ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೯
ಪರಬ್ರಹ್ಮವೆಂಬ ಒಂಟಿ ಕೈಯ ಚಪ್ಪಾಳೆ !
___________________________________
ಎರುಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು |
ಒರುವನಾಡುವುದೆಂತು – ಮಂಕುತಿಮ್ಮ || ೨೯ ||
ಈ ಪದ್ಯದಲ್ಲಂತು ನಮ್ಮ ವೇದಾಂತಿಕ, ತತ್ವಶಾಸ್ತ್ರದ ನಂಬಿಕೆಯ ಸಾರವೆ, ಹಿಂಡಿ ಸೋಸಿದ ರಸದಂತೆ ಕಾಣಿಸಿಕೊಂಡಿದೆ. ಇಲ್ಲಿ ಗೊತ್ತಿರಬೇಕಾದ ಮುಖ್ಯ ಹಿನ್ನಲೆಯೆಂದರೆ ನಮ್ಮ ದೇವರುಗಳ ಕುರಿತಾದ ನಂಬಿಕೆಯ ಹಿಂದಿರುವ ಸ್ಥೂಲ, ಮೂಲಾಧಾರ ಕಲ್ಪನೆ.
ನಮಗೆ ತಿಳಿದಿರುವಂತೆ, ನಾವು ಪೂಜಿಸುವ ದೇವರುಗಳು ನೂರಾರು, ಸಾವಿರಾರು. ಮುಕ್ಕೋಟಿಗು ಮಿಗಿಲಾದ ದೇವತೆಗಳಿದ್ದಾರೆಂದೆನ್ನುತ್ತದೆ ನಮ್ಮ ಪುರಾಣಗಳ ಕಡತ. ಆದರೆ ಅದು ಬಾಹ್ಯದ ಮೇಲ್ಪದರದ ಧ್ಯಾನ. ತುಸು ಆಳವಾದ ಅಧ್ಯಯನಕ್ಕೆ ಹೊಕ್ಕರೆ ಅನಾವರಣವಾಗುವ ಕಲ್ಪನೆಯೆಂದರೆ ಇರುವುದೊಂದೆ ದೈವ – ಅದೇ ಪರಬ್ರಹ್ಮ. ಮಿಕ್ಕೆಲ್ಲವೂ ಆ ಮೂಲ ಸ್ವರೂಪದ ವಿವಿಧ ಸೃಷ್ಟಿ ರೂಪಾಂತರಗಳು ಎಂದು. ಈ ಹಿನ್ನಲೆಯಲ್ಲೆ ಕವಿಯಲ್ಲಿ ಮೂಡುವ ಸಂದೇಹಗಳು ಇಲ್ಲಿ ಅಂತಿಮ ಪ್ರಶ್ನೆಯಾಗಿ ಕಾಣಿಸಿಕೊಂಡಿವೆ.
ಮೊದಲಿಗೆ, ಪರಬ್ರಹ್ಮನ ಮೂಲರೂಪೆ ಚಿಗುರೊಡೆದ ಶಾಖೆಗಳಾಗಿ ಮಿಕ್ಕೆಲ್ಲರ ರೂಪಾಗಿ ಪ್ರಕಟವಾಗಿದೆಯೆಂದು ಅಂದುಕೊಂಡೆ ಮುಂದುವರೆದರೆ – ಆ ಸಾಕ್ಷಾತ್ ಪರಬ್ರಹ್ಮನು ಸೌಮ್ಯರೂಪಿ ಶಿವ ಮತ್ತು ಭಯಂಕರ ರೂಪಿ ರುದ್ರನ ರೂಪದಲ್ಲೂ ಕಾಣಿಸಿಕೊಳ್ಳುತ್ತಾನೆ. ಒಂದೆಡೆ ಸೌಮ್ಯ ರೂಪಿ ಶಿವನಿರುವ ಸತ್ಯವಾದರೆ ಮತ್ತೊಂದೆಡೆ ರೌದ್ರ ರೂಪಿ ರುದ್ರನೂ ಇರುವ ಸತ್ಯ – ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಅನಾವರಣವಾಗುವ ಬಗೆ ಇಲ್ಲಿ ಪ್ರತಿಬಿಂಬಿತ.
ಅದೇ ತರ್ಕದಲ್ಲಿ ವಿಷ್ಣುವಿನ ಪರಿಗಣನೆಗಿಳಿದರೆ ಒಂದೆಡೆ ಮನಮೋಹಕ ಗಾಯನದ ಸುಧೆಯುಣಿಸುವ ಮೋಹನ ಮುರುಳಿ, ಅರ್ಥಾತ್ ಕೊಳಲನ್ಹಿಡಿದ ಕೃಷ್ಣನ ರೂಪ ಅನುಭವಕ್ಕೆ ಬಂದರೆ ಮತ್ತೊಂದೆಡೆ ಅದೇ ಗೊಲ್ಲರಗೊಲ್ಲನ ಕೈಯಲ್ಲಿ ಯುದ್ಧ ಕಹಳೆಯನೂದುವ, ಪಾಂಚಜನ್ಯ ಶಂಖವಿರುವ ಅವತಾರ ಕಾಣಿಸಿಕೊಳ್ಳುತ್ತದೆ. ಹೀಗೆ ಒಬ್ಬನದೆ ವ್ಯಕ್ತಿತ್ವದ ಹೊದಿಕೆಯಡಿಯಲ್ಲಿ ಎರಡು ಪರಸ್ಪರ ವಿರೋಧಾಭಾಸದ ಗುಣಾವಗುಣಗಳ ಸಂಕಲನ ಕಂಡುಬರುತ್ತದೆ. ಇವೆರಡರಲ್ಲಿ ಯಾವುದು ಅವರ ನೈಜಗುಣ ಎಂದು ಭಾವಿಸಬೇಕೆನ್ನುವ ಗೊಂದಲ ಕವಿಯನ್ನು ಕಾಡುತ್ತದೆ. ಸಮಯಕ್ಕೆ ತಕ್ಕಂತೆ ಎರಡನ್ನು ಬಳಸಿದ ಹಿನ್ನಲೆಯಲ್ಲಿ ಎರಡೂ ದಿಟವಾದ ನೈಜ ಗುಣಗಳೆ ಇರಬಹುದೇ ಎಂಬ ಅನುಮಾನವೂ ಎಡತಾಕುತ್ತದೆ.
ಕೊನೆಗೆ ಆ ಸಂಶಯಗಳೆಲ್ಲ ಸಂಗಮಿಸಿದ ಅಚ್ಚರಿ ವಿಸ್ಮಯದ ರೂಪ ತಾಳುತ್ತ, ಒಂದು ಮಾಮೂಲಿ ಚಿಟಿಕೆ ಹೊಡೆಯಲೂ ಕನಿಷ್ಠ ಎರಡು ಬೆರಳಿರಬೇಕು. ಅಂತಿರುವಾಗ ಆ ದೇವರೆನಿಸಿಕೊಂಡ ಅವನೊಬ್ಬನೆ ಹೀಗೆ ಎರಡು ಅಥವಾ ಅದಕೂ ಮಿಕ್ಕಿದ ಬಗೆ ಬಗೆ ಪಾತ್ರಗಳನ್ನಾಡುವುದಾದರೂ ಎಂತೊ? ಇದೊಂದು ಒಂಟಿ ಕೈಲಿ ಹೊಡೆವ ಚಪ್ಪಾಳೆಯಂತೆ ಕಾಣುವುದಲ್ಲ ? ಎಂದು ತನ್ನಲ್ಲೆ ಅದರ ತಾಂತ್ರಿಕ ಸಾಧ್ಯಾಸಾಧ್ಯತೆಯನ್ನು ಪ್ರಶ್ನೆಯಾಗಿಸಿಕೊಂಡು ಮಥಿಸಿಕೊಳ್ಳತೊಡಗುತ್ತದೆ.
ಇದನ್ನೆ ಮತ್ತೊಂದು ದೃಷ್ಟಿಕೋನದಿಂದ ನೋಡಿದರೆ ಇದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಂತರ್ಗತವಾಗಿರುವ ಒಳ್ಳೆಯತನ ಮತ್ತು ಕೆಟ್ಟತನಗಳ ಮಿಶ್ರಣದ ಸೂಕ್ಷ್ಮ ಇಂಗಿತವನ್ನು ನೀಡುತ್ತದೆ. ಅಗತ್ಯಕ್ಕನುಗುಣವಾಗಿ ನಾವು ತೆರೆದಿಡುವ ನಮ್ಮ ಸ್ವರೂಪ ತಾಮಸ ಅಥವಾ ಸಾತ್ವಿಕ ರೂಪಾಗಿ ಹೊರಹೊಮ್ಮುವ ರೀತಿ ಕೂಡ ಈ ದೈವಿಕ ವಿನ್ಯಾಸದ ಮತ್ತೊಂದು ಆಯಾಮದಂತೆ ಕಾಣಿಸಿಕೊಳ್ಳುತ್ತದೆ.
ಹಿಂದಿನ ಹಲವು ಕಗ್ಗಗಳಲ್ಲಿ ಕಾಣಿಸಿಕೊಂಡಂತೆ ಇಲ್ಲಿಯೂ, ಅದೇ ಎದ್ದು ಕಾಣುವ ದ್ವಂದ್ವದ ಗೊಂದಲ ಭಾವವೆ ಪ್ರಶ್ನೆಯ ಮೂಲ ಸ್ವರೂಪವಾಗಿರುವುದನ್ನು ಕಾಣಬಹುದು.