ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆಯನ್ನೇರಿದಾಗ ಕೇವಲ ದೆಹಲಿಯ ಜನ ಮಾತ್ರ ಅಲ್ಲ, ಇಡೀ ದೇಶವೇ ಅರವಿಂದ್ ಕೇಜ್ರಿವಾಲರ ಮೇಲೆ ಭರವಸೆಯ ಆಶಾಗೋಪುರವನ್ನೇ ಇಟ್ಟುಕೊಂಡಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯ ಹೊರತಾಗಿ ಹೊಸ ರಾಜಕೀಯ ಶಕ್ತಿಯೊಂದು ಉದಯವಾಗಿ ಈ ಎರಡೂ ಪಕ್ಷಗಳಿಂದ ಸಾವಿರ ಪಾಲು ಒಳ್ಳೆಯ ರೀತಿಯ ಆಡಳಿತ ಕೊಡುತ್ತದೆ ಅನ್ನೋ ಭಾವನೆಯನ್ನು ದೇಶದ ಜನತೆ ಹೊಂದಿದ್ದರು. ಆದರೆ ಆಮ್ ಆದ್ಮಿಗಳ ಮುಖವಾಡ ಕಳಚಿ ಬೀಳಲು ಬಹಳ ದಿನಗಳು ಬೇಕಾಗಲಿಲ್ಲ. ಸ್ಟಾರ್ಟ್ ಅಪ್ ಕಂಪನಿಗಳ ಈ ಜಮಾನದಲ್ಲಿ ಆಮ್ ಆದ್ಮಿ ಪಕ್ಷ ಕೂಡಾ ರಾಜಕೀಯ ಕ್ಷೇತ್ರದ ಸ್ಟಾರ್ಟ್ ಅಪ್. ಜನ ಲೋಕ್ಪಾಲ್ ಚಳುವಳಿ ಸಮಯದಲ್ಲಿ ಅಣ್ಣಾ ಹಜಾರೆಯವರ ಮೂಲಕ ಚಾಲ್ತಿಗೆ ಬಂದ ಕೇಜ್ರಿವಾಲರು ಅಣ್ಣಾ ಹಜಾರೆಯವರ ಇಚ್ಛೆಯ ವಿರುದ್ಧವಾಗಿ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ನಾವೆಲ್ಲರಿಂತಲೂ ಭಿನ್ನ, ಭ್ರಷ್ಟಾಚಾರ ರಹಿತ ಪಾರದರ್ಶಕತೆಯುಳ್ಳ ಆಡಳಿತವೇ ನಮ್ಮ ಗುರಿ ಅಂತ ದೆಹಲಿಯ ಗದ್ದುಗೆಯನ್ನೇರಿ ಒಂದೂವರೆ ವರ್ಷಗಳು ಸಂದಿವೆ. ಕೇಜ್ರಿವಾಲರ ಸರ್ವಾಧಿಕಾರಿ ಧೋರಣೆಯಿಂದ ಹಲವು ನಾಯಕರುಗಳು ಆಪ್’ಗೆ ವಿದಾಯ ಹೇಳಿದ್ದಾರೆ.
ಕೇಜ್ರಿವಾಲರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಸಿಬಿಐ ಬಂಧನಕ್ಕೊಳಗಾದಾಗ ಕೇಜ್ರಿವಾಲ್ ಮೋದಿ ವಿರುದ್ಧ ಟ್ವೀಟ್ ಮಾಡುತ್ತಾರೆ. ಮೋದಿ ಸರಕಾರ ಸಿಬಿಐಯನ್ನು ಉಪಯೋಗಿಸುತ್ತಿದೆ, ಅಂತ ವೃಥಾ ಆರೋಪ ಮಾಡಿ ನಗೆಪಾಟಲಿಗೀಡಾಗುತ್ತಾರೆ. ಇತ್ತೀಚಿಗೆ ಸೆಕ್ಸ್ ಸ್ಕಾಂಡಲ್’ನಲ್ಲಿ ಸಿಕ್ಕಿಹಾಕಿಕೊಂಡ ಮಾಜಿ ಮಂತ್ರಿ ಸಂದೀಪ್ ಕುಮಾರ್’ರನ್ನು ಸಮರ್ಥಿಸಲು ಪಕ್ಷದ ವಕ್ತಾರ ಆಶುತೋಷ್ ತನ್ನ ಬ್ಲಾಗಿನಲ್ಲೇ ನೆಹರೂ, ಗಾಂಧೀಜಿ, ರಾಮ್ ಮನೋಹರ್ ಲೋಹಿಯಾ, ಜಾರ್ಜ್ ಫರ್ನಾಂಡೀಸ್ ಮತ್ತು ವಾಜಪೇಯಿಯವರಂತ ನಾಯಕರುಗಳೂ ಅಕ್ರಮ ಸಂಬಂಧಗಳನ್ನು ಹೊಂದಿದ್ದರು ಎಂದು ಆರೋಪಿಸಿದ್ದರು. ವರ್ಜಿನಿಟಿ ಬಗ್ಗೆಯೂ ಬಹಳ ಕೆಟ್ಟದಾಗಿ ಬರೆದಿದ್ದರು. ಸಂದೀಪ್ ಸೆಕ್ಸ್ ಸೀಡಿಯ ಬಗ್ಗೆ ಮೊದಲೇ ಗೊತ್ತಿದ್ದರೂ ಮಾಧ್ಯಮಗಳಲ್ಲಿ ವಿಷಯ ಬಹಿರಂಗಗೊಂಡ ನಂತರ ಅವರನ್ನು ವಜಾ ಮಾಡಲಾಗುತ್ತದೆ. ನಂತರ ಸಂದೀಪ್ ಒಬ್ಬ ದಲಿತ. ಹಾಗಾಗಿ ಅವರ ತೇಜೋವಧೆ ಮಾಡಲಾಗುತ್ತಿದೆ ಎಂದು ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡಲಾಯಿತು. ಆಶುತೋಶ್ ಅಸಹ್ಯಕರ ಹೇಳಿಕೆಗೆ ಒಂದೂ ಟ್ವೀಟ್ ಮಾಡದ ಕೇಜ್ರಿವಾಲ್ ಮೋದಿ ವಿಷಯಕ್ಕೆ ಬಂದಾಗ ಸಾಲು ಸಾಲು ಟ್ವೀಟ್ ಮಾಡುತ್ತಾರೆ ಅಂದರೆ ಯೋಚಿಸಿ ಆಮ್ ಆದ್ಮಿ ಪಕ್ಷದ ಭೌದ್ದಿಕ ದಿವಾಳಿತನ.
ದೆಹಲಿಗೆ ದೆಹಲಿಯೇ ಡೆಂಗ್ಯೂ ಮತ್ತು ಚಿಕುನ್ ಗುನ್ಯಾದಿಂದ ನರಳುತ್ತಿದ್ದರೂ ಆಪ್ ಸರಕಾರದ ಅರ್ಧಕ್ಕಿಂತ ಜಾಸ್ತಿ ಸಚಿವರು ದೆಹಲಿಯಲ್ಲಿರುವುದಿಲ್ಲ. ಕೇಜ್ರಿವಾಲ್ ಪಂಜಾಬಿನಲ್ಲಿ ಪ್ರಚಾರ ಮುಗಿಸಿ ಚಿಕಿತ್ಸೆಗೆಂದು ಬೆಂಗಳೂರಿಗೆ ತೆರಳುತ್ತಾರೆ. ಕೇಜ್ರಿವಾಲರ ಅನುಪಸ್ಥಿತಿಯಲ್ಲಿ ಸರಕಾರವನ್ನು ಮುನ್ನಡೆಸಬೇಕಾಗಿದ್ದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜನಗಳ ತೆರಿಗೆ ದುಡ್ಡಿನಲ್ಲಿ ಫಿನ್ ಲ್ಯಾಂಡ್’ನಲ್ಲಿ ಶೈಕ್ಷಣಿಕ ಪ್ರವಾಸದಲ್ಲಿದ್ದರು. ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗೋವಾ ಪ್ರಚಾರ ಬಿಟ್ಟು ಬರೋಕೆ ತಯಾರಿರೋಲ್ಲ. ಡೆಂಗ್ಯೂ ಚಿಕುನ್ ಗುನ್ಯಾದಿಂದ ದೆಹಲಿ ಜನತೆ ಸಾಯುತ್ತಿದ್ದರೆ, ಗೂಗಲಿನಲ್ಲಿ ನೋಡಿ ಚಿಕುನ್ ಗುನ್ಯಾದಿಂದ ಯಾರೂ ಸಾಯಲ್ಲ. ಇದೆಲ್ಲವೂ ಮಾಧ್ಯಮಗಳ ಕಟ್ಟು ಕಥೆ ಅಂತ ಉಡಾಫೆ ಉತ್ತರ ಕೊಡುತ್ತಾರೆ ಆರೋಗ್ಯ ಸಚಿವರು. ಸಾಲದ್ದಕ್ಕೆ ಇದಕ್ಕೆ ಮೋದಿ ಸರಕಾರವನ್ನು ಕೇಳಿ ಅಂತ ಬೇಜವಾಬ್ದಾರಿಯುತ ಹೇಳಿಕೆ ಕೊಟ್ಟಿತು ಆಪ್ ಸರಕಾರ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆಂದು ಅಧಿಕಾರಕ್ಕೆ ಬಂದವರು ಇದೀಗ ಹವಾಲ ಪ್ರಕರಣದಲ್ಲಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಸಿಕ್ಕಿಕೊಂಡಾಗಲೂ ತುಟಿಪಿಟಿಕ್ ಅನ್ನೋದಿಲ್ಲ. ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ್ದ ಕೇಜ್ರಿವಾಲ್ ಇವತ್ತು ತನ್ನ ಸಚಿವನೊಬ್ಬನಿಗೆ ಆದಾಯ ತೆರಿಗೆ ಇಲಾಖೆಯ ನೋಟೀಸ್ ಬಂದಾಗಲೂ ಆತನ ಮೇಲೆ ಕ್ರಮ ಕೈಗೊಳ್ಳಲು ಮೀನ ಮೇಷ ಎಣಿಸುತ್ತಿರುವುದೇಕೆ?? ಅಧಿಕಾರದ ರುಚಿ ಎಲ್ಲರಿಗೂ ಸಿಗಲಿ ಎಂದು ಅಸಂವಿಧಾನಿಕವಾಗಿ ೨೧ ಶಾಸಕರಿಗೆ ಗಂಜಿಕೇಂದ್ರಗಳಾಗಿ ಸಂಸದೀಯ ಹುದ್ದೆಯನ್ನು ನೀಡಲಾಯಿತು. ಹೈ ಕೋರ್ಟ್ ಈ ಆಯ್ಕೆಯನ್ನು ಅಸಿಂಧು ಮಾಡಿ ಆಪ್ ಸರ್ಕಾರವನ್ನು ಮತ್ತಷ್ಟು ಮುಜುಗರಕ್ಕೀಡುಮಾಡಿತು.
ಇನ್ನು ಇದೆಲ್ಲದಕ್ಕೂ ಉತ್ತರದಾಯಿತ್ವ ಹೊಂದಿರುವ ಕೇಜ್ರಿವಾಲರು ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಮೋದಿ ಮೋದಿ ಮೋದಿ ಅಂತ ಹೇಳ್ತಾ ಕೂತಿದ್ದಾರೆ. ಪ್ರಾಯಶಃ ಮೋದಿ ಭಕ್ತರೂ ಕೂಡಾ ಇಷ್ಟೊಂದು ಮೋದಿ ಜಪ ಮಾಡಲ್ಲ ಅನ್ನಿಸುತ್ತೆ. ಮೋದಿಯವರೇ ನನ್ನನ್ನು ಹೊಡೀರಿ, ಕೊಲ್ಲೀರಿ ಅಂತ ಪಲಾಯನವಾದದ ಹೇಳಿಕೆ ನೀಡುತ್ತಾರೆ. ಆರ್ಟಿಐ ಮೂಲಕ ಬಂದ ಮಾಹಿತಿ ಪ್ರಕಾರ ಸಮೋಸ ಖರೀದಿಸಲು ಮತ್ತು ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಕೋಟಿಗಟ್ಟಲೆ ವ್ಯಯಿಸುವ ಕೇಜ್ರಿವಾಲ್ ದೆಹಲಿ ಜನರ ಕಷ್ಟಗಳನ್ನು ನಿವಾರಿಸುವ ವಿಷಯಕ್ಕೆ ಬಂದಾಗ ದೆಹಲಿಯ ಅಧಿಕಾರ ನನ್ನ ಬಳಿಯಿಲ್ಲ. ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ಅಧಿಕಾರವನ್ನು ತನ್ನ ಬಳಿಯೇ ಇರಿಸಿಕೊಂಡಿದೆ. ಮುಖ್ಯಮಂತ್ರಿಯಾಗಿ ಪೆನ್ನು ಖರೀದಿಸುವ ಅಧಿಕಾರವೂ ತನ್ನ ಬಳಿಯಿಲ್ಲ ಅನ್ನೋ ಬಾಲಿಶ ಹೇಳಿಕೆಯನ್ನು ಕೊಡುತ್ತಾರೆ. ವೇಮುಲ ಪ್ರಕರಣ ಮತ್ತು ದಾದ್ರಿ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಖುದ್ದು ತಾನೇ ಸ್ಥಳಕ್ಕೆ ಭೇಟಿ ನೀಡುವ ಕೇಜ್ರಿವಾಲ್ ಮೂಡಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಈ ಕಡೆ ತಿರುಗಿಯೇ ನೋಡುವುದಿಲ್ಲ. ಸಿನಿಮಾಗಳ ಬಗ್ಗೆ ಟ್ವೀಟ್ ಮಾಡೋ ಕೇಜ್ರಿವಾಲ್ ತನ್ನ ಪಕ್ಷದ ಸರಣಿ ಎಡವಟ್ಟುಗಳ ಬಗ್ಗೆ ಏನೂ ಪ್ರತಿಕ್ರಿಯೆ ನೀಡೋದಿಲ್ಲ.
ರಾಜಕೀಯಕ್ಕೆ ಬಂದಿರೋದು ಅಧಿಕಾರಕ್ಕೆ ಅಲ್ಲ, ವಿಐಪಿ ಸಂಸ್ಕೃತಿಯನ್ನು,ಭ್ರಷ್ಟಾಚಾರವನ್ನು ಕಿತ್ತೊಗೆಯುತ್ತೇವೆ ಹಾಗೂ ಸರಕಾರಿ ಕಾರು, ಬಂಗಲೆಯನ್ನು ಬಳಸೋದಿಲ್ಲ, ಅಂದವರು ಇವತ್ತು ಸಾಕ್ಷಿಗಳಿದ್ದರೂ ತಮ್ಮ ಸರಕಾರದ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೂ ಮುಂದೂ ನೋಡುತ್ತಿರುವುದೇಕೆ.?ಕೇಜ್ರಿವಾಲರು ನಾನು ಅರ್ಧ ಸಂಬಳಕ್ಕೆ ಕೆಲಸ ಮಾಡಲು ಸಿದ್ದ ಎಂದು ಹೇಳಿ ಮೂರು ನಾಲ್ಕು ಪಟ್ಟು ಸಂಬಳವನ್ನು ಏರಿಸಿಕೊಂಡಿರುವುದೇಕೆ? ಅಧಿಕಾರಕ್ಕೆ ಬರೋ ಮುನ್ನ ಭ್ರಷ್ಟರನ್ನು ಒದ್ದೋಡಿಸಿ ಅವರನ್ನು ಜೈಲಿಗಟ್ಟಿ ಅನ್ನುತ್ತಿದ್ದ ಕೇಜ್ರಿವಾಲರ ಗಂಟಲು ಇವತ್ತು ತನ್ನದೇ ಪಕ್ಷದ ಸಚಿವರ ವಿರುದ್ಧ ಮಾತಾಡದೇ ಕಟ್ಟಿರುವುದೇಕೆ? ದೆಹಲಿ ಜನರಿಗೆ ಒಳ್ಳೆಯದು ಮಾಡಿ ಅಂತ ದೆಹಲಿಯ ಗದ್ದುಗೆಯನ್ನು ನೀಡಿದರೆ, ಆಮ್ ಆದ್ಮಿಗಳಿಗೆ ಪಂಜಾಬ್ ಮತ್ತು ಗೋವಾದ ಚಿಂತೆ. ಪಕ್ಷದ ಬಾವುಟವನ್ನು ನೆರೆ ರಾಜ್ಯಗಳಲ್ಲಿ ಹಾರಿಸೋ ಹಪಾಹಪಿಯಲ್ಲಿ ದೆಹಲಿಯಲ್ಲೇ ಆಮ್ ಆದ್ಮಿ ಪಕ್ಷದ ಬುಡ ಅಲ್ಲಾಡುತ್ತಿದೆ. ಅಣ್ಣಾ ಹಜಾರೆಯವರು ಆಪ್’ನ ಬೆಳವಣಿಗೆಗಳಿಂದ ಬೇಸತ್ತು “ಮೇ ಗಲತ್ ಆದ್ಮೀ ಕಾ ಗುರೂ ನಹಿ ಬನ್ ನಹೀ ಸಕ್ತಾ ಹೂ. ನಾನು ಅರವಿಂದ್ ಕೇಜ್ರಿವಾಲರ ಗುರುವಾಗಲು ಸಾಧ್ಯವಿಲ್ಲ. ಆಪ್’ಗೂ ಬೇರೆ ಪಕ್ಷಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಗೆ ದಿಟ್ಟ ಉತ್ತರ ನೀಡಿದ ಮೋದಿ ಸರಕಾರದ ನಿಲುವನ್ನು ದೇಶಾದ್ಯಂತ ಜನ ಸ್ವಾಗತಿಸಿದರೆ ಕೇಜ್ರಿವಾಲರಿಗೆ ಅದರಲ್ಲೂ ಹುಳುಕು ಹುಡುಕಿ ಪ್ರಚಾರ ಗಿಟ್ಟಿಸೋ ಚಾಳಿ. ಸರ್ಜಿಕಲ್ ದಾಳಿ ನಡೆದುದರ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಕೇಂದ್ರ ಸರಕಾರ ಎಂದು ಭಾರತದ ಸೈನ್ಯದ ಮೇಲೆ ವಿಶ್ವಾಸವೇ ಇರದಂತೆ ಹೇಳಿಕೆ ನೀಡುತ್ತಾರೆ ಈ ಆಸಾಮಿ. ಇದಾದ ಕೂಡಲೇ ಟ್ವಿಟರ್, ಫೇಸ್ಬುಕ್ ಗಳಲ್ಲಿ ಕೇಜ್ರಿವಾಲ್ ಟ್ರೋಲ್ ಹರಿದು ಬರುತ್ತದೆ. ಹೇಗಾದರೂ ಸರಿ ಸುದ್ದಿಯಲ್ಲಿರಬೇಕು ಅನ್ನುವುದೇ ಕೇಜ್ರಿ ಮತ್ತವರ ತಂಡದ ಹಿಡನ್ ಅಜೆಂಡಾ ಆಗಿರಬಹುದು. ಸ್ವಾಮಿ ಕೇಜ್ರಿವಾಲರೇ ಪಠಾನಕೋಟ್ ಮತ್ತು ಉರಿ ದಾಳಿಯಾದಾಗ ಪಾಕಿಸ್ತಾನವೇ ದಾಳಿ ಮಾಡಿದ್ದರ ಬಗ್ಗೆ ಸಾಕ್ಷ್ಯ ಕೇಳಿದೀರಾ?? ದೇಶದ ಜನ ನಿಮ್ಮ ನಾಟಕಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಿಮಗೆ ಮೋದಿ ಮೇಲೆ ವೈಯಕ್ತಿಕ ದ್ವೇಷ ಇರಬಹುದು. ಆದರೆ ಮೋದಿಯವರನ್ನು ಟೀಕಿಸುವ ಭರದಲ್ಲಿ ದೇಶದ ಅಖಂಡತೆಗೆ ಧಕ್ಕೆ ಬರುವ ಹೇಳಿಕೆ ನೀಡಿದರೆ ಯಾವ ದೇಶ ಪ್ರೇಮಿಯೂ ಸುಮ್ಮನಿರಲಾರ. ಒಬ್ಬ ಐಐಟಿ ಪದವೀಧರ ಮತ್ತು ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ದೇಶದ ರಕ್ಷಣಾ ವ್ಯವಸ್ಥೆಯ ಗುಟ್ಟನ್ನು ಬಯಲು ಮಾಡಲು ಹೇಳಿಕೆ ನೀಡುತ್ತಾನೆಂದರೆ ಆತನ ಕೀಳು ಮಟ್ಟದ ರಾಜಕೀಯವನ್ನು ನೀವೇ ಯೋಚಿಸಿ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಒಂದು ದಿನದ ಸುದ್ದಿಯಾಗಲು ದೇಶದ ವಿರುದ್ಧ ಹೇಳಿಕೆ ಕೊಟ್ಟರೆ ಭಾರತದಲ್ಲಿ ಹೇಳಹೆಸರಿಲ್ಲದಂತಾಗುತ್ತೀರಿ ಕೇಜ್ರಿವಾಲರೇ.
ಒಟ್ಟಿನಲ್ಲಿ ಅಧಿಕಾರದಲ್ಲಿ ಪಾರದರ್ಶಕತೆ ಇಲ್ಲದಿರುವುದು, ಮಾಧ್ಯಮಗಳ ಮುಂದೆ ಬೇಜವಾಬ್ದಾರಿಯುತ ಹೇಳಿಕೆ, ಪ್ರಚಾರ ಪ್ರಿಯತೆ, ಅಧಿಕಾರದ ಲಾಲಸೆ. ಭ್ರಷ್ಟಾಚಾರ, ವಂಚನೆ, ಫೋರ್ಜರಿ ಮತ್ತು ಸೆಕ್ಸ್ ಸ್ಕಾಂಡಲ್’ಗೆ ಸಿಕ್ಕಿ ಆಪ್ ಸರಕಾರ ನಲುಗಿದೆ. ಸ್ವಯಂಘೋಷಿತ ಭ್ರಷ್ಟಾಚಾರ ವಿರೋಧಿ ಪಕ್ಷ ಜನರ ಮುಂದೆ ಬೆತ್ತಲಾಗುತ್ತಿದೆ. ಮಾತು ಮಾತಿಗೂ ಕೇಂದ್ರದ ಜೊತೆ ಜಗಳ ಮಾಡಿಕೊಂಡು ಜನಗಳ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದ್ದಾರೆ ಆಮ್ ಆದ್ಮಿಗಳು. ಬದಲಾವಣೆ ತರುತ್ತೇವೆಂದು ಅಧಿಕಾರಕ್ಕೆ ಬಂದ ಆಪ್’ಗೂ ಬೇರೆ ಪಕ್ಷಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ದೇಶದ ಜನರಿಗೆ ಮನದಟ್ಟಾಗಿದೆ. ಛೇ, ನಾವು ಅಪಾರ ನಿರೀಕ್ಷೆಗಳನ್ನು ಹೊಂದಿದ್ದ ಕೇಜ್ರಿವಾಲರು ಇವರೇನಾ ಅನ್ನೋ ಭಾವನೆ ಜನರಲ್ಲಿ ಮೂಡಿದೆ.