ಅಂಕಣ

ಉತ್ತರ ಪ್ರದೇಶ : ಪ್ರಬಲವಾಗಿದೆ ಜಾತಿ ಮಂತ್ರ, ಫಲಿಸಬಹುದು ಯಾರ ತಂತ್ರ??

ಅಧಿಕಾರವಿಲ್ಲದೇ ದಶಕಗಳೇ ಕಳೆದು, ಈಗ ಪಕ್ಷದ ಬಾವುಟ ಕಟ್ಟಲೂ ಜನರಿಲ್ಲದಂತಹ ದೈನೇಸೀ ಸ್ಥಿತಿ ತಲುಪಿರುವ ಕಾಂಗ್ರೆಸ್ ಪಕ್ಷ ಒಂದೆಡೆಯಾದರೆ, ರಾಜ್’ನಾಥ್, ಉಮಾಭಾರತಿ, ಕಲ್ಯಾಣ್ ಸಿಂಗ್ ಮೊದಲಾದ ಘಟಾನುಘಟಿ ನಾಯಕರಿದ್ದರೂ ಮೋದಿ ಅಲೆಯನ್ನೇ ನೆಚ್ಚಿಕೊಂಡು ಶತಾಯ ಗತಾಯ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವ ಬಿಜೆಪಿ ಇನ್ನೊಂದೆಡೆ, ಪಕ್ಷದಿಂದ ದಿನೇ ದಿನೇ ದೂರ ಹೋಗುತ್ತಿರುವ ದಲಿತ ಮತ್ತು ಹಿಂದುಳಿದ ವರ್ಗದ ಮತಗಳನ್ನು ಕ್ರೋಢೀಕರಿಸಲು ಹೆಣಗುತ್ತಿರುವ ಬಿಎಸ್ಪಿ ಹಾಗೂ ಪಕ್ಷದೊಳಗಿನ ಆಂತರಿಕ ಕೌಟುಂಬಿಕ ಕಲಹಗಳಿಂದ ನಲುಗಿ ಆಡಳಿತ ವಿರೋಧಿ ಅಲೆಯಲ್ಲಿ ತೇಲುತ್ತಿರುವ ಎಸ್ಪಿ ಮಗದೊಂದೆಡೆ, ಮತ್ತು ನಮ್ಮನ್ನು ಬಿಟ್ಟು ಅದ್ಯಾರು ಸರ್ಕಾರ ರಚಿಸುತ್ತಾರೆ ನೋಡೇ ಬಿಡೋಣ ಅನ್ನೋ ಹಮ್ಮಿನಲ್ಲಿ ಮುನ್ನುಗ್ಗುತ್ತಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷ ಮತ್ತು ಲೋಕ ಜನ ಶಕ್ತಿ ಮತ್ತಿತರ ಸಣ್ಣ ಪಕ್ಷಗಳು. ಇದು ದೇಶದ ರಾಜಕೀಯದ ಎಪಿಸೆಂಟರ್ ಎಂದೇ ಕರೆಸಿಕೊಳ್ಳುವ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಧ್ಯದ ಹೈಲೈಟ್.

ಉತ್ತರ ಪ್ರದೇಶದ ೪೦೩ ವಿಧಾನಸಭಾ ಕ್ಷೇತ್ರಗಳಿಗೆ ೨೦೧೭ ಫ಼ೆಬ್ರವರಿ ಮತ್ತು ಮಾರ್ಚಿನಲ್ಲಿ ನಡೆಯಲಿರುವ ಚುನಾವಣೆಗೆ ಅಖಾಡ ಸಜ್ಜಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ವಿವಿಧ ಮಸಲತ್ತುಗಳನ್ನು ಆರಂಭಿಸಿವೆ. ಕೆಲವು ಪಕ್ಷಗಳು ಹಿರಿಯ ನಾಯಕರು ಪಕ್ಷಾಂತರ ಮೂಲಕ ಕೊಟ್ಟ ಹೊಡೆತದಿಂದ ಚೇತರಿಸುತ್ತಿವೆಯಾದರೆ ಇನ್ನು ಕೆಲವು ಪಕ್ಷಗಳು ಮೈತ್ರಿ ಮೂಲಕ ಜನರ ಮುಂದೆ ಹೋಗಲು ಚಿಂತನೆ ನಡೆಸುತ್ತಿವೆ. ಜಾತಿ ರಾಜಕಾರಣವನ್ನು ಹೊರಗಿಟ್ಟು ಉತ್ತರ ಪ್ರದೇಶ ಗದ್ದುಗೆ ಏರುವುದು ಕನಸಿನ ಮಾತು. ಜಾತಿಯ ಓಲೈಕೆ ಪ್ರಧಾನವಾಗಿರುವ ಈ ಚುನಾವಣೆಯಲ್ಲಿ ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ಉತ್ತರದಾಯಿತ್ವ ಯಾರ ಬಳಿ ಹೋಗುತ್ತದೆ ಅನ್ನೋದೆ ಸಧ್ಯದ ಕುತೂಹಲ.

