದಲಗಳ ಬಗೆಗೆ ಖಂಡಿತವಾಗಿಯೂ ಬೇಸರವಿದೆ. ಆದರೆ ಅದೇ ವಿಷಯವನ್ನೇ ಬಂಡವಾಳ ಮಾಡಿಕೊಳ್ಳುವುದು ಪತ್ರಿಕೆಗಳಿಗೆ ಶೋಭೆಯಲ್ಲ. ಸಾಮಾನ್ಯ ಜನತೆಯ ಬಗೆಗೆ ಈ ಮಟ್ಟಿನ ಕಳಕಳಿ ಪತ್ರಿಕೆಗಳಿಗೆ ಇರುವುದೇ ಹೌದಾದರೆ ಅವರಲ್ಲೇ ಚರ್ಚೆ ನಡೆಸಿ, ಗೊಂದಲ ಪರಿಹಾರಕ್ಕೊಂದು ಸುಲಭ ಮಾರ್ಗ ಸೂಚಿಸಬಹುದಾಗಿತ್ತು. ಈ ಮಟ್ಟಿನ ತಾಳ್ಮೆಯೂ ಪತ್ರಿಕೆಗಳಿಲ್ಲ ಎಂದಾದರೆ ಇವು ಯಾವ ಟಿವಿ ಮಾಧ್ಯಮಗಳಿಗೂ ಕಮ್ಮಿಯಿಲ್ಲ ಎಂದೇ ಅನಿಸುತ್ತದೆ. ನಿಮ್ಮ ಪೂರ್ವಾಗ್ರಹಕ್ಕೆ ಓದುಗರ ತಲೆ ಹಾಳುಮಾಡುವುದರಿಂದ ನಿಮಗೆ ಅದಾವ ಸುಖ ಸಿಗುತ್ತೊ ದೇವರೇ ಬಲ್ಲ.

ಹಾಗಂತ ಎಲ್ಲಾ ಸಂದರ್ಭಗಳಲ್ಲೂ ಸರ್ಕಾರದ ಪರವಾಗಿಯೇ ಬರಹಗಳಿರಬೇಕು ಎಂದರ್ಥವಲ್ಲ. ತಪ್ಪಾದಾಗ ತಿದ್ದುವ, ಗೆದ್ದಾಗ ಖುಷಿ ಪಡುವ ಬುದ್ಧಿ ಪತ್ರಿಕೆಗಳಿಗಿರಬೇಕು. ದೇಶದಲ್ಲಿ ಇರುವ ರಾಜಕೀಯ ಸಾಲದು ಎಂದು ಪತ್ರಿಕೆಗಳು ಹೊಸ ಪಂಥ ರಾಜಕೀಯ ಹುಟ್ಟು ಹಾಕಿದರೆ, ನಮಗೆ ಶತ್ರುಗಳು ನೆರೆ ರಾಷ್ಟ್ರದವರಲ್ಲ, ನೀವೇ ಆಗುತ್ತೀರಿ, ಎಚ್ಚರ. ಹೊಗಳುವ ಗುಂಪು, ತೆಗಳುವ ಗುಂಪಾಂಗಿ ಪತ್ರಿಕೆಗಳು ಮಾರ್ಪಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಈ ಸಂದರ್ಭ ಒಂದು ಪತ್ರಿಕೆಯನ್ನು ಕೇಸರೀಕರಣ ಎಂದು ಹೆಸರಿಸಿ, ಅದನ್ನು ಓದುವುದನ್ನೇ ನಿಲ್ಲಿಸುತ್ತೇನೆ ಎಂದು ಹಾರಾಡುತ್ತಿದ್ದ ಪುಣ್ಯಾತಗಿತ್ತಿಯೊಬ್ಬಳು, ಅವಳ ಬರಹಗಳನ್ನು ಪ್ರಕಟಣೆಗೆ ಅದೇ ಪತ್ರಿಕೆಯನ್ನು ಅವಲಂಬಿಸುತ್ತಿದ್ದುದು ನೆನಪಾಗಿ ನಗು ಬರುತ್ತಿದೆ. ಯಾಕೇ ಈ ಮಾತು ಅಂದಿರಾ? ಆಗಲೇ ತಿಳಿಸಿದೆನಲ್ಲಾ ಸೆಲೆಕ್ಟಿವ್ ಕಮೆಂಟ್. ಇಂದು ಪತ್ರಿಕೆಗಳು ಮಾಡುತ್ತಿರುವುದೂ ಅದನ್ನೇ. ಹೀಗೆ ಮುಂದುವರಿದರೇ ಹಿಂದೊಮ್ಮೆ ಯಾಗದ ವಿಷಯದಲ್ಲಿ ಪತ್ರಿಕೆಗಳ ಮಧ್ಯೆ ನಡೆದ ಶೀತಲ ಸಮರ ಇನ್ನಷ್ಟು ಗಂಭೀರ ಘಟ್ಟಕ್ಕೆ ತಲುಪಬಹುದು. ಒಳ್ಳೆಯದನ್ನು ಒಳ್ಳೆಯದು ಎಂದು ಒಪ್ಪಿಕೊಳ್ಳುವುದರಲ್ಲೂ ಕಂಜೂಸ್ ಬುದ್ಧಿ ತೋರುತ್ತಿರುವ ಕನ್ನಡ ಪತ್ರಿಕೆಗಳ ಗತಿ ಮುಂದೇನು?.

Facebook ಕಾಮೆಂಟ್ಸ್

ಲೇಖಕರ ಕುರಿತು

Pavithra Bidkalkatte

ಪವಿತ್ರ ಬಿದ್ಕಲ್'ಕಟ್ಟೆ
ಪತ್ರಿಕೋದ್ಯಮ ವಿದ್ಯಾರ್ಥಿ
ಎಸ್.ಡಿ.ಎಮ್ ಕಾಲೇಜು ಉಜಿರೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!