ಭಾರತೀಯ ಧಾರ್ಮಿಕ ಪರಂಪರೆಯಲ್ಲಿ “ಶಕ್ತಿ”ಯ ಸ್ಥಾನ ವಿಶಿಷ್ಟವಾದುದು. ಸೃಷ್ಟಿ ಸ್ಥಿತಿ ಲಯಕಾರಣರಾದ ತ್ರಿಮೂರ್ತಿಗಳ ತೂಕ ಒಂದೆಡೆಯಾದರೆ ಅವರು ಮೂವರನ್ನೂ ಕಿರು ಬೆರಳ ತುದಿಯಲ್ಲಿ ಕೂರಿಸಿ ಆಡಿಸಬಲ್ಲ ಶಕ್ತಿಯದ್ದೇ ಒಂದು ತೂಕ. ಕೋಟ್ಯಂತರ ವರ್ಷಗಳಷ್ಟು ಕಾಲ ಬೆಳಕಿನ ವೇಗದಲ್ಲಿ ಓಡಿದರೂ ಕೊನೆ ಮುಟ್ಟಲಾರದ ಅನಂತ ಬೃಹ್ಮಾಂಡದ ಗುಟ್ಟು ಲಕ್ಷಾಂತರ ಪಟ್ಟು ಹಿಗ್ಗಿಸಿದರೂ ಕಾಣದ ದೇವಕಣದಲ್ಲಿರುವ ಹಾಗೆ, ಶಕ್ತಿಯ ಸ್ವರೂಪ ಏಕಕಾಲಕ್ಕೆ ಅಣೋರಣೀಯ ಮತ್ತು ಮಹತೋಮಹೀಯ. ಅವಳು ಲಲಿತೆ – ಸುಲಭಗ್ರಾಹ್ಯಳು, ಸುಲಭದಲ್ಲಿ ಒಲಿಯುವವಳು. ಆಕೆ ದುರ್ಗೆ – ಕೈಗೆ ಸಿಗದ ದುರ್ಗಮ ಶಕ್ತಿ, ಯಾವುದಕ್ಕೂ ಸುಲಭದಲ್ಲಿ ಒಲಿಯದ ಕಠೋರೆ. ಆಕೆ ಕಾಮಾಕ್ಷಿ – ಕಣ್ಣಬಟ್ಟಲುಗಳಲ್ಲಿ ಎಲ್ಲ ಬಯಕೆಯ ಬುಗ್ಗೆಗಳನ್ನು ತುಂಬಿಕೊಂಡವಳು. ಆಕೆ ಕಾಳಿ – ದುಷ್ಟರ ನಿಗ್ರಹಕ್ಕಾಗಿ ಅವತರಿಸಿದ ಬೆಂಕಿಯ ಚೆಂಡು. ಆಕೆ ಮಹಾಮಾಯೆಯೂ ಹೌದು, ಚಾಮುಂಡಿಯೂ ಹೌದು. ಉಳಿದ ದೇವರುಗಳನ್ನು ಅರ್ಥೈಸಿಕೊಂಡಂತೆ ಒಂದೆರಡು ಪುಟಗಳಲ್ಲಿ ಹಿಡಿದಿಡಬಹುದಾದ ಸರಳ ವ್ಯಕ್ತಿತ್ವ ಅವಳದಲ್ಲ.
ದೇವಿಯನ್ನು ಅವಳ ಸೌಮ್ಯ ರೂಪದಲ್ಲಿ ಪೂಜಿಸುವ ಹಾಗೆಯೇ ಆಕೆಯ ಉಗ್ರರೂಪದಲ್ಲೂ ನಾವು ಅವಳನ್ನು ಸ್ವೀಕರಿಸಿದ್ದೇವೆ. ಶೃಂಗೇರಿಯ ಶಾರದೆ, ಮೈಸೂರಿನ ಚಾಮುಂಡಿ, ಸೊಲ್ಲಾಪುರದ ಮಹಾಲಕ್ಷ್ಮಿ, ಬಂಗಾಳದ ಕಾಳಿ – ಹೀಗೆ ದುರ್ಗೆಯ ಸುಕೋಮಲ ಮುಖವನ್ನೂ ಬೀಭತ್ಸ ರೂಪವನ್ನೂ ಒಂದೇ ಶಕ್ತಿಯ ಅವತಾರಗಳೆಂದು ನಂಬಿ ಪೂಜಿಸುವ ಹಿಂದೂ ಸಂಸ್ಕತಿಯ ಕ್ರಮ ಪಾಶ್ಚಾತ್ಯರಿಗೆ ವಿಚಿತ್ರವೆಂದೇ ತೋರಬಹುದು. ನವರಸಗಳಿರುವ ಹಾಗೆ, ದೇವಿ ನವರೂಪಗಳನ್ನು ತೋರುತ್ತಾಳೆ. ಭೀಕರತೆಯ ಅಡಿಯಲ್ಲಿ ಮಮತೆಯ ಸೋನೆ ಸುರಿಸುತ್ತಾಳೆ. ಕಾರುಣ್ಯದ ಬಗಲಲ್ಲೇ ಕಾಠಿಣ್ಯದ ಸ್ತರವನ್ನೂ ತೋರಿಸುತ್ತಾಳೆ. ಕೆದಕಿದಷ್ಟೂ ಅಚ್ಚರಿಗಳನ್ನು ಅಡಗಿಸಿಕೊಂಡ ಪ್ರಕೃತಿಯ ಕಾಣದ ಕೈಗಳ ಹಾಗೆ ದೇವಿಯ ವಿಶ್ವರೂಪಕ್ಕೆ ಹತ್ತಾರು ಮೈ, ನೂರೆಂಟು ಕೈ.
ಈ ಹಿನ್ನೆಲೆಯನ್ನಿಟ್ಟುಕೊಂಡು ನಾವು ಕಾಮಾಖ್ಯಳ ದರ್ಶನ ಮಾಡಬೇಕಾಗುತ್ತದೆ. ಏಕೆಂದರೆ ಕಾಮಾಖ್ಯ – ಕೇವಲ ಒಂದು ಸಲ ಕೈ ಮುಗಿದು ಮೂರು ಸಲ ಸುತ್ತು ಹಾಕಿ ಬರುವಂತಹ ದೇವಾಲಯವಲ್ಲ. ಬಗೆದಷ್ಟೂ ಹೊಸ ಅರ್ಥಗಳನ್ನು ಅರ್ಥಸ್ತರಗಳನ್ನೂ ಕಟ್ಟಿ ಕೊಡುತ್ತಾ ಹೋಗುವ “ಕಾಮ” ಎಂಬ ವಿಶಿಷ್ಟ ಶಬ್ದವನ್ನು ತನ್ನ ಹೆಸರಿನ ಆದಿಯಲ್ಲಿಯೇ ಅಂಟಿಸಿಕೊಂಡ ದೇವಿಯ ಅನನ್ಯ ರೂಪವನ್ನು ತೋರಿಸುವ ದೇವಾಲಯವಿದು. ಇಲ್ಲಿ ಕಾಮ ಎಂದರೆ “ಸೆಕ್ಸ್” ಅಲ್ಲ. ಅದು ನಾವು ಮೇಲು ಮೇಲಕ್ಕೆ ಮಾಡಿಕೊಂಡ ಅತ್ಯಂತ ತೆಳು ಅರ್ಥ. ಈ ದೇವಿ ಹೇಳುವ ಕಾಮ ಅದಕ್ಕಿಂತ ಬಹಳ ಭಿನ್ನವಾದ ಆಸೆ, ಬಯಕೆ, ಅಭೀಪ್ಸೆ, ಅಭಿಲಾಷೆಗಳ ಕುರಿತಾದದ್ದು. “ಬಯಕೆಗಳನ್ನು ಹೊತ್ತು ನನ್ನಲ್ಲಿ ಬಂದವರಿಗೆ ಬೊಗಸೆ ತುಂಬ ಪ್ರತಿಫಲ ಕೊಡುತ್ತೇನೆ” ಅನ್ನುವ ದೇವಿ ಕಾಮಾಖ್ಯ. ಕಾಡನ್ನು ಸುಡುವ ಬೆಂಕಿಯ ನಾಲಗೆ ಚಂದನದ ಮರದೊಳಗೆ ಗುಪ್ತವಾಗಿ ಕೂತಿರುವಂತೆ, ಬಯಕೆಗಳು ಬಾಳನ್ನೇ ಸುಡುವ ದಾವಾನಲವಾಗದೆ ಅಂತಸ್ಸತ್ವವನ್ನು ಕಾಪಿಡುವ ಚೇತನ ಶಕ್ತಿಯಾಗಲಿ ಎನ್ನುತ್ತಾಳೆ ಇವಳು. ಹಾಗಾಗಿಯೇ, ದೇಶದ ಭಕ್ತ ಸಮೂಹವನ್ನು ಸೆಳೆಯುವ ಚುಂಬಕ ಶಕ್ತಿಯಾಗಿ ಕಾಮಾಖ್ಯ ಕಂಗೊಳಿಸುತ್ತಾಳೆ. ಒಲಿದು ಬಂದ ಭಕ್ತರ ಮನಸ್ಸಿನ ಕೊಳೆ ಕಳೆದು, ಕಾಮದ ಕಣ್ಣಿಗೆ ಕಾಡಿಗೆ ಹಚ್ಚಿ ಸ್ವಚ್ಛಗೊಳಿಸುತ್ತಾಳೆ.
ಭೋರ್ಗರೆವ ಬ್ರಹ್ಮಪುತ್ರ (ಆಸ್ಸಾಮಿ ಭಾಷೆಯಲ್ಲಿ ಇದನ್ನು “ಲೋಹಿತ್” ಎಂದೂ ಕರೆಯುತ್ತಾರೆ) ನದಿಯ ದಕ್ಷಿಣ ತೀರದಲ್ಲಿ, ನಮ್ಮ ಮೈಸೂರಿನ ಚಾಮುಂಡಿ ಬೆಟ್ಟದ ಹಾಗೆ, ತಲೆಯೆತ್ತಿ ನಿಂತ ನೀಲಾಚಲ ಬೆಟ್ಟದ ನಡುವೆ ಇರುವ ಪ್ರಖ್ಯಾತ ಧಾರ್ಮಿಕ ಶೃದ್ಧಾ ಕೇಂದ್ರ ಮತ್ತು ಶಕ್ತಿ ಪೀಠವೇ ಕಾಮಾಖ್ಯ. ಇದು ಆಸ್ಸಾಮಿನ ರಾಜಧಾನಿ ಗುವಾಹಟಿಯ ಪ್ರಮುಖ ಧಾರ್ಮಿಕ ಸ್ಥಳ ಮತ್ತು ಪ್ರವಾಸಿ ತಾಣ. ಭಾಗವತ ಮತ್ತು ಪುರಾಣಗಳಲ್ಲೂ ಕಾಮಾಖ್ಯಳ ಉಲ್ಲೇಖ ಇರುವುದರಿಂದ ಸಹಸ್ರಾರು ವರ್ಷಗಳಿಂದಲೂ ಈ ಶಕ್ತಿ ಪೀಠ ಭಕ್ತರ, ಸಾಧು-ಸಂತರ, ತಂತ್ರ ಸಾಧಕರ ನೆಲೆಯಾಗಿತ್ತೆಂದು ಹೇಳಬಹುದು.
ಆಸ್ಸಾಮಿನ ಕಾಮರೂಪ ಜಿಲ್ಲೆಯಲ್ಲಿ 16ನೇ ಶತಮಾನದಲ್ಲಿ ನವೀಕರಿಸಲ್ಪಟ್ಟ ಈ ದೇವಾಲಯದಲ್ಲಿ ಕಾಳಿಕಾ ಪುರಾಣ ಮತ್ತು ಯೋಗಿನೀ ತಂತ್ರಕ್ಕೆ ಅನುಸಾರವಾಗಿ ಕಾಮಾಖ್ಯ ದೇವಿಯ ಪೂಜೆ ನಡೆಸಲ್ಪಡುತ್ತದೆ. ಪುರಾಣ ಕಾಲದಲ್ಲಿ ಗಾರೋ ಬೆಟ್ಟದ ಮೇಲೆ ಕಟ್ಟಲ್ಪಟ್ಟಿದ್ದ ಇದೇ ದೇವಿಯ ಒಂದು ದೇವಾಲಯ ನಾಶವಾದ ಮೇಲೆ, ಅಲ್ಲಿದ್ದ ಅರ್ಚಕರು, ಆಕೆಯ ವಿಗ್ರಹವನ್ನು ತಮ್ಮ ಜೊತೆ ಕಾಶ್ಮೀರಕ್ಕೆ ಒಯ್ದರಂತೆ. ಅಲ್ಲಿಂದ ಮುಂದೆ, ಹಿಮಾಚಲದ ಒಂದು ಗುಪ್ತಸ್ಥಳದಲ್ಲಿ ಪ್ರತಿಷ್ಠಾಪಿಸಿದರೆಂದು ಪ್ರತೀತಿ. ಆಸ್ಸಾಮಿನಲ್ಲಿ 17ನೇ ಶತಮಾನದಲ್ಲಿ ಆಳುತ್ತಿದ್ದ ಅಹೋಮ್ ರಾಣಿ ಫುಲೇಶ್ವರಿ, ದುರ್ಗಾಪೂಜೆಗೆ ವಿಶೇಷ ಸ್ಥಾನಮಾನ ಕೊಟ್ಟ ಮೇಲೆ, ದುರ್ಗೆಯ ದೇವಾಲಯವಾದ ಕಾಮಾಖ್ಯ ನವರಾತ್ರಿಯ ಬಹುಮುಖ್ಯ ಆಕರ್ಷಣೆಯಾಯಿತು.
ಕಾಮಾಖ್ಯ – ಆಸ್ಸಾಮಿನ ಮಾತ್ರವಲ್ಲ, ಈಶಾನ್ಯ ಭಾರತದ ಬಹುಮುಖ್ಯ ದೇವಾಲಯ. ಮೂಲ ದೇಗುಲ ಪರಿಪೂರ್ಣವಾಗಿ ಕಲ್ಲಿನಿಂದ ರಚಿತವಾದದ್ದು. ಇದರ ಹೊರಾಂಗಣದಲ್ಲಿ ಅರವತ್ತ ನಾಲ್ಕು ಯೋಗಿನಿಯರು ಮತ್ತು ಹದಿನೆಂಟು ಭೈರವರ ಪ್ರತಿಮೆಗಳನ್ನು ಕಲ್ಲಿನ ಗೋಡೆಯ ಮೇಲೆ ಕೆತ್ತಲಾಗಿದೆ. ಆಸ್ಸಾಮನ್ನು ಆಳಿದ ‘ಅಹೋಂ’ ರಾಜರೂ ಇತರ ಭಾಗಗಳಿಂದ ಇಲ್ಲಿಗೆ ಬಂದ ರಾಜವಂಶಗಳೂ ಕಾಮಾಖ್ಯ ದೇವಿಗೆ ಭಕ್ತರಾಗಿದ್ದರು. ಇವರೆಲ್ಲ ದೇಗುಲವಿರುವ ಪ್ರದೇಶದಲ್ಲಿ ಹೊಸ ಹೊಸ ಕಟ್ಟೋಣಗಳನ್ನು ಬೆಳೆಸಿದರು. ಅಲ್ಲದೆ ಕಾಮಾಖ್ಯ ದೇವಿಗೆ ಪೂಜೆ ಸಲ್ಲಿಸಲು ದೇಶದ ನಾನಾ ಭಾಗಗಳಿಂದ ಪಂಡಿತರನ್ನು, ಪೂಜಾರಿಗಳನ್ನು ಕರೆತಂದು ರಾಜಾಶ್ರಯ ಕೊಟ್ಟು ಸಾಕಿದರು. ವೇದ ಪುರಾಣ ಸಂಹಿತೆಗಳಲ್ಲಿ ಸಂಪೂರ್ಣ ಪಾಂಡಿತ್ಯ ಗಳಿಸಿ ದೇವಿಯ ಎಲ್ಲ ಪೂಜೆ-ಆಚರಣೆಗಳ ಮೇಲುಸ್ತುವಾರಿ ನೋಡಿಕೊಳ್ಳಲು “ಬ್ರಹ್ಮರು”, ಪೂಜಾ ಕೈಂಕರ್ಯವನ್ನು ಕ್ರಮಬದ್ಧವಾಗಿ ನಡೆಸಲು “ಪೂಜಕರು”, ಪೂಜೆಗಳಲ್ಲಿ ತಕ್ಕ “ಬಿಧಿ” (ಅಂದರೆ “ವಿಧಿ”)ಗಳನ್ನೋದಲು “ಬಿಧಿಪಾಠಕರು”, ಹೋಮಗಳನ್ನು ನಡೆಸಲು “ಹೋತರು”, ದೇವಿಯ ಸ್ತೋತ್ರಗಳ ಮಹಾಸಂಗ್ರಹವಾದ “ಚಂಡಿ”ಯನ್ನು ಓದಲು “ಚಂಡಿಪಾಠಕರು” – ಹೀಗೆ ದೇಗುಲದ ಸಮಸ್ತ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಅರ್ಚಕ ವರ್ಗವನ್ನು ನಾವು ಇಂದಿಗೂ ಕಾಮಾಖ್ಯದಲ್ಲಿ ಕಾಣಬಹುದು. ದೇವಿಯ ಪೂಜೆಯ ಒಂದು ಭಾಗವಾದ ಸಮರ್ಪಣೆ ಮತ್ತು ಭೋಗಕ್ಕೆ ಬೇಕಾದ ಎಲ್ಲಾ ಬಗೆಯ ಭಕ್ಷ್ಯ ಬೋಜ್ಯಗಳನ್ನು ತಯಾರಿಸಲು ದೇಗುಲದಲ್ಲಿ “ಸೂಪಕಾರರು” ಎಂಬ ಬ್ರಾಹ್ಮಣ ಕುಟುಂಬಗಳೂ ಇವೆ. ಇಷ್ಟಲ್ಲದೆ, ದೇವಿ ಮತ್ತು ದೇವಾಲಯಕ್ಕೆ ಸಂಬಂಧಪಟ್ಟ ವಿವಿಧ ಕೆಲಸಗಳನ್ನು ಮಾಡಲು ಅಷ್ಟಪ್ರಹರಿಗಳು, ದುವಾರಿ, ತುಮಲಿ, ಮಾಲಕಾರ, ಪನೇರಿ, ಗಾಯನ ಬಾಯನ – ಹೀಗೆ ಹತ್ತು ಹದಿನೆಂಟು ಗುಂಪುಗಳು ಕಾರ್ಯನಿರತವಾಗಿವೆ. ಕಾಮಾಖ್ಯ ದೇಗುಲದ ಶಿಲ್ಪ ಕಲೆ ಮತ್ತು ಪೂಜೆ ಸಂಪ್ರದಾಯಗಳ ಅಧ್ಯಯನ ಮಾಡಿದರೆ ಆಸ್ಸಾಮಿನ ಚರಿತ್ರೆಯನ್ನೇ ಪುಟಪುಟ ತೆರೆದು ಹೇಳುತ್ತಾ ಹೋಗಬಹುದು.
ಕಾಮಾಖ್ಯ ದೇವಿ ಹದಿನಾರರ ಹರೆಯದ ಬಾಲೆ. ಅದಕ್ಕೇ ಅವಳಿಗೆ “ಷೋಡಶಿ” ಎನ್ನುವ ಹೆಸರೂ ಇದೆ. ಹನ್ನೆರಡು ಕೈಗಳು, ವಿವಿಧ ಬಣ್ಣಗಳಿಂದ ಅಲಂಕೃತವಾದ ಆರು ತಲೆಗಳು, ಕೊರಳಿಂದ ಇಳಿಬಿದ್ದ ಬಗೆಬಗೆಯ ಸರಮಾಲೆಗಳು, ಕೆಂಪು ಸೀರೆ – ಇದು ಆಕೆಯ ಸೊಬಗು. ಹತ್ತು ಕೈಗಳಲ್ಲಿ ಕಮಲ, ತ್ರಿಶೂಲ, ಖಡ್ಗ, ಗಂಟೆ, ಚಕ್ರ, ಬಿಲ್ಲು, ಬಾಣಗಳು, ಕಠಾರಿ, ದಂಡ ಮತ್ತು ಗುರಾಣಿ. ಉಳಿದೆರಡು ಕೈಗಳಲ್ಲಿ ಚಿನ್ನದಿಂದ ಇಲ್ಲವೇ ತಲೆಬುರುಡೆಯಿಂದ ಮಾಡಿದ ಪಾತ್ರೆ. ಹುಲಿಯ ಬೆನ್ನ ಮೇಲೆ ಮಲಗಿದ ಶಿವನ ಹೊಕ್ಕುಳಿಂದ ಎದ್ದು ಅರಳಿದ ಕಮಲದ ಹೂಬಟ್ಟಲಲ್ಲಿ ಕೂತವಳು ಕಾಮಾಖ್ಯೆ. ಅವಳ ಅತ್ತ ಇತ್ತ ಬ್ರಹ್ಮ ಮತ್ತು ವಿಷ್ಣು ನಿಂತಿದ್ದಾರೆ. ಇವಿಷ್ಟು – ಪುರಾಣಗಳು, ಕಾಮಾಖ್ಯೆಯ ಕುರಿತು ಕೊಡುವ ವಿವರಣೆ.
ಕಾಳಿಕಾ ಪುರಾಣದಲ್ಲಿ ಕಾಮಾಖ್ಯಳನ್ನು ತಾಂತ್ರಿಕ ಆರಾಧನೆಯ ಬಹುಮುಖ್ಯ ದೇವತೆಯೆಂದು ಹೇಳಲಾಗಿದೆ. ಆಕೆಯ ಇನ್ನೊಂದು ಹೆಸರೇ ಮಹಾಮಾಯೆ. ತನಗೆ ಬೇಕೆಂದಾಗ ಬೇಕಾದ ರೂಪವನ್ನು ತೊಡುವ ಶಕ್ತಿಯುಳ್ಳ ಮಾಯಾಂಗನೆ ಅವಳು. ಭಕ್ತರಿಂದ, ಬಯಸಿದ್ದನ್ನೆಲ್ಲ ಕೊಡುವ “ಕಾಮೇಶ್ವರಿ” ಎಂದು ಕರೆಸಿಕೊಳ್ಳುವವಳು. “ಮಹಾತ್ರಿಪುರಸುಂದರಿ” ಎಂದು ಭಕ್ತ ಸಮೂಹದಿಂದ ಪೂಜಿಸಿಕೊಳ್ಳುವವಳು. ಕಾಳಿಕಾ ಪುರಾಣ, ಯೋಗಿನಿ ತಂತ್ರ, ಕಾಮಾಖ್ಯ ತಂತ್ರಗಳಲ್ಲಿ ಅವಳನ್ನೆ “ಕಾಳಿ” ಎಂದೂ ಕರೆಯಲಾಗುತ್ತದೆ. ಕಾಮಾಖ್ಯೆಯ ಹತ್ತು ವಿವಿಧ ಅವತಾರಗಳನ್ನು ದಶ ಮಹಾವಿದ್ಯೆಗಳು ಎಂದು ಕರೆಯುತ್ತಾರೆ. ಈ ಹತ್ತು ರೂಪಗಳಿಗೂ ದೇವಾಲಯದ ಪ್ರಾಂಗಣದಲ್ಲಿ ಪೂಜೆ, ಆರತಿ, ಆರಾಧನೆ ಇದೆ.
ಇಷ್ಟೆಲ್ಲ ವಿಧಗಳಿಂದ ಹೊಗಳಿಸಿಕೊಳ್ಳುವ, ವಿವಿಧ ರೀತಿಯ ಪೂಜೆ ಪುನಸ್ಕಾರಗಳಿಂದ ಮಿಂದೇಳುವ ಆ ತಾಯಿಯ ಗರ್ಭಗುಡಿಯ ಮೂಲ ವಿಗ್ರಹ ಹೇಗಿರಬಹುದು ಎಂಬ ಕುತೂಹಲ ಹುಟ್ಟುವುದು ಸಹಜ. ವಿಶೇಷವೆಂದರೆ ಕಾಮಾಖ್ಯ ದೇಗುಲದ ಗರ್ಭಗುಡಿಯಲ್ಲಿ ದೇವಿಯ ವಿಗ್ರಹವೇ ಇಲ್ಲ! ದೇಗುಲದ ನಡುಮಧ್ಯೆ ಒಂದು ಕಲ್ಲಿನ ಯೋನಿ ಪೀಠವಿದೆ. ಶಿವನ ತಾಂಡವದ ಸಮಯದಲ್ಲಿ ಸತಿಯ ದೇಹದಿಂದ ಬಿದ್ದು ಭೂಮಿಯನ್ನು ನೀಲ ಬಣ್ಣಕ್ಕೆ ತಿರುಗಿಸಿದ ಯೋನಿಯ ಕುರುಹಾಗಿ ಈ ಪೀಠ. ಈ ಪೀಠವನ್ನು ಭಕ್ತರು ಮುಟ್ಟಬಹುದು, ತಮ್ಮ ಪೂಜೆ ಸಲ್ಲಿಸಬಹುದು, ಕುಂಕುಮ ಲೇಪಿಸಬಹುದು, ಹೂಮಾಲೆಗಳನ್ನು ಹಾಕಬಹುದು. ಭಕ್ತರು ಮನ:ಪೂರ್ವಕವಾಗಿ ಮಾಡುವ ಯಾವುದೇ ವಿಧವಾದ ಪೂಜೆಯೂ ಸ್ವೀಕಾರಾರ್ಹ ಎನ್ನುವುದು ಕಾಳಿಕಾ ಪುರಾಣದ ವಿವರಣೆ.
ಕಾಮಾಖ್ಯದ ಇನ್ನೊಂದು ವೈಚಿತ್ರ್ಯವೆಂದರೆ, ಅಲ್ಲಿ ನಡೆಯುವ ಬಲಿ. ಕಾಳಿಯ ದೇವಸ್ಥಾನವಾದ್ದರಿಂದ ಮತ್ತು ತಾಂತ್ರಿಕ ವಿದ್ಯೆಯ ಪ್ರಮುಖ ಶಕ್ತಿ ಪೀಠವಾಗಿರುವುದರಿಂದ ಅದರ ಒಂದು ಅಂಗವಾದ ಬಲಿ ಆಚರಣೆಗೆ ಇಲ್ಲಿ ವಿಶೇಷ ಸ್ಥಾನ. ಮುಖ್ಯವಾಗಿ ಆಡುಗಳು, ಕುರಿಗಳು ಮತ್ತು ಪಾರಿವಾಳಗಳ ಬಲಿ ಇಲ್ಲಿ ದಿನನಿತ್ಯದ ದೃಶ್ಯ. ವಿಶೇಷ ಸಂದರ್ಭಗಳಲ್ಲಿ ಹೋರಿ ಬಲಿ ನಡೆಯುತ್ತದೆ. ಬಲಿಯಾದ ಹೋರಿಯ ಮಾಂಸವನ್ನು ದೇವಿಯ ಪ್ರಸಾದವೆಂದು ಭಕ್ತರು ಸೇವಿಸುತ್ತಾರೆ. ಬಲಿ ನಡೆಯಬಾರದು ಎಂಬ ಪ್ರಾಣಿದಯಾ ಸಂಘಟನೆಗಳ ಕೂಗು ಎಷ್ಟೇ ಇದ್ದರೂ ದೇವಿಯ ದೇಗುಲದ ಪ್ರಾಂಗಣದ ಒಳಗೆ ಅದರ ಸದ್ದು ಬಹಳ ಕ್ಷೀಣ.
ಕಾಮಾಖ್ಯ : ಕಥೆ, ಪುರಾಣ, ಐತಿಹ್ಯಗಳಲ್ಲಿ:
ಪುರಾಣ ಕಾಲದ ದಕ್ಷ ಮಹಾರಾಜ, ತನ್ನ ಮಗಳು ಸತಿ ಹೋಗಿ ಹೋಗಿ ಭಿಕ್ಷಾಟನೆ ಮಾಡುವ ದಿಗಂಬರ ಶಿವನನ್ನು ಬಯಸಿ ವರಿಸಿದ್ದನ್ನು ಸಹಿಸದೆ, ತನ್ನ ಮಹಾಯಜ್ಞದಿಂದ ಅವರಿಬ್ಬರನ್ನು ದೂರವಿಡುತ್ತಾನೆ. ಇದನ್ನು ತಿಳಿದ ಸತಿ ಒಳಗೊಳಗೇ ಕೊರಗುತ್ತಾಳೆ. ತನ್ನ ತಂದೆ ತನ್ನನ್ನು ಆಮಂತ್ರಿಸಲು ಮರೆತಿರಬಹುದು, ತಾವೇ ಹೋಗಿ ಯಜ್ಞದಲ್ಲಿ ಪಾಲ್ಗೊಳ್ಳೋಣವೆಂದು ಪತಿ ಶಿವನನ್ನು ಕೇಳಿಕೊಳ್ಳುತ್ತಾಳೆ. ಶಿವ ಆ ಬೇಡಿಕೆಯನ್ನು ತಳ್ಳಿ ಹಾಕುತ್ತಾನೆ. ಹೋಗುವ ಮನಸ್ಸಿದ್ದರೆ ಒಬ್ಬಳೇ ಹೋಗಿ ಬಾ, ತಾನು ಬರುವುದು ಸಾಧ್ಯವಿಲ್ಲ ಎಂದು ಹೇಳಿ ಸತಿಯನ್ನು ಕಳಿಸುತ್ತಾನೆ. ಯಜ್ಞಕ್ಕೆ ಹೋದ ಸತಿಯನ್ನೂ, ಆಕೆಯ ಪತಿ ಪರಶಿವನನ್ನೂ ದಕ್ಷ ಬಗೆಬಗೆಯ ಹೀನಾಯ ಮಾತುಗಳಿಂದ ಮೂದಲಿಸುತ್ತಾನೆ. ಶಿವನನ್ನು ಅವಮಾನಿಸಿದ್ದನ್ನು ಸಹಿಸಲಾಗದೆ ಸತಿ, ನಡೆಯುತ್ತಿದ್ದ ಯಜ್ಞದ ಕುಂಡಕ್ಕೆ ಹಾರಿ ತನ್ನನ್ನು ತಾನೇ ಆಹುತಿ ತೆಗೆದುಕೊಳ್ಳುತ್ತಾಳೆ. ಇದರಿಂದ ಕೆರಳಿ ಕೆಂಡಾಮಂಡಲನಾದ ಶಿವ ಬಂದು, ದೇಹತ್ಯಾಗ ಮಾಡಿದ ಸತಿಯನ್ನು ಹೊತ್ತು ರೌದ್ರತಾಂಡವವಾಡುತ್ತಾನೆ. ತಾಂಡವದ ರಭಸಕ್ಕೆ, ಸತಿಯ ಶವದ ಒಂದೊಂದು ತುಣುಕುಗಳೂ ಚೆಲ್ಲಾಪಿಲ್ಲಿಯಾಗಿ ಬೀಳುತ್ತವೆ. ಆಕೆಯ ಯೋನಿಯು ಒಂದು ಪರ್ವತದ ಮೇಲೆ ಬಿದ್ದು, ಪರ್ವತವೇ ಗಾಢ ನೀಲವರ್ಣಕ್ಕೆ ತಿರುಗುತ್ತದೆ. ಅದೇ ಆಸ್ಸಾಮಿನ ಕಾಮರೂಪದ ನೀಲಾಚಲ.
ನರಕಾಸುರನ ಕತೆ
ಕಾಮರೂಪದಲ್ಲಿ ದೇವಾಲಯ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ ಇನ್ನೊಂದು ಕತೆ ಪ್ರಚಲಿತದಲ್ಲಿದೆ.
ರಾಕ್ಷಸನಾದ ನರಕಾಸುರ ಕಾಮಾಖ್ಯ ದೇವಿಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಅತೀವವಾಗಿ ಮೋಹಿಸತೊಡಗಿದ. ಆಕೆಯ ಬಳಿ ಬಂದು ತನ್ನನ್ನು ಮದುವೆಯಾಗು ಎಂದೂ ಕೇಳಿಕೊಂಡ. ದೇವಿ “ಮದುವೆಯಾಗುವುದಕ್ಕೇನೂ ತೊಂದರೆಯಿಲ್ಲ. ಆದರೆ ಒಂದು ಕರಾರಿದೆ. ನಾನು ನಿನ್ನನ್ನು ವರಿಸಬೇಕಾದರೆ ನೀನು ನನಗಾಗಿ ಒಂದು ದೇವಸ್ಥಾನವನ್ನು ಒಂದೇ ಒಂದು ರಾತ್ರಿಯ ಒಳಗಾಗಿ ನಿರ್ಮಾಣ ಮಾಡಬೇಕು” ಎಂದು ಅವನಿಗೆ ಷರತ್ತು ಒಡ್ಡುತ್ತಾಳೆ. ಒಪ್ಪಿದ ನರಕಾಸುರ ದೇವಾಲಯವನ್ನು ನಿರ್ಮಿಸಲು ತೊಡಗುತ್ತಾನೆ. ಅರುಣೋದಯಕ್ಕಿಂತ ಮುಂಚೆ, ಬಂದು ನೋಡಿದ ದೇವಿಗೇ ದಿಗ್ಭ್ರಮೆಯಾಗುವಂತೆ ನರಕಾಸುರ ದೇವಾಲಯದ ನಿರ್ಮಿತಿಯ ಅಂತಿಮ ಹಂತದಲ್ಲಿರುತ್ತಾನೆ. ಇದನ್ನು ಹೇಗಾದರೂ ನಿಲ್ಲಿಸಿ ಕೆಲಸ ಪೂರ್ಣವಾಗದ ಹಾಗೆ ಮಾಡಬೇಕೆಂದು ದೇವಿ, ಇನ್ನೂ ಬೆಳಗಾಗದಿರುವಾಗಲೇ ಕೋಳಿಯೊಂದನ್ನು ಕಳಿಸಿ ಅದರ ಕೈಯಲ್ಲಿ ಕೂಗಿಸುತ್ತಾಳೆ. ಕೋಳಿ ಕೂಗಿತು, ಬೆಳಗಾಯಿತು, ತನ್ನ ಕೆಲಸ ಇನ್ನೂ ಪೂರ್ತಿಯಾಗಿಲ್ಲವಲ್ಲ ಎಂದು ಹತಾಶನಾದ ನರಕಾಸುರ ಕೋಪದಲ್ಲಿ ಕೋಳಿಯನ್ನು ಕೊಂದು ಹಾಕುತ್ತಾನೆ. ಕರಾರಿನಂತೆ ದೇಗುಲ ಪೂರ್ಣವಾಗದೆ ಇದ್ದದ್ದರಿಂದ, ದೇವಿ ಅಸುರನನ್ನು ಮದುವೆಯಾಗದೆ ಉಳಿಯುತ್ತಾಳೆ. ಹೀಗೆ ನರಕಾಸುರನ ಕೈಯಲ್ಲಿ ನಿರ್ಮಾಣಗೊಂಡ ದೇವಾಲಯವು ಇದೇ – ಎನ್ನುವುದು ಸ್ಥಳ ಪುರಾಣ.
ಬ್ರಹ್ಮ ಕಟ್ಟಿದ ದೇವಾಲಯ
ಈ ಮೇಲಿನ ಕತೆಗಳಿಗೆ ಭಿನ್ನವಾದ ಇನ್ನೊಂದು ಪಾಠಾಂತರವಿದೆ. ಬ್ರಹ್ಮಾಂಡವನ್ನು ಸೃಷ್ಟಿಸಿದ ಮೇಲೆ ಅದರ ಕರ್ತ ಬ್ರಹ್ಮನಿಗೆ ಅಪರಿಮಿತವಾದ ಹೆಮ್ಮೆಯೂ ಅಹಂಕಾರವೂ ಮೊಳೆಯಿತಂತೆ. ತಾನೇ ಜಗನ್ನಿಯಾಮಕ, ತನ್ನನ್ನು ಬಿಟ್ಟರೆ ಬೇರೆ ಇಲ್ಲ ಎಂಬ ಅಹಮ್ಮಿನಿಂದ ಅವನು ಇತರ ದೇವತೆಗಳನ್ನು ಕಡೆಗಣಿಸಿದ, ಅವಹೇಳನ ಮಾಡಿದ. ಇದು ಸಹಜವಾಗಿಯೇ ಇತರ ದೇವತೆಗಳನ್ನು ಕೆರಳಿಸಿತು. ಬ್ರಹ್ಮನಿಗೆ ತಕ್ಕ ಪಾಠ ಕಲಿಸಬೇಕೆಂದು ಅವರೆಲ್ಲರೂ ನಿರ್ಧರಿಸಿದರು. ಸೃಷ್ಟಿ-ಸ್ಥಿತಿ-ಲಯಕಾರರಿಗೂ ಮಿಗಿಲಾದ ಶಕ್ತಿಯಾದ ದೇವಿಯ ಮೊರೆ ಹೋದರು. ದೇವಿ, ಬ್ರಹ್ಮನ ಸದ್ದಡಗಿಸಿ ಅವನ ನಿಜ ನೆಲೆಯನ್ನು ತೋರಿಸಬೇಕೆಂದು ನಿಶ್ಚಯಿಸಿ, ತನ್ನ ಒಂದು ಕೂದಲಿನಿಂದ “ಕೇಶಿ” ಎಂಬ ರಾಕ್ಷಸನನ್ನು ಸೃಷ್ಟಿಸಿದಳು. ಕೇಶಿಯು ಹುಟ್ಟಿದ್ದೇ ಹೂಂಕರಿಸುತ್ತ ಬ್ರಹ್ಮನನ್ನು ನುಂಗಲು ಹೋದ. ಭಯಭೀತನಾದ ಬ್ರಹ್ಮ ಕೇಶಿಯ ಬೆಂಕಿಯ ಬಾಯಿಯಿಂದ ತಪ್ಪಿಸಿಕೊಳ್ಳಲು ಜಗತ್ತಿನ ಮೂಲೆ ಮೂಲೆಯನ್ನೂ ಅಲೆಯಬೇಕಾಯಿತು. ಅವನ ಪೌರುಷವಲ್ಲ ಉಡುಗಿತು. ಕೇಶಿಯು “ಕೇಶಿ ಪುರಿ” ಎಂಬ ಪಟ್ಟಣವನ್ನು ನಿರ್ಮಿಸಿಕೊಂಡು “ಬ್ರಹ್ಮ ಕುಂಜ” (ಬ್ರಹ್ಮನನ್ನು ಕೊಲ್ಲು) ಎಂಬುದನ್ನೆ ತನ್ನ ಏಕಮಾತ್ರ ಗುರಿಯನ್ನಾಗಿ ಮಾಡಿಕೊಂಡು ಸೃಷ್ಟಿಕರ್ತನನ್ನೇ ಲಯ ಮಾಡಲು ಕಾಯತೊಡಗಿದ. ಹೀಗೆ ತನಗೆ ಉಳಿಗಾಲವಿಲ್ಲವೆಂದು ಅರಿತ ಮೇಲೆ ಬ್ರಹ್ಮ, ದೇವಿಯ ಬಳಿ ಬಂದು ಕ್ಷಮೆ ಕೇಳದೆ ಬೇರೆ ದಾರಿಯೇ ಇರದಾಯಿತು. ತನ್ನ ಅಹಂಕಾರದ ಅಂಧಕಾರ ಕಳೆಯಿತೆಂದೂ, ಇನ್ನೆಂದೂ ತಾನು ಸರ್ವಶಕ್ತನೆಂದು ಹೇಳಿಕೊಳ್ಳಲಾರೆನೆಂದೂ ಬ್ರಹ್ಮನು ದೇವಿಯಲ್ಲಿ ಹೇಳಿ ಅಸುರ ಮುಕ್ತಿಗಾಗಿ ಪ್ರಾರ್ಥಿಸಿದ. ಆಗ ಸಂಪ್ರೀತಳಾದ ದೇವಿ, ಕೇಶಿಯ ಮೇಲೆ ಬೆಂಕಿಯನ್ನೂದಿ ಬೂದಿ ಮಾಡಿದಳು. ಆ ಬೂದಿಯನ್ನು ಬಳಸಿ ಒಂದು ಬೆಟ್ಟವನ್ನು ತಯಾರಿಸಬೇಕೆಂದೂ ಅದರ ತುದಿಯಲ್ಲಿ ತನ್ನ ದೇಗುಲವೊಂದನ್ನು ನಿರ್ಮಿಸಿ ಪೂಜಿಸಬೇಕೆಂದೂ ಬ್ರಹ್ಮನಿಗೆ ಆಣತಿಯಿತ್ತಳು. ಹಾಗೆ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಸಂಗತಿಗಳೇ ನೀಲಾಚಲ ಬೆಟ್ಟ ಮತ್ತು ಕಾಮಾಖ್ಯ ದೇವಾಲಯಗಳು.
ದೇವಿಯೇ ಆದಿಮ ಸೃಷ್ಟಿಗೆ ಕಾರಣಳು ಎಂಬ ಕಾರಣಕ್ಕೆ ಬ್ರಹ್ಮ ಈ ದೇಗುಲದಲ್ಲಿ ದೇವಿಯ ಯೋನಿಯನ್ನು ಕಲ್ಲಿನಲ್ಲಿ ರಚಿಸಿ ಯೋನಿಪೀಠವನ್ನು ಸ್ಥಾಪಿಸಿದನಂತೆ. ಅಲ್ಲದೆ, ದೇವಿಯಿಂದ ಶಾಪಮುಕ್ತನಾದ ಮೇಲೆ ಸ್ವರ್ಗದಿಂದ ಪ್ರಜ್ವಲಿಸುವ ಸೂರ್ಯರಶ್ಮಿಯನ್ನು ತಂದು ಯೋನಿಪೀಠದ ಮೇಲೆ ಪ್ರತಿಷ್ಠಾಪಿಸಿದನಂತೆ. ಈ ಕತೆಗೆ ಪೂರಕವೆನ್ನುವಂತೆ ಇಂದಿಗೂ ಕಾಮಾಖ್ಯ ದೇವಾಲಯದಲ್ಲಿ ದೇವಿಯನ್ನು ಪೂಜಿಸುವ ಮುಖ್ಯ ಅರ್ಚಕರನ್ನು “ಬ್ರಹ್ಮ” ಎಂದೇ ಕರೆಯಲಾಗುತ್ತದೆ.
ಕಾಮ ಕಟ್ಟಿದ ಕಾಮಾಖ್ಯ
ಈ ಪುರಾತನ ದೇವಾಲಯವು ಕಾಮದೇವ ಮನ್ಮಥನಿಂದ ಕಟ್ಟಲ್ಪಟ್ಟಿತು ಎಂದೂ ಒಂದು ಉಲ್ಲೇಖ.
ಯಜ್ಞಕ್ಕೆ ಬಿದ್ದು ದೇಹಾರ್ಪಣೆ ಮಾಡಿಕೊಂಡ ಸತಿಯನ್ನು ಹೊತ್ತು ತಂದ ಶಿವ ಹಿಮಾಲಯದಲ್ಲಿ ಉಗ್ರ ತಪಸ್ಸು ಕೈಗೊಂಡನಂತೆ. ಸೃಷ್ಟಿಯ ಚಾಲಕ ಶಕ್ತಿಯಾದ ಶಿವನೇ ಹೀಗೆ ತಪಸ್ಸಿಗೆ ಕೂತು ಬಿಟ್ಟರೆ ಸೃಷ್ಟಿ-ಲಯ ಚಕ್ರದ ಗತಿಯೇನು ಎನ್ನುವುದು ಉಳಿದ ದೇವತೆಗಳ ಚಿಂತೆ. ಅದಕ್ಕಾಗಿ ಅವರು ಕಾಮನನ್ನು ಕರೆದು, ಹೇಗಾದರೂ ಮಾಡಿ ಶಿವನನ್ನು ಅವನ ತಪಸ್ಸಿನಿಂದ ಎಚ್ಚರಿಸು ಎಂದು ಕೇಳಿಕೊಂಡರು. ಕಾಮ ಒಪ್ಪಿದ. ಶಿವನ ಬಳಿ ಬಂದು ತನ್ನ ಕುಸುಮ ಶರವನ್ನು ಶಿವನ ಹಣೆಗೆ ಗುರಿಯಾಗಿ ಹೊಡೆದ. ಆ ಘಾತಕ್ಕೆ ಎಚ್ಚರವಾದ ಶಿವ, ತನ್ನ ತಪೋನಿದ್ರೆಗೆ ಭಂಗ ತಂದ ಕೋಪದಲ್ಲಿ ಮೂರನೇ ಕಣ್ಣನ್ನು ತೆರೆದು ಕಾಮದೇವನನ್ನು ಕ್ಷಣದಲ್ಲೇ ಸುಟ್ಟು ಹಾಕಿದ. ಇದರಿಂದ ದೇವತೆಗಳು ಬೇಸರಗೊಂಡರು. ಯಾವೊಂದೂ ತಪ್ಪನ್ನು ಮಾಡದೆ, ತಮ್ಮ ಮಾತನ್ನು ನಡೆಸಿಕೊಡಲು ಹೋದ ಕಾಮನು ಶಿವನ ಕೋಪಕ್ಕೆ ಗುರಿಯಾಗಿ ಭಸ್ಮವಾದನಲ್ಲ ಎಂಬ ದು:ಖ ಅವರದು. ದೇವತೆಗಳೆಲ್ಲರೂ ಒಟ್ಟಾಗಿ ಬಂದು ನಡೆದ ಅಚಾತುರ್ಯವನ್ನು ಶಿವನಿಗೆ ವಿವರಿಸಿ ಕಾಮನನ್ನು ಮತ್ತೆ ಸೃಷ್ಟಿಸಿ ತರಬೇಕೆಂದು ಬೇಡಿಕೊಂಡರು. ಶಿವನು ಅದಕ್ಕೆ ಒಪ್ಪಿ ಕಾಮನಿಗೆ ಮರುಜನ್ಮ ನೀಡಿದ. ದೇಹ ಮರಳಿ ಬಂದರೂ ಕಾಮನಿಗೆ ತನ್ನ ಹಳೆಯ ರೂಪಲಾವಣ್ಯಗಳು ಬಾರದೇ ಹೋದವು. ಅದಕ್ಕಾಗಿ ಆತ ಶಿವನಲ್ಲಿ ಮೊರೆಯಿಟ್ಟಾಗ ಶಿವನು “ಅದಕ್ಕಾಗಿ ಬೇಸರಿಸಬೇಡ. ನಾನು ತಪಸ್ಸು ಕೂತ, ಸತಿಯ ಯೋನಿಯು ಚೆಲ್ಲಿ ಬಿದ್ದ ಜಾಗದಲ್ಲಿ ಅವಳಿಗಾಗಿ ಒಂದು ದೇಗುಲವನ್ನು ನಿರ್ಮಿಸು. ನಿನ್ನ ರೂಪ ಮರಳಿ ನಿನಗೆ ದೊರೆಯುತ್ತದೆ” ಎಂದು ಸಮಾಧಾನಪಡಿಸಿದ. ಕಾಮನು ಶಿವನ ಸತಿಗಾಗಿ ನಿರ್ಮಿಸಿದ ದೇಗುಲವೇ – ಕಾಮಾಖ್ಯ.
ಕಾಮಾಖ್ಯ ಹೆಸರಿನ ಅರ್ಥವಿಸ್ತಾರ
“ಕಾಮಾಖ್ಯ” ಎಂದರೆ ಏನು, ಅದರ ಅರ್ಥವ್ಯಾಪ್ತಿ ಎಷ್ಟು ದೊಡ್ಡದು ಎಂದು ತಿಳಿಯಲು ನಾವು ಮತ್ತೆ ಪುರಾಣ, ಭಾಗವತಗಳ ಹಾಳೆಗಳನ್ನು ತಿರುಗಿಸಬೇಕು. ಈ ದೇವಿಯನ್ನು ಸ್ತುತಿಸುವ “ಕಾಮಾಖ್ಯ ಪ್ರಣಾಮ ಮಂತ್ರ”ದಲ್ಲಿ ಹೀಗೆ ಹೇಳಲಾಗಿದೆ:
ಕಾಮಾಖ್ಯಂ ಕಾಮಸಂಪನ್ನಾಂ ಕಾಮೇಶ್ವರೀಂ ಹರಿಪ್ರಿಯಾಂ|
ಕಾಮನಾಂ ದೇಹಿಮೇ ನಿತ್ಯಂ ಕಾಮೇಶ್ವರೀ ನಮೋಸ್ತುತೇ||
ಕಾಮಾಖ್ಯೇ ವರದೇ ದೇವೀ ನೀಲಪರ್ವತವಾಸಿನೀ|
ತ್ವಂ ದೇವೀ ಜಗತಂ ಮಾತಾ ಯೋನಿಮುದ್ರೇ ನಮೋಸ್ತುತೇ||
ಕಾಳಿಕಾ ಪುರಾಣದಲ್ಲಿ ಬರುವ ಶಿವನ ಈ ಮಾತುಗಳನ್ನು ನೋಡಿ:
ಕಾಮಾರ್ಥಮಾಗತಾಯಸ್ಮಾನ್ಮಯಾ ಸಾರ್ದಂ ಮಹಾಗಿಕೆ|
ಕಾಮಾಖ್ಯಾ ಪ್ರಖ್ಯಾತೇ ದೇವೀ ನೀಲಶೈಲೇ ರಹೋಗತಾ||
ಕಾಮದಾ ಕಾಮಿನೀ ಕಾಮಾ ಕಾಂತಾ ಕಾಮಾಂಗದಾಯಿನೀ|
ಕಾಮಾಂಗನಾಶಿನೀ ಯಸ್ಮಾತ್ ಕಾಮಾಖ್ಯಾ ತೇನ ಪ್ರಖ್ಯಾತೇ||
ಶಿವ ಹೇಳುತ್ತಾನೆ: “ದೇವಿ ನನ್ನ ಸಂಯೋಗಕ್ಕಾಗಿ ನೀಲಕೂಟ (ನೀಲಾಚಲ) ಪರ್ವತಕ್ಕೆ ಬಂದಿರುವುದರಿಂದ ಕಾಮಾಖ್ಯ ಎಂದು ಕರೆಸಿಕೊಳ್ಳುತ್ತಾಳೆ. ಅವಳು ಕಾಮವನ್ನು ಉದ್ಧೀಪ್ತಗೊಳಿಸುವವಳು, ಕಾಮ ದೇವತೆ, ಕಾಮದ ವ್ಯಕ್ತರೂಪಿಣಿ, ಕಾಮಾಂಗಗಳನ್ನು ಪ್ರಚೋದಿಸುವವಳು ಮತ್ತು ಕಾಮಾಂಗಗಳನ್ನು ಶಮನಗೊಳಿಸುವವಳು. ಹಾಗಾಗಿ ಅವಳು ಕಾಮಾಖ್ಯ”
ಇದು ಶಿವ ಹೇಳುವ ಮಾತು. ಯೋಚಿಸಿದಷ್ಟೂ ಮನಸ್ಸಿನ ಆಳಕ್ಕಿಳಿಯುತ್ತಾ ತನ್ನ ಅರ್ಥವಂತಿಕೆಯನ್ನು ತೋರುತ್ತ ಹೋಗುವ ಮಾತುಗಳು ಇವು. ಶಿವನು ಸತಿಯ ದೇಹವನ್ನು ಹಿಡಿದು ತಾಂಡವ ನೃತ್ಯ ಮಾಡಿದ ಮೇಲೆ ತಪಸ್ಸಿಗೆ ಕೂತಾಗ ಆತನ ತಪೋಭಂಗ ಮಾಡುವವನು ಕಾಮದೇವ ಮನ್ಮಥ. ಅವನನ್ನು ಸುಟ್ಟು ಬೂದಿ ಮಾಡಿದ ಶಿವ, ದೇವತೆಗಳ ಕೋರಿಕೆ ಮನ್ನಿಸಿ ಮರುಜನ್ಮ ಕೊಟ್ಟಾಗ ಮನ್ಮಥನಿಗೆ ದೇಹವಷ್ಟೇ ಮರಳಿ ಸಿಗುತ್ತದೆ ಹೊರತು ರೂಪವಲ್ಲ. ತನ್ನ ರೂಪವನ್ನು ತನಗೆ ಮರಳಿಸಿಕೊಡು ಎಂದು ಮನ್ಮಥನು ಶಿವನಲ್ಲಿ ಪ್ರಾರ್ಥಿಸಿದಾಗ, ಆತ ದೇವಿಯ ದೇಗುಲ ಕಟ್ಟು, ನಿನ್ನ ಬಯಕೆ ಈಡೇರುವುದು ಎನ್ನುತ್ತಾನೆ. ಈ ಕತೆಯು ವಿವಿಧ ಅರ್ಥಸ್ತರಗಳನ್ನು ಹೊಂದಿದೆ.
ಶಿವನಿಗಾದ ಅವಮಾನಕ್ಕೆ ನೊಂದು ತಾನಿನ್ನು ಬದುಕಿದ್ದರೂ ಅರ್ಥವಿಲ್ಲ ಎಂದು ಬಗೆದು ದೇಹವನ್ನು ಒಣಗಿದ ಎಲೆ ಎನ್ನುವಂತೆ ಅಗ್ನಿಗೆ ಸಮರ್ಪಿಸಿಕೊಳ್ಳುವ ಸತೀದೇವಿ ಮತ್ತು ಸುಟ್ಟು ಭಸ್ಮವಾದದ್ದನ್ನು ಮತ್ತೆ ದೇಹವಾಗಿ ಪಡೆದರೂ “ರೂಪ ಬರಲಿಲ್ಲವಲ್ಲ” ಎಂದು ಮರುಗುವ ಕಾಮ – ಇಲ್ಲಿಯ ಎರಡು ಪ್ರಮುಖ ಧ್ರುವಗಳು. ದೇಹವನ್ನು ದಯಪಾಲಿಸಿದ ಶಿವನಿಗೆ ರೂಪ ಕೊಡುವುದೇನೂ ಕಷ್ಟವಾಗಿರಲಿಲ್ಲ. ಆದರೆ ಆತನೇಕೆ ದೇವಿಯ ದೇಗುಲ ನಿರ್ಮಿಸು ಎನ್ನುತ್ತಾನೆ? ಏಕೆ ತನ್ನದಲ್ಲದೆ ಕೇವಲ “ದೇವಿ”ಯ ದೇವಾಲಯ ನಿರ್ಮಿಸಲು ಹೇಳುತ್ತಾನೆ?
ಇಲ್ಲಿ ರೂಪ ಎಂದರೆ ಸೌಂದರ್ಯವಲ್ಲ, ದೇಗುಲ ಎಂದರೆ ಕಲ್ಲಿನ ಕಟ್ಟೋಣವೂ ಅಲ್ಲ. ಬಯಕೆಗಳನ್ನು, ಸ್ವಾರ್ಥ ಕಾಮನೆಗಳನ್ನು ಬಿಟ್ಟು ಪರಿಶುದ್ಧನಾಗು ಎಂಬ ಮಾತು ಶಿವನ ಆಣತಿಯಲ್ಲಿ ಅಡಕವಾಗಿದೆ. ನಿಸ್ವಾರ್ಥದ ಉಜ್ಜ್ವಲ ಉದಾಹರಣೆಯಾದ ಸತಿಗಾಗಿ ಕಾಮನು ದೇಗುಲ ಕಟ್ಟುವ ಕ್ರಿಯೆ – ಕಾಮನಲ್ಲಿ ನಡೆಯಬೇಕಾದ ಸಂಸ್ಕಾರದ ಕುರಿತು ಸೂಚ್ಯವಾಗಿ ಹೇಳುತ್ತದೆ.
ಅದೇ ರೀತಿ, ಕಾಮಾಖ್ಯ ದೇಗುಲ ನಿರ್ಮಾಣದ ಹಿಂದೆ ಇರುವ ಉಳಿದ ಮೂರು ಕತೆಗಳು ಕೂಡ ಕಾಮದ ಹಲವು ಮುಖಗಳನ್ನು ತೋರಿಸಿಕೊಡುತ್ತವೆ. ದೇವಿಯನ್ನು ವರಿಸಲು ಏನನ್ನು ಬೇಕಾದರೂ ಮಾಡಲು ತಯಾರಾಗಿರುವ ನರಕಾಸುರ ಕುರುಡು ಕಾಮಕ್ಕೆ ಸಂಕೇತವಾದರೆ, ತಾನೇ ಎಲ್ಲ ತನ್ನಿಂದಲೇ ಎಲ್ಲ ಎಂದು ಬೀಗುವ ಬ್ರಹ್ಮ ಮತ್ತು ದಕ್ಷರು ಆತ್ಮರತಿಗೆ ಉದಾಹರಣೆಯಾಗುತ್ತಾರೆ. ಶಿವನ ತಾಂಡವದಲ್ಲಿ ಚೆಲ್ಲಿ ಹೋಗುವ ಸತೀದೇವಿಯ ಯೋನಿಯು – ಕಾಮನೆಗಳನ್ನು ಕಳಚಿಕೊಂಡು ಪರಿಶುದ್ಧನಾಗು ಎಂಬ ಸಂದೇಶವನ್ನು ಮನುಜಕುಲಕ್ಕೆ ಹೇಳುತ್ತಿದೆ.
ಇಷ್ಟೊಂದು ಗಾಢ, ಗೂಢ ಅರ್ಥ ವಿನ್ಯಾಸಗಳನ್ನು ಪಡೆದಿರುವುದರಿಂದಲೇ ಕಾಮಾಖ್ಯ – ದೇಶದ ಏಕೈಕ ಯೋನಿಮುದ್ರಾ ರೂಪದ ದೇವಿ ಆರಾಧನಾ ಕೇಂದ್ರವಾಗಿಯೂ ಭಕ್ತರನ್ನು, ಸಾಧು-ಸಂತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇಲ್ಲಿಗೆ ಬರುವ ಭಕ್ತರಲ್ಲಿ ಹೃದಯದ ಕಲ್ಮಷ ಕಳೆದು ಚಿತ್ತಶಾಂತಿಯ ಜ್ಯೋತಿಯನ್ನು ಹೊತ್ತಿಸುವ ಕೆಲಸವನ್ನು ಕಾಮಾಖ್ಯೆ ನಿರಂತರವಾಗಿ ಮಾಡುತ್ತಿದ್ದಾಳೆ. ಶಿವಲಿಂಗದ ಪೂಜೆಯನ್ನು ಮುಗ್ಧ ಭಕ್ತಿಯಿಂದ ಮಾಡುವ ದೇಶದಲ್ಲಿ ಸಕಲ ಜೀವಸಂಕುಲದ ಪ್ರಾಕೃತಿಕ ಹುಟ್ಟಿಗೂ ಕಾರಣವಾದ ಜೀವದ್ವಾರದ ಪೂಜೆಯೂ ನಡೆಯುವುದು ಅತ್ಯಂತ ಮಾರ್ಮಿಕವಾದ ಸಂಗತಿ.
(2012ರ ತರಂಗ ವಾರಪತ್ರಿಕೆಯ ನವರಾತ್ರಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಬರಹ)