ಕಾಯ್ ಕಯ್ಯ ಕಚ್ಚ ಅಸಡಾ ಬಸ್ಡಾ… ತಲೆ ಕೆಟ್ಟ ಭಟ್ಟ ಯಬುಡಾ ಕಬುಡಾ ಅಂತಾ ಜೋರಾಗಿ ಸಾಂಗೇಳುತ್ತಾ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಕ್ವಾಟ್ಲೆ ಕಲ್ಲೇಶಿ..
ಅಗಳಗಳಗಳಗಳೋ… ಯಾವ್ ಭಟ್ರ ತಲೆ ಕೆಟ್ಟೋಗಿದೇಲಾ.. ಏನ್ಲಾ ಮ್ಯಾಟರ್ರು?? ಒಸಿ ಬುಡ್ಸಿ ಯೋಳ್ಲಾ ಬಿಕ್ನಾಶೀ ನನ್ ಮಗನೇ ಅಂತೇಳ್ತು ಗೋಪಾಲಣ್ಣ.
ಥತ್ತೇರಿಕೆ ಗೋಪಾಲಣ್ಣ.. ಅದ್ಯಾರೋ ಪ್ರೊಪೆಸರ್ರು ಪೋಲಿ ಭಾಷ್ಣ ಮಾಡವ್ರೆ ಅಂತ ವಿಸ್ವವಾಣಿ ಭಟ್ರು ಮತ್ತವ್ರ ಟೀಮು ಇಂದೂ ಮುಂದೂ ನೋಡ್ದೇ ಸುಳ್ಸುದ್ದಿ ಮಾಡವ್ರೆ ಕಣಣ್ಣಾ.. ಜನ ಪೇಸ್ಬುಕ್ ಟ್ವಿಟ್ಟರ್ ಅಲ್ಲಿ ಭಟ್ರು ಮತ್ತವರ ಟೀಮ್ನ ಹಿಗ್ಗಾ ಮುಗ್ಗಾ ಜಾಡ್ಸವ್ರೆ ಕಣಣ್ಣೋ.. ಆದ್ರೂ ನಾವಿರೋದೇ ಹೀಗೆ ಸಿವಾ.. ನಮ್ಮ್ ಪ್ಯಾಪರ್ರು ಮರ್ವಾದೆ ಯಕ್ಕುಟ್ಟೋದ್ರೂ ಪರ್ವಾಗಿಲ್ಲ. ನೀವು ಮಕ್ಕುಗೀರಿ, ಸೇಲ್ ಆಗ್ದೇ ಉಳ್ದಿರೋ ನಮ್ದೇ ಪ್ಯಾಪರ್ನಾಗೆ ಒರ್ಸ್ಕೋತೀವಿ. ಪ್ಯಾಪರ್ರು ಓದಕ್ಕೆ ಉಪ್ಯೋಗ ಆಗಿಲ್ಲಾಂದ್ರೂ ಪರ್ವಾಗಿಲ್ಲ ಕಣ್ರಪ್ಪಾ ಒರ್ಸ್ಕೋಳೋಕಾದ್ರೂ ಉಪ್ಯೋಗ ಆಗ್ತೈತೆ, ಅಂತ ಬಾವಿಸ್ದಂಗೆ ಐತೆ ಕಣಣ್ಣೋ ಅಂತ ಒದರ್ತು ಮುರುಗನ್..
ಈ ಭಟ್ರು ಬಿಲ್ದಪ್ ಕೊಟ್ಟಿದ್ದೇ ಜಾಸ್ತಿ ಆಯ್ತು ಕಣ್ಲಾ. ಎಳ್ನಿಂಬೆ ಕಾಯಿ ಅಂದ್ಬುಟ್ಟು ಅದೇನ್ ಕರ್ಕೊಂಡವ್ರೋ ಎನೋ?? ಮಾರ್ಕೆಟ್ನಾಗೆ ಹತ್ತ್ರುಪಾಯ್ಗೆ ಎಂಟು ಎಳ್ನಿಂಬೆ ತಗಂಡವ್ರೆ ಅಂತ ಕಾಣ್ಸುತ್ತೆ. ಅದ್ಯಾರೋ ಭಟ್ರುಗೆ ಬಕೀಟ್ ಇಡ್ಯಕ್ಕೋಗಿ ಸೆಕ್ಸು ಈಡ್ಯೋ ನೋಡೋದೆ ಅಪ್ರಾದ ಅಂಗೆ ಇಂಗೆ ಅಂತ ಬರ್ದಾವ್ನೆ ಕಣಲಾ. ಜನ ಅವಯ್ಯಂಗೂ ಸರ್ಯಾಗೆ ಕೊಟ್ಟಾರೆ ಮಾಂಜಾನ. ಅಖಿಲ ಬಾರತ ಸನ್ನಿ ಲಿಯೋನ್ ಅಬಿಮಾನ ಸಂಘದ ಕಾರ್ಯಾದ್ಯಕ್ಸ ಗೋಪಾಲಣ್ಣ ಈ ಏಳ್ಕೆನ ಕಂಡಿಸ್ತಾನೆ ಅಂತ ಯೋಳ್ಲಾ ಅವಯ್ಯಂಗೆ ಅಂತೇಳ್ತು ಗೋಪಾಲಣ್ಣ.
ಔದೇನ್ಲಾ.. ಅಂಗಾರೆ ಪ್ಯಾಪರ್ರು ಓದೋಕ್ಕೆ ಬಳ್ಸೋರ್ಗಿಂತ ಒರ್ಸ್ಕೋಳೋರೆ ತುಂಬಾ ಜನ ಆಗ್ಬುಟ್ಟವ್ರೆ ಅಂತೇಳು… ಅದ್ಯಾವಾಗ ಭಟ್ರು ಈ ಲೆವೆಲ್ ಗೆ ಇಳ್ದಿದ್ದು. ಒಳ್ಳೆ ಪತ್ರಕರ್ತ ಆಗಿತ್ತು ಕಣ್ಲಾ ನಮ್ಮ್ ಭಟ್ರು ಅಂತೇಳ್ತು ಕ್ವಾಟ್ಲೆ ಕಲ್ಲೇಶಿ..
ಬುಡ್ರಾಲಾ ಅವ್ರು ಇಚಾರಾನಾ. ಜನ ಅಟ್ಟೆಲ್ಲಾ ಮಕ್ಕುಗೀದ್ರೂ ಕ್ಯಾರೆ ಅನ್ನಿಲ್ಲ ಇನ್ನಾ ಪುಟ್ಗೋಸಿ ನಾವೇಳಿದ್ರೆ ಎಲ್ಲ್ ಕೇಳ್ತಾರ್ಲಾ. ಉದ್ದಾರ ಆಗೋವಂತವಲ್ಲ ಮುಂಡೇವು.. ಬೇರೆ ಏನಾರ ಇಚಾರ ಇದ್ರೆ ಮಾತಾಡ್ರಲಾ ಅಂತೇಳ್ತು ಗೋಪಾಲಣ್ಣ.
ಯೆಡ್ಯೂರು ಕಥೆ ಏನ್ಲಾ.. ಕೇಸ್ ಎಲ್ಲಾ ಬುಡ್ಟುಟ್ಟವೆ ಅಂತೆ ಔದೇನ್ಲಾ ಅಂತ ಗೋಪಾಲಣ್ಣನ್ ಕೇಳ್ತು ಮುರುಗನ್..
ಹೂ ಕಣ್ಲಾ… ಇನ್ನಾ ಯೆಡ್ಯೂರ್ ಬಗ್ಗೆ ಕೆಮ್ಮಂಗಿಲ್ಲ. ಪಾರ್ಟಿ ಒಳ್ಗಿರೋರು ಮತ್ತು ಒರ್ಗಿರೋರು ಯಾರೆಲ್ಲ ಅದ್ಕೆ ಕಾಟ ಕೊಟ್ಟವ್ರೆ ಅವ್ರ್ನೆಲ್ಲಾ ಉಡಿಕ್ಕೋಂಡು ಓಗ್ಬುಟ್ಟು ಬಡುದ್ ಬಾಯಿಗ್ ಆಕ್ಬುಡುತ್ತೆ ನೋಡ್ಲಾ. ಉಡದ್ ಬಾಯಿ ಈಸ್ವರ್ರು ಯೆಡ್ಯೂರ್ಗೇ ಉಘೇ ಉಘೇ ಅನ್ನೋಕೆ ಶುರು ಮಾಡೈತೆ ಕಣ್ಲಾ… ದುಶ್ಮನ್ ಶಿದ್ದಣ್ಣ ಮಾತ್ರ ಯೆಡ್ಯೂರು ತಪ್ಪಿತಸ್ತ ಅಂತ ಮತ್ತೆ ಮತ್ತೆ ಓದಲ್ಲಿ ಬಂದಲ್ಲಿ ಯೋಳ್ತೈತೆ ಕಣ್ಲಾ.. ಕೆಜಿಪಿ ಲೀಡ್ರು ಪರಂಗಿ ಪ್ರಸನ್ನ ಕೂಡಾ ಪ್ರತಿಭಟನೆ ಮಾಡೈತೆ ಕಣ್ಲಾ ಒಂತ ಯೋಳ್ತು ಗೋಪಾಲಣ್ಣ.
ಇನ್ನೇನ್ಲಾ ಮಾಡ್ತೈತೆ ಶಿದ್ದಣ್ಣ. ಯೆಡ್ಯೂರು ಚಿಗುರ್ಬುಟ್ರೆ ಅದ್ರ್ ಬುಡಕ್ಕೇ ಅಲ್ವೇನ್ಲಾ ಆಪಿಡೋದು. ಆದ್ರೂ ಎನೇ ಯೋಳ್ಲಾ. ಶಿದ್ದಣ್ಣ ತರ ಲೋಕಾಯುಕ್ತನೇ ಮುಚ್ಚಾಕಿಲ್ಲ ಯೆಡ್ಯೂರು. ಎಲ್ಲಾ ಕೇಸನ್ನೂ ಎದುರ್ಸಿಬಿಟ್ಟು ಗೆದ್ದೈತೆ ಕಣ್ಲಾ. ಒಂದ್ಕಿತಾ ಲೋಕಾಯುಕ್ತ ಮುಚ್ದೇ ಇದ್ರೆ ಶಿದ್ದಣ್ಣನೂ ಮುದ್ದೆ ಮುರೀತಿತ್ತು ಕಣ್ಲಾ. ಇನ್ನಾ ಯೆಡ್ಯೂರು ಫ್ಯಾನ್ಸ್ ಪರಂಗಿ ಪ್ರಸನ್ನ ಮಕ್ಕೆ ಸರ್ಯಾಗಿ ಮಸಿ ಬಳ್ದಾವ್ರೆ ಕಣ್ಲಾ.. ಎನೋ ಪ್ರಸನ್ನ ಲಕ್ಕು ಚೆನ್ನಾಗಿತ್ತು.. ಇಲಾಂದ್ರೆ ಮಕ ಮೂತಿ ನೋಡ್ದೇ ಇಕ್ಕ್ಬುಡೋರು ಕಣ್ಲಾ ಪರಂಗಿ ಪ್ರಸನ್ನಂಗೆ ಅಂತ ಯೋಳ್ತು ಮುರುಗನ್…
ಎಲ್ಲೀಗಂಟ ಬಂತ್ಲಾ ಸ್ಟೀಲ್ ಸೇತುವೆ ಇಶ್ಯಾ.. ಕಟ್ಟೇ ಬುಡ್ತೇನ್ಲಾ ಜಾರ್ಜು ಸೇತ್ವೇನಾ ಅಂತೇಳ್ತು ಕ್ವಾಟ್ಲೆ ಕಲ್ಲೇಶಿ…
ಪ್ಲವರ್ ಪಕ್ಸದೋರು ಅದೆಷ್ಟೇ ಬಡ್ಕೊಂಡ್ರೂ ಕ್ಯಾರೇ ಅಂದಿಲ್ಲ ಕಣ್ಲಾ ಜಾರ್ಜು ಮತ್ತು ಶಿದ್ದಣ್ಣ. ಸೋಬಕ್ಕ ಮತ್ತು ತಾರಕ್ಕ ಮರಗಳನ್ನ ಅಪ್ಪಿ ಇಡ್ದುಬುಟ್ಟು ಅಪ್ಪಿಕೋ ಚಳ್ವಳಿ ಮಾಡಿದ್ರೂ ನಾವ್ ಕಟ್ಟೋದು ಪಕ್ಕಾ ಕಣ್ರಣ್ಣೋ ಅಂದೈತೆ ಸರ್ಕಾರ. ಆದ್ರೆ ಅವ್ರ್ದೇ ಪಕ್ಸದ ಸ್ಮೈಲ್ ಸದಾನಂದು ಸಪೋರ್ಟ್ ಮಾಡೈತೆ ಕಣ್ಲಾ ಸೇತ್ವೆ ಕಟ್ಟಾಕೆ.. ಜನ ಏನಾರ್ರ ಮಾಡ್ಕೋಳ್ಲಿ. ಇಮಾನ್ ನಿಲ್ದಾಣಕ್ಕೆ ಬೇಗ ಓಗೋಕೆ ಇದ್ರಿಂದ ಭಾಳ ಉಪ್ಯೋಗ ಆಗ್ತೈತೆ ಕಣ್ರಲಾ ಅಂದ್ಬುಟ್ಟು ಇನ್ನೇನು ಕಟ್ಟೇ ಬುಟ್ರು ಪ್ಲೈ ಓವರ್ನಾ ಅಂದ್ಕೋಳೋವಾಗ ಅಸಿರು ಪೀಟ ಸರ್ಯಾಗಿ ಸರ್ಕಾರಕ್ಕೆ ಮಂಗ್ಳಾರ್ತಿ ಮಾಡ್ಬುಟ್ಟು ಸ್ಟೇ ಆರ್ಡರ್ ಕೊಟ್ಟೈತೆ ಕಣ್ಲಾ ಅಂತ ಎಕ್ಸ್ ಪ್ರೆಸ್ ಕಾರಿಡಾರ್ನಾಗೆ ಗಂಟೆಗ್ ನೂರೈವತ್ತು ಕಿಲ್ಮೀಟ್ರು ಸ್ಪೀಡಲ್ಲಿ ಗಾಡಿ ಓಡ್ಸ್ದಾಂಗೆ ಯೋಳ್ಬುಡ್ತು ಗೋಪಾಲಣ್ಣ.
ಶೀನಣ್ಣ ಯಾವ್ ಪಾರ್ಟಿಗೋಯ್ತ್ಲಾ. ಮುಂದಿನ್ ಸಾರಿ ಯಾರಿಗ್ಲಾ ಮೆಜಾರಿಟಿ ಅಂತ ಗೋಪಾಲಣ್ಣಂಗೆ ಕೇಳ್ತು ಕಲ್ಲೇಶಿ.
ಶೀನಣ್ಣ ಇನ್ನೂ ಗುಟ್ಟು ಬುಟ್ಟಿಲ್ಲ ಕಣಲಾ.. ಯಾವ್ ಪಾರ್ಟಿಗ್ ಓಗುತ್ತೆ ಅಂತ. ಅದ್ರೂರಲ್ಲೇ ಬೇರೆ ಊರಿಂದ ಜನ ಕರ್ಸಿ ಕೈ ಪಕ್ಸ್ದೋರ್ ಭಾಳ ದೊಡ್ ಸಮಾವೇಸ ಮಾಡಾವ್ರೆ. ಇನ್ನಾ ಮುಂದಿನ್ ಸಾರಿ ನಮ್ದೇ ಸರ್ಕಾರ ಅಂತ ಎಲ್ಲಾ ಪಾರ್ಟಿನೋರು ಯೋಳ್ತಿದಾರೆ ಕಣ್ಲಾ.. ಪ್ಲವರ್ ಪಾರ್ಟಿನೋರು ನೂರೈವತ್ತು ಸೀಟ್ ನಮ್ಗೆ ಅಂದ್ರೆ ದೊಡ್ಡ್ ಗೌಡ್ರು ಎಲ್ಡ್ನೂರ ಇಪ್ಪನ್ತಾಕೂ ನಮ್ದೇಯಾ ಅಂತ ಪಂಚೆ ಎತ್ತ್ಕಟ್ಟವ್ರೆ ಕಣ್ಲಾ.. ಇನ್ನಾ ಕೈ ಪಕ್ಸ್ದ ಲೀಡರ್ಸೆಲ್ಲಾ ಸಾದನಾ ಸಮಾವೇಶ್ದಾಗೆ ಗಡದ್ದಾಗೆ ನಿದ್ದಿ ಮಾಡ್ತಿರೋವಾಗ ಪರ್ಮೇಶಿ ಮಾತ್ರ ಮುಂದಿನ ಸರ್ತಿನೂ ನಾವೇಯಾ ಬರೋದು ಅದಿಕಾರಕ್ಕೆ ಅಂತ ಗಂಟ್ಲರ್ಕಂಡು ಜೋರಾಗಿ ಹೇಳಿ ಸ್ಟೇಜ್ ಮ್ಯಾಕೆ ಮಲ್ಗಿದ್ದ ಲೀಡರ್ಸ್ ಎಲ್ಲಾ ಏಳೋವಾಂಗೆ ಮಾಡ್ತು ಕಣ್ಲಾ ಅಂತ ಯೋಳ್ತು ಗೋಪಾಲಣ್ಣ.
ಸುಮ್ಕಿರಪ್ಪ ಭಿಕ್ನಾಶೀ… ಯಾವಾನಾರ ಬರ್ಲಿ ಅದಿಕಾರಕ್ಕೆ. ನಂಗಂತೂ ಅರ್ಜೆಂಟಾಗೈತೆ. ಇನ್ನಾ ತಡ್ಕೋಳೋಕೆ ನನ್ ಕೈಲಿ ಆಗಾಕಿಲ್ಲ. ಕೊಡ್ಲಾ ಆ ಪ್ಯಾಪರ್ನ ಒರ್ಸ್ಕೋಳೋಕೆ ಅಂತೇಳಿ ಜಾಗ ಖಾಲಿ ಮಾಡ್ತು ಮುರುಗನ್. ಕಲ್ಲೇಶಿನೂ ಪೋಟಾಗ್ಬುಡ್ತು.