ಅಂಕಣ

ಮರೆಯಿರೆಂದರೆ ಮರೆಯಲಿ ಹ್ಯಾಂಗ ಚಿಕುನ್’ಗುನ್ಯವ?

ಅದು 2008ರ ಮೇ-ಜೂ ತಿಂಗಳು. ನಾನಾಗ ವಿದ್ಯಾರ್ಥಿ ಜೀವನದ ಮಹತ್ತರ ಕಾಲಘಟ್ಟವೆಂದೇ ಪರಿಗಣಿಸಲ್ಪಟ್ಟಿರುವ  ಸೆಕೆಂಡ್ ಪಿಯುಸಿಯಲ್ಲಿದ್ದೆ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿಯವರ ಬಂಡಾಯದಿಂದಾಗಿ ನನ್ನೂರು ಪುತ್ತೂರು ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು. ಭರ್ಜರಿಯಾಗಿಯೇ ನಡೆದ ಆ  ಚುನಾವಣೆಯನ್ನು ಮುಗಿಸಿಕೊಂಡು ಪುತ್ತೂರು ಆಗಷ್ಟೇ ಸುಧಾರಿಸಿಕೊಳ್ಳುತ್ತಿತ್ತು. ಅಷ್ಟರಲ್ಲಿಯೇ ಕರಾವಳಿಗೆ ಚಿಕುನ್’ಗುನ್ಯ ಎಂಬ ಮಾರಕ ರೋಗ  ಸೈಲೆಂಟಾಗಿ ಎಂಟ್ರಿ ಕೊಟ್ಟಿತ್ತು. ದ.ಕ ಜಿಲ್ಲೆಯ ಬಂಟ್ವಾಳ, ಸುಳ್ಯ, ಬೆಳ್ತಂಗಡಿಗಳಲ್ಲಿ ಈ ರೋಗ ನಾಗರೀಕರನ್ನು ಬಾಧಿಸಿದರೂ ಅದು ವ್ಯಾಪಕವಾಗಿ ಕಾಡಿದ್ದು  ಪುತ್ತೂರಿನ ಜನರನ್ನು. ಏನಾಗುತ್ತಿದೆ ಎಂದು ಅರಿವಿಗೆ ಬರುವಷ್ಟರಲ್ಲಿ ಅದು ಹತ್ತಾರು ಜನರಿಗೆ ತಗುಲಿಯಾಗಿತ್ತು.

ಚಿಕುನ್’ಗುನ್ಯ ಒಂದು ವೈರಸ್ ರೋಗ., ಸಾಮಾನ್ಯ ಭಾಷೆಯಲ್ಲಿ ಇದೂ ಸಹ ಒಂದು ವೈರಲ್ ಫಿವರ್. 1955ರಲ್ಲಿ  ಮೊದಲ ಭಾರಿಗೆ ಇದನ್ನು ಪತ್ತೆ ಹಚ್ಚಿಲಾಯಿತು.. ಇಲ್ಲಿಂದ ಇಲ್ಲಿಯವರೆಗೆ ವಿಶ್ವದ  ಹಲವಾರು ಭಾಗಗಳನ್ನು ಕಾಡಿರುವ ಈ ರೋಗಕ್ಕೆ ಇದುವರೆಗೂ ನಿರ್ಧಿಷ್ಟವಾಗ ಔಷಧವನ್ನು ಕಂಡು ಹಿಡಿಯಲಾಗಿಲ್ಲ, ಬರೀ ನೋವು ನಿವಾರಕ ಮಾತ್ರೆಗಳಿವೆಯಷ್ಟೇ. ಸಂಧಿಗಳಲ್ಲಿ ವಿಪರೀತ ನೋವನ್ನುಂಟು ಮಾಡುವ ಈ ರೋಗ ನಿಜಕ್ಕೂ  ಮಾರಣಾಂತಿಕವಲ್ಲದಿದ್ದರೂ ಅಪರೂಪಕ್ಕೊಮ್ಮೆ ಸಾವನ್ನೂ ತರಬಹುದು. ಸೊಳ್ಳೆಗಳ ಮೂಲಕ ಒಬ್ಬನಿಂದ ಇನ್ನೊಬ್ಬನಿಗೆ ಹರಡುವ ಈ ಜ್ವರವನ್ನು ನಿಯಂತ್ರಣ ಮಾಡಬೇಕಾದರೆ ಸೊಳ್ಳೆಗಳ ಉತ್ಪಾದನೆ ಮತ್ತೆ ಅವುಗಳ ಬೆಳವಣಿಗೆಯನ್ನು ನಿಯಂತ್ರಿಸುವುದೊಂದೇ ಮಾರ್ಗ ಎಂದು ಸಂಶೋಧನೆಗಳಲ್ಲಿ ಹೇಳಲ್ಪಟ್ಟಿದೆ.

ಇರಲಿ, ಪುತ್ತೂರಿನಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಕ್ಲಿನಿಕ್ಕುಗಳ ಮುಂದೆ ಮೈಲುದ್ದದು ಕ್ಯೂ ನಿಂತಿತ್ತು. ಹೇಳಿದರೆ ನಂಬ್ತೀರೋ ಗೊತ್ತಿಲ್ಲ, ವೈದ್ಯ್ತರು ಬೆಳಗ್ಗೆ ಐದಕ್ಕೆ ಕ್ಲಿನಿಕ್ ಓಪನ್ ಮಾಡಿದರೆ ರಾತ್ರಿ ಮುಚ್ಚುವಾಗ ಎರಡಾಗುತ್ತಿತ್ತು. ರೋಗಿಗಳ ಉಪಚಾರದ ಜೊತೆಗೆ  ವೈದ್ಯರ ಉಟ ಉಪಚಾರಗಳೆಲ್ಲವೂ ಕ್ಲಿನಿಕ್ಕಿನಲ್ಲೇ ನಡೆದು ಹೋಗುತ್ತಿದ್ದವು. ವೈದ್ಯರುಗಳ ಪಾಡು ಏನಾದರೇನಂತೆ, ನಮಗೆ ಸಮಯಕ್ಕೆ ಸರಿಯಾಗಿ ಔಷಧ ಸಿಕ್ಕಿದರೆ ಸಾಕೆನ್ನುವ ಮನೋಭಾವ ಜನರದ್ದಾಗಿತ್ತು. ಪಾಪ.. ಹೀಗೆ ಹಗಲೂ ರಾತ್ರಿಯೆನ್ನದೆ ಚಿಕುನ್’ಗುನ್ಯಕ್ಕೆ ಔಷಧ ನೀಡಿದ ಕೆಲ ವೈದ್ಯರಿಗೂ ಈ ರೋಗ ಹಬ್ಬಿತ್ತೆಂದರೆ ಅದಕ್ಕೆ ನಗುವುದೋ ಅಳುವುದೋ ಎಂದು ತಿಳಿಯದಾಗಿತ್ತು ಸಾಮಾನ್ಯರಿಗೆ.

ಅದೆಲ್ಲಾ ಜನಾರಿಗೆ ಯಾಕೆ? ಹೆಚ್ಚು ಕಾಯದೇ  ಔಷಧ ಸಿಕ್ಕಿದರಷ್ಟೇ ಸಾಕು ಎಂಬ ಕಾತರ ಅವರಿಗೆ. ಅದಕ್ಕಾಗಿ ಈ ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೆಂಡತಿಗೋ, ಮಕ್ಕಳಿಗೋ, ಗಂಡನಿಗೋ ಇಲ್ಲಾ ತಂದೆ-ತಾಯಿಗೋ ನಡುರಾತ್ರೆ ಈ ಜ್ವರ ಕಾಣಿಸಿಕೊಂಡರೆ ಸರಿಯಾದ ವಾಹನ ಸೌಕರ್ಯಗಳಿಲ್ಲದಿದ್ದರೂ ಆಸುಪಾಸಿನವರ ಕೈಕಾಲು ಹಿಡಿದು ವಾಹನ ಮಾಡಿಕೊಂಡು ಹೋಗಿ ಆ ನಟ್ಟ ನಡುರಾತ್ರಿಯಲ್ಲಿಯೂ ವೈದ್ಯರ ಮನೆಯ ಬಾಗಿಲು ಬಡಿಯುತ್ತಿದ್ದರು. ಹಗಲಿನ ಹೊತ್ತಾದರೆ ಮೈಲುದ್ದದು ಕ್ಯೂನಲ್ಲಿ ನಿಲ್ಲಬೇಕು. ಇಲ್ಲಾ ಟೋಕನ್ ಪಡೆದುಕೊಂಡು ಗಂಟೆಗಟ್ಟಲೆ ಕಾಯಬೇಕು. ಅಷ್ಟೆಲ್ಲಾ ಆಗಿ ಔಷಧ ಪಡೆದುಕೊಳ್ಳಬೇಕಾದರೆ ಜೀವಕ್ಕೆ ಬರುತ್ತಿತ್ತು. ಪಡಕೊಳ್ಳುವ  ಔಷಧದಿಂದ ಬೇಗ ರೋಗ ಗುಣಮುಖವಾಗಬೇಕೆನ್ನುವುದಕ್ಕಿಂತಲೂ ಮೊದಲು ಔಷಧ ಸಿಗಬೇಕೆನ್ನುವ ಧಾವಂತ ಜನರದ್ದಾಗಿತ್ತು. ಕ್ಯೂ ತಪ್ಪಿಸಿ ಹೋಗುವವರು, ಯಾರದ್ದೋ ಇನ್’ಫ್ಲುಯೆನ್ಸ್ ಪಡೆದು ಒಳ ನುಗ್ಗುವವರು ಮತ್ತು ಈ ಕಾರಣಕ್ಕೆ ಸಣ್ಣ ಪುಟ್ಟ ಗಲಾಟೆಗಳು ಕಾಮನ್ ಎಂಬಂತೆ ನಡೆದು ಹೋದವು.  ಈ ಸಂಕಷ್ಟದ ಸಮಯದಲ್ಲಿ ತರಗತಿಗಳನ್ನು ಮಿಸ್ ಮಾಡಿಕೊಂಡ ವಿದ್ಯಾರ್ಥಿಗಳೆಷ್ಟೋ, ಕಛೇರಿಗೆ ರಜೆ ಹಾಕಿದ ನೌಕರರೆಷ್ಟೋ ಮತ್ತು ಇದೇ ನೆಪ ಹೇಳಿ ತರಗತಿ ಬಂಕ್ ಮಾಡಿದ, ಆಫೀಸ್’ಗೆ ಹೋಗದ ಕಿಡಿಗೇಡಿಗಳೆಷ್ಟೋ?  ಆ ದೇವರಿಗೇ ಗೊತ್ತು!

ಇನ್ನು ಕೆಲವು ವ್ವೈದ್ಯರಂತೂ ಈ ವಿಷಮ ಪರಿಸ್ಥಿತಿಯ ಅಡ್ವಾಂಟೇಜ್ ಪಡೆದುಕೊಂಡರು. ಸಾಧಾರಣವಾಗಿ ಎಲ್ಲಾ ಊರುಗಳಲ್ಲೂ ಸಣ್ಣ ಪುಟ್ಟ ಕ್ಲಿನಿಕ್ಕ್’ಗಳನ್ನಿಟ್ಟುಕೊಂಡಿರುವ ವೈದ್ಯರಿರುತ್ತಾರೆ. ಅವರು ಅಷ್ಟೇನೂ ಜನಪ್ರಿಯರಾಗಿರುವುದಿಲ್ಲ. ಅದ್ದರಿಂದ ಅವರಲ್ಲಿಗೆ ಹೆಚ್ಚು ಜನ ಹೋಗುವುದಿಲ್ಲ,  ಅಂತಹಾ ವೈದ್ಯರುಗಳೂ ಸಹ ಚಿಕುನ್’ಗುನ್ಯದ ಸಮಯದಲ್ಲಿ ಚಾಲ್ತಿಗೆ ಬಂದರು. ಮೊದಲು ನೊಣ ಹೊಡೆಯುತ್ತಿದ್ದ ಕೆಲವರು ತಮ್ಮ ಕ್ಲಿನಿಕ್ಕಿನ ಬೋರ್ಡಿನ ಧೂಳೊರೆಸಿಕೊಂಡು ಜನರ ಸೇವೆಗೆ ಸನ್ನದ್ಧರಾದರು. ನನ್ನ ಗ್ರಾಮದಲ್ಲಿಯೂ ಅಂತಹಾ ವೈದ್ಯರೊಬ್ಬರಿದ್ದರು. ಒಂದು ಸಣ್ಣ ಕ್ಲಿನಿಕ್ ಬಿಟ್ಟರೆ ಹೇಳುವಂತಾದ್ದು ಬೇರೇನೂ ಇರಲಿಲ್ಲ. ಚಿಕುನ್’ಗುನ್ಯ ಇವರನ್ನು ಎಷ್ಟು ಫೇಮಸ್ ಮಾಡಿತೆಂದರೆ ಮೊದಲು ಒಬ್ಬರೇ ಔಷಧ ವಿತರಣೆ ಮಾಡುತ್ತಿದ್ದ ಇವರು ಅಸಿಸ್ಟೆಂಟ್ ಒಬ್ಬರನ್ನು ನೇಮಕ ಮಾಡಿಕೊಂಡರು. ಆವತ್ತು ಚಿಕುನ್’ಗುನ್ಯಕ್ಕೆ ಇವರಲ್ಲಿಗೆ ಬಂದ ರೋಗಿಗಳು ಹೆಚ್ಚಾಗಿ ಈಗಲೂ ಇವರಲ್ಲಿಗೇ ಬರುತ್ತಿದ್ದು, ಸಂಪಾದನೆ ಬಹಳಾನೇ ಜೋರಾಗಿ ನಡೆಯುತ್ತಿದೆ. ಆ ಕ್ರೆಡಿಟ್ಸ್ ಟು ಚಿಕುನ್’ಗುನ್ಯ!

ಆಗಲೇ ಹೇಳಿದೆನಲ್ಲಾ, ಇದು ಸೊಳ್ಳೆಗಳ ಮೂಲಕ ಹರಡುವ ರೋಗ. ಪುತ್ತೂರು ತಾಲೂಕಿನೆಲ್ಲೆಡೆ ಈ ರೋಗ ಹಬ್ಬಿದ್ದರಿಂದ ನಮಗೆ ಯಾವಗ ಬರುತ್ತದೋ ಎನ್ನುವ ಆತಂಕ ನಿತ್ಯವೂ ನಮ್ಮನ್ನು ಕಾಡುತ್ತಿತ್ತು., ಈಗಾಗಲೇ ರೋಗಕ್ಕೆ ತುತ್ತಾದವರದ್ದು ನೋವಿನ ನರಳಾಟ, ಉಳಿದವರದ್ದು ಯಾವಾಗ ಬರುತ್ತದೋ ಎನ್ನುವ ಮಾನಸಿಕ ನರಳಾಟ. ಈ ಮಾನಸಿಕ ನರಳಾಟವನ್ನೂ ಕೆಲವರು ರೂಮರುಗಳನ್ನು ಹರಡಿಸುವ ಮೂಲಕ ದುರುಪಯೋಗಪಡಿಸಿಕೊಂಡರು. ರೂಮರ್ ಏನೆಂದರೆ, ಚಿಕುನ್’ಗುನ್ಯ  ಬರದಂತೆ ಮೊದಲೇ ತಡೆಗಟ್ಟುವುದಕ್ಕೆ ಹೋಮಿಯಪತಿಯಲ್ಲಿ ಔಷಧ ಬಂದಿದೆ ಎನ್ನುವುದು. ಅದಾಗಲೇ ಯಾವಾಗ ಬರುತ್ತದೋ ಎನ್ನುವ ಭಯದಿಂದ ನಡುಗುತ್ತಿದ್ದವರಿಗೆ ಅದು ಸಂಜೀವಿನಿಯಂತೆ ಪರಿಣಮಿಸಿತು. ಮತ್ತೆ ಕೇಳಬೇಕಾ? ಹೋಮಿಯೋಪತಿ ವೈದ್ಯರ ಮುಂದೆಯೂ ಮೈಲುದ್ದದ ಕ್ಯೂ ಶುರುವಾಯ್ತು, ಆದರೆ ಆ ಸಂದರ್ಭದಲ್ಲಿ ಆ ಥರದ ಯಾವ ಔಷಧವೂ ಅಧಿಕೃತವಾಗಿ ಬಂದಿಲ್ಲ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ರೋಗ ಬರಲೇ ಬಾರದೆನ್ನುವ ಕಾರಣಕ್ಕೆ ಎಲ್ಲರೂ ಅಂತಹಾ ಕ್ಲಿನಿಕ್ಕನ್ನು ಪುರುಸೊತ್ತಿಲ್ಲದೆ  ಎಡತಾಗುತ್ತಿದ್ದರು. ವಿಪರ್ಯಾಸವೆಂದರೆ ಆ ಕ್ಯೂನಲ್ಲಿ ನಾನೇ ಮೊದಲಿಗನಾಗಿ ನಿಂತಿರುತ್ತಿದ್ದೆ!

ರೋಗ ನಮಗೆ ಹರಡಬಹುದೆನ್ನುವ ಭಯದ ಜೊತೆಗೆ ಯಾರಿಂದ ಹರಡಬಹುದು ಎನ್ನುವ ಅನುಮಾನ,ನಮ್ಮ ಅಕ್ಕಪಕ್ಕದಲ್ಲಿ ಯಾರಿಗೆ ಅದು ತಗುಲಿದೊ ಎನ್ನುವ ಆತಂಕ. ಬೆಂಚಿನಲ್ಲಿ ಪಕ್ಕವೇ ಕೂರುವ ಸ್ನೇಹಿತ, ಪಾಠ ಮಾಡುವ ಲೆಕ್ಚರರ್, ಬಸ್ಸಿನಲ್ಲಿ, ಆಟೋದಲ್ಲಿ ಪಕ್ಕದಲ್ಲಿ ಕುಳಿತಿರುವವರ ಮೇಲೆಲ್ಲಾ ಅನುಮಾನ ನಮಗೆ. ಈ ಅನುಮಾನ ಎಲ್ಲಿಯವರೆಗೆ ಹೋಯ್ತೆಂದರೆ ಕಡೆ ಕಡೆಗೆ ಸುತ್ತ ಮುತ್ತ ಯಾರಾದರೂ ಕೆಮ್ಮಿದರೂ ಅವನನ್ನು ವಾರೆ ಕಣ್ಣಿನಿಂದ ನೋಡುತ್ತಿದ್ದೆವು.

ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ದೆಹಲಿಯನ್ನು ಒಂದು ತಿಂಗಳ ಹಿಂದೆ ಚಿಕುನ್’ಗುನ್ಯದ ಕಾರಣಕ್ಕೆ ದೇಶಾದ್ಯಂತ ಸುದ್ದಿಯಾಗಿತ್ತು.. ಅಲ್ಲಿನ ಜನರ ಗ್ರಹಚಾರಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಒಬ್ಬರೂ ಕೇಂದ್ರಸ್ಥಾನದಲ್ಲಿರಲಿಲ್ಲ. . ಹಾಗಾಗಿ ಜನ ತಮ್ಮ ಸರಕಾರಕ್ಕೆ ಹಿಡಿಶಾಪ ಹಾಕಿ ಪರಿತಪಿಸುತ್ತಿದ್ದರು. ಅದನ್ನು ನೋಡಿ, ಹಿಂದೊಮ್ಮೆ ನಮ್ಮ ಊರನ್ನೂ ಈ ಖಾಯಿಲೆ ಇನ್ನಿಲ್ಲದಂತೆ ಕಾಡಿದ್ದು, ಕೆಲವರನ್ನು ಬಲಿ ತೆಗೆದುಕೊಂಡಿದ್ದು,  ಊರಿಗೆ ಊರನ್ನೇ ಮಕಾಡೆ ಮಲಗಿಸಿದ್ದು ಎಲ್ಲವೂ ಒಮ್ಮೆ ನೆನಪಾದವು. ಅದು ಬಂದು ವರ್ಷ ಎಂಟು ಕಳೆದರೂ ಈಗಲೂ ಗಂಟುಗಳಲ್ಲಿ ನೋವಿದೆ, ಚಿಕುನ್’ಗುನ್ಯ ಬಂದ ಬಳಿಕ ಹೀಗೆಯೇ ಎನ್ನುವವರಿದ್ದಾರೆ. ಆದ್ದರಿಂದ, ಕೆಲವು ದಿನಗಳ ಗೆಳೆಯನಂತೆ ನಮ್ಮನ್ನು ಕಾಡಿ ಹೋದ  ಚಿಕುನ್’ಗುನ್ಯದ ನೆನಪು   ನಮಗೆ ಸದಾ ಅಮರ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!