ಆಡಳಿತ ವಿರೋಧಿ ಅಲೆ ಮತ್ತು ಬಿಜೆಪಿ ಹಾಗೂ ಬಿಎಸ್ಪಿಯ ಪ್ರಬಲ ವಿರೋಧವನ್ನು ಎದುರಿಸಬೇಕಾದ ಅನಿವಾರ್ಯತೆಯಲ್ಲಿರುವ ಸಮಾಜವಾದಿ ಪಕ್ಷ ಕೌಟುಂಬಿಕ ಕಲಹಗಳಿಂದ ಪಾತಾಳಕ್ಕಿಳಿದು ಹೋಗಿದೆ. ಒಂದು ಕಾಲದ ತನ್ನ ಪರಮಾಪ್ತ ಅಮರ್ ಸಿಂಗ್’ರನ್ನು ಪಕ್ಷದ ಆಯಕಟ್ಟಿನ ಜಾಗದಲ್ಲಿ ಪುನಹ ಪ್ರತಿಷ್ಟಾಪಿಸಿರುವ ಮುಲಾಯಂ ತನ್ನ ಮಗ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಜೊತೆಯೇ ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದಾರೆ. ಅಖಿಲೇಶ್ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿರುವುದು ಮತ್ತು ಮುಲಾಯಂ ಹಾಗೂ ರಾಮ್ ಗೋಪಾಲ್ ಯಾದವ್ ಅವರ ರಬ್ಬರ್ ಸ್ಟಾಂಪ್’ನಂತೆ ಅಖಿಲೇಶ್ ವರ್ತಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿರುವುದು ಅಲ್ಲಗಳೆಯುವಂತಿಲ್ಲ. ಇನ್ನು ತೀರ ಇತ್ತೀಚಿಗೆ ಶಿವ್’ಪಾಲ್ ಯಾದವ್ ಮತ್ತು ಅಖಿಲೇಶ್ ನಡುವೆ ನಡೆದಿರುವ ಆಂತರಿಕ ತಿಕ್ಕಾಟ ಮತ್ತು ಬಣ ರಾಜಕೀಯ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಳೆ ತಲೆಮಾರಿನ ಸಮಾಜವಾದಿ ಕಾರ್ಯಕರ್ತರು ಶಿವಪಾಲ್ ಮತ್ತು  ಮುಲಾಯಂ ಪರವಾಗಿದ್ದರೆ, ಯುವಕರು ಅಖಿಲೇಶ್ ಪರವಾಗಿದ್ದಾರೆ. ವಿಕಾಸ ಯಾತ್ರೆಯ ಮೂಲಕ ರಾಜ್ಯವನ್ನು ಸುತ್ತುವ ಯೋಚನೆ ಮುಖ್ಯಮಂತ್ರಿ ಅಖಿಲೇಶ್’ರದ್ದಾದರೆ, ಯಾದವ ಜನಾಂಗದ ವೋಟುಗಳನ್ನೇ ಬಹಳವಾಗಿ ನೆಚ್ಚಿಕೊಂಡಿರುವ ಮುಲಾಯಂ ಬಿಹಾರದಂತೆಯೇ ಮಹಾಘಟ್ಬಂದನ್ ಸ್ಥಾಪಿಸುವ ಕನಸು ಕಾಣುತ್ತಿದ್ದಾರೆ. ಅಜಂ ಖಾನ್ ಮೂಲಕ ಮುಸ್ಲಿಂ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಯೋಚನೆ ಕೂಡಾ ಮುಲಾಯಂರದ್ದು. ಅದೇನೇ ಇದ್ದರೂ ಪಕ್ಷದ ಆಂತರಿಕ ಭಿನ್ನಮತವನ್ನು ಕೊನೆಗಾಣಿಸದಿದ್ದರೆ ಸಮಾಜವಾದಿ ಪಕ್ಷ ನೆಲಕಚ್ಚುವುದು ನಿಶ್ಚಿತ.

ಚುನಾವಣೆ ಘೋಷಣೆಯ ಮೊದಲೇ ಅಖಾಡಕ್ಕಿಳಿದಿರುವ ಪ್ರಮುಖ ವಿರೋಧ ಪಕ್ಷ ಬಹುಜನ ಸಮಾಜ ಪಕ್ಷ ಸಿದ್ಧತೆಯ ವಿಷಯದಲ್ಲಿ ಉಳಿದೆಲ್ಲಾ ಪಕ್ಷಗಳಿಂದ ಮೈಲುಗಟ್ಟಲೇ ದೂರದಲ್ಲಿದೆ. ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯೂ ಆಗಿದ್ದು ಘೋಷಣೆಯೊಂದೇ ಬಾಕಿ ಉಳಿದಿದೆ. ಮುಸ್ಲಿಂ ಮತ್ತು ಹಿಂದೂ ಮೇಲ್ವರ್ಗದವರಿಗೆ ಅಭ್ಯರ್ಥಿ ಆಯ್ಕೆಯಲ್ಲಿ ಜಾಸ್ತಿ ಮಣೆ ಹಾಕಿದ್ದು ಸಹಜವಾಗಿಯೇ ದಲಿತ ಮತ್ತು ಹಿಂದುಳಿದ ವರ್ಗದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಕೆರಳಿಸಿದೆ. ಪಕ್ಷದ ಹಿಂದುಳಿದ ವರ್ಗಗಳ ಪ್ರಬಲ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ತನ್ನ ಬೆಂಬಲಿಗ ನಾಯಕರೊಂದಿಗೆ ಬಿಜೆಪಿ ತೆಕ್ಕೆಗೆ ಜಾರಿದ್ದು ಮಾಯಾವತಿಯವರಿಗೆ ನುಂಗಲಾರದ ತುತ್ತಾಗಿದೆ. ಇದಲ್ಲದೇ ಹತ್ತಕ್ಕೂ ಅಧಿಕ ಬಿಎಸ್ಪಿ ಶಾಸಕರು ಬಿಜೆಪಿಯತ್ತ ಮುಖ ಮಾಡಿ ನಿಂತಿದ್ದಾರೆ. ಬಿಎಸ್ಪಿ ವೋಟ್ ಬ್ಯಾಂಕ್’ನ ಇನ್ನೊಂದು ಪ್ರಬಲ ಪಾಲುದಾರನಾಗಿರುವ ಪಾಸಿ ಸಮುದಾಯದ ನಾಯಕ ಆರ್ ಕೆ ಚೌದರಿ ಕೂಡಾ ಪಕ್ಷ ತೊರೆದಿರುವುದು ಪಕ್ಷವನ್ನು ಇನ್ನಷ್ಟು ಚಿಂತೆಗೀಡುಮಾಡಿದೆ. ಇವರಿಬ್ಬರಲ್ಲದೇ ಪಕ್ಷದ ಪ್ರಮುಖ ನಾಯಕರುಗಳಾದ ರವೀಂದ್ರನಾಥ ತ್ರಿಪಾಟಿ, ಪರಮ್ ದೇವ್  ಕೂಡಾ ಪಕ್ಷ ತ್ಯಜಿಸಿರುವುದು ಬಿಎಸ್ಪಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ. ಆದರೆ ಆನೆ ನಡೆದಿದ್ದೇ ದಾರಿಯೆಂಬಂತೆ ಸಂಪೂರ್ಣ ಹೊಸ ಮುಖಗಳೊಂದಿಗೆ ಮಾಯಾವತಿ ಚುನಾವಣಾ ಜವಾಬ್ದಾರಿಯ ನೊಗವನ್ನು ಹೊತ್ತಿದ್ದಾರೆ. ಮಾಯಾವತಿಯವರ ಬಗ್ಗೆ ಬಿಜೆಪಿಯ ಸಂಸದರೊಬ್ಬರ ಕೀಳು ಮಟ್ಟದ ಹೇಳಿಕೆಯ ಭರಪೂರ ಲಾಭವನ್ನು ಪಡೆಯಲು ಬಿಎಸ್ಪಿ ಪ್ರಯತ್ನಿಸುತ್ತಿದ್ದು ಹಾಗೂ ಪಕ್ಷದಿಂದ ದೂರವಾಗುತ್ತಿರುವ ದಲಿತರನ್ನು ಮತ್ತೆ ಸೆಳೆಯಲು ನರೇಂದ್ರ ಮೋದಿ ಸರಕಾರ ದಲಿತ ವಿರೋಧಿ ಎಂಬ ಅಪಪ್ರಚಾರ ಕೂಡಾ ಮಾಡಲಾಗುತ್ತಿದೆ. ಕೆಲವೊಂದು ಸಮೀಕ್ಷೆಗಳು ಬಿಎಸ್ಪಿಯ ಪರವಾಗಿ ಬಂದಿರುವುದರಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಮಾಯಾವತಿ ಕನಸು ಕಾಣುತ್ತಿದ್ದಾರೆ.

ದೇಶದೆಲ್ಲಡೇ ಸತತ ಸೋಲುಗಳಿಂದ ಬಸವಳಿದು ಹೋಗಿರುವ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ತನ್ನ ಅಳಿವು ಉಳಿವಿಗಾಗಿ ಆಧುನಿಕ ಚಾಣಾಕ್ಯ ಪ್ರಶಾಂತ್ ಕಿಶೋರ್ ಮೊರೆ ಹೋಗಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಜನಕ್ಕೆ ವಿಶ್ವಾಸವಿಲ್ಲದಿರುವುದು ಮತ್ತು ರಾಜಕೀಯವಾಗಿ ಜವಾಬ್ದಾರಿ ಹೊರಲು ಪ್ರಿಯಾಂಕಾ ಗಾಂಧಿ ಸಿದ್ಧರಿಲ್ಲರಿವುದು ಶೀಲಾ ದೀಕ್ಷಿತ್ ಅವರನ್ನು ಅನಿವಾರ್ಯವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿದೆ. ಆದರೆ ಶೀಲಾ ಅವರು ದೆಹಲಿ ಜನರಿಂದ ತಿರಸ್ಕೃತವಾಗಿದ್ದ ಹಳೇ ಮುಖ ಎಂಬುದು ಕಾಂಗ್ರೆಸ್’ಗೆ ಹಿನ್ನಡೆಯಾಗಬಹುದು. ಕಿಸಾನ್ ಯಾತ್ರೆ ನಡೆಸುತ್ತಿರುವ  ರಾಹುಲ್ ಹಾಗೂ ಸೋನಿಯಾ ಗಾಂಧಿ ರಾಜ್ಯದ ಹಲವು ಕಡೆ ಸಮಾವೇಶಗಳನ್ನು ಮಾಡಿದರೂ ಜನರನ್ನು ಕಾಂಗ್ರೆಸ್’ನತ್ತ ಸೆಳೆಯಲು ಯಶಸ್ವಿಯಾಗಿರುವುದು ಅನುಮಾನ. ಪಕ್ಷದ ಮಾಜಿ ಅಧ್ಯಕ್ಷೆ ರೀಟಾ ಬಹುಗುಣ ಜೋಷಿ ಬಿಜೆಪಿ ಸೇರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಎಲ್ಲಾ ಆಧಾರಗಳನ್ನಿಟ್ಟು ಹೇಳುವುದಾದಾರೆ ಕಾಂಗ್ರೆಸ್ ಪಾಲಿಗೆ ಉತ್ತರ ಪ್ರದೇಶ ಸಧ್ಯದ ಮಟ್ಟಿಗೆ ಮುಗಿದ ಅಧ್ಯಾಯ. ಹಲವು ಸಮೀಕ್ಷೆಗಳೂ ಕಾಂಗ್ರೆಸ್ ಎರಡಂಕಿ ಸ್ಥಾನ ಪಡೆಯುವುದೂ ಬಹಳ ಕಷ್ಟ ಅನ್ನುತ್ತಿವೆ. ಇಂತಹ ಸಂದರ್ಭದಲ್ಲಿ ಕೇವಲ ಪ್ರಶಾಂತ್ ಅವರ ಜಾದೂ ಮೇಲೆ ಕಾಂಗ್ರೆಸ್ ಅವಲಂಬಿತವಾಗಿರುವುದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಪ್ರಶಾಂತ್ ಕಿಶೋರ್ ಬತ್ತಳಿಕೆಯಲ್ಲಿ ಪ್ರಚಾರದ ಅನೇಕ ತಂತ್ರಗಳಿರಬಹುದು ಮತ್ತು ಮೋದಿ ಹಾಗೂ ನಿತೀಶ್ ಗೆಲುವಿನಲ್ಲಿ ಪ್ರಶಾಂತ್ ಪಾಲೂ ಇರಬಹುದು. ಆದರೆ ಆಗಿನ ಸಂದರ್ಭವೇ ಬೇರೇ, ಉತ್ತರ ಪ್ರದೇಶದ ಕಾಂಗ್ರೆಸ್ ಸ್ಥಿತಿಗತಿಯೇ ಬೇರೆ. ಹೀಗಿರುವಾಗ ಮೂವತ್ತಿಕ್ಕಿಂತ ಜಾಸ್ತಿ ಸ್ಥಾನಗಳು ಕಾಂಗ್ರೆಸ್’ಗೆ ಬಂದರೆ ಅದುವೇ ದೊಡ್ಡ ಸಾಧನೆಯಾಗಿ ಬಿಡುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಬಹಳ ದೊಡ್ದ ಪ್ರಮಾಣದಲ್ಲಿ ಉತ್ತರ ಪ್ರದೇಶದ ಮತದಾರರ ಒಲವನ್ನು ಗಳಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷ ಮತ್ತೆ ಮೋದಿ ಅಲೆಯನ್ನೇ ನೆಚ್ಚಿಕೊಂಡಿದೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ ಜನರ ಮುಂದೆ ಹೋಗುವುದು ಬಹಳ ಲೆಕ್ಕಾಚಾರದ ನಿರ್ಧಾರವೆಂದು ಹೇಳಲಾಗುತ್ತಿದ್ದರೂ ಇದರಿಂದ ವಿರೋಧಿಗಳ ಕೈಗೆ ಬಹುದೊಡ್ಡ ಟೀಕಾಸ್ತ್ರ ಕೊಟ್ಟಂತಾಗಿದೆ. ಸ್ಥಳೀಯ ನಾಯಕತ್ವದ ಸಾಮರ್ಥ್ಯದ ಮೇಲೆ  ಮೋದಿ ಮತ್ತು ಅಮಿತ್ ಶಾಗೆ ನಂಬಿಕೆ ಇಲ್ಲದಿರುವುದು ಅಭ್ಯರ್ಥಿ ಘೋಷಣೆಯಾಗದಿರಲು ಕಾರಣ ಎಂದು ಅಂದಾಜಿಸಲಾಗುತ್ತಿದೆ. ಮೇಲ್ಜಾತಿ, ಓಬಿಸಿ ಮತ್ತು ದಲಿತ ಮತಗಳು ಹರಿದು ಬಂದದ್ದೇ ಆದಲ್ಲಿ ಮತ್ತೊಮ್ಮೆ ಬಿಜೆಪಿ ಉತ್ತರ ಪ್ರದೇಶದ ಅಧಿಕಾರ ಪಡೆಯುವುದರಲ್ಲಿ ಸಂಶಯವೇ ಇಲ್ಲ.  ಪಾಕಿಸ್ತಾನದ ಮೇಲೆ ಇತ್ತೀಚಿಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಿಜೆಪಿಗೆ ವರದಾನವಾಗುವ ಲಕ್ಷಣಗಳಿವೆ. ಹಿಂದುತ್ವದ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಮತ್ತು ವರುಣ್ ಗಾಂಧಿ ಕೂಡಾ ಮತದಾರರ ಮೇಲೆ ಪ್ರಭಾವ ಬೀರುವಂತಹ ನಾಯಕರುಗಳು.

ಆದರೆ ಚುನಾವಣಾ ಸಂದರ್ಭದಲ್ಲಿ ಬೇರೆ ಪಕ್ಷದ ನಾಯಕರುಗಳು ಬಹಳ ದೊಡ್ದ ಪ್ರಮಾಣದಲ್ಲಿ ಬಿಜೆಪಿಗೆ ವಲಸೆ ಬರುತ್ತಿದ್ದು ಇದು ಬಿಜೆಪಿಗೆ ಸಹಕಾರಿಯಾಗುತ್ತೋ ಅಥವಾ ಮೂಲ ನಿವಾಸಿ ಮತ್ತು ವಲಸಿಗರ ನಡುವೆ ತಿಕ್ಕಾಟಕ್ಕೆ ಕಾರಣವಾಗುತ್ತೋ ನೋಡಬೇಕು. ಪಕ್ಷದ ಯುವ ಘಟಕದಲ್ಲಿ ಎದ್ದ ಬಂಡಾಯಕ್ಕೆ ತಾತ್ಕಾಲಿಕ ತೇಪೆ ಹಾಕಲು ಅಮಿತ್ ಶಾ ಯಶಸ್ವಿಯಾಗಿದ್ದರೂ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಪದಾಧಿಕಾರಿಗಳ ನೇಮಕದಲ್ಲಿ ಮಾಡಿದ ಎಡವಟ್ಟುಗಳಿಗೂ ಅಪಸ್ವರ ಎದ್ದಿದೆ.

ಹನಿಟ್ರ್ಯಾಪ್’ನಲ್ಲಿ ವರುಣ್ ಗಾಂಧಿ ಹೆಸರು ಸೇರಿಕೊಂಡಿರುವುದು ಪಕ್ಷಕ್ಕೆ ಬಹುದೊಡ್ಡ ಹಿನ್ನಡೆಯೆಂದೇ ಅಂದಾಜಿಸಲಾಗುತ್ತಿದೆ. ರಾಮ ಮಂದಿರ ನಿರ್ಮಾಣದ ಗುಂಗಿನಿಂದ ಬಿಜೆಪಿ ಹೊರಬಂದು ಅಭಿವೃದ್ಧಿ ಜಪ ಮಾಡುತ್ತಿದೆ. ಜಾತಿ ಲೆಕ್ಕಾಚಾರ ಮತ್ತು ಅಭಿವೃದ್ಧಿ ಮಂತ್ರ ಹಾಗೂ ಮೋದಿ, ಅಮಿತ್ ಶಾ ತಂತ್ರ ಬಿಜೆಪಿಯ ಅಸ್ತ್ರಗಳಾಗಿವೆ. ಅಪ್ನಾದಳ್ ಮತ್ತು ಭಾರತೀಯ ಸಮಾಜ ಪಕ್ಷ ಬಿಜೆಪಿಯ ಜೊತೆಗಿರುವುದು ಕೂಡಾ ಪ್ಲಸ್ ಪಾಯಿಂಟ್.

ವಿಧಾನಸಭಾ ಚುನಾವಣಾ ಕಾವು ನಿಧಾನವಾಗಿ ಏರಲಾರಂಭಿಸಿದೆ. ಚುನಾವಣಾ ಪೂರ್ವ ಚಟುವಟಿಕೆಗಳು ಗರಿಗೆದರಿವೆ. ಸಮಾವೇಶ, ರಥಯಾತ್ರೆಗಳ ಮೂಲಕ ಜನರನ್ನು ಓಲೈಸಲು ಪಕ್ಷಗಳು ತಾಮುಂದು ನಾಮುಂದು ಅನ್ನೋ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಹೆಚ್ಚಿನ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಮತ್ತು ಬಿಎಸ್ಪಿ ಪರವಾಗಿ ಬಂದಿವೆ. ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಹಾಟ್ ಫೇವರೀಟ್ ತರ ಕಾಣುತ್ತಿದ್ದು, ಮಾಯಾವತಿಯವರನ್ನು ಯಾವುದೇ ಕಾರಣದಲ್ಲೂ ಕಡೆಗಣಿಸಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಯೇ ಗಜಪಡೆಯ ಬಹುದೊಡ್ದ ಅಸ್ತ್ರವಾಗಿದ್ದು ನರೇಂದ್ರ ಮೋದಿ ಅಲೆಯ ಮುಂದೆ ಆನೆ ಘೀಳಿಡುತ್ತಾ ಅಥವಾ ಬಾಲ ಮುದುರಿಸುತ್ತಾ ಅನ್ನೋದೇ ಕುತೂಹಲ. ಕಾಂಗ್ರೆಸ್ , ಎಸ್ಪಿ, ಆರ್ಜೆಡಿ, ಜೆಡಿಯು ಮಹಾಘಟ್ಬಂದನ್ ಮಾಡುವ ಕನಸು ಕಾಣುತ್ತಿವೆ. ಒಟ್ಟಿನಲ್ಲಿ ಜಾತಿ ಮಂತ್ರವೇ ಪ್ರಬಲವಾಗಿರುವ ಉತ್ತರ ಪ್ರದೇಶದಲ್ಲಿ ಮತದಾರರ ಮನವೋಲೈಕೆ ಮಾಡುವಲ್ಲಿ ಯಾರ ತಂತ್ರ ಫಲಿಸುತ್ತೋ ಕಾದು ನೋಡಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